ಹುರುಳಿಕಾಳಿನಲ್ಲಿ ಹುರುಳುಂಟು!
ಕೈಗೆಟುಕುವ ದರದಲ್ಲಿ ವರ್ಷಪೂರ್ತಿ ಲಭ್ಯವಿರುವ, ಬಹಳ ಪೋಷಕಾಂಶಗಳನ್ನು ಹೊಂದಿರುವ ದ್ವಿದಳ ಧಾನ್ಯ ‘ಹುರುಳಿಕಾಳು’. ಮೂಲತ: ಜಾನುವಾರುಗಳಿಗೆ ಆಹಾರವಾಗಿ ಬಳಸಲಾಗುತ್ತಿದ್ದುದರಿಂದ ಈ ಧಾನ್ಯವು ತನ್ನ ಸಹವರ್ತಿಗಳಾದ ಉದ್ದು ಮತ್ತು ಹೆಸರುಕಾಳುಗಳಷ್ಟು ಆಹಾರ ವೈವಿಧ್ಯಗಳಲ್ಲಿ ಸ್ಥಾನ ಗಳಿಸಿಲ್ಲ. ಆದರೆ ಇತ್ತೀಚೆಗೆ, ಜನರಲ್ಲಿ ಹೆಚ್ಚುತ್ತಿರುವ ಅಧಿಕ ರಕ್ತದೊತ್ತಡ, ಕೊಲೆಸ್ಟೆರಾಲ್ ಹೆಚ್ಚಳ, ಕಿಡ್ನಿ ಸಂಬಂಧಿ ಸಮಸ್ಯೆಗಳು, ಬೊಜ್ಜು ಮುಂತಾದುವುಗಳನ್ನು ನಿಯಂತ್ರಣದಲ್ಲಿರಿಸಲು ಹುರುಳಿಕಾಳನ್ನು ಸೇವಿಸಿದರೆ ಉತ್ತಮ ಎಂಬ ಜಾಗೃತಿ ಮೂಡುತ್ತಿದೆ. ಹುರುಳಿಕಾಳನ್ನು ಬಳಸಿ ರುಚಿಯಾದ, ಆರೋಗ್ಯಕ್ಕೆ ಪೂರಕವಾದ ದಿನನಿತ್ಯದ ಅಡುಗೆಗಳನ್ನು ತಯಾರಿಸಬಹುದು.
ಹುರುಳಿಕಾಳಿನ ದೋಸೆ
ಬೇಕಾಗುವ ಸಾಮಗ್ರಿಗಳು :
1 ಕಪ್ ಹುರುಳಿಕಾಳು, ಅರ್ಧ ಕಪ್ ಉದ್ದಿನಬೇಳೆ, 2 ಕಪ್ ಅಕ್ಕಿ, 2 ಚಮಚ ಮೆಂತೆಕಾಳು. ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ : ಹುರುಳಿಕಾಳು, ಉದ್ದಿನಬೇಳೆ, ಅಕ್ಕಿ ಮತ್ತು ಮೆಂತೆಕಾಳುಗಳನ್ನು ಬೇರೆ ಬೇರೆಯಾಗಿ ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೆನೆದ ಹುರುಳಿ, ಉದ್ದಿನಬೇಳೆ , ಮೆಂತೆಕಾಳು ಮತ್ತು ಅಕ್ಕಿಯನ್ನು ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ, ಸುಮಾರು 6 ಗಂಟೆಗಳ ಕಾಲ ಹಿಟ್ಟನ್ನು ಮುಚ್ಚಿಡಿ. ಚೆನ್ನಾಗಿ ಹುದುಗು ಬಂದ ಹಿಟ್ಟಿನಿಂದ ಸೆಟ್ ದೋಸೆಯ ಹಾಗೆ ಮೃದುವಾದ ದೋಸೆಯನ್ನು ತಯಾರಿಸಬಹುದು. ಈ ದೋಸೆಯು ಚಟ್ನಿ ಅಥವಾ ಸಾಂಬಾರಿನೊಂದಿಗೆ ಬೆಳಗಿನ ಉಪಾಹಾರಕ್ಕೆ ಚೆನ್ನಾಗಿರುತ್ತದೆ.
ಹುರುಳಿಕಾಳಿನ ಇಡ್ಲಿ
ಬೇಕಾಗುವ ಸಾಮಗ್ರಿಗಳು :
2 ಕಪ್ ಹುರುಳಿಕಾಳು, 2 ಕಪ್ ಅಕ್ಕಿ, 2 ಚಮಚ ಉದ್ದಿನ ಬೇಳೆ, 2 ಚಮಚ ಅವಲಕ್ಕಿ ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ : ಹುರುಳಿಕಾಳು, ಉದ್ದಿನಬೇಳೆ ಮತ್ತು ಅಕ್ಕಿಯನ್ನು ಬೇರೆ ಬೇರೆಯಾಗಿ ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನೆನೆದ ಹುರುಳಿಕಾಳು ಮತ್ತು ಉದ್ದಿನಬೇಳೆಗಳ ಹೆಚ್ಚುವರಿ ನೀರನ್ನು ಬಸಿದು ನುಣ್ಣಗೆ ರುಬ್ಬಿ. ನೆನೆದ ಅಕ್ಕಿ ಮತ್ತು ಅವಲಕ್ಕಿಯನ್ನು ಸಣ್ಣರವೆಯ ಹದಕ್ಕೆ ರುಬ್ಬಿ. ಎಲ್ಲವನ್ನೂ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ 6 ಗಂಟೆಗಳ ಕಾಲ ಹುದುಗು ಬರಲು ಬಿಡಿ. ಹುದುಗು ಬಂದ ಹಿಟ್ಟಿನಿಂದ ಇಡ್ಲಿ ತಯಾರಿಸಿ ಚಟ್ನಿ ಅಥವಾ ಸಾಂಬಾರಿನೊಂದಿಗೆ ಸವಿಯಬಹುದು.
ಹುರುಳಿಕಾಳಿನ ಚಟ್ನಿ:
ಬೇಕಾಗುವ ಸಾಮಗ್ರಿಗಳು :
4 ಚಮಚ ಹುರುಳಿಕಾಳು, 1 ಚಮಚ ಕಡಲೇಬೇಳೆ, 1 ಚಮಚ ಉದ್ದಿನ ಬೇಳೆ, 1 ಚಮಚ ಜೀರಿಗೆ, 1 ಚಮಚ ತೆಂಗಿನಕಾಯಿ ತುರಿ, 5-6 ಬ್ಯಾಡಗಿಮೆಣಸಿನಕಾಯಿ, ಗೋಲಿ ಗಾತ್ರದ ಹುಣಸೇಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಆಯ್ಕೆಗೆ ತಕ್ಕಂತೆ ಇಂಗು ಅಥವಾ ಬೆಳ್ಳುಳ್ಳಿ. ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು,
ತಯಾರಿಸುವ ವಿಧಾನ : ಹುರುಳಿಕಾಳು, ಕಡಲೇಬೇಳೆ, ಉದ್ದಿನಬೇಳೆ, ಜೀರಿಗೆ ಮತ್ತು ಮೆಣಸಿನಕಾಯಿಗಳನ್ನು ಬೇರೆ ಬೇರೆಯಾಗಿ ಸುವಾಸನೆ ಬರುವಷ್ಟು ಹುರಿದಿಟ್ಟುಕೊಳ್ಳಿ. ಇವುಗಳ ಜೊತೆಗೆ ಆಯ್ಕೆಗೆ ತಕ್ಕಂತೆ ಇಂಗು ಅಥವಾ ಬೆಳ್ಳುಳ್ಳಿಯನ್ನೂ ಸೇರಿಸಬಹುದು. ಹುರಿದ ಕಾಳು/ಬೇಳೆಗಳು, ಮಸಾಲೆ, ಹುಣಸೆಹಣ್ಣು, ಕಾಯಿತುರಿ ಮತ್ತು ಉಪ್ಪು ಸೇರಿಸಿ ಚಟ್ನಿಯ ಹದಕ್ಕೆ ರುಬ್ಬಿ. ಇದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಟ್ಟರೆ ಹುರುಳಿಕಾಳಿನ ಚಟ್ನಿ ಸಿದ್ಧವಾಗುತ್ತದೆ. ಈ ಚಟ್ನಿಯನ್ನು ಖಾರವಾಗಿ,ಗಟ್ಟಿಯಾಗಿ ರುಬ್ಬಿದರೆ ಆನ್ನ-ತುಪ್ಪದೊಂದಿಗೆ ಕಲೆಸಿ ಉಣ್ಣಲು ರುಚಿ. ಚಟ್ನಿಗೆ ನೀರು ಸೇರಿಸಿ ತೆಳುವಾಗಿ ರುಬ್ಬಿದರೆ, ಇಡ್ಲಿ-ದೋಸೆಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
ಮೊಳಕೆ ಹುರುಳಿಕಾಳಿನ ವಡೆ
ಬೇಕಾಗುವ ಸಾಮಗ್ರಿಗಳು :
2 ಕಪ್ ಮೊಳಕೆ ಬಂದ ಹುರುಳಿಕಾಳು, ಅರ್ಧ ಕಪ್ ಹೆಚ್ಚಿದ ಈರುಳ್ಳಿ ಚೂರುಗಳು, 2-3 ಹಸಿರುಮೆಣಸಿನಕಾಯಿ, ಒಂದು ಸಣ್ಣ ತುಂಡು ಶುಂಠಿ, ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಹೆಚ್ಚಿದ ಕರಿಬೇವಿನ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ತಯಾರಿಸುವ ವಿಧಾನ : ಹುರುಳಿಕಾಳುಗಳನ್ನು ಒಂದು ದಿನ ನೀರಿನಲ್ಲಿ ನೆನೆಸಿ, ಮರುದಿನ ನೀರನ್ನು ಬಸಿದು ಶುಭ್ರವಾದ ಬಟ್ಟೆಯಲ್ಲಿ ಅಥವಾ ಗಾಳಿಯಾಡುವ ಪಾತ್ರೆಯಲ್ಲಿಟ್ಟರೆ ಹುರುಳಿಕಾಳು ಮೊಳಕೆಯೊಡೆಯುತ್ತದೆ. ಮೊಳಕೆ ಬಂದ ಹುರುಳಿಕಾಳುಗಳಿಗೆ ಹಸಿರು ಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ, ನೀರು ಹಾಕದೆಯೆ ತರಿತರಿಯಾಗಿ ರುಬ್ಬಿ. ಇದಕ್ಕೆ ಹೆಚ್ಚಿದ ಈರುಳ್ಳಿ ಚೂರುಗಳು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಮತ್ತು ಉಪ್ಪು ಬೆರೆಸಿ ವಡೆಯ ಹಿಟ್ಟನ್ನು ತಯಾರಿಸಿ. ಪ್ಲಾಸ್ಟಿಕ್ ಶೀಟ್ ಗೆ ಎಣ್ಣೆ ಸವರಿ, ಹಿಟ್ಟಿನಿಂದ ಸಣ್ಣ ಸಣ್ಣ ವಡೆಗಳನ್ನು ತಟ್ಟಿ. ಬಾಣಲಿಯಲ್ಲಿ ಎಣ್ಣೆಯನ್ನು ಕಾಯಲಿಟ್ಟು, ವಡೆಗಳನ್ನು ಕರಿಯಿರಿ. ಸಂಜೆಯ ಚಹಾ ಜೊತೆಗೆ ಹುರುಳಿಕಾಳಿನ ವಡೆ ಸೊಗಸಾಗಿರುತ್ತದೆ. ವಡೆಯನ್ನು ಹಾಗೆಯೇ ತಿನ್ನಲು ರುಚಿಯಾಗಿರುತ್ತದೆ. ಬೇಕಿದ್ದರೆ ಚಟ್ನಿಯ ಜೊತೆ ನೆಂಚಿಕೊಳ್ಳಬಹುದು.
ಹುರುಳಿಕಾಳಿನ ತಿಳಿಸಾರು
ಬೇಕಾಗುವ ಸಾಮಗ್ರಿಗಳು :
3 ಚಮಚ ಹುರುಳಿಕಾಳು, 1 ಚಮಚ ಧನಿಯಾ, 1 ಚಮಚ ಜೀರಿಗೆ, ಅರ್ಧ ಚಮಚ ಕಾಳುಮೆಣಸು, 3 -4 ಬ್ಯಾಡಗಿ ಮೆಣಸಿನಕಾಯಿ, 1 ಚಮಚ ತೆಂಗಿನಕಾಯಿ, ಗೋಲಿ ಗಾತ್ರದ ಹುಣಸೇಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣ ತುಂಡು ಬೆಲ್ಲ,
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು, ಆಯ್ಕೆಗೆ ತಕ್ಕಂತೆ ಇಂಗು ಅಥವಾ ಬೆಳ್ಳುಳ್ಳಿ.
ತಯಾರಿಸುವ ವಿಧಾನ : ಹುರುಳಿಕಾಳು, ಧನಿಯಾ, ಉದ್ದಿನಬೇಳೆ, ಜೀರಿಗೆ, ಕಾಳುಮೆಣಸು ಮತ್ತು ಮೆಣಸಿನಕಾಯಿಗಳನ್ನು ಬೇರೆ ಬೇರೆಯಾಗಿ ಘಮ್ಮನೆ ಹುರಿದುಕೊಂಡು, ತೆಂಗಿನತುರಿ, ಹುಣಸೇಹಣ್ಣು ಸೇರಿಸಿ ರುಬ್ಬಿ. ಈ ಮಿಶ್ರಣಕ್ಕೆ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಬೆಲ್ಲ ಸೇರಿಸಿ ತಿಳಿಸಾರಿನ ಹದಕ್ಕೆ ಕುದಿಸಿ. ಆಮೇಲೆ ಸಾಸಿವೆ, ಕರಿಬೇವು, ಇಂಗು ಅಥವಾ ಬೆಳ್ಳುಳ್ಳಿಯ ಕೊಟ್ಟರೆ ಹುರುಳಿಕಾಳಿನ ತಿಳಿಸಾರು ಸಿದ್ಧವಾಗುತ್ತದೆ. ಈ ಸಾರಿಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನೂ ಸೇರಿಸಬಹುದು. ಹುರುಳಿಕಾಳಿನ ತಿಳಿಸಾರನ್ನು ಸೂಪ್ ನಂತೆ ಕುಡಿಯಲೂ ಚೆನ್ನಾಗಿರುತ್ತದೆ. ಅನ್ನ-ಹಪ್ಪಳದ ಜೊತೆ ಉಣ್ಣಲೂ ರುಚಿಯಾಗಿರುತ್ತದೆ.
ಇವಿಷ್ಟಲ್ಲದೆ, ಹುರುಳಿಕಾಳನ್ನು ಬಳಸಿ ಚಟ್ನಿಪುಡಿ, ಉಸುಲಿ, ಬಸ್ಸಾರು, ಯಾವುದಾದರೂ ಸೊಪ್ಪಿನ ಜತೆ ಸೇರಿಸಿ ಸಾಂಬಾರು, ನುಚ್ಚಿನುಂಡೆ ಹೀಗೆ ಬಹಳಷ್ಟು ರುಚಿ ವೈವಿಧ್ಯಗಳನ್ನು ಮಾಡಿ ಉಣ್ಣಬಹುದು.
-ಹೇಮಮಾಲಾ.ಬಿ
Very nice.
ವಾದದಲ್ಲಿ ಹುರುಳಿದೆ
ಬರಹವು ಶುಚಿ ,ಹುರುಳಿಯ ವಿಧ ವಿಧದ ಅಡುಗೆ ಇನ್ನು ರುಚಿ.