ಶ್ಯಾವಿಗೆ ಉಪ್ಪಿಟ್ಟು…ಶಿರಾ…ಪಕೋಡ
ದಿಢೀರ್ ಆಗಿ, ಅಪರೂಪದ ನೆಂಟರು ಬಿರುಗಾಳಿಯಂತೆ ಬಂದು ಅಷ್ಟೇ ವೇಗದಲ್ಲಿ ಹೊರಡುತ್ತೇವೆಂದು ತಿಳಿಸಿದರೆ, ರುಚಿರುಚಿಯಾಗಿ, ವೈವಿಧ್ಯತೆಯ ಅಡುಗೆ ಏನು ಮಾಡಲಿ ಎಂಬ ಆಲೋಚನೆ ಬರುತ್ತದೆ. ಅಂತಹ ಸಂದರ್ಭಗಳಲ್ಲಿ, ಶ್ಯಾವಿಗೆ ಉಪ್ಪಿಟ್ಟು, ಶ್ಯಾವಿಗೆ ಶಿರಾ ಮತ್ತು ಶ್ಯಾವಿಗೆ ಪಕೋಡ ಮಾಡಿ ನೋಡಿ. ರುಚಿಯಾಗಿಯೂ ಇರುತ್ತದೆ, ಕಡಿಮೆ ಅವಧಿಯಲ್ಲಿ ಅತಿಥಿ ಸತ್ಕಾರವೂ ಸಂಪನ್ನಗೊಳ್ಳುತ್ತದೆ. ವಿಧಾನ:
2 ಕಪ್ ಶ್ಯಾವಿಗೆಯನ್ನು ಬಾಣಲಿಯಲ್ಲಿ ಹಾಕಿ, ಸಣ್ಣ ಉರಿಯಲ್ಲಿ, ಪರಿಮಳ ಬರುವಷ್ಟು ಹುರಿಯಿರಿ. ಒಂದು ಈರುಳ್ಳಿ, ಒಂದು ಟೊಮ್ಯಾಟೋ, ಒಂದು ಕ್ಯಾರೆಟ್, ಎರಡು ಹಸಿರುಮೆಣಸಿನಕಾಯಿ, ನಾಲ್ಕು ಬೀನ್ಸ್, ಅವರೇಕಾಳು..ಇತ್ಯಾದಿ ವಿವಿಧ ತರಕಾರಿಗಳನ್ನು ಅವರವರ ಆಯ್ಕೆಗೆ ತಕ್ಕಂತೆ ಹೆಚ್ಚು-ಕಡಿಮೆ ಮಾಡಿ ಸಣ್ಣಗೆ ಹೆಚ್ಚಿ. ಎಣ್ಣೆ, ಉದ್ದಿನಬೇಳೆ, ಸಾಸಿವೆ, ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆಗಿಡಿ. ಇದಕ್ಕೆ 4 ಕಪ್ ನೀರು ಮತ್ತು ಹೆಚ್ಚಿದ ತರಕಾರಿಗಳನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಶ್ಯಾವಿಗೆ ಉಪ್ಪಿಟ್ಟು ತಯಾರಿಸಿ. ಬೇಕಿದ್ದರೆ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣಿನ ರಸ, ತೆಂಗಿನಕಾಯಿ ತುರಿ ಸೇರಿಸಿ. ‘ಶ್ಯಾವಿಗೆ ಉಪ್ಪಿಟ್ಟು’ ತಯಾರು.
ಒಂದು ಕಪ್ ಹುರಿದ ಶ್ಯಾವಿಗೆಯನ್ನು ಬೇರೆ ಪಾತ್ರೆಗೆ ಸುರಿದು, ಒಂದು ಲೋಟ ಹಾಲು, ಬೇಕಿದ್ದರೆ ಸ್ವಲ್ಪ ಕೇಸರಿ ಬಣ್ಣ ಸೇರಿಸಿ, ಸೌಟಿನಲ್ಲಿ ಕೈಯಾಡಿಸಿ. ಅರ್ಧ ಕಪ್ ಸಕ್ಕರೆ, ನಾಲ್ಕು ಚಮಚ ತುಪ್ಪ ಸೇರಿಸಿ, ಇನ್ನೂ ಸ್ವಲ್ಪ ಕೈಯಾಡಿಸಿ. ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಸೇರಿಸಿ ಬೆರೆಸಿದರೆ ‘ಶ್ಯಾವಿಗೆಯ ಶಿರಾ’ ಸಿದ್ದವಾಗುತ್ತದೆ.
ಒಂದು ಕಪ್ ಹುರಿದ ಶ್ಯಾವಿಗೆಗೆ, ಒಂದು ಕಪ್ ಕಡಲೇಹಿಟ್ಟು, ಒಂದು ಕಪ್ ಹೆಚ್ಚಿದ ಈರುಳ್ಳಿ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಖಾರಪುಡಿ, ಸ್ವಲ್ಪ ಕರಿಬೇವಿನಸೊಪ್ಪು, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು- ಸೇರಿಸಿ ಗಟ್ಟಿಯಾಗಿ ಪಕೋಡದ ಹಿಟ್ಟಿನ ಹದಕ್ಕೆ ಕಲೆಸಿ ಎಣ್ಣೆಯಲ್ಲಿ ಕರಿದರೆ ‘ಶ್ಯಾವಿಗೆ ಪಕೋಡ’ ತಯಾರಾಗುತ್ತದೆ.
ಕೆಲಸವನ್ನು ಸುಲಭಗೊಳಿಸಲು, ಬೇಕಾದಷ್ಟು ಶ್ಯಾವಿಗೆಯನ್ನು ಒಂದೇ ಬಾರಿ ಹುರಿದುಕೊಳ್ಳಿ. ಒಂದು ಕಪ್ ಹುರಿದ ಶ್ಯಾವಿಗೆಯನ್ನು ಬೇರೆ ಪಾತ್ರೆಗೆ ಹಾಕಿ, ಹಾಲು ಸೇರಿಸಿ ಒಲೆಯಲ್ಲಿಡಿ. ಉಪ್ಪಿಟ್ಟಿಗೆ ತರಕಾರಿಗಳನ್ನು ಹೆಚ್ಚುವಾಗ ಮಧ್ಯೆ-ಮಧ್ಯೆ ಶಿರಾವನ್ನು ಸೌಟಿನಲ್ಲಿ ಕೈಯಾಡಿಸುತ್ತಾ ಇದ್ದರೆ 10 ನಿಮಿಷದಲ್ಲಿ ಶಿರಾ ಆಗಿಯೇ ಬಿಡುತ್ತದೆ. ಆಮೇಲೆ ಉಪ್ಪಿಟ್ಟನ್ನು ಬೇಯಲಿಟ್ಟು, ಪಕೋಡದ ಹಿಟ್ಟು ಕಲೆಸಿದರೆ, ಅದು ಬೆಂದಾಗುವಷ್ಟರಲ್ಲಿ, ಪಕೋಡದ ಹಿಟ್ಟು ಸಿದ್ದವಾಗಿರುತ್ತದೆ. ಹೀಗೆ ಅರ್ಧ ಗಂಟೆಯಲ್ಲಿ ಮೂರು ತಿಂಡಿಗಳನ್ನು ತಯಾರಿಸಬಹುದು.
– ಹೇಮಮಾಲಾ.ಬಿ
ಸೂಪರ್ ತಿಂಡಿಗಳು .ಶಾವಿಗೆಯ ತಿಂಡಿಗಳಿಗೆ ತುಪ್ಪದ ಖರ್ಚೂ ಕಡಿಮೆ .