(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
‘ಬಾಲಿ’ಯ ಬಗ್ಗೆ ಒಂದಿಷ್ಟು
ಬೆಂಗಳೂರಿನಿಂದ ಪೂರ್ವ ದಿಕ್ಕಿನಲ್ಲಿ , ಅಂದಾಜು 4800 ಕಿಮೀ ದೂರದಲ್ಲಿ, ಹಿಂದೂ ಮಹಾಸಾಗರ ಮತ್ತು ಶಾಂತಸಾಗರದ ಮಧ್ಯದಲ್ಲಿ ಇಂಡೋನೇಶ್ಯಾ ದ್ವೀಪ ಸಮೂಹವಿದೆ. ಇದರಲ್ಲಿ 17000 ಕ್ಕೂ ಹೆಚ್ಚು ದ್ವೀಪಗಳೈವೆ ಹಾಗೂ ಬಹುತೇಕ ದ್ವೀಪಗಳು ಸಮುದ್ರದಿಂದ್ ಮೇಲೆದ್ದ ಶಿಲೆಗಳಾಗಿದ್ದು ಇದ್ದು ಅಲ್ಲಿ ಜನವಸತಿಯಿಲ್ಲ. ಜನವಸತಿಯಿರುವ 6000 ದ್ವೀಪಗಳಲ್ಲಿ ‘ಬಾಲಿ’ಯು ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಖ್ಯಾತವಾದುದು. ಸುಂದರವಾದ ಕಡಲ ಕಿನಾರೆಗಳು, ಜ್ವಾಲಾಮುಖಿ ಪರ್ವತಗಳು , ಸಸ್ಯ ಸಂಪತ್ತು, ಸಮುದ್ರ ಸಾಹಸ ಚಟುವಟಿಕೆಗಳು, ಉಷ್ಣವಲಯದ ವಾತಾವರಣ ಹೊಂದಿರುವ ಬಾಲಿಯು ಎಲ್ಲಾ ವಯೋಮಾನದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಬಾಲಿಯ ಜನಸಂಖ್ಯೆ ಸುಮಾರು 4.5 ಮಿಲಿಯನ್ . ಸ್ಠಳೀಯರು ತಮ್ಮನ್ನು ‘ಬಾಲಿನೀಸ್ ಹಿಂದು’ ಎಂದು ಗುರುತಿಸಿಕೊಳ್ಳುತ್ತಾರೆ. ಬೇರೆಡೆಯಿಂದ ವಲಸೆ ಬಂದವರು ಸಾಕಷ್ಟು ಮಂದಿ ಇದ್ದಾರಾದರೂ ಅವರು ಸ್ಥಳೀಯರೊಂದಿಗೆ ಸೌಹಾರ್ದಯುತವಾಗಿ ಬೆರೆತು ಹೋಗಿದ್ದಾರೆ ಹಾಗೂ ಬಾಲಿಯ ಸಂಸ್ಕೃತಿಯನ್ನು ಪಾಲಿಸುತ್ತಾರೆ. ಇಲ್ಲಿಯವರು ಕೂಡುಕುಟುಂಬದ ವ್ಯವಸ್ಥೆಗೆ ಅಪಾರ ಮನ್ನಣೆ ಕೊಡುತ್ತಾರೆ. ಇಲ್ಲಿ ಪಿತೃಪ್ರಧಾನ ವ್ಯವಸ್ಥೆ ಇದೆ. ಮನೆತನದ ಮೂಲಮನೆಗೆ ಕೊನೆಯ ಮಗನಿಗೆ ಸೇರುತ್ತದೆ. ಮೂಲಮನೆಯ ಧಾರ್ಮಿಕ ಸಂಪ್ರದಾಯಗಳನ್ನು ನೆರವೇರಿಸಿಕೊಂಡು ಹೋಗುವ ಜವಾಬ್ದಾರಿ ಆತನದ್ದಾಗಿರುತ್ತದೆ. ದಂಪತಿಗೆ ಗಂಡು ಮಕ್ಕಳಿಲ್ಲವಾದಲ್ಲಿ, ಮನೆ ಅಳಿಯನಾಗಿ ಬರಲೊಪ್ಪುವ ಅಳಿಯ ಈ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಹಾಗೂ ಆ ಆಳಿಯನಿಗೆ ಮದುವೆಯ ನಂತರ ತನ್ನ ತಂದೆ-ತಾಯಿಯರ ಧಾರ್ಮಿಕ ವಿಧಿಗಳನ್ನು ಮುಂದುವರಿಸಬೇಕಾದ ಕರ್ತವ್ಯ ಇರುವುದಿಲ್ಲ. ಇವರ ದೈನಂದಿನ ಧಾರ್ಮಿಕ ವಿಧಿಗಳಲ್ಲಿ ತಮ್ಮ ಪಿತೃಗಳನ್ನು ದೈವಸಮಾನರೆಂದು ಪೂಜಿಸುವುದು ಇವರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಪ್ರವಾಸೋದ್ಯಮ ಮತ್ತು ಭತ್ತದ ಕೃಷಿ ಇವರ ಮುಖ್ಯ ಆದಾಯದ ಮೂಲ.
ಬಾಲಿಯಲ್ಲಿ ಹಿಂದೂ ಸಂಸ್ಕೃತಿ ಹೇಗೆ ಆರಂಭವಾಯಿತು ಎಂಬುದು ಕುತೂಹಲಕಾರಿಯಾದ ಅಂಶ. ಪ್ರಾಚೀನ ಭಾರತೀಯ ವರ್ತಕರ ಮೂಲಕ ಒಂದನೆಯ ಶತಮಾನದ ಕಾಲದಲ್ಲಿಯೇ ಇಂಡೋನೇಶ್ಯಾ ದ್ವೀಪಗಳಲ್ಲಿ ಹಿಂದೂ ಧರ್ಮ ಪಸರಿಸಿತ್ತು. ಬಾಲಿಯಿಂದ ಸುಮಾರು 600 ಕಿಮೀ ದೂರದಲ್ಲಿರುವ ಜಾವಾ ದ್ವೀಪದಲ್ಲಿ ಅಂದಿನ ರಾಜರುಗಳ ಆಶ್ರಯದಲ್ಲಿ ಹಿಂದೂ ಹಾಗೂ ಬೌದ್ಧ ಧರ್ಮೀಯರು ಸೌಹಾರ್ದಯುತವಾಗಿ ಬಾಳಿದ್ದರು. 14 ನೆಯ ಶತಮಾನದಲ್ಲಿ ಜಾವಾ ದ್ವೀಪವನ್ನು ಆಳುತ್ತಿದ್ದ ‘ಮಜಪಹಿತ್’ ವಂಶದ ರಾಜರ ಕಾಲದಲ್ಲಿ ಹಿಂದು ಧರ್ಮವು ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಮಜಪಹಿತ್ ವಂಶದ ಅವನತಿಯ ನಂತರ ಜಾವಾ ದ್ವೀಪದಲ್ಲಿ ಇಸ್ಲಾಂ ಧರ್ಮ ಆರಂಭವಾಯಿತು. ಪ್ರಾಣ, ಧರ್ಮ ಉಳಿಸಿಕೊಳ್ಳಲು ಸಾವಿರಾರು ಮಂದಿ ಬಾಲಿ ದ್ವೀಪಕ್ಕೆ ಪಲಾಯನ ಮಾಡಿದರು. ಇವರು ಬಾಲಿ ದ್ವೀಪದಲ್ಲಿ ಸ್ವತಂತ್ರವಾಗಿ ಬಾಲಿನೀಸ್ ಹಿಂದೂ ಸಂಸ್ಕೃತಿಯನ್ನು ಸ್ಥಾಪಿಸಿದರು. ಹೀಗೆ ಬಾಲಿಯು ಮುಸ್ಲಿಂ ಆಡಳಿತವುಳ್ಳ ಇಂಡೋನೇಶಿಯಾದಲ್ಲಿದ್ದರೂ, ಹಿಂದೂ ಪ್ರಾಬಲ್ಯವುಳ್ಳ ದ್ವೀಪವಾಗಿ ಬೆಳೆಯಿತು. ಇಲ್ಲಿಯ ಸ್ಥಳೀಯರು ಬಾಲಿನೀಸ್ ಭಾಷೆ ಮತ್ತು ಇಂಡೊನೇಶಿಯನ್ ಮಾತನಾಡುತ್ತಾರೆ. ಕೆಲವರಿಗೆ ಸಂಸ್ಕೃತವೂ ಗೊತ್ತಿರುತ್ತದೆ ಹಾಗೂ ಪ್ರವಾಸೋದ್ಯಮದ ಅಗತ್ಯವಾಗಿ ಇಂಗ್ಲಿಷ್ ಕಲಿಯುತ್ತಾರೆ. ಪ್ರವಾಸಿಗರನ್ನು ಕಂಡಾಗ ಆತ್ಮೀಯ ನಗೆ ಚೆಲ್ಲಿ ‘ ಓಂ ಸ್ವಸ್ಥ್ಯಸ್ತು’ ಎಂದು ಕೈಜೋಡಿಸಿ ವಂದಿಸುವುದು ಇವರ ಸಂಪ್ರದಾಯ.
16 ನೆಯ ಶತಮಾನದಲ್ಲಿ ಸಂಬಾರ ವಸ್ತುಗಳ ವ್ಯಾಪಾರಕ್ಕಾಗಿ ಇಲ್ಲಿಗೆ ಬಂದ ಪೋರ್ಚ್ ಗೀಸರು ತಮ್ಮ ವಸಾಹತನ್ನು ಸ್ಥಾಪಿಸಿದರು . ಸ್ಥಳೀಯರೊಂದಿಗೆ ನಿರಂತರ ಘರ್ಷಣೆ ಇದ್ದ ಕಾರಣ, ಇವರು ತಮ್ಮ ಪ್ರಯತ್ನದಲ್ಲಿ ತೀರಾ ಯಶಸ್ವಿ ಎನ್ನಲಾಗದಿದ್ದರೂ, ಇಂಡೋನೇಶ್ಯಾದಲ್ಲಿ ಕೈಸ್ತ ಧರ್ಮವು ಬೇರೂರಲು ಕಾರಣವಾಯಿತು. 1908 ರಲ್ಲಿ ಡಚ್ಚರು ಸ್ಥಳೀಯ ರಾಜರ ಆಡಳಿತವನ್ನು ಕೊನೆಗೊಳಿಸಿ, ಇಂಡೋನೇಶ್ಯಾ ದ್ವೀಪ ಸಮೂಹದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದರು. 1942 ರಲ್ಲಿ ಸಂಭವಿಸಿದ ಎರಡನೆಯ ಮಹಾಯುದ್ದದ ಕಾಲದಲ್ಲಿ ಜಪಾನ್ ಸೇನೆ ಇಂಡೊನೇಶ್ಯಾಕ್ಕೆ ಬಂತು. ಯುದ್ಧದಲ್ಲಿ ಜಪಾನ್ ಸೋತಿತ್ತು. ಸ್ಥಳೀಯರ ನಿರಂತರ ಪ್ರಯತ್ನಗಳ ನಂತರ ಇಂಡೋನೇಶ್ಯಾ ದ್ವೀಪ ಸಮೂಹಕ್ಕೆ ಡಿಸೆಂಬರ್ 27, 1949 ರಂದು ಡಚ್ಚರಿಂದ ಸ್ವಾತಂತ್ರ್ಯ ಲಭಿಸಿತು. ಹೀಗಾಗಿ, ಬಾಲಿಯ ಆಹಾರ ಪದ್ಧತಿ ಏಷ್ಯನ್-ಇಂಡೋ-ಯುರೋಪಿಯನ್ ಸಂಸ್ಕೃತಿಯಿಂದ ಪ್ರಭಾವಿತಗೊಂಡಿದೆ . ಅಕ್ಕಿಯು ಮುಖ್ಯ ಆಹಾರವಾಗಿದೆ. ಉಷ್ಣವಲಯದ ಎಲ್ಲಾ ವಿಧದ ಹಣ್ಣು ತರಕಾರಿಗಳು ಮಾರುಕಟ್ಟೆಯಲ್ಲಿ ಧಾರಾಳವಾಗಿ ಕಾಣಸಿಗುತ್ತವೆ.
‘ಬಾಲಿ’ಯಲ್ಲಿ ವಾಯುವಿಹಾರ
ಸೆಪ್ಟೆಂಬರ್ 05, 2025 ರ ಮುಂಜಾನೆ ಬಾಲಿಯ ಸಮಯ 0600 ಗಂಟೆಗೆ ಎಚ್ಚರವಾಯಿತು. ರಾಕೇಶ್ ಅವರು ಅದಾಗಲೇ ಎದ್ದು ಉಪಾಹಾರದ ತಯಾರಿಯಲ್ಲಿದ್ದರು. ಮೊದಲು ರೂಮ್ ಗೆ ಕಾಫಿ ತಂದುಕೊಟ್ಟರು. ನಾನು ಹೋಂ ಸ್ಟೇಯ ಆವರಣ ಚೆಲುವನ್ನು ಆಸ್ವಾದಿಸುತ್ತಾ, ಪಂಜರದಲ್ಲಿದ್ದ ಗಿಣಿಗಳನ್ನು ನೋಡುತ್ತಾ ಇದ್ದೆ. ಅಷ್ಟರಲ್ಲಿ ರುಕ್ಮಿಣಿಮಾಲಾ, ಮಂಜುಳಾ ಪಾಟೀಲ್ ಮತ್ತು ಪ್ರಭಾಮಣಿ ಮುಂಜಾನೆಯ ವಾಯುವಿಹಾರಕ್ಕೆ ಸಿದ್ಧರಾಗಿದ್ದರು. ಎಲ್ಲರೂ ಪಕ್ಕದ ರಸ್ತೆಗಿಳಿದೆವು. ಸ್ಚಚ್ಚವಾಗಿದ್ದ ರಸ್ತೆಗಳು. ಹೋಂ ಸ್ಟೇ ಯ ಎದುರುಗಡೆ ಒಂದು ಕಟ್ಟೆಯಂತಹ ‘ತೆರೆದ ಮಂದಿರ’ವಿತ್ತು. ಆಗಲೇ ಪೂಜೆ ಮುಗಿಸಿದ ಕುರುಹಾಗಿ ಅಲ್ಲಿ ಹೂವು, ಉರಿಸಿಟ್ಟಿದ್ದ ಅಗರಬತ್ತಿ ಇದ್ದುವು. ಪಕ್ಕದಲ್ಲಿ ದೊಡ್ಡದಾದ ಆಟದ ಮೈದಾನವಿತ್ತು. ನಮ್ಮ ತಂಡದ ಒಂದಿಬ್ಬರು ಅಲ್ಲಿ ವೇಗವಾಗಿ ನಡೆಯುತ್ತಿದ್ದರು. ದೂರದಿಂದ ಹಿತವಾದ ವಾದ್ಯಸಂಗೀತ ಅಲೆಯಲೆಯಾಗಿ ತೇಲಿ ಬರುತ್ತಿತ್ತು. ಆ ಮನೆಯ ಕಡೆಗೆ ನಡೆದೆವು. ಅಲ್ಲಿ ಸಾಂಪ್ರದಾಯಿಕ ಉಡುಗೆ ‘ಸಾರಂಗೊ’ ತೊಟ್ಟಿದ್ದ ಮನೆಯಾಕೆ ಪೂಜೆಗೆ ಸಿದ್ದಗೊಳಿಸುತ್ತಿದ್ದರು. ಕಲಾತ್ಮಕವಾದ ಮುಖ್ಯದ್ವಾರವನ್ನು ಕಂಡು, ನಾವು ಒಳಗೆ ಬರಬಹುದೇ ಎಂದಾಗ, ‘ಅನುಮತಿ ಇಲ್ಲ’ ಎಂಬಂತೆ ತಲೆಯಾಡಿಸಿದರು.
ಆಮೇಲೆ ನಮಗೆ ಗೊತ್ತಾದ ವಿಚಾರವೇನೆಂದರೆ, ಬಾಲಿನೀಸ್ ಹಿಂದುಗಳ ಪ್ರತಿ ಮನೆಯಲ್ಲಿಯೂ ಅವರ ವೈಯುಕ್ತಿಕ ದೇವಾಲಯವಿರುತ್ತದೆ. ಅಲ್ಲಿ ಬ್ರಹ್ಮ, ವಿಷ್ಣು, ಶಿವ, ಸೂರ್ಯ, ಕುಬೇರ ಹಾಗೂ ಕೆಲವೊಮ್ಮೆ ಇತರ ದೇವತೆಗಳಿಗೂ ಗುಡಿಯಿರುತ್ತವೆ. ಇವಲ್ಲದೆ, ಅವರ ಮನೆಯ ಹಿರಿಯರಿಗೂ ಗುಡಿಯಿರುತ್ತದೆ. ಹಾಗಾಗಿ ವೈಯುಕ್ತಿಕ ಮಂದಿರಗಳಿಗೆ ಕುಟುಂಬದ ಸದಸ್ಯರು ಮಾತ್ರ ಭೇಟಿ ಕೊಡುತ್ತಾರೆ. ಪ್ರತಿ ಗುಡಿಯಲ್ಲಿಯೂ, ಪ್ರತಿ ದಿನವೂ ಪೂಜೆ ಮಾಡುತ್ತಾರೆ. ಪ್ರತಿ ನಗರದಲ್ಲಿಯೂ ಹಲವಾರು ಸಾರ್ವಜನಿಕ ದೇವಾಲಯಗಳಿದ್ದು, ಅಲ್ಲಿಗೆ ಪ್ರವಾಸಿಗರು ಭೇಟಿ ಕೊಡಬಹುದಾಗಿದೆ. ನಾವು ಗಮನಿಸಿದ ಪ್ರತಿ ಮನೆಯಲ್ಲಿಯೂ ವೈಯುಕ್ತಿಕ ದೇವಾಲಯಗಳಿದ್ದುವು. ಈ ಗುಡಿಗಳ ಎದುರು, ಕೂಡು ರಸ್ತೆಯಲ್ಲಿ, ಅಂಗಡಿಗಳ ಮುಂದೆ……ಹೀಗೆ ಎತ್ತ ನೋಡಿದರತ್ತ ಆಗ ತಾನೇ ಮಾಡಿದ್ದ ಪೂಜೆಯ ಗುರುತುಗಳು ಕಾಣಿಸುತ್ತಿದ್ದುವು. ಹೋಲಿಕೆ ಕೊಡುವುದಾದರೆ, ನಮ್ಮಲ್ಲಿ ಬೆಳಗ್ಗೆ ಮನೆ ಮುಂದೆ ರಂಗೋಲಿ ಹಾಕುವಷ್ಟೇ ಸಹಜವಾಗಿ ಪ್ರತಿನಿತ್ಯ ಮನೆಯ ಮಂದಿರದಲ್ಲಿ ಪೂಜೆ ಮಾಡುವುದು ಅವರ ಜೀವನ ವಿಧಾನವೆಂದು ಗೊತ್ತಾಯಿತು.
ಇಂಡೋನೇಶ್ಯಾ ದೇಶದಲ್ಲಿ ಇಸ್ಲಾಂ ಧರ್ಮವು ವ್ಯಾಪಕವಾಗಿದ್ದರೂ, ‘ ಬಾಲಿ ‘ ದ್ವೀಪದಲ್ಲಿ ಹಿಂದುಗಳ ಸಂಖ್ಯೆ 80 ಶೇಕಡಾ ಇದೆ ಹಾಗೂ ಇಲ್ಲಿ ವಿಶಿಷ್ಟವಾದ ಬಾಲಿನೀಸ್ ಹಿಂದು ಸಂಸ್ಕೃತಿಯನ್ನು ನಿಷ್ಠೆಯಿಂದ ಪಾಲಿಸುತ್ತಾರೆ. ಸಹಸ್ರಾರು ದೇವಾಲಯಗಳನ್ನು ಹೊಂದಿರುವ ‘ಬಾಲಿ’ಯು “ದೇವರುಗಳ ದ್ವೀಪ” ಎಂದೇ ಕರೆಯಲ್ಪಡುತ್ತದೆ. ಬಾಲಿಯ ಬಹುತೇಕ ಮಂದಿರಗಳಲ್ಲಿ, ಕಲಾತ್ಮಕವಾದ ಕೆತ್ತನೆಯುಳ್ಳ, ಎರಡು ಅರ್ಧಭಾಗಗಳಂತೆ ಕಟ್ಟಲಾದ ಮುಖ್ಯದ್ವಾರವಿರುತ್ತದೆ (Split Gateways). ಪ್ರಾಪಂಚಿಕತೆಯಿಂದ ದೈವಿಕತೆಯನ್ನು ಪ್ರೇರೇಪಿಸುವ ಅರ್ಥದಲ್ಲಿ , ಬಾಲಿನೀಸ್ ದೇವಾಲಯದ ವಾಸ್ತುವಿನ್ಯಾಸದಲ್ಲಿ ಕಟ್ಟಲಾಗುವ ಮುಖ್ಯದ್ವಾರಕ್ಕೆ ‘ಕ್ಯಾಂಡಿ ಬೆಂಟಾರ್‘ ಎಂಬ ಹೆಸರಿದೆ.
ನಮ್ಮ ವಾಯುವಿಹಾರದ ದಾರಿಯಲ್ಲಿ, ಕೆಲವು ಸ್ಥಳೀಯರು ಸ್ಕೂಟರ್ ನಲ್ಲಿ ನೀರಿನ ಕ್ಯಾನ್ ಗಳನ್ನು ಕಟ್ಟಿಕೊಂಡು ಒಂದು ಮಾರ್ಗದಲ್ಲಿ ಹೋಗುವುದನ್ನು ಗಮನಿಸಿದೆವು. ಅಪರಿಚಿತರಾದ ನಮಗೆ ಅವರು ನಸುನಗುತ್ತಾ ವಂದಿಸಿದರು. ಅವರನ್ನು ಹಿಂಬಾಲಿಸುತ್ತಾ ಹೋದಾಗ ಮಂಗಳೂರಿನ ಜನವಸತಿ ರಸ್ತೆಯಲ್ಲಿದ್ದೇವೆಯೇ ಅನಿಸಿತು. ಯಾಕೆಂದರೆ, ಸ್ವಲ್ಪ ಏರು ತಗ್ಗಿನ ರಸ್ತೆಗಳು, ಹೆಂಚಿನ ಮಾಡುಗಳಿದ್ದ ಮನೆಗಳು ಹಾಗೂ ಮನೆಯ ಮುಂದೆ ಅರಳಿದ್ದ ಬಣ್ಣಬಣ್ಣದ ದಾಸವಾಳ, ರತ್ನಗಂಧಿ, ಕಿಸ್ಕಾರ, ಗೋಸಂಪಿಗೆ. ನಂದಿಬಟ್ಟಲು ಮೊದಲಾದ ಕರಾವಳಿಯ ಹೂಗಳು ನಗುತ್ತಾ ಸ್ವಾಗತಿಸಿದುವು. ಇನ್ನೂ ಮುಂದುವರಿದಾಗ, ಅಲ್ಲೊಂದು ಒರತೆ ನೀರಿನ ಸ್ಥಳವಿತ್ತು. ಅಲ್ಲಿ ರಾಮ , ಸೀತೆ, ಹನುಮಂತರ ವಿಗ್ರಹಗಳಿದ್ದುವು. ಅಲ್ಲಿಗೆ ಸ್ಕೂಟರ್ ನಲ್ಲಿ ಬಂದು ತಲಪಿದ್ದ ಸ್ಥಳೀಯರು ತಾವು ತಂದಿದ್ದ ಕ್ಯಾನ್ ಗಳಲ್ಲಿ ಆ ನೀರನ್ನು ತುಂಬಿಸಿಕೊಂಡರು. ಪ್ರಾಕೃತಿಕವಾಗಿ ಸಿಗುವ ನೀರನ್ನು ‘ತೀರ್ಥ’ ಎಂದು ಪರಿಗಣಿಸುವ ಸಂಸ್ಕೃತಿ ಇಲ್ಲಿಯದು. ಈ ನೀರು ವರ್ಷವಿಡೀ ಇರುತ್ತದೆಯೇ ಎಂದಾಗ, ಇಲ್ಲ, ಇನ್ನೊಂದೆರಡು ತಿಂಗಳು ಸಿಗಬಹುದು ಎಂದರು. ಪಕ್ಕದಲ್ಲಿ ಚಿಕ್ಕ ತೊರೆ ಹರಿಯುತ್ತಿತ್ತು.
ಹೀಗೆ ಒಂದು ಗಂಟೆ ನಡೆದಾಡಿ, ‘ಅಮರ್ಥ’ ಹೋಂ ಸ್ಟೇಗೆ ಬಂದು ಸ್ನಾನ, ರುಚಿಯಾಗಿದ್ದ ಪೂರಿ, ಸಾಗು, ಚಟ್ನಿ ಉಪಾಹಾರ ಮಾಡಿ ಆ ದಿನದ ಸುತ್ತಾಟಕ್ಕೆ ಸಿದ್ಧರಾದೆವು. ನಮ್ಮನ್ನು ಕರೆದೊಯ್ಯಲು ಮಾರ್ಗದರ್ಶಿ ‘ ಮುದ್ದಣ’ ವ್ಯಾನ್ ಜೊತೆಗೆ ಬಂದಿದ್ದರು. ಹೋಂ ಸ್ಟೇಯ ‘ಏಕಾ’ ಅವರೂ ಜೊತೆಗಿದ್ದರು. ಅವರೊಂದಿಗೆ ಒಂದು ಫೊಟೊ ಕ್ಲಿಕ್ಕಿಸಿ ಸಂತೋಷಪಟ್ಟೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ : https://surahonne.com/?p=43664

–ಹೇಮಮಾಲಾ.ಬಿ. ಮೈಸೂರು
ಪ್ರ ವಾಸ ಕಥನ ಚಂದದ ನಿರೂಪಣೆಯೊಂದಿಗೆ..ಸಾಗುತ್ತಿದೆ..
ಧನ್ಯವಾದಗಳು
ಬಾಲಿಯ ಪರಿಚಯ ಹಾಗೂ ಅವರ ಸಂಪ್ರದಾಯಗಳ ನೋಟ ಸೊಗಸಾಗಿ ಮೂಡಿ ಬಂದಿದೆ
ಮುಂದಿನ ಭಾಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇವೆ
ಧನ್ಯವಾದಗಳು
ವಾವ್. ತುಂಬಾ ಖುಷಿ ಕೊಡುತ್ತಿದೆ ಪ್ರವಾಸ ಕಥನ
ಧನ್ಯವಾದಗಳು
ಪ್ರವಾಸ ಕಥನ ಚೆನ್ನಾಗಿ ಬರುತ್ತಿದೆ. ಕೇವಲ ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳ ಪರಿಚಯಿಸಿದೆ, ಅವರು ಇತಿಹಾಸ, ಸಂಪ್ರದಾಯ ಪರಿಚಯಿಸುತ್ತಿರುವುದು ಲೇಖನದ ಸೊಗಸು ಹೆಚ್ಚಿಸಿದೆ