ಬೊಗಸೆಬಿಂಬ

ಮಗುವಿನ ಮನಸ್ಸು

Share Button
Jayashreeb
ಜಯಶ್ರೀ ಬಿ . ಕದ್ರಿ

 

ಮಕ್ಕಳು ಎಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಷ್ಯ ಶಿಶು’ ಎಂದು ಆಪ್ಯಾಯಮಾನವಾಗಿ ಬರೆಯುತ್ತಾರೆ ರಾಷ್ಟ್ರಕವಿ ಕುವೆಂಪು. ಹಾಗೆಯೇ ಅಳುವ ಕಂದನ ತುಟಿಯು ಹವಳದ ಕುಡಿಹಂಗ ಕುಡಿಹುಬ್ಬು ಬೇವಿನ ಎಸಳಂಗ’ ಎನ್ನುತ್ತಾಳೆ ಜನಪದ ತಾಯಿ. ಹೌದು. ಮಾತೃತ್ವವೆನ್ನುವುದು ಹೆಣ್ಣಿಗೊಂದು ವರ. ತನ್ನ ಕೆಂಪುಕೆಂಪಾದ ಬೆರಳುಗಳನ್ನು ಮುಷ್ಟಿಬಿಗಿ ಹಿಡಿದು ತೊಟ್ಟಿಲಿನಲ್ಲಿ ಮಲಗಿದ ಎಳೆ ಮಗುವಿನ ಮುಗ್ಧತೆ, ಅಂಬೆಗಾಲಿಕ್ಕಿ ತೆವಳುತ್ತ ಕಣ್ಣಲ್ಲಿ ಬೆಳಕಿನ ಮಹಾಪೂರ ಚಿಮ್ಮಿಸುವ ಕಂದನ ದಿವ್ಯತೆ, ಬಿದ್ದಷ್ಟು ಮರಳಿ ನಡೆಯುವ ಪ್ರಯತ್ನಿಸುವ ತೊಡರುಗಾಲಿನ ಎಳೆ ಬೊಮ್ಮಟೆಯ ಛಲ ಮತ್ತು ಬದ್ಧತೆ.. ಹೀಗೆ ಮಗುವಿಗೆ ಐದು ವಯಸ್ಸಾಗುವವರೆಗೆ ನಾವು ಜಗತ್ತಿನ ಸುಖಗಳನ್ನೇ ಸೂರೆಗೊಂಡಿರುತ್ತೇವೆ. ಅದರ ನೆತ್ತಿಯ ಮೃದು ಮಧುರ ಸುಗಂಧವನ್ನಾಘ್ರಾಣಿಸುತ್ತ, ಅದರ ಪುಟ್ಟ ಕೆಂಪುಪಾದಗಳ ಸ್ಪರ್ಶಕ್ಕೆ ಮನದುಂಬಿಕೊಳ್ಳುತ್ತ, ಹವಳದ ತುಟಿಯಲ್ಲಿ ಝಗ್ಗನೆ ತುಳುಕುವ ಮೌನಪ್ರೀತಿಗೆ, ತೊದಲು ನುಡಿಗೆ ಬೆರಗಾಗುತ್ತ ನಮ್ಮ ಜೀವನ ಧನ್ಯವೆನಿಸುತ್ತದೆ. ಮಕ್ಕಳ ಆಟಪಾಟ, ಅವರ ಅಳು, ನಗು, ಕಿರುಚಾಟಗಳಿಗೆ ಸಂಭ್ರಮಿಸದ ಜೀವಗಳಿಲ್ಲ ಕೆ.ಎಸ್.ನರಸಿಂಹ ಸ್ವಾಮಿಯವರಂತೂ ತಮ್ಮ, ‘ತುಂಗಭದ್ರೆ’ ಕವನದಲ್ಲಿ ವಾತ್ಸಲ್ಯ ರಸವೇ ಉಕ್ಕಿ ಹರಿಯುವಂತೆ ಮಗುವಿನ ಬೊಚ್ಚುಬಾಯಿಯ ನಗುವನ್ನು,  ಅದರ ನಿಷ್ಕಲ್ಮಶ ಪ್ರೀತಿ ತಂದೆತಾಯಿಯರನ್ನು ಅನುರಾಗ ಬಂಧದಲ್ಲಿ ಬೆಸೆಯುವ ಪರಿಯನ್ನು ಬಣ್ಣಿಸುತ್ತಾರೆ. ಇದೇ ಮಗು ಸ್ವಲ್ಪ ದೊಡ್ಡದಾದಂತೆ ಆಟಪಾಟಗಳಲ್ಲಿ ಮಗ್ನವಾಗುತ್ತದೆ. ಒಂದು ಮರದ ಕೋಲು ಕೂಡ ಅದರ ಕಲ್ಪನಾಶಕ್ತಿಗೆ ಸಾಕು. ರವೀಂದ್ರನಾಥ್ ಠಾಗೋರ್ ಹೇಳುವಂತೆ ದೊಡ್ಡವರಾದ ನಾವು ಚಿನ್ನ, ಬೆಳ್ಳಿ, ಆಸ್ತ್ತಿ ಪಾಸ್ತಿ ಎಂದೆಲ್ಲ ಆಡಿದರೆ ಪುಟ್ಟಮಗುವಿಗೆ ಕಲ್ಲು ಮಣ್ಣುಗಳು ಸಾಕು.

childಮಗು ಬೆಳೆಯುತ್ತಾ ಹೋದಂತೆ ಅದೂ ಸಮಾಜದಲ್ಲಿ ಒಂದು ಭಾಗವಾಗುತ್ತದೆ. ಅದರ ಮೊದಲನೆಯ ಮೆಟ್ಟಿಲೇ ಶಾಲೆ. ಓಶೋ ರಜನೀಶ್ ಹೇಳುವಂತೆ ಶಾಲೆಗೆ ಕಳುಹಿಸುವ ಮೂಲಕವೇ ನಾವು ಬಹುಶಃ ಮಗುವಿನ ಸ್ವಾತಂತ್ರ್ಯ, ಕಲ್ಪನಾಶೀಲತೆ, ಸೌಂದರ್ಯಪ್ರಜ್ಞೆ, ಶಾಂತಿಯನ್ನು ಕಿತ್ತುಕೊಳ್ಳುತ್ತೇವೆ. ರೂಢಿಗತ ಮೌಲ್ಯಗಳನ್ನು ಮಗುವಿಗೆ ಅರೆದು ಕುಡಿಸುತ್ತ, ಸ್ಪರ್ಧೆಯ ಮಹತ್ವವನ್ನೊತ್ತಿ ಹೇಳುತ್ತ, ಉರು ಹೊಡೆದಾದರೂ ಸರಿ, ನಿದ್ದೆಗೆಟ್ಟಾದರೂ ಸರಿ ‘ಯಶಸ್ಸು’ ಎನ್ನುವುದು ಎಷ್ಟು ಮುಖ್ಯ ಎಂದು ಒತ್ತಿ ಹೇಳುತ್ತೇವೆ. ಈ ಪಯಣದಲ್ಲಿ ಮಗು ತನ್ನ ಬಾಲ್ಯ ಸಹಜ ಮುಗ್ಧತೆಯನ್ನು , ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾ ಭಾವನೆಗಳೇ ಇಲ್ಲದ ರೋಬೋಟ್ ಇಲ್ಲವೇ ಅಳುಮುಂಜಿಯಾದ , ಆತ್ಮವಿಶ್ವಾಸ ಇಲ್ಲದ ವ್ಯಕ್ತಿಯಾಗುವ ಅಪಾಯವಿದೆ. ಯಾವ ಮಗು ಕೇವಲ ಅಂಬೆಗಾಲಿಕ್ಕಿದರೂ, ನಡೆದರೂ ನಮ್ಮಲ್ಲಿ ಹರ್ಷ ಉಕ್ಕಿಸುತ್ತಿತ್ತೋ, ಅದೇ ಮಗು ಬೆಳೆದು ದೊಡ್ಡದಾದಂತೆಲ್ಲ ನಮಗೆ ಅದರ ಯಾವ ಸಾಧನೆಯೂ ಸಾಕಾಗುವುದಿಲ್ಲ. ಇದೊಂದು ಈ ಸ್ಪರ್ಧಾತ್ಮಕ ಯುಗದ ವಿರೋಧಾಭಾಸ.

childhood1ತಮ್ಮೆಲ್ಲ ತುಂಟತನ, ಹುಂಬತನಗಳ ನಡುವೆಯೂ ಮಕ್ಕಳು ಅಸಹಾಯಕರು. ಅತಿ ಪುಟ್ಟ ಮಕ್ಕಳಂತೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಾಗದೆ ಮಂಕುಬಡಿಯುತ್ತವೆ ಇಲ್ಲವೇ ರಚ್ಚೆಹಿಡಿಯುತ್ತವೆ. ಎಳೆಯ ಕಂದಮ್ಮಗಳ ಮೇಲೆ ಕೂಡ ದೌರ್ಜನ್ಯ ನಡೆಯುವ ಈ ಕಾಲಘಟ್ಟದಲ್ಲಿ ಅವರನ್ನು ಹೊಡೆದು ಬಡಿದು ಮಾಡಿದರೆ ಅವರನ್ನೇ ಕಳೆದುಕೊಳ್ಳಬೇಕಾದೀತು. ಹಾಗೆ ನೋಡಿದರೆ ಉತ್ತಮ ಪೇರೆಂಟ್ ಎಂದೆನಿಸಿಕೊಳ್ಳುವುದು ಸುಲಭವೇನಲ್ಲ. ಜೀವನದ ಅಚ್ಚರಿಯೆಂದರೆ ಇಪ್ಪತ್ತರಿಂದ ಮೂವತ್ತೈದು ವಯಸ್ಸಿನ ಒಳಗೆ ಸ್ವಂತ ಕೆರೀರ್, ಮನೆ, ಮಕ್ಕಳು, ಅವರ ವಿದ್ಯಾಭ್ಯಾಸ….. ಹೀಗೆ ನೂರೆಂಟು ವಿಚಾರಗಳನ್ನು ಚಕಚಕನೆ ಮುಗಿಸಬೇಕಾಗಿರುವುದು. ಉದ್ಯೋಗದಲ್ಲಿ ಭಡ್ತಿ ಇತ್ಯಾದಿ ತನ್ನಿಂದ ತಾನೆ ಸಿಗುವುದಿಲ್ಲ. ಅದೇ ರೀತಿ ಎಳೆಯ ಮಕ್ಕಳಿಗೆ ಬೇಕಾದ ಪ್ರೀತಿ, ವಾತ್ಸಲ್ಯ, ಸಮಯಗಳೂ ಅದೇ ಸಮಯಕ್ಕೆ ಬೇಕು. ಬೇಬಿ ಸಿಟ್ಟಿಂಗ್‌ನಲ್ಲಿ ಬೆಳೆದು ದೊಡ್ಡವರಾಗುವ ಮಕ್ಕಳೊಂದೆಡೆ ಆದರೆ ಜಾಯಿಂಟ್ ಫ್ಯಾಮಿಲಿಗಳಲ್ಲಿನ ಕಲಹಗಳನ್ನು ನೋಡುತ್ತ, ವಿಷಮ ದಾಂಪತ್ಯಗಳಿಗೆ ಮೂಕಸಾಕ್ಷಿಯಾಗುವ ಮಕ್ಕಳೊಂದೆಡೆ.

ಮಕ್ಕಳನ್ನು ಬೆಳೆಸುವ ಬಹುತೇಕ ಜವಾಬ್ದಾರಿ ತಾಯಂದಿರದು. ನಿಜವಾಗಿಯಾದರೆ ಅದು ಸಮಾನವಾಗಿರಬೇಕು. ಕುಡಿದು ಬಂದು ಹೆಂಡತಿಯನ್ನು ಚಚ್ಚುವ ತಂದೆ, ಸೋಮಾರಿಯಾಗಿ ಜವಾಬ್ದಾರಿ ಇಲ್ಲದ ಅಪ್ಪ, ಇವರೆಲ್ಲ ಎಳೆಯ ಮಕ್ಕಳಿಗೆ ಯಾವ ಸಂದೇಶ ಕೊಡಬಲ್ಲರು? ತಾಯಿಯ ಬೆಚ್ಚನೆಯ ಮಡಿಲಿನಷ್ಟೇ ಅಗತ್ಯ ತಂದೆಯ ದೃಢವಾದ ಆಸರೆ. ಹೆಣ್ಣು ಮಕ್ಕಳಂತೂ ‘ಮೈ ಡ್ಯಾಡಿ ಸ್ಟ್ರಾಂಗೆಸ್ಟ್’ ಎಂದು ಎಷ್ಟು ಹೆಮ್ಮೆ ಪಡುತ್ತಾರೆಂದರೆ ಅವರ ತಂದೆಯೇ ಅವರ ಬೆಸ್ಟ್ ಫ್ರೆಂಡ್.

childhood careಇವಿಷ್ಟು ಮಧ್ಯಮ ವರ್ಗದವರ ಕತೆಯಾದರೆ ಬಡ ಮಕ್ಕಳ ಕತೆಯೇ ಬೇರೆ. ಇತ್ತೀಚೆಗೆ ನಮ್ಮ ದೇಶದ ಕೈಲಾಶ್ ಸತ್ಯಾರ್ಥಿಯವರು ನೊಬೆಲ್ ಪ್ರಶಸ್ತಿ ಪಡೆದರು. ಬೀದಿ ಮಕ್ಕಳ ಬಗೆ, ಬಾಲಕಾರ್ಮಿಕರ ಬಗ್ಗೆ ಅವರ ಕಾಳಜಿ ಅನನ್ಯ. ತಮ್ಮ ಮಗು ಟಿಫನ್ ಮುಗಿಸುವುದಿಲ್ಲವೆನ್ನುವುದೇ ರಾಷ್ಟ್ರೀಯ ಸಮಸ್ಯೆಯಂತೆ ಭಾವಿಸುವ ನಾವು ಈ ರೀತಿಯ ನೋವಿಗೂ ಮಿಡಿಯಬೇಕಿದೆ. ಮಕ್ಕಳ ಪುಟ್ಟ ಮನಸ್ಸನ್ನು ಛಿದ್ರಗೊಳಿಸುವುದು ಬಡತನ. ಹತ್ತುರೂಪಾಯಿಯ ನೋಟ್‌ಬುಕ್ ಒಂದು ಕೊಳ್ಳಲಾಗದ ಅಸಹಾಯಕತೆಯಿಂದ ಸೀಮೆ‌ಎಣ್ಣೆ ಸುರಿದುಕೊಂಡು ಸಾಯಬೇಕೆಂದರೆ ಆ ಮಗುವಿನ ಹೃದಯವಿದ್ರಾವಕತೆ ಹೇಗಿರಬೇಡ? ಇನ್ನು ವಿಚ್ಛೇದಿತರು, ಪರಿತ್ಯಕ್ತರು, ವಿಧವೆಯರ ಮಕ್ಕಳು ಅನುಭವಿಸುವ ಅನಾಥ ಪ್ರಜ್ಞೆ. ಪರಕೀಯತೆ ನಮ್ಮ ಶತ್ರುಗಳಿಗೂ ಬೇಡ ತಮ್ಮದಲ್ಲದ ತಪ್ಪಿಗೆ ಎಳೆಯ ಮನಸ್ಸುಗಳು ಪಡುವ ಬವಣೆ ಇದೆಯಲ್ಲ ಅದೊಂದು ನರಕ. ನಮ್ಮ ಸಮಾಜ ಪಿತೃಪ್ರಧಾನ ಕುಟುಂಬ ಅಂದರೆ ತಂದೆ ಯಜಮಾನನಾಗಿರುವ ಕುಟುಂಬವನ್ನೇ ಸಹಜವೆಂದು ಪರಿಗಣಿಸುತ್ತದೆ , ಹಾಗೂ ಬೇರೆ ರೀತಿಯ ಫ್ಯಾಮಿಲಿಗಳನ್ನು ಒಂದು ರೀತಿ ಪರಿಧಿಗೆ ಸೇರದವರಂತೆ ಹೊರಗಿಡುತ್ತದೆ. ಈ ರೀತಿಯ ಮಕ್ಕಳು ತಾವು ಯಾರಿಗೂ ಬೇಡದವರೇನೋ ಎಂದುಕೊಳ್ಳುತ್ತ ನರಳಿ ನರಳಿ ಓದಿನಲ್ಲಿಯೂ ಹಿಂದೆ ಬೀಳುತ್ತಾರೆ ಹಾಗೂ ಕೆಲವೊಮ್ಮೆ ಒಂದು ಹಿಡಿಪ್ರೀತಿಗೆ ಯಾರೋ ಅಯೋಗ್ಯರನ್ನು ನೆಚ್ಚಿಕೊಳ್ಳುವುದನ್ನು ನಾವೇ ಕಣ್ಣಾರೆ ನೋಡಿರುತ್ತೇವೆ.

ಕೊನೆಯದಾಗಿ ಖಲೀಲ್ ಗಿಬ್ರಾನ್ ಹೇಳುವಂತೆ ‘ನಿಮ್ಮ ಮಕ್ಕಳು ನಿಮ್ಮವರಲ್ಲ, ನಿಮ್ಮಿಂದ ಬಂದವರಾದರೂ ನಿಮ್ಮವರೇ ಅಲ್ಲ’. ಹೀಗಾಗಿಯೇ ಪ್ರೀತಿ ಅಕ್ಕರೆಗಳಿಂದ ಅವರನ್ನು ಪೋಷಿಸುವುದು, ಸಾಧ್ಯವಾದಷ್ಟು ಅವರ ಕನಸಿಗೆ ಬಣ್ಣ ತುಂಬುವುದಷ್ಟೇ ನಮ್ಮಿಂದ ಸಾಧ್ಯ. ಕೇವಲ ನಮ್ಮ ಮಕ್ಕಳು ಮಾತ್ರವಲ್ಲದೆ ಉಳಿದ ಮಕ್ಕಳಿಗೂ ವಾತ್ಸಲ್ಯ, ಕಾಳಜಿ ತೋರಿಸುವುದು ಮಾನವೀಯತೆ. ನಮ್ಮ ನಲ್ಮೆಯ ಮಾತುಗಳಿಂದ ಬಾಲಾಪರಾಧಗಳು, ಆತ್ಮಹತ್ಯೆಗಳು ಕಡಿಮೆಯಾದರೂ ಆಗಬಹುದು.

 

– ಜಯಶ್ರೀ ಬಿ . ಕದ್ರಿ

 

11 Comments on “ಮಗುವಿನ ಮನಸ್ಸು

  1. ಮೇಡಂ ನಿಮ್ಮ ಎಲ್ಲ ಬರಹಗಳು ಅತ್ಯುತ್ತಮವಾಗಿರುತ್ತವೆ..

  2. ಸತ್ಯವಾದ ಮಾತುಗಳು. ಎಲ್ಲರೂ ಕುಣಿಯುತ್ತಾರೆಂದು ನಾವೇಕೆ ಕುಣಿಯಬೇಕು ? ನಮ್ಮಿಷ್ಟದಂತೆ ನಮ್ಮ ಮಕ್ಕಳನ್ಮು ಬೆಳೆಸೋಣ.
    ಸಣ್ಣ ಉದಾಹರಣೆ: ಒಂದಿಷ್ಟು ಜನ ಎಮ್ ಜಿ ರಸ್ತೆಯಲ್ಲಿ ಓಡುತ್ತಿದ್ದರಂತೆ. “ಯಾಕೆ ಓಡುತ್ತಿದ್ದಿರಿ ?” ಎಂದು ಕೇಳಿದನಂತೆ ಒಬ್ಬ. “ಗೊತ್ತಿಲ್ಲಪ್ಪ … ಮುಂದಿನವರೆಲ್ಲ ಓಡುತ್ತಿದ್ದಾರೆ. ಅದಕ್ಕೆ ಓಡುತ್ತಿದ್ದೇನೆ” ಎಂದನಂತೆ ಆತ. ಹಾಗಾಗಿದೆ ನಮ್ಮ ಕತೆ. ಎಲ್ಲರು ಏನೋ ಮಾಡುತ್ತಿದ್ದಾರೆ ಅದಕ್ಕೆ ನಾವೂ ಅವರನ್ನು ಹಿಂಬಾಲಿಸುವುದೇಕೆ ? ಮಕ್ಕಳ ಬಾಲ್ಯವನ್ನು ಕಿತ್ತುಕೊಳ್ಳುವ ಪೋಷಕರು ನಾವಾಗುವುದು ಬೇಡ…..

Leave a Reply to Sneha Prasanna Cancel reply

 Click this button or press Ctrl+G to toggle between Kannada and English

Your email address will not be published. Required fields are marked *