ಮಾತೆಂಬ ಮುತ್ತು ಸಿಟ್ಟಾಗಿ ಸಿಡಿದಾಗ…
ಅದೊಂದು ದಿನ ಬೆಳಿಗ್ಗೆ ಮಗಳನ್ನು ಶಾಲೆಗೆ ಕಳಿಸಿ ಮನೆಗೆ ಬಂದೆ.ನಮ್ಮ ಅಪಾರ್ಟಮೆಂಟಿಗೆ ವಾರಕ್ಕೊಮ್ಮೆ ಇಸ್ತ್ರಿ ಮಾಡುವವರು ಬರುತ್ತಾರೆ.ಆದರೆ ಕಳೆದ ಎರಡು ವಾರಗಳಿಂದ ಆತ ಬಂದಿರಲಿಲ್ಲ..ಮಗಳ ಬಟ್ಟೆಗಳು,ಯಜಮಾನರ ಆಫೀಸ್ ಬಟ್ಟೆಗಳು ಹಾಗೇ ಕೂತುಬಿಟ್ಟಿತ್ತು.ಮಗಳನ್ನು ಬಿಟ್ಟು ಬಂದು ನನ್ನ ಸ್ಕೂಟರ್ ಪಾರ್ಕ್ ಮಾಡುತ್ತಿರುವಾಗ ಆತ ಕಣ್ಣಿಗೆ ಕಾಣಿಸಿಕೊಂಡ.(ಇಸ್ತ್ರಿಯವ).ನಾನು ಸ್ವಲ್ಪ ಜೋರಾಗಿ,ಏನ್ರೀ ನೀವು ಹೀಗೆ ಮಾಡಿದ್ರೆ ಹೇಗೆ,ಬರೋಲ್ಲ ಅಂತ ಒಂದು ಮೆಸೇಜ್ ಕೊಟ್ಟ್ರಿದ್ದಾದ್ರು ನಾವು ಹೇಗೋ ಅನುಸರಿಸಿಕೊಂಡು ಹೋಗುತ್ತಿದ್ವಿ.ಏಕಾಏಕೀ ಹೀಗೆ ಹೇಳದೇ ರಜೆ ಹಾಕಿದ್ರೆ ಹೇಗೆ ಅಂತ ಕೇಳ್ದೆ..ಆತ ಏನೂ ಮಾತನಾಡದೆ ಆಯ್ತು ಮನೆಗೆ ಬರ್ತಿನಿ ಮೇಡಂ ಅಂದ.ಸರಿಪ್ಪಾ ಬಾ ಅಂದೆ.ಸ್ವಲ್ಪ ಹೊತ್ತಿಗೇ ಮನೆಯ ಬೆಲ್ ಢಣ್ ಎಂದಿತು.ಅದಾಗಲೇ ನಾನು ಅಷ್ಟೂ ಬಟ್ಟೆಗಳನ್ನು ಹೊರಗಿಟ್ಟಿದ್ದೆ..
ಆದ್ರೂ ಸಮಾಧಾನದಿಂದ ಕೇಳಿದೆ ಯಾಕಪ್ಪಾ ಹೀಗೆ ಮಾಡಿದ್ರಿ ಅಂದಾಗ,ಆತನ ಕಣ್ಣಾಲಿಗಳು ತುಂಬಿತ್ತು.ಏನಾಯ್ತಪ್ಪಾ,ನಾನೇನಾದ್ರೂ ತುಂಬಾ ಜೋರಾಗಿ ಮಾತಾಡಿದ್ನಾ ಕೇಳಿದಾಗ,ಆತ ಹೇಳ್ದಾ,ನನ್ನ ಮೂರು ವರ್ಷದ ಮಗಳು ಹದಿನೈದು ದಿನದ ಹಿಂದೆಯಷ್ಟೇ ಮನೆಯ ಸೊಂಪಿಗೆ ಬಿದ್ದು ತೀರಿಕೊಂಡ್ಲು ಮೇಡಂ ಎಂದು ಹೊರಗಿಟ್ಟಿದ್ದ ಬಟ್ಟೆಯನ್ನು ತೆಗೆದು ಹೊರಟ.
ಆದ್ರೆ ಆ ಹೃದಯ ವಿದ್ರಾವಕ ಘಟನೆಯನ್ನ ಕೇಳಿದ ನಂಗೆ ಒಂದು ಕ್ಷಣ ಮೌನವಾಗಿಸಿತು.ಆತನ ನೋವಿನ ಅರಿವಾಯಿತು.ಯಾಕಾದರೂ ಹಾಗೆ ಮಾತನಾಡಿಬಿಟ್ಟೆನೋ ಅಂದೆನಿಸಿತು.ಆತನ ಕಣ್ಣಂಚು ತುಂಬಿದ ಆ ಘಳಿಗೆ ನನ್ನ ಮನಸ್ಸಿನಲ್ಲೇ ಉಳಿಯಿತು.ಸುಧಾರಿಸಲು ಒಂದು ವಾರ ಬೇಕಾಯಿತು..ಈಗಲೂ ಆತನನ್ನ ನೋಡಿದ ತಕ್ಷಣವೇ ಮತ್ತೆ ಮರುಕ.ಕೊನೆಗೆ ದುಡ್ಡು ಕೊಟ್ಟು,ಬಟ್ಟೆ ತಗೊಂಡು ಮನೆಯೊಳಗೆ ಬಂದೆ.ನನ್ನ ಮಗಳ ನಗು ಸ್ವಲ್ಪ ಸಮಾಧಾನ ತರಿಸಿತಾದರೂ,ಆತನ ಮನಸ್ಸಿನ ಆರದ ಗಾಯಕ್ಕೆ ಮದ್ದುಂಟೇ ಎಂದೆನಿಸಿತು.
.
– ಸಂಧ್ಯಾ ಭಟ್
ಮನ ಕಲಕುವ ಬರಹ …
ಉತ್ತಮ ಬರಹ. ಅನುದ್ದೇಶಿತವಾಗಿ ನಮ್ಮಿಂದ ಇತರರಿಗೆ ನೋವಾದರೆ, ಆಮೇಲೆ ನಾವೇ ಪಶ್ಚಾತ್ತಾಪದಿಂದ ಪರಿತಪಿಸುತ್ತೇವೆಂಬುದನ್ನು ಚೆನ್ನಾಗಿ ಚಿತ್ರಿಸಿದ್ದೀರಿ..