ಬೊಗಸೆಬಿಂಬ

ನೀವೇ ದೇವರಾಗಬಹುದು ಯಾರಿಗೂ…

Share Button

B Gopinatha Rao

ಮನಕಲಕುವ ನೈಜ ಘಟನೆ

ಹಿಮಾಲಯದಲ್ಲಿ ಮುಂದಿನ ಮೂರು ತಿಂಗಳಿರಲು ಹೊರಟಿದ್ದ ಆ ಮಿಲಿಟರಿ ತಂಡದಲ್ಲಿ ಹದಿನೈದು ಜವಾನರು ಮತ್ತು ಒಬ್ಬ ಮೇಜರಿದ್ದರು.ಅವರಿಂದ ಬಿಡುಗಡೆ ಕಾದಿದ್ದ ತಂಡವೂ ಉತ್ಸುಕತೆಯಿಂದ ಇವರ ನಿರೀಕ್ಷೆಯಲ್ಲಿದ್ದರು.

ಅದೊಂದು ಅತ್ಯಂತ ಕಠಿಣ ಚಳಿಗಾಲವಾಗಿತ್ತು ಹಿಂದೆಯೇ ಆಗಾಗ್ಗೆ ಬಿದ್ದಿರುತ್ತಿದ್ದ ಮಂಜು ಕೂಡಾ ಅವರ ಕಷ್ಟವನ್ನು ಹೆಚ್ಚಿಸುತ್ತಲಿತ್ತು.ಇಂತಹ ಕಟಗುಡುವ ಚಳಿಯಲ್ಲಿ ಒಂದು ಕಪ್ ಚಹಾ ಸಿಗುವಂತಿದ್ದರೆ..? ಈ ಆಸೆ ಮೇಜರಿಗೆ ಬಂದಿತ್ತಾದರೂ ಅವರಿರೋ ಪರಿಸ್ಥಿತಿಯಲ್ಲಿ ಇದು ಮರೀಚಿಕೆಯೇ..ಆದರೂ ಅವರ ಪಯಣ ಸಾಗುತ್ತಲಿತ್ತು. ಸುಮಾರು ಒಂದು ಗಂಟೆಯ ನಂತರ ಒಂದು ಹಳೆಯ ಕಟ್ಟಡ ಕಂಡಿತವರಿಗೆ. ನೋಡುವಾಗ ಟೀ ಅಂಗಡಿಯ ತರ ಕಂಡರೂ ಬೀಗ ಹಾಕಿಕೊಂಡಿದ್ದ ಬಾಗಿಲಿಂದ ಅವರನ್ನು ಸ್ವಾಗತಿಸಿತ್ತದು, ಅಪರ ರಾತ್ರೆಯ ಸಮಯ. ನಮ್ಮ ದುರದೃಷ್ಟ ಸಹವರ್ತಿಗಳೇ ಚಹಾ ಸಿಗಲಿಕ್ಕಿಲ್ಲ .ಆದರೂ ನಾವೆಲ್ಲಾ ಇಲ್ಲಿಯೇ ಸ್ವಲ್ಪ ದಣಿವಾರಿಸಿಕೊಳ್ಳೋಣ ಎಂದರು ಮೇಜರ್ ನಿಜವಾಗಿಯೂ ಅವರಿಗೆ ಬೇಸರವಾಗಿತ್ತು.

ಕಳೆದ ಮೂರುಗಂಟೆಯಿಂದ ಪಯಣಿಸುತ್ತಿದ್ದ ಅವರೆಲ್ಲರೂ ದಣಿವಾರಿಸಿಕೊಳ್ಳೋ ತಹತಹದಲ್ಲಿದ್ದರು. ಸರ್ ನಾವು ಬೇಕೆಂದರೆ ಚಹಾ ಮಾಡಿಕೊಳ್ಳಬಹುದು ಆದರೆ ಈ ಅಂಗಡಿಯ ಬೀಗ ಮುರಿಯಬೇಕಾದೀತು, ಸಹಚರನೊಬ್ಬ ಸಲಹೆ ನೀಡಿದ.

ಮೇಜರ್ ಒಂದು ಬಗೆಯ ಇಬ್ಬಂದಿಯಲ್ಲಿ ತೊಳಲಾಡಿದರು ನ್ಯಾಯ ಅನ್ಯಾಯಗಳ ತಕ್ಕಡಿಯಲ್ಲಿ ದಣಿದ ಸಹಚರರ ಕಳೆಗುಂದಿದ ಮೋರೆ ತಕ್ಕಡಿಯನ್ನೇ ಮರೆ ಮಾಚಿತು. ನಿಜವಾಗಿಯೂ ಒಳಗೆ ಚಹಾಕ್ಕೆ ಬೇಕಾದ ಸಲಕರಣೆಗಳಲ್ಲದೇ ಬಿಸ್ಕುಟ್ ಪಾಕೀಟುಗಳೂ ಸಿಕ್ಕಿದ್ದವು. ಉದರಂಭರಣೆಯ ವಿಧಿ ಮುಗಿದು ಅವರೆಲ್ಲರೂ ಹೊರಡಲು ತಯಾರಾದರು.

ಅಲ್ಲಿದ್ದವರು ಕಳ್ಳರಾಗಿರಲಿಲ್ಲ, ದೇಶ ಪ್ರೇಮ ದ್ಯೋತಕದ ಶಿಸ್ತಿನ ಸಿಪಾಯಿಗಳಾಗಿದ್ದವರು!!

soldiers-Himalaya

ಮೇಜರ್ ತನ್ನ ಕಿಸೆಯಿಂದ ಸಾವಿರ ರೂ.ನ ಒಂದು ಗರಿ ಗರಿ ನೋಟನ್ನು ತೆಗೆದು ಹೋಟೆಲ್ಲಿನ ಗಲ್ಲಾದ ಮೇಲಿಟ್ಟು, ಅದು ಮಾಲೀಕನ ದೃಷ್ಟಿಯನ್ನಾಕರ್ಷಿಸಲೋ ಎಂಬಂತೆ ಒಂದು ಸಕ್ಕರೆಯ ಡಬ್ಬವನ್ನು ಆ ನೋಟಿನ ಮೇಲಿಟ್ಟರು.ಈಗ ಅವರ ಮುಖದ ಮೇಲಿದ್ದ ಅಸಂತೃಪ್ತಿ ಮತ್ತು ಕೀಳರಿಮೆ ಮಾಯವಾಯ್ತು.ಎಲ್ಲರನ್ನೂ ಕರೆದು ಶಟರ್ ಎಳೆದು ಹೊರಡಲು ಸೂಚಿಸಿದರು.

ಮೂರು ತಿಂಗಳು ಕಳೆದವು. ದೈನಂದಿನ ಕಠಿಣತಮ ಕರ್ತವ್ಯ ಮುಗಿಯಿತು. ಅವರಲ್ಲಿ ಯಾರಿಗೂ ಜೀವಕ್ಕಪಾಯವಾಗಿರಲಿಲ್ಲ. ಇನ್ನೊಂದು ಪಂಗಡ ಅವರನ್ನು ಬೀಳ್ಕೊಟ್ಟಿತು. ಇದು ಅನೂಚಾನ.

ಮೇಜರ್ ಗುಂಪು ಅಲ್ಲಿಂದ ಹೊರಟು ಅತೀ ಶೀಘ್ರದಲ್ಲೇ ಹಿಂದೆ ಚಹಾ ಸೇವಿಸಿದ ಅಂಗಡಿಯ ಬಳಿಯೇ ಬಂದು ಬೀಡು ಬಿಟ್ಟಿತು. ಆವತ್ತು ಚಹಾದ ಅಂಗಡಿ ಬಾಗಿಲು ತೆರೆದಿತ್ತು . ಮಾಲೀಕನೂ ಆಸೀನನಾಗಿದ್ದ. ಆತನಂತೂ ಹದಿನೈದು ಜನ ಗಿರಾಕಿಗಳನ್ನು ಒಮ್ಮೆಲೇ ಕಂಡು ಖುಷಿ ಪಟ್ಟ. ಎಲ್ಲರೂ ಚಹಾ ಸೇವಿಸಿದ ಮೇಲೆ ಲೋಕಾಭಿರಾಮವಾಗಿ ಮೇಜರ್ ಆತನನ್ನು ಮಾತಿಗೆಳೆದರು. ಅಂತಹ ನಿರ್ಜನ ಪ್ರದೇಶದಲ್ಲೂ ಅಂಗಡಿಯಿಟ್ಟ ಆ ಯಜಮಾನನಲ್ಲಿ ತನ್ನದೇ ಆದ ಕೌತುಕದ ಕಥೆಗಳಿಗೇನೂ ಬರವಿರಲಿಲ್ಲ.

ಅರೇ ಬಾಬಾ ದೇವರಿರುವುದೇ ಹೌದಾದರೆ ನಿಮ್ಮನ್ನು ಈ ರೀತಿಯಲ್ಲಿ ಇಟ್ಟಿರುವುದಾದರೂ ಯಾಕೆ ಎಂದು ನುಡಿದ ಸಹಚರರಲ್ಲೊಬ್ಬ. “ಅರೇರೇ ಹಾಗೆ ಹೇಳಬೇಡಿ ಸಾಹೇಬರೇ ಭಗವಂತ ನಿಜವಾಗಿಯೂ ಇದ್ದಾನೆ, ಅದರ ಅನುಭವ ನನಗೆ ಮೂರು ತಿಂಗಳ ಹಿಂದೆ ಖಚಿತವಾಗಿ ದೊರಕಿತ್ತು…” ಅಂಗಡಿಯಾತ ನೆನಪಿನ ಕಾಲದಲ್ಲಿ ಹಿಂದೆ ತಲುಪಿದ್ದ..

“ಆಗ ನಾನು ನಿಜವಾಗಿಯೂ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದೆ.. ನನ್ನ ಒಬ್ಬನೇ ಮಗನನ್ನು ಉಗ್ರವಾದಿಗಳು ಸಾಯ ಬಡಿದಿದ್ದರು, ಅವರಿಗೇ ಬೇಕಾಗಿದ್ದ ಅವನಲ್ಲಿರದಿದ್ದ ಯಾವುದೋ ಮಾಹಿತಿಗಾಗಿ. ನಾನು ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಒಯ್ದಿದ್ದೆ. ಆತನಿಗೆ ಬೇಕಾದ ಔಷದಿಯನ್ನು ಕೊಳ್ಲಲೂ ನನ್ನ ಬಳಿ ಹಣವಿರಲಿಲ್ಲ. ಅ ಉಗ್ರವಾದಿಗಳ ಹೆದರಿಕೆಯಿಂದಾಗಿ ನನಗೆ ಯಾರೂ ಸಹಾಯ ಮಾಡಲೂ ಸಿದ್ಧರಿರಲಿಲ್ಲ. ನನಗೆ ಯಾವುದೇ ತರಹದ ಭರವಸೆಯ ಆಸೆಯೂ ಉಳಿದಿರಲಿಲ್ಲ.

ನೀವು ನಂಬುತ್ತಿರೋ ಇಲ್ಲವೋ ಸಾಹೇಬರೇ ಆದಿನ ಕೊನೆಗನಿಸಿದ ಒಂದೇ ದಾರಿಯಾದ ಭಗವಂತನಲ್ಲಿ ಕಣ್ಣೀರು ಹರಿಸಿ ಬೇಡಿಕೊಂಡೆ. ಆ ದಿನ ಸಾಹೇಬರೇ ನಿಜವಾಗಿಯೂ ಭಗವಂತ ನಡೆದು ಬಂದಿದ್ದ ನನ್ನ ಅಂಗಡಿಗೆ ನನಗೆ ಗೊತ್ತಿಲ್ಲದೇ, …. ನಾನು ಅಂಗಡಿಗೆ ಬಂದು ನೋಡುತ್ತೇನೆ ನನ್ನ ಅಂಗಡಿಯ ಬೀಗ ಮುರಿದಿತ್ತು… ಆ ಕ್ಷಣಕ್ಕೆ ನನ್ನ ಕಥೆ ಮುಗಿದೇ ಹೋಯ್ತು ಎಂದುಕೊಂಡೆ..ನನ್ನ ಬಳಿ ಇದ್ದ ಒಂದೇ ಒಂದು ಆಸರೆಯನ್ನೂ ಕಳೆದುಕೊಂಡೆ ಅನ್ನಿಸಿತು.ಆದರೆ ನೀವು ನಂಬಲೇ ಬೇಕು ಸಾಹೇಬರೇ ಭಗವಂತ ನನ್ನ ಮೇಜಿನ ಮೇಲೆ ಸಾವಿರ ರೂಪಾಯಿ ನನಗಾಗಿ ಕಳುಹಿಸಿದ್ದ. ಆ ಕ್ಷಣ ಆ ಸಾವಿರ ರೂಪಾಯಿ ನನ್ನ ಪ್ರೀತಿಯ ಒಬ್ಬನೇ ಒಬ್ಬ ಮಗನ ಜೀವದ ಮೌಲ್ಯ ಆಗಿತ್ತು ಸಾಹೇಬರೇ , ನಿಜವಾಗಿಯೂ ಭಗವಂತ ಇದ್ದಾನೆ.”

tea-shop

ಆತನ ಮುಖದ ಮೇಲಿದ್ದ ವಿಶ್ವಾಸ ಆತನ ಕಣ್ಣುಗಳಲ್ಲಿ ಪ್ರಜ್ವಲಿಸುತ್ತಿತ್ತು. ಹದಿನೈದೂ ಜೋಡಿ ಕಣ್ಣುಗಳು ಕಲೆತವೊಮ್ಮೆಗೇ.  ಮೇಜರ್ ಮೇಲೆದ್ದು ತಮ್ಮ ಬಿಲ್ ಪಾವತಿಸಿ ಮಾಲೀಕನನ್ನೊಮ್ಮೆ ಅಪ್ಪಿಕೊಂಡರು. ಹೌದು ನಿಜ ದೇವರಿದ್ದಾರೆ … ನಿಮ್ಮ ಚಹಾ ಅಮೃತ…ಅವರಿಬ್ಬರ ಅಪ್ಪುಗೆಯ ಆಕ್ಷಣದಲ್ಲಿ ತಮ್ಮ ಸೇನಾಧಿಕಾರಿಯ ಕಂಗಳಂಚಿನಲ್ಲಿ ಮಡುಗಟ್ಟಿದ ಹನಿಯನ್ನು ಅವರೆಲ್ಲರೂ ನೋಡಿದರು.ಅದೊಂದು ಅಪೂರ್ವ ಕ್ಷಣ.

ಸತ್ಯವೆಂದರೆ ನೀನೇ ದೇವಾರಾಗಬಹುದು ಯಾರಿಗೂ…..

ಕುಪ್ವಾರ ಸೆಕ್ಟರಿನಲ್ಲಿ ನಡೆದ ಘಟನೆಯಿದು…

 – ಬೆಳ್ಳಾಲ ಗೋಪಿನಾಥ ರಾವ್

( PC: ಸಾಂದರ್ಭಿಕ ಚಿತ್ರ,ಅಂತರ್ಜಾಲ)

9 Comments on “ನೀವೇ ದೇವರಾಗಬಹುದು ಯಾರಿಗೂ…

  1. ಇದನ್ನು ಓದಿದ ನನಗೆ ದೇವರಿದ್ದಾನೆ ಅನಿಸಿತು. ಉತ್ತಮ ನಿರೂಪಣೆ

  2. ನಂಬುಗೆಯೇ ದೇವರನೆಲೆ ಸಾಕ್ಷಾತ್ಕಾರ. ಉತ್ತಮ ಮನಮಿಡಿಯುವ ನಿಜರೂಪ!!!

  3. ಚೆನ್ನಾಗಿದೆ ಸರ್, ನಮ್ಮ ಸೈನಿಕರ ಇಂತಹ ಕಥೆಗಳನ್ನು ಕೇಳುವಾಗ ಬಹಳ ಹೆಮ್ಮೆ ಅನ್ನಿಸುತ್ತದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *