ಪ್ರವಾಸ

ದೇವರ ದ್ವೀಪ ಬಾಲಿ : ಪುಟ-1

Share Button

ನಮ್ಮ ದೇಶದ ಹೆಸರಿನ  ಆಂಗ್ಲ ಹೆಸರಿನ  ಅರ್ಧಭಾಗವನ್ನು ಹಂಚಿಕೊಂಡಿರುವ ‘ಇಂಡೋನೇಶ್ಯಾ’ ದ್ವೀಪ ಸಮೂಹದ  ಬಗ್ಗೆ ಚರಿತ್ರೆಯ ಪಾಠದಲ್ಲಿ ಓದಿದ್ದೆ ಹಾಗೂ ಮರೆತಿದ್ದೆ.  ಎಲ್ಲದಕ್ಕೂ ಕಾಲ ಕೂಡಿ  ಬರಬೇಕು ಎಂಬುದು ಮತ್ತೊಮ್ಮೆ ರುಜುವಾತಾಯಿತು.  ಸೆಪ್ಟೆಂಬರ್ 04-10, 2025 ರ ಅವಧಿಯಲ್ಲಿ, ಮೈಸೂರಿನಲ್ಲಿರುವ ಶ್ರೀ ಎಸ್.ವಿ.ಕೃಷ್ಣಮೂರ್ತಿ ಹಾಗೂ ಶ್ರೀಮತಿ ತಾರಾ ದಂಪತಿ ನಿರ್ವಹಿಸುವ ‘ಹಿಮಾಲಯ ದರ್ಶನ’  ತಂಡದ ಜೊತೆಗೆ  ಇಂಡೋನೇಶ್ಯಾದ ‘ದೇವರ ದ್ವೀಪ’ ಎಂದು ಕರೆಯಲ್ಪಡುವ  ‘ಬಾಲಿ’ ದ್ವೀಪಕ್ಕೆ ಭೇಟಿ ಕೊಟ್ಟು ಬಂದೆವು. 

ಸೆಪ್ಟೆಂಬರ 04,2025 ರ  ಮುಂಜಾನೆ 01: 20 ಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ  ಹೊರಟ ಇಂಡಿಗೋ ವಿಮಾನವು   ಸುಮಾರು 0630 ಗಂಟೆಗಳ ಪ್ರಯಾಣದ ನಂತರ    ಇಂಡೋನೇಶ್ಯಾ ದ್ವೀಪಗಳಲ್ಲೊಂದಾದ ‘ಬಾಲಿ’ಯ Ngurah Rai International Airport ಗೆ  ನಮ್ಮನ್ನು ತಲಪಿಸಿತು.  ಆಗ ಅಲ್ಲಿಯ ಸಮಯ ಬೆಳಗ್ಗೆ 1030 ಗಂಟೆ ಆಗಿತ್ತು.  ಇಂಡೋನೇಶ್ಯಾದ ಸಮಯವು ಭಾರತದ ಸಮಯಕ್ಕಿಂತ  ಎರಡೂವರೆ ಗಂಟೆ ಮುಂದೆ ಇದೆ.   ವಿಮಾನ ನಿಲ್ದಾಣವಿರುವ ಜಾಗದ ಹೆಸರು ‘ಡೆನ್ ಪಸಾರ್ ‘.  

‘ಬಾಲಿ’ಯಲ್ಲಿ ಆಗಮನ ಕಾರ್ಡ್  (Indonesia Arrival Card)…

ವಿಮಾನದಿಂದಿಳಿದು, ಮುಂದಿನ ಹಂತವಾಗಿ, ನಾನು ಬಾಲಿಗೆ ಬಂದುದಕ್ಕೆ ಸಾಕ್ಷಿಯಾಗಿ ಪಾಸ್ ಪೋರ್ಟ್ ನಲ್ಲಿ  ಮುದ್ರೆ ಹಾಕಿಸಿಕೊಳ್ಳಲು  ಇಮಿಗ್ರೇಶನ್ ಕೌಂಟರ್ ನ ಸರದಿ ಸಾಲಿನಲ್ಲಿ ನಿಂತೆವು.  ಇಮಿಗ್ರೆಶನ್ ಕೌಂಟರ್ ಮುಂದೆ ಆಗಲೇ  ಸಾಕಷ್ಟು ಜನರಿದ್ದರು.   ಆದರೆ, ಇಲ್ಲಿ ನಾವು ನಿರೀಕ್ಷಿಸದ ಕಿರಿಕಿರಿ ಉಂಟಾಯಿತು.    

        ಇತ್ತೀಚಿನ ವರ್ಷಗಳ ವರೆಗೂ (ಬಹುಶ: ಕೆಲವೆಡೆ ಈಗಲೂ), ವಿದೇಶ ಪ್ರಯಾಣದ ಸಂದರ್ಭಗಳಲ್ಲಿ , ವಿಮಾನದಲ್ಲಿಯೇ  ‘Arrival Card” ಎಂಬ ಫಾರ್ಮ್ ಅನ್ನು ಕೊಡುತ್ತಿದ್ದರು ಅಥವಾ  ಕೌಂಟರ್ ನಲ್ಲಿ ಲಭ್ಯವಿರುತ್ತಿತ್ತು.   ನಮ್ಮ ಹೆಸರು, ವಯಸ್ಸು ಮೊದಲಾದ  ಮಾಹಿತಿ,  ನಿಷೇಧಿತ ವಸ್ತುಗಳನ್ನು ಒಯ್ಯುತ್ತಿಲ್ಲ/ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿಲ್ಲ ಎಂಬಂತಹ ದೃಢೀಕರಣ ..ಹೀಗೆ ಸರಳ ಮಾಹಿತಿಯನ್ನು ಕೊಡಬೇಕಾಗಿದ್ದ ವ್ಯವಸ್ಥೆ ಅದಾಗಿತ್ತು.  ಇದರನ್ನು ಪಾಲಿಸಲು ವಿವಿಧ ದೇಶಗಳು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿವೆ.

‘ಬಾಲಿ’ ವಿಮಾನ ನಿಲ್ದಾಣದಲ್ಲಿ, ಅಮೆರಿಕಾ, ಯುರೋಪ್ ಮುಂತಾದ ಕೆಲವು ದೇಶದ   ನಾಗರಿಕರಿಗೆ  Visa On Arrival (VOA)  ವ್ಯವಸ್ಥೆ ಇದ್ದ ಕಾರಣ , ಅವರು ತಮ್ಮ ಪಾಸ್ ಪೋರ್ಟ್ ಅನ್ನು ಅಲ್ಲಿದ್ದ ಸ್ಕ್ಯಾನರ್ ನಲ್ಲಿ ನಮೂದಿಸಿ ಬೇಗನೇ ಹೊರಡಲು ಸಾಧ್ಯವಾಗುತ್ತಿತ್ತು.  ಆದರೆ ಭಾರತವನ್ನೂ ಸೇರಿ ಏಷ್ಯಾ ಖಂಡದ ಹಲವಾರು ದೇಶಗಳಿಗೆ (Visa Exempt)  ಇ-ವೀಸಾದ ಅನುಕೂಲತೆ ಇತ್ತಾದರೂ, ನಮ್ಮ ಸರದಿ ಸಾಲು ಬಸವನ ಹುಳುವಿನಂತೆ  ತೆವಳುತ್ತಿತ್ತು.   ಕಾರಣ, ಅಲ್ಲಿ ಒಂದು Arrival Card ಎಂಬ  QR Code  ಅಳವಡಿಸಿದ್ದರು. ಅದನ್ನು ಸ್ಕ್ಯಾನ್ ಮಾಡಿ, ಮಾಹಿತಿ ತುಂಬಿ ಎಂದರು ಅಲ್ಲಿದ್ದ ಸಿಬ್ಬಂದಿ.   ನಮ್ಮ ತಂಡದಲ್ಲಿದ್ದವರು ಈಗಾಗಲೇ ಕೆಲವು ವಿದೇಶ ಪ್ರಯಾಣ ಮಾಡಿದ್ದರೂ, ಸ್ಮಾರ್ಟ್ ಫೋನ್ ಎಲ್ಲರ ಬಳಿಯೂ ಇದ್ದರೂ,  ಡಿಜಿಟಲ್ Arrival Card  ನಮಗೆ ಹೊಸದಾಗಿತ್ತು.   ಅದರಲ್ಲಿ ತುಂಬಬೇಕಾದ ಮಾಹಿತಿ ಬಲು ಸರಳವಾಗಿದ್ದರೂ, ನೆಟ್ ವರ್ಕ್ ಸಮಸ್ಯೆಯಿಂದಾಗಿ ಬಹಳ ಸಮಯ ತೆಗೆದುಕೊಂಡಿತು. ಇನ್ನೂರಕ್ಕೂ ಮೇಲಿದ್ದ ಜನರಿಗೆ ಸಹಾಯ ಹಸ್ತ ಚಾಚಲು ಇದ್ದವರು ಇಬ್ಬರೇ ಸಿಬ್ಬಂದಿ.  ಇನ್ನು  ಇಪ್ಪತ್ತಕ್ಕೂ ಮಿಕ್ಕಿ ಇಮಿಗ್ರೇಶನ್ ಕೌಂಟರ್ ಗಳು  ಇದ್ದುವಾದರೂ, ಅದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದು ಕೇವಲ  ಮೂರೇ  ಕೌಂಟರ್ ಗಳು.  ವಿಮಾನ ನಿಲ್ದಾಣದ ಏಶಿಯನ್ ವಿಭಾಗವು ಸಂತೆಯಂತೆ ಇತ್ತು.  ಏಶಿಯನ್ ದೇಶಗಳಿಗೆ ವೀಸಾ  ಬೇಕಿಲ್ಲ ಎಂದಿದ್ದರೂ,ಈ ತಾರತಮ್ಯ, ಅವಗಣನೆ ಬೇಕಿತ್ತೇ ಎಂದು ಅನಿಸಿದ್ದು ಸುಳ್ಳಲ್ಲ.

ಹಿರಿಯ ನಾಗರಿಕರಿಗೆಂದು  ಒಂದೆರಡು ಕೌಂಟರ್ ಗಳಿದ್ದ ಕಾರಣ ನಮ್ಮ ತಂಡದಲ್ಲಿದ್ದ ಒಟ್ಟು 17 ಮಂದಿಯಲ್ಲಿ,  60 ರ ಮೇಲ್ಪಟ್ಟವರು  ನಮ್ಮಿಂದ ಮೊದಲು ಇಮಿಗ್ರೇಶನ್  ಕೌಂಟರ್ ದಾಟಿಯಾಗಿತ್ತು.  ನಮ್ಮ ತಂಡದಲ್ಲಿದ್ದ  ಗೆಳತಿ ರುಕ್ಮಿಣಿಮಾಲಾ ಮತ್ತು ನಾನು ಇನ್ನೂ ಹಿರಿಯ ನಾಗರಿಕರಲ್ಲದ ಕಾರಣ  ನಮ್ಮ ಸರದಿ  ಬರುವಾಗ ಇನ್ನಷ್ಟು  ತಡವಾಯಿತು. ನಮ್ಮನ್ನು ಬಿಟ್ಟು ಅವರು ಹೋಗಲು ಸಾಧ್ಯವಿಲ್ಲದ ಕಾರಣ , ಒಟ್ಟಿನಲ್ಲಿ ಎಲ್ಲರಿಗೂ ತಡವಾಯಿತು. ಅಂತೂ ಸಹಪ್ರವಾಸಿಗರಾದ ಶ್ರೀ ವಿಷ್ಣುಮೂರ್ತಿ ಅವರ ಮೊಬೈಲ್ ನಲ್ಲಿ, ನಮ್ಮ ಹೆಸರನ್ನೂ ನಮೂದಿಸಿಕೊಂಡು, ಸಿಬ್ಬಂದಿಯ ಸಹಾಯ ಪಡೆದು, ಬಲು ನಿಧಾನವಾಗಿ  ‘ಇಮಿಗ್ರೇಶನ್ ಚೆಕ್’ ಕೌಂಟರ್ ನಲ್ಲಿ ನಮ್ಮ ಪಾಸ್ ಪೋರ್ಟ್ ಗೆ ಮುದ್ರೆ ಹಾಕಿಸಿಕೊಂಡು ಹೊರಬಂದಾಗ   ಬಾಲಿಯ ಬಗ್ಗೆ ಮೊದಲ ಅನಿಸಿಕೆ ಭ್ರಮ ನಿರಸನವಾಗಿತ್ತು. ಕ್ಷುಲ್ಲಕ ಎನಿಸುವ ಈ   ಫಾರ್ಮ್ ಭರ್ತಿ  ಮಾಡಲು ಆದ  ವಿಳಂಬದಿಂದಾಗಿ ಸರದಿ ಸಾಲಿನಲ್ಲಿ ಎರಡು ಗಂಟೆ ತಾಳ್ಮೆಗೆಟ್ಟು ಕಾದಿದ್ದೆವು.  ಮೇಲಾಗಿ , ಮುನ್ನಾ ದಿನ ಸಂಜೆ ಮೈಸೂರಿನಿಂದ ಹೊರಟು, ಸುದೀರ್ಘ ಪ್ರಯಾಣದ ನಂತರ, ಇನ್ನೂ ಫ್ರೆಷ್ ಅಪ್ ಆಗದೆ, ಉಪಾಹಾರ ಸೇವಿಸದೆ ಇದ್ದ ದಣಿವೂ ಜೊತೆಗೂಡಿತ್ತು. ನಮ್ಮ ಹಾಗೆ ಗೊಂದಲಕ್ಕೊಳಗಾದವರು ನೂರಾರು ಮಂದಿ ಇದ್ದರು! 

ನಮ್ಮ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಇಮಿಗ್ರೇಶನ್ ಕೌಂಟರ್ ಗಳಿದ್ದು,  ಕೇವಲ 5 ನಿಮಿಷದಲ್ಲಿ ನಮ್ಮ ಪಾಸ್ ಪೋರ್ಟ್ ನಲ್ಲಿ ಮುದ್ರೆ ಬಿದ್ದು ಹೊರಗೆ ಬಂದಾಗುತ್ತದೆ.  ಮನೆಗೆ ಮರಳಿ ಬಂದ ಮೇಲೆ  ಇದೇಕೆ ಹೀಗೆ ಎಂದು  ಅಂತರ್ಜಾಲದಲ್ಲಿ ಹುಡುಕಿದಾಗ,   Digital Arrival Card  ವ್ಯವಸ್ಥೆಯನ್ನು ಕಳೆದ ತಿಂಗಳಷ್ಟೇ ಶುರುಮಾಡಿದ್ದೆಂದೂ,  ಪ್ರವಾಸಿಗರು ತಮ್ಮ ಪ್ರಯಾಣದ 72 ಗಂಟೆ ಮುಂಚಿತವಾಗಿ  https://allindonesia.imigrasi.go.id/ ವೆಬ್ ಸೈಟ್ ನಲ್ಲಿ ಭರ್ತಿ ಮಾಡಬಹುದೆಂದೂ ಗೊತ್ತಾಯಿತು.

ವಿಮಾನ ನಿಲ್ದಾಣದಿಂದ ಹೊರ ಬಂದ ಕೂಡಲೇ, ವ್ಯಾನ್ ಬಂದಿತ್ತು. ಸ್ಥಳೀಯ ಮಾರ್ಗದರ್ಶಿ ‘ಮುದ್ದಣ’ ಅವರು ‘ಓಂ ಸ್ವಸ್ಥ್ಯಸ್ತು’ ಎಂದು ಕೈಮುಗಿದು ನಮ್ಮನ್ನು  ಸ್ವಾಗತಿಸಿದರು.   ಬಾಲಿಯಲ್ಲಿ ನಮ್ಮ  ವಾಸ್ತವ್ಯಕ್ಕೆ ‘ ಉಬೂದ್’ ಎಂಬಲ್ಲಿರುವ  ನಮ್ಮ ಪ್ರವಾಸದ ಆಯೋಜಕರು   ಅಲ್ಲಿಂದ 33  ಕಿಮೀ ದೂರದಲ್ಲಿರುವ ‘ಉಬೂದ್ ‘ ನಗರದ  ‘ಪುರಿ ಅಮರಥ’ ಎಂಬ   ವಸತಿಗೃಹವನ್ನು ಕಾಯ್ದಿರಿಸಿದ್ದರು.  ನಮ್ಮ ಉಪಾಹಾರಕ್ಕೆಂದು ಆಯೋಜಕರು ಕಟ್ಟಿಕೊಟ್ಟಿದ್ದ ಚಪಾತಿಗೆ  ತರಕಾರಿ ಗೊಜ್ಜು ಸೇರಿಸಿ ವ್ಯಾನ್ ನಲ್ಲಿಯೇ ತಿಂದೆವು.

ಚೆಂದದ ರಸ್ತೆ, ಕರಾವಳಿಯ ಸಸ್ಯ ಸಂಕುಲದ ಪರಿಸರದಲ್ಲಿ,  ಸುಮಾರು ಒಂದುವರೆ ಗಂಟೆ ಪ್ರಯಾಣಿಸಿ, ಸಂಜೆ 0430  ಗಂಟೆಗೆ ಹೋಂ ಸ್ಟೇ ತಲಪಿದೆವು. ಬಾಲಿಯ ಸಾಂಪ್ರದಾಯಿಕ  ಉಡುಗೆ ತೊಟ್ಟ  ಹೋಂ ಸ್ಟೇ ಸಿಬ್ಬಂದಿಯವರು  ನಮ್ಮನ್ನು ಸ್ವಾಗತಿಸಿ,  ನಸು ಸಿಹಿ ಇದ್ದ , ಕೆಂಪು ಸಕ್ಕರೆ ಬೆರೆಸಿದ್ದ ಲಿಂಬೆಯ ಪಾನಕ ಕೊಟ್ಟು ಸತ್ಕರಿಸಿದರು. ಹಸಿರಾದ  ಉದ್ಯಾನ,   ಚಿಲಿಪಿಲಿಗುಟ್ಟುತ್ತಿದ್ದ ಹಕ್ಕಿಗಳು, ಶುಭ್ರವಾಗಿದ್ದ  ಈಜುಕೊಳ, ತಂಪಾದ ವಾತಾವಾರಣ, ಗೋಡೆಗೆ ತೂಗು ಹಾಕಿದ್ದ ವರ್ಣಚಿತ್ರಗಳು, ಶಾಂತವಾದ ಪರಿಸರ, ವಿಶಾಲವಾದ ಕೊಠಡಿಗಳು, ಪ್ಲಾಸ್ಟಿಕ್ ಮುಕ್ತ ಪರಿಕರಗಳು,  ಬಾಗಿಲಿನಲ್ಲಿಯೇ  ಕಾಣಿಸಿದ ‘ಚೆನ್ನೆ ಮಣೆ’, ವಿಶಾಲವಾದ ಅಡುಗೆಮನೆ ಇವೆಲ್ಲಾ ‘ ಪುರಿ ಅಮರಥ’ ಹೋಂಸ್ಟೇಗೆ ಸಾಂಪ್ರದಾಯಿಕ ಮೆರುಗನ್ನು ಕೊಟ್ಟಿದ್ದುವು. 

ಹೋಂ ಸ್ಟೇಗೆ ತಲಪಿದ ಮೇಲೆ, ಸ್ವಲ್ಪ ಸುತ್ತುಮುತ್ತಲಿನ ಜಾಗಗಳನ್ನು ನೋಡೋಣ, ಅರ್ಧ ದಿನವನ್ನೇಕೆ ವ್ಯರ್ಥ ಮಾಡಬೇಕು ಎಂದು ಮಾತನಾಡಿಕೊಂಡಿದ್ದೆವು. ಆದರೆ ನಾವು ಭಾರತೀಯ ಸಮಯದಲ್ಲಿ ಆಲೋಚಿಸುತ್ತಿದ್ದೆವು ಎಂದು ಈಗ ಅರಿವಾಯಿತು. ಯಾಕೆಂದರೆ,  ನಾವು ತಲಪಿದಾಗ ಬಾಲಿಯಲ್ಲಿ ಸೂರ್ಯಾಸ್ತಮಾನಕ್ಕೆ  ಕೇವಲ ಎರಡು ಗಂಟೆ ಮಿಕ್ಕಿತ್ತು ಮತ್ತು ಅಲ್ಲಿಯ ಮಂದಿರ, ಹೋಟೆಲ್,  ಅಂಗಡಿ ಮುಂಗಟ್ಟುಗಳನ್ನು ರಾತ್ರಿ 0800  ಗಂಟೆಗೆ ಮುಚ್ಚುತ್ತಾರೆ ಎಂದಿದ್ದರು ಗೈಡ್.  ಹಾಗಾಗಿ, ನಾವು ಸೊಗಸಾದ ಹೋಂ ಸ್ಟೇಯಲ್ಲಿ  ಸ್ನಾನಾದಿ ಪೂರೈಸಿ, ಅದರ  ಆವರಣದಲ್ಲಿ ಸುತ್ತಾಡುವುದು ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದು ಎಂದು ನಿರ್ಧರಿಸಿದೆವು. 

(ಮುಂದುವರಿಯುವುದು)

ಹೇಮಮಾಲಾ.ಬಿ. ಮೈಸೂರು

8 Comments on “ದೇವರ ದ್ವೀಪ ಬಾಲಿ : ಪುಟ-1

  1. ಬಾಲಿಯ ಪ್ರವಾಸದ ಅನುಭವದ ಆರಂಭ ಕೇಳಿದೆ
    ಇನ್ನು ಅಲ್ಲಿನ ವಿವರಗಳನ್ನು ಕೇಳುವ ಕುತೂಹಲ

  2. ಪ್ರವಾಸ ಕಥನ ಪ್ರಾರಂಭ….ಸಿದ್ದತೆಯ ವಿವರಣೆ ಚೆನ್ನಾಗಿ ಮೂಡಿಬಂದಿದೆ ಗೆಳತಿ ಮುಂದೇನೆಂಬ ಕುತೂಹಲ ವಿದೆ..

  3. ವೀಸಾ ಪಡೆಯುವ ಸಲುವಾಗಿ ಆದ ತೊಂದರೆಯ ಕಿರಿಕಿರಿ ಪ್ರಾರಂಭದಲ್ಲೇ ವಕ್ಕರಿಸಿದ್ದು ಸ್ವಲ್ಪ ಬೇಸರದ ಸಂಗತಿ…ಮುಂದಿನ ಪ್ರವಾಸ ಸುಗಮವಾಗಲಿ!!

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *