ತಿಂಡಿಪೋತತನ !
‘ತಿಂಡಿಪೋತರು’ ಎಂಬ ಪದಕ್ಕೆ ನಕಾರಾತ್ಮಕ ಅರ್ಥವೇ ಇರುವುದು. ಹೊತ್ತು ಗೊತ್ತಿಲ್ಲದೇ ಸಿಕ್ಕಿದ್ದೆಲ್ಲವನ್ನೂ ಬಾಯಾಡಿಸುವ ಪ್ರವೃತ್ತಿಯಿದು. ಮನೋವಿಜ್ಞಾನದ ಪ್ರಕಾರ ಇಂಥದು ‘ಗೀಳು’ ಎನಿಸಿಕೊಳ್ಳುತ್ತದೆ ಮತ್ತು ಇದಕ್ಕೆ ತಜ್ಞರಿಂದ ಆಪ್ತಸಲಹೆಯೂ ಲಭ್ಯವಿದೆ. ನಾಲಗೆಯನ್ನು ಹದ್ದುಬಸ್ತಿನಲ್ಲಿಡಲು ಆಗದೇ ಒದ್ದಾಡುವವರು ಸಹ ಇವರೇ. ಚಿಕ್ಕಂದಿನಿಂದಲೇ ಹೀಗೆ ಮೊಲದಂತೆ ಸದಾ ಬಾಯಾಡಿಸುವ ಅಭ್ಯಾಸ ಬಹುಶಃ ನಮಗೆ ವಂಶಪಾರಂಪರ್ಯ ಖಾಯಿಲೆಯೇ ಇರಬೇಕು! ಏಕೆಂದರೆ ಮಗುವಿಗೆ ಹಲ್ಲು ಬರುವಾಗ ಸಿಕ್ಕಿದ್ದನ್ನು ಕಚ್ಚುವ, ಕತ್ತರಿಸಬೇಕೆನಿಸುವ ಉಮೇದು ಒಳಗಿಂದ ಉಕ್ಕಿ ಬರುತ್ತದಂತೆ. ಇಲಿಗಳು ಸಿಕ್ಕಿದ್ದನ್ನೆಲ್ಲಾ ಕಚ್ಚದೇ ಹೋದರೆ ಅವುಗಳ ಹಲ್ಲು ಬೆಳೆದು, ಬಾಯಿಂದ ಈಚೆ ಬಂದು ಸತ್ತೇ ಹೋಗುತ್ತವಂತೆ. ಹಾಗಾಗಿ ಅವುಗಳದು ವಿಪರೀತ ಕಚ್ಚಾಟ. ನಾವು ಸಹ ಬೆಳೆಯುವಾಗ ಹೀಗೆ ಸಿಕ್ಕಿದ್ದನ್ನು ಕಚ್ಚಿ, ಬಯ್ಯಿಸಿಕೊಂಡದ್ದೂ ಹೊಡೆಸಿಕೊಂಡದ್ದೂ ಇದೆ. ಬೆಳೆಯುವಾಗ ಎಲ್ಲ ಮಕ್ಕಳೂ ಒಂದೇ. ಬೆಳೆದ ಮೇಲೆ ಬೇರೆ ಬೇರೆ ಆಗುತ್ತಾರಷ್ಟೇ! ಹಲ್ಲು ಬರುವಾಗ ಆ ಜಾಗದಲ್ಲಿ ರವ ರವ ಅನ್ನುತ್ತಿರುತ್ತದೆ; ನಮಗೆ ಬಾಯಾರಿಕೆಯಾದಾಗ ದ್ರವಪದಾರ್ಥ ಬೇಕೆನಿಸುವಂತೆ. ಇಂಥ ಸ್ಟಿಮುಲೇಟ್ (ಚೋದನೀಯ ರಸದೂತ) ಗಳು ನಮ್ಮ ಬದುಕಿನ ಆಸ್ತಿ. ಏಕೆಂದರೆ ಇವು ಇಲ್ಲದಿದ್ದರೆ ಒಟ್ಟಾರೆ ಜೀವನವೇ ನೀರಸವಾಗುತ್ತಿತ್ತು. ಬೆವರು, ಕಣ್ಣೀರು, ಸಲೈವಾ ಎಂಬ ಜೊಲ್ಲುರಸ, ಕರುಳಲ್ಲಿ ಪಚನವಾಗಲು ಬೇಕಾದ ಆಮ್ಲೀಯಗಳು, ಮೂಳೆಯೊಳಗಿನ ಅಸ್ಥಿಮಜ್ಜೆ ಇವೆಲ್ಲ ನಮ್ಮ ದೇಹದ ಕಾರ್ಖಾನೆಗೆ ಬೇಕಾದ ಕೀಲೆಣ್ಣೆ! ಶರೀರದ ಜೈವಿಕ ಕಾರ್ಯಗಳ ಸುಸೂತ್ರ ಚಲನೆಗೆ ಇರುವ ಪೆಟ್ರೋಲು ಎಂದರೂ ಅತಿಶಯೋಕ್ತಿಯಲ್ಲ. ದೈಹಿಕ, ಜೈವಿಕ, ಮಾನಸಿಕ ಎಂದೆಲ್ಲಾ ವೈದ್ಯರ ಪರಿಭಾಷೆಯಲ್ಲಿ ಮಾತಾಡುವುದಕ್ಕಿಂತ ನಮ್ಮ ಅನುಭವಗಳನ್ನು ನೆಚ್ಚಿಕೊಂಡೇ ವ್ಯಾಖ್ಯಾನಿಸಲು ಸಾಧ್ಯ. ಕಣ್ಣು ತೇವವಾಗಿರಬೇಕು, ಅದಕಾಗಿ ಕಣ್ಣೀರು. ಹಾಗಂತ ಎಲ್ಲ ಸಂದರ್ಭಗಳಲ್ಲೂ ಕಣ್ಣಿನಿಂದ ಕಾವೇರಿ ಸುರಿಯುತ್ತಿದ್ದರೆ ದೃಷ್ಟಿ ಹೇಗೆ? ಕೆಲವರ ದೃಷ್ಟಿಕೋನದಲ್ಲಿ ಬರೀ ಕಣ್ಣೀರೇ ಕಾಣಿಸುತ್ತದೆ, ಇದು ಅವರ ‘ದೃಷ್ಟಿ-ಕೋಣ!’ ಅಬ್ಬಯ್ಯನಾಯ್ಡು ಎಂಬ ನಿರ್ಮಾಪಕರಿಗೆ ಬರೀ ಹೆಣ್ಣಿನ ಕಣ್ಣೀರಷ್ಟೇ ಕಾಣುತ್ತದೆಂದು ಸಿನಿವಿಮರ್ಶಕರು ಬರೆದಿದ್ದರು. ಹೆಣ್ಣುಮಕ್ಕಳು ಮತ್ತು ತವರುಮನೆ ಎಂಬೆರಡು ಪರಿಕಲ್ಪನೆಗಳನ್ನು ಇಟ್ಟುಕೊಂಡು ಕರವಸ್ತ್ರ ಒದ್ದೆಯಾಗಲೇಬೇಕೆಂಬ ಹಟದೊಂದಿಗೆ ಅವರು ಕೆಲವೊಂದು ಸಿನಿಮಾಗಳನ್ನು ಕೊಟ್ಟಿದ್ದಕ್ಕೆ ಹೀಗೆ ಪ್ರತಿಕ್ರಿಯೆ ಬಂದಿತ್ತು. ಈಗಲೂ ಇದನ್ನು ಕೆಲವು ಸೀರಿಯಲ್ಲುಗಳು ತಮ್ಮ ಟಿಆರ್‌ಪಿಗೋಸ್ಕರ ಒಂದು ಪ್ರಬಲ ಹತಾರವನ್ನಾಗಿ ಬಳಸುವುದನ್ನು ಕಾಣಬಹುದು. ಅದು ಏನೇ ಇರಲಿ, ಹೆಣ್ಣಿನ ಕಣ್ಣೀರಿಗೆ ಕರಗದವರು, ಮರುಗದವರು ಮನುಷ್ಯರೇ ಅಲ್ಲ. ಅದರಲ್ಲೂ ತಾಯಿಯ ಕಣ್ಣೀರು ಮಕ್ಕಳ ಪಾಲಿಗೆ ಶಾಪ ಎಂದೇ ನಮ್ಮ ಪರಂಪರೆಯು ಪ್ರಬಲವಾಗಿ ಪ್ರತಿಪಾದಿಸಿದೆ. ಕಣ್ಣೀರು ಬರೀ ನಂಟಲ್ಲ; ಅಂಟು ಕೂಡ. ಒಬ್ಬರು ಅಳುತ್ತಿದ್ದಾಗ ನಾವು ನಗುವುದು ಸಾಧ್ಯವಿಲ್ಲ; ಅದು ಅಸಾಧು ಕೂಡ. ಅದೊಂದು ದುಃಖದ ಮಡು; ಯಾತನೆಯ ಶಿಬಿರ. ನಾವದರ ಸದಸ್ಯರಾಗಲೇಬೇಕು. ನಮ್ಮ ಕಣ್ಣಲ್ಲೂ ನೀರು ಬರದಿದ್ದರೆ ನಾವು ಕಟುಕರೆಂದೇ ಅರ್ಥ. ಅಷ್ಟಲ್ಲದೇ ಕಣ್ಣೀರು ನಾಟಕವೂ ಆಗಬಲ್ಲದು. ಯಾವುದು ನಿಜ? ಯಾವುದು ಅಭಿನಯ! ಎಂದು ಗೊತ್ತಾಗದೇ ಹೋದರೆ ಅದನ್ನೇ ನೈಜನಟನೆ ಎಂದು ನಾವು ಕರೆದು ಅಂಥ ನಟರನ್ನು ಕಲಾವಿದರೆಂದು ಗೌರವಿಸುತ್ತೇವೆ. ಅಂದರೆ ಅಷ್ಟು ಸಹಜವಾಗಿ ಯಾವುದೇ ಗ್ಲಿಸರಿನ್ ಇಲ್ಲದೇ ಅಳುವ ಪಾತ್ರಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಕೃತಕವಾಗಿ ನಗಬಹುದು; ಆದರೆ ಕೃತಕವಾಗಿ ಅಳಲು ಆಗದು. ಅದಕೆಂದೇ ಅಳುವನ್ನು ನಾವು ನಂಬುತ್ತೇವೆ. ‘ಸುಮ್ ಸುಮ್ನೆ ನಗ್ತಾನೆ’ ಎನ್ನಬಹುದು; ಆದರೆ ‘ಸುಮ್ ಸುಮ್ನೆ ಅಳ್ತಾಳೆ’ ಎಂದರೆ ಮರುಪ್ರಶ್ನಿಸುತ್ತೇವೆ: ‘ಆಕೆಯ ನೋವು ನಿನಗೇನು ಗೊತ್ತು; ಸುಮ್ನಿರು’ ಎಂದು! ಇರಲಿ. ಈ ಕಣ್ಣೀರಿನ ಕತೆ ಬಹಳ ದೊಡ್ಡದಿದೆ. ಇದನ್ನೇ ಒಂದು ಪ್ರಬಂಧವನ್ನಾಗಿಸಬಹುದು. ಕಣ್ಣೀರಿನಂತೆ ಬೆವರು ಕೂಡ. ನಮಗೆ ಬೆವರುವುದು ಹಿಂಸೆ. ಆದರೆ ಎಂದೂ ಬೆವರದ ಪ್ರಾಣಿಯಾದ ನಾಯಿಗೆ ಬೆವರದೇ ಇರುವುದೇ ಹಿಂಸೆ. ಅದಕಾಗಿ ಅದು ಯಾವಾಗಲೂ ನಾಲಗೆ ಹೊರಚಾಚಿ ದೇಹದ ಉಷ್ಣತೆಯನ್ನು ಕಳೆದುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತದೆ.
ನಾನು ಚಿಕ್ಕಂದಿನಲ್ಲಿ ವಿಪರೀತ ಬೆವರುತ್ತಿದ್ದೆ. ಕೈಕಾಲುಗಳು ಯಾವಾಗಲೂ ಬೆವರಿನಿಂದ ತೋಯ್ದು, ಮುಟ್ಟಿದ ವಸ್ತವೆಲ್ಲಾ ನೀರಾಗುವಷ್ಟು! ಪರೀಕ್ಷೆಗಳನ್ನು ಬರೆಯುವಾಗ ಕರವಸ್ತ್ರ ಹಾಸಿಕೊಂಡು ಬರೆಯುತ್ತಿದ್ದೆ. ಇಲ್ಲದಿದ್ದರೆ ಉತ್ತರಪತ್ರಿಕೆಯ ಹಾಳೆಗಳು ತೋಯ್ದು ಹೋಗುತ್ತಿದ್ದವು. ಇದರಿಂದ ನಾನು ಕೊಠಡಿ ಮೇಲ್ವಿಚಾರಕರ ಮತ್ತು ಸ್ಕ್ವಾಡ್ ತನಿಖಾಧಿಕಾರಿಗಳ ಕೆಂಗಣ್ಣಿಗೂ ಆಗಾಗ ಗುರಿಯಾಗುತ್ತಿದ್ದೆ. ಕರ್ಚೀಫಿನೊಳಗೆ ಏನಾದರೂ ಚೀಟಿ ಗೀಟಿ ಇದೆಯೇನೋ? ಎಂಬುದು ಅವರ ಗುಮಾನಿಯಾಗಿರುತ್ತಿತ್ತು. ಇರಲಿ. ಆಗ ನನ್ನ ತಾಯ್ತಂದೆಯರು ವೈದ್ಯರಿಗೆ ತೋರಿಸಿದಾಗ ‘ಕೆಲವು ಮಕ್ಕಳಲ್ಲಿ ಇದು ಸಹಜ. ಜೊತೆಗೆ ಇದು ಮನೋದೈಹಿಕ ಲಕ್ಷಣ. ವಿಪರೀತ ಗಾಬರಿ, ಕೀಳರಿಮೆ, ಸೂಕ್ಷ್ಮತೆ ಇರುವ ಬಾಲಕ ಬಾಲಕಿಯರಲ್ಲಿ ಇದು ಕಾಣಿಸಿಕೊಳ್ಳುವುದುಂಟು. ಮಕ್ಕಳು ಬೆಳೆದಂತೆಲ್ಲಾ ಇದು ಕಡಮೆಯಾಗುತ್ತದೆ, ಇದಕ್ಕೆ ಚಿಕಿತ್ಸೆಯೇನೋ ಇದೆ. ಆದರೆ ಕೈಕಾಲುಗಳ ಬೆವರುಗ್ರಂಥಿಗಳನ್ನು ಬ್ಲಾಕ್ ಮಾಡಿದರೆ, ಶರೀರದೊಳಗಿನ ಲಾಲಾರಸ, ಕರುಳಿನಲ್ಲಿ ಉತ್ಪತ್ತಿಯಾಗುವ ಜೀರ್ಣಕ ರಸಗಳ ಗ್ರಂಥಿ ಸಹ ಮುಚ್ಚಿಕೊಳ್ಳುವ ಅಡ್ಡಪರಿಣಾಮಗಳಿರುತ್ತವೆ. ಹೇಗೋ ನಿಭಾಯಿಸಿಕೊಂಡು ಹೋಗುವುದೇ ಇದಕ್ಕಿರುವ ಮದ್ದು’ ಎಂದು ತಿಳಿ ಹೇಳಿದ್ದರು. ನಮಗೆ ಭಯವಾದಾಗ, ತಪ್ಪಿತಸ್ಥ ಭಾವ ಮೂಡಿದಾಗ, ದೊಡ್ಡವರೊಂದಿಗೆ ಮಾತಾಡುವಾಗ ನಾಲಗೆಯ ಪಸೆ ಆರಿ ಹೋಗಿ, ಬಾಯಿ ಅಂಟಿದಂತಾಗಿ, ಮಾತು ತೊದಲುವ ಮತ್ತು ಅಸ್ಪಷ್ಟಗೊಳ್ಳುವ ಅನುಭವ ಎಲ್ಲರಿಗೂ ವೇದ್ಯ. ಆದರೆ ನನ್ನ ಅನುಭವ ಇದಕ್ಕೆ ವ್ಯತಿರಿಕ್ತ. ನನ್ನ ಸ್ವೇದಗ್ರಂಥಿಗಳಿಂದ ವಿಪರೀತ ನೀರು ಹೊರಬರುತ್ತಿತ್ತು. ಕರವಸ್ತ್ರವನ್ನು ಹಿಂಡಿದರೆ ನೀರು ಒಸರುವಷ್ಟು! ಇದು ವಂಶಪಾರಂಪರ್ಯವಾದ್ದರಿಂದ ನನ್ನ ಮಗನಲ್ಲೂ ಇದು ಮುಂದುವರೆದಿತ್ತು. ಬೆಳೆದು ದೊಡ್ಡವರಾದ ಮೇಲೆ ಆತ್ಮವಿಶ್ವಾಸ ಹೆಚ್ಚಾದ ಮೇಲೆ ಮುಖ್ಯವಾಗಿ ಮಾನಸಿಕ ಆರೋಗ್ಯ ವೃದ್ಧಿಯಾದ ಮೇಲೆ ಇದು ಕಡಮೆಯಾಗುತ್ತಾ ಹೋಗುತ್ತದೆ. ನನ್ನ ವಿಚಾರದಲ್ಲೂ ಇದು ಹೀಗೆಯೇ ಆಯಿತು. ಈ ಸ್ವೇದಗ್ರಂಥಿಗಳ ಪುರಾಣವನ್ನು ಇಲ್ಲೇಕೆ ತಂದೆನೆಂದರೆ, ತಿಂಡಿಪೋತರಲ್ಲೂ ಇಂಥದೊಂದು ಚೋದಕಗಳು ಹುಟ್ಟಿಕೊಂಡು, ಪ್ರಚೋದನೆ ಕೊಡುತ್ತವೆ. ಉಪ್ಪಿನಕಾಯಿಯನ್ನು ನೋಡುವುದಿರಲಿ, ಅದರ ಹೆಸರು ಕೇಳುತ್ತಿದ್ದಂತೆಯೇ ನಮ್ಮ ನಾಲಗೆಯಲ್ಲಿ ಸಲೈವಾ ಹೆಡೆಯಾಡುವ ಹಾಗೆ. ಬಿಮ್ಮನಸೆಯಾದ ಗರ್ಭಿಣಿ ಹೆಣ್ಣುಮಕ್ಕಳಲ್ಲಿ ಮಾವಿನಕಾಯಿ ನೋಡಿದರೆ ತಿಂದುಬಿಡುವ ಚಡಪಡಿಕೆ ಉಂಟಾಗುತ್ತದಲ್ಲ, ಹಾಗೆ. ನಮ್ಮ ಕಾಲದಲ್ಲಿ ಮಣ್ಣಿನ ಗೋಡೆಗಳು ಇರುತ್ತಿದ್ದವು. ಏನೂ ಸಿಗದೇ ಹೋದಾಗ ಉಗುರಲ್ಲಿ ಸುಣ್ಣ ಕೆರೆದು ಕೆಂಪು ಬಣ್ಣದ ಮಣ್ಣು ತಿನ್ನುತ್ತಿದ್ದರು. ಆ ಸಮಯದಲ್ಲಿ ದೇಹಕೆ ಬೇಕಾದ ಕೆಲವೊಂದು ಪೋಷಕಾಂಶಗಳನ್ನು ಹೇಗಾದರೂ ಪಡೆದುಕೊಳ್ಳಲು ಪ್ರಕೃತಿ ಮಾಡಿಸುವ ಸಂಚಿನ ಹೊಂಚು ಇದು ಎಂದು ಸ್ತ್ರೀರೋಗತಜ್ಞರೂ ಆಗಿದ್ದ ಡಾ. ಅನುಪಮಾ ನಿರಂಜನರು ಒಂದೆಡೆ ಹೇಳಿದ್ದಾರೆ. ಈ ಮಾತನ್ನು ತಿಂಡಿಪೋತರ ಸಲೈವಾಗೆ ಅನ್ವಯಿಸಿ, ಅವರ ಪರ ವಹಿಸಿಕೊಂಡು ಮಾತಾಡಿದರೆ ವೈದ್ಯರೇ ಸಿಡಿಮಿಡಿಗೊಂಡಾರು. ಅವರದು ಒಂದೇ ಉಪದೇಶ: ‘ಎಣ್ಣೆ ಪದಾರ್ಥ ಕಡಮೆ ಮಾಡಿ!’ ಈಗ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ: ‘ಬಳಸುವ ಅಡುಗೆ ಎಣ್ಣೆಯ ಗುಣಮಟ್ಟದ ಬಗ್ಗೆ ಎಚ್ಚರವಿರಲಿ’ ಎಂದು.
ತಿಂಡಿಪೋತತನಕ್ಕೂ ಕರಿದ ಪದಾರ್ಥಗಳಿಗೂ ಜನ್ಮಾಂತರದ ನಂಟು. ಅದರಲ್ಲೂ ‘ಚಿಪ್ಸ್’ ಎಂದು ಕರೆಯಲಾಗುವ ಉಪ್ಪೇರಿಯ ವಿಚಾರದಲ್ಲಿ ಇದು ನೂರಕ್ಕೆ ನೂರು ನಿಜ. ಚಿಪ್ಸ್ ತಿನ್ನುತ್ತಿದ್ದರೆ ನಿಲ್ಲಿಸಬೇಕು ಎಂದು ಎನಿಸುವುದೇ ಇಲ್ಲ! ತಿನ್ನುವಾಗಲೂ ನಾವೇನು ವಿಪರೀತ ಸಂತೋಷ ಅನುಭವಿಸುತ್ತಿರುವುದಿಲ್ಲ. ಒಂದು ಬಗೆಯ ಅಪರಾಧೀಪ್ರಜ್ಞೆಯಿಂದ ಬಳಲುತ್ತಿರುತ್ತೇವೆ. ಬಹುಶಃ ಮದ್ಯಪಾನಿಗಳಲ್ಲಿ ಈ ಭಾವನೆ ಬರುವುದಿಲ್ಲ. ಏಕೆಂದರೆ ಕುಡಿಯುವುದೇ ಹಲವು ಬಗೆಯ ಕೀಳರಿಮೆಗಳನ್ನು ಹೋಗಲಾಡಿಸಿಕೊಳ್ಳುವ ಸಲುವಾಗಿ. ಇದೊಂದು ವ್ಯರ್ಥ ಪ್ರಯತ್ನ ಎಂಬುದು ಮನದಟ್ಟಾಗುವ ಹೊತ್ತಿಗೆ ಆರೋಗ್ಯ ಹಾಳಾಗಿ ಅಂಥ ಕೀಳರಿಮೆಯಿಂದ ಹುಟ್ಟಿದ ಅಹಂಕಾರವನ್ನೇ ಅಪರಿಮಿತ ಆತ್ಮಾಭಿಮಾನವೆಂದು ಬಿಂಬಿಸುವ ಬಂಡಾಟದಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿರುತ್ತಾರೆ. ಹಾಗಾಗಿ ಆಲ್ಕೋಹಾಲ್ ಸೇವಿಸುವಾಗ ಈ ಕರಿದ ಪದಾರ್ಥಗಳು ಹಿನ್ನೆಲೆ ಸಂಗೀತದಂತೆ. ಹಾಡನಾಲಿಸುವಾಗ ಕೈಯಲ್ಲಿ ತಾಳ ತಟ್ಟುತ್ತಾ, ತಲೆ ಅಲ್ಲಾಡಿಸುತ್ತಾ ಗುನುಗುವ ತೆರದಲ್ಲಿ! ಕರಿದ ಪದಾರ್ಥಗಳು ಸಿಗದಿದ್ದರೆ ಕೊನೆಗೆ ಉಪ್ಪಿನಕಾಯಿಯನ್ನಾದರೂ ನಂಚಿಕೊಳ್ಳುವ ಜನರಿದ್ದಾರೆ. ಬಹುಶಃ ಆಲ್ಕೋಹಾಲ್‌ನಲ್ಲಿರುವ ಕಹಿಯ ಅಂಶಕ್ಕೆ ಇದು ಅಗತ್ಯವಾಗಿ ಬೇಕಾಗಿರುವ ಚೋದಕ ಇರಬೇಕು. ನಾಲಗೆ ‘ಚುರ್’ ಅಂದರೇನೇ ಕರುಳು ‘ಹಾಯ್’ ಎನ್ನುವುದು; ಅಮಲಿನ ಹೊಡೆತಕ್ಕೆ ತಲೆ ‘ಗಿರ್’ ಎನ್ನುವುದು! ಒಂದು ಕೈಯ್ಯಲ್ಲಿ ಗ್ಲಾಸು, ಇನ್ನೊಂದು ಕೈಯಲ್ಲಿ ತಿನಿಸು ಎಂಬುದು ಆಧುನಿಕ ಗಾದೆ. ಕಣ್ಣೀರು ಕೇವಲ ದುಃಖಕ್ಕೆ ಮಾತ್ರವೇ ಸೀಮಿತವಲ್ಲ; ಅದು ಆನಂದಬಾಷ್ಪವೂ ಆಗಬಹುದು. ಕುಡುಕರಲ್ಲಿ ದುಃಖವೂ ಆನಂದವೂ ಒಟ್ಟೊಟ್ಟಿಗೆ ಆಗುವುದರಿಂದಲೇ ಅಂಥ ಮಿಶ್ರಭಾವವನ್ನು ಉಂಟುಮಾಡಲೆಂದೇ ಈ ಕರಿದ ಪದಾರ್ಥಗಳು ಪರೋಕ್ಷವಾಗಿ ಸಹಾಯ ಮಾಡುತ್ತವೇನೋ ಎಂಬುದು ನನ್ನ ಗುಮಾನಿ. ಒಟ್ಟಿನಲ್ಲಿ ಆಲ್ಕೋಹಾಲಿಗೂ ಕರಿದ ತಿಂಡಿ ತಿನಿಸುಗಳಿಗೂ ಅವಿನಾಭಾವ. ‘ಕುಡಿಯುವುದೇಕೆ? ಕಿಕ್‌ಗಾಗಿ, ಈ ನಶೆಯ ತಿವಿದಾಟಕ್ಕಾಗಿಯೇ ನಾವು ಈ ಥರದ ಕರಿದ ಪದಾರ್ಥಗಳನ್ನು ಸೇವಿಸುವುದು’ ಎಂದು ಓರ್ವ ಸ್ನೇಹಿತರು ಯಾರಿಗೂ ಹೇಳಬಾರದ ರಹಸ್ಯವೇನೋ ಎಂಬಂತೆ ಪಿಸುಗುಟ್ಟಿದ್ದರು. ಕೆಲವೊಮ್ಮೆ ಅಂಥ ಕುಡಿಯುವವರ ನಡುವೆ ಕೂರಬೇಕಾಗಿ ಬಂದ ಸಂದರ್ಭದಲ್ಲಿ ಅವರಿಗಿಂತ ಹೆಚ್ಚಾಗಿ ನಾನೇ ಇಂಥ ಕರಿದ ಪದಾರ್ಥಗಳನ್ನು ತಿಂದು ಆಲ್ಕೋಹಾಲ್ ಇಲ್ಲದೆಯೇ ನಶೆಯೇರಿಸಿಕೊಂಡದ್ದಿದೆ! ಈ ಕರಿದ ಪದಾರ್ಥಗಳು ನಿಜಕ್ಕೂ ನಶೆಯ ಅಂದರೆ ಅಮಲೇರಿಸುವ ತಾಕತ್ತನ್ನು ಹೊಂದಿವೆ. ಇದೂ ಒಂದು ಬಗೆಯ ಎಣ್ಣೆ ಪದಾರ್ಥವೇ ಅಲ್ಲವೇ! ಎಂದು ನನ್ನಷ್ಟಕೆ ನಾನೇ ಅರ್ಥೈಸಿಕೊಂಡು ಸಮಾಧಾನ ಮಾಡಿಕೊಂಡಿದ್ದೇನೆ. ತಿಂಡಿಪೋತತನವು ಬಹುರೂಪಿ ಮತ್ತು ವಿಶ್ವವ್ಯಾಪಿ. ‘ಇದರಿಂದಲೇ ಜಗತ್ತಿನ ಜನರಲ್ಲಿ ಬೊಜ್ಜಿನ ಸಮಸ್ಯೆ ಉಂಟಾಗಿರುವುದು’ ಎಂದು ಓರ್ವ ಆಹಾರತಜ್ಞರು ಹೇಳಿದ್ದಾರೆ. ಅವರೇನು ಹೇಳುವುದು? ನಮಗೇ ಗೊತ್ತಾಗುತ್ತದೆ. ಎಣ್ಣೆ ಪದಾರ್ಥಗಳನ್ನು ಬಿಟ್ಟರಷ್ಟೇ ತೂಕ ಇಳಿಸಿಕೊಳ್ಳಲು ಸಹಾಯಕ ಎಂಬುದು ಸಾಮಾನ್ಯಜ್ಞಾನ. ಅದರಲ್ಲೂ ಬೇಕರಿ ಐಟಂಗಳ ಮೈದಾ, ಸಕ್ಕರೆ ಮತ್ತು ಕರಿದ ಪದಾರ್ಥಗಳ ಎಣ್ಣೆಯಂಶ ನಮ್ಮನ್ನು ಬಹುಬೇಗ ಅಕಾಲವೃದ್ಧರನ್ನಾಗಿಸುವುದು ಸತ್ಯ. ಆಲೂಗೆಡ್ಡೆಯು ಎಣ್ಣೆಯೊಂದಿಗೆ ತನ್ನನ್ನು ಕರಿದುಕೊಂಡಾಗ ಅದಕ್ಕೆ ಭೀಷಣವೇ ಭೂಷಣವಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನೇ ಕಂಟ್ರೋಲಿಸಿ, ತನಗೆ ಬೇಕಾದ ಹಾಗೆ ಆಟವಾಡಿಸಿ ಬಿಡುತ್ತದೆ. ಇನ್ನು ಹೊಟ್ಟೆ ಹಸಿದಿದ್ದಾಗ ಇಂಥ ತಿಂಡಿಗಳನ್ನು ತಿಂದರೆ ಭವಿಷ್ಯದಲ್ಲಿ ನರಕ ನಿಶ್ಚಿತ. ಕಾಲೇಜು ಓದುವ ಕುವರ ಕುವರಿಯರು ಮಧ್ಯಾಹ್ನದ ಊಟದ ಸಮಯದಲ್ಲಿ ಊಟ ಮಾಡದೇ ಅಥವಾ ಊಟ ತರದೇ ಇಂಥ ಚಿಪ್ಸು, ಚಾಟ್ಸು, ಸ್ನ್ಯಾಕ್ಸು, ಗೋಬಿಗಳನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಅದಕ್ಕಾಗಿ ಕಾಲೇಜಿನ ಸುತ್ತಮುತ್ತ ಇಂಥ ಮಾರಾಟದ ಅಂಗಡಿಗಳು ಇರಬಾರದೆನ್ನುವ ಕಾನೂನನ್ನು ಸರ್ಕಾರಗಳು ಮಾಡಬೇಕಾಗಿರುವಷ್ಟು ಪರಿಸ್ಥಿತಿ ಹಾಳಾಗಿದೆ. ಸುತ್ತಮುತ್ತ ಅಂಗಡಿಗಳು ಇಲ್ಲದಿದ್ದರೇನು? ಮನೆಯಿಂದಲೇ ತರುವ ಮತ್ತು ಕಾಲೇಜಿಗೆ ಬರುವಾಗಲೇ ಕೊಂಡು ತರುವ ಹುನ್ನಾರಗಳು ನಡೆಯಬಹುದು. ನಮ್ಮೊಳಗೆ ಮನಃಪರಿವರ್ತನೆ ಆಗುವತನಕ ಯಾವ ಕಾನೂನು ಕಟ್ಟಳೆಗಳೂ ನಮ್ಮ ಆರೋಗ್ಯವನ್ನು ಸುಧಾರಿಸಲಾರವು. ಹಾಗಂತ ಸುಮ್ಮನಿರುವಂತಿಲ್ಲ. ದೇಶದ ಭಾವೀ ಪ್ರಜೆಗಳ ಮತ್ತು ಭವಿಷ್ಯದ ಜನಾಂಗವನ್ನು ನಾವು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ತಿಂಡಿಪೋತರು ಯಾವಾಗಲೂ ಎಲ್ಲರಿಂದಲೂ ಬಯ್ಯಿಸಿಕೊಳ್ಳುತ್ತಿರುತ್ತಾರೆ. ವಿಚಿತ್ರವೆಂದರೆ ತಿಂಡಿಪೋತರೇ ಉಳಿದವರನ್ನು ತಿಂಡಿಪೋತರೆಂದು ಜರಿಯುತ್ತಾರೆ. ಯಾವತ್ತೋ ಒಂದು ದಿನ ಕೆಲವರಿಗೆ ಜ್ಞಾನೋದಯವಾಗಿ ಇನ್ನು ಮೇಲೆ ಇಂಥ ತಿಂಡಿಗಳನ್ನು ತಿನ್ನುವುದಿಲ್ಲವೆಂದು ಭೀಷ್ಮ ಪ್ರತಿಜ್ಞೆ ಕೈಗೊಂಡು, ತಮ್ಮಷ್ಟಕೆ ತಾವು ಸುಮ್ಮನಿರಲಾಗದೇ ಉಳಿದವರ ತಿಂಡಿತನಗಳಿಗೂ ಕೈ ಚಾಚಿ ನಡುವೆ ಕಡ್ಡಿ ಅಲ್ಲಾಡಿಸುವ ಕೆಲಸ ಮಾಡುತ್ತಾರೆ. ‘ಮೊನ್ನೆ ಮೊನ್ನೆ ನೀನೂ ತಿಂದಿದ್ದೆ; ಈಗ ಅದೇನೋ ಬೋಧನೆ ಮಾಡಲು ಬಂದಿದ್ದೀಯಾ? ಸುಮ್ಮನಿರು. ನಾವು ಯಾರೂ ಇಲ್ಲದೇ ಹೋಗಿದ್ದರೆ ನೀನೇ ಇವೆಲ್ಲವನ್ನೂ ಖಾಲಿ ಮಾಡುತ್ತಿದ್ದೆ. ನನಗೆ ಗೊತ್ತಿಲ್ಲವೇ? ನಿನ್ನ ಚಪಲ!’ ಎಂದು ಜರಿದು, ಅವರ ಪ್ರತಿಜ್ಞೆಯನ್ನು ಕೇವಲಗೊಳಿಸಿ ವಿಡಂಬನೆ ಮಾಡಿದಾಗ ಅವರ ಕಡುನಿಷ್ಠೆಯು ಕಣ್ಮರೆಯಾಗಿ, ತಿನ್ನಬಾರದೆಂಬ ಶಪಥ ಹೊಳೆ ನೀರಿನ ಹುಣಸೆಯಾಗುತ್ತದೆ. ಬಾಯಿರುಚಿ ಎಂಬುದು ಅದೆಲ್ಲಿತ್ತೋ ಧುತ್ತನೆ ಅವತರಿಸುತ್ತದೆ. ಒಂದು ಸಾಕು ಎಂದುಕೊಂಡದ್ದು ಒಂದಕ್ಕೆ ಸ್ಟಾಪ್ ಆಗುವುದೇ ಇಲ್ಲ! ಇದೇ ಕರಿದ ತಿಂಡಿಯ ಲಕ್ಷಣ; ತಿನ್ನಿಸಿ ಕಾಡಿಸುವ ಗುಣ!
ನಾವು ಚಿಕ್ಕಪುಟ್ಟವರಿದ್ದಾಗ ಮನೆಯಲ್ಲೇ ಇಂಥ ಕರಿದ ತಿಂಡಿ ತಿನಿಸುಗಳನ್ನು ಮಾಡುತ್ತಿದ್ದರು. ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಮಸಾಲೆವಡೆ, ಬಜ್ಜಿ, ಬೋಂಡ, ಪಕೋಡ, ತೇಂಗೊಳಲು, ಖಾರಸೇವಿಗೆ, ಬಾಳೆಕಾಯಿ ಉಪ್ಪೇರಿ, ಹಪ್ಪಳ, ಅರಳು ಸಂಡಿಗೆ, ಈರುಳ್ಳಿ ಸಂಡಿಗೆ, ಮಜ್ಜಿಗೆ ಮೆಣಸಿನಕಾಯಿ, ಉಪ್ಪಚ್ಚಿ ಮೆಣಸಿನಕಾಯಿ ಹೀಗೆ ಇವುಗಳ ಪಟ್ಟಿ ದೊಡ್ಡದೇ ಇದೆ. ಅದರಲ್ಲೂ ಬೇಸಗೆ ರಜಕ್ಕೆ ಮಕ್ಕಳು, ಮೊಮ್ಮಕ್ಕಳು ಮನೆಗೆ ಬರುತ್ತಾರೆಂಬ ಕಾರಣಕ್ಕೆ ಅಜ್ಜಿ, ಸೋದರತ್ತೆ, ದೊಡ್ಡಮ್ಮ ಮೊದಲಾದ ಮನೆಯ ಹಿರಿಯ ಹೆಂಗಸರು ತಮಗೆ ಬಿಡುವಾದ ಒಂದು ಸಂಜೆ ಇಂಥ ಕರಿಯುವ ಕಾರ್ಯಕ್ರಮವನ್ನು ಹಾಕಿಕೊಂಡು, ಚಕ್ಕುಲಿ ಮತ್ತು ಕೋಡುಬಳೆಗಳನ್ನು ಮಾಡಿ, ಅವುಗಳು ಕಟುಂ ಕುಟುಂ ಆಗಿರುವಂತೆ, ಅಂದರೆ ಮೆತ್ತಗಾಗದಂತೆ ಕೆಲವೊಂದು ಪೂರ್ವಯೋಜಿತ ತಂತ್ರಗಳನ್ನು ಬಳಸಿ ಸಂಗ್ರಹಿಸಿಟ್ಟು, ಮನೆಗೆ ಬಂದವರಿಗೆ ಕೊಡುವ ಪದ್ಧತಿಯಿತ್ತು. ಈಗಿರುವಂತೆ, ಮನೆಯಲ್ಲಿ ಯಾವಾಗಲೂ ಕರಿದ ಪದಾರ್ಥಗಳು ಇರುತ್ತಿರಲಿಲ್ಲ. ಹಬ್ಬ, ಹುಣ್ಣಿಮೆ, ಜಾತ್ರೆ, ರಥೋತ್ಸವ ಮುಂತಾದ ವಿಶೇಷ ದಿನಗಳಿಗಾಗಿ ಇವು ಅವತರಿಸುತ್ತಿದ್ದವು. ಮನೆಯಲ್ಲೇ ನಿಷ್ಠೆಯಿಂದ ಮಾಡುತ್ತಿದ್ದುದರಿಂದ ಇವನ್ನು ತುಸು ಹೆಚ್ಚಾಗಿ ತಿಂದರೂ ಆರೋಗ್ಯಕ್ಕೇನೂ ಕುಂದುಂಟಾಗುತ್ತಿರಲಿಲ್ಲ. ಅದರಲ್ಲೂ ಮೊಮ್ಮಕ್ಕಳಿಗೆ ಅಜ್ಜಿ ಮಾಡಿದ ಚಕ್ಕುಲಿ, ನಿಪ್ಪಟ್ಟು ಮತ್ತು ಕೋಡುಬಳೆಗಳೆಂದರೆ ಅಚ್ಚುಮೆಚ್ಚು. ಇವನ್ನು ವಾರಾನುಗಟ್ಟಲೆ ಇಟ್ಟು ತಿನ್ನಬಹುದಿತ್ತು. ಮನೆಯಲ್ಲಿದ್ದ ದೊಡ್ಡವರು ಸಹ ಏನೋ ಮೊಮ್ಮಕ್ಕಳಿಗೆಂದು ಮಾಡಿದ್ದಾರೆಂದು ಒಂದೆರಡನ್ನು ಬಾಯಿಗೆ ಹಾಕಿಕೊಂಡು ಮೀಸಲಿಡುತ್ತಿದ್ದರು. ಒಮ್ಮೊಮ್ಮೆ ಮನೆಗೆ ದಿಢೀರನೆ ಅತಿಥಿಗಳು ಬಂದಾಗ ಕೊಡಲು ಏನೂ ಇಲ್ಲದೇ ಹೋದ ಪಕ್ಷದಲ್ಲಿ ಬಾಳೆಕಾಯಿ, ಈರುಳ್ಳಿ, ಸೀಮೆಬದನೆಕಾಯಿ, ಆಲೂಗೆಡ್ಡೆ, ಹೀರೇಕಾಯಿ ಮುಂತಾದ ತರಕಾರಿಗಳನ್ನು ತಕ್ಷಣಕ್ಕೆ ಹೆಚ್ಚಿ, ಕಡಲೆಹಿಟ್ಟು ಕದಡಿಟ್ಟು, ಅಚ್ಚಮೆಣಸಿನಕಾರ ಮತ್ತು ಉಪ್ಪನ್ನು ಮಿಶ್ರಣ ಮಾಡಿ, ಬಜ್ಜಿ ಮಾಡಿ, ಕಾಫಿ ಜೊತೆ ಕೊಡುತ್ತಿದ್ದರು. ಕಾಫಿ ಜೊತೆಗೆ ಕೊಡೋದಕ್ಕೆ ಏನೂ ಇಲ್ಲದಂತಾಯಿತಲ್ಲ ಎಂದೇ ಕೆಲವರು ಅಲವತ್ತುಕೊಳ್ಳುತ್ತಿದ್ದರು. ಸ್ವಲ್ಪ ಹೆಚ್ಚಿನ ಸಮಯ ಲಭಿಸುತ್ತದೆ ಎಂದಾದರೆ, ಪಕೋಡ ಸಿದ್ಧವಾಗುತ್ತಿತ್ತು. ಇನ್ನೂ ಸ್ವಲ್ಪ ಸಮಯ ಧಾರಾಳವಾಗಿ ಸಿಗುತ್ತದೆ ಎನ್ನುವುದಾದರೆ ಮಸಾಲೆ ವಡೆ ತಯಾರಾಗುತ್ತಿತ್ತು. ವಿಶೇಷ ದಿನಗಳಿದ್ದಲ್ಲಿ ಮಾತ್ರ ರವೆವುಂಡೆ, ಶಂಕರಪೋಳಿ, ಸಿಕ್ಕಿನುಂಡೆ, ಕೊಬ್ಬರಿ ಮಿಠಾಯಿ, ಮೈಸೂರು ಪಾಕು, ಕಾಶಿ ಹಲ್ವಾ ಅಂದರೆ ದಂರೋಟು, ಕ್ಯಾರೆಟ್ ಹಲ್ವಾ, ಹೂರಣದ ಕಡುಬು, ಒಬ್ಬಟ್ಟು, ಸಜ್ಜಪ್ಪ ಮೊದಲಾದ ಸಿಹಿತಿಂಡಿಗಳು ಮನೆಯ ಹೆಂಗಸರ ಜಂಟಿ ಕಾರ್ಯಾಚರಣೆಯಲ್ಲಿ ತಯಾರಾಗುತ್ತಿದ್ದವು. ಇವೆಲ್ಲ ವಿಶೇಷ ದಿನದ ಸಮಾರಂಭಗಳ ಹಿಂದಿನ ದಿನವೇ ಸಿದ್ಧವಾಗಿ ಮನೆಯ ಮಕ್ಕಳಿಗೆ ಒಂಚೂರು ರುಚಿಗಾಗಿ ದಕ್ಕುತ್ತಿದ್ದವು. ‘ಹೆಚ್ಚು ಕೇಳಬಾರದು; ನಾಳೆ ನೈವೇದ್ಯವಾದ ಮೇಲೆಯೇ’ ಎಂಬ ಕಂಡೀಷನ್ನು ಸಹ ಅಪ್ಲೆ ಆಗುತ್ತಿತ್ತು. ಇನ್ನು ಎಳ್ಳುಂಡೆ, ತಂಬಿಟ್ಟು, ಹುರಿಹಿಟ್ಟು, ಸಿಹಿಯವಲಕ್ಕಿ, ಕೊಬ್ಬರಿ ಸಕ್ಕರೆ, ಸಿಹಿಕಡ್ಲೇಹಿಟ್ಟು ಇವೆಲ್ಲಾ ಎಣ್ಣೆ ಬೇಡದ ಬಡವಾಧಾರಿ ಸ್ವೀಟ್ಸುಗಳು. ಬಾಣಲೆ ಇಟ್ಟು, ಎಣ್ಣೆ ಹಾಕಿ ಕರಿಯಲು ಸಾಧ್ಯವಾಗದ ಮನೆಗಳಿಗೆ ದೇವರು ದಯಪಾಲಿಸಿದ ವರದಾನ.
ಯಾವಾಗ ಇಂಥ ಕುರುಕುತಿಂಡಿ ಮತ್ತು ಸಿಹಿಭಕ್ಷ್ಯಗಳು ಅಂಗಡಿಯಲ್ಲಿ ಮಾರಾಟವಾಗಲು ಶುರುವಾದವೋ ಅಲ್ಲಿಂದಾಚೆಗೆ ಇವುಗಳು ಪಡೆದ ಸ್ಥಿತ್ಯಂತರ ಮತ್ತು ಸ್ಥಾನಾಂತರ ಅಪಾರ. ಮೊದಲಿಗೆ ಬ್ರೆಡ್ಡು, ಬನ್ನು, ಕೇಕುಗಳನ್ನು ಮಾಡಿ ಮಾರುತ್ತಿದ್ದ ಬೇಕರಿಗಳಲ್ಲಿ ಇಂಥ ಕರಿದ ತಿಂಡಿ ಮತ್ತು ಸಿಹಿತಿಂಡಿಗಳು ಪ್ರತ್ಯಕ್ಷವಾದವು. ತದನಂತರ ಸ್ವೀಟ್ಸ್ ಮತ್ತು ಬೇಕರಿ ಎಂದು ಬದಲಾದವು. ಕೊನೆಗೆ ಥರಾವರಿ ಸ್ವೀಟ್ಸ್ ಅಂಗಡಿಗಳು ಹುಟ್ಟಿಕೊಂಡವು. ಒಂದೊಂದು ಊರಲ್ಲಿ ಒಂದೊಂದು ಬೇಕರಿ, ಸ್ವೀಟ್ಸ್ ಮಾರ್ಟ್ ಹೆಸರುವಾಸಿಯಾದವು. ಆಮೇಲಾಮೇಲೆ ಹಲವು ಊರು ಮತ್ತು ನಗರಗಳಲ್ಲಿ ತಮ್ಮದೇ ಆದ ಶಾಖೋಪಶಾಖೆಗಳನ್ನು ತೆರೆದವು. ಹೀಗೆ ಕರಿದ ತಿಂಡಿ ತಿನಿಸುಗಳು ಎಲ್ಲೆಡೆಯೂ ದೊರಕುವಂತಾದವು. ಕೆಲವೊಂದು ಉಪಾಹಾರ ದರ್ಶಿನಿ ಮತ್ತು ಊಟದ ಹೊಟೆಲುಗಳಲ್ಲಿ ಸಹ ಸಿಹಿತಿಂಡಿ ಮತ್ತು ಕರಿದ ತಿಂಡಿಗಳನ್ನು ಮಾರಾಟ ಮಾಡುವ ಪ್ರಯತ್ನ ಸಹ ಯಶಸ್ಸಿನ ಹಾದಿ ಹಿಡಿಯಿತು. ಕೊನೆಗೀಗ ಕುರುಕ್ ತಿಂಡಿ ಎಂದೇ ಹೆಸರಾದ ಅಂಗಡಿಗಳು ಹುಟ್ಟಿಕೊಂಡಿವೆ. ಹೋಳಿಗೆ ಮನೆ ಮತ್ತು ಕುರುಕ್ ತಿಂಡಿಗಳ ಸ್ಟಾಲುಗಳು ಒಂದೊಂದು ಏರಿಯಾದಲ್ಲೇ ಎರಡು ಮೂರು ಇವೆ! ಈ ನಡುವೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಬಂದ ಒಂದಷ್ಟು ಮಂದಿಯು ಎಲ್ಲಾ ಊರುಗಳಲ್ಲೂ ಹಾಟ್ ಚಿಪ್ಸ್ ಮಳಿಗೆಗಳನ್ನು ತೆರೆದು ಇಂಥ ಕುರುಕುತಿನಿಸುಗಳನ್ನು ‘ಆಯಾಯ ಊರಲ್ಲೇ ವರ್ಲ್ಡ್ ಫೇಮಸ್’ ಮಾಡಿದವು. ಚಿಪ್ಸ್ ಎಂಬುದು ಜನಪ್ರಿಯವಾಗಲು ಇವರೇ ಕಾರಣ. ದಪ್ಪ ದಪ್ಪ ಆಲೂಗೆಡ್ಡೆಗಳ ಸಿಪ್ಪೆ ತೆಗೆದು, ಟಬ್ಬಿನೊಳಗಿಟ್ಟುಕೊಂಡು, ಅಂಗಡಿಯ ಮುಂದೆಯೇ ದೊಡ್ಡ ಗ್ಯಾಸ್ ಸ್ಟವ್‌ನಲ್ಲಿ ಬೃಹದಾಕಾರದ ಬಾಣಲೆಯೊಳಗೆ ಐದಾರು ಲೀಟರು ಎಣ್ಣೆ ಹಾಕಿ, ನೇರವಾಗಿ ಚಿಪ್ಸ್‌ಮಣೆಯನ್ನು ಬಾಣಲೆಗೆ ಅಡ್ಡ ಇಟ್ಟುಕೊಂಡು ಆಲೂಗೆಡ್ಡೆಯನ್ನು ಚಕಚಕನೆ ತುರಿಯುತ್ತಾ ಚಿಪ್ಸ್ ಕರಿಯುವ ವಿಧಾನವನ್ನು ನೋಡಿಯೇ ಹಲವರು ಮುಗಿ ಬಿದ್ದು ಹಾಟ್ ಚಿಪ್ಸ್ ಅನ್ನು ಖರೀದಿಸುವ ಖಯಾಲಿಗೆ ಬಿದ್ದರು. ಸಾಮಾನ್ಯವಾಗಿ ಕಲಸನ್ನಗಳನ್ನು ತಿನ್ನುವಾಗ ಏನಾದರೂ ಕರಿದ ತಿಂಡಿಗಳನ್ನು ನಂಚಿಕೊಳ್ಳುವ ಅಭ್ಯಾಸ ಹಲವರದು. ಉಪ್ಪಿಟ್ಟು ಸಪ್ಪೆಯಾದರೆ, ಚಿತ್ರಾನ್ನ ತನ್ನ ಗಮ್ಮತ್ತನ್ನು ಕಳೆದುಕೊಂಡಿದ್ದರೆ, ಬಿಸಿಬೇಳೆಬಾತಿಗೆ ನಂಚಿಕೊಳ್ಳಲು, ಪಲಾವಿಗೆ ಶೋಭೆ ತರಲು ಕರಿದ ತಿಂಡಿಗಳನ್ನು ಸೈಡಿನಲ್ಲಿಟ್ಟುಕೊಂಡು ತಿನ್ನುವುದು ಉಪಕಸುಬಾಗಿತ್ತು. ಆದರೆ ಇಂಥ ಕರಿದ ತಿಂಡಿ ಪದಾರ್ಥಗಳನ್ನು ಪ್ಯಾಕೆಟುಗಳಲ್ಲಿಟ್ಟು ಸೂಪರ್ ಮಾರ್ಕೆಟ್ಟುಗಳಲ್ಲಿ ಚೆಂದವಾಗಿ ಜೋಡಿಸಿ, ಮಕ್ಕಳ ಕೈಗೇ ಸಿಗುವಷ್ಟು ಎತ್ತರದಲ್ಲಿಟ್ಟು ಮಾಲೀಕರು ಮಜಾ ತೆಗೆದುಕೊಳ್ಳಲು ಶುರುವಿಟ್ಟಾಗ ನೇರವಾಗಿ ಇವನ್ನು ಭಕ್ಷಿಸುವ ಅಭ್ಯಾಸ ಹೆಚ್ಚಾಗುತ್ತಾ ಬಂತು. ಲೇಸ್, ಕುರ್‌ಕುರೆ, ಮೂಂಗ್ ದಾಲ್, ಬಿಂಗೋ, ಅಂಕಲ್ ಚಿಪ್ಸ್, ಆಲೂ ಬುಜಿಯಾ, ಕಾರ್ನ್ ರಿಂಗ್ಸ್, ಯಲ್ಲೋ ಡೈಮಂಡ್ ರಿಂಗ್ಸ್, ಪೆರ್ರಿ ಪೆರ್ರಿ ಬನಾನ ಚಿಪ್ಸ್, ಪೆಪ್ಪಿ ಚೀಸ್ ಬಾಲ್ಸ್ ಮುಂತಾದ ಪ್ಯಾಕೆಟ್ಟುಗಳು ಜಗತ್ತಿನಾದ್ಯಂತ ಜನಪ್ರಿಯವಾದವು. ಯಾವ ಮಕ್ಕಳ ಬಾಯಲ್ಲಿ ಕೇಳಿದರೂ ಇವೇ ಹೆಸರು, ಯಾವ ಮಕ್ಕಳ ಕೈಯಲ್ಲೂ ಇವೇ ರಾರಾಜಿಸಿ, ‘ಫರ್’ ಎಂದು ಪೊಟ್ಟಣ ಹರಿದು ಒಳಗಿನ ಗಾಳಿಯನ್ನು ತೆಗೆದು, ಅದರಾಳದಲ್ಲಿ ಹುದುಗಿರುವ ತುಣುಕುಗಳನ್ನು ಬಾಯಿಗೆ ಹಾಕಿಕೊಂಡು ರುಚಿಸುವುದೇ ಕೆಲಸವಾಯಿತು. ಇವುಗಳ ಜೊತೆಗೆ ಹೊಸ ರೀತಿಯ ನಾನಾ ಆಕಾರದ ಬಿಸ್ಕತ್ತುಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡು ಪೈಪೋಟಿಗೆ ನಿಂತವು. ತಿಂಡಿಪೋತರಿಗೆ ಸ್ವರ್ಗವೇ ಸಾಕಾರವಾಯಿತು. ಇವನ್ನು ತಿಂದು ಹಲವರು ಊಟ ಬಿಟ್ಟರು, ಇನ್ನು ಹಲವರು ಊಟಕ್ಕೆ ಬದಲಿಯಾಗೇ ತಿಂದು ತೇಗಿದರು, ಹೊತ್ತು ಗೊತ್ತಿಲ್ಲದೇ ಇಂಥ ಸ್ನ್ಯಾಕ್ಸ್ ಟೈಮ್ ಎಂಬುದು ಜಗಜ್ಜಾಹೀರಾಯಿತು. ಯಾವ ಮಟ್ಟಿಗೆ ಎಂದರೆ, ಪ್ರಿ ಕೆಜಿ, ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಹನ್ನೊಂದು ಗಂಟೆಗೆ ತಿನ್ನುವ ‘ಬ್ರಂಚ್’ ಸಮಯಕ್ಕೆ ಇಂಥ ಸ್ನ್ಯಾಕ್ಸುಗಳು ಸುಲಲಿತವಾಗಿ ಡಬ್ಬಿಯೊಳಗೆ ಇಣುಕಿ ಮಕ್ಕಳಿಗೆ ಅತೀ ಪ್ರಿಯವಾದವು. ‘ಬ್ರೇಕ್‌ಫಾಸ್ಟ್’ ಎಂಬುದೇ ಗೊತ್ತಿಲ್ಲದಿದ್ದ ನಮ್ಮ ದೇಶ ಮತ್ತು ಸಂಸ್ಕೃತಿಯಲ್ಲಿ ಐರೋಪ್ಯರಿಂದ ಬೆಳಗಿನ ಉಪಾಹಾರ ಪರಿಚಯವಾಯಿತು. ಈ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ನಡುವಿನ ಈ ಬ್ರಂಚ್ (ಬ್ರೇಕ್‌ಫಾಸ್ಟ್ ಮತ್ತು ಲಂಚ್ ಎರಡೂ ಸಂಧಿಯಾಗಿಯೋ ಸಮಾಸವಾಗಿಯೋ ಈ ಬ್ರಂಚ್ ಎಂಬ ಪದ ಸಂಕರಗೊಂಡಿದೆ) ಇಂಥ ತಿಂಡಿಪೋತ ಜನರಿಂದ ಪರಿಚಯವಾಯಿತು. ಇದು ಎಷ್ಟೊಂದು ಅತಿಯಾಯಿತೆಂದರೆ, ಮಕ್ಕಳ ಆರೋಗ್ಯದ ದೃಷ್ಟಿಯನ್ನು ಸಹ ಗಣನೆಗೆ ತೆಗೆದುಕೊಂಡ ಕೆಲವು ಶಾಲೆಗಳು, ಯಾವ ಕಾರಣಕ್ಕೂ ಮಕ್ಕಳ ಡಬ್ಬಿಗೆ ಇಂಥ ಕರಿದ ತಿಂಡಿ, ಸ್ನ್ಯಾಕ್ಸುಗಳನ್ನು ಹಾಕಿ, ಕಳಿಸಬಾರದು ಎಂದು ತಾಕೀತು ಮಾಡಿದವು. ಈ ಕುರುಕುಗಳ ಬದಲಿಗೆ ಹಣ್ಣು ಮತ್ತು ತರಕಾರಿಗಳ ಕಟ್‌ಪೀಸುಗಳನ್ನು ಹಾಕಿ ಕಳಿಸಿ ಎಂದು ಗೋಗರೆದವು. ನಮ್ಮ ಮಗುವಿಗೆ ಕುರುಕು ತಿಂಡಿಗಳು ಬಲು ಇಷ್ಟ; ಆದರೆ ಆ ಸ್ಕೂಲಿನಲ್ಲಿ ಇದು ನಿಷಿದ್ಧ, ಹಾಗಾಗಿ ಈ ಸ್ಕೂಲು ಬೇಡ ಎಂಬಷ್ಟರಮಟ್ಟಿಗೆ ಪೋಷಕರು ಮಾತಾಡಿಕೊಳ್ಳುವ ಪರಿಸ್ಥಿತಿ ಉಂಟಾಯಿತು. ಮಕ್ಕಳ ಪ್ರವೇಶಾತಿಯನ್ನು ಹೆಚ್ಚಿಸುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ವೈವ್ ಆಗಲು ಹೊರಟ ಶಾಲೆಗಳು ‘ಏನಾದರೂ ಹಾಕಿ ಕಳಿಸಿ, ನಿಮ್ಮ ಮಕ್ಕಳ ಆರೋಗ್ಯಕ್ಕೆ ನೀವೇ ಹೊಣೆ, ನಮ್ಮದೇನಿದ್ದರೂ ವರ್ಣಮಾಲೆ, ಆಟೋಟಗಳನ್ನು ಕಲಿಸುವ ಕೆಲಸ’ ಎಂದು ಮಗುಮ್ಮಾದವು. ಹೀಗೆ ಈ ಕುರುಕುತಿನಿಸುಗಳ ಹಿಂದೆ ಬಹು ದೊಡ್ಡ ಕತೆಯೂ ವ್ಯಥೆಯೂ ಅಡಗಿದೆ.
ಈ ಎಣ್ಣೆ ತಿಂಡಿತೀರ್ಥಗಳೆಂಬವು ಜಿಡ್ಡು ಮತ್ತು ಮಸಾಲೆ ಪದಾರ್ಥಗಳಿಂದ ಕೂಡಿದ್ದು, ನಾಲಗೆಗೆ ರುಚಿಯನಿಟ್ಟು, ಸೇವಿಸುವಾಗ ಕಿಕ್ ಎನಿಸಿದರೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದನ್ನು ವೈದ್ಯವಿಜ್ಞಾನಿಗಳೂ ಆಹಾರತಜ್ಞರೂ ಆಗಿಂದಾಗ್ಗ್ಯೆ ಎಚ್ಚರಿಸುತ್ತಾ ಇರುತ್ತಾರೆ. ಆದರೆ ನಾವು ಮಾತ್ರ ಇವನ್ನು ತಿನ್ನುವಾಗ ಜಾಣಮರೆವಿನಿಂದ ಪಕ್ಕಕಿಟ್ಟು, ‘ಅಯ್ಯೋ ಅವರು ಹೇಳುತ್ತಾರೆ, ಸಂನ್ಯಾಸಿ ಥರ ಬದುಕಲು ಆಗುವುದಿಲ್ಲ’ ಎಂದು ನಿರ್ಲಕ್ಷಿಸುತ್ತೇವೆ. ‘ಒಂದೆರಡು ತಿಂದರೆ ಏನಾಗುವುದಿಲ್ಲ, ಇಷ್ಟಕೂ ದೇಹದ ಮೂಳೆ, ಕೀಲುಗಳು ಆಡಲು ಜಿಡ್ಡು ಬೇಕಲ್ಲವೇ?’ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಂಡು, ಮುಂದುವರಿಯುತ್ತೇವೆ. ಯಾವಾಗಲೋ ಅಪರೂಪಕ್ಕೆ ಒಂದು ಚಕ್ಕುಲಿ, ಕೋಡುಬಳೆಯನ್ನೋ ಇಡ್ಲಿಯೊಂದಿಗೆ ವಡೆ ಸಾಂಬಾರನ್ನೋ ಗೊಂಬೆ ಬಾಗಿನ ಎಂದುಕೊಂಡು, ಕಾಫಿ ಟೀ ಜೊತೆಗೆ ತೇಂಗೊಳಲು ಮುರುಕನ್ನೋ ಊಟಕ್ಕೆ ನಂಚಿಕೊಳ್ಳಲು ಪಕೋಡವನ್ನೋ ಹೊರಗೆ ಗಾಳಿ, ಮಳೆ, ಚಳಿಯಿದೆಯೆಂದೂ ಇಂಥ ಹೊತ್ತಿನಲ್ಲಿ ಬಿಸಿ ಬಿಸಿ ಪಾನೀಯದೊಂದಿಗೆ ತಿನ್ನಲು ಒಂಚೂರು ಕುರುಕುತಿಂಡಿ ಬೇಕಿದೆ ಎಂಬ ಅನಿಸಿಕೆಯನ್ನೋ ನಾವು ತಿಂಡಿಪೋತತನ ಎನ್ನುವುದಿಲ್ಲ! ದುರಂತವೆಂದರೆ ಇಂಥ ಸಂದರ್ಭದಲ್ಲಿ ಮನಸ್ಸನ್ನು ನಿಯಂತ್ರಿಸಿಕೊಂಡು, ಒಂದೆರಡಕ್ಕೆ ನಿಲ್ಲಿಸುವುದಿಲ್ಲ! ಮಸಾಲೆ ವಡೆ ಮಾಡಿ, ಮಾಡಿ ತಟ್ಟೆಗೆ ತಂದು ಸುರಿಯುತ್ತಿರುವಾಗ ನಾಲ್ಕೈದು ಮಂದಿ ಕುಳಿತು ಹರಟೆ ಹೊಡೆಯುತ್ತಾ ಮುರಿ ಮುರಿದು ತಿನ್ನುತ್ತಿರುವಾಗ ಅದು ಹೇಗೆ ನಿಲ್ಲಿಸಲು ಸಾಧ್ಯ? ಟೇಬಲ್ ಮ್ಯಾನರ್ಸ್ ಅಂತ ಒಂದಿದೆಯಲ್ಲವೇ? ಈ ಶಿಷ್ಟಾಚಾರ ಮತ್ತು ಅತಿಥಿ ಸತ್ಕಾರದ ಒಂದು ಭಾಗವಾಗಿ ನಾವೂ ಕೈ ಜೋಡಿಸಬೇಕಲ್ಲವೇ? ಇಂಥ ಉದಾರವಾದೀ ಮನೋಧರ್ಮವು ನಮ್ಮೊಳಗೆ ಸುಪ್ತವಾಗಿರುವ ತಿಂಡಿಪೋತ ಗುಣಲಕ್ಷಣವನ್ನು ಬಡಿದೆಬ್ಬಿಸುತ್ತದೆ. ‘ನಿಲ್ಸೋದಿಕ್ಕೆ ಆಗೋದೇ ಇಲ್ಲ’ ಎಂಬ ಹತಾಶ ಪರಿಸ್ಥಿತಿಗೆ ವಶರಾಗಿ ನಿಧಾನವಾಗಿ ಒಂದು ಅಪರಾಧಿ ಪ್ರಜ್ಞೆ ಆವರಿಸುತ್ತಾ ಹೋಗುತ್ತದೆ. ಡಯಟೀಷಿಯನ್ನುಗಳು ಇಂಥದೊಂದು ದೌರ್ಬಲ್ಯದತ್ತ ಬೊಟ್ಟು ಮಾಡುತ್ತಾರೆ. ‘ನಾನೊಲ್ಲೆ, ಬೇಡ, ತಿನ್ನುವುದಿಲ್ಲ, ಬಿಟ್ಟಿದ್ದೇನೆ ಎಂದು ನಿಮ್ಮ ಕಠಿಣ ನಿರ್ಧಾರವನ್ನು ಮನದಟ್ಟು ಮಾಡಿ, ದಾಕ್ಷಿಣ್ಯಕ್ಕೆ ವಶರಾಗದಿರಿ’ ಎಂದು ಸಲಹೆ ನೀಡುತ್ತಾರೆ. ಆಹಾರದ ವಿಚಾರದಲ್ಲಿ ನಾವು ನಾಲಗೆಯ ರುಚಿಗೂ ದಾಕ್ಷಿಣ್ಯದ ಸಂಕೋಲೆಗೂ ಸಿಕ್ಕಿಕೊಂಡು ಪರದಾಡುತ್ತೇವೆ. ಉಳಿದವರು ತಿನ್ನುವಾಗ ನಾವು ಹೇಗೆ ತಿನ್ನದೇ ಸುಮ್ಮನಿರುವುದು? ‘ಏನಿವರ ಪ್ರತಿಷ್ಠೆ? ಒಂಥರಾ ದುರಹಂಕಾರ! ಆಟಿಟ್ಯೂಡ್ ಮೇನ್‌ಟೇನ್ ಮಾಡ್ತಾರೆ!’ ಎಂದೆಲ್ಲಾ ತಿರಸ್ಕಾರಕ್ಕೆ ಒಳಗಾಗಬೇಕು. ಒಟ್ಟಿನಲ್ಲಿ ಈ ಕುರುಕುತಿಂಡಿಗಳಿಂದ ಮನುಷ್ಯನಿಗೆ ಸುಖವಿಲ್ಲಾ, ದುಃಖವೇ ಎಲ್ಲ ಎಂದು ತೀರ್ಮಾನಿಸುತ್ತಲೂ ಹಾಗೆ ತೀರ್ಮಾನಿಸಬೇಕಲ್ಲಾ ಎಂಬ ನೋವಿನಿಂದಲೂ ಒದ್ದಾಡುವಂತಾಗುತ್ತದೆ.
ಇಂಥ ತಿಂಡಿಪೋತ ಮತ್ತು ತಿಂಡಿಪೋತಿಯರನ್ನು ಹೊಟ್ಟೆಬಾಕರೆಂದೂ ತಿನಾಳಿಯೆಂದೂ ಕರೆಯುವುದುಂಟು. ಎಗ್ಗು ಸಿಗ್ಗಿಲ್ಲದೇ ತಿನ್ನುವ ಖಯಾಲಿಗೆ ಸಿಕ್ಕವರನ್ನು ಸಮಾಜ ಹಗುರವಾಗಿ ನೋಡುತ್ತದೆ. ಇದ್ದುದರಲ್ಲಿ ಚುರುಮುರಿ ವಾಸಿ. ಮಂಡಕ್ಕಿಪುರಿಗೆ ಹಸಿ ಈರುಳ್ಳಿ, ಮಾವಿನಕಾಯಿ ತುರಿ, ಕ್ಯಾರೆಟ್ ತುರಿ ಬೆರೆಸಿ, ಒಂಚೂರು ಉಪ್ಪು, ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತಿನ್ನುವ ಸಂಜೆಯ ಹಿತವಾದ ಅನುಭವವು ಒಂದು ಸುಶ್ರಾವ್ಯವಾದ ಭಾವಗೀತೆಯನ್ನು ಆಲಿಸಿದಾಗ ಆಗುವಂಥದು. ಹಸಿ ತರಕಾರಿಗಳನ್ನು ಈ ಮೂಲಕ ತಿನ್ನುತ್ತೇವೆಂಬ ಸಮಾಧಾನ ಬೇರೆ. ಆದರೆ ನಾವು ಇಷ್ಟಕ್ಕೇ ನಿಲ್ಲಿಸುವುದಿಲ್ಲ! ಮುಂದುವರೆದು, ಆ ಶುದ್ಧ ಚುರುಮುರಿಗೆ ಚೌಚೌ, ಖಾರಾಬೂಂದಿ ಬೆರೆಸುವುದೂ ಮಾಡಿ, ಎಣ್ಣೆತಿಂಡಿಯನ್ನು ಆಹ್ವಾನಿಸಿಕೊಳ್ಳುತ್ತೇವೆ. ಇನ್ನೂ ಒಂದು ಹೆಜ್ಜೆ ಮುಂದಡಿಯಿಟ್ಟು ನಿಪ್ಪಟ್ಟು ಮಸಾಲೆ ಎನ್ನುತ್ತೇವೆ. ಕಣ್ಣಿಗೆ ರಾಚುತ್ತಿರುವ ಕೋಡುಬಳೆ, ಚಕ್ಕುಲಿಗಳ ಡಬ್ಬಿಗೆ ಕೈ ಹಾಕಿ ಜೊತೆಗಿದ್ದವರಿಗೆ ಹಂಚಿ ನಾವೂ ತಿನ್ನಲು ಶುರುವಿಡುತ್ತೇವೆ. ಚಾಟ್ ಐಟಂಗಳೂ ಸ್ಟ್ರೀಟ್ ಫುಡ್ ಎಂದೇ ಪಾಪ್ಯುಲರಾದ ಮಸಾಲ್ ಪುರಿ, ಪಾನಿಪುರಿ, ಬೇಲ್‌ಪುರಿ, ದಹಿಪುರಿ, ಸೂಕಾಪುರಿ, ಸೇವ್‌ಪುರಿ, ಸಮೋಸಾ ಚಾಟ್, ಕಚೋರಿ ಚಾಟ್, ವಡಾ ಪಾವ್, ಪಾವ್ ಬಾಜಿ, ಚೋಲೇ ಬತೂರೆಗಳೂ ಪುಷ್ಕಳವಾದ ಭೋಜನದಂತೆ ಒಂದೊಂದಾಗಿ ಒಳಗಿಳಿಯತೊಡಗುತ್ತವೆ. ಎಣ್ಣೆಗೂ ಉಪ್ಪುಖಾರಕ್ಕೂ ಅದೇನು ನಂಟೋ? ತಿನ್ನುವಾಗ ದೇವತೆಯಂತೆ ಕಂಡದ್ದು, ತಿಂದಾದ ಮೇಲೆ ಕರುಳಲ್ಲಿ ರಕ್ಕಸವಾಗಿ, ಬೆಕ್ಕಸ ಬೆರಗಾಗಿಸುತ್ತವೆ. ಇದೊಂದು ನಿಲ್ಲದ ಪಯಣ. ಹಸಿ ತರಕಾರಿಯ ಹೆಸರಲ್ಲಿ ನಾವು ನಡೆಸುವ ಎಣ್ಣೆತಿಂಡಿಯ ‘ಹತ್ಯಾಚಾರ’ವು ಸಹ ನಮಗೆ ನಾವೇ ಮೋಸ ಮಾಡಿಕೊಳ್ಳುವ ಸ್ಕೀಮು. ಬಹುಶಃ ಈ ಆತ್ಮವಂಚನೆಯಿಂದಲೇ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರದೇ ಯಾರ್ಯಾರ ವಶಕ್ಕೋ ಕೊಟ್ಟು ಅಸಹಾಯಕರಾಗುತ್ತೇವೆ. ತಿನ್ನುವಾಗ ಆಗುವ ಸಂತಸ ತಿಂದ ಮೇಲೆ ಉಳಿಯುವುದಿಲ್ಲ! ಪರಿಣಾಮ ಗೊತ್ತಿದ್ದೂ ತಿಂದು ತೇಗುವ ಇಂಥ ಗುಣಸ್ವಭಾವವೇ ತಿಂಡಿಪೋತತನ. ಈ ದಿಸೆಯಲ್ಲಿ ಮೂರು ರೀತಿಯ ಮಂದಿಯಿದ್ದಾರೆ: ಬಿಲ್‌ಕುಲ್ ಬೇಡ ಎನ್ನುವ ವೀರಾಗ್ರಣಿಗಳು. ಇಂಥವರದು ದೃಢಚಿತ್ತ. ಇಂಥವುಗಳನ್ನು ಬಿಟ್ಟಿದ್ದೇನೆ ಎಂಬ ಭೀಷ್ಮಪ್ರತಿಜ್ಞಾವಂತರು. ಮೊದಲೆಲ್ಲಾ ಇಂಥವರನ್ನು ತಮಾಷೆ ಮಾಡುತ್ತಿದ್ದೆವು. ಆದರೆ ಈಗ ಕಾಲ ಬದಲಾಗಿದೆ. ನಮಗಿಂಥವರು ಆದರ್ಶಪ್ರಾಯರೆನಿಸುತ್ತಾರೆ. ಹಾಗಾಗಿ ತಿನ್ನುವುದಿಲ್ಲ ಎಂದವರನ್ನು ಹೆಚ್ಚು ಒತ್ತಾಯ ಮಾಡಲು ಹೋಗುವುದಿಲ್ಲ. ಇನ್ನು ಎರಡನೆಯವರು ಸ್ವಲ್ಪಮಟ್ಟಿಗೆ ಅಡ್ಜೆಸ್ಟ್ ಆಗುವಂಥವರು. ಇವರು ತಿನ್ನುವುದಿಲ್ಲ ಎಂದು ತೀರ್ಮಾನಿಸಿದ್ದರೂ ಸ್ವಲ್ಪ ಒತ್ತಾಯ ಮಾಡಿದರೆ ಹಳ್ಳಕ್ಕೆ ಬೀಳುವಂಥವರು. ನಿಮ್ಮೆಲ್ಲರ ಒತ್ತಾಯದ ಮೇರೆಗೆ ಅದರಲ್ಲೂ ಅಪರೂಪಕ್ಕೆ ನೀವು ಸಿಕ್ಕಿದ್ದೀರಿ ಎಂಬ ಕಾರಣಕ್ಕೆ ಎಂದೆಲ್ಲಾ ದೇಶಾವರಿ ಮಾತಾಡಿ ಎಲ್ಲರೊಂದಿಗೆ ಕೈ ಜೋಡಿಸುವಂಥವರು; ತಮ್ಮ ಪ್ರತಿಜ್ಞೆಯನ್ನು ಕೈ ಬಿಡಲು ಕಾಯುತ್ತಿರುವಂಥವರು! ಇನ್ನು ಕೆಲವರದು ಹಿತಮಿತ ಮನಸ್ಥಿತಿ. ಒಂಚೂರು ಮುರಿದು ರುಚಿ ನೋಡಿ, ಸಾಕು ಎಂದು ನಿರ್ಣಯಿಸಿ, ತಿಂಡಿಪೋತರಿಂದ ದೂರವುಳಿದು, ಮಾತು-ಹರಟೆ-ವಿನೋದಗಳಲ್ಲಿ ಬೆರೆತು ಸುಮ್ಮನಾಗುವವರು. ಮೇಲುನೋಟಕ್ಕೆ ಇಂಥವರು ಸಾಮಾನ್ಯರಾಗಿ ಕಂಡರೂ ಅಂತರಂಗದಲ್ಲಿ ಅಸಾಮಾನ್ಯರು. ಬಾಯಿ ಕೆಟ್ಟವರಲ್ಲ; ಬಾಯಿ ಕಟ್ಟಿದವರು! ತಿನ್ನುವುದೇ ಇಲ್ಲ ಎಂಬಂಥ ಭೀಷ್ಮಾಚಾರ್ಯರಿಗೆ ಹೋಲಿಸಿದರೆ ಇವರು ವಾಸಿ. ಈಗಾಗಲೇ ತಿಂದಿದ್ದರ ಮತ್ತು ತಿಂದರಾಗುವ ಪರಿಣಾಮಗಳ ಅನುಭವ ಇದ್ದವರು. ಎಷ್ಟು ತಿನ್ನಬೇಕು, ಯಾವಾಗ ನಿಲ್ಲಿಸಬೇಕು ಎಂಬ ಪರಿಜ್ಞಾನ ಇರುವವರು. ಇವರು ತಿಂಡಿಪೋತರಲ್ಲ; ರಸಿಕರೇ ಆದರೂ ರಸನಿಯಂತ್ರಕರು. ತಮ್ಮ ಟೀವಿಯ ರಿಮೋಟನ್ನು ತಾವೇ ಇಟ್ಟುಕೊಂಡವರು! ಬೇರಾರಿಗೋ ಕೊಟ್ಟು ಅವರು ತೋರಿದ್ದನ್ನು ನೋಡುತ್ತಾ ಇರುವ ಅಸಹಾಯಶೂರರಲ್ಲ. ನಾಲ್ಕು ಮಂದಿ ಹೊಟೆಲಿಗೆ ಹೋಗಿ ಟೀ ಕುಡಿಯುವಾಗ ಒಂದು ಪ್ಲೇಟು ಬಜ್ಜಿಯನ್ನು ತರಿಸಿಕೊಂಡು ತಲಾ ಒಂದೊಂದು ಬಾಯಿಗೆ ಹಾಕಿಕೊಂಡರೆ ಅಂಥದನ್ನು ತಿಂಡಿಪೋತತನ ಎನ್ನುವುದಿಲ್ಲ; ಅಷ್ಟಕ್ಕೇ ನಿಲ್ಲಿಸದೇ ಇನ್ನೊಂದು ಪ್ಲೇಟು ಆರ್ಡರು ಮಾಡುವುದಿದೆಯಲ್ಲಾ! ಅದು ಪಡಪೋಸೀತನ. ಹೀಗೆ ತಿನ್ನುವವರು ಹಣವನ್ನೂ ಆರೋಗ್ಯವನ್ನೂ ಒಟ್ಟೊಟ್ಟಿಗೆ ಹಾಳು ಮಾಡಿಕೊಳ್ಳುತ್ತಿರುತ್ತಾರೆ. ಜೊತೆಗೆ ಸಂಬಂಧವನ್ನೂ! ಏಕೆಂದರೆ ತಿನ್ನುವಾಗ ಬಾಯಿ ಸುಮ್ಮನಿರುವುದಿಲ್ಲ; ಅದೂ ಇದೂ ಮಾತಾಡುವ ಚಪಲ. ಮಾತಿನ ನಡುವೆ ಅವರೂ ಇವರೂ ಬಂದು ಹೋಗುತ್ತಾರೆ. ಅವರು ಹಂಗಂತೆ; ಇವರು ಹಿಂಗಂತೆ ಎಂಬಂಥ ವ್ಯಕ್ತಿನಿಂದೆಗಳೂ ಚಾರಿತ್ರ್ಯವಧೆಗಳೂ ನಡೆದು ಬಿಡುತ್ತವೆ. ನಾವು ಸಾಚಾ; ಉಳಿದವರು ಸಾಚಾ ಅಲ್ಲ ಎಂಬ ಠರಾವು ಮಂಡಿಸಿ ಎದ್ದು ಹೋಗುವಾಗ ವ್ಯಕ್ತಿತ್ವದ ಘನತೆಯನ್ನೂ ಸಂಬಂಧಗಳ ಮಮತೆಯನ್ನೂ ಮರೆಯುತ್ತೇವೆ. ಬಾಯಿರುಚಿಯು ಬರೀ ಬಾಯಿಯನ್ನು ಹಾಳು ಮಾಡುವುದಿಲ್ಲ; ಹತೋಟಿ ತಪ್ಪಿದ ನಾಲಗೆಯು ದೇಹದ ಮತ್ತು ಮನಸಿನ ಸ್ವಸ್ಥತೆಯನ್ನು ಹಾಳುಗೆಡಹುತ್ತದೆ. ಕುರುಕುತಿಂಡಿಗಳ ಅನಾಹುತ ಇಷ್ಟಕ್ಕೇ ನಿಲ್ಲುವುದಿಲ್ಲ! ಮುಂದುವರಿಯುತ್ತದೆ. ನಾವು ತಿನ್ನದಿದ್ದರೂ ತಿನ್ನುವುದನ್ನು ಬಿಟ್ಟಿದ್ದರೂ ಬೇರೆಯವರಿಗೆ ತಿನ್ನಿಸುವ ಉಮೇದು ಬೆಳೆಯುತ್ತದೆ. ಇದೊಂಥರ ವಿಚಿತ್ರ ಸೈಕಾಲಜಿ. ಕೆಲವೊಮ್ಮೆ ನಮಗೆ ಇಷ್ಟವಾಗುವುದನ್ನು ನಾವು ತಿನ್ನದೇ, ನಮ್ಮ ಪ್ರೀತಿಪಾತ್ರರಿಗೆ ತಿನ್ನಿಸುವ ಚಾಳಿ. ಇದು ವಿಕೃತಾನಂದದ ಮಲ ಸೋದರ ಸುಕೃತಾನಂದ! ‘ನಾವಾಗಿಯೇ ತಿನ್ನುವುದಿಲ್ಲ; ಇನ್ನೊಬ್ಬರು ತಂದುಕೊಟ್ಟರೆ ತಿನ್ನದೇ ಬಿಡುವುದಿಲ್ಲ; ಏಕೆಂದರೆ ಆಹಾರವನ್ನು ವೇಸ್ಟ್ ಮಾಡಬಾರದು’ ಎಂಬ ತತ್ತ್ವಶಾಸ್ತ್ರ!! ‘ನಾನು ಕುಡಿಯುವುದನ್ನು ಬಿಟ್ಟು ಬಿಟ್ಟಿದ್ದೇನೆ, ಕೈಯಲ್ಲೂ ಮುಟ್ಟುವುದಿಲ್ಲ. ಆದರೆ ಯಾರಾದರೂ ತುಂಬಾ ಬಲವಂತ ಮಾಡಿದರೆ ಆಗ ಅವರ ಮನಸಿಗೆ ಬೇಸರವಾಗಬಾರದೆಂದು ಕುಡಿಯುವೆ’ ಎಂದನಂತೆ ಒಬ್ಬ ಭೂಪ. ‘ಇದ್ಯಾರು ನಿಮ್ಮ ಜೊತೆ ಇದ್ದಾರಲ್ಲ, ಸ್ನೇಹಿತರೇ?’ ಎಂದು ಕೇಳಿದಾಗ ‘ಈತ ನನ್ನ ನೌಕರ. ಕುಡಿಯಲು ಫೋರ್ಸ್ ಮಾಡಲೆಂದೇ ಕೆಲಸಕ್ಕೆ ಇಟ್ಟುಕೊಂಡಿದ್ದೇನೆ’ ಎಂದನಂತೆ! ಹೀಗೆ ನಮ್ಮ ಬಾಳುವೆ. ಯಾರಾದರೂ ಒತ್ತಾಯ ಮಾಡಿದರೆ ಅಲ್ಲ, ಒತ್ತಾಯ ಮಾಡಲಿ ಎಂದೇ ನಮ್ಮ ಒಳಮನಸು ಹಾರೈಸುತ್ತಿರುತ್ತದೆ. ಒಳಗೆ ಆಸೆ; ಹೊರಗೆ ಸಂನ್ಯಾಸೆ ಎಂಬ ಗಾದೆಮಾತಿನಂತೆ. ಹಿಂದೆ ಆಹಾರವೇ ಔಷಧ ಆಗಿದ್ದುದು ಈಗ ಔಷಧವೇ ಆಹಾರವಾಗಿದೆ. ಅದಕ್ಕೆ ತಕ್ಕಂತೆ ತಿಂಡಿ ತಿನಿಸುಗಳ ವ್ಯಾಪಾರ ವ್ಯವಹಾರ ಜೋರಾಗಿದೆ. ನೀತಿರಹಿತ ವಾಣಿಜ್ಯದಿಂದಾಗಿ ಎಲ್ಲೆಂದರಲ್ಲಿ ಕುರುಕುತಿಂಡಿ, ಮನೆತಿಂಡಿ, ಎಣ್ಣೆಪದಾರ್ಥ ತಲೆಯೆತ್ತಿ ನಿಂತು ಅಭಿಸಾರಿಕೆಯಂತೆ ಆಹ್ವಾನಿಸುತ್ತಿರುತ್ತವೆ. ಮನೆಯಲ್ಲಿ ಮಕ್ಕಳು ಇದ್ದಾರೆ, ನಾವು ಏನಾದರೂ ಇಂಥ ಕುರುಕು ಮುರುಕುಗಳನ್ನು ಕೊಂಡೊಯ್ಯೋಣವೆಂದು ಹಳ್ಳಕ್ಕೆ ಬೀಳುತ್ತೇವೆ. ಆರ್ಡರ್ ಮಾಡುವಾಗ ಅವರ ಮನೆಗೊಂದು ಪ್ಯಾಕೆಟು; ನಮ್ಮ ಮನೆಗೊಂದು ಪ್ಯಾಕೆಟು ಸಿದ್ಧವಾಗುತ್ತದೆ. ಇದು ಸಾಲದೆಂಬಂತೆ ಮಾರಾಟಗಾರನೆಂಬ ಮಾಯಕಾರನು ಇದು ನೋಡಿ ಸರ, ಹೊಸ ಐಟಮ್ಮು, ನಮ್ಮಲ್ಲಿ ಇದು ಫಾಸ್ಟ್ ಮೂವಿಂಗು ಎಂದು ರುಚಿಗೆ ಕೊಡುತ್ತಾನೆ. ಅದು ಬರೀ ಹಳ್ಳವಲ್ಲ; ಬೇಕೆಂತಲೇ ತೋಡಿದ ಖೆಡ್ಡಾ ಎಂಬುದನ್ನು ಮರೆತು ಮುಗುಳ್ನಕ್ಕು ರುಚಿ ನೋಡಿ ಅದನ್ನೂ ಸೇರಿಸಿ ಕಟ್ಟಿಸುತ್ತೇವೆ. ಆಗೆಲ್ಲಾ ನಮ್ಮ ಶಪಥವು ಶಾಪವಾಗಿ, ಮನುಷ್ಯರಾಗಿ ಹುಟ್ಟಿ, ಇಷ್ಟೂ ತಿನ್ನದಿದ್ದರೆ ಹೇಗೆ? ಎಂದು ಉದಾರಗೊಂಡು, ನಾಲಗೆ ಹೊರಚಾಚುತ್ತದೆ. ಇನ್ನೊಂದು ಸಲ ತಿನ್ನದಿದ್ದರೆ ಸಾಕು ಎಂಬ ಸಮಾಧಾನವನ್ನು ನಮಗೆ ನಾವೇ ಕೊಟ್ಟುಕೊಂಡು, ಆಂತರ್ಯವನ್ನು ಸಂತೈಸುತ್ತೇವೆ. ಆ ಇನ್ನೊಂದು ಸಲ ಸಹ ಹೀಗೇ ಆಗುತ್ತದೆ ಎಂಬ ಸತ್ಯದ ಅರಿವಿದ್ದರೂ!
‘ಫಿಟ್‌ನೆಸ್’ ಕುರಿತಂತೆ ನನ್ನ ಮಗ ಬರೆದ ಲೇಖನವೊಂದರಲ್ಲಿ ಒಂದು ಕಡೆ ಫುಡ್ ಕ್ರಾವಿಂಗ್ಸ್ ಎಂಬ ಮಾತು ಬರುತ್ತದೆ. ಹೀಗೆಂದರೇನು? ಎಂದು ನಾನು ಕೇಳಿದಾಗ ಆಗ ಅವನೆಂದ: ‘ಹಾಳೂ ಮೂಳು ತಿಂಡಿ ತಿನಿಸು’ ಎಂದು! ಹಾಗಾಗಿ ಈ ಕುರುಕು ತಿಂಡಿಗಳನ್ನು ಹಾಳೂಮೂಳು ಎಂದೇ ಪರಿಗಣಿಸಲಾಗಿದೆ. ಇವು ನಮ್ಮ ಶರೀರದ ಮಿದುಳು ಮತ್ತು ಕರುಳನ್ನೇ ಸಮ್ಮೋಹನಗೊಳಿಸಿ, ತಾವು ರಾಜ್ಯಭಾರ ಮಾಡುತ್ತವೆ. ಇಂಥವನ್ನು ತಿನ್ನಲು ತೊಡಗಿದರೆ ಇನ್ನಷ್ಟು ತಿನ್ನಬೇಕೆಂಬ ಆಸೆಯೆಂಬ ಮೋಹಪಾಶ ಒಳಗಿನಿಂದಲೇ ಆವರಿಸಿ, ಅದರ ಮಾಯಾಜಾಲಕ್ಕೆ ವಶವರ್ತಿಗಳಾಗುತ್ತೇವೆ. ನಾಲಗೆಗೆ ರುಚಿ ಹತ್ತಿ, ಪೌಷ್ಠಿಕಾಂಶವುಳ್ಳ ಆಹಾರವನ್ನು ಪಕ್ಕಕ್ಕೆ ಸರಿಸಿ, ಊಟಕ್ಕೆ ಉಪ್ಪಿನಕಾಯಿ ಎಂಬುದರ ಬದಲಿಗೆ ಉಪ್ಪಿನಕಾಯಿಯೇ ಊಟವಾಗುವ ಅನಾಹುತ ನಡೆದು ಬಿಡುತ್ತದೆ. ಹಾಗಾಗಿಯೇ ಕೆಲವು ಕಟ್ಟಾಳುಗಳು, ಒಂಚೂರೂ ತಿನ್ನುವುದಿಲ್ಲ, ಕೈಯಲ್ಲಿ ಮುಟ್ಟುವುದಿಲ್ಲ, ಕಣ್ಣಲ್ಲೂ ನೋಡುವುದಿಲ್ಲ ಎಂಬ ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳುತ್ತಾರೆ. ಇಂಥ ಕಠೋರವ್ರತ ತುಂಬ ಕಷ್ಟದ್ದು. ಸ್ನ್ಯಾಕ್ಸು, ಚಾಟ್ಸು, ಪಾರ್ಟಿ, ಫ್ರೆಂಡ್ಸು ಎಂದೆಲ್ಲಾ ಓಡಾಡಿಕೊಂಡಿರುವವರಿಗೆ ಅಸಾಧ್ಯವಾದದ್ದು. ತಿಂಡಿಪೋತರನ್ನು ಬೆಳೆಸುವ ಆ ಮೂಲಕ ತಾವೂ ಉದ್ಯಮರಂಗದಲ್ಲಿ ಬೆಳೆಯುವ ಹುನ್ನಾರ ವ್ಯಾಪಾರಿಗಳದ್ದು. ಜನ ಕೇಳುತ್ತಾರೆಂದು ಮಾರಾಟಗಾರರೂ ಮಾರುತ್ತಾರೆಂದು ಜನ ಕೊಳ್ಳುವುದೂ ಅವ್ಯಾಹತ ಪ್ರಕ್ರಿಯೆ. ಇವನ್ನು ಮಾರಬಾರದು ಎಂಬುದಕ್ಕಿಂತ ತಿನ್ನಬಾರದು ಎಂಬುದೇ ಆರೋಗ್ಯದ ಗುಟ್ಟು. ಒಣಗಿದ ಸೆಗಣಿ, ಬೆರಣಿಯನ್ನೂ ಮಾರುವಂಥ ಅಮೆಜಾನ್ ಇರುವಾಗ ನಮ್ಮ ಬುದ್ಧಿವಿವೇಕ ಜಾಗೃತಗೊಳ್ಳಬೇಕು. ಒಂದು ಹಂತ ಕಳೆದ ಮೇಲೆ ‘ಇನ್ನು ಸಾಕು, ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂಬ ಸದ್ಬುದ್ಧಿ ನಮಗೆ ಬರಬೇಕು.
ಆದರೆ ಕಾಲಮಹಿಮೆಯೇ ಬೇರೆಯಿದೆ. ತಿಂಡಿಪೋತ ಎಂಬ ಪದಕ್ಕೆ ಇದ್ದ ನಕಾರಾತ್ಮಕ ಅರ್ಥವನ್ನು ಸಕಾರಾತ್ಮಕಗೊಳಿಸುವ ಮತ್ತು ಆ ಮೂಲಕ ಅಂಥ ಕುರುಕುತಿಂಡಿಪ್ರಿಯರಲ್ಲಿ ಹುಸಿ ಆತ್ಮಾಭಿಮಾನ ಹುಟ್ಟಿಸುವ ಒಂದಂಗವಾಗಿ ಅಂಗಡಿಮುಂಗಟ್ಟುಗಳಿಗೆ ತಿಂಡಿಪೋತ ಎಂಬ ಹೆಸರನ್ನೇ ಇಡಲಾಗುತ್ತಿದೆ. ಮೈಸೂರಿನ ಬನ್ನಿಮಂಟಪದ ಬಳಿ ತಿಂಡಿಪೋತ ಎಂಬ ಫಾಸ್ಟ್ ಫುಡ್ ರೆಸ್ಟೋರೆಂಟಿದೆ. ಮೈಸೂರು ಬೆಂಗಳೂರು ರಸ್ತೆಯ ಸೆಂಟ್ ಜೊಸೆಫ್ ಆಸ್ಪತ್ರೆಯ ಎದುರೇ ಇದ್ದು ತಿಂಡಿಪೋತರನ್ನು ಕೈ ಬೀಸಿ ಕರೆಯುತ್ತದೆ. ನಿಮ್ಮ ತಿಂಡಿಪೋತ ಎಂಬ ಫೇಸ್‌ಬುಕ್ ಪೇಜ್ ಒಂದಿದೆ. ಬಿಗ್‌ಬಾಸ್‌ನ ಆರನೇ ಆವೃತ್ತಿಯಲ್ಲಿ ಆಂಡ್ರೂ ಎಂಬ 140 ಕೆಜಿಯ ಸ್ಪರ್ಧಿಯೊಬ್ಬ ತನ್ನನ್ನು ‘ಅಪ್ರತಿಮ ತಿಂಡಿಪೋತ’ ಎಂದು ಕರೆದುಕೊಂಡಿದ್ದ. ತಿಂಡಿಪೋತ, ಪೋತಿಯರನ್ನು ಹೆಚ್ಚು ಮಾಡುವ, ಅವರಲ್ಲಿ ಕೀಳರಿಮೆ ಹೋಗಲಾಡಿಸುವ ಕಾಯಕದಲ್ಲಿ ಹಲವರು ತೊಡಗಿಸಿಕೊಂಡಿದ್ದಾರೆ. ಆಹಾರೋದ್ಯಮದಲ್ಲಿ ಇವುಗಳ ಪಾಲು ದಿನೇ ದಿನೇ ಹೆಚ್ಚಾಗುತ್ತಿದೆ. ತರಹೇವಾರಿ ತಿಂಡಿತೀರ್ಥಗಳು ಮಾರುಕಟ್ಟೆಯನ್ನು ಆಕ್ರಮಿಸುತ್ತಿವೆ. ಜನರು ಸಹ ಹೊಸದರ ಅನ್ವೇಷಣೆಯಲ್ಲಿ ಸದಾ ತೊಡಗಿಸಿಕೊಂಡು, ಅರಸುತ್ತಿರುತ್ತಾರೆ. ನನ್ನ ಸ್ನೇಹಿತರೊಬ್ಬರು ಎಲ್ಲಿ ಚಿಪ್ಸ್ ಚೆನ್ನಾಗಿ ಮಾಡುತ್ತಾರೆಂಬ ಸಂಶೋಧನೆ ಕೈಗೊಂಡು, ಊರೂರು ತಿರುಗಿ ಅಲ್ಲೆಲ್ಲಾ ತಿಂದು, ಕಟ್ಟಿಸಿಕೊಂಡು ಬಂದು ನೆಂಟರಿಷ್ಟರಿಗೆಲ್ಲಾ ಕೊಟ್ಟು ಅವರ ಫೀಡ್‌ಬ್ಯಾಕು ಪಡೆದು ‘ಮಹಾಪ್ರಬಂಧ’ ಬರೆಯುವಷ್ಟು ವಿಷಯ ಸಂಗ್ರಹಿಸಿ, ಜಡಿಮಳೆಯಂತೆ ಮಾತಾಡುತ್ತಿರುತ್ತಾರೆ. ಇನ್ನೊಬ್ಬರು ಸಂಜೆಯ ವೇಳೆ ಯಾವ್ಯಾವ ಏರಿಯಾದಲ್ಲಿ ಯಾವ ಜಾಗದಲ್ಲಿ ಬೋಂಡ, ಬಜ್ಜಿ ಮಾಡುತ್ತಾರೆ? ಅದರ ರುಚಿ ಹೇಗಿರುತ್ತದೆ? ರೇಟೆಷ್ಟು? ಎಂದೆಲ್ಲಾ ಫೀಲ್ಡ್‌ವರ್ಕ್ ಮಾಡಿ, ಕಂಪಾರಿಟಿವ್ ಸ್ಟಡಿ ನಡೆಸಿದ್ದಾರೆ. ‘ನಿಮಗೆ ಗೊತ್ತಿಲ್ಲಾ, ನೀವು ತಿಂದಿಲ್ಲಾ’ ಎಂದೇ ಶುರು ಮಾಡುವ ಇವರು ಕುರುಕುತಿಂಡಿಗಳ ಕ್ಷೇತ್ರದಲ್ಲಿ ಸಾಕಷ್ಟು ಜ್ಞಾನಾರ್ಜನೆ ಗಳಿಸಿ, ಸ್ವಾನುಭವದಿಂದ ಮಾತಾಡುವಾಗ ತಿನ್ನದೇ ಇರುವಂಥವರಲ್ಲಿ ಒಂದು ಬಗೆಯ ಕೀಳರಿಮೆ ಹುಟ್ಟಿ ಬಿಡುತ್ತದೆ. ‘ನಮ್ಮ ಜೀವ ಜೀವನ ವ್ಯರ್ಥವಾಯಿತಲ್ಲ’ ಎಂದೆನಿಸಿಬಿಡುತ್ತದೆ. ಇಂಥ ಹೊತ್ತಿನಲ್ಲಿ ಯಾವುದು ಮಾಹಿತಿ? ಯಾವುದು ಜ್ಞಾನ? ಯಾವುದು ಜ್ಞಾನವಲ್ಲ? ಎಂಬುದೇ ಗೊತ್ತಾಗದೇ ನನ್ನಂಥ ಕಮಂಗಿಯು ಕಕ್ಕಾಬಿಕ್ಕಿಯಾಗುತ್ತೇನೆ. ಅವರವರು ಪಡೆದು ಬಂದದ್ದು ಎಂದೋ ಎಲ್ಲವನ್ನೂ ತಿಂದು ಜೀರ್ಣಿಸಿಕೊಳ್ಳುವ ತಾಕತ್ತು ಇರುವವರು ಎಂದೋ ಭಗವಂತ ಅವರಿಗೆ ದಯಪಾಲಿಸಿರುವ ಜಠರವೆಂಬ ಗ್ರೈಂಡರಿನ ಮೋಟಾರು ಪವರು ಶಕ್ತಿಶಾಲಿಯೆಂದೋ ಪರಿಗಣಿಸಿ ಸುಮ್ಮನಾಗುತ್ತೇನೆ. ಹಿಂದೆಲ್ಲಾ ಇಂಥ ತಿಂಡಿ ತಿನಿಸುಗಳು ದೇವಲೋಕದ ರಂಭೆ, ಮೇನಕೆ, ಅಪ್ಸರೆ, ಊರ್ವಶಿ, ತಿಲೋತ್ತಮೆಯರಂತೆ ಕಾಣುತ್ತಿದ್ದವು! ಸಡನ್ನಾಗಿ ಈಗ ಇವರೆಲ್ಲಾ ಮಾಯಾಮೋಹಜಾಲದ ಬಲೆಯೊಳಗೆ ಸಿಲುಕಿಸುವ ಕಣ್ಣ ಮುಂದಿನ ದೃಷ್ಟಿಭ್ರಮೆ ಎನಿಸುವಂತಾಗಿದೆ. ‘ಎಷ್ಟೂ ಅಂತ ತಿನ್ನುವುದು? ಎಷ್ಟೂ ಅಂತ ನರಳುವುದು?’ ಎಂಬ ವೈರಾಗ್ಯ ಆವರಿಸಿದೆ. ‘ತಿನ್ನುವುದಕ್ಕೂ ನಾಚಿಕೆಯಿಲ್ಲ; ನರಳುವುದಕ್ಕೂ ನಾಚಿಕೆಯಿಲ್ಲ!’ ಎಂಬ ನಮ್ಮಜ್ಜಿ ಬೈಗುಳ ನೆನಪಾಗುತ್ತದೆ.
ಎಷ್ಟು ತಿಂದರೂ ಆಸೆಯೆಂಬ ಅಗ್ನಿ ತಣಿಯುವುದೇ ಇಲ್ಲ; ಯಜ್ಞಕ್ಕೆ ಹಾಕಿದ ಹವಿಸ್ಸಿನಂತೆ ಇನ್ನೂ ಪ್ರಜ್ವಲಗೊಂಡು ಇನ್ನೂ ಬೇಕೆಂಬ ದಾಹ ತೀರದ ಮೋಹ! ಮಸಣದಲ್ಲಿ ಮಣ್ಣಾಗುವವರೆಗೂ ಮೃತಶರೀರವು ಅಗ್ನಿಗೆ ಆಹುತಿಯಾಗುವವರೆಗೂ ಈ ಆಸೆಯೆಂಬ ದುರಾಸೆ ಚಪಲ ಚನ್ನಿಗರಾಯನಂತೆ ಹಪಹಪಿಸುತ್ತಲೇ ಇರುತ್ತದೆ; ಚಡಪಡಿಸುತ್ತಲೇ ಇರುತ್ತದೆ. ಸಾವಿರ ವರುಷಗಳ ಆಯುಷ್ಯವಿದ್ದ ಆದಿದೇವ ವೃಷಭನಾಥನು ನೀಲಾಂಜನೆಯ ನಾಟ್ಯವನ್ನು ನೋಡುತ್ತಾ ಆನಂದಿಸುತ್ತಿರುವಾಗ ಹಠಾತ್ತನೆ ಒಂದು ಘಟನೆ ಸಂಭವಿಸುತ್ತದೆ. ಆಕೆಯ ಆಯಸ್ಸು ಮುಗಿದು ಯಮಪಾಶ ಕೊರಳೇರುತ್ತದೆ. ನೋಡುಗರಿಗೆ ರಸಭಂಗವಾಗಬಾರದೆಂಬ ಸದಾಶಯದಿಂದ ದೇವಲೋಕದ ಇಂದ್ರನು ಇದನ್ನು ಗಮನಿಸಿ, ನಾಟ್ಯ ಮುಗಿಯುವತನಕ ಕೃತಕ ನೀಲಾಂಜನೆಯನ್ನು ಸೃಷ್ಟಿಸಿ ನರ್ತನವನ್ನು ಮುಂದುವರಿಸುತ್ತಾನೆ. ಒಂದು ಕ್ಷಣದ ಈ ಅದಲು ಬದಲಿನ ಕಣ್ಕುಟ್ಟು ಮಾಯೆ ಅರಿತಂಥ ಚಕ್ರವರ್ತಿ ವೃಷಭದೇವನು ಜೀವನದ ನಿಸ್ಸಾರತೆಯನ್ನೂ ಕ್ಷಣಭಂಗುರತೆಯನ್ನೂ ತಿಳಿದು, ಜ್ಞಾನೋದಯಗೊಂಡು, ತನ್ನ ನೂರು ಮಕ್ಕಳನ್ನು ಕರೆದು, ಅವರಿಗೆ ತನ್ನೆಲ್ಲಾ ರಾಜ್ಯಕೋಶವನ್ನು ಒಪ್ಪಿಸಿ, ಸಂನ್ಯಾಸಿಯಾಗಿ ಅಡವಿಗೆ ನಡೆದು ಬಿಡುತ್ತಾನೆ. ಆಯಸ್ಸು ತೀರಿದ ನೀಲಾಂಜನೆ ಒಂದು ಕಡೆ, ಆಯಸ್ಸು ಮುಗಿಯದಿದ್ದರೂ ಆಸಕ್ತಿ ಕಳೆದುಕೊಂಡ ಅರಸ ಇನ್ನೊಂದು ಕಡೆ! ಆದಿಮಹಾಕವಿ ಪಂಪನು ಚಿತ್ರಿಸುವ ‘ಆದಿಪುರಾಣ’ ಮಹಾಕಾವ್ಯದ ಈ ವೃತ್ತಾಂತವು ನಮಗೆ ಪಾಠವಾಗಬೇಕು; ಅದರಲ್ಲೂ ಕುರುಕುತಿಂಡಿಗಳೆಂಬುವು ನಾಲಗೆಗೆ ಮನ್ನಣೆ ನೀಡುವ ರುಚಿಭ್ರಮೆ ಅರಿವಾಗಬೇಕು. ಇವನ್ನೆಲ್ಲಾ ಮೆಲ್ಲುವುದನ್ನು ಬಿಡಬೇಕೆಂಬ ಆದರೆ ಕೈ ಬಿಡಲು ಆಗುತ್ತಿಲ್ಲವೆಂಬ ಡೋಲಾಯಮಾನ ನಮ್ಮಂಥ ಕಡುಲೌಕಿಕರದು. ಸಾಕುಪ್ರಾಣಿಗಳನ್ನು ಕಟ್ಟಿ ಹಾಕಿ ಪಳಗಿಸುವಂತೆ ನಾಲಗೆಯನ್ನು ಕಟ್ಟಿ ಹಾಕಲು ಆಗುತ್ತಿಲ್ಲವೆಂಬ ಹತಾಶೆ ಮತ್ತು ನಿರಾಶೆ ನಮ್ಮೆಲ್ಲರದೂ ಆಗಿದೆ. ಅಂದುಕೊಳ್ಳುವ ಮತ್ತು ನೊಂದುಕೊಳ್ಳುವ ನಡುವೆ ನಮ್ಮ ಜೀವನವು ತೂಗುಯ್ಯಾಲೆ ಆಡುತ್ತದೆ ಎಂಬುದೇ ವಾಸ್ತವ; ಉಳಿದದ್ದು ಜಗನ್ನಿಯಾಮಕ ವಾಸುದೇವ !
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು
ತಿಂಡಿಪೋತತನದ ಲೇಖನ ಹಾಗೂ ಅದಕ್ಕೆ ಪೂರಕ ಚಿತ್ರ ಎರಡೂ ಮನಕ್ಕೆ ಉಲ್ಲಾಸ ತಂದವು…ಸೂಪರ್ ಮಂಜು ಸಾರ್ ಹಳೆಯ ನೆನಪುಗಳು ನನ್ನ ಕಣ್ಮುಂದೆ ಬಂದಹಾಗಾಯಿತು
ಧನ್ಯವಾದ ನಾಗರತ್ನ ಮೇಡಂ, ನಿಮ್ಮ ಸಹೃದಯತೆಗೆ ಶರಣು.
ನನಗೂ ಈಗ ಇವು ಹಳೆಯ ನೆನಪಾಗಿವೆ. ಬಿಟ್ಟೆನೆಂದರೀ ಬಿಡದೀ ಮಾಯೆ!
ಬಹಳ ಚೆನ್ನಾಗಿ ವಾಸ್ತವವನ್ನು ಹೇಳಿದ್ದೀರಿ.
ಸದ್ಯ, ಬದುಕಿಕೊಂಡೆ. ಬರೆಯಲು ಈ ವ್ಯಕ್ತಿಗೆ ಇನ್ನೇನೂ ಸಿಗಲಿಲ್ಲವೇ?
ಎಂದು ಬಯ್ಯುತಾರೇನೋ ಎಂಬ ಅಳುಕು ನನಗಿತ್ತು.
ನಿಮ್ಮ ಮೆಚ್ಚುಮಾತು ನನಗೆ ನೂರಾನೆ ಬಲವಾಯಿತು. ಧನ್ಯವಾದ ಮೇಡಂ
ತಿಂಡಿಪೋತರ ಕೀಳರಿಮೆಯನ್ನೇ ಧನಾತ್ಮಕವಾಗಿ ಬಣ್ಣಿಸಿ, ಬಾಯಿಯಲ್ಲಿ ನೀರೂರಿಸುತ್ತಾ ತನ್ನನ್ನು ತಿನ್ನಲು ಪ್ರೇರೇಪಿಸುವ ತಿಂಡಿಗಳ ಪಟ್ಟಿಯನ್ನೂ ಒಳಗೊಂಡು ಎಂದಿನಂತೆ, ಒಳ್ಳೆಯ ಉದಾಹರಣೆ ಸಹಿತದ ಸಮರ್ಥನೀಯ, ಸಮೃದ್ಧ ಲೇಖನ ಹೊರಹೊಮ್ಮಿದೆ.
ಧನ್ಯವಾದ ಮೇಡಂ.
ನಿಮ್ಮ ಪ್ರೋತ್ಸಾಹಕೆ ನಾನು ಆಭಾರಿ.
ಸುರಹೊನ್ನೆಯಿಂದಾಗಿ ಇದು ಸಾಧ್ಯವಾಗಿದೆ.
ಈಗ ಸುರಹೊನ್ನೆಯೇ ನನ್ನಿಷ್ಟದ ತಿಂಡಿಯಾಗಿದೆ!
ಗುರೂಜಿ,
ಕುರುಕು ತಿಂಡಿಗಳ ಸಂಚಾರ ಮಾಡಿ ಬಂದಂತಹ ಅನುಭವ ಆಯಿತು. ವಿಷಯ ತಿಂಡಿಪೋತತನ ಆದರೂ ಈ ಲೇಖನದಲ್ಲಿ ಅಡಗಿರುವ ಆರೋಗ್ಯ ಕಾಳಜಿ ಮತ್ತು ಆಹಾರ ಪ್ರೀತಿ ಗಮನಿಸುವಂತಿದೆ. ❤
ತಾವು ತಿಂಡಿಪೋತತನದ ಬಗ್ಗೆ ಬರೆದರೆ,ತಮ್ಮ ಸುಪುತ್ರ ‘ಫಿಟ್ ನೆಸ್’ ಬಗ್ಗೆ ಬರೆಯುತ್ತಾರೆ…. ಏನಿದರ ಒಳಗುಟ್ಟು? ರುಚಿಯೆನಿಸಿದ ಯಾವುದೇ ತಿಂಡಿ-ತಿನಿಸುಗಳನ್ನು ಸವಿಯಲು ಮುಲಾಜಿಲ್ಲದ ನನ್ನಂತವರಿಗೆ ಬಹಳ ಗೊಂದಲವಾಗಿದೆ! ಎಂದಿನಂತೆ ಚೆಂದದ ಬರಹ..
ತಿಂಡಿಪೋತ ಬರೆಹ ಚೆನ್ನಾಗಿದೆ.ಮುಖ್ಯವಾಗಿ ಸಹಜವಾಗಿದೆ.ಒಂದಕ್ಷರವನ್ನೂ ಬಿಡದೆ ಓದಿ ನಕ್ಕಿದ್ದೇನೆ ಅಲ್ಲದೆ ನಮ್ಮಂತಹ ಮದ್ಯಮಮಾರ್ಗಿ ತಿಂಡಿಪೋತರಿಗೆ ಎಚ್ಚರಿಕೆಯ ಗಂಟೆಯಂತಿದೆ. ಒಂದುಕಾಲದಲ್ಲಿ ತಿನ್ನಲು ತೊಂದರೆ ಇತ್ತು .ಈಗ ತಿನ್ನಲು ಎಲ್ಲವೂ ಇದೆ ಆದರೆ ತಿನ್ನಲಾಗುತ್ತಿಲ್ಲ.ಮನೆಯಲ್ಲಿ ಮಕ್ಕಳು, ಹೆಂಡತಿ ಹೊರಗೆ ವೈದ್ಯರು ತಿಂಡಿಗಳ ಮೇಲೆ ಕುಳಿತು ನನ್ನನ್ನು ಕಾಯುತ್ತಾರೆ. ಕಾಡುತ್ತಾರೆ ಕೂಡ. ಮಳೆಗಾಲದ ಕುರುಕು ತಿಂಡಿಗಳಿ ಗೆಸಮನಾದ್ದುಈ ಜಗದಲ್ಲಿ ಬೇರೇನಿದೆ?