‘ತುಂಬಿದ ಕೊಡ’ .. ‘ಖಾಲಿ ತಪ್ಪಲೆ’ ..MID CAREER CRISIS

Share Button

 

Mid Career Crisis

ಶ್ರೀ ಪಾರ್ಥಸಾರಥಿ ಬಸು ಅವರು ಬರೆದ ‘ MID CAREER CRISIS’ ಪುಸ್ತಕವನ್ನು ಈಗ ತಾನೇ ಓದಿದೆ. ಇವರು ಕೊರ್ಪೊರೇಟ್ ವಲಯದಲ್ಲಿ, ಹಲವು ಸಂಸ್ಥೆಗಳಲ್ಲಿ, ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದವರು. ತಮ್ಮ ವೈಯುಕ್ತಿಕ ಅನುಭವಗಳು ಮತ್ತು ಕೆಲವು ಇತರ ಕೆಲವರ ಅನುಭವಗಳನ್ನು ಬಹಳ ಸೊಗಸಾಗಿ ವಿಶ್ಲೇಷಿದ್ದಾರೆ.

ಹೆಸರೇ ಸೂಚಿಸುವಂತೆ, ಉದ್ಯೋಗ ಪರ್ವದ ಮಧ್ಯ ಹಂತದಲ್ಲಿ ನಮ್ಮನ್ನು ಕಾಡುವ ನೈಜವಾದ ಅಥವಾ ಕಾಲ್ಪನಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಪುಸ್ತಕದಲ್ಲಿ, ಕೈಗಾರಿಕೆ ಮತ್ತು ಕೊರ್ಪೊರೇಟ್ ಸಂಸ್ಥೆಗಳಿಗೆ ಅನ್ವಯಿಸುವ ಉದಾಹರಣೆಗಳು ಇರುವುದಾದರೂ, ಇಲ್ಲಿ ವಿವರಿಸಿದ ಅಂಶಗಳು ಇತರ ಉದ್ಯೋಗ ವಲಯಕ್ಕೂ ಪ್ರಸ್ತುತವಾಗಿರಬಹುದು ಎಂದು ನನ್ನ ನಂಬಿಕೆ.

ವಿದ್ಯಾಭ್ಯಾಸ ಮುಗಿದೊಡನೆ, ಸೂಕ್ತವಾದ ಉದ್ಯೋಗ ಲಭಿಸಿ, ಮದುವೆಯಾಗಿ ಜೀವನ ರೂಪಿಸಿಕೊಳ್ಳಬೇಕೆಂಬುದು ಬಹುತೇಕ ಜನರ ಹಂಬಲ. ಈಗಿನ ಪೈಪೋಟಿ ಯುಗದಲ್ಲಿ, ಅವಶ್ಯಕತೆ ಇದ್ದರೂ-ಇಲ್ಲದಿದ್ದರೂ ಸ್ತ್ರೀ-ಪುರುಷ ಬೇಧವಿಲ್ಲದೆ ಈ ರೇಸ್ ನಲ್ಲಿ ಪಾಲ್ಗೊಳ್ಳುವುದು ಈಗಿನ ಜೀವನಶೈಲಿಯಾಗಿದೆ.

ಉದ್ಯೋಗ ದೊರಕಿದ ಹೊಸದರಲ್ಲಿ ಪ್ರತಿಯೊಂದರಲ್ಲಿಯೂ ಅತ್ಯುತ್ಸಾಹ, ಗುಂಪಿನಲ್ಲಿ ತಾನು ಎದ್ದು ಕಾಣಿಸಿಕೊಳ್ಳಬೇಕೆಂಬ ಹಪಾಹಪಿ, ತನ್ನ ಕೌಶಲವನ್ನು ಸಮರ್ಥವಾಗಿ ಬಳಸಿ ಬಾಸ್ ಕೈಯಲ್ಲಿ ಭೇಷ್ ಅನ್ನಿಸಿ, ಸಹೋದ್ಯೋಗಿಗಳು ಮೆಚ್ಚುಗೆಯಿಂದಲೋ ಅಸೂಯೆಯಿಂದಲೋ ನಮ್ಮ ಕಡೆಗೆ ನೋಡುವುದನ್ನು ಗಮನಿಸಿ, ಒಳಗೊಳಗೇ ಖುಷಿ ಪಡುವ ಕಾಲ.

ಹೆಚ್ಚಿನವರಿಗೆ ಸುಮಾರು 10-15 ವರ್ಷ ಕೆಲಸ ಮಾಡುವಷ್ಟರಲ್ಲಿ ಆವ್ಯಕ್ತವಾದ ತಳಮಳಗಳು ಕಾಡಲಾರಂಭಿಸುತ್ತವೆ. ಇದುವರೆಗೆ ಇಷ್ಟಪಟ್ಟು ಮಾಡುತ್ತಿದ್ದ ಕೆಲಸದಲ್ಲಿ ಇದ್ದಕ್ಕಿದ್ದಂತೆ ನಿರುತ್ಸಾಹ ಉಂಟಾಗುತ್ತದೆ. ಆಡಳಿತವರ್ಗ/ ಮೇಲಧಿಕಾರಿ ತನ್ನನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ…….ತನ್ನ ಅಭಿಪ್ರಾಯಗಳಿಗೆ ಮೀಟಿಂಗ್ ಗಳಲ್ಲಿ ಬೆಲೆ ಸಿಗುವುದಿಲ್ಲ ……ಕೈಕೆಳಗಿನವರು ಗೌರವ ಕೊಡುತ್ತಿಲ್ಲ…….ವ್ಯವಸ್ಥೆ ಬದಲಾಗಿದೆ…. ಎಲ್ಲರೂ ತನ್ನ ಬಗ್ಗೆಯೇ ಆಡಿಕೊಳ್ಳುತ್ತಿದ್ದಾರೆ……ತನ್ನ ಬಗ್ಗೆ ಯಾರೋ ಚಾಡಿ ಹೇಳುತ್ತಿದ್ದಾರೆ…..ತನಗೆ ದೊರೆಯಬೇಕಾಗಿದ್ದ ಪ್ರಮೋಷನ್ ತನ್ನಷ್ಟು ಸಾಮರ್ಥ್ಯವಿಲ್ಲದ ಇನ್ನೊಬ್ಬರ ಪಾಲಾಯಿತು…… ಇತ್ಯಾದಿ ಕೊನೆ ಮೊದಲಿಲ್ಲದ ಅಲೋಚನೆಗಳು ಬರಲಾರಂಭಿಸುತ್ತವೆ. ಇವುಗಳಲ್ಲಿ ಕೆಲವು ನಿಜವಿರಬಹುದು, ಇನ್ನು ಕೆಲವು ಕಾಲ್ಪನಿಕ ಇರಬಹುದು. ತಾನು ಅಸಹಾಯಕ ಎನಿಸಬಹುದು, ಇವೆಲ್ಲಾ MID CAREER CRISIS ಕಾಡುತ್ತಿರುವುದರ ಲಕ್ಷಣಗಳು.

MID CAREER CRISIS ಬಳಲುತ್ತಿರುವವರು, ತಮಗೆ ಅರಿವಿಲ್ಲದಂತೆಯೇ ಮೇಲರಿಮೆ ಅಥವಾ ಕೀಳರಿಮೆ ಬೆಳೆಸಿಕೊಂಡು, ಇತರ ಸಹೋದ್ಯೋಗಿಗಳ ಮುಂದೆ ಅವಶ್ಯವಿದ್ದಾಗ ಮಾತನಾಡದೆ/ಅನವಶ್ಯಕವಾಗಿ ಮಾತನಾಡಿ, ಕಾರಣವಿಲ್ಲದೆಯೇ ರೇಗಿ, ಅಪಹಾಸ್ಯಕ್ಕೀಡಾಗಿ ಮತ್ತಷ್ಟು ಕೊರಗುವಂತಾಗುವುದು ಇದೇ ಹಂತದಲ್ಲಿ. ತಾವು ತಮ್ಮನ್ನು ಬಹಳ ಅನುಭವವುಳ್ಳ ‘ತುಂಬಿದ ಕೊಡ’ ಎಂದು ತಿಳಿದುಕೊಂಡು ಬೀಗುತ್ತಿರುವಾಗ, ಇತರರು ತಮ್ಮನ್ನು ‘ಖಾಲಿ ತಪ್ಪಲೆ’ ಎಂದು ಹಾಸ್ಯ ಮಾಡುವಂತಾಗುತ್ತದೆ.

ಮಧ್ಯವಯಸ್ಸು ಹತ್ತಿರ ಬರುತ್ತಿದ್ದಂತೆ ಹೆಚ್ಚಾಗುವ ವೈಯುಕ್ತಿಕ ಜವಾಬ್ದಾರಿಗಳು, ಹಣಕಾಸಿನ ಸಮಸ್ಯೆಗಳು, ವಿವಿಧ ಕಾರಣಗಳಿಂದ ಕುಗ್ಗಲಾರಂಭಿಸಿದ ದೈಹಿಕ ಆರೋಗ್ಯ ಇವುಗಳೂ ಋಣಾತ್ಮಕ ಪರಿಣಾಮ ಬೀರುತ್ತವೆ. ಇವುಗಳೆಲ್ಲದರ ಒಟ್ಟಾರೆ ಪರಿಣಾಮವಾಗಿ ಕೆಲಸದ ಮೇಲೆ ಏಕಾಗ್ರತೆ ಕಡಿಮೆಯಾಗಿ ಕಾರ್ಯಕ್ಷಮತೆ ಕುಂಠಿತವಾಗುವುದು. ಕೊನೆಗೆ ‘ನಿಷ್ಪ್ರಯೋಜಕ ಉದ್ಯೋಗಿ’ ಎಂಬ ಬಿರುದು ಸಿಗಬಹುದು. ಸಹಜವಾಗಿ ಆತ/ಆಕೆಗೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುವುದು ಕಷ್ಟವೆನೆಸಿ ತಾನಾಗಿಯೇ ಬಿಡಬಹುದು, ಅಥವಾ ಸಂಸ್ಥೆಯೇ ಕೆಲಸ ಬಿಡಲು ಆದೇಶಿಸಬಹುದು.

MID CAREER CRISIS ಗೆ ಯಾವುದೇ ಸಿದ್ಧ ಸೂತ್ರ ಪರಿಹಾರಗಳಿಲ್ಲ. ಕನಿಷ್ಟ ತಮಗೆ ಈ ಸಮಸ್ಯೆ ಇದೆ ಎಂದು ಗುರುತಿಸಿಕೊಂಡರೆ ಅರ್ಧ ಪರಿಹಾರ ಲಭ್ಯವಾದಂತೆ. ಇದು ನಮ್ಮ ದೈನಂದಿನ ಕೆಲಸಕ್ಕೆ ತೊಂದರೆಯಾಗದಂತೆ ಜಾಗರೂಕತೆ ವಹಿಸಿ, ಸಾಧ್ಯವಾದಷ್ಟು ಪೂರಕ ವಿಷಯಗಳನ್ನು ಕಲಿತು ತನ್ನ ‘ಉದ್ಯೋಗಿ ಮೌಲ್ಯ’ ಉಳಿಸಿಕೊಳ್ಳಬಹುದು.

ಬದಲಾವಣೆ ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ‘ಈಸಬೇಕು , ಇದ್ದು ಜೈಸಬೇಕು’. ಸಂದರ್ಭವನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ, ತನ್ನನ್ನು ತಾನು ಅಪ್ ಡೇಟ್ ಆಗಿ ಇರಿಸಿಕೊಳ್ಳುವುದು, ಮೆಲಧಿಕಾರಿಯವರ ಬಳಿ ಪ್ರಾಮಾಣಿಕವಾಗಿ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವುದು, ಅಗತ್ಯವಿದ್ದರೆ ಹೊಸದಾಗಿ ತಿಳಿಯಬೇಕಾದ ವಿಷಯದ ಬಗ್ಗೆ ಕೋರ್ಸ್ ಮಾಡುವುದು ಇತ್ಯಾದಿ ಮಾಡಬಹುದು.

ಇಷ್ಟರ ಮೇಲೆಯೂ ಸಹಿಸಲಸಾಧ್ಯ ಎನಿಸಿದರೆ ಪ್ರಪಂಚ ವಿಶಾಲವಾಗಿದೆ, ಬೇರೆ ಅವಕಾಶ ಹುಡುಕಿಕೊಳ್ಳುವುದು ಜಾಣತನ. ಬದಲಾವಣೆ ಜಗದ ನಿಯಮ. ಬರಲಿರುವ ಅವಕಾಶಗಳು ಈಗಿನದ್ದುದಕ್ಕಿಂತ ಉತ್ತಮವಾಗಿರಬಹುದಲ್ಲ? ಆತ್ಮವಿಶ್ವಾಸ ಮತ್ತು ಶ್ರದ್ಧೆಯುತವಾದ ಕೆಲಸದಿಂದ ಇದನ್ನು ಸಾಧಿಸಬಹುದು.

ಈ ಪುಸ್ತಕವು ಬಹಳ ಮಾಹಿತಿಪೂರ್ಣವಾಗಿದ್ದು, ಓದುತ್ತಾ ಹೋದಂತೆ, ಅದರಲ್ಲಿರುವ ಕೆಲವು ಪಾತ್ರಗಳು ನಮಗೆ ‘ಚಿರಪರಿಚಿತ’ ಅನಿಸತೊಡಗುತ್ತದೆ. ಇನ್ನು ಕೆಲವು ಪಾತ್ರಗಳು, ‘ನನಗೆ ಅನ್ವಯಿಸುತ್ತದೆಯೇ’ ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಒಟ್ಟಾರೆಯಾಗಿ ಈ ಪುಸ್ತಕವು ಓದುಗನನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ.

ಅಪರೂಪವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಸರಳ ಇಂಗ್ಲಿಷ್ ನಲ್ಲಿ ಬರೆದೆ ಶ್ರೀ ಪಾರ್ಥಸಾರಥಿ ಬಸು ಅವರಿಗೆ ಧನ್ಯವಾದಗಳು.

,
 – ಹೇಮಮಾಲಾ.ಬಿ 
  .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: