ತನೋಟ್ ಮಾತಾ ಮಂದಿರ್ – ಲೊಂಗ್ ವಾಲ್
ತನೋಟ್ ಮಾತಾ ಮಂದಿರ್ – ಲೊಂಗ್ ವಾಲ್
ರಾಜಸ್ಥಾನದ ಜೈಸಲ್ಮೆರ್ ನಿಂದ ಸ್ವಲ್ಪ ದೂರ ಪ್ರಯಾಣಿಸುವಷ್ಟರಲ್ಲಿ ಥಾರ್ ಮರುಭೂಮಿ ಸಿಗುತ್ತದೆ. ಅಲ್ಲಿನ ಹಲವಾರು ಪ್ರೇಕ್ಷಣೀಯ ಸ್ಥಳಗಳಲ್ಲಿ ‘ತನೋಟ್ ಮಾತಾ ಮಂದಿರ್’ ಕೂಡ ಒಂದು. ರಸ್ತೆ ಮೂಲಕ ತಲಪಲು ಸುಮಾರು ಎರಡು ಗಂಟೆ ಬೇಕು. ಈ ರಸ್ತೆಯ ಪ್ರಯಾಣ ವಿಭಿನ್ನವಾಗಿತ್ತು. ದಾರಿಯುದ್ದಕ್ಕೂ ಹಳದಿ ಬಣ್ಣದ ಹೂ ಬಿಟ್ಟ ಸಾಸಿವೆ ಹೊಲಗಳು, ಅಲ್ಲಲ್ಲಿ ಮೇವು ತಿನ್ನುತ್ತಿದ ಒಂಟೆಗಳು, ಮೇಕೆ ಗುಂಪನ್ನು ನಿಭಾಯಿಸುತ್ತಿರುವ ರಾಜಸ್ಥಾನಿ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು,ಇದ್ದಕ್ಕಿದ್ದಂತೆ ಎದುರಾಗುವ ಮರಳ ರಾಶಿ, ಕುರುಚಲು ಕಾಡುಗಳು, ಪುಟ್ಟ ಹಳ್ಳಿಗಳು, ನೀರು ಹೊತ್ತೊಯ್ಯುವ ಟಾಂಕರ್ ಗಳು, ಗಡಿರಕ್ಷಣಾ ಪಡೆಯ ವಾಹನಗಳು, ಸೂಕ್ಷ್ಮವಾಗಿ ಗಮನಿಸಿದರೆ ಗಡಿರಕ್ಷಣಾ ಪಡೆಯ ಶಿಬಿರಗಳು…ಇತ್ಯಾದಿ ಎದುರಾದುವು. ಹಲವಾರು ಯೋಧರನ್ನೂ ಕಂಡೆವು.
1965 ರಲ್ಲಿ ನಡೆದ ಇಂಡೋ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ, ಪಾಕಿಸ್ತಾನದ ಸೈನ್ಯವು ಈ ಪ್ರದೇಶದಲ್ಲಿ ನೂರಾರು ಬಾಂಬ್ ಎಸೆದರೂ ಯಾವುದೇ ಹಾನಿಯಾಗಲಿಲ್ಲ.ಇದು ತನೋಟ್ ಮಾತೆಯ ಆಶೀರ್ವಾದದಿಂದಲೇ ಎಂಬ ನಂಬಿಕೆಯಿದೆ.
1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದ ಸಂಭವಿಸಿ ಭಾರತವು ವಿಜಯಿಯಾದ ಸ್ಥಳ ಲೊಂಗ್ ವಾಲ್ . ಇಲ್ಲಿಂದ ಪಾಕಿಸ್ತಾನದ ಗಡಿ ಕೇವಲ 10 ಕಿ.ಮಿ. ದೂರ. ಸೇನಾ ಪ್ರದೇಶವಾದುದರಿಂದ ಪ್ರವಾಸಿಗರಿಗೆ ‘ಲೋಂಗ್ ವಾಲ್’ ನಿಂದ ಮುಂದಕ್ಕೆ ಹೋಗಲು ಅನುಮತಿ ಇಲ್ಲ. ಅಂದಿನ ಯುದ್ಧದಲ್ಲಿ ವಶಪಡಿಸಿಕೊಂಡ ಪಾಕಿಸ್ತಾನದ ಟ್ಯಾಂಕರ್ ಒಂದನ್ನು ಇಲ್ಲಿ ಸ್ಮಾರಕವಾಗಿ ಇರಿಸಿದ್ದಾರೆ. ಪಂಜಾಬ್ ರೆಜಿಮೆಂಟ್ 23 ರ ಸಾಹಸಗಾಥೆಯ ವಿವರವನ್ನು ಅಲ್ಲಿನ ಫಲಕದಲ್ಲಿ ಬರೆದಿದ್ದಾರೆ. ಯುದ್ಧದಲ್ಲಿ ಹುತಾತ್ಮರಾದವರ ಸ್ಮಾರಕವನ್ನು ನೋಡುತ್ತ, ಮರುಭೂಮಿಯ ಅಂದಿನ ರಣರಂಗದಲ್ಲಿ ನಿಂತಿದ್ದಾಗ ರೋಮಾಂಚನಗೊಂಡೆ.
1997 ರಲ್ಲಿ ಬಿಡುಗಡೆಯಾದ ಪ್ರಖ್ಯಾತ ಚಲನಚಿತ್ರ ‘ಬಾರ್ಡರ್’ ಅನ್ನು ಲೋಂಗ್ ವಾಲ್ ನಲ್ಲಿ, ಚಿತ್ರೀಕರಿಸಲಾಯಿತು ಹಾಗೂ ಇದರಲ್ಲಿ ಯುದ್ಧದ ನಿಜ ಘಟನೆಗಳನ್ನು ಬಿಂಬಿಸಲಾಯಿತು.
ಅತಿ ಉಷ್ಣ-ಅತಿ ಶೀತ ತಾಪಮಾನ, ಮರಳು-ಧೂಳು ಸೇರಿ ಬೀಸುವ ಗಾಳಿ, ನೀರಿನ ಕೊರತೆ ಇತ್ಯಾದಿ ಮರುಭೂಮಿಯ ಪ್ರತಿಕೂಲ ಸನ್ನಿವೇಶದಲ್ಲಿದ್ದುಕೊಂಡು, ತಮ್ಮ ಕುಟುಂಬದ ಸದಸ್ಯರಿಂದ ದೂರವಾಗಿ ಮೈಯೆಲ್ಲಾ ಕಣ್ಣಾಗಿ ದೇಶ ಕಾಯುವ ಗಡಿ ಭದ್ರತಾ ಯೋಧರಿಗೆ ಗೌರವದ ಸೆಲ್ಯೂಟ್ . ಗಡಿ ಕಾಯುವ ತನೋಟ್ ಮಾತೆಗೂ ಪ್ರಣಾಮಗಳು.
-ಹೇಮಮಾಲಾ.ಬಿ, ಮೈಸೂರು,