ಪುಸ್ತಕ-ನೋಟ

‘ಭಗವದ್ಗೀತೆಯೊಳಗೊಂದು ಸುತ್ತು’: ಡಾ.ಎಂ.ಆರ್ .ಮಂದಾರವಲ್ಲಿ

Share Button

ಪುಸ್ತಕ  ಪರಿಚಯ : ಭಗವದ್ಗೀತೆಯೊಳಗೊಂದು ಸುತ್ತು
ಲೇಖಕರು : ಡಾ.ಎಂ.ಆರ್ .ಮಂದಾರವಲ್ಲಿ
ಪ್ರಕಾಶಕರು :ಸಹನಾ ಪಬ್ಲಿಕೇಶನ್, ಬೆಂಗಳೂರು
ಮೊ: 9066618708
ಬೆಲೆ : ರೂ.300/-

ಭಾರತದ ಇತಿಹಾಸದಲ್ಲಿ,  ಕಾಲಾತೀತವಾಗಿ  ಶ್ರೇಷ್ಠ  ಧಾರ್ಮಿಕ ಗ್ರಂಥವೆಂದು ಗೌರವಿಸಲ್ಪಡುವುದರ ಜೊತೆಗೆ ಅತ್ಯಂತ ಹೆಚ್ಚು ವೈವಿಧ್ಯಮಯವಾದ ವ್ಯಾಖ್ಯಾನಗಳನ್ನು ಇಂದಿಗೂ  ಪಡೆಯುತ್ತಿರುವ  ಕೃತಿ ‘ ಭಗವದ್ಗೀತೆ’ . 

ವ್ಯಾಸರಿಂದ ರಚಿತವಾದ ಮಹಾಭಾರತದಲ್ಲಿ, ಕುರುಕ್ಷೇತ್ರ ಯುದ್ದ ಆರಂಭವಾಗುವ ಮೊದಲು ಶ್ರೀಕೃಷ್ಣ ಮತ್ತು ಅರ್ಜುನನ ನಡುವೆ  ಯುದ್ಧಭೂಮಿಯ ಸಂಭಾಷಣೆಯ ರೂಪದಲ್ಲಿ ಭಗವದ್ಗೀತೆಯು ನಿರೂಪಣೆಗೊಂಡಿದೆ.  ಅದುವರೆಗೆ ಯುದ್ಧಕ್ಕೆ ಸಿದ್ಧನಾಗಿದ್ದ ಅರ್ಜುನನಿಗೆ ಕಾಡುವ  ಗೊಂದಲ ಹಾಗೂ ಧರ್ಮಸಂಕಟವನ್ನು  ನಿವಾರಿಸಲೆಂದು ಶ್ರೀಕೃಷ್ಣನು  ಉಪದೇಶಿಸಿ, ತನ್ನ ಕರ್ತವ್ಯದ ಕರೆಗೆ ಓಗೊಡಲು  ಪ್ರೇರೇಪಿಸಿ ಜ್ಞಾನೋದಯ ಮಾಡಿಸುತ್ತಾನೆ.   ಏಳುನೂರು ಸಂಸ್ಕೃತ ಶ್ಲೋಕಗಳನ್ನು ಹೊಂದಿರುವ ಭಗವದ್ಗೀತೆಯು ಭಾರತೀಯರು ಪೂಜನೀಯ ಭಾವದಿಂದ ಕಾಣುವ ಸಾಹಿತ್ಯಕೃತಿಗಳಲ್ಲಿ ಒಂದಾಗಿದೆ.

ಭಗವದ್ಗೀತೆಯು  ಕರ್ಮ, ಭಕ್ತಿ, ಜ್ಞಾನ ಮತ್ತು ಯೋಗದ ವಿವಿಧ ಆಯಾಮಗಳ ಮೂಲಕ . ಜೀವನದ ನೈತಿಕ ಮತ್ತು ತಾತ್ವಿಕ ಅಂಶಗಳನ್ನು ವಿವರಿಸುತ್ತದೆ  ಹಾಗೂ  ಆಧ್ಯಾತ್ಮಿಕ ಜ್ಞಾನವನ್ನು ಮೂಡಿಸುತ್ತದೆ. ಆಧ್ಯಾತ್ಮ ವಿಚಾರಗಳುಳ್ಳ ಪುಸ್ತಕಗಳನ್ನು ಓದು ಅರ್ಥೈಸಿಕೊಳ್ಳಲು ನಿರ್ಧಿಷ್ಟ  ಪೂರ್ವತಯಾರಿ ಖಂಡಿತಾ ಬೇಕು.  ಈ ನಿಟ್ಟಿನಲ್ಲಿ , ಡಾ..ಎಂ.ಆರ್. ಮಂದಾರವಲ್ಲಿಯವರು  ‘ಸುತ್ತು 1‘ ರಿಂದ ಆರಂಭಿಸಿ ‘ಸುತ್ತು19‘ ವರೆಗೆ  ಸರಳ ಶೈಲಿಯ ಬರಹಗಳನ್ನು ಬರೆದಿದ್ದಾರೆ.  ಪ್ರತಿ ‘ಸುತ್ತಿ’ನ ಬರಹದಲ್ಲಿಯೂ,  ಮೊದಲ  ಸಾಲಿನಲ್ಲಿ ಒಂದು ಏಕವಾಕ್ಯ  ತತ್ವ ಅಥವಾ ಅಥವಾ ಆದರ್ಶವನ್ನು ತಿಳಿಸಿದ್ದಾರೆ. ಅನಂತರದ ಪ್ಯಾರಾಗಳಲ್ಲಿ ಆ ತತ್ವಕ್ಕೆ ಪೂರಕವಾದ  ಸಾಂದರ್ಭಿಕತೆ ಅಥವಾ  ಪೌರಾಣಿಕ ಉಪಕಥೆಯನ್ನು ಪೋಣಿಸಿ  ವಿವರಿಸಿದ್ದಾರೆ.  ಬರಹದ ಕೊನೆಯ ಸಾಲಿನಲ್ಲಿ ಆ ತತ್ವವನ್ನು ನಮ್ಮ  ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆಗತ್ಯ ಹಾಗೂ ಆಶಯವನ್ನು  ಒಂದೇ ವಾಕ್ಯದಲ್ಲಿ ಸೊಗಸಾಗಿ  ವ್ಯಕ್ತಪಡಿಸಿದ್ದಾರೆ. 

ತಮ್ಮ ‘‘ಭಗವದ್ಗೀತೆ ಮಾಲಿಕೆ’ ಬರಹಗಳನ್ನು ಅರಂಭಿಸುವ ಮೊದಲು ‘ಭಗವದ್ಗೀತೆಯನ್ನು ಏಕೆ ಓದಬೇಕು?’ ಎಂದು ಪ್ರಶ್ನಿಸುತ್ತಾ, ಅನಾದಿಕಾಲದಿಂದ ಈ ಕಾಲದಲ್ಲಿಯೂ  ಭಗವದ್ಗೀತೆ  ಅದೆಷ್ಟು ಪ್ರಸ್ತುತ ಹಾಗೂ ಸಾರ್ವಕಾಲಿಕ ಅಗತ್ಯ ಎಂದು ನಿರೂಪಿಸಿದ್ದಾರೆ.  ಮುಂದುವರಿಯುತ್ತಾ ಭಗವದ್ಗೀತೆಯ ಪ್ರತಿ ಅಧ್ಯಾಯದ ಮುಖ್ಯವಿಚಾರಗಳ ವಿಶ್ಲೇಷಣೆಯನ್ನು ‘ಭಗವದ್ಗೀತೆ ಮಾಲಿಕೆ ‘ ಎಂಬ  85 ಸಣ್ಣ ಬರಹಗಳ ರೂಪದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಮೂಲ ಭಗವದ್ಗೀತೆಯ ತತ್ವದೊಂದಿಗೆ  ಕೆಲವೆಡೆ ಈ ಕಾಲದ ಸಾಂದರ್ಭಿಕ ಉದಾಹರಣೆಗಳನ್ನೂ ಕೊಟ್ಟು ಸರಳೀಕರಿಸಿರುವ  ಶೈಲಿ ಓದುಗರನ್ನು ಸೆರೆಹಿಡಿಯುತ್ತದೆ.  ಕ್ಲಿಷ್ಟ ವಿಚಾರಗಳುಳ್ಳ  ಗೀತಾಸಾರವನ್ನು ಹೀಗೆ  ‘ಗುಟುಕು ಗುಟುಕಾಗಿ’  ಚಪ್ಪರಿಸಿ , ನಮ್ಮ ಜ್ಞಾನದ ಅರಿವನ್ನೂ ಹರವನ್ನೂ ಹಿಗ್ಗಿಸಲು ಇದು ಬಹಳ ಸಹಕಾರಿ.  

‘ಭಗವದ್ಗೀತೆಯೊಳಗೊಂದು ಸುತ್ತು’  ಪುಸ್ತಕವನ್ನು ಓದಿದಾಗ ನನಗೆ ಅನಿಸಿದುದೇನೆಂದರೆ,  ‘ತೀರಾ ಸಾಮಾನ್ಯ’ ಓದುಗಳಾದ ನನಗೆ ಆಧ್ಯಾತ್ಮದ ಪುಸ್ತಕಗಳನ್ನು ಓದುವುದು  ಸುಲಭವಾದುದಲ್ಲ. ಈ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಮುಗಿಸುವುದು ಸಾಧ್ಯವಿಲ್ಲ, ಹಾಗೆ ಓದಿದರೂ ಅರ್ಥೈಸಿಕೊಳ್ಳಲು ಕಷ್ಟ , ಇದಕ್ಕೆ ವಿಶಿಷ್ಟ ಪ್ರತಿಭೆ ಬೇಕು ಹಾಗೂ ಅಗಾಧವಾದ ಶ್ರಮ ಬೇಕು!   ಒಂದು ಬಾರಿಗೆ ಕಣ್ಣುಹಾಯಿಸಿಕೊಂಡು ಓದಿದರೆ ಅರ್ಥವಾಗುವ ವಿಚಾರವಂತೂ ಅಲ್ಲವೇ ಅಲ್ಲ.  ಪದೇ ಪದೇ ಓದಿ ಮನನ ಮಾಡಿಕೊಳ್ಳಬೇಕಾದ ಪುಸ್ತಕವಿದು. ‘ಸಮುದ್ರದಲ್ಲಿ ಎಷ್ಟೇ ನೀರಿದೆಯಾದರೂ, ಅವರವರ ಬೊಗಸೆಯಲ್ಲಿ ಹಿಡಿಯುವಷ್ಟೇ ನೀರು ಲಭ್ಯ’ ತಾನೇ?ನಿರಂತರವಾದ  ಅಧ್ಯಯನಶೀಲತೆ,  ಅಖಂಡ ಶ್ರದ್ಧೆ ಹಾಗೂ ಜ್ಞಾನದ ಹಸಿವು ಇದ್ದರೆ ಮಾತ್ರ ‘ಭಗವದ್ಗೀತೆಯ ಸಾರ’ ಕರಗತವಾಗಬಲ್ಲುದು ಎಂದು ನನ್ನ ಅಭಿಪ್ರಾಯ. 

ಇಂತಹ ಅಮೂಲ್ಯ ಭಗವದ್ಗೀತೆಯ ತತ್ವಗಳನ್ನು  ತನ್ನದೇ ಶೈಲಿಯಲ್ಲಿ ಸರಳೀಕರಿಸಿ ಸಣ್ಣ ಬಿಡಿಬರಹಗಳ ಗುಚ್ಛವಾಗಿ, ಓದುಗರ ಕೈಗಿತ್ತ ಡಾ.ಮಂದಾರವಲ್ಲಿಯವರ ಪರಿಶ್ರಮ, ಜ್ಞಾನ ಹಾಗೂ ಶ್ರದ್ಧೆಗೆ  ಶರಣು.

ಹೇಮಮಾಲಾ.ಬಿ. ಮೈಸೂರು

4 Comments on “‘ಭಗವದ್ಗೀತೆಯೊಳಗೊಂದು ಸುತ್ತು’: ಡಾ.ಎಂ.ಆರ್ .ಮಂದಾರವಲ್ಲಿ

  1. ಪುಸ್ತಕ ಪರಿಚಯ ಸತ್ವಪೂರ್ಣವಾಗಿ ಆ ಪುಸ್ತಕ ವನ್ನು ಓದಲೇಬೇಕೆಂದು ಪ್ರೇರಣೆ ನೀಡುವಂತೆ ಅನಾವರಣ ವಾಗಿದೆ..ಮೇಡಂ…ವಂದನೆಗಳು.

  2. ಬಹಳ ಸೊಗಸಾಗಿ ಪುಸ್ತಕದ ಪರಿಚಯವನ್ನು ಮಾಡಿ ಕೊಟ್ಟಿದ್ದೀರಿ.

  3. ಆಧ್ಯಾತ್ಮ ನೆಲೆಯಲ್ಲಿ ಭಗವದ್ಗೀತೆಗೆ ವಿಶೇಷ ಸ್ಥಾನವಿದೆ. ಅದರ ಅಂತರಾಳ ಹೊಕ್ಕು ಅರಿಯುವ ಪ್ರಯತ್ನ ಬಹಳಷ್ಟು ನಡೆದಿದೆ. “ಭಗವದ್ಗೀತೆಯೊಳಗೊಂದು ಸುತ್ತು” ಪುಸ್ತಕದ ವಿಮರ್ಶಾತ್ಮಕ ಪರಿಚಯವನ್ನು , ಹೇಮಮಾಲಾ ಅವರು, ಅವರ ಮನದ ಅಭಿಪ್ರಾಯದೊಂದಿಗೆ
    ಬಹು ಸರಳ ರೀತಿಯಲ್ಲಿ ಓದುಗರ ಮುಂದೆ ಇರಿಸಿರುವರು…ಧನ್ಯವಾದಗಳು.

  4. ಭಗವದ್ಗೀತೆಗಿರುವ ಪ್ರಾಮುಖ್ಯತೆಯನ್ನು ವಿವರಿಸುತ್ತಲೇ ಮಾಡಿಕೊಟ್ಟಿರುವ ಪುಸ್ತಕ ಪರಿಚಯ ಓದುವ ಹಂಬಲವನ್ನುಂಟುಮಾಡುವಲ್ಲಿ ಸಫಲವಾಗಿದೆ.

Leave a Reply to ಪದ್ಮಾ ಆನಂದ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *