ಪರೀಕ್ಷೆ ಬರೆಯುವ ಮುನ್ನ……

Share Button

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ‘ಪರೀಕ್ಷೆಗಳೇ’ ಬುದ್ಧಿಯ ಮಾನದಂಡ ಎನ್ನುವಷ್ಟರ ಮಟ್ಟಿಗೆ ಬೆಳವಣಿಗೆಯಾಗಿದೆ. ಯಾವ ಕ್ಷೇತ್ರವೇ ಆಗಿರಲಿ ಪರೀಕ್ಷೆ ನೀಡಿಯೇ ಮುಂದಿನ ಹಂತಕ್ಕೆ ಅವಕಾಶ ನೀಡುವುದು ಸಾಮಾನ್ಯವಾಗಿದೆ. ಹತ್ತನೇ ತರಗತಿಯ ಪರೀಕ್ಷೆ ಹತ್ತಿರವಾಗುತ್ತಿದೆ, ಅದೇ ರೀತಿ ಪದವಿ ವಿದ್ಯಾರ್ಥಿಗಳೂ ಕೂಡ ಗಮನ ನೀಡಲೇಬೇಕಾದ ವಿಷಯ ಏನೆಂದರೆ, ‘ಪರೀಕ್ಷೆಯ ಪೂರ್ವ ತಯಾರಿ’. ಇಲ್ಲಿ ಸಾಧ್ಯವಾದಷ್ಟು ಸರಳವಾಗಿ ಓದುವುದು ಹೇಗೆ ಎನ್ನುವುದನ್ನು ತಿಳಿಯಪಡಿಸಿದ್ದೇನೆ. ಮೊದಲು ‘ಪರೀಕ್ಷೆ’ಎನ್ನುವ ಜ್ವರದ ಬಿಸಿಯನ್ನು ಕಡಿಮೆಯಾಗಿಸೋಣ. ಯಾವುದೇ ವಿದ್ಯಾರ್ಥಿ ಉತ್ತಮ ತಯಾರಿಯನ್ನು ಮಾಡಿದ್ದಲ್ಲಿ, ಪರೀಕ್ಷೆಯ ಭಯ ಅವನಿಂದ ಮಾರು ದೂರ ಹೋಗುತ್ತದೆ ಮಾತ್ರವಲ್ಲದೆ, ಪರೀಕ್ಷೆಯನ್ನು ಖುಷಿಯಿಂದ ಬರೆಯಲು ಉತ್ಸುಕನಾಗಿರುತ್ತಾನೆ.

ಪ್ರತಿಯೊಬ್ಬರೂ ಕೂಡ ಜೀವನದುದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ವಿದ್ಯಾರ್ಥಿಗಳೇ ಆಗಿರುತ್ತಾರೆ. ಶಿಕ್ಷಣವೆಂಬುದು ನಿರಂತರ ಪ್ರಕ್ರಿಯೆ. ಆದ್ದರಿಂದ ಕೇವಲ ಪರೀಕ್ಷೆಯನ್ನೇ ಗುರಿಯಾಗಿಟ್ಟು ಸಾಗಿದಲ್ಲಿ ಯಾಂತ್ರೀಕೃತವಾಗಿ ಬೆಳೆಯುತ್ತೇವೆ. ಕೆಲವು ಧನಾತ್ಮಕ ಚಿಂತನೆಗಳನ್ನು ಹದಿ ಹರೆಯದಲ್ಲೇ ರೂಢಿಸಿಕೊಂಡಲ್ಲಿ ಜೀವನದುದ್ದಕ್ಕೂ ಸಂತಸದಿಂದಿರುತ್ತೇವೆ. ಪರೀಕ್ಷೆಯ ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗಾಗಬಹುದು ಹಾಗಾಗಿ ಅಲ್ಲಿಯೂ ಕೆಲವು ಧನಾತ್ಮಕ ಆಲೋಚನೆಗಳು ನಮ್ಮ ಸಹಾಯಕ್ಕೆ ಬರುತ್ತವೆ.

  • ಕಠಿಣ ಪರಿಶ್ರಮ:- ಯಾವುದೇ ಆಯ್ಕೆಯ ವಿಷಯವಾಗಿರಲಿ ಅದು ಸುಲಭ ಅನ್ನಿಸುವುದು ಕೇವಲ ನಮ್ಮ ಪರಿಶ್ರಮದಿಂದ. ಮಾನಸಿಕ ಶಕ್ತಿ, ಬುದ್ಧಿ ಶಕ್ತಿ, ಶುದ್ಧ ಚಾರಿತ್ಯ್ರದ ವೃದ್ಧಿಯಾಗುವುದು ಹೆಚ್ಚು ಓದಿದಾಗ, ಗಮನ ನೀಡಿದಾಗ, ಲೋಕ ಪರ್ಯಟನೆ ಮಾಡಿದಾಗ ಮಾತ್ರ.
  • ಆತ್ಮ ವಿಶ್ವಾಸ:- ಯಾವಾಗಲೂ ಆತ್ಮವಿಶ್ವಾಸ ಜೊತೆಗಿರಲಿ. ಕಷ್ಟಗಳನ್ನು ಎದುರಿಸುವುದು ಅನಿವಾರ್ಯ. ಆತ್ಮವಿಶ್ವಾಸಕ್ಕಿಂತ ಒಳ್ಳೆಯ ಗೆಳೆಯನಿಲ್ಲ. ನೀವು ಸರಿಯಾಗಿರುವುದನ್ನೇ ಮಾಡುತ್ತಿದ್ದಲ್ಲಿ ಎಲ್ಲೂ ಆತ್ಮವಿಶ್ವಾಸ ಕುಗ್ಗಲು ಬಿಡಬೇಡಿ.
  • ನಂಬಿಕೆ:- ನೀವು ವಿದ್ಯೆ ಕಲಿಯವ ಗುರುಗಳ ಮೇಲೆ, ತಂದೆ-ತಾಯಿಯ ಮೇಲೆ ನಂಬಿಕೆಯಿರಲಿ. ಅದೇ ರೀತಿ ದೇವರಲ್ಲಿನ ನಂಬಿಕೆ ಧೃಢವಾಗಿದ್ದಲ್ಲಿ ಸದಾಯಶಸ್ಸುಗಳಿಸಲು ಸಾಧ್ಯ. ಕಠಿಣ ಅಭ್ಯಾಸದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಹಾಗೆಯೇ ಸ್ವನಂಬಿಕೆಯಿಂದ ಏನನ್ನಾದರೂ ಸಾಧಿಸುವ ಛಲ ಹುಟ್ಟುತ್ತದೆ.

ಪೂರ್ವ ತಯಾರಿ ಮಾಡುವಾಗ ಗಮನಿಸಬೇಕಾದ ಅಂಶಗಳು:-

  • ಪಠ್ಯಾಂಶ (ಸಿಲಬಸ್)ದಲ್ಲಿನ ಎಲ್ಲಾ ಅಂಶಗಳನ್ನು ಒಳಗೊಳ್ಳುವ ಹಾಗೆ ಅಭ್ಯಾಸ ಮಾಡಬೇಕು.
  • ಗೈಡ್‌ಗಳ ಬಳಕೆ, ದಾರಿ ತಪ್ಪಿಸಬಹುದು. ಅದರ ಬದಲು ಅಗತ್ಯವಿದ್ದಲ್ಲಿ ಕೋಚಿಂಗ್ ಸೆಂಟರ್ ತರಗತಿಗಳಿಗೆ ಭೇಟಿ ನೀಡಿ.
  • ನಕಲು ಮಾಡುವುದು ಆತ್ಮಸಾಕ್ಷಿಗೆ ದ್ರೋಹ ಬಗೆದಂತೆ. ಅದರಿಂದ ಎಂದಿಗೂ ಒಳ್ಳೆಯದಾಗದು.
  • ಅರ್ಥವಾಗದ ವಿಷಯಗಳನ್ನು ಸಣ್ಣ ಸಣ್ಣ ವಾಕ್ಯಗಳಾಗಿ ಮಾಡಿ ನೆನಪಿಡಿ. ತೀರ ಅಗತ್ಯವಿದ್ದಲ್ಲಿ ಕಂಠಪಾಠ ಮಾಡಿ.
  • ಪರೀಕ್ಷೆಯ ರಜಾಕಾಲದಲ್ಲಿ ಹಳೆಯ ಪ್ರಶ್ನೆಗಳನ್ನು ಅಭ್ಯಾಸ ಮಾಡಬೇಕು. ಕಳೆದ ವರುಷದ ಪತ್ರಿಕೆಗಳನ್ನೂ ತಿರುವಿ ಹಾಕಬೇಕು.
  • ಹಳೆಯ ಪತ್ರಿಕೆಗಳನ್ನು ಅಭ್ಯಾಸ ಮಾಡುವಾಗ ಸರಿಯಾದ ಮತ್ತು ತಪ್ಪು ಉತ್ತರಗಳನ್ನು ಗುರುತಿಸಬೇಕು.
  • ಉತ್ತರ ಸರಿಯಾಗಿ ಗೊತ್ತಿಲ್ಲದಿದ್ದಲ್ಲಿ ಊಹೆ (ಗೆಸ್ಸಿಂಗ್) ಮಾಡಿ ಗುರುತಿಸಿಟ್ಟುಕೊಂಡು ತಮ್ಮ ಸಂದೇಹವನ್ನು ಇತರರಿಂದ ಅಥವಾ ಗುರುಗಳಿಂದ ಪರಿಹರಿಸಿಕೊಳ್ಳಬೇಕು.
  • ಪರೀಕ್ಷೆ ಬರೆಯುವ ಪ್ರತೀ ವಿಷಯಗಳ ಬಗ್ಗೆ ವಿಸ್ತಾರವಾದ ಅಧ್ಯಯನ ಒಳ್ಳೆಯದು. ಆಯ್ಕೆ ಮಾಡಿ ಓದುವುದು ಕೇವಲ ಅರೆಬರೆ ಕಲಿತ ವಿದ್ಯೆಯ ಹಾಗೆ ಕೆಲವೊಮ್ಮೆ ಕೆಲಸಕ್ಕೆ ಬಾರದೇ ಹೋಗಬಹುದು.
  • ನಕಾರಾತ್ಮಕ ಅಂಕಗಳ (ನೆಗೆಟಿವ್ ಮಾರ್ಕಿಂಗ್) ಬಗ್ಗೆ ಭಯ, ಆತಂಕ ಎಂದಿಗೂ ಬೇಡ. ಆತ್ಮವಿಶ್ವಾಸವಿರುವ ಉತ್ತರ ಒಳ್ಳೆಯ ಫಲಿತಾಂಶ ನೀಡುತ್ತದೆ.
  • ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಿಳುವಳಿಕೆಯಿರಲಿ, ಸಾಮಾನ್ಯ ಜ್ಞಾನವೂ ಹಲವು ಬಾರಿ ಪರೀಕ್ಷೆಯಲ್ಲಿ ಉತ್ತಮ ಅಂಶಗಳಿಗೆ ಸಹಕಾರಿಯಾಗಿದೆ.

ಸರ್ವತೋಮುಖ ವಿಕಾಸವೇ ವಿದ್ಯಾಭ್ಯಾಸದ ಗುರಿಯಾಗಬೇಕು. ಕೇವಲ ಅಂಕ ಗಳಿಸುವುದೇ ಸೃಜನಶೀಲತೆ ಅಲ್ಲ. ಹಲವಾರು ಬಾರಿ, ಗೊಂದಲಗೊಂಡಂತಹ ವಿದ್ಯಾರ್ಥಿಗಳೇ ಜಾಸ್ತಿ ಅನುತ್ತೀರ್ಣರಾಗುತ್ತಾರೆ. ಆದ್ದರಿಂದ ಪರೀಕ್ಷೆಗಳು ಬಂದಾಗ ಹೆದರದೆ ಅನಾಯಾಸವಾಗಿ ಬರೆದು ಮುಗಿಸಿ ಉತ್ತಮ ಬದುಕನ್ನು ಆಯ್ಕೆ ಮಾಡಿಕೊಳ್ಳುವುದು ಈಗಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ” ವಿದ್ಯೆ ಉಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆಯಿಲ್ಲದವನ ಮುಖವು ಹಾಳೂರು ಹದ್ದಿನಂತೆ”. ಎಂಬ ಸರ್ವಜ್ಙನ ವಚನ ಇಂದಿಗೂ ಪ್ರಸ್ತುತ. ವಿದ್ಯೆಯನ್ನು ಸಕಾರಾತ್ಮಕವಾಗಿ ಬಳಸಿ ತಾನೂ ಬೆಳೆದು, ಇತರರನ್ನೂ ಬೆಳೆಸುವುದು ಬುದ್ಧಿವಂತರ ಲಕ್ಷಣ.

 -ಅಶೋಕ ಕೆ. ಜಿ. ಮಿಜಾರು

7 Responses

  1. suragi says:

    Very informative and timely article.

  2. Abhilash Sharma says:

    ಸಲಹೆಗಳು ತುಂಬಾ ಉತ್ತಮವಾಗಿವೆ.

  3. BH says:

    It is a good topic, nice to give confidence to students.

  4. sowmya says:

    ನೈಸ್ ಆರ್ಟಿಕಲ್ ಸರ್…..

  5. pavana salian says:

    very nice articl sir ….

  6. Shankari Sharma says:

    ಸಕಾಲಿಕ ಬರಹ ಚೆನ್ನಾಗಿದೆ.

  7. Nayana Bajakudlu says:

    Very nice. ಬಹಳ ಉಪಯುಕ್ತವಾದ ಬರಹ. ಪರೀಕ್ಷೆಗಳು ಆರಂಭಗೊಳ್ಳುತ್ತಿರೋ ಈ ಸಮಯದಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಸಹಾಯಕ ಆಗುವಂತಹ ಬರಹ .

Leave a Reply to suragi Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: