ಮಣ್ಣಿನ ಮಕ್ಕಳ ಮೌನದ ಪ್ರಶ್ನೆಗಳಿಗೆ ಉತ್ತರಿಸುವವರಾರು..?
ಇಂದು ಪ್ರೌಢಾವಸ್ಥೆಗೆ ಬಂದಿರುವ ಯಾವುದಾದರೂ ಒಂದು ಶಾಲಾ, ಕಾಲೇಜು ಕೋಣೆಗೆ ಹೋಗಿ, ವಿದ್ಯಾರ್ಥಿಗಳೆ ನಿಮ್ಮ ಮುಂದಿನ ಗುರಿ ಎನು? ಅಂತಾ ಪ್ರಶ್ನಿಸಿದರೆ, ಥಟ್ಟನೆ ಬರುವ ಉತ್ತರಗಳು ಡಾಕ್ಟರ್, ಎಂಜಿನಿಯರ್, ವಿಜ್ಞಾನಿ, ಉದ್ಯೋಗಿ, ನ್ಯಾಯವಾದಿ, ಜಿಲ್ಲಾಧಿಕಾರಿ, ಪೋಲಿಸ ಅಧಿಕಾರಿ ಹೀಗೆ ತಾವು ಕಟ್ಟಿಕೊಂಡಿರುವ ನೂರಾರು ಕನಸುಗಳ ಬುತ್ತಿಯನ್ನು ನಮ್ಮೆದಿರು ಬಿಚ್ಚಿಡುತ್ತಾರೆ. ಆದರೆ, ನಾನು ರೈತನಾಗ್ತಿನಿ ಅನ್ನೊ ಒಂದೇಒಂದು ಧ್ವನಿ ನಮ್ಮ ಕರ್ಣಗಳಿಗೆ ಅಪ್ಪಿತಪ್ಪಿಯೂ ಪ್ರಾಯಶಃ ಅಪ್ಪಳಿಸುವದಿಲ್ಲ. ಕಾರಣ ರೈತನಾಗುವದೆಂದರೆ ವಿಲಾಸಿ ಬದುಕಿಗೆ ವಿದಾಯ ಹೇಳಿ, ಪಟ್ಟಣ ಬಿಟ್ಟು ಹಳ್ಳಿಗೆ ಹೋಗಿ, ಹೊತ್ತುಗೊತ್ತಿಲ್ಲದೆ ದೇಹ ದಂಡಿಸಿ ದುಡಿಯಬೇಕು. ದುಡಿದರೂ ದುಡಿತಕ್ಕೆ ತಕ್ಕ ಫಲ ಸಿಗಬಹುದು ಸಿಗದೆಹೋಗಬಹುದು..! ಅಥವಾ ಅತಿವೃಷ್ಟಿ ಅನಾವೃಷ್ಟಿಗೆ ಬೆಳೆ ತುತ್ತಾಗಬಹುದು. ಒಟ್ಟಾರೆ ಒಂದು ಖಚಿತತೆ ಇಲ್ಲದ ಕೃಷಿ ಕಾಯಕದಿಂದ ನಮ್ಮ ಯುವಕರು ವಿಮುಖರಾಗುತ್ತಿದ್ದಾರೆ.
ಒರ್ವ ಸರಕಾರಿ ನೌಕರನಿಗೆ ಬರಗಾಲ ಬಿದ್ದರೂ ಸಂಬಳ, ನೆರೆಹಾವಳಿಯಾದ್ರೂ ಸಂಬಳ, (ಬರಗಾಲ ನೆರೆಹಾವಳಿ ಅಂದ್ರೆ ಅದೇಷ್ಟೊ ಸರಕಾರಿ ನೌಕರರು, ಅಧಿಕಾರಿಗಳು ಪ್ರೀತಿಸುತ್ತಾರೆ..!) ಆರೋಗ್ಯ ಹದಗೆಟ್ಟರೆ ಆಸ್ಪತ್ರೆ ವೆಚ್ಚ, ಸಂಬಳವನ್ನೆ ಮೀರಿಸುವ ಲಂಚ, ರಜೆ, ಬೊನಸ್, ಮನೆ ಕಟ್ಟಲು ಸಾಲ, ಅಸುನೀಗಿದರೆ ಮಕ್ಕಳಿಗೆ ಅನುಕಂಪದ ನೌಕರಿ, ನಿವೃತ್ತಿಯಾದ್ರೆ ಪಿಂಚಣಿ, ಪ್ರತಿ ಹತ್ತು ವರ್ಷಕ್ಕೊಮ್ಮೆ ಸಂಬಳ ಹೆಚ್ಚಿಸಲು ‘ವೇತನ ಆಯೋಗ ಸಮೀತಿ’ ಹೀಗೆ ಹಲವಾರು ಸೌಲಭ್ಯಗಳು ಸರಕಾರಿ ನೌಕರನಿಗೆ ಇರೊವಾಗ, ಯಾವ ಸೌಲಭ್ಯವೂ ಇಲ್ಲದ ಶಿಸ್ತು ಸಮಯದ ನಿಗದಿಯಿಲ್ಲದ ವ್ಯವಸಾಯವನ್ನ ಮಾಡುವ ಆಲೋಚನೆ ಪಾಪ ಯಾರು ತಾನೆ ಮಾಡಿಯಾರು? ಕೃಷಿ ಕಾರ್ಯ ಮಾಡುವ ಯುವಕರನ್ನ ಇಂದು ಮದುವೆಯಾಗಲು ಯಾವ ಹೆಣ್ಣು ಕೂಡಾ ಮುಂದೆ ಬರುವದಿಲ್ಲ. ಇಂತಹ ಕ್ಲಿಷ್ಟ ಪರಸ್ಥಿತಿಯಲ್ಲಿ ನಮ್ಮ ಇಂದಿನ ಯುವಕರು ಕೃಷಿಕರಾಗಬಹುದೆ..?
ಅದೊಂದು ದಿನ ನಾನು ಹೊಲಕ್ಕೆ ಹೊಗುವಾಗ ದಾರಿಯುದ್ದಕ್ಕೂ ನನ್ನ ಮನದಲ್ಲಿ ಹೊಳೆದ ಈ ಘಟನೆ ಇಂದಿಗೂ ನನ್ನನ್ನು ಕಾಡುತ್ತಿದೆ. ‘ಒರ್ವ ರೈತ ಕಳಪೆ ಗುಣಮಟ್ಟದ ಬೀಜ ಗೊಬ್ಬರ, ಬೆಲೆ ಕುಸಿತ, ಸಾಲ ಹೀಗೆ ಹಲವಾರು ಸುಳಿಗಳಿಗೆ ಸಿಲುಕಿ ನರಳಿ ನರಳಿ ಅಸುನೀಗಿದ. ಮುಂದೊಂದು ದಿನ ಅಗಲಿದ ರೈತನ ಭೂಮಿಯನ್ನೆ ಸರಕಾರ ಅದ್ಯಾವದೊ.. ಕಾರ್ಖಾನೆ ಆರಂಭಿಸಲು ಸ್ವಾಧೀನ ಪಡಿಸಿಕೊಂಡಿತು. ಸರಕಾರದಿಂದ ಬಂದ ಪರಿಹಾರ ಧನದಲ್ಲಿ ಅಗಲಿದ ಅಪ್ಪನ ಅಷ್ಟೂ ಸಾಲ ತೀರಿಸಿ, ಉಳಿದಿರೊ ಹಣದಲ್ಲೊಂದು ಅಟೊರಿಕ್ಷಾ ಖರಿದಿಸಿ ಹಿರಿಮಗ ಡ್ರೈವರ್ ಕಂ ಮಾಲಿಕನಾಗಿ ನಿರಾಳವಾಗಿ ಓಡಾಡಿಕೊಂಡಿದ್ದ. ಆದರೆ ಅದೊಂದು ದಿನ ಅಕಸ್ಮಾತ ಅಟೊ ಅಪಘಾತಕ್ಕಿಡಾಗಿ ಡ್ರೈವರ್ (ಹಿರಿಯ ಮಗನೆ) ಬಲಿಯಾಗಿಬಿಟ್ಟ. ಮನೆಯಲ್ಲಿಗ ಸ್ಮಶಾನ ಮೌನ..! ಸಾಂತ್ವಾನದ ಎರಡು ಮಾತು ಹೇಳಲು ನಾ ಗೆಳೆಯನ ಮನೆಗೆ ಹೋದಾಗ ಕಿರಿಯ ಮಗನ ಮೌನವೇ ನನ್ನೊಂದಿಗೆ ಹೀಗೆ ಮಾತನಾಡಿತು ನಾವು ಕೆವಲ ಅಪ್ಪ, ಭೂಮಿ, ಅಣ್ಣ, ಅಟೋ ಇಷ್ಟನ್ನೆ ಕಳೆದುಕೊಂಡಿಲ್ಲ ಹಾಸಿಗೆ ಹಿಡಿದಿರುವ ಅವ್ವ, ಮದುವೆಯಾಗದ ಮುಗ್ದ ತಂಗಿ, ಏನೂ ಅರಿಯದ ನಾನು ಮೂವರು ಬದುಕುವ ಭರವಸೆಯನ್ನೆ ಕಳೆದುಕೊಂಡಿದ್ದೇವೆ. ಇದು ವಿಧಿಯ ಕೈವಾಡವೆ? ಅಥವಾ ವ್ಯವಸ್ಥೆಯ ಸ್ವಾರ್ಥವೆ? ಗೆಳೆಯನ ಪ್ರಶ್ನೆಗೆ ಉತ್ತರಿಸಲಾಗದೆ ನಾನು ಮೌನದಿಂದ ಎದ್ದು ಹೊರಬಂದೆ. (ಇದೊಂದು ವಾಸ್ತವಕೆ ಹತ್ತಿರವಿರುವ ಕಾಲ್ಪನಿಕ ಘಟನೆ)
ಮರುದಿನ ನನ್ನೊಳಗೂ ಹಲವಾರು ಪ್ರಶ್ನೆಗಳು ಸಮಸ್ಯೆಗಳು ಮೊಳಕೆಯೊಡೆದವು:
- ನಮ್ಮಪ್ಪ ಬೆಳೆದ ಕಾಳುಗಳನ್ನ ಕೊಂಡು ಮಾರುವ ದಲ್ಲಾಳಿಗಳು ಗರಿಗರಿ ಅಂಗಿ ಧರಿಸಿ ಸಾವುಕಾರೆಂದು ಕರೆಯಿಸಿಕೊಳ್ಳುತ್ತಿದ್ದಾರೆ, ದುಬಾರಿ ಗಾಡಿಯಲಿ ಮೆರೆಯುತ್ತಿದ್ದಾರೆ. ಕೆಲವರು ರಾಜಕಾರಣಿಗಳಾಗಿದ್ದಾರೆ.
- ನಮ್ಮಪ್ಪ ಬೆಳೆದ ಕಾಯಿಪಲ್ಲೆಗಳನ್ನು ಕೊಂಡು ಮಾರಿದ ವ್ಯಾಪಾರಸ್ಥರು ತಮ್ಮ ಹೆಂಡರ ಕೈಗಳಿಗೆ ಬಂಗಾರದ ಬಳೆಗಳನ್ನ ಮಾಡಿಸಿಕೊಟ್ಟಿದ್ದಾರೆ, ಸಾಕಷ್ಟು ಹಣ ಸಂಪಾದಿಸಿದ್ದಾರೆ. ಅಂದವಾದ ಮನೆ ಕಟ್ಟಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಪ್ರತಿಷ್ಟಿತ ಖಾಸಗಿ ವಸತಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ಶುಲ್ಕ ತುಂಬಿ ಓದಿಸುತ್ತಿದ್ದಾರೆ.
- ನನ್ನಪ್ಪನಿಗೆ ಬಡ್ಡಿ ಸಾಲ ಕೊಟ್ಟವರು (ಬ್ಯಾಂಕ್,ಫೈನಾನ್ಸ್ ಕಂಪನಿಯವರು) ಬೀಜ,ಗೊಬ್ಬರ ಕೊಟ್ಟವರು ಇಂದು ಭಾರಿ ಶ್ರಿಮಂತರಾಗಿದ್ದಾರೆ. ಪುಕ್ಕಟೆ ವಿದೇಶಿ ಪ್ರವಾಸ ಮೋಜು ಮಜಾ ಮಾಡಿದ್ದಾರೆ.
- ರೈತ ರಾಷ್ಟ್ರದ ಬೆನ್ನೆಲಬು, ಕೈ ಕೆಸರಾದರೆ ಬಾಯಿಗೆ ಮೊಸರು, ರೈತ ನಕ್ಕರೆ ಜಗವೆಲ್ಲಾ ಸಕ್ಕರೆ, ಜೈ ಜವಾನ ಜೈ ಕಿಸಾನ ಇಂತಹ ನುಡಿಗಳಿಂದು ಟ್ರ್ಯಾಕ್ಟರ್ ಗಾಡಿಯ ಮೇಲೆ ಬಣ್ಣ ಬಳಿದುಕೊಂಡು ಅಣಕು ಪ್ರದರ್ಶಣ ಮಾಡುತ್ತಿವೆ. ಒಟ್ಟಾರೆ ಮಣ್ಣಿನ ಮಕ್ಕಳು ಮಣ್ಣಲ್ಲಿಯೇ ಮಣ್ಣಾಗಿ ಇಂದು ಕಣ್ಮರೆಯಾಗುತ್ತಿದ್ದರೂ ಕನಿಷ್ಟ ಒಂದೆರಡು ಹನಿ ಕಣ್ಣೀರು ಸುರಿಸುವವರ ನಾ ಕಾಣೆ. ಆದರೆ ಮೊಸಳೆ ಕಣ್ಣೀರು ಸುರಿಸುವ ಮತ್ತು ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿರುವ ರಾಜಕಾರಣಿಗಳ ಕಂಡು ಬೆರಗಾಗಿರುವೆ.
ಒಟ್ಟಾರೆ ನಾನು ಪಟ್ಟಿರೊ ಕಷ್ಟವೇ ಸಾಕು ಇನ್ನು ನನ್ನ ಮಕ್ಕಳು ಈ ಕೃಷಿ ಕಾರ್ಯ ಮಾಡಿ ಕಷ್ಟ ಅನುಭವಿಸೊದು ಬೇಡ, ಹೇಗಾದರೂ ಮಾಡಿ (ಇರೊ ಆಸ್ತಿಯನ್ನೆ ಮಾರಿ) ಮಕ್ಕಳಿಗೆ ಒಂದು ಸರಕಾರಿ ನೌಕರಿ ಕೊಡಿಸಬೇಕಂತ ಅದೇಷ್ಟೊ ರೈತರು ಹಗಲು ರಾತ್ರಿ ತುಂಬಾ ಹೆಣಗಾಡುತ್ತಿದ್ದಾರೆ. ರೈತರ ನೋವಿಗೆ, ಹತಾಶೆಯ ಸ್ಥಿತಿಗೆ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ಸಚಿವರು ಗಂಭೀರವಾದ ಚಿಂತನೆ, ಸಂಶೋಧನೆಯನ್ನ ಮಾಡಿ ಸೂಕ್ತ ಪರಿಹಾರಗಳನ್ನ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ದಿನೇದಿನೇ ಕೃಷಿಭೂಮಿ ಕೃಷಿಯೇತರ ಭೂಮಿಯಾಗಿ ಪರಿವರ್ತೆನೆಗೊಂಡು ಬೆಳೆ ಬೆಳೆಯುವ ಹೊಲಗಳಲ್ಲಿ ಬೃಹತ್ ಕಟ್ಟಡಗಳು, ಕಾರ್ಖಾನೆಗಳು, ರೆಸಾರ್ಟಗಳು, ಹೆದ್ದಾರಿಗಳು ಜೀವ ತಳೆಯುತ್ತಿವೆ. ಭವಿಷ್ಯದಲ್ಲಿ ಕೃಷಿ ಭೂಮಿ, ಅರಣ್ಯ, ಗುಡ್ಡಗಳೆಲ್ಲ ಕಿರಿದಾಗುತ್ತಾ ನಾವೇಲ್ಲ ಅಪಾಯದ ಅಂಚನ್ನು ಮುಟ್ಟುತ್ತಿದ್ದೇವೆ. ಇನ್ನಾದರೂ ಎಚ್ಚತ್ತುಕೊಂಡು ರೈತರ ಹಿತಕಾಯಲು ಸರಕಾರ ಸೂಕ್ತ ಕ್ರಮಗಳನ್ನ ಕೈಗೊಳ್ಳಲಿ. ಮುಂಬರುವ ದಿನಗಳಲ್ಲಿ ನಮ್ಮ ಯುವ ಜನಾಂಗ ಕೃಷಿಕಾಯಕದತ್ತ ಧಾವಿಸಿ ಬರುವಂತಹ ವಾತವರಣ ನಿರ್ಮಾಣವಾಗಲೆಂಬುದೆ ನಮ್ಮಾಶೆ.
– ಕೆ.ಬಿ. ವೀರಲಿಂಗನಗೌಡ್ರ, ಬಾದಾಮಿ
@ ಕೆ.ಬಿ. ವೀರಲಿಂಗನಗೌಡ್ರ ಅವರೇ, ನಾವು ಮಂಗಳೂರಲ್ಲಿ ಇಂದಿಗೆ ಬೀನ್ಸು ಕಿಲೋಗೆ ರೂ ೬೫/-,ಕ್ಯಾರೆಟ್ ರೂ ೬೦, ಕ್ಯಾಬೇಜ್ ರೂ ೨೦, ಹೀಗೆ ತೆತ್ತು ಕೊಳ್ಳುತ್ತಿದ್ದೇವೆ.ಆದರೆ ರೈತನಿಗೆ ಇದರಲ್ಲಿ ೨೦% ಸಿಗೋದಿಲ್ಲ ಅನ್ಸುತ್ತೆ.
ನಾನು ಈವರೆಗೆ ಯಾವ ರೈತ ಪ್ರತಿನಿದಿಗಲೂ ಸರ್ಕಾರವನ್ನು ಕೆಳಗಿನ ಸವಲತ್ತುಗಳಿಗಾಗಿ ಹೋರಾಡಿದ್ದನ್ನು ಕೇಳಿಲ್ಲ.
೧.ರೈತರಿಂದ ಬೆಳೆಗಳ ನೇರ ಮಾರಾಟ ಕ್ಕೆ ಅನುಕೂಲ ಕಲ್ಪನೆ.
೨.ರೈಲುಗಳಲ್ಲಿ ತರಕಾರಿಗಳ ಸಾಗಾಟಕ್ಕೆ ಪ್ರತ್ಯೇಕ ಬೋಗಿ ಮತ್ತು ದರದಲ್ಲಿ ಕಡಿತ.
೩.ಪಟ್ಟಣಗಳಲ್ಲಿ ರೈತರಿಗೆ ಸಂತೆ ನಡೆಸಲು ಅವಕಾಶ ಮತ್ತು ಮೂಲಭೂತ ಸೌಲಭ್ಯ.
ಇತ್ಯಾದಿ ಇತ್ಯಾದಿ.
ಧನ್ಯವಾದಗಳು
ತುಂಬಾ ಚೆನ್ನಾಗಿದೆ. ನಿಮ್ಮ ಲೇಖನಗಳಲ್ಲಿನ ಸಾಮಾಜಿಕ ಕಳಕಳಿ, ತಳಸ್ತರದ ಜನತೆಯ ಸಮಸ್ಯೆಗಳ ಬಗ್ಗೆ ಸ್ಪಂದನ ಇಷ್ಟವಾಯಿತು.
ಧನ್ಯವಾದಗಳು