(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಗುನುಂಗ್ ಕಾವಿ (Gunung Kawi)
ಸೆಪ್ಟೆಂಬರ್ 05, 2025 ರಂದು ಬೆಳಗ್ಗೆ ಪೂರಿ-ಪಲ್ಯ, ಚಟ್ನಿ ಉಪಾಹಾರ ಸೇವಿಸಿ ಸ್ಥಳೀಯ ವೀಕ್ಷಣೆಗೆ ಸಿದ್ದರಾದೆವು. ವ್ಯಾನ್ ನಲ್ಲಿ ಬಂದ ಸ್ಥಳೀಯ ಮಾರ್ಗದರ್ಶಿ ಮುದ್ದಣ ನಮ್ಮನ್ನು ಉದ್ದೇಶಿಸಿ, ಇನ್ನು ಸುಮಾರು ಕಾಲು ಗಂಟೆ ಪ್ರಯಾಣಿಸಿ ಮೊದಲು Tampaksiring ಎಂಬಲ್ಲಿರುವ ‘ಗುನುಂಗ್ ಕಾವಿ’ಗೆ ಹೋಗೋಣ , ಅಲ್ಲಿ 11 ನೇ ಶತಮಾನದ, ಶಿಲೆಯಲ್ಲಿ ಕೆತ್ತಲಾದ ರಾಜವಂಶದ ಗುಡಿಗಳಿವೆ ಎಂದರು. ಇದು ಬಾಲಿಯಲ್ಲಿರುವ ಪುರಾತನ ದೇವಾಲಯ ಸಂಕೀರ್ಣವಾಗಿದ್ದು, ರಾಜ ಅನಕ್ ವುಂಗ್ಸು ಮತ್ತು ಅವನ ರಾಣಿಯರ ಸ್ಮಾರಕವಾಗಿ ನಿರ್ಮಿಸಲಾಗಿದೆ. ಈ ಶಿಲಾ ಸಂಕೀರ್ಣವು ಬಂಡೆಗಳ ಮೇಲೆ ಸುಮಾರು 7 ಮೀಟರ್ ಎತ್ತರದಲ್ಲಿ ಕೆತ್ತಿದ ‘ಕ್ಯಾಂಡಿ’ ಎಂದು ಕರೆಯಲ್ಪಡುವ 10 ಗುಡಿಗಳನ್ನು ಹೊಂದಿದೆ. ಹಿಂದೆ ಇಲ್ಲಿ ಬೌದ್ಧ ಸನ್ಯಾಸಿಗಳು ಧ್ಯಾನ ಮಾಡುತ್ತಿದ್ದ್ರರಂತೆ. ಈಗ ಬಾಲಿನೀಸ್ ಹಿಂದೂ ಪದ್ಧತಿಗಳೊಂದಿಗೆ ಪ್ರಾಚೀನ ಸಂಪ್ರದಾಯಗಳ ಆಚರಣೆಯೂ ಇದೆ. ಪ್ರಸ್ತುತ, ಈ ಗುಡಿಗಳನ್ನು ತಲಪಲು 300 ಮೆಟ್ಟಿಲುಗಳನ್ನು ಇಳಿದು ಹೋಗಬೇಕೆಂದೂ, ಅಂದು ‘ಶುದ್ಧೀಕರಣ’ ಆಚರಣೆ ಇರುವುದರಿಂದ ಟಿಕೆಟ್ ಇನ್ನೂ ಕೊಡಲಾರಂಭಿಸಿಲ್ಲ ಎಂದೂ ಗೊತ್ತಾಯಿತು.
ತೀರ್ಥ ಎಂಪುಲ್ (Tirta Empul)
ಹಾಗಾದರೆ , ಮುಂದಕ್ಕೆ ಹೋಗೋಣ ಎಂದು ಅಲ್ಲಿಂದ 3 ಕಿಮೀ ದೂರದಲ್ಲಿದ್ದ ‘ ತೀರ್ಥ ಎಂಪುಲ್’ ಗೆ ಭೇಟಿ ಕೊಡುವುದೆಂದು ನಿರ್ಧಾರವಾಯಿತು. ‘ವಿಷ್ಣು’ವಿನ ಮಂದಿರವಿರುವ ಈ ಸ್ಥಳವು ಬಾಲಿನೀಸ್ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರವಾಗಿದೆ. ತೀರ್ಥ ಎಂಪುಲ್ ನ ಪ್ರವೇಶ ದ್ವಾರದಲ್ಲಿ, ನಮಗೆ ಸೊಂಟಕ್ಕೆ ಕಟ್ಟಿಕೊಳ್ಳಲು ‘ಸಾಶ್’ ಎಂಬ ಬಟ್ಟೆ ಕೊಟ್ಟರು. ಸೀರೆಯುಟ್ಟವರಿಗೆ ಇದರಿಂದ ವಿನಾಯಿತಿ ಇತ್ತು. ಸೀರೆಗಿರುವ ಅಂತರಾಷ್ಟ್ರೀಯ ಗೌರವ ಮತ್ತೊಮ್ಮೆ ಸಾಬೀತಾಯಿತು. ಹಸಿರಿನ ಪರಿಸರದಲ್ಲಿದ್ದ ಮರಗಳು, ಕೊಳಗಳು, ಅಲ್ಲಲ್ಲಿ ಈಜುತ್ತಿದ್ದ ಬಣ್ಣಬಣ್ಣದ ದೊಡ್ಡ ಮೀನುಗಳು ಇವನ್ನೆಲ್ಲಾ ನೋಡುತ್ತಾ ಮುದ್ದಣನ ವಿವರಣೆಗೆ ಕಿವಿಗೊಡುತ್ತಾ ನಡೆದೆವು. ತೀರ್ಥ ಎಂಪುಲ್ ಎಂಬುದು ಬಾಲಿಯ ಟಂಪಕ್ಸಿರಿಂಗ್‌ನಲ್ಲಿ, 10 ನೇ ಶತಮಾನದಲ್ಲಿ ಆಡಳಿತ ನಡೆಸಿದ ವಾರ್ಮದೇವ ರಾಜವಂಶದ ಕಾಲದಲ್ಲಿ , ನಿರ್ಮಿತವಾದ ಪವಿತ್ರ ದೇವಾಲಯವಾಗಿದೆ. ಇಲ್ಲಿಯ ಉಕ್ಕುವ ನೀರಿನ ಬುಗ್ಗೆಯು ಪ್ರಬಲವಾದ ಆಧ್ಯಾತ್ಮಿಕ ಗುಣಗಳನ್ನು ಹೊಂದಿದೆ ಎಂದು ನಂಬುತ್ತಾರೆ. ಪವಿತ್ರ ನೀರಿನ ಬುಗ್ಗೆಯನ್ನು ಕೊಳದಲ್ಲಿ ಸಂಗ್ರಹಿಸಿ, ಅದನ್ನು 5 ಕಲ್ಲಿನ ಕೊಳಾಯಿಗಳ ಮೂಲಕ ಇನ್ನೊಂದು ಕೊಳಕ್ಕೆ ಬೀಳುವಂತೆ ಮಾಡಿದ್ದಾರೆ. ಆಸ್ತಿಕರು, ಈ ಕೊಳಾಯಿಗಳಿಗೆ ತಲೆಯೊಡ್ಡಿ ಧಾರ್ಮಿಕ ಸ್ನಾನ ಮಾಡಿ, ಪ್ರಾರ್ಥಿಸುತ್ತಾ ತಮ್ಮನ್ನು ತಾವು ‘ಶುದ್ಧೀಕರಣ’ಕ್ಕೆ ಒಳಪಡಿಸಿಕೊಳ್ಳುತ್ತಿದ್ದರು. ಈ ಧಾರ್ಮಿಕ ಪ್ರಕ್ರಿಯೆಗೆ ‘ಮೆಲುಕಾಟ್ ‘ Melukat ಎಂಬ ಹೆಸರಿದೆ . ನಾವು ಸ್ನಾನ ಮಾಡದಿದ್ದರೂ, ತಲೆಗೆ ನೀರನ್ನು ಪ್ರೋಕ್ಷಿಸಿಕೊಂಡೆವು.
ಬಾಲಿ ಹಿಂದೂಗಳ ಧಾರ್ಮಿಕ ಆಚರಣೆಗಳಲ್ಲಿ ಮೆಲುಕಾಟ್ (Melukat) ಅಥವಾ ಪ್ಯೂರಿಫಿಕೇಶನ್/ಶುದ್ಧೀಕರಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ಅವರ ಸಂಪ್ರದಾಯದಲ್ಲಿ ಆತ್ಮ ಮತ್ತು ದೇಹವನ್ನು ಶುದ್ಧೀಕರಿಸುವ ಒಂದು ಆಚರಣೆಯಾದ ‘ಮೆಲುಕಾಟ್’ ನಕಾರಾತ್ಮಕ ಶಕ್ತಿಯನ್ನು ನಿವಾರಿಸಿ, ಭಾವನಾತ್ಮಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಿ, ಆಧ್ಯಾತ್ಮಿಕ ಸಮತೋಲನ ತರುವ ಗುರಿ ಹೊಂದಿದೆ. ನಮ್ಮ ಮಾರ್ಗದರ್ಶಿ ಮುದ್ದಣನ ಮಾತುಗಳಲ್ಲಿ ‘ಸೆರೊಮೊನಿ’ ‘ಪ್ಯೂರಿಫಿಕೇಶನ್’ ಎಂಬ ಪದಗಳು ಆಗಾಗ ಕೇಳಿ ಬರುತ್ತಿದ್ದುವು. ಅವರ ದೈನಂದಿನ ಎಲ್ಲಾ ಪೂಜೆ ವಿಧಾನಗಳಲ್ಲಿ, ಬಾಲಿನೀಸ್ ಜನರು ಕಡ್ಡಾಯವಾಗಿ ‘ಶುದ್ಧೀಕರಣ’ ಮಾಡಿಕೊಳ್ಳುತ್ತಾರೆ. ಸೂಕ್ತ ಮಂತ್ರೋಚ್ಚಾರಣೆಯಿಂದ ಪವಿತ್ರ ನೀರನ್ನು ಪ್ರೋಕ್ಷಿಸಿಕೊಳ್ಳುವ ಮೆಲುಕಾಟ್ ಸರಳ ಸಂಪ್ರದಾಯವೂ ಹೌದು. ಹಬ್ಬಗಳಂದು, ವಿಶೇಷ ದಿನಗಳಂದು ಅವರ ಗುರು ಅಥವಾ ಮುಖ್ಯಸ್ಥರು ‘ಮೆಲುಕಾಟ್’ ನೆರವೇರಿಸುತ್ತಾರಂತೆ.
ನಾವು ಗಮನಿಸಿದಂತೆ, ಬಾಲಿಯಲ್ಲಿ ದೇವರಿಗೆ ತೆಂಗಿನ ಗರಿಯಿಂದ ಮಾಡಿದ ಪುಟ್ಟ ಬುಟ್ಟಿಗಳಲ್ಲಿ ಹೂವು, ಅಗರಬತ್ತಿ ಇಡುತ್ತಾರೆ. ಸ್ವಲ್ಪ ದೊಡ್ಡದಾದ ಬಿದಿರಿನ ಬುಟ್ಟಿಗಳಲ್ಲಿ ಹಣ್ಣುಗಳನ್ನು ಮತ್ತು ಇತರ ಆಹಾರವಸ್ತುಗಳನ್ನು ಅರ್ಪಿಸುತ್ತಾರೆ. ಆದರೆ ಎಲ್ಲಿಯೂ ತಿಂದೆಸೆದ ಹಣ್ಣಿನ ಸಿಪ್ಪೆ, ಕಾಗದ ದೊನ್ನೆ , ಕಿತ್ತು ಹೋದ ಬಿದಿರಿನ ನಾರುಗಳು, ಒಣಗಿದ ಹೂವು ಇತ್ಯಾದಿ ಕಾಣಿಸಲಿಲ್ಲ. ಕೆಲವೆಡೆ ತೀರ್ಥ ಇರುವ ಸ್ಥಳದಲ್ಲಿ ನಾಣ್ಯ ಮತ್ತು ನೋಟುಗಳು ಮಾತ್ರ ಕಂಡು ಬಂದುವು.
ಕೆಲವು ಗುಡಿಗಳಿಗೆ ಮರದ ಅಥವಾ ಲೋಹದ ಛಾವಣಿ ಇದ್ದರೆ, ಹಲವಾರು ಕಡೆ ಛಾವಣಿಗೆ ಒಂದು ಅಡಿಗಿಂತಲೂ ದಪ್ಪವಾಗಿ ಹೊದಿಸಿದ್ದ ಕಪ್ಪು ಹುಲ್ಲಿನ ಹೊದಿಕೆ ಇತ್ತು. ಈಚಲು ಮರದ ತಿರುಳಿನ ನಾರನ್ನು ಸಂಸ್ಕರಿಸಿ ಈ ರೀತಿಯ ಮಾಡುಗಳನ್ನು ನಿರ್ಮಿಸುತ್ತಾರಂತೆ. ಅದು 15- 20 ವರ್ಷಗಳ ಕಾಲ ಬಾಳಿಕೆ ಬರುತ್ತದೆಯಂತೆ. ಪಕ್ಷಿಗಳು ಗೂಡು ಕಟ್ಟಲು ಇಂತಹ ಛಾವಣಿಯಿಂದ ಕೆಲವೆಡೆ ನಾರನ್ನು ಕಿತ್ತಿರುವುದು ಕಾಣಿಸಿತು. ಒಟ್ಟಿನಲ್ಲಿ, ಬಾಲಿಯ ಜನರ ಪ್ರಕೃತಿಪ್ರೇಮ ಹಾಗೂ ಸ್ವಚ್ಚತಾ ಪ್ರಜ್ಞೆಗೆ ಮೆಚ್ಚುಗೆ ಸಲ್ಲಬೇಕು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43697

–ಹೇಮಮಾಲಾ.ಬಿ. ಮೈಸೂರು
Nice. Interesting
Thank you
Interesting. Informative too
Thank you
ಬಹಳ ಸೊಗಸಾಗಿದೆ.
ಓದಿ, ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು
ಪ್ರವಾಸ ಕಥನ ಬಹಳ ಚೆನ್ನಾದ ವಿವರಣೆ ಯೊಂದಿಗೆ ಅನಾವರಣ ವಾಗುತ್ತಿದೆ…ಚಿತ್ರ ಗಳು ಪೂರಕವಾಗಿರುವುದರಿಂದ ಹೆಚ್ಚು ಗಮನಸೆಳೆಯಿತು.. ಗೆಳತಿ..
ಓದಿ, ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು
ಹನ್ನೊಂದನೇ ಶತಮಾನದ ಶಿಲಾಗುಡಿಗಳಿರುವ ಗುನುಂಗ್ ಕಾವಿ, ಆಧ್ಯಾತ್ಮಿಕ ಕ್ಷೇತ್ರವಾಗಿರುವ ಎಂಪುಲ್ ಕುತೂಹಲಕಾರಿಯಾಗಿವೆ. ಬಾಲಿಯ ಜನರ ಪ್ರಕೃತಿ ಪ್ರೇಮ, ಸ್ವಚ್ಛತಾ ಪ್ರಜ್ಞೆ ಇತ್ಯಾದಿಗಳು ಅನುಕರಣೀಯವಾಗಿವೆ. ಪೂರಕ ಚಿತ್ರಗಳೊಂದಿಗೆ ಪ್ರವಾಸ ಕಥನವು ಆಕರ್ಷಕವಾಗಿ ಮೂಡಿಬಂದಿದೆ.
ಓದಿ, ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು