ಮಾರುತಿ ದಾಸಣ್ಣವರ ‘ಮಬ್ಬುಗತ್ತಲ ಮಣ್ಣ ಹಣತೆ’..
ಸಮಾನತೆಯ ಸಾಕಾರಕ್ಕಾಗಿ ಕನಸು ಕಟ್ಟಿಕೊಂಡು ಅಪ್ಪಟ ದೇಸೀಯ ಭಾಷೆಯಲ್ಲಿ ಬರೆಯವ ಮತ್ತು ಸರಳವಾದ ಬದುಕು ಕಟ್ಟಿಕೊಂಡಿರುವ ದಾಸಣ್ಣವರ ದೂರದ ಉತ್ತರ ಪ್ರದೇಶದ ಕೌಶಂಬಿಯಲ್ಲಿ ಜವಹಾರ ನವೋದಯ ಶಾಲಾ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರ ‘ಮಬ್ಬುಗತ್ತಲ ಮಣ್ಣ ಹಣತೆ‘ಯ ಕತೆಗಳು ತಣ್ಣಗೆ ಸೂಸುವ ಬೆಳಕಿನ ಸುಖ ಅನುಭವಿಸುವವರೆಲ್ಲರಿಗೂ ಪ್ರಾಯಶಃ ಪ್ರಖರತೆ ರಾಚುತ್ತದೆ;ಚುಚ್ಚುತ್ತದೆ. ಕಂದೀಲಿನ ಬೆಳಕಿನಲ್ಲಿಯೇ ಕಡುಬಡತನದ ಬದುಕು ಕಟ್ಟಿಕೊಂಡು ಬೆಳೆವ ಹಳ್ಳಿಗರ ನೋವು-ನಲಿವು, ನಂಬಿಕೆ, ಕಂದಾಚಾರ, ಜಾತಿವ್ಯವಸ್ಥೆ, ಜಾಗತಿಕರಣ ಮುಂತಾದ ಘಟನೆಗಳನ್ನೆಲ್ಲಾ ತೀರಾ ಹತ್ತಿರದಿಂದ ಕಂಡುಂಡಿರುವ ಮಾರುತಿ ದಾಸಣ್ಣವರ ಮಾನವೀಯ ಕಳಕಳಿಯುಳ್ಳ ಅರ್ಥಪೂರ್ಣವಾದ ಕತೆಗಳನ್ನು ಕಟ್ಟಿದ್ದಾರೆ.
ನಿಸರ್ಗದ ಮಡಿಲಲ್ಲಿ ಹಕ್ಕಿ-ಪಕ್ಷಿಗಳ ಕಲರವ, ಬೀಸುವ ತಂಗಾಳಿ, ಕಣ್ಮನ ತಣಿಸುವ ಗಿಡಮರಗಳು ಈ ಎಲ್ಲವುಗಳ ಸೌಂದರ್ಯವ ಸವಿದು ಪ್ರೀತಿ, ಪ್ರೆಮ, ಪ್ರಣಯ ಮತ್ತು ನಿಸರ್ಗ ಕುರಿತು ಬರೆಯುವವರ ಕತೆ, ಕವನಗಳು ಜೀವಪರ ಕಾಳಜಿಯುಳ್ಳವರಿಗೆ ಅಷ್ಟೊಂದು ಕಾಡುವುದಿಲ್ಲ. ಜಾತಿ, ಬಡತನ, ಹಿಂಸೆ, ದಬ್ಬಾಳಿಕೆ, ಅಸಮಾನತೆ, ಹಳ್ಳಿ-ಪಟ್ಟಣಗಳ ಅಂತರದ ನೋವುಗಳನ್ನೆ ಹಾಸಿ ಹೊದ್ದು ಮೇಲೆಳುವ ಕಟ್ಟಕಡೆಯ ವ್ಯಕ್ತಿಗಳ ಕುರಿತು ಬರೆವ ಕತೆ, ಕವನಗಳು ಹೆಚ್ಚು ಕಾಡುತ್ತವೆ, ಕಚ್ಚುತ್ತವೆ, ಚುಚ್ಚಿ ಎಚ್ಚರಿಸುತ್ತವೆ.
ಗಟ್ಟಿಯಾಗಿ ಹೆಜ್ಜೆ ಊರಿದರೆ ಎಲ್ಲಿ ನೆಲಕೆ ನೋವಾಗುವೋದೊ ಅನ್ನು ಸೂಕ್ಷ್ಮತೆಯಿಂದ ಬಲು ಮೆಲ್ಲಗೆ ನಡೆವ ಮಾರುತಿಯವರು ಈಗಾಗಲೇ ‘ನಾನೂರುವ ಹೆಜ್ಜೆಗಳು’ ‘ನಡೆದೂ ಮುಗಿಯದ ಹಾದಿ’ ಎಂಬ ಎರಡು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿ, ನಾಡಿನ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಇದೇ ಜನೇವರಿ 10 ರಂದು ಬೆಳಗಾವಿ ಜಿಲ್ಲೆಯ ಗೋಕಾವಿ ನಗರದಲ್ಲಿ ಮಾರುತಿ ದಾಸಣ್ಣವರ 10 ಕತೆಗಳಿರುವ ಮೂರನೇ ಕೃತಿ ‘ಮಬ್ಬುಗತ್ತಲೆಯ ಮಣ್ಣ ಹಣತೆ’ ಕಥಾ ಸಂಕಲನ ಲೋಕಾರ್ಪಣೆಗೊಂಡಿದೆ, ತನ್ನಿಮಿತ್ಯ ಈ ಲೇಖನ.
– ವೀರಲಿಂಗನಗೌಡ್ರ. ಸಿದ್ದಾಪುರ.