ಮಿಲ್ಲೆಟ್-ಕ್ಯಾರೆಟ್ ಬರ್ಫಿ
ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ ಮತ್ತು ಖನಿಜ ಲವಣಗಳಿವೆ. ಸಿರಿಧಾನ್ಯಗಳಲ್ಲಿ ಒಂದಾದ ಹಾರಕ ( Kodo Millet) ಅಥವಾ ಆರ್ಕವನ್ನು ಬಳಸಿ ತಯಾರಿಸಿದ ಬರ್ಫಿಯ ಚಿತ್ರ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
- ಹಾರಕ : 2 ಕಪ್
- ಸಕ್ಕರೆ : 2 ಕಪ್
- ಕ್ಯಾರೆಟ್ : 2
- ತುಪ್ಪ : ಒಂದು ಕಪ್
- ನೀರು : 1 ಕಪ್ (ಅಥವಾ ಸಕ್ಕರೆ ಮುಳುಗುವಷ್ಟು)
- ಏಲಕ್ಕಿ : 4
- ದ್ರಾಕ್ಷಿ, ಗೋಡಂಬಿ : ಸ್ವಲ್ಪ
ತಯಾರಿಸುವ ವಿಧಾನ:
- ಹಾರಕ ಧಾನ್ಯವನ್ನು ತೊಳೆದು ನೆರಳಿನಲ್ಲಿ ಒಣಗಿಸಿ, ಮಿಕ್ಸಿಯಲ್ಲಿ ಹಾಕಿ ನುಣ್ಣನೆಯ ಪುಡಿ ಮಾಡಿಟ್ಟುಕೊಳ್ಳಿ.
- ಕ್ಯಾರೆಟ್ ಗಳ ಸಿಪ್ಪೆ ತೆಗೆದು, ನೀರು ಹಾಕದೆ ರುಬ್ಬಿ ಇಟ್ಟುಕೊಳ್ಳಿ.
- ಬಾಣಲೆಯಲ್ಲಿ ಸಕ್ಕರೆಯನ್ನು ಹಾಕಿ, ಅದು ಮುಳುಗುವಷ್ಟು ನೀರು ಸೇರಿಸಿ, ಸಣ್ಣ ಉರಿಯಲ್ಲಿ ಕಾಯಿಸಿ.
- ಸಕ್ಕರೆ ಕರಗಿದ ಮೇಲೆ, ಪುಡಿ ಮಾಡಿದ ಹಾರಕ, ರುಬ್ಬಿದ ಕ್ಯಾರೆಟ್ ಮತ್ತು ತುಪ್ಪವನ್ನು ಹಾಕಿ, ತಳ ಹಿಡಿಯದಂತೆ ಚೆನ್ನಾಗಿ ಗೊಟಾಯಿಸಿ.
- ಈ ಮಿಶ್ರಣಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಸೇರಿಸಿ. ದ್ರಾಕ್ಷಿ-ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿ.
- ಮಿಶ್ರಣವು ಮುದ್ದೆಯಾಗಿ ತಳ ಬಿಟ್ಟು ಬರುವಾಗ ತುಪ್ಪ ಸವರಿದ ತಟ್ಟೆಗೆ ಹಾಕಿ, ಸೌಟಿನಲ್ಲಿ ಒತ್ತಿ. ಬಿಸಿ ಆರಿದ ಮೇಲೆ ಬೇಕಾದ ಆಕಾರಕ್ಕೆ ತುಂಡು ಮಾಡಿ. ರುಚಿಯಾದ, ಮಿಲ್ಲೆಟ್-ಕ್ಯಾರೆಟ್ ಬರ್ಫಿ ತಿನ್ನಲು ಸಿದ್ಧ.
(ಈ ಬರ್ಫಿಗೆ ನೈಸರ್ಗಿಕವಾದ ಬಣ್ಣ ಬರಲಿ ಎಂಬ ಉದ್ದೇಶದಿಂದ ಕ್ಯಾರೆಟ್ ಅನ್ನು ರುಬ್ಬಿ ಸೇರಿಸಿರುವುದು. ಕ್ಯಾರೆಟ್ ಹಾಕದೆಯೂ ಬರ್ಫಿ ಮಾಡಬಹುದು. ಹಾರಕದ ಬದಲು ಬೇರೆ ನವಣೆ, ಸಾಮೆ..ಇತ್ಯಾದಿ ಬೇರೆ ಸಿರಿಧಾನ್ಯಗಳನ್ನೂ ಬಳಸಬಹುದು)
– ಹೇಮಮಾಲಾ.ಬಿ