ಹಲಸಿನಹಣ್ಣುಂ ಗೆಲ್ಗೆ !

Share Button
Hemamala. B, DGM, Kluber Lubrication (I) Pvt.Ltd. Mysore

ಹೇಮಮಾಲಾ.ಬಿ

ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ‘ಹಲಸು ಮತ್ತು ಮಾವಿನ ಮೇಳ’ ಇದ್ದಿತ್ತು . ನಾವು, ಸ್ವಲ್ಪ ಮಾವಿನಹಣ್ಣುಗಳನ್ನು ಮತ್ತು ಒಂದು ಡಜನ್ ಹಲಸಿನ ಹಣ್ಣಿನ ಬಿಡಿಸಿದ ತೊಳೆಗಳನ್ನುಕೊಂಡಿದ್ದೆವು. ಅದ್ಯಾವುದೋ ತಳಿ, ಸ್ವಲ್ಪ ಕೆಂಬಣ್ಣವಿತ್ತು. ರುಚಿ ಸುಮಾರಾಗಿತ್ತು. ನಮ್ಮ ಬಗ್ಗೆ ನಾವೇ ‘ಅನುಕಂಪ’ ಸೂಚಿಸಿಕೊಂಡು ತಿಂದೆವು.

ಹಲಸಿನ ಹಣ್ಣು ಧಾರಾಳವಾಗಿ ಸಿಗುವ ಕರಾವಳಿ ಮತ್ತು ಮಲೆನಾಡಿನವರಿಗೆ ನಗರದಲ್ಲಿ ತೊಳೆ-ಲೆಕ್ಕದಲ್ಲಿ ಹಲಸಿನಹಣ್ಣು ಕೊಂಡು ತಿನ್ನುವಾಗ ಸ್ವಾನುಕಂಪವಾಗುವುದಕ್ಕೆ ಸಕಾರಣವಿದೆ. ಯಾಕೆಂದರೆ, ಮಲೆನಾಡು-ಕರಾವಳಿಗಳಲ್ಲಿ, ಕೆಲವರ ತೋಟದಲ್ಲಿ ಮಾರ್ಚ್ ತಿಂಗಳ ಕೊನೆಯಲ್ಲಿ ಎಳೆ ಹಲಸು ಸಿಗಲಾರಂಭಿಸಿದರೆ ಹೆಚ್ಚು ಕಡಿಮೆ ಆಗಸ್ಟ್ ವರೆಗೂ ತರಾವರಿ ಹಲಸಿನಕಾಯಿ/ಹಣ್ಣುಗಳು ಲಭ್ಯ. ಹಾಗಾಗಿ ಅಲ್ಲಿನ ಮನೆಗಳಲ್ಲಿ 5-6 ತಿಂಗಳ ವರೆಗೆ ಕಡ್ಡಾಯವಾಗಿ ಹಲಸಿನ ಮೇಳವಿರುತ್ತದೆ! ಎಷ್ಟೆಂದರೆ, ಚಿಕ್ಕವರಿರುವಾಗ, ನಮಗೆ ‘ಇದು ಸೇರುವುದಿಲ್ಲ…. ಹಲಸಿನಕಾಯಿ ಬೋರಾಯ್ತು.. ಬೇರೆ ತರಕಾರಿಯಲ್ಲಿ ಅಡುಗೆ.ತಿಂಡಿ ಮಾಡಬಾರದೇ ಎಂದು‘ ಅಮ್ಮ/ಅಜ್ಜಿಯರಲ್ಲಿ ಜಗಳ ಕಾಯುವಷ್ಟು!

ಈಗ ಆ ಕಾಲ ಮರಳಿ ಬರಬಾರದೇ ಅನಿಸುತ್ತದೆ. ಕಾಲ ಮರಳಿ ಬಂದರೂ ನಮ್ಮ ಆರೋಗ್ಯಕ್ಕೆ ಹಿಂದಿನಷ್ಟು ಹಲಸಿನ ಕಾಯಿ/ಹಣ್ಣುಗಳ ಅಡುಗೆಯನ್ನು ಅರಗಿಸಲು ತಾಕತ್ತಿಲ್ಲ ಎಂಬುದು ಸತ್ಯ.

Jackfruit

ನಮ್ಮ ಮನೆಯ ಹಲಸಿನಮೇಳ ಹೀಗಿರುತಿತ್ತು. ಬೆಳಗ್ಗೆ ತಿಂಡಿಗೆ ಹಲಸಿನ ಕಾಯಿಯ ದೋಸೆ ಅಥವಾ ಹಲಸಿನ ಹಣ್ಣಿನಕಡುಬು. ಮಧ್ಯಾಹ್ನಕ್ಕೆ ಹಲಸಿನಕಾಯಿಯ ಪಲ್ಯ, ಸಾಂಬಾರು, ಸಂಜೆಗೆ ಹಲಸಿನ ಕಾಯಿ ಚಿಪ್ಸ್. ಇನ್ನು ಹೊಸರುಚಿ ಬಯಸುವವರಿಗೆ , ಹಲಸಿನಕಾಯಿಯ ಮಂಚೂರಿಯೂ ಒ.ಕೆ. ಸಿಹಿ ಬೇಕಿದ್ದರೆ ಹಲಸಿನ ಹಣ್ಣಿನ ಮುಳಕ(ಸುಟ್ಟೇವು), ಹಲಸಿನ ಹಣ್ಣಿನ ಪಾಯಸ. ಖಾರವಾಗಿ ಹಲಸಿನಕಾಯ ಹಪ್ಪಳವನ್ನು ಬೆಂಕಿಯಲ್ಲಿ ಸುಟ್ಟು, ಕೊಬ್ಬರಿ ಹೋಳಿನ ಜತೆಗೆ ಸೇರಿಸಿ ತಿಂದರೆ ಚೆನ್ನ.

ಶಾಲೆಗೆ ರಜ ಇರುವಾಗ ಮಕ್ಕಳಿಗೆ, ಹಿರಿಯರ ಮಾರ್ಗದರ್ಶನದಲ್ಲಿ ಹಲಸಿನ ಕಾಯಿಯ ಹಪ್ಪಳ ಮಾಡುವ ಪ್ರಾಜೆಕ್ಟ್. ಇನ್ನೂ ಹೆಚ್ಚುವರಿ ಇರುವ ಹಲಸಿನ ಕಾಯಿಯನ್ನು ಹೆಚ್ಚಿ ತೊಳೆಗಳನ್ನು ಉಪ್ಪು ನೀರಿನಲ್ಲಿ ಹಾಕಿ ಶೇಖರಿಸಿದರೆ, ಮಳೆಗಾಲಸಲ್ಲಿ ಅದರಿಂದೆ ತಯಾರಿಸಿಲಾಗುವ ಉಂಡುಲಕಾಳು, ಸೊಳೆರೊಟ್ಟಿ, ಪಲ್ಯಗಳ ಹಬ್ಬ. ಇನ್ನು ಹಲಸಿನ ಹಣ್ಣು ಜಾಸ್ತಿಯಿದ್ದರೆ ತೊಳೆಗಳನ್ನು ಬಿಡಿಸಿ, ಜ್ಯಾಮ್, ಹಲ್ವಾದಂತೆ ಕಾಯಿಸಿ ಇಟ್ಟರೆ ಹಲಸಿನ ಹಣ್ಣಿನ ‘ಬೆರಟಿ’ ಲಭ್ಯ. ಆಮೇಲೆ ಇದರಿಂದ ಪಾಯಸ ತಯಾರಿ..

ಇನ್ನು ಈ ತರಾವರಿ ಹಲಸಿನಮರಗಳ ಹೆಸರೋ ಬಹಳ ಸೊಗಸಾಗಿರುತ್ತವೆ. ಸಸ್ಯಶಾಸ್ತ್ರೀಯವಾದ ಹೆಸರು ಏನಾದರಾಗಿರಲಿ..We do not care! ನಮಗೆ ಅನ್ವರ್ಥನಾಮ , ಅಂಕಿತನಾಮಗಳೇ ಆತ್ಮೀಯವಾಗುತ್ತವೆ. ಉದಾಹರಣೆಗೆ, ನಮ್ಮ ತೋಟದ ಹಲಸಿನಮರಗಳ ಹೆಸರು ಹೀಗಿವೆ:

‘ಮೋಂಟ’ – ಅದರ ಕಾಯಿಗಳು ಸೊಟ್ಟವಾಗಿರುತ್ತವೆ.
‘ಕಯ್ಪೆ‘ – ಸ್ವಲ್ಪ ಕಹಿ ರುಚಿ ಇರುವ ಹಲಸಿನ ಹಣ್ಣುಗಳು.
‘ಗಡಿಬಕ್ಕೆ’ – ಪಕ್ಕದ ತೋಟದವರ ಗಡಿಯಲ್ಲಿದೆ
‘ದೋಸೆತುಳುವ‘- ತುಳುವ ಎಂಬ ಪ್ರಭೇದದ ಹಲಸಿನ ಕಾಯಿ, ದೋಸೆಗೆ ಚೆನ್ನಾಗಿರುತ್ತದೆ,
‘ಪಂಚಸಾರೆ’– ಈ ಹಲಸಿನ ಹಣ್ಣಿನ ತೊಳೆಗಳಿಂತಲೂ ಅದರ ಎಳೆ ತೊಳೆ ಅಥವಾ ‘ಪಂಚಸಾರೆ ‘ ಹೆಚ್ಚು ಸವಿಯಾಗಿರುತ್ತವೆ. ಚಿತ್ರ ನೋಡಿ.Jackfruit-Panchsare

 

ಇವಿಷ್ಟು, ಕೇವಲ ನನ್ನ ಅರಿವಿಗೆ ಬಂದು, ನೆನಪಿನಲ್ಲಿ ಇರುವ ಹಲಸು ಪುರಾಣ! ಹಲಸಿನಹಣ್ಣುಂ ಗೆಲ್ಗೆ!

 

– ಹೇಮಮಾಲಾ.ಬಿ

4 Responses

  1. Bharathi says:

    ಬಾಯಲ್ಲಿ ನೀರು.. ಮನದ ಹಾಳೆಯಲ್ಲಿ ಊರಿನ ಹಲಸಿನ ಮೇಳದ ಚಿತ್ತಾರ.. like emoticon smile emoticon ಈ ನಗರ ಜೀವನದಲ್ಲಿ ಪಡೆದುಕೊ೦ಡಿದ್ದಕ್ಕಿ೦ತ ಕಳೆದುಕೊ೦ಡಿದ್ದೇ ಹೆಚ್ಚು..frown emoticon

  2. ಸುರೇಖಾ ಭೀಮಗುಳಿ says:

    “ಹಲಸಿನ ಹಣ್ಣು” ಎಂದಾಗ ಬಾಯಿ ನೀರೂರುತ್ತದೆ. ನಾಸಿಕಾಗ್ರ ಚುರುಕಾಗುತ್ತದೆ. ಅದನ್ನು ಹಣ್ಣು ಎನ್ನುವುದಕ್ಕಿಂತ ಆಹಾರವಾಗಿ ತಿಂದು ಬೆಳೆದವರು ನಾವಲ್ಲವೇ ? ನಮ್ಮ ಮನೆಯಲ್ಲಿ ಅದರ ಪದಾರ್ಥ ಮಾಡುವುದಕ್ಕಿಂತ ಹಣ್ಣನ್ನೇ ತಿನ್ನುವುದಕ್ಕೆ ಹೆಚ್ಚು ಇಷ್ಟಪಡುತ್ತಿದ್ದೆವು. (ಶ್ರಮ ಪಡುವುದಕ್ಕೆ ಉದಾಸೀನ ಎಂದು ಬೇಕಾದರೆ ತಿಳಿದುಕೊಳ್ಳಿ). ಊಟಕ್ಕೂ ಮೊದಲು ಸಾಮಾನ್ಯ ಮಧ್ಯಾನ್ಹ 12 ರ ಹೊತ್ತಿಗೆ -ಸಂಜೆ 6 ಗಂಟೆಯ ಹೊತ್ತಿಗೆ- ಪ್ರತಿದಿನವೂ ನಮ್ಮ ಮನೆಯಲ್ಲಿ ಹಲಸಿನ ಹಣ್ಣಿನ ಮೇಳ ! ಪೇಟೆ ಸೇರಿದ ಮೇಲೆ “ಇದನ್ನೂ ದುಡ್ಡು ಕೊಟ್ಟು ತಿನ್ನಬೇಕಾ ?” ಎಂಬ ಪ್ರಶ್ನೆ ಮನದಲ್ಲಿ ಮೂಡಿ, ಕೊಂಡು ತಿನ್ನುವುದಕ್ಕೆ ಮನಸ್ಸು ಹಿಂಜರಿಯುತ್ತಿತ್ತು. ಊರಿಗೆ ಹೋಗುವುದೇ ಅಪರೂಪವಾದ ಮೇಲೆ ಕೊಂಡು ತಿನ್ನದೇ ಬೇರೆ ವಿಧಿಯಿಲ್ಲ ಎಂಬ ಯೋಚನೆ ಮನದಲ್ಲಿ ಮೂಡಿತು. ಈಗ ಸಕತ್ತಾಗಿಯೇ ಹಲಸು ಸಮಾರಾಧನೆ ನಡೆಯುತ್ತದೆ… ಬೆಲೆ ಏನೇ ಇರಲಿ. ಇಡೀ ಹಣ್ಣು ಮನೆ ಸೇರುತ್ತದೆ – ಹಲಸಿನ ಸೀಸನ್ ಮುಗಿಯುವವರೆಗೂ ! ಅಂಗಡಿಯವನೊಪ್ಪಿದರೆ ಇಡೀ ಹಣ್ಣನ್ನು ಅಲ್ಲೇ ಹೆಚ್ಚಿ ,ತಂದು , ಬಿಡಿಸಿ-ನಾಲ್ಕು ದಿನ ತಂಗಳು ಪೆಟ್ಟಿಗೆಯಲ್ಲಿ ಭದ್ರವಾಗಿಟ್ಟು ಜೇನಿನ ಜೊತೆ ಮುಕ್ಕುತ್ತೇವೆ….. ಊಟದ ಬದಲಿಗೆ ! ಜೇನಿನ ಜೊತೆ ತಿಂದರೆ ಅಜೀರ್ಣವಾಗುವುದಿಲ್ಲ ಎಂಬ ವಿಷಯವನ್ನು ಕರಡಿಯ ಕಥೆ ಓದಿ ತಿಳಿದುಕೊಂಡಿದ್ದೇವೆ !!!! ಎಷ್ಟೆಂದರೂ ಪರಂಪರೆ ಮುಂದುವರೆಸಿಕೊಂಡು ಹೋಗುವುದಕ್ಕೆ ಮಕ್ಕಳಿಗೆ ತರಬೇತಿ ನೀಡುವ ಜವಾಬ್ದಾರಿಯೂ ನಮ್ಮ ಮೇಲಿದೆಯಲ್ಲವೇ ! (??!!)

  3. ಹಲಸಿನ ಮರಗಳ ಹೆಸರುಗಳು ತುಂಬಾ ಚೆನ್ನಾಗಿವೆ . ಹಣ್ಣು ಅದೆಷ್ಟೇ ರುಚಿ ಇದ್ದರೂ ಬಿಡಿಸುವ ಕೆಲಸ ಯಾರಿಗೂ ಬೇಡ.ಬರಹ ಚೆನ್ನಾಗಿದೆ .

  4. ಹಲಸಿನ ಹಣ್ಣಿನ ಹೆಸರು ಬಂದರೆ ನಾನದರ ಫ್ಯಾನು
    ನಮ್ಮ ಇಂಬ ಬೊಕ್ಕೆ ಎಂಬ ಪ್ರಭೇಧ ಕೇಳಿದ್ದೆ
    ಇಂಬ ಕೊಟ್ರೆ ನಾಲ್ಕು ಸೊಳೆ ತಿಂಬ ಅಂತಾರಾದರೂ ಅದು ಗಂಟಲಲ್ಲಿ ಸಿಕ್ಕಿದರೆ ಅನುಭವಿಗಳಿಗೇ ಚಳ್ಳೆ ಹಣ್ಣು
    ನಾವು ಹೈದ್ರಾಬಾದಿನಲ್ಲಿದ್ದಾಗ ಒಮ್ಮೆ ಹೊರಗಡೆ ವಾಯು ಸಂಚಾರಕ್ಕೆ ಹೊರಟಾಗ ಹಲಸಿನ ಹಣ್ಣು ನೋಡಿದೆವು
    ಸರಿ ಅವನಲ್ಲಿ ತಗೊಂಡೆವು ( ರೇಟು ಕೇಳಬೇಡಿ) ಸ್ವಲ್ಪ ಮುಂದೆ ಹೋದರೆ ಮತ್ತೊಬ್ಬ ಮಾರಾಟಗಾರ ( ಅದು ಆ ವರ್ಷದ ಮೊದಲ ಸಾರಿಯ ಹಣ್ಣು) ಅವನ ಹಣ್ಣಿನ ಬಣ್ಣ ಸೊಗಸಾಗಿತ್ತು
    ಹಾಗೇ ಆದಿನ ತುಂಬಾ ಹಣ್ಣು ಕೊಂಡಿದ್ದು ನೆನಪಿಗೆ ಬಂತು

    ಊರಲ್ಲಿ ಕೇಳಿದರೆ ಬೆಚ್ಚಿಬೀಳುವಷ್ಟು. ಈ ..ಹಣ್ಣಿನ ಹುಚ್ಚು
    ಕೇಳಿದಷ್ಟು ಕೊಟ್ಟು ಮನೆಗೆ ತಂದು ತಿನ್ನಲಾಗದೇ ಫ್ರಿಜ್ ನಲ್ಲಿಟ್ಟು ಮಾರನೆಯ ದಿನ ಆ ಸೊಳೆ ಫ್ರಿಜ್ ನ ನೀರೆಲ್ಲಾ ಕುಡಿದು
    ತಿನ್ನದಂತಾಗಿದ್ದೂ ನಿಜ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: