ಕಪಿತ್ಥ ಪಾನಕ, ಬೇಲದ ಹಣ್ಣಿನ ತಿಳಿಸಾರು..
ಬೇಸಗೆಯ ಸಮಯದಲ್ಲಿ ಮಾತ್ರ, ಮೈಸೂರಿನ ಕೆಲವು ರಸ್ತೆಗಳಲ್ಲಿ ‘ಬೇಲದ ಹಣ್ಣು’ ಗಳನ್ನು ತಳ್ಳುಗಾಡಿಯಲ್ಲಿರಿಸಿ ಮಾರುವ ವ್ಯಾಪಾರಿಗಳು ಕಾಣಲು ಸಿಗುತ್ತದೆ. ಹಸಿರು-ಕಂದು ಬಣ್ಣದ , ದಪ್ಪ ಕರಟದಂತಹ ಸಿಪ್ಪೆ ಹೊಂದಿರುವ ಬೇಲದ ಹಣ್ಣು ಅಥವಾ ವುಡ್ ಆಪಲ್ ಕಾಡುಗಳಲ್ಲಿ ಬೆಳೆಯುತ್ತದೆ. ಆನೆಗಳಿಗೆ ಬಲುಪ್ರಿಯವಾದ ಹಣ್ಣಂತೆ.ಬೇಲದ ಹಣ್ಣಿಗೆ ಸಂಸ್ಕೃತದಲ್ಲಿ ‘ಕಪಿತ್ಥ ಫಲ’ ಎಂದು ಕರೆಯುತ್ತಾರೆ. ‘ಗಜಾನನಂ ಭೂತಗಣಾದಿ ಸೇವಿತಂ, ಕಪಿತ್ಥ ಜಂಬೂಫಲ ಸಾರ ಭಕ್ಷಿತಂ, ಉಮಾಸುತಂ ಶೋಕವಿನಾಶ ಕಾರಣಂ, ನಮಾಮಿ ವಿಘ್ನೇಶ್ವರ ಪಾದಪಂಕಜಂ” ಎಂಬ ಶ್ಲೋಕದಲ್ಲಿ ಬರುವ ‘ಕಪಿತ್ಥ’ ಫಲವು ಬೇಲದ ಹಣ್ಣು.
ಬೇಲದ ಹಣ್ಣಿನ ತಿರುಳು ಕಂದು ಬಣ್ಣವಿದ್ದು, ಹುಳಿಯಾಗಿರುತ್ತದೆ. ತಿರುಳಿನಲ್ಲಿ ಹಲವಾರು ಚಿಕ್ಕ ಬೀಜಗಳೂ ಇರುತ್ತವೆ. ಇದಕ್ಕಿರುವ ವಿಶಿಷ್ಟ ಸುವಾಸನೆಯಿಂದಾಗಿ ಕೆಲವರಿಗೆ ಬೇಲದ ಹಣ್ಣಿನ ಪಾನಕ ಇಷ್ಟ. ಬೇಲದ ಹಣ್ಣಿನ ವಾಸನೆ ಒಗ್ಗದವರೂ ಇದ್ದಾರೆ. ಬೇಲದ ಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ವಿಟಮಿನ್ ಸಿ, ಕಾಲ್ಸಿಯಂ ಮತ್ತು ನಾರಿನಂಶ ಹೇರಳವಾಗಿದೆ.
ಮೊನ್ನೆ ಒಂದು ದಿನ ಗೆಳತಿಯೊಬ್ಬರು ತಮ್ಮ ತೋಟದಲ್ಲಿ ಬೆಳೆದಿದ್ದ ನಾಲ್ಕಾರು ಬೇಲದ ಹಣ್ಣುಗಳನ್ನು ಕೊಟ್ಟಿದ್ದರು. ಒಂದು ಹಣ್ಣಿನ ತಿರುಳಿಗೆ ನೀರು, ಬೆಲ್ಲ ಬೆರೆಸಿ, ಮಿಕ್ಸಿಗೆ ಹಾಕಿ ರುಬ್ಬಿ, ಸೋಸಿ, ಐಸ್ ಸೇರಿಸಿ ತಂಪು ಮಾಡಿ ಸಿಹಿಪಾನಕ ಕುಡಿದೆವು. ಈ ಪಾನಕವನ್ನು ಕುಡಿದು ರೂಢಿಯಿಲ್ಲದ ಕಾರಣ ಮತ್ತು ಅದರ ಸುವಾಸನೆ ಹಿಡಿಸದೆ ಇದ್ದುದರಿಂದ, ನಮ್ಮ ಮನೆಯ ಸದಸ್ಯರ ಮೆಚ್ಚಿಗೆ ಗಳಿಸಲಿಲ್ಲ.
ಹಾಗಾಗಿ, ಇನ್ನೊಂದು ಹಣ್ಣಿನ ರಸಕ್ಕೆ, ಉಪ್ಪು, ಬೆಲ್ಲ, ಎರಡು ಹಸಿರುಮೆಣಸಿನ ಕಾಯಿ, ಒಂದು ಸ್ಪೂನ್ ಸಾರಿನ ಪುಡಿ ಸೇರಿಸಿ ಕುದಿಸಿದೆ. ಸಾಸಿವೆ, ಕರಿಬೇವು, ಬೆಳ್ಳುಳ್ಳಿಯ ಒಗ್ಗರಣೆ ಕೊಟ್ಟು ‘ಬೇಲದ ಹಣ್ಣಿನ ತಿಳಿಸಾರು ‘ ತಯಾರಿಸಿದೆ. ಈ ಹೊಸರುಚಿ ಎಲ್ಲರಿಗೂ ಇಷ್ಟವಾಯಿತು! ಬೆಳ್ಳುಳ್ಳಿಯ ಘಾಟು, ಬೇಲದ ಹಣ್ಣಿನ ಪರಿಮಳವನ್ನು ಯಾಮಾರಿಸುವುದರಿಂದ, ಇದು ಯಾವ ತಿಳಿಸಾರು ಎಂದು ಗೊತ್ತಾಗುವುದಿಲ್ಲ. ಅನ್ನದೊಂದಿಗೆ, ಉಣ್ಣಬಹುದು . ಸೂಪ್ ನಂತೆ ಕುಡಿಯಲೂ ಚೆನ್ನಾಗಿರುತ್ತದೆ