ಸಾಧನೆ ಮಾಡಬೇಕಾದರೆ ಮೊದಲು ಕುತೂಹಲ ಹುಟ್ಟಿಕೊಳ್ಳಬೇಕು….

Share Button

curious

ನೀವು ವಿಜ್ಞಾನಿ, ಕವಿ, ಪತ್ರಕರ್ತ, ಎಂಜಿನಿಯರ್, ಕಲಾವಿದ, ಗಣಿತಜ್ಞ, ಕ್ರೀಡಾಪಟು ಅಥವಾ ಕೃಷಿಕ ಆಗಿರಬಹುದು, ಆದರೆ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಮೊದಲು ಕುತೂಹಲ ಹುಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಸರ್ವಥಾ ಏನೂ ಮಾಡಲಾಗದು. ನೀವೊಬ್ಬ ಯಶಸ್ವಿ ಅಪ್ಪ, ಅಮ್ಮ, ಗೃಹಸ್ಥ, ಗೃಹಿಣಿಯಾಗಲೂ ನಿಮ್ಮೊಳಗೆ ಸ್ವಾರಸ್ಯದ ಸೆಲೆ ಇರಬೇಕು. `ವೈಫಲ್ಯದಿಂದ ವೈಫಲ್ಯಕ್ಕೆ ಕುತೂಹಲವನ್ನು ಕಳೆದುಕೊಳ್ಳದೆ ಮುಂದುವರಿಯುವುದೇ ಯಶಸ್ಸು’ ಎನ್ನುತ್ತಾರೆ ವಿನ್‌ಸ್ಟನ್ ಚರ್ಚಿಲ್.

ಜಾಗತೀಕರಣದ ಗಾಢ ಪ್ರಭಾವ ಎಲ್ಲ ಕ್ಷೇತ್ರಗಳಲ್ಲೂ ಕಂಡು ಬರುತ್ತಿರುವ ಈ ದಿನಗಳಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳಲಾಗದಷ್ಟು ಅನಿಶ್ಚಿತತೆ ಉಂಟಾಗಿದೆ. ಹಾಗಂತ ಹತಾಶರಾಗಿ ಕೂರಬೇಕಾಗಿಯೂ ಇಲ್ಲ. ಯಾಕೆಂದರೆ ಜಾಗತೀಕರಣ ತನ್ನ ಅನಿಶ್ಚಿತತೆಯ ನಡುವೆ ಸಾಕಷ್ಟು ಅವಕಾಶಗಳನ್ನೂ, ಸಾಧ್ಯತೆಗಳನ್ನೂ ಕೊಟ್ಟಿದೆ. ಆದರೆ ನಿಮ್ಮ ಅಭಿರುಚಿ, ಆಸಕ್ತಿಗೆ ಹೊಂದಿಕೊಳ್ಳುವ ಅವಕಾಶ ಯಾವುದು ಎಂಬುದನ್ನು ಕಂಡುಕೊಳ್ಳಲು ತೀವ್ರ ಕುತೂಹಲ ಇರಬೇಕು.

ಆದರೆ ಈಗ ಏನಾಗಿದೆ ನೋಡಿ, ಸರಕಾರಿ ಉದ್ಯೋಗಿಯೊಬ್ಬ ತನ್ನ ಕೆಲಸ ಏಕತಾನತೆಯ ಬಗ್ಗೆ ಹೇಳಿಕೊಳ್ಳುತ್ತಾ, ಖಾಸಗಿ ವಲಯದಲ್ಲಿ ಭರ್ಜರಿ ಸಂಬಳ ಪಡೆಯುವ ಕೆಲಸ ಸಿಕ್ಕಿದರೆ ಒಳ್ಳೆಯದಿತ್ತು ಎಂದು ನೊಂದುಕೊಳ್ಳುತ್ತಾನೆ. ಖಾಸಗಿ ವಲಯದಲ್ಲಿ ದುಡಿಯುವ ವ್ಯಕ್ತಿ, ಈ ಕೆಲಸದ ಒತ್ತಡ ತಾಳಿಕೊಳ್ಳಲಾರೆ, ಇದಕ್ಕಿಂತ ಗುಮಾಸ್ತನ ಕೆಲಸವಾದರೂ ಸರಿ, ಸರಕಾರಿ ಉದ್ಯೋಗವೇ ವಾಸಿ ಎಂದುಕೊಳ್ಳುತ್ತಾನೆ. ಕೃಷಿಕನೊಬ್ಬ ತನ್ನ ಬೆಳೆಗೆ ಸರಿ ಬೆಲೆ ಸಿಗದಿದ್ದಾಗ, ಏನಾದರೂ ವ್ಯಾಪಾರ ಮಾಡಿದರೆ ಕೈ ತುಂಬ ದುಡ್ಡು ಎಣಿಸಬಹುದಿತ್ತೇನೋ ಎಂದು ಭಾವಿಸುತ್ತಾನೆ. ವ್ಯಾಪಾರಿಯೊಬ್ಬ ನಿಗದಿತ ಸಂಬಳದ ಕೆಲಸವೇ ಎಲ್ಲಕ್ಕಿಂತ ಸುಲಭ ಎಂದು ಅಂದುಕೊಳ್ಳುತ್ತಾನೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡವರು, ಸಾಕಪ್ಪಾ ಸಾಕು ಬೆಂಗಳೂರಿನ ಸಹವಾಸ, ಇದಕ್ಕಿಂತ ಯಾವುದಾದರೂ ಹಳ್ಳಿಯಲ್ಲಿ ಸಣ್ಣ ಮನೆ, ಕೆಲಸ ಮಾಡಿಕೊಂಡು ಆರಾಮವಾಗಿ ಇರಬಹುದು ಎಂದು ಯೋಚಿಸುತ್ತಾರೆ. ಹಳ್ಳಿಗಳಲ್ಲಿರುವವರು ಬೆಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿಯೋ, ಓಲಾ, ಉಬರ್ ಜಾಲದಲ್ಲಿ ಕಾರನ್ನು ಓಡಿಸಿಕೊಂಡೋ ಪಸಂದಾಗಿ ಬದುಕಿನ ರಥ ಎಳೆಯಬಹುದು ಎಂದು ಲೆಕ್ಕಾಚಾರ ಹಾಕುತ್ತಾರೆ. ಭಗ್ನ ಪ್ರೇಮಿಯೊಬ್ಬ ತನ್ನಿಂದ ದೂರವಾದ ಪ್ರೇಯಸಿಯನ್ನು ನೆನೆದು ಜೀವನವೇ ಬೇಡ ಎಂದು ಸಂಕಟಪಡುತ್ತಾನೆ. ಅಮರ ಮಧುರ ಪ್ರೇಮಿಗಳಂತೆ ಇದ್ದವರೂ ಮದುವೆಯ ನಂತರ ಕಿತ್ತಾಡಿ, ವಿಚ್ಛೇದನದಲ್ಲಿ ಅಂತ್ಯವಾದ ಅದೆಷ್ಟೋ ಪ್ರಸಂಗಗಳು ನಮ್ಮ ಮುಂದಿವೆ. ತಮ್ಮನ್ನು ಯಾರೂ ಪ್ರೋತ್ಸಾಹಿಸುವುದಿಲ್ಲ, ಉತ್ತೇಜಿಸುವುದಿಲ್ಲ, ಹೀಗಾಗಿ ಏನೂ ಮಾಡಲಾಗುತ್ತಿಲ್ಲ ಎಂದು ನೊಂದುಕೊಳ್ಳುವವರೂ ಇದ್ದಾರೆ. ಎಷ್ಟೋ ಸಲ ನಿಮಗೂ, ಯಾವುದೋ ಕಾರಣಕ್ಕೆ ನಿರುತ್ಸಾಹ ಉಂಟಾಗಿ ದಿಕ್ಕೇ ತೋಚದಂತಾಗಿರಬಹುದು. ಹಾಗಾದರೆ ಇಂಥ ಅತೃಪ್ತಿಯ ಬಾಣಲೆಯಿಂದ ಹೊರ ಬಂದು ಮತ್ತೆ ಚೈತನ್ಯಶೀಲರಾಗುವುದು ಹೇಗೆ? ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?

curious squirrels

ನೆನಪಿಡಿ, ಯಾವುದೇ ಕ್ಷೇತ್ರದಲ್ಲಿ ಗುರಿ ಸಾಧನೆಗೆ ಸ್ವತಃ ಅವರವರೇ ಮುನ್ನುಗ್ಗಬೇಕು. ಪ್ರೋತ್ಸಾಹ, ಚಪ್ಪಾಳೆ, ಸಿಳ್ಳೆ, ಬೆನ್ನು ತಟ್ಟುವಿಕೆ ನಂತರ ಬರುತ್ತದೆಯೇ ವಿನಾ, ಮೊದಲಲ್ಲ. ಬಲು ಅಪರೂಪಕ್ಕೆ ಗಾಢ್ ಫಾದರ್ ಸಿಗಬಹುದು. ಆದರೆ ಎಲ್ಲರಿಗೂ ಅಂಥ ಸನ್ನಿವೇಶ ಇರುವುದಿಲ್ಲ. ಇದಿಷ್ಟೇ ಅಲ್ಲ, ಯಾರೋ ನಮ್ಮನ್ನು ಕೈ ಹಿಡಿದು ಉದ್ಧರಿಸಬೇಕು ಎಂದು ನಿರೀಕ್ಷಿಸುವುದು ದೊಡ್ಡ ತಪ್ಪು. ಯಾಕೆಂದರೆ ನಮ್ಮ ಸಮಸ್ಯೆಗಳು ನಮ್ಮದೇ. ಎಲ್ಲರಿಗೂ ಮೈ ಹೊದ್ದುಕೊಳ್ಳುವಷ್ಟು ನೂರಾರು ಚಿಂತೆಗಳನ್ನು ಈ ಪ್ರಪಂಚ ಕೊಡುವಾಗ, ಸಾಲದ್ದಕ್ಕೆ ಪೈಪೋಟಿ, ವೃತ್ತಿಪರ ಮಾತ್ಸರ್ಯ ಮತ್ತು ನಾನಾ ಕೊರತೆಗಳು ಇರುವ ಜಗತ್ತಿನಲ್ಲಿ ಜೀವನೋತ್ಸಾಹವನ್ನು ಇತರರು ತುಂಬಿಕೊಡಲಿ ಎಂದುಕೊಳ್ಳುವುದು ಎಷ್ಟು ಸರಿ?

ಮನುಷ್ಯನಿಗೆ ತನ್ನಲ್ಲಿ ತನಗೆ ನಂಬಿಕೆ ನಷ್ಟವಾದಾಗ ಕುತೂಹಲದ ಒರತೆ ಇಂಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕುತೂಹಲ ಹೊಳಪನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ. ಯಾವ ಬಗೆಯ ಹತಾಶೆಯ ಕಡಲಲ್ಲಿ ಮುಳುಗಿದ್ದರೂ, ಅದು ನಿಮ್ಮನ್ನು ಹುರಿದುಂಬಿಸುತ್ತದೆ. ಸಾಧನೆಯ ಶಿಖರದತ್ತ ಕರೆದೊಯ್ಯುತ್ತದೆ. ಯಾವುದೇ ಮನಃ ಶಾಸ್ತ್ರಜ್ಞರನ್ನು ಕೇಳಿ ನೋಡಿ, ” ಮೊದಲು ಜೀವನೋತ್ಸಾಹವನ್ನು ತಂದುಕೊಳ್ಳಿ” ಎನ್ನದಿರುವುದಿಲ್ಲ. ಉತ್ಸಾಹ ಅಥವಾ ಆಸಕ್ತಿಯ ಹೊರತಾಗಿ ಈ ಪ್ರಪಂಚದಲ್ಲಿ ಯಾವ ಸಾಧನೆಯೂ ಆಗಿಲ್ಲ ಎನ್ನುತ್ತಾರೆ ಅಮೆರಿಕದಲ್ಲಿ 19 ನೇ ಶತಮಾನದಲ್ಲಿ ಬದುಕಿದ್ದ ವಿದ್ವಾಂಸ ರಾಲ್ ವಾಲ್ಡೊ ಎಮರ್ಸನ್.

ಹೆಚ್ಚು ಕುತೂಹಲಿಗಳಾಗಿರುವುದರಿಂದ ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಸಾಧಿಸಬಹುದು. ಅದು ಹತ್ತು ಜನರ ನಡುವೆ ನಿಮ್ಮ ಜನಪ್ರಿಯತೆಯನ್ನು ವೃದ್ಧಿಸುವುದರಲ್ಲಿ ಸಂದೇಹವೇ ಇಲ್ಲ. ನಿಮ್ಮದೇ ಸ್ವಭಾವದ ಮತ್ತಷ್ಟು ಜನರನ್ನು ನೀವು ಆಕರ್ಷಿಸುತ್ತೀರಿ. ಅತ್ಯಂತ ಪರಿಣಾಮಕಾರಿಯಾಗಿ, ಕುತೂಹಲ ಮೂಡುವಂತೆ ಮಾತನಾಡಬೇಕಾದರೆ, ಸ್ವತಃ ನೀವು ಕುತೂಹಲಿಗಳಾಗಿದ್ದರೆ ಮಾತ್ರ ಸಾಧ್ಯ. ಜೀವನ ಯಾವಾಗಲೂ ನಾವಂದುಕೊಂಡಂತೆ ನಡೆಯುವುದಿಲ್ಲ. ಹಠಾತ್ತನೆ ವ್ಯತಿರಿಕ್ತ ಪರಿಸ್ಥಿತಿ ಸೃಷ್ಟಿಯಾಗಬಹುದು. ಆಗ ಅದನ್ನು ದಿಟ್ಟತನದಿಂದ ಎದುರಿಸಲು, ಪರಿಹರಿಸಲು ಉತ್ಸಾಹ ಬೇಕೇ ಬೇಕು. ಹಾಗೆಯೇ ಯಾವಾಗಲೂ ತೀರ ನೆಗೆಟಿವ್ ಆಗಿ ಇರಲೇಬಾರದು. ನಕಾರಾತ್ಮಕ ಧೋರಣೆಯ ಸನ್ನಿವೇಶದಲ್ಲಿ ಕುತೂಹಲ ಬಡವಾಗುತ್ತದೆ. ಯಾವುದಾದರೂ ಕೆಲಸಕ್ಕೆ ಕೈ ಹಾಕಿದರೆ, ಎಲ್ಲ ಕೀಳರಿಮೆಗಳನ್ನು ತೊರೆದು, ಯಾರು ಏನಂದುಕೊಳ್ಳುತ್ತಾರೋ, ಎನ್ನುವ ಆತಂಕವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಂಡು, ಅಭಿಮಾನದಿಂದ ನಿರ್ವಹಿಸಿ. ಆಗ ನಿಮ್ಮ ಬಗ್ಗೆ ನಿಮ್ಮ ಕೆಲಸಗಳೇ ಮಾತನಾಡುತ್ತವೆ. ಒಂದು ಉತ್ತಮ ಪುಸ್ತಕದ ಓದು, ಸಂಗೀತ, ಸಿನಿಮಾ, ಕ್ರೀಡೆಯ ಆಸಕ್ತಿ ಜತೆಯಲ್ಲಿರಲಿ. ಸಾಧ್ಯವಾದರೆ ಅನೇಕ ಸ್ಥಳಗಳಿಗೆ ಭೇಟಿಕೊಡಿ, ಜನರ ಜತೆ ಬೆರೆತುಕೊಳ್ಳಿ. ಯಾವುದೂ ಸಾಧ್ಯವಾಗದಿದ್ದರೆ, ಸಮೀಪದ ಗುಡ್ಡ ಬೆಟ್ಟಗಳಿಗೆ ತೆರಳಿ ನಿಸರ್ಗವನ್ನು ಆಸ್ವಾದಿಸಿರಿ. ಬಯಲಲ್ಲಿ ತಮ್ಮಪಾಡಿಗೆ ಆಡುವ ಮಕ್ಕಳನ್ನು ನೋಡಿ, ನಿಮಗಿಂತ ಕಷ್ಟದಲ್ಲಿರುವ ವಿಕಲಚೇತನರ ಜೀವನೋತ್ಸಾಹ, ಸಾಧನೆಯನ್ನು ಕಾಣಿರಿ. ತಾರಸಿಯಲ್ಲೊಂದು ಪುಟ್ಟ ಕೈ ತೋಟ ನಿರ್ಮಿಸಿರಿ. ಮನಸ್ಸನ್ನು ಶಾಂತವಾಗಿರಿಸಲು ನಿಯಮಿತವಾಗಿ ಧ್ಯಾನದ ಮೊರೆ ಹೋಗಿ. ಇವೆಲ್ಲವೂ ಹರಿದು ಚಿಂದಿ ಹೋದ ಮನಸ್ಸನ್ನು ತಿಳಿಯಾಗಿಸುತ್ತದೆ. ಹಾಗೂ ಅದೇ ಮನಸ್ಸು ಕುತೂಹಲದ ಕಣಜವಾಗುತ್ತದೆ. ಬದುಕನ್ನು ಹಸನಾಗಿಸುತ್ತದೆ.

ಪುರಂದರ ದಾಸರ ‘ಮಾನವ ಜನ್ಮ ಸಿಕ್ಕಿರುವುದೇ ಬಲು ದೊಡ್ಡದು, ಅದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳೀರಾ’ ಎನ್ನುವ ಕೀರ್ತನೆಯನ್ನು ಜ್ಞಾಪಿಸಿಕೊಳ್ಳಿ. ಅದು ಕೇವಲ ಭಕ್ತಿ ಮಾರ್ಗಕ್ಕೆ ಅನ್ವಯವಾಗುವ ಸಾಲಂತೂ ಅಲ್ಲವೇ ಅಲ್ಲ. ಲೌಕಿಕ ಬದುಕಿನ ಸಾರ್ಥಕತೆಗೂ ಬೇಕಾದದ್ದೇ.

.
– ಕೇಶವ ಪ್ರಸಾದ್.ಬಿ. ಕಿದೂರು

2 Responses

  1. Deepak Kumar says:

    This is Human tendency in all. He doesnt respect & satisfied with what is having at present. Iruvudellava bittu Iradudaredege Tudivude Jeevana

  2. Seenu Pappunalmata says:

    ಮನುಷ್ಯನಲ್ಲಿ ಅತೃಪ್ತಿ ಅನ್ನವುದು ತುಂಬಾನೆ ಇದೆ ತೃಪ್ತಿ ಇಲ್ಲದ ಜೀವನ ಏನೇ ಹೇಳಿದರು ವ್ಯಥ೯

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: