ನಮ್ಮೂರ ದೀಪಾವಳಿ

Share Button

Savithri Bhat Dec 2015 - Copy

ಅತ್ಯಂತ ಬಲಶಾಲಿಯಾದ  ಬಲಿಚಕ್ರವರ್ತಿ ಅಸುರ ನಾದರೂ ಮಹಾದಾನಿಯಾಗಿದ್ದನು.ಅವನ ನೆನಪಿಗಾಗಿ ಆಚರಿಸುವ ಪೂಜೆಗೆ ಬಲೀಂದ್ರ ಪೂಜೆ ಎನ್ನುತ್ತಾರೆ.ಈ ಪೂಜೆಯನ್ನು ದೀಪಾವಳಿಯ ‘ಪಾಡ್ಯ’ ದ ದಿನ ಆಚರಿಸುತ್ತೇವೆ .

‘ದೀಪಾವಳಿ’ ಅಂದ ಕೂಡಲೇ ನೆನಪಾಗುವುದು  ಬಾಲ್ಯದಲ್ಲಿ ನಾವು ಅಕ್ಕ  ಅಣ್ಣ೦ದಿರೊಡನೆ ಆಚರಿಸುತ್ತಿದ್ದ ದೀಪಾವಳಿ. ನನ್ನ ಬಾಲ್ಯದಲ್ಲಿ ಕೇರಳದ ಗಡಿನಾಡಾದ ಕಾಸರಗೋಡು ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿದ್ದೆ. ಕರ್ನಾಟಕಕ್ಕೆ ತೀರಾ ಹತ್ತಿರದಲ್ಲಿರುವ ಇಲ್ಲಿನ ಜನಜೀವನ, ಸಂಸ್ಕೃತಿ ಮತ್ತು ಹಬ್ಬಗಳ ಆಚರಣೆಗಳು ಸುಮಾರಾಗಿ ದಕ್ಷಿಣಕನ್ನಡ ಜಿಲ್ಲೆಯ ಸಂಪ್ರದಾಯಗಳಂತೆಯೇ ಇವೆ. ಹಬ್ಬಕ್ಕೆ ಕೆಲವು ದಿನ ಮೊದಲೇ ತಯಾರಿ ನಡೆಯುತ್ತಿತ್ತು. ಮನೆಯ ಸದಸ್ಯರಿಗೆ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ಇರುತ್ತಿತ್ತು. ಮನೆ ಕೆಲಸದವರಿಗೂ ಸಂಭ್ರಮ. ಮನೆಯ ಅಂಗಳ ರಿಪೇರಿ, ಸಾರಿಸುವುದು, ದನಕರುಗಳನ್ನು ಮೀಯಿಸುವುದು ಇತ್ಯಾದಿ.

ನಮ್ಮ ಮನೆಯ ಸಮೀಪವೇ ಒಂದು ಶಿವನ ದೇವಸ್ಥಾನವಿದೆ ಮೊದಲು, ಆ ದೇವಸ್ಥಾನದಲ್ಲಿ ದೀಪಾವಳಿ ಆಚರಿಸಿ, ಅನಂತರ ನಮ್ಮ ಮನೆಯಲ್ಲಿ ಪೂಜೆ ಮಾಡುತ್ತಿದ್ದೆವು. ಯಾಕೆಂದರೆ ಆ ದೆವಸ್ಥಾನದ ಮುಖ್ಯ ಅರ್ಚಕರು ನಮ್ಮತಂದೆಯವರೆ.

ಆದಿನ ಬೆಳಗ್ಗಿನಿಂದಲೇ ಹಬ್ಬದ ತಯಾರಿ.ಅಡಿಗೆ ತಿಂಡಿ ತಿನಸಿನ ಜವಾಬ್ದಾರಿ ಅಮ್ಮ ಅಜ್ಜಿಯವರದ್ದಾದರೆ ಪೂಜೆಗೆ ಬೇಕಾಗುವ ಹೂ,ತೋರಣ,ರಂಗೋಲಿ ಇತ್ಯಾದಿ ಮನೆಯ ಹೆಣ್ಮಕ್ಕಳದ್ದು. ಬಲೀಂದ್ರನ ಪೂಜೆಗೆ ಬೇಕಾಗುವ ಪಾರೆ ಹೂ,ಚೆಂಡುಹೂ, ಗೊಪೂಜೆಯಲ್ಲಿ ಗೋವುಗಳ ಕೊರಳಿಗೆ ಹಾಕಲು ಪಾರೆಹೂವಿನ ಮಾಲೆ ಇತ್ಯಾದಿಗಳ ತಯಾರಿಯಲ್ಲಿ ನಾನು ಅಕ್ಕನೊಂದಿಗೆ ಸಹಕರಿಸುತ್ತಿದ್ದೆ. ಬಲೀಂದ್ರನ ತಯಾರಿ ಅಣ್ಣಂದಿರದ್ದು. ಒಂದೊಂದು ಊರಿನಲ್ಲಿ ಒಂದೊಂದು ಕ್ರಮ. ನಮ್ಮ ಮನೆಯಲ್ಲಿ ಬಾಳೆದಿಂಡಿನಿಂದ ತಯಾರಿಸಿದ ಬಲೀಂದ್ರನನ್ನು ಪೂಜಿಸುತ್ತಿದ್ದೆವು. ಸಾಧಾರಣ ಐದು ಅಡಿ ಉದ್ದದ ಒಂದು ಬಾಳೆದಿಂಡಿನ ಹೊರಗಿನ ಸಿಪ್ಪೆ ತೆಗೆದು ಅದನ್ನು ನೇರವಾಗಿ ನಿಲ್ಲಿಸಿ, ಬಾಳೆದಿಂಡಿನ ಬಿಳಿ ಹಾಳೆಯನ್ನು ಚಿಕ್ಕ ಚಿಕ್ಕ ಕೈಗಳಂತೆ ಕತ್ತರಿಸಿ,ತೆಂಗಿನ ಗರಿಗಳ ಕಡ್ಡಿಯನ್ನು ಬಳಸಿ ಹನ್ನೆರಡು ಕೈ ಮಾಡುತ್ತಿದ್ದೆವು. ಈ ಕೈಗಳಲ್ಲಿ ಎಳೆಯ ತೆಂಗಿನ ಚೆಂಡುಪುಳೆಯ ತೋಪ್ಪಿಗಳಲ್ಲಿ ಪುಟ್ಟ ಪುಟ್ಟ ಹಣತೆಯಂತೆ ಎಣ್ಣೆ ತುಂಬಿಸಿ ಬತ್ತಿ ಇಟ್ಟುಉರಿಸುತ್ತಿದ್ದೆವು.

ದೀಪಾವಳಿಯ ದಿನ ಸಂಜೆ, ನಮ್ಮ ಊರಿನ ಹಿರಿಯರು,ಕಿರಿಯರು,ಯುವಕರು,ಮಕ್ಕಳೆಲ್ಲರೂ ದೇವಸ್ಥಾನ ದಲ್ಲಿ ಸೇರುತ್ತಿದ್ದರು. ಊರಿನ ಹುಡುಗಿಯರೆಲ್ಲ ದೇವಸ್ಥಾನದ ಸುತ್ತ ಇಟ್ಟಿರುವ ಹಣತೆಗಳಿಗೆ ಎಣ್ಣೆ,ಬತ್ತಿ,ಇಟ್ಟು ಹಣತೆಗಳನ್ನು ಉರಿಸುತ್ತಿದ್ದರು. ಸಂಜೆ ಹೊತ್ತಿಗೆ ನಾನೂ ಗೆಳತಿಯರೊಂದಿಗೆ ಹಾಜರು. ಹಾಗೂ ದೀಪ ಉರಿಸುವ ಉತ್ಸಾಹ.

ಸೂರ್ಯಾಸ್ತಮಾನ ಆಗುತ್ತಿದ್ದಂತೆ ಊರಿನ ಯುವಕರಿಂದ ಬಲೀಂದ್ರನ ಸ್ಥಾಪನೆ. ಸುಮಾರು 25-30 ಅಡಿ ಉದ್ದದ ಮರದ ಕಂಬಕ್ಕೆ ಸುತ್ತಲೂ ಹಣತೆಗಳನ್ನು ಇರಿಸಲು ಕೈಗಳು ಎಲ್ಲರೂಸೇರಿ ಸ್ಥಂಭ ವನ್ನು ಎದ್ದು ನಿಲ್ಲಿಸುವಾಗ ಕೊಂಬು, ವಾಲಗ, ಡೋಲು, ಘಂಟಾನಾದ  ಆಗುವ ಗದ್ದಲ.  ಊರವರೆಲ್ಲಾ ಬಲೀಂದ್ರಾ,ಬಲೀಂದ್ರಾ, ಕೂ….ಕೂ.…ಎಂದು ಕೂಗುವಾಗ ನಮಗೇನೋ ಸಂತಸ ಭಕ್ತಿ ಭಾವದಿಂದ ನಮಸ್ಕರಿಸಿ ಮಂಗಳಾರತಿಯ ನಂತರ ಸಿಕ್ಕಿದ ಸಿಹಿ ಅವಲಕ್ಕಿ ಪ್ರಸಾದವನ್ನು ನೆನೆದಾಗ ಈಗಲೂ ಏನೋ ಖುಷಿ.

tulasipooja-naivedya

 

ಅಲ್ಲಿಂದ ಕೂಡಲೇ ಲಗುಬಗಯಿಂದ ಮನೆಗೆ ಬಂದು ನಮ್ಮ ಮನೆಯಲ್ಲಿ ದೀಪಾವಳಿ. ಪ್ರಾರಂಭದಲ್ಲಿ ಮನೆದೇವರಿಗೆ ಮಂಗಳಾರತಿ ಮಾಡಿ,ಅನಂತರ ಬಲೀಂದ್ರ ಪೂಜೆ,ನೈವೇದ್ಯಕ್ಕೆ ಮೂಡೆಕೊಟ್ಟಿಗೆ,ಕಡುಬು,ನೀರುದೋಸೆ,ಸಿಹಿ ಅವಲಕ್ಕಿ ಇತ್ಯಾದಿ. ಎರಡನೇ ದಿನವೂ ಗೋಪೂಜೆ, ಲಕ್ಷ್ಮೀಪೂಜೆ, ತುಳಸಿಪೂಜೆ. ಮೂರು ದಿನ ಹಬ್ಬ ಆಚರಿಸಿ ನಾಲ್ಕನೇ ದಿನ ಬೆಳಿಗ್ಗೆ ಬಲೀಂದ್ರನ ವಿಸರ್ಜನೆ ಮಾಡಿ ಕೆರೆಯಲ್ಲಿ ಸ್ನಾನ ಮಾಡಿ ಬಂದರೆ ಆ ವರ್ಷದ ಬಲೀಂದ್ರ ಪೂಜೆ ಮುಗಿಯಿತು,ಆದರೆ ಉತ್ಥಾನದ್ವಾದಶಿಯ ದಿನ ತುಳಸಿ ಪೂಜೆ ಮಾಡಿದರೆ ಆ ವರ್ಷದ ದೀಪಾವಳಿ ಸಮಾರೋಪ.

tulasi-pooja-deepavali

ಅಂತೂ ಚಿಕ್ಕವಳಿರುವಾಗ ಮೂರುದಿನದ ಅದೆಷ್ಟು ಸಂಭ್ರಮದ ದೀಪಾವಳಿ. ಅಲ್ಪ ಸ್ವಲ್ಪ ಪಟಾಕಿಯಿಂದಲೂ ಸಂತಸ ಸಂಭ್ರಮ ಉತ್ಸಾಹ! ನೆನೆಯುವಾಗ ಈಗಲೂ ಒಂದು ರೀತಿಯಲ್ಲಿ ಮನಸ್ಸು ಮುದಗೊಳ್ಳುತ್ತದೆ. ಈಗ ನಮ್ಮಲ್ಲಿ ದೀಪಾವಳಿಯಂದು ಬಲೀಂದ್ರ ಪೂಜೆ , ತುಳಸಿ ಪೂಜೆ, ಗೋಪೂಜೆ, ಆಚರಿಸುತ್ತೇವೆ. ಮಾತ್ರ ಹಿಂದಿನಂತೆ ಮೂರು ದಿನದ ಬದಲು ಒಂದೇ ದಿನದ ಆಚರಣೆ.

 – ಸಾವಿತ್ರಿ ಎಸ್  ಭಟ್, ಪುತ್ತೂರು

5 Responses

  1. Harshitha says:

    Very Nice article…

  2. Shankari Sharma says:

    ದೀಪಾವಳಿಯ ಬರಹ ತುಂಬಾ ಚೆನ್ನಾಗಿದೆ….ನನ್ನ ಚಿಕ್ಕಂದಿನ ದಿನಗಳ ದೀಪಾವಳಿಯ ನೆನಪು ಕಾಡತೊಡಗಿತು…!!

  3. savithri s bhat says:

    ಓದಿ ಪ್ರೋತ್ಸಾಹಿಸಿದ ನಿಮಗೆ ಹಾಗೂ ಲೇಖನ ಪ್ರಕಟಿಸಿದ ಸಂಪಾದಕಿಯವರಿಗೆ ಧನ್ಯವಾದಗಳು .

  4. Sumana says:

    ಚಂದ…ಬಾಳೆದಿಂಡಿನಿಂದ ಕೈ ಮಾಡಿ ದೀಪ ಹಚ್ಚಿದ್ದರ ಚಿತ್ರವಿದ್ದರೆ ನೋಡಬಹುದಿತ್ತು

  5. Pushpalatha Mudalamane says:

    ನಮ್ಮೂರ ದೀಪಾವಳಿ ಆ ಕಾಲದ ಬಲೀಂದ್ರನ ಒಂದು ಚಿತ್ರ .ಹಾಕಿದರೆ ,ನಾವೂ ನೋಡಬಹುದು !

Leave a Reply to Harshitha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: