ರುಚಿ, ಆರೋಗ್ಯಕ್ಕೆ ಸಬ್ಬಕ್ಕಿ..
ಹೆಚ್ಚಾಗಿ ಪಾಯಸ ತಯಾರಿಕೆಯಲ್ಲಿ ಬಳಕೆಯಾಗುವ ಬಿಳಿ ಬಣ್ಣದ ಮುತ್ತುಗಳಂತಿರುವ ಸಾಗು ಅಥವಾ Sago ಎಲ್ಲರಿಗೂ ಪರಿಚಿತ. ಇದನ್ನು ಸಬ್ಬಕ್ಕಿ, ಸೀಮೆ ಅಕ್ಕಿ, ಸಾಗಕ್ಕಿ, ಸಾಬುದಾನಿ, ಸಾಬಕ್ಕಿ, ಜವ್ವರಿಶಿ ಇತ್ಯಾದಿ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಬಿಳಿಬಣ್ಣದ ಕಾಳಿನಂತೆ ಇದ್ದರೂ ಬೆಂದ ಮೇಲೆ ಪಾರದರ್ಶಕವಾದ ಗೋಳಗಳಂತೆ ಕಾಣುವುದು ಸಬ್ಬಕ್ಕಿಯ ವಿಶೇಷತೆ.
ಸಬ್ಬಕ್ಕಿಯು ಸುಲಭವಾಗಿ ಜೀರ್ಣವಾಗುವ ಪಿಷ್ಟವನ್ನೊಳಗೊಂಡಿದೆ. ಹಾಗಾಗಿ ಇದನ್ನು ಅಶಕ್ತರಿಗೆ ಗಂಜಿಯ ರೂಪದಲ್ಲಿ ಆಹಾರವಾಗಿ ಕೊಡುತ್ತಾರೆ. ಶಿಶು ಆಹಾರವಾಗಿಯೂ ಬಳಸುತ್ತಾರೆ. ಇನ್ನು ರುಚಿ ಹೆಚ್ಚಿಸಿ ವಡೆ, ದೋಸೆ, ಉಪ್ಪಿಟ್ಟು ಮಾಡಿಯೂ ತಿನ್ನಬಹುದು. ಕೆಲವೆಡೆ ವ್ರತ-ಉಪವಾಸದ ಆಹಾರವಾಗಿಯೂ ಸಬ್ಬಕ್ಕಿಯನ್ನು ಬಳಸುವ ಪದ್ಧತಿಯಿದೆ. ಪಾಯಸ, ಉಪ್ಪಿಟ್ಟು ಇತ್ಯಾದಿಗಳಿಗೆ ಸಬ್ಬಕ್ಕಿಯನ್ನು ಉಪಯೋಗಿಸುವ ಮೊದಲು 4 ಗಂಟೆಗಳ ನೀರಿನಲ್ಲಿ ನೆನೆಸಿದರೆ ಉತ್ತಮ. ಹದವಾಗಿ ಬೇಯುತ್ತದೆ ಮತ್ತು ಬೇಗನೆ ತಳ ಹಿಡಿದು ಸೀದು ಹೋಗುವುದನ್ನು ತಪ್ಪಿಸಬಹುದು.
ಭಾರತದಲ್ಲಿ ಮರಗೆಣಸಿನ ಹಿಟ್ಟಿನಿಂದ ಸಬ್ಬಕ್ಕಿಯನ್ನು ತಯಾರಿಸುತ್ತಾರೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕೆಲವೆಡೆ ಮರಗೆಣಸಿನ ಬೆಳೆ ಕಂಡುಬರುತ್ತದೆಯಾದರೂ ಸಬ್ಬಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸುವ ಹಿರಿಮೆ ತಮಿಳುನಾಡಿಗೆ ಸಲ್ಲುತ್ತದೆ.
ಬಲಿತ ಮರಗೆಣಸನ್ನು ಚೆನ್ನಾಗಿ ತೊಳೆದು, ಸಿಪ್ಪೆಯನ್ನು ಬೇರ್ಪಡಿಸುತ್ತಾರೆ. ಶುಚಿಗೊಳಿಸಿದ ಮರಗೆಣಸಿನ ಹೋಳುಗಳನ್ನು ನೀರು ಹಾಕಿ ರುಬ್ಬಿ ಅಥವಾ ಕ್ರಷ್ ಮಾಡಿ ಹಾಲನ್ನು ತೆಗೆಯುತ್ತಾರೆ. ಈ ಹಾಲನ್ನು ಕಡಾಯಿಯಲ್ಲಿ 4 ತಾಸು ಇರಿಸಿದಾದ ಪಿಷ್ಟದ ಅಂಶವು ಪಾತ್ರೆಯ ತಳದಲ್ಲಿ ಸಂಗ್ರಹವಾಗಿ ನೀರು ಮೇಲೆ ನಿಂತಿರುತ್ತದೆ. ನೀರನ್ನು ಬೇರ್ಪಡಿಸಿ, ಶೋಧಿಸಿದಾಗ ಮರಗೆಣಸಿನ ಹಿಟ್ಟು ಸಿಗುತ್ತದೆ. ಇದನ್ನು ತಕ್ಕುದಾದ ಸಬ್ಬಕ್ಕಿ ತಯಾರಿಕೆಯ ಯಂತ್ರದ ಮೂಲಕ ಹಾಯಿಸಿ ಕಾಳುಗಳನ್ನಾಗಿ ಮಾಡಿ ಒಣಗಿಸಿದಾಗ ‘ಸಬ್ಬಕ್ಕಿ’ ಸಿದ್ಧವಾಗುತ್ತದೆ.
ಕೆಲವು ಪೌರ್ವಾತ್ಯ ದೇಶಗಳಲ್ಲಿ, ತಾಳೆಯ ವರ್ಗಕ್ಕೆ ಸೆರಿದ Metroxylon Sagu ಎಂಬ ಮರದ ಕಾಂಡವನ್ನು ಸೀಳಿ ಅದರಿಂದ ಪಿಷ್ಟವನ್ನು ಸಂಗ್ರಹಿಸಿ, ಶುದ್ಧೀಕರಿಸಿ, ಸಬ್ಬಕ್ಕಿಯನ್ನು ತಯಾರಿಸುತ್ತಾರೆ. ಇದಕ್ಕೆ Palm Sago ಅಂತ ಹೆಸರು.
ಸಬ್ಬಕ್ಕಿಯ ಮುಖ್ಯ ಉಪಯೋಗ ಆಹಾರ ಪದಾರ್ಥವಾಗಿ. ಏಷ್ಯಾದ ಕೆಲವು ದೇಶಗಳಲ್ಲಿ ಅಕ್ಕಿಗೆ ಪರ್ಯಾಯವಾಗಿ ಸಬ್ಬಕ್ಕಿಯನ್ನು ದೈನಂದಿನ ಅಡುಗೆಯಲ್ಲಿ ಬಳಸುವವರೂ ಇದ್ದಾರೆ. ಆದರೆ, ಅದೇಕೊ, ನಮ್ಮಲ್ಲಿ ಸಬ್ಬಕ್ಕಿಯ ಪಾಯಸ ಮಾತ್ರ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಇತರ ಅಡುಗೆಗಳು ಅಷ್ಟಾಗಿ ಬಳಕೆಯಲ್ಲಿ ಇಲ್ಲ.
– ಹೇಮಮಾಲಾ.ಬಿ
(ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿತ ಬರಹ)
ಹೌದು ! ಸಬ್ಬಕ್ಕಿ ಅಕ್ಕಿಯಲ್ಲ ! ಅದನ್ನು Metroxylon sago ಮತ್ತು Cycas ಮರಗಳ ಕಾಂಡದ starch ಅಥವಾ ಪಿಷ್ಟದಿಂದ ತಯಾರಿಸುತ್ತಿದ್ದರು ! ಈಗ ಮರಗೆಣಸಿನಿಂದ ತಯಾರಿಸುತ್ತಾರೆ !
ವಿವರಣೆ ಚೆನ್ನಾಗಿದೆ,ನಾನುಸಾಬಕ್ಕಿ ಬಗ್ಗೆ ಆಲೋಚ್ಸಿದ್ದೆ,ಇದು ಯಾವುದರಿಂದ ಮಾದೋದು ಅಂತ..ನಮ್ಮಲ್ಲಿ ಮದುವೆ ಮುಂಜಿಗೆ ಸಾಬಕ್ಕಿ ಬಾಳಕ(ಸಂಡಿಗೆ) ಮಾಡ್ತರೆ.ಮಲಯಾಳದಲ್ಲಿ ಚೌವ್ವರಿ ಅಂತಾರೆ.
ಸಬ್ಬಕ್ಕಿಯನ್ನು ಯಾವುದರಿಂದ ತಯಾರಿಸುತ್ತಾರೆ ಎಂಬುದನ್ನು ‘ಸಬ್ಬಕ್ಕಿಯ’ ಮಹಿಮೆ ತಿಳಿಸಿತು. ಲೇಖನ ವಿವರಣಾತ್ಮಕವಾಗಿದೆ.
ಉತ್ತಮ ವಿವರಣೆ ಸಬ್ಬಕ್ಕಿಯ ಬಗ್ಗೆ ಎಷ್ಟೋಮಂದಿಗೆ ಅದರ ಮೂಲ ತಿಳಿದಿರುವುದಿಲ್ಲ..
ಮರಗೆಣಸಿನಿಂದಲೇ ಸಬ್ಬಕ್ಕಿ ತಯಾರಾಗುತ್ತದೆಂದು ಈ ಲೇಖನದಿಂದ ತಿಳಿಯಿತು.ಅದನ್ನು ನೀವೇ ಬರದದ್ದೆಂದು ಈಗ ತಿಳಿಯಿತು.
ಧನ್ಯವಾದ..
ಮಾಹಿತಿಗೆ ಧನ್ಯವಾದಗಳು ಮೇಡಂ, ನಿಮ್ಮಿಂದ ಹೀಗೆ ಹಲವಾರು ಮಾಹಿತಿಗಳು ನಮಗೆ ಸಿಗುತಿರಲಿ
ಆಸಕ್ತಿ ಕರವಾದ ವಿಷಯ
ಬರಹ ಚೆನ್ನಾಗಿದೆ
ಧನ್ಯವಾದಗಳು 🙂