ಕ್ಷೇತ್ರಜ್ಞರಾಗೋಣ….
ನಮ್ಮ ಮನಸ್ಸೆಂಬುದು ಮನೋಕ್ಷೇತ್ರ. ಇಲ್ಲಿ ಕನಸುಗಳ ಬೀಜ ಬಿತ್ತಿ ನನಸಿನ ಬೆಳೆ ತೆಗೆಯುವ ಹಂಬಲ ನಮಗೆಲ್ಲ. ತಪ್ಪೇನಿಲ್ಲ, ಕ್ರಿಯಾಶೀಲತೆಗೆ, ಸಾಧನೆಗೆ, ನಮ್ಮ ಬದುಕನ್ನು ಹಸನುಗೊಳಿಸುವುದಕ್ಕೆ ಇದು ಅನಿವಾರ್ಯ. ಆದರೆ.., ನಮ್ಮ ಕ್ಷೇತ್ರ, ನಮ್ಮ ಪರಿಮಿತಿಗಳ ಅರಿವು ಮೀರಿ ಬಿತ್ತುವುದಕ್ಕೆಂದು ಕನಸಿನ ಬೀಜಗಳನ್ನೇ ಮೂಟೆಗಟ್ಟಲೆ ಪೇರಿಕೊಂಡಾಗ ನಮ್ಮ ಮನೋಮಂಡಲ ಒಂದು ಉಗ್ರಾಣವಾಗಬಹುದು. ನಮ್ಮ ಕ್ರಿಯಾಶೀಲತೆ ಕುಂಠಿತವಾಗಬಹುದು, ನಮ್ಮ ಸಾಧನೆಗೆ ತಕ್ಕ ಪ್ರತಿಫಲ ದೊರಕದೇ ಹೋದಿತು.
ಈ ಕನಸುಗಳನ್ನು ಬಿತ್ತಿ ನನಸಾಗಿಸುವ ಕೃಷಿಯನ್ನು ಯಾರೂ ಕೈಗೊಳ್ಳಬಹುದು. ಇದಕ್ಕೆ ವಯೋಮಿತಿಯಿಲ್ಲ, ಜಾತಿ-ಮತಗಳ ನಿರ್ಬಂಧವಿಲ್ಲ, ಬಡವ-ಬಲ್ಲಿದನೆಂಬುದಿಲ್ಲ, ಹೆಣ್ಣು ಗಂಡೆಂಬ ಭೇದವಿಲ್ಲ, ದೇಶ-ಕಾಲಗಳ ಪರಿವೆಯಿಲ್ಲ. ಕನಸುಗಳನ್ನು ಕಾಣುವವರೆಲ್ಲ ಈ ನನಸಾಗಿಸುವ ಕೃಷಿಯನ್ನು ಮಾಡಲೇಬೇಕು. ಈ ಕನಸುಗಳನ್ನು ಕಾಣುವುದರಿಂದಲೇ ಇಂದು ಜಗತ್ತು ಕ್ರಿಯಾಶೀಲವಾಗಿದೆ. ಈ ಕನಸುಗಳನ್ನು ಸಾಕಾರಗೊಳಿಸುವುದಕ್ಕೆಂದೇ ನಾವು ನಿರಂತರ ದುಡಿಯುತ್ತಿದ್ದೇವೆ. ನಮ್ಮ ಮನಸ್ಸೆಂಬುದು ಒಂದು ನರ್ಸರಿಯಿದ್ದ ಹಾಗೆ. ನಮ್ಮ ಮನೋಕ್ಷೇತ್ರದಲ್ಲಿ ಕನಸುಗಳ ಬೀಜ ಬಿತ್ತಿ ನೆನಪುಗಳೆಂಬ ಮಡಿಯಲ್ಲಿ ಸಣ್ಣ ಸಣ್ಣ ಸಸಿಗಳಾಗಿಸಿಟ್ಟುಕೊಳ್ಳುವುದು. ಕಾಲ ಪಕ್ವವಾದಾಗ, ಉತ್ತಮ ಕ್ಷೇತ್ರ ದೊರಕಿದಾಗ ಅವುಗಳನ್ನು ಆ ಕ್ಷೇತ್ರದಲ್ಲಿ ಬೆಳೆಸಿ ಬೆಳೆ ತೆಗೆಯುವುದು ನಾವೆಲ್ಲ ಅನುಸರಿಸಿಕೊಂಡು ಬಂದ ವಿಧಾನ.
ಬದುಕೆಂಬುದನ್ನು ಒಂದು ಕೃಷಿಯೆಂದು ಒಪ್ಪಿಕೊಂಡ ಮೇಲೆ ನಾವು ಗೀತೋಕ್ತಿಯಂತೆ ಕ್ಷೇತ್ರಜ್ಞರಾಗಬೇಕು. ಯಾವ ಕ್ಷೇತ್ರದಲ್ಲಿ ಎಷ್ಟು ಬೆಳೆ ತೆಗೆಯಬೇಕು? ಯಾವ ಬೆಳೆ ತೆಗೆಯಬೇಕು? ಯಾವ ಕಾಲದಲ್ಲಿ ಎನ್ನುವುದರ ಅರಿವು ನಮಗಿರಬೇಕು. ಭಗವಾನ್ ಶ್ರೀಕೃಷ್ಣ ಹೇಳುತ್ತಾನೆ, ನೀನು ಕೃಷಿಕನಾಗಬೇಕಾದದ್ದು, ಬೆಳೆ ತೆಗೆಯಬೇಕಾದದ್ದು ಎಲ್ಲವು ನನ್ನಿಚ್ಛೆ ಮತ್ತು ನನ್ನ ನಿರ್ದೇಶನ. ನಿನ್ನ ದುಡಿಮೆಯ ಸ್ವರೂಪ ಮತ್ತು ತೊಡಗಿಕೊಳ್ಳುವಿಕೆಯ ಲೆಕ್ಕಾಚಾರ ಹಾಕಿ ನಿನಗೆಷ್ಟು ಸಲ್ಲಬೇಕೆಂಬುದು ನನ್ನ ನಿರ್ಣಯ. ಹಾಗಾಗಿಯೇ ‘ಮಾ॒ ಫಲೇಷು ಕದಾಚನ….’ ಎಂಬ ಉಪದೇಶ. ಫಲದ ಗೊಡವೆ ನಿನಗೆ ಬೇಡ. ಮಾವನ್ನು ಬಿತ್ತು, ನಿನಗೆ ಮಾವಿನ ಫಸಲು ದೊರೆಯುತ್ತದೆ. ಬೇವನ್ನು ಬಿತ್ತಿದರೆ ಮಾವಿನ ಫಸಲೆಂತು ದೊರೆಯಬಹುದು?
ವ್ಯಾವಹಾರಿಕ ಜಗತ್ತಿನಲ್ಲಿ ಫಲದ ಅಪೇಕ್ಷೆಯಿಲ್ಲದೆ ಯಾವುದೂ ಇಲ್ಲ! ಫಲದ ಅಪೇಕ್ಷೆಗೆ ಮಿತಿಯಿಲ್ಲ, ಆದರೆ ನಿರ್ಮಿತಿಗೊಂದು ಮಿತಿಯಿದೆ, ಮಿತಿಯಿರಬೇಕು. ಕೇತ್ರದ ಅರಿವು, ಸಹಜ ದುಡಿಮೆ, ನಿಯತಕಾಲಗಳ ಅರಿವಿನೊಂದಿಗೆ ಗೈದ ಕೃಷಿ, ಗಳಿಸಿದ ಫಸಲು ಉಣ್ಣುವುದಕ್ಕೆ ಆರೋಗ್ಯಕರ. ಸಹಜ ಕೃಷಿಯಲ್ಲಿ ಪಡೆವ ಫಸಲಿಗೆ ಮಿತಿಯಿದೆ, ಆದರೆ ಅದು ನೀಡುವ ಸುಖ, ಅದರ ರುಚಿ ಅಪರಿಮಿತ. ಹೀಗೆ ಪಡೆವ ಫಸಲಿಗೆ ಮಿತಿಯಿರುವುದರಿಂದ ಮತ್ತೆ ಮತ್ತೆ ದುಡಿಮೆ, ಕಾಯಕ, ಕರ್ಮಾನುಷ್ಠಾನ.
ಕೇತ್ರದ ಅರಿವು, ಸಹಜ ದುಡಿಮೆ, ನಿಯತಕಾಲಗಳ ಅರಿವಿಲ್ಲದೆ ಅಮಿತ ಫಲದ ಆಸೆಯಿಂದ ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಗಳೆಂಬ ರಾಸಾಯನಿಕಗಳನ್ನು ಬಳಸಿ ಮಾಡುವ ಕೃಷಿ ಸಹಜ-ಸಾತ್ವಿಕ ಕೃಷಿಯಲ್ಲ. ಇಂತಹ ಕೃಷಿ ಬಹಳಷ್ಟು ಫಸಲನ್ನೇನೋ ನೀಡಬಹುದು. ಆದರೆ ಅದರ ಫಸಲನ್ನು ಉಣ್ಣುವವನು ಪಾರ್ಶ್ವ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಇದು ಲೌಕಿಕಕ್ಕೆ ಸಂಬಂಧಪಟ್ಟ ಕೃಷಿಯಾದರೆ ಪರಮಾರ್ಥ ಸಾಧನೆಗೆ ಸಂಬಂಧಪಟ್ಟ ಕೃಷಿಯೊಂದುಂಟು. ದೇಹವೆಂಬ ಈ ಕ್ಷೇತ್ರದಲ್ಲಿ ಮನೋ-ವಾಕ್-ಕಾಯಗಳೆಂಬ ಕ್ಷೇತ್ರ ಶುದ್ಧಿಯ ಮೂಲಕ
ಅಭಯಂ ಸತ್ತ್ವಸಂಶುದ್ಧಿ ಜ್ಞಾ ನಯೋಗವ್ಯವಸ್ಥಿತಿಃ |
ದಾನಂ ದಮಶ್ಚ ಯಜ್ಞಶ್ಚ ಸ್ವಾಧ್ಯಾಯ ತಪ ಆರ್ಜವಮ್ ||೧||
ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾನ್ತಿರಪೈಶುನಮ್ |
ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್ ||೨||
ತೆಜಃ ಕ್ಷಮಾಧೃತಿಃ ಶೌಚಮದ್ರೋಹೋ ನಾತಿಮಾನಿತಾ
ಭವನ್ತಿ ಸಮ್ಪದಂ ದೈವೀಮಭಿಜಾತಸ್ಯ ಭಾರತ ||೩||
ನಿರ್ಭಯತೆ, ಪರಿಶುದ್ಧ ಅಸ್ಥಿತ್ವ, ಸುಜ್ಞಾನ, ದಾನ, ಆತ್ಮ ಸಂಯಮ, ಯಜ್ಞ, ವೇದಾಧ್ಯಯನ, ತಪಸ್ಸು, ಸರಳತೆ, ಅಹಿಂಸೆ, ಕೋಪಗೊಳ್ಳದಿರುವುದು, ತ್ಯಾಗ, ಶಾಂತಿ, ಯಾರಲ್ಲಿಯೂ ತಪ್ಪು ಹುಡುಕದಿರುವುದು, ದಯೆ, ದುರಾಶೆಯನ್ನು ಹೊಂದದಿರುವುದು, ಮೃದು ಸ್ವಭಾವ, ನಮ್ರತೆ, ದೃಢಸಂಕಲ್ಪ, ತೇಜಸ್ಸು, ಕ್ಷಮೆ, ಸ್ಥೈರ್ಯ, ಶುಚಿತ್ವ, ಆತ್ಮರತಿಯಿಲ್ಲದಿರುವುದೇ ಮೊದಲಾದ ಸದ್ಗುಣಗಳ ಬೀಜಗಳನ್ನು ನಮ್ಮ ಮನೋ-ವಾಕ್-ಕಾಯಗಳೆಂಬ ಕ್ಷೇತ್ರದಲ್ಲಿ ಬಿತ್ತಿ ಜೀವನ್ಮುಕ್ತಿಯೆಂಬ ಫಸಲನ್ನು ಪಡೆಯೋಣ.
-ದಿವಾಕರ ಡೋಂಗ್ರೆ ಎಂ.