ಸೊಳ್ಳೆ ಷಿಕಾರಿ

Share Button

ಯಕಶ್ಚಿತ್ ಸಣ್ಣ ಸೊಳ್ಳೆ ಕಡಿತದಿಂದ ಡೆಂಗ್ಯೂ, ಮಲೇರಿಯಾ, ಇತ್ಯಾದಿ ಎಂತೆಂಥ ದೊಡ್ಡ ರೋಗಗಳು ಹರಡುತ್ತವೆ. ಹಾಗಾಗಿ ಸೊಳ್ಳೆ ಮನೆಯೊಳಗೆ ಬರದಿರಲು ಮನೆಯ ಕಿಟಕಿಗಳಿಗೆಲ್ಲ ಸೊಳ್ಳೆ ಪರದೆ ಹಾಕಬೇಕು ಎಂಬ ತೀರ್ಮಾನಕ್ಕೆ ಬಂದೆ. ಈ ಹಿಂದೆಯೇ ಕಿಟಕಿಗಳಿಗೆಲ್ಲ ಸೊಳ್ಳೆಪರದೆಗಳು ಇತ್ತು. ಆದರೆ ಅವೆಲ್ಲ ಹಳೆಯದಾಗಿ ತೂತಾಗಿದ್ದುವು. ಅದರಲ್ಲಿ ಸೊಳ್ಳೆ ಒಳಗೆ ಬಂದು ನಮಗೆ ಮುತ್ತಿಡುತ್ತಿದ್ದುವು. ಹಾಗೆ ಎಲ್ಲ ಕಿಟಕಿಗಳಿಗೂ ಸೊಳ್ಳೆಪರದೆ ಹಾಕಿಸುವುದೆಂದು ತೀರ್ಮಾನಿಸಿ ಒಬ್ಬರಿಗೆ ಈ ಕೆಲಸ ವಹಿಸಿದೆ. ಅವರು ಬಂದು ಕಿಟಕಿಗಳ ಅಳತೆ ತೆಗೆದುಕೊಂಡರು. ಬರೋಬ್ಬರಿ 16 ಕಿಟಕಿಗಳು. ಮನೆ ಮುಂದಿನ ಕಬ್ಬಿಣದ ಬಾಗಿಲಿಗೆ ಸರಳಿನ ಕಿಂಡಿ ಇತ್ತು. ನೀವು ಕಿಟಕಿಗಳಿಗೆಲ್ಲ ಪರದೆ ಹಾಕಿ ಇದನ್ನು ಹೀಗೆ ಬಿಟ್ಟರೆ ಪ್ರಯೋಜನ ಇಲ್ಲ ಎಂದಾಗ ಅದರ ಅಳತೆಯೂ ತೆಗೆದುಕೊಳ್ಳಲು ಹೇಳಿದೆ.

ಅಂತೂ ಮನೆಯ ಎಲ್ಲ ಕಿಟಕಿಗಳೂ ಪರದೆ ಹಾಕಿಕೊಂಡು ಸಿಂಗಾರಗೊಂಡು ಒಂದೂ ಸೊಳ್ಳೆ ಒಳಗೆ ಬಿಡದಂತೆ ನೋಡಿಕೊಂಡುವು. ಈ ಸೊಳ್ಳೆಗಳ ಕಾಟದಿಂದ ಸುಮಾರು ಹನ್ನೊಂದು ಸಾವಿರ ರೂಪಾಯಿ ನಮ್ಮ ಕೈಬಿಟ್ಟು ಇನ್ನೊಬ್ಬರ ಕೈ ಹಿಡಿಯಿತು! ಇನ್ನುಮುಂದೆ ಸೊಳ್ಳೆಪರದೆ ಹಾಕದೆ ಮಲಗಬಹುದು ಎಂಬ ಕನಸು ಕಂಡೆ.

ನಮ್ಮ ಮನೆಯ ಎದುರು ಬಾಗಿಲು ತೆರೆಯುವಾಗ ಈಗ ಬಲು ಎಚ್ಚರ ಪಡಬೇಕಾಗುತ್ತದೆ. ಯಾರಾದರೂ ಒಳ ಹೊರ ಬಂದ ಹೋದ ಕೂಡಲೇ ಸೊಳ್ಳೆ ಒಳಬರದಂತೆ ದಬಕ್ಕನೆ ಬಾಗಿಲು ಹಾಕುತ್ತೇನೆ. ಬೆಳಗ್ಗೆ ಪತ್ರಿಕೆ ಓದುತ್ತ ಮುಂದಿನ ಬಾಗಿಲು ತೆರೆದು ಕೂರುವುದು ಅನಂತನ ಅಭ್ಯಾಸ. ಸೊಳ್ಳೆ ಒಳಗೆ ಬಂದೀತು. ಹತ್ತು ಸಾವಿರಕ್ಕೂ ಮಿಕ್ಕಿ ಖರ್ಚು ಮಾಡಿ ಸೊಳ್ಳೆಗಳಿಂದ ಕಡಿಸಿಕೊಳ್ಳುವ ಕರ್ಮವೇಕೆ ಎಂದು ನಾನು ಕೂಡಲೇ ಬಾಗಿಲು ಮುಚ್ಚುತ್ತೇನೆ! ಆದರೂ ಈ ಸೊಳ್ಳೆಗಳು ಯಾವ ಮಾಯದಲ್ಲೋ ಒಳಗೆ ಬರುತ್ತವೆ. ಮನೆ ಹಿತ್ತಲಲ್ಲಿ ಜಗಲಿಗೆ ದೊಡ್ಡ ಕಿಟಕಿಗಳು. ಅವಕ್ಕೆ ಸೊಳ್ಳೆಪರದೆ ಇಲ್ಲ. ಅಲ್ಲಿಂದ ಸುಲಭವಾಗಿ ಸೊಳ್ಳೆ ಒಳಗೆ ಪ್ರವೇಶ ಮಾಡುತ್ತವೆ. ಉಪ್ಪರಿಗೆಯಲ್ಲಿ ಕಾರಿಡಾರಿನಲ್ಲಿರುವ ಕಿಟಕಿಗೆ ಸೊಳ್ಳೆಪರದೆ ಹಾಕಲು ಸಾಧ್ಯವಾಗದಂಥ ಕಿಟಕಿಗಳಿವೆ. ಹಾಗಾಗಿ ಇಡೀ ಮನೆ ಸೊಳ್ಳೆ ಒಳ ಪ್ರವೇಶಿಸದಂತೆ ಬಂದೋಬಸ್ತುಗೊಳಿಸಲು ಸಾಧ್ಯವಾಗಿಲ್ಲ. ಒಂದೊಂದು ಸೊಳ್ಳೆ ಒಳಗೆ ಪ್ರವೇಶ ಮಾಡುತ್ತಲೇ ಇರುತ್ತವೆ.

ಅವು ನನ್ನ ಕಣ್ಣೆದುರು ಸುಳಿದಾಡುವುದು ಕಾಣುವಾಗ ಈ ಸೊಳ್ಳೆಗಳಿಗೆ ಒಂದು ಗತಿ ಕಾಣಿಸುವುದು ಹೇಗೆ ಎಂದು ಚಿಂತಿಸುತ್ತೇನೆ. ಆಗ ನನ್ನ ಮನಸ್ಸು ಸೊಳ್ಳೆ ಬ್ಯಾಟ್ ತಾ ಎಂದು ಸಲಹೆ ಕೊಟ್ಟಿತು. ಆಹಾ ಎಂಥ ಒಳ್ಳೆಯ ಸಲಹೆ ಇದು ಎಂದು ರಸ್ತೆಬದಿ ಮಾರಾಟಕ್ಕೆ ಇಟ್ಟ ಸೊಳ್ಳೆಬ್ಯಾಟ್ ಕೊಳ್ಳಲು ಅವನು ರೂ. 200 ಹೇಳಿದಾಗ ಚೌಕಾಸಿ ಮಾಡಿ ರೂ. 150 ಕ್ಕೆ ತರುತ್ತೇನೆ. ರೂ. 50  ಉಳಿಸಿದೆ ಎಂಬ ಹೆಮ್ಮೆಯಿಂದ ಮನೆಗೆ ತಂದು ಅದರ ಕವಚದಿಂದ ಬ್ಯಾಟ್ ಹೊರ ತೆಗೆಯುವಾಗ ಎಂಆರ್.ಪಿ ದರ ರೂ. 100 ಎಂದು ಇರುವುದು ಕಂಡು ಮಮ್ಮಲ ಮರುಗುತ್ತ, ಪರವಾಗಿಲ್ಲ ಪಾಪ ಹೊಟ್ಟೆಪಾಡು ಎಂದು ಉದಾರಿಯಾಗುತ್ತೇನೆ!

ಈಗ ಸೊಳ್ಳೆ ಒಳಬಂದದ್ದು ಗೊತ್ತಾದ ಕೂಡಲೇ ಕೈಯಲ್ಲಿ ಬ್ಯಾಟ್ ಹಿಡಿದು (ದೋನಿ ಬ್ಯಾಟ್ ಬೀಸಿದಂತೆ) ನಾನು ಒಂದೇ ಶಾಟಿಗೆ ಸೊಳ್ಳೆ ಚಟಚಟಗೊಳಿಸಿ ಅಂತ್ಯಸಂಸ್ಕಾರ ಮಾಡುತ್ತಿರುವೆ. ರಾತ್ರಿ ಹಗಲು ಈಗ ನನಗದೇ ಕೆಲಸ. ಸೊಳ್ಳೆಗಳು ಹೇಗೋ ಒಳಪ್ರವೇಶಿಸಿ ಕಿಟಕಿ ಪರದೆ ಮೇಲೆ ಕೂತಿರುತ್ತವೆ. ಪರದೆಯಲ್ಲಿ ಕೂತರೆ ನನಗೆ ಬೇಟೆಯಾಡಲು ಬಹಳ ಸುಲಭ. ಅಲ್ಲಿ ಕೂತ ಕೂಡಲೇ ನಾನು ಅವುಗಳನ್ನು ಬಲಿ ಕೊಡುತ್ತೇನೆಂದು ತಿಳಿದೂ ಅಲ್ಲಿ ಕೂತಿರುತ್ತವಲ್ಲ. ಎಂಥ ಪೆದ್ದು ಸೊಳ್ಳೆಗಳು ಅವು. ಸೊಳ್ಳೆ ಕಂಡ ಕೂಡಲೇ ನನ್ನ ಮನಸ್ಸು ಚುಚ್ಚಿ ಎಚ್ಚರಿಸುತ್ತದೆ ಹೋಗು ಬ್ಯಾಟ್ ಹಿಡಿ ಸೊಳ್ಳೆ ಕೊಲ್ಲು ಎಂದು. ನಾನು ಬ್ಯಾಟ್ ಬೀಸಿ ಅವುಗಳನ್ನು ಚಟ್ಟಕ್ಕೇರಿಸುತ್ತೇನೆ. ಸೊಳ್ಳೆ ಒಳಗೆ ಬಂದರೇ ನನಗೀಗ ಬಲು ಖುಷಿ. ದಿನಕ್ಕೆರಡು ಬಾರಿ ಸೊಳ್ಳೆ ಬೇಟೆಯಾಡದಿದ್ದರೆ ಮನಸ್ಸು ಕೇಳುವುದೇ ಇಲ್ಲ. ಷಿಕಾರಿಗೆ ಸೊಳ್ಳೆ ಸಿಗದಿದ್ದರೆ ಆಗುವ ಬೇಸರ ಅಷ್ಟಿಷ್ಟಲ್ಲ!

ನನ್ನ ಅಮ್ಮ ಮಧ್ಯ ರಾತ್ರಿ ಎದ್ದು ಬ್ಯಾಟ್ ಬೀಸಿ ಸೊಳ್ಳೆ ಬೇಟೆಯಾಡುತ್ತಾರೆ! ಆದರೆ ನನಗೆ ಅಂಥ ಅಭ್ಯಾಸ ಇಲ್ಲ. ಏಕೆಂದರೆ ನಾನು ಸೊಳ್ಳೆಪರದೆಯೊಳಗೆ ಮಲಗುವುದು! ಸೊಳ್ಳೆ ಬೇಟೆಯಾಡುವುದು ಅಪರಾಧ ಎಂಬ ಕಾನೂನು ಇಲ್ಲದೆ ಇರುವುದು ಸದ್ಯ ಬಚಾವ್!

 

– ರುಕ್ಮಿಣಿ ಮಾಲಾ, ಮೈಸೂರು.

Follow

Get every new post on this blog delivered to your Inbox.

Join other followers: