ಸ್ವಚ್ಛ ಭಾರತವನ್ನು ಮರೆತೆವೇ ನಾವು?

Share Button
Lakshmeesha J Hegade1

ಲಕ್ಷ್ಮೀಶ ಜೆ.ಹೆಗಡೆ

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತಕ್ಕಾಗಿ ಕರೆಕೊಟ್ಟಿದ್ದರು.2019ರಲ್ಲಿ ನಾವು ಮಹಾತ್ಮ ಗಾಂಧೀಜಿಯವರ ನೂರೈವತ್ತನೇ ಜಯಂತಿಯನ್ನು ಆಚರಿಸಲಿದ್ದೇವೆ.ಆ ವೇಳೆಗೆ ಬಾಪೂಜಿ ಕಂಡಿದ್ದ ಸ್ವಚ್ಛ ಭಾರತದ ಕನಸು ನನಸಾಗಬೇಕು.ನಮ್ಮ ಗಲ್ಲಿ,ನಮ್ಮ ಬೀದಿ,ನಮ್ಮ ಮೊಹಲ್ಲಾ,ನಮ್ಮ ಶಾಲೆ,ನಮ್ಮ ಊರು ಸ್ವಚ್ಛತೆಯಿಂದ ಕಂಗೊಳಿಸಬೇಕು.ಅದಕ್ಕಾಗಿ ರಾಷ್ಟ್ರದ ಪ್ರಜೆಗಳೆಲ್ಲರೂ ಕನಿಷ್ಟ ವಾರಕ್ಕೆ ಎರಡು ಗಂಟೆಗಳನ್ನಾದರೂ ಸ್ವಚ್ಛ ಭಾರತಕ್ಕಾಗಿ ಮೀಸಲಿಡಬೇಕೆಂದು ಪ್ರಧಾನಿ ಕೋರಿದ್ದರು.ಕೇವಲ ಮಾತಿನಲ್ಲಿ ಹೇಳದೇ ಕಳೆದ ವರ್ಷವೇ ಗಾಂಧಿ ಜಯಂತಿಯಂದು ತಾವೇ ಮೊದಲಿಗರಾಗಿ ಪೊರಕೆ ಹಿಡಿದು ದೆಹಲಿಯ ಬೀದಿಗಳಲ್ಲಿ ಕಸ ಗುಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು ಮತ್ತು ಇದನ್ನು ಪ್ರಜೆಗಳೆಲ್ಲರೂ ಮುಂದುವರೆಸಿಕೊಂಡು ಹೋಗಬೇಕೆಂದು ಹೇಳಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ಸಾಧಕರು ಈ ಸ್ವಚ್ಛ ಭಾರತ ಅಭಿಯಾನಕ್ಕೆ ರಾಯಭಾರಿಗಳಾಗಿದ್ದರು.ಕ್ರಿಕೆಟ್,ಸಿನಿಮಾ,ರಾಜಕೀಯ,ಸಾಹಿತ್ಯ,ಸಮಾಜಸೇವೆ ಹೀಗೆ ಹಲವು ಕ್ಷೇತ್ರಗಳ ಸೆಲೆಬ್ರೆಟಿಗಳು  ಪ್ರಧಾನಿಯವರ ಕರೆಗೆ ಓಗೊಟ್ಟು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಗಳಾದರು.ವಿವಿಧ ಸಂಘಟನೆಗಳು,ಯುವಕ ಸಂಘಗಳು,ಸೆಲೆಬ್ರೆಟಿಗಳ ಅಭಿಮಾನಿ ಬಳಗಗಳು ಸ್ವಯಂಪ್ರೇರಿತರಾಗಿ ಒಂದಷ್ಟು ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಸ್ವಚ್ಛ ಮಾಡತೊಡಗಿದರು.ಆದರೆ ಕೊನೆಯವರೆಗೂ ಈ ಸ್ವಚ್ಛತಾ ಅಭಿಯಾನವನ್ನು ಮುಂದುವರೆಸಿಕೊಂಡು ಹೋಗಿ ಸ್ವಚ್ಛ,ಸಮೃದ್ಧ ಭಾರತಕ್ಕೆ ಕಾರಣರಾಗಬೇಕಾದವರು ಈ ದೇಶದ ಶ್ರೀಸಾಮಾನ್ಯ ಪ್ರಜೆಗಳು.ಪ್ರಜೆಗಳು ಅಂದರೆ ಅಲ್ಲಿ ಎಲ್ಲರೂ ಬರುತ್ತಾರೆ.ಸಾಮಾನ್ಯ ಮನುಷ್ಯನಿಂದ ಹಿಡಿದು ರಾಷ್ಟ್ರಪತಿಯವರೆಗೂ ಎಲ್ಲರ ಮೇಲೂ ಸ್ವಚ್ಛ ಭಾರತದ ಹೊಣೆಗಾರಿಕೆ ಇದೆ.ಆದರೆ ಪ್ರಧಾನಿ ಕರೆಕೊಟ್ಟ ನಂತರದ ಕೆಲವು ತಿಂಗಳುಗಳ ಕಾಲ ಜನರಲ್ಲಿ ಈ ಸ್ವಚ್ಛ ಭಾರತದ ಉತ್ಸಾಹ ಇತ್ತೇ ವಿನ: ಅದು ನಮ್ಮ ದೈನಂದಿನ ಚಟುವಟಿಕೆಯ ಒಂದು ಭಾಗವಾಗಲೇ ಇಲ್ಲ.ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ನಾವು ಸ್ವಚ್ಛವಾಗಿಟ್ಟುಕೊಂಡರೂ ಸಾಕು.ಎಲ್ಲೆಲ್ಲೋ ಹೋಗಿ ಸ್ವಚ್ಛತಾ ಕಾರ್ಯ ಮಾಡಬೇಕಾಗಿಲ್ಲ.ಆದರೆ ಈಗೀಗ ನಾವು ನಿಧಾನಕ್ಕೆ ಈ ಅಭಿಯಾನವನ್ನು ಮರೆಯುತ್ತಿದ್ದೇವೇನೋ ಎಂದೆನಿಸುತ್ತಿದೆ.

swattcha bharata

ನಿಜ ಹೇಳಬೇಕೆಂದರೆ ಕೆಲವರಿಗೆ ಈ ಸ್ವಚ್ಛ ಭಾರತ ಅಭಿಯಾನ ಕೂಡಾ ಒಂದು ಶೋಕಿ.ಹಲವರು ಒಂದಷ್ಟು ಸಂಘಸಂಸ್ಥೆಗಳ ಹೆಸರಲ್ಲಿ ಯಾವಾಗಲೋ ಬಿಡುವಾದಾಗ ನಿರ್ದಿಷ್ಟ ಪ್ರದೇಶಕ್ಕೆ ತೆರಳಿ ಆ ಪ್ರದೇಶವನ್ನು ಶುಚಿಗೊಳಿಸಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ.ಹೆಚ್ಚಿನ ಸಂದರ್ಭಗಳಲ್ಲಿ ಅವರು ಆಯ್ಕೆ ಮಾಡಿಕೊಳ್ಳುವ ಸ್ಥಳ ಯಾವುದೋ ಪಾರ್ಕು,ದೇವಸ್ಥಾನದ ಮುಂಭಾಗ,ಊರಿನ ಬಸ್ ನಿಲ್ದಾಣ ಇಂಥ ಜನನಿಬಿಡ ಪ್ರದೇಶಗಳೇ ಆಗಿರುತ್ತವೆ.ಇಂಥ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ಮಾಡಿ ಒಂದಷ್ಟು ಫೋಟೋಗಳನ್ನು ತೆಗೆಸಿಕೊಂಡು ಅವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ,ಪತ್ರಿಕೆಗಳಲ್ಲಿ ಬರುವಂತೆ ಮಾಡಿ ಒಂದಷ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ.ಎಲ್ಲರೂ ಹಾಗೆ ಅಂತ ಅಲ್ಲ.ಆದರೆ ಇಂದು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವ ಬಹುತೇಕ ಸಂಘಟನೆಗಳ ಉದ್ದೇಶ ಪ್ರಚಾರ ಪಡೆಯುವುದೇ ಆಗಿದೆಯೇನೋ ಎಂದೆನಿಸುತ್ತದೆ.ಕೆಲವು ಸಂದರ್ಭಗಳಲ್ಲಿ ಇದರಲ್ಲಿ ನಾವೂ ಕೂಡಾ ಭಾಗಿಗಳಾಗುತ್ತೇವೆ.ಇನ್ನು ಕೆಲವು ರಾಜಕಾರಣಿಗಳಂತೂ ಪ್ರಚಾರ ಗಿಟ್ಟಿಸಿಕೊಳ್ಳಲು ಮೊದಲೇ ಸ್ವಚ್ಛವಾಗಿದ್ದ ಜಾಗದಲ್ಲಿ ಎಲ್ಲಿಂದಲೋ ತಂದು ಕಸ ಸುರಿಸಿ ಅದನ್ನು ಪೊರಕೆ ಹಿಡಿದು ಕ್ಲೀನ್ ಮಾಡುವ ನಾಟಕವಾಡಿ ಫೋಟೋ ತೆಗೆಸಿಕೊಂಡರು.

ಒಂದು ಕಡೆ ಪ್ರಧಾನಿ ಸ್ವಚ್ಛ ಭಾರತಕ್ಕೆ ಕರೆಕೊಟ್ಟಿದ್ದಾರೆ.ಇನ್ನೊಂದು ಕಡೆ ನಾವು ಕಂಡ ಕಂಡಲ್ಲಿ ಉಗುಳುತ್ತಲೇ ಇದ್ದೇವೆ.ಅಂಗಡಿಯಲ್ಲಿ ಬಾಳೆಹಣ್ಣು ತಿಂದು ಸಿಪ್ಪೆಯನ್ನು ರಸ್ತೆಗೆ ಎಸೆಯುತ್ತಲೇ ಇದ್ದೇವೆ.ಬಸ್ ನಲ್ಲೇ ಕುಳಿತೊಂಡು ಚಿಪ್ಸ್ ತಿಂದು ಪ್ಯಾಕೆಟ್ ಅನ್ನು ಕಿಟಕಿಯಿಂದ ಕೆಳಗೆ ನಿಲ್ದಾಣಕ್ಕೆ ಎಸೆಯುತ್ತಲೇ ಇದ್ದೇವೆ.ಹೇಗಿದ್ದರೂ ಮಹಾನಗರ ಪಾಲಿಕೆಯ ಕಾರ್ಮಿಕರು ಅದನ್ನು ಸ್ವಚ್ಛಗೊಳಿಸಲಿಕ್ಕಾಗಿಯೇ ಇದ್ದಾರಲ್ಲ ಎಂಬ ಭಾವನೆ ನಮ್ಮದು`ಸ್ವಚ್ಛತೆ ಕಾಪಾಡಿ’ ಎಂದು ಬರೆದಿದ್ದರೂ ಕಡ್ಲೆಕಾಯಿ ತಿಂದು ಸಿಪ್ಪೆಯನ್ನು ಬಸ್ ನೊಳಗೇ ಹಾಕುವ ಜನರು ಹಲವರಿದ್ದಾರೆ.ಎಲ್ಲರಿಗೂ ಕಾಣುವಂತೆ ‘ಸ್ವಚ್ಛತೆ ಕಾಪಾಡಿ’ ಎಂದು ಎಲ್ಲಾ ಸಾರ್ವಜನಿಕ ಶೌಚಾಲಯಗಳಲ್ಲಿ ಬರೆದಿದ್ದರೂ ಇನ್ನೂ ಅಲ್ಲಿನ ಗೋಡೆಗಳ ಮೇಲೆ ಬಾಯಿಗೆ ಬಂದದ್ದನ್ನು ಗೀಚುವ ಜನರು ಅನೇಕರಿದ್ದಾರೆ.ಇವೆಲ್ಲ ತುಂಬಾ ಸಣ್ಣ ಸಂಗತಿಗಳು ಅಂತ ನಮಗೆ ಅನ್ನಿಸಬಹುದು.ಆದರೆ ನಿಜವಾಗಿಯೂ ಸ್ವಚ್ಚಭಾರತ ಅಭಿಯಾನ ಯಶಸ್ವಿಯಾಗಬೇಕಾದರೆ ಇಂಥಹ ಸಣ್ಣ ಸಣ್ಣ ವಿಷಯಗಳಿಂದಲೇ ಸ್ವಚ್ಛತೆ ಆರಂಭವಾಗಬೇಕು.

ಸ್ವಚ್ಛತೆ ಎನ್ನುವುದು ಮೊದಲು ನಮ್ಮ ಮನಸ್ಸಿನಲ್ಲಿ ಬಂದರೆ ಒಳ್ಳೆಯದೇನೋ ಎಂದೆನಿಸುತ್ತದೆ.ಬಸ್ ನಿಲ್ದಾಣಗಳಲ್ಲಿ ಚಿಪ್ಸ್ ಪ್ಯಾಕೆಟ್ ಎಸೆಯುವ ಮುನ್ನ,ಶೌಚಾಲಯದ ಗೋಡೆಗಳ ಮೇಲೆ ಗೀಚುವ ಮುನ್ನ,ರಸ್ತೆ ಬದಿ ಮೂತ್ರವಿಸರ್ಜನೆ ಮಾಡುವ ಮುನ್ನ,ಕಂಡ ಕಂಡಲ್ಲಿ ಎಂಜಲು ತುಪ್ಪುವ ಮುನ್ನ,ಮನೆಯ ಕಸವನ್ನು ಇನ್ನೊಂದು ಬೀದಿಗೆ ತೆರಳಿ ರಸ್ತೆ ಪಕ್ಕದಲ್ಲಿ ಸುರಿಯುವ ಮುನ್ನ ನಾವು ಸ್ವಲ್ಪ ಆಲೋಚಿಸುವಂತಾದರೆ ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಕಷ್ಟವಿಲ್ಲ.ನಾನು ಮಾಡುತ್ತಿರುವುದು ಸರಿಯಿದೆಯಾ?ಇದರಿಂದ ಪರಿಸರದ ಸ್ವಚ್ಛತೆ ನಾಶವಾಗುವುದಿಲ್ಲವೇ?ದೇಶದ ಪ್ರಜೆಯಾಗಿ ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನನ್ನ ಕರ್ತವ್ಯವಲ್ಲವೇ?ಇಂಥ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಎದ್ದರೆ ಕಂಡ ಕಂಡಲ್ಲಿ ಗಲೀಜು ಮಾಡುವ ಮುನ್ನ ನಾವು ಹಲವು ಬಾರಿ ಯೋಚಿಸುತ್ತೇವೆ.

ಸಿಂಗಾಪುರವನ್ನು ಜಗತ್ತಿನ ಅತೀ ಸುಂದರ,ಸ್ವಚ್ಛ ದೇಶ ಎಂದು ಕರೆಯುತ್ತಾರೆ.ಆ ದೇಶ ಅಷ್ಟು ಸ್ವಚ್ಛವಾಗಿರಲು ಯಾವನೋ ದೇವಪುರುಷ ಕಾರಣನಲ್ಲ.ಅಲ್ಲಿನ ಪ್ರಜೆಗಳೇ ಕಾರಣ.ಸ್ವಚ್ಛತೆ ಎನ್ನುವುದು ಅಲ್ಲಿನ ಜನರ ಮೈಮನಗಳಲ್ಲಿ ಹಾಸುಹೊಕ್ಕಾಗಿದೆ.ಕಂಡ ಕಂಡಲ್ಲಿ ಉಗುಳುವುದು,ಕಸ ಹಾಕುವುದನ್ನು ಅಲ್ಲಿನ ಜನರು ಎಂದಿಗೂ ಮಾಡಲಾರರು.ಒಂದೊಮ್ಮೆ ಗಲೀಜು ಮಾಡಿದರೂ ತಕ್ಷಣವೇ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸುತ್ತಾರೆ. ಸಿಂಗಾಪುರ ಎಂದೆಲ್ಲ ಅನೇಕ ಪಾಶ್ಚಾತ್ಯ ದೇಶಗಳಲ್ಲೂ ಸ್ವಚ್ಛತೆಯ ಬಗ್ಗೆ ಜನರು ಬಹಳ ಜಾಗರೂಕರಾಗಿದ್ದಾರೆ.ನಮ್ಮ ದೇಶದಲ್ಲಿಯೂ ಅಷ್ಟೇ ಮೊದಲು ಸ್ವಚ್ಛತೆ ನಮ್ಮೊಳಗಿಂದಲೇ ಬರಬೇಕು.ಸ್ವಚ್ಛತೆ ಎಂದರೆ ಕೈಗೆ ಕಟ್ಟಿಕೊಳ್ಳುವ ವಾಚ್ ನಂತಿರಬೇಕು.ಅಂದರೆ ಮೊದಮೊದಲು ವಾಚ್ ಕಟ್ಟಿಕೊಳ್ಳಲು ಶುರು ಮಾಡಿದಾದ ವಾಚ್ ನಮ್ಮ ಕೈಮೇಲೆ ಇದ್ದಷ್ಟು ಹೊತ್ತೂ ಅದು ಇರುವುದು ನಮಗೆ ಗೊತ್ತಾಗುತ್ತದೆ.ಆದರೆ ದಿನ ಕಳೆದಂತೆ ಕೈಗೆ ಕಟ್ಟಿಕೊಳ್ಳುತ್ತೇವೆಯೇ ಹೊರತು ಅದು ಕೈಯಲ್ಲಿದೆ ಎಂದು ನಮಗೆ ಅನ್ನಿಸುವುದೇ ಇಲ್ಲ.ಸಮಯ ನೋಡುವಾಗ ಮಾತ್ರ ಅದರ ನೆನಪಾಗಿ ಕೈಗಡಿಯಾರ ನೋಡುತ್ತೇವೆ.ಸ್ವಚ್ಛತೆಯೂ ಹಾಗೆಯೇ.ಮೊದಮೊದಲು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು,ನಾವು ಓಡಾಡುವ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣ ಶುಚಿಯಾಗಿಟ್ಟುಕೊಳ್ಳುವುದು ತುಸು ಕಠಿಣವಾಗಬಹುದು.ಆದರೆ ದಿನಗಳು ಕಳೆದಂತೆ,ಪ್ರತಿ ದಿನವೂ ನಾವು ಸ್ವಚ್ಛತೆ ಕಾಪಾಡಿಕೊಂಡು ಬಂದರೆ ಅದು ನಮಗೇ ಅರಿವಿಲ್ಲದಂತೆ ನಮ್ಮ ಜೀವನದ ಒಂದು ಭಾಗವಾಗಿ ಬಿಡುತ್ತದೆ.ಆಗ ನಮಗೇ ಅರಿವಿಲ್ಲದಂತೆ ಚಿಪ್ಸ್ ಪ್ಯಾಕೆಟ್ ಅನ್ನು ರಸ್ತೆಗೆ ಎಸೆಯುವ ಬದಲು ಕಸದ ಬುಟ್ಟಿಗೆ ಹಾಕುತ್ತೇವೆ.

Swatccha bharat- Gandhiಪ್ರಧಾನಿಯೂ ಈ ದೇಶದ ಪ್ರಜೆಯೇ ತಾನೆ.ಅವರೂ ಬಂದು ಕಸ ಗುಡಿಸಲಿ ಎಂದು ನಾವು ಪ್ರತೀ ಬಾರಿಯೂ ನಿರೀಕ್ಷೆ ಮಾಡಿದರೆ ಅದು ನಮ್ಮ ಮೂರ್ಖತನವಾಗುತ್ತದಷ್ಟೇ.ಅವರು ಈ ದೇಶದ ಎಲ್ಲ ಪ್ರಜೆಗಳ ಪ್ರತಿನಿಧಿಯಾಗಿ ಸ್ವಚ್ಛ ಭಾರತಕ್ಕೆ ಕರೆಕೊಟ್ಟಿದ್ದಾರೆ.ಮತ್ತು ಅವಕಾಶ ಸಿಕ್ಕಾಗಲೆಲ್ಲ ಅದರಲ್ಲಿ ಭಾಗಿಯಾಗಿದ್ದಾರೆ ಕೂಡಾ.ಅವರ ಕನಸನ್ನು ಮತ್ತು ಬಾಪೂಜಿಯ ಕನಸನ್ನು ನಿಜವಾಗಿಸುವುದು ನಮ್ಮ ಕೈಯಲ್ಲಿದೆಯಷ್ಟೇ.ನಮ್ಮ ದೇಶ ಸ್ವಚ್ಛವಾಗಿದ್ದರೆ ಅದರಿಂದ ಲಾಭ ನಮಗೇ ಹೊರತು ಮತ್ಯಾರಿಗೂ ಅಲ್ಲ.ಪ್ರತಿ ಪ್ರಜೆಯೂ ಸ್ವಯಂಪ್ರೇರಿತನಾಗಿ ತನ್ನ ಸಮಾಜವನ್ನು ಶುಚಿಯಾಗಿಟ್ಟುಕೊಂಡರೆ ಆಗ ಯಾವುದೋ ಸಂಘ ಸಂಸ್ಥೆಗಳು ಸ್ವಚ್ಛಭಾರತ ಅಭಿಯಾನ ಮಾಡುವ ಅಗತ್ಯವೇ ಇಲ್ಲ.ಮಹಾರಾಷ್ಟ್ರ ಸರ್ಕಾರ ರಸ್ತೆಯಲ್ಲಿ ಉಗುಳುವವರಿಗೆ,ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ಗರಿಷ್ಠ 5000 ರೂಪಾಯಿಗಳವರೆಗೆ ದಂಡ ವಿಧಿಸುವ ತೀರ್ಮಾನಕ್ಕೆ ಬಂದಿದೆಯಂತೆ..ಆದರೆ ನಮ್ಮ ಸ್ಥಳವನ್ನು ನಾವು ಶುಚಿಯಾಗಿಟ್ಟುಕೊಂಡರೆ ದಂಡ ಕಟ್ಟುವ ಅಗತ್ಯವೇ ಇಲ್ಲ.ಇಂಥ ಕಾನೂನು ರಾಷ್ಟ್ರಾದ್ಯಂತ ಜಾರಿಯಾಗಲು ಪ್ರಜೆಗಳು ಬಿಡಲಾರರು ಎಂದು ಆಶಿಸೋಣ.

ಇನ್ನು ಕೆಲವರು ಸ್ವಚ್ಛ ಭಾರತ ಅಭಿಯಾನವೆನ್ನುವುದು ಮೋದಿ ಸರ್ಕಾರ ಈಗಾಗಲೇ ಶೋಷಣೆಗೊಳಗಾಗಿರುವ ಕಾರ್ಮಿಕ ವರ್ಗದವರನ್ನು ಮತ್ತಷ್ಟು ಶೋಷಿಸಲು ಹುಡುಕಿಕೊಂಡ ಮತ್ತೊಂದು ಮಾರ್ಗ ಎನ್ನುತ್ತಿದ್ದಾರೆ.ಇದು ಅವರ ಸಂಕುಚಿತ ಮನೋಭಾವವನ್ನು ಸೂಚಿಸುತ್ತದಷ್ಟೇ.ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕಾರ್ಮಿಕನಿಂದ ಹಿಡಿದು ಧನಿಕನವರೆಗೂ ಎಲ್ಲರ ಆದ್ಯ ಕರ್ತವ್ಯ.ಸ್ವಚ್ಛ ಭಾರತದಲ್ಲೂ ರಾಜಕೀಯ ಮಾಡದಿದ್ದರೆ ಒಳ್ಳೆಯದು.ಪ್ರಜೆಗಳಾದ ನಾವು ಸ್ವಚ್ಛ ಭಾರತ ಅಭಿಯಾನವನ್ನು ಕೆಲವೇ ಕೆಲವು ತಿಂಗಳುಗಳಿಗೆ ಸೀಮಿತಗೊಳಿಸಿ ಪ್ರಧಾನಿಯವರ ಮಾತನ್ನು ಮರೆಯದಿರೋಣ.ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ ಸಮಾಜವನ್ನು ಸಾಧ್ಯವಾದಷ್ಟು ಶುಚಿಯಾಗಿರಿಸಿ ಭಾರತವನ್ನು ಸ್ವಚ್ಛಭಾರತವನ್ನಾಗಿಸಿ ಗಾಂಧೀಜಿಯವರ ಕನಸನ್ನು ಆದಷ್ಟು ಬೇಗ ನನಸು ಮಾಡೋಣ.

 

– ಲಕ್ಷ್ಮೀಶ ಜೆ.ಹೆಗಡೆ

3 Responses

  1. Ganesh Bhat says:

    ಸ್ವಚ್ಛ ಭಾರತದ ಕಲ್ಪನೆ ಸಾಕಾರ ಆಗಬೇಕೆಂದರೆ ಮೊತ್ತ ಮೊದಲು ಪ್ಲಾಸ್ಟಿಕ್ ಚೀಲಗಳನ್ನು ಮತ್ತು ಪ್ಲಾಸ್ಟಿಕ್ ಚೀಲಗಳಲ್ಲಿ ತಿನಿಸುಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
    ರಸ್ತೆಗಳನ್ನು ಸ್ವಚ್ಚ ಮಾಡಿದಷ್ಟೇ ಆಸ್ಥೆಯನ್ನು ನಮ್ಮ ಮನೆ ಮತ್ತು ಆವರಣವನ್ನು ಸ್ವಚ್ಚ ಮಾಡುವುದರಲ್ಲಿಯೂ ಪ್ರದರ್ಶಿಸಬೇಕು. ಬಹಳಷ್ಟು ಜನ ಸ್ವಚ್ಚ ಭಾರತ ಆನ್ದೋಳನಗಳಲ್ಲಿ ಗುಂಪಿನಲ್ಲಿ ರಸ್ತೆ ಸ್ವಚ್ಚ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮತ್ತೆ ತಮ್ಮ ಮನೆ ಸ್ವಚ್ಚತೆಯನ್ನು ಕೆಲಸಗಾರರಿಗೆ ವಹಿಸುತ್ತಾರೆ.
    ಇಂಥ ಮನೋಭಾವ ಸಲ್ಲದು.

  2. savithri s bhat says:

    ನಾವೂ ನಿಮ್ಮೊ೦ದಿಗೆ ಇದ್ದೇವೆ ಭಾರತ ಮಾತಾಕಿ ಜೈ .

  3. ಹೊನ್ನೇಶ್ ಕುಮಾರ್ says:

    ನಾನೂ ಸಹ ನನ್ನ ಸ್ವಚ್ಛ ಭಾರತದೊಂದಿಗೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: