ಮೈಸೂರು ಕಡೆ ಜನರು ಹೇಳುವ ಮಾತಿನಂತೆ ” ಶಿವರಾತ್ರಿಗೆ ಚಳಿ ಶಿವ ಶಿವಾ ಅಂತ ಹೊರಟು ಹೋಗ್ತದೆೆ”. ಆದರೆ ಇನ್ನೂ ಫೆಬ್ರವರಿ ಕೊನೆಯ ವಾರದಲ್ಲಿಯೇ ಚಳಿ ಹೊರಟು ಹೋಗಿ, ಉರಿಬಿಸಿಲಿನ ಝಳ ಆರಂಭವಾಗಿದೆ ಎಂದು ಅನುಭವವೇದ್ಯವಾಯಿತು. ಸಾಮಾನ್ಯವಾಗಿ ಬೇಸಗೆಯಲ್ಲಿ, ಮನೆಯೊಳಗೆಯೇ ಇದ್ದು, ಲಭ್ಯವಿದ್ದಂತೆ ಫ್ಯಾನ್ ಅಥವಾ ಎ.ಸಿ ಬಳಸಿಕೊಂಡು, ತಂಪಾದ ಪಾನಕ, ಮಜ್ಜಿಗೆ, ಕಲ್ಲಂಗಡಿ ಹಣ್ಣು, ಕರಬೂಜ ಇತ್ಯಾದಿಗಳನ್ನು ಹೊಟ್ಟೆಗಿಳಿಸುತ್ತಾ ಕಾಲಕಳೆಯಲು ಹೆಚ್ಚಿನವರು ಬಯಸುತ್ತಾರೆ.
ಆದರೆ ಇದಕ್ಕೆ ಅಪವಾದ ಎಂಬಂತೆ ‘ಚಾರಣಿಗರು’ ಎಂಬ ವರ್ಗವೊಂದಿದೆ. ಇವರು ‘ಬಿಸಿಲಾದರೇನು..ಮಳೆಯಾದರೇನು….ಚಾರಣವೇ ನಮ್ಮ ಗುರಿಯಲ್ಲವೇನು.” ಎಂದು ನಂಬಿದವರು. ಈ ವರ್ಗದ ಜನರಿಗೆ, ಸಮಾನಾಸಕ್ತರ ಗುಂಪು ಕಟ್ಟಿಕೊಂಡು ಹರಟೆ ಹೊಡೆಯುತ್ತಾ, ಸುಡುವ ಬಿಸಿಲಿನಲ್ಲಿ ಬೆಟ್ಟ ಹತ್ತುವುದೂ ಖುಷಿ, ಥರಗುಟ್ಟುವ ಚಳಿಯಲ್ಲಿ ಹಿಮಾಲಯವೂ ಇಷ್ಟ, ಮುಸಲಧಾರೆಯಾಗಿ ಸುರಿವ ಮಳೆಯ ನಡುವೆ ಕರಾವಳಿಯ ಮುನ್ಸೂನ್ ಚಾರಣವೂ ಸೂಪರ್….ಒಟ್ಟಾರೆಯಾಗಿ ಪ್ರಕೃತಿ ಹೇಗೆ ಇದೆಯೋ ಹಾಗೆಯೇ ಅದನ್ನು ಸ್ವೀಕರಿಸಿ, ಪ್ರತಿಕೂಲ ವಾತಾವರಣದಲ್ಲಿಯೂ ಅನುಕೂಲವನ್ನೇ ಹುಡುಕುತ್ತಾ ಅದರಲ್ಲೇ ಸಂತೋಷ ಪಡುವ ಜಾಯಮಾನ ಇವರದು. ಅಬಾಲವೃದ್ಧರನ್ನು ಒಳಗೊಂಡ ಈ ತಂಡವು ತಮ್ಮನ್ನು ಚಿರ ‘ಯೂಥ್’ ಎಂದು ಗುರುತಿಸಲ್ಪಡುವುದು ಇವರ ಇನ್ನೊಂದು ವಿಶೇಷ!
ಇಂತಿಪ್ಪ ಬಿರುದಾಂಕಿತ ಮೈಸೂರಿನ ಯೂಥ್ ಹಾಸ್ಟೆಲ್ ಅಸೋಸಿಯೇಷನ್ , ಗಂಗೋತ್ರಿ ಘಟಕದ ವತಿಯಿಂದ, ಫೆಬ್ರುವರಿ 28 ರಂದು, ಚನ್ನಪಟ್ಟಣ ಸಮೀಪದ ‘ವಾಡೆ ಮಲ್ಲೇಶ್ವರ’ ಬೆಟ್ಟಕ್ಕೆ ಚಾರಣವನ್ನು ಏರ್ಪಡಿಸಿದ್ದರು. ಕಾರ್ಯಕ್ರಮದ ರೂವಾರಿಗಳಾಗಿದ್ದ ಶ್ರೀ ನಾಗೇಂದ್ರ ಪ್ರಸಾದ್ ಮತ್ತು ಶ್ರೀಮತಿ ಎಂ. ಗೋಪಿ ಅವರ ನೇತೃತ್ವದಲ್ಲಿ 22 ಜನರು, ಬೆಳಗ್ಗೆ 0630 ಗಂಟೆಗೆ ಮೈಸೂರಿನಿಂದ ಹೊರಟೆವು. ಮಂಡ್ಯ- ಚನ್ನಪಟ್ಟಣ ದಾರಿಯಾಗಿ ಮುಂದುವರಿದು ಕೋಡಂಬಳ್ಳಿ ಕೆರೆಯ ಏರಿಯ ಮೇಲೆ ಸಾಗಿದ ವ್ಯಾನ್ ಒಂಭತ್ತು ಗಂಟೆಗೆ ಬ್ಯಾಡರಹಳ್ಳಿ ತಲಪಿತು.
ಅಲ್ಲಿ ಬೆಳಗ್ಗಿನ ಉಪಾಹಾರವಾಗಿ ಇಡ್ಲಿ, ಚಟ್ನಿ,ಸಾಂಬಾರು ಮತ್ತು ಸಿಹಿ ಸೇವಿಸಿ, ಎದುರುಗಡೆ ಕಾಣಿಸುತ್ತಿದ್ದ ಬೆಟ್ಟವನ್ನೇರಲು ಸಿದ್ಧರಾದೆವು. ಆಯೋಜಕರು ಮುಂಚಿತವಾಗಿ ತಿಳಿಸಿದ್ದಂತೆ ಎರಡು ಬಾಟಲ್ ಕುಡಿಯುವ ನೀರು, ಟೋಪಿ ತೆಗೆದುಕೊಂಡಿದ್ದೆವು. ನಮಗೆ ಕೊಟ್ಟಿದ್ದ ಕುರುಕಲು ತಿಂಡಿ-ಕಿತ್ತಳೆ-ಸೌತೆಕಾಯಿಯ ಪ್ಯಾಕೆಟ್ ಅನ್ನೂ ಬೆನ್ನುಚೀಲಕ್ಕಿಳಿಸಿದೆವು. ಎಲ್ಲಾ ಸದಸ್ಯರ ಪರಸ್ಪರ ಪರಿಚಯ ಮಾಡಿಕೊಂಡೆವು . ಸ್ಥಳೀಯರಾದ ‘ರಾಜ’ ಎಂಬ ವ್ಯಕ್ತಿ ನಮಗೆ ಗೈಡ್ ಆಗಿದ್ದರು. ಹವಾಯಿ ಚಪ್ಪಲಿ ಹಾಕಿಕೊಂಡು, ಕೈಯಲ್ಲಿ ಬಟ್ಟೆಯ ಗಂಟೊಂದನ್ನು ಬೀಸಿಕೊಂಡು ಲೀಲಾಜಾಲವಾಗಿ ಬೆಟ್ಟವನ್ನೇರುತ್ತಿದ್ದ ಈ ಸಣಕಲು ವ್ಯಕ್ತಿಯ ಸರಳತನ ಮತ್ತು ‘ಇದ್ಯಾವ ಮಹಾ ಬೆಟ್ಟ’ ಎಂಬ ಆತ್ಮವಿಶ್ವಾಸದ ಧೋರಣೆಯ ಮುಂದೆ, ಪಟ್ಟಣದಿಂದ ಬಂದ ನಮ್ಮ ಕಾಲಲ್ಲಿದ್ದ ಶೂ, ಬೆನ್ನಲ್ಲಿದ್ದ ಬ್ಯಾಗ್, ತಲೆಯಲ್ಲಿದ್ದ ಟೋಪಿ, ಮೇಲಿಷ್ಟು ತಿಂಡಿ, ಕುಡಿಯುವ ನೀರು ಇತ್ಯಾದಿ ಸಕಲ ಸಿದ್ಧತೆಗಳು ‘ಪ್ಯಾಟೀ ಮಂದಿ ಹಳ್ಳಿಗೆ ಬಂದಂತೆ’ ನಮ್ಮನ್ನೇ ಅಣಕಿಸಿದುವು!
‘ರಾಜ’ ತೋರಿಸಿದ ದಾರಿಯಲ್ಲಿ, ಕಲ್ಲು ಕೊಟರೆಗಳ ನಡುವೆ ಜಾಗರೂಕತೆಯಿಂದ ನಡೆದೆವು. ನಾವು ಅಂದುಕೊಂಡಷ್ಟು ಸರಳ ಚಾರಣ ಇದಲ್ಲ ಅಂತ ಸಾಬೀತಾಯಿತು. ಬೆಟ್ಟದಲ್ಲಿ ಅಲ್ಲಲ್ಲಿ ಕುರುಚಲು ಕಾಡುಮರಗಳಿದ್ದುವು. ನೆರಳಿನ ಸುಳಿವೇ ಇರಲಿಲ್ಲ. ಅಲ್ಲಲ್ಲಿ ಬೆಂಕಿ ಹಚ್ಚಿದುದರ ಗುರುತಾಗಿದ್ದ ಮಸಿ ನಮ್ಮ ಶೂಗಳಿಗೆ ಮೆತ್ತಿಕೊಂಡಿತು. ಕುಡಿಯಲೆಂದು ಕೊಂಡೊಯ್ದ ನೀರು ಖಾಲಿಯಾಗತೊಡಗಿತು. ಸೌತೆಕಾಯಿ-ಕಿತ್ತಳೆ ಆಗಲೇ ತಿಂದಾಗಿತ್ತು.
” ಸಣ್ಣ ಬೆಟ್ಟ ಅಂತ ಹೇಳಿದ್ರು…ಈಗ್ಲೇ ಸುಮಾರು ನಡೆದ್ವಿ..” ಎಂಬ ಸುಸ್ತುಭರಿತ ಉದ್ಗಾರಗಳು ಉತ್ಸಾಹದ ನಡುವೆಯೂ ಕೇಳಿಬಂದುವು . ” ಇನ್ನೇನು ಚಾರಣ ಮುಗಿಸೇ ಬಿಟ್ಟೆವು “ ಅಂತ ಆಯೋಜಕರು ಆಗಾಗ ಹೇಳುತ್ತಾ ಪ್ರೋತ್ಸಾಹಿಸುತ್ತಿದ್ದರು. ಚುರುಕಾಗಿ ನಡೆಯುತ್ತಿದ್ದ ‘ರಾಜ’ ಅವರ ಸಮಕ್ಕೆ ನಮಗೆ ನಡೆಯಲಾಗದೆ, ಆಗಿಂದಾಗ್ಗೆ ‘ನಿಲ್ಲು ನಿಲ್ಲಯ್ಯ ರಾಜಾ’ ಎಂದು ಅವರನ್ನು ಕರೆಯುತ್ತಾ ನಿಲ್ಲಿಸುತ್ತಿದ್ದೆವು. ಸುತ್ತಲೂ ಒಣ ಬೆಟ್ಟವಿದ್ದರೂ ಕೆಲವೆಡೆ ಕಂಡುಬಂದ ಸೊಗಸಾದ ಆರ್ಕಿಡ್ ಹೂಗಳು ಮತ್ತು ಬಿಳಿಮಲ್ಲಿಗೆಯಂತೆ ಅರಳಿದ್ದ ಕೊಡಸಿಗೆ ಹೂಗಳು ಗಮನ ಸೆಳೆದುವು. ಕುಮಾರಿ ಸಹನಾ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಬೆಟ್ಟದ ತುದಿಯಿಂದ ಕಾಣಿಸುವ ಸುತ್ತಲಿನ ದೃಶ್ಯ ಸೊಗಸಾಗಿತ್ತು. ದೂರದಲ್ಲಿ ಕಾಣಿಸುತ್ತಿದ್ದ ‘ ಕೋಡಿಂಬಳ್ಳ ಕೆರೆ’ ಶಾಂತವಾಗಿ, ವಿಶಾಲವಾಗಿ ಕಂಗೊಳಿಸುತ್ತಿತ್ತು. ಬೀಸುವ ತಂಗಾಳಿ ಆಯಾಸ ಪರಿಹರಿಸುತ್ತಿತ್ತು.
ಬೆಟ್ಟದ ಕಲ್ಲುದಾರಿಯಲ್ಲಿ ಸುಮಾರು 4 ಕಿ.ಮಿ ನಡೆದಿರಬಹುದು. ಮುಂದಕ್ಕೆ ಅವರೋಹಣದ ದಾರಿಯಲ್ಲಿ ಬೃಹತ್ತಾದ ಇಳಿಜಾರಾದ ಏಕಶಿಲಾ ಬಂಡೆ ಎದುರಾಯಿತು. ಸುಮಾರು 80 ಡಿಗ್ರಿ ಕೋನದಲ್ಲಿ ಇದ್ದಿರಬಹುದಾದ ಆ ಬಂಡೆಯನ್ನು ಇಳಿಯುವಾಗ ಅಕಸ್ಮಾತ್ ಕಾಲು ಜಾರಿದರೆ ಎಂಬ ಭಯ ಹಲವರನ್ನು ಕಾಡಿದ್ದು ಸತ್ಯ. ನಮ್ಮ ಗೈಡ್ ರಾಜ ಅವರು ‘ನಾನು ಅವರನ್ನೆಲ್ಲಾ ದಾಟಿಸಿಬಿಡ್ತೀನಿ.. ಆರಾಮ ಇಳೀಬಹ್ದು… ..ಕುರಿಗಳೇ ಇಳಿಯುತ್ವೆ….’ ಎನ್ನುತ್ತಾ, ನನ್ನನ್ನೂ ಸೇರಿಸಿ ಕೆಲವರಿಗೆ ಸಹಾಯ ಹಸ್ತ ನೀಡಿ ಬಂಡೆ ಇಳಿಯಲು ಸಹಾಯ ಮಾಡಿದರು. ಇತರ ಪರಿಣಿತ ಚಾರಣಿಗರೂ ಸಹಾಯ ಮಾಡಿ, ಎಲ್ಲರನ್ನೂ ಸುರಕ್ಷಿತವಾಗಿ ಬೆಟ್ಟದ ಬುಡ ತಲಪುವಂತೆ ನೋಡಿಕೊಂಡರು. ಆಮೇಲೆ ಕಾಲುದಾರಿಯಲ್ಲಿ ಇನ್ನಷ್ಟು ನಡೆದು, ಬ್ಯಾಡರಹಳ್ಳಿಯಲ್ಲಿ ನಿಲ್ಲಿಸಿದ್ದ ವ್ಯಾನ್ ನ ಬಳಿಗೆ ಬರುವಾಗ 2 ಗಂಟೆ ಆಗಿತ್ತು. ಅಂತೂ ಅಲ್ಲಿಗೆ ನಾವು ‘ವಾಡೆ ಮಲ್ಲೇಶ್ವರ ಬೆಟ್ಟ’ಕ್ಕೆ ಒಂದು ಸುತ್ತು ಹಾಕಿದ್ದೆವು, ಆದರೆ ದೇವಾಲಯವನ್ನು ಇನ್ನೂ ನೋಡಿರಲಿಲ್ಲ. ಎದುರುಗಡೆಯೇ ಎತ್ತರದಲ್ಲಿ ಪುಟ್ಟ ದೇವಸ್ಥಾನ ಮತ್ತು ಅಲ್ಲಿಗೆ ಹೋಗಲು ಇರುವ ಮೆಟ್ಟಿಲುಗಳ ದಾರಿ ಕಾಣಿಸುತಿತ್ತು.
ಊಟದ ಸಮಯವಾಗಿತ್ತು. ಬಿಸಿಬೇಳೆಭಾತ್, ಮೊಸರನ್ನ, ಸಿಹಿ ಉಂಡೆವು. ಬಿಸಿಲು, ಸುಸ್ತು, ಹೊಟ್ಟೆಗೆ ಬಿದ್ದ ಆಹಾರ ಎಲ್ಲವೂ ಮೇಳೈಸಿ, ಇನ್ನು 900 ಮೆಟ್ಟಿಲು ಹತ್ತಿ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲ ಎಂದು ನನ್ನ ಕಾಲುಗಳು ಮುಷ್ಕರ ಹೂಡತೊಡಗಿದುವು. ನನ್ನಂತೆಯೇ ಇನ್ನೂ ಕೆಲವರಿಗೆ ಅನಿಸಿತ್ತು. ಹಾಗಾಗಿ, ಆಸಕ್ತಿ ಮತ್ತು ತಾಕತ್ತು ಉಳ್ಳವರು ಮಾತ್ರ ದೇವಸ್ಥಾನಕ್ಕೆ ಹೋಗಿ ಬರುವೆವೆಂದು ಹೊರಟರು. ಇತರರು ಅಲ್ಲಿಯೇ ನೆರಳಿನಲ್ಲಿ ವಿಶ್ರಮಿಸಿದೆವು. ಬೆಟ್ಟ ಹತ್ತಿ ಬಂದವರ ಪ್ರಕಾರ, ಮೆಟ್ಟಲುಗಳನ್ನೇರಿ ಹೋಗುವ ದಾರಿಯಲ್ಲಿ ಒಂದಿ ನಂದಿಯ ವಿಗ್ರಹ ಸಿಗುತ್ತದೆ, ದೇವಾಲಯದಲ್ಲಿ ಗುಹೆಯ ಒಳಗೆ ಸ್ವಯಂಭೂ ಶಿವಲಿಂಗವಿದೆ. ಇಲ್ಲಿ ಪ್ರತಿ ಸೋಮವಾರ ಮತ್ತು ಶುಕ್ರವಾರ ಪೂಜೆ ಸಲ್ಲಿಸುತ್ತಾರಂತೆ.
ಎಲ್ಲರೂ ಮರಳಿದ ಮೇಲೆ ವ್ಯಾನ್ ಹತ್ತಿದೆವು. ಹಿಂತಿರುಗುವ ದಾರಿಯಲ್ಲಿ ಚಹಾ ಸೇವಿಸಿ ಮೈಸೂರು ತಲಪುವಾಗ ಗಂಟೆ ರಾತ್ರಿ ಒಂಭತ್ತಾಗಿತ್ತು. ಒಟ್ಟಾರೆಯಾಗಿ ಈ ಚಾರಣವು ಚೆನ್ನಾಗಿ ನೆರವೇರಿತು. ಆಯೋಜಕರಾದ ಶ್ರೀ ನಾಗೇಂದ್ರ ಪ್ರಸಾದ್, ಶ್ರೀಮತಿ ಗೋಪಿ ಮತ್ತು ಪೈಲಟ್ ಟ್ರೆಕ್ ನಲ್ಲಿ ಭಾಗವಹಿಸಿ ರೂಪುರೇಷೆಗಳನ್ನು ಸಿದ್ಧಪಡಿಸಿದ್ದ ಶ್ರೀ ವೈದ್ಯನಾಥನ್ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
– ಹೇಮಮಾಲಾ.ಬಿ
ಸೊಗಸಾಗಿದೆ ಬರಹ, ಓದಿ ನನಗೆ ಸಹ ಆ ಬೆಟ್ಟ ಹತ್ತುವ ಆಸೆ ಮೂಡಿತು !
ಬರಹ ತುಂಬಾ ಚೆನ್ನಾಗಿದೆ. ನನಗೆ ಮತ್ತೊಂದು ಸಾರಿ ಹೋಗಿ ಬಂದ ಅನುಬಹ್ವ ಆಯಿತು
ಲೇಖನ ಬಹಳ ಕುಶಿಯಾಯಿತು .ಚಾರಣ ವಿವರಣೆ ಬಹಳ ಇಷ್ಟವಾಯಿತು