ವ್ಯಂಜನ ವಿಚಾರ !

Share Button

ವ್ಯಂಜನವೆಂದ ಕೂಡಲೇ ನೆನಪಾಗುವುದು ವ್ಯಾಕರಣ. ಸ್ವರಗಳು ಮತ್ತು ವ್ಯಂಜನಗಳು ಎಂದು. ಸ್ವರಗಳ ಸಹಾಯದಿಂದಲೇ ಉಚ್ಚಾರವಾಗುವ ವ್ಯಂಜನಗಳು ಭಾಷೆಯ ಮೂಲಧಾತು. ಅಕಾರದಿಂದ ಔಕಾರದವರೆಗೆ ಇರುವ ಅಕ್ಷರಗಳೇ ಸ್ವರ. ಇವುಗಳ ಸಂಕೇತ ಚಿಹ್ನೆಯೇ ಗುಣಿತಾಕ್ಷರ. ವ್ಯಂಜನಗಳು ಅರ್ಧಾಕ್ಷರಗಳು. ಇವು ಪೂರ್ಣವಾಗಲು ಸ್ವರದ ಸಹಾಯ ಬೇಕೇ ಬೇಕು. ಎಲ್ಲ ಭಾಷೆಗಳಲ್ಲೂ ಸ್ವರ ಮತ್ತು ವ್ಯಂಜನಗಳು ಇದ್ದೇ ಇರುತ್ತವೆ. ಎ, ಇ, ಐ, ಒ, ಯು ಎಂಬವು ಇಂಗ್ಲಿಷಿನ ಸ್ವರಗಳು. ಇನ್ನುಳಿದ ಇಪ್ಪತ್ತೊಂದು  ಅಕ್ಷರಗಳೇ ಈ ಭಾಷೆಯ ವ್ಯಂಜನಗಳು. ಕನ್ನಡದ ವ್ಯಂಜನಗಳಲ್ಲಿ ಎರಡು ಬಗೆ. ವರ್ಗೀಯ ಮತ್ತು ಅವರ್ಗೀಯ ಎಂಬುದಾಗಿ. ಕ್‌ ದಿಂದ ಮ್‌ ವರೆಗೆ ಇರುವ ವರ್ಣಗಳೇ ವರ್ಗೀಯ. ಏಕೆಂದರೆ ಇವನ್ನು ವರ್ಗೀಕರಿಸಲು ಸಾಧ್ಯ. ಧ್ವನ್ಯೋತ್ಪತ್ತಿ ಸ್ಥಾನಗಳಿಗೆ ಅನುಗುಣವಾಗಿ ಕ್ರಮವಾಗಿ ಕವರ್ಗವನ್ನು ಕಂಠ್ಯವೆಂತಲೂ ಚವರ್ಗವನ್ನು ತಾಲವ್ಯವೆಂತಲೂ ಟವರ್ಗವನ್ನು ಮೂರ್ಧನ್ಯವೆಂತಲೂ ತವರ್ಗವನ್ನು ದಂತ್ಯವೆಂತಲೂ ಪವರ್ಗವನ್ನು ಓಷ್ಠ್ಯವೆಂತಲೂ ಕರೆಯಲಾಗಿದೆ. ವಾಸ್ತವವಾಗಿ ಕೇಶಿರಾಜನು ಮೊದಲಿಗೆ ‘ನಾಭಿಮೂಲದೊಳ್‌ ಕಹಳೆಯ ಪಾಂಗಿನವೊಲ್‌ ಜನಿಯಿಸುಗುಂ’ ಎನ್ನುತ್ತಾನೆ. ಹಾಗಾಗಿ ನಾಭಿ ಅಂದರೆ ಹೊಕ್ಕಳು ಎಲ್ಲ ‍ಧ್ವನಿಗಳ ಮೂಲ! ಇದು ನಿಜವೇ. ಏಕೆಂದರೆ ನಾವು ತಾಯಗರ್ಭದಲ್ಲಿದ್ದಾಗ ಹೊಕ್ಕಳಿನ ಮೂಲಕವೇ ಎಲ್ಲ ಸಂಪರ್ಕ ಹೊಂದಿದ್ದುದು. ಇದನ್ನೇ ಹೊಕ್ಕಳುಬಳ್ಳಿ ಸಂಬಂಧ ಎನ್ನುವುದು. ಭಾವನಾತ್ಮಕವಾಗಿ ಇದನ್ನು ನೋಡಿದಾಗ ಭಾಷೆಯು ಕೇವಲ ಸಂವಹನವಲ್ಲ; ಅದು ನಮ್ಮ ಭಾವಗಳ ಸೇತು ಎಂದರಿವಾಗುವುದು. ಇರಲಿ. ಇಲ್ಲಿ ಕಂಠ್ಯವೆಂದರೆ ಗಂಟಲ ಸಹಾಯದಿಂದ ಉಚ್ಚರಿತವಾಗುವ ಕವರ್ಗದ ವ್ಯಂಜನಗಳು. ಗಂಟಲಿನಿಂದ ನೇರವಾಗಿ ಯಾವ ಅಡೆತಡೆಯೂ ಇಲ್ಲದೇ ಉಚ್ಚಾರವಾಗುತ್ತವೆ. ಇನ್ನು ತಾಲವ್ಯವು ನಾಲಗೆಯ ಅಂದರೆ ಅಂಗುಳಿನ ಸಹಾಯ ಪಡೆದು ಉಚ್ಚಾರವಾಗುವ ಚವರ್ಗದ ವ್ಯಂಜನಗಳು. ಮೂರ್ಧ ಎಂದರೆ ನೆತ್ತಿಬಾಯಿ. ನಾಲಗೆಯನ್ನು ಹಿಂಬದಿಗೆ ಸುರುಟಿಕೊಂಡಾಗ ಉಚ್ಚರಿತವಾಗುವ ಟವರ್ಗದ ವ್ಯಂಜನಗಳು. ದಂತ ಎಂದರೆ ಹಲ್ಲು. ನಾಲಗೆಯ ತುದಿಯು ಮೇಲುಸಾಲಿನ ಹಲ್ಲಿಗೆ ತಾಗಿದಾಗ ಉಚ್ಚರಿತಗೊಳ್ಳುವ ತವರ್ಗದ ವ್ಯಂಜನಗಳು. ಓಷ್ಠ್ಯ ಎಂದರೆ ತುಟಿ. ತುಟಿಗಳ ಮೂಲಕ ಉಚ್ಚರಿತಗೊಳ್ಳುವ ಪವರ್ಗದ ವ್ಯಂಜನಗಳು. ಹೀಗೆ ದೇಶಭಾಷೆಯ ವರ್ಣಮಾಲೆಯು ವೈಜ್ಞಾನಿಕ ಮತ್ತು ಶಾಸ್ತ್ರೋಕ್ತ.

ಈ ಕಚಟತಪಗಳ ಒಂದೊಂದೂ ವರ್ಗವು ಏಕರೀತಿಯ ಉಚ್ಚಾರಣಾ ಸ್ಥಾನವನ್ನು ಹೊಂದಿವೆ. ವರ್ಗೀಯ ವ್ಯಂಜನಗಳು ಇಪ್ಪತ್ತೈದು. ವರ್ಗದ ಮೊದಲ ಮತ್ತು ಮೂರನೆಯ ವರ್ಣಗಳು ಅಲ್ಪಪ್ರಾಣ. ಎರಡನೆಯ ಮತ್ತು ನಾಲ್ಕನೆಯ ವರ್ಣಗಳು ಮಹಾಪ್ರಾಣ. ವರ್ಗದ ಕೊನೆಯ ಅಕ್ಷರಗಳು ಅನುನಾಸಿಕ. ಇನ್ನು ಯ್‌ ದಿಂದ ಳ್‌ ವರೆಗಿನ ಒಂದು ಚೌಕಟ್ಟಿನಲ್ಲಿ ಇಡಲು ಬಾರದಂಥ ವರ್ಣಗಳೇ ಅವರ್ಗೀಯ. ಇವು ಹುಟ್ಟುವ ಸ್ಥಾನವು ಒಂದೊಂದೂ ಒಂದೊಂದು ಬಗೆ. ನಾವು ಬಳಸುವ ಕನ್ನಡ ವರ್ಣಮಾಲೆಯಲ್ಲಿ ಸಂಸ್ಕೃತಾಕ್ಷರಗಳೂ ಇವೆ. ಅಚ್ಚಗನ್ನಡದ ಅಕ್ಷರಗಳು ಎಷ್ಟು? ಸಂಸ್ಕೃತಭಾಷೆಯ ಅಕ್ಷರಗಳು ಎಷ್ಟು? ಎಂದೆಲ್ಲಾ ವಿದ್ವಾಂಸರು ಸವಿವರವಾಗಿ ತಿಳಿಸಿದ್ದಾರೆ. ಸಂಸ್ಕೃತ ಭಾಷೆ, ವ್ಯಾಕರಣ, ಛಂದಸ್ಸು ಮತ್ತು ಅಲಂಕಾರಗಳಿಂದ ತುಂಬಿ ತುಳುಕುವ ಕನ್ನಡವು ಸಿರಿವಂತವಾಗಿದೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬ ಥಿಯರಿಯಂತೆ, ಪ್ರಾಚೀನ ಕಾಲದಲ್ಲಿ ಸಂಸ್ಕೃತವು ಕನ್ನಡಕ್ಕೆ ಕನ್ನಡಿಯೂ ಕೈದೀವಿಗೆಯೂ ಆಯಿತು. ಅದೇ ರೀತಿ ಈಗ ಆಧುನಿಕ ಕಾಲದಲ್ಲಿ ಇಂಗ್ಲಿಷ್‌ ಭಾಷೆಯ ಪ್ರಭಾವ ಪ್ರೇರಣೆಗಳಿಂದಾಗಿ ಕನ್ನಡವು ಬೆಳೆಯುತ್ತಿದೆ. ಹೀಗೆ ಭಾಷೆಯ ಸಹವಾಸದಿಂದ ಬೆಳೆಯದಿದ್ದರೆ ಆಪತ್ತು ಮತ್ತು ವಿಪತ್ತುಗಳು ಖಚಿತ. ಲೋಕದ ಬಹು ಭಾಷೆಗಳಿಂದ ಪ್ರೇರಿತಗೊಂಡು ಅವುಗಳ ಶಬ್ದಕೋಶಗಳಿಗೆ ದಾಳಿಯಿಟ್ಟು ತನ್ನದಾಗಿಸಿಕೊಂಡು ಬೆಳೆದು ವಿಶ್ವಭಾಷೆಯಾದ ಇಂಗ್ಲಿಷು ನಮ್ಮ ಕಣ್ಣಮುಂದೆಯೇ ಇದೆ. ಪ್ರವಾಹದ ವಿರುದ್ಧ ಈಜುವ ಬದಲು ಪ್ರವಾಹದೊಂದಿಗೇ ಸಾಗುವುದು ಜಾಣತನ. ಹಾಗಾಗಿ ಕನ್ನಡವು ಇಂದು ಇಂಗ್ಲಿಷನ್ನು ಬಳಸಿಕೊಂಡು ಬೆಳೆಯಬೇಕು; ಬೆಳೆಯುತ್ತಿದೆ ಕೂಡ.

ಇವೆಲ್ಲ ವ್ಯಾಕರಣ ಪುರಾಣ ಏಕಿಲ್ಲಿ ಬಂತು? ಎಂದು ನೀವಲ್ಲ, ನಾನೇ ಕೇಳಿಕೊಳ್ಳಲು ಕಾರಣವಿದೆ: ವ್ಯಂಜನವೆಂದಾಗ ವ್ಯಾಕರಣವೇ ನೆನಪಾಗುವುದು! ಆದರೆ ಕಳೆದ ವಾರ ನಮ್ಮ ಸ್ನೇಹಿತರೊಂದಿಗೆ ಮಾತಾಡುವಾಗ ‘ವ್ಯಂಜನಗಳೇ ಊಟಕ್ಕೆ ಕಳೆ; ಇಲ್ಲದಿದ್ದರೆ ಎಂಥ ಸುಗ್ರಾಸ ಭೋಜನವೂ ಸ್ವರ ಕಳೆದುಕೊಂಡು ಶುಷ್ಕವಾಗುತ್ತದೆ’ ಎಂದೆ. ಅದಕ್ಕವರು ‘ಈ ವ್ಯಂಜನ ಎಂಬ ಪದಬಳಕೆಯನ್ನು ಈ ಅರ್ಥದಲ್ಲಿ ಕೇಳಿ ಬಹಳ ವರುಷಗಳಾಗಿತ್ತು’ ಎಂದರು. ಸಂಸ್ಕೃತ ಪದಗಳ ಸಿರಿವಂತಿಕೆಯೇ ಹೀಗೆ. ಸ್ವರ ಮತ್ತು ವ್ಯಂಜನ ಎಂಬ ಪದಗಳನ್ನು ಕೇವಲ ವ್ಯಾಕರಣದಲ್ಲಿ ಮಾತ್ರವಲ್ಲ; ಬದುಕಿನ ಸಮೀಕರಣದಲ್ಲೂ ಬಳಸುತ್ತೇವೆ. ಸ್ವರವೆಂದರೆ ಪ್ರಧಾನ ಊಟ. ವ್ಯಂಜನವೆಂದರೆ ನಂಚಿಕೊಳ್ಳಲು ಇರುವ ಸಾಧಕಗಳು. ಇಂಗ್ಲಿಷಿನಲ್ಲಿ ‘ಸೈಡ್‌ ಡಿಶಸ್‌’ ಎಂದು ಕರೆದುಕೊಳ್ಳುವಂಥದೇ ವ್ಯಂಜನ. ವ್ಯಂಜಿಸು ಮತ್ತು ಭುಜಿಸು ಎಂಬ ಕ್ರಿಯಾಪದಗಳಿವೆ. ಭೋಜನವೆಂಬ ಗಾಯನಕ್ಕೆ ವ್ಯಂಜನಗಳೇ ಪಕ್ಕವಾದ್ಯಗಳು. ಎಂಥ ಹಾಡುಗಾರಿಕೆಯೇ ಇರಲಿ, ಹಿಮ್ಮೇಳ ಇಲ್ಲದಿರೆ ಸಪ್ಪೆ. ಹಿತಮಿತವಾದ ಮತ್ತು ಹದವಾದ ಹಿನ್ನೆಲೆ ಸಂಗೀತವೇ ಹಾಡಿಗೂ ಹಾಡುವವರಿಗೂ ಪ್ರೇರಣೆ ಮತ್ತು ಧಾರಣೆ. ‘ಊಟಕ್ಕಿಲ್ಲದ ಉಪ್ಪಿನಕಾಯಿ’ ಎಂಬ ಗಾದೆ ಮಾತಿನಲ್ಲಿ ನಂಚಿಕೊಳ್ಳುವ ಪದಾರ್ಥಗಳಿಗೆ ಮಾನ್ಯತೆಯನ್ನು ಕೊಡಲಾಗಿದೆ. ಈ ಗಾದೆಯು ಹಲವು ಸ್ತರದ ಅರ್ಥಗಳನ್ನು ಹುದುಗಿಸಿಟ್ಟುಕೊಂಡಿದೆ. ‘ಆಹಾರವೇ ಔಷಧ ಮತ್ತು ಆಹಾರವೇ ಸತ್ಕಾರ’ ಎಂಬ ನಮ್ಮ ಭಾರತೀಯ ಪರಂಪರೆಯಲ್ಲಿ ಊಟೋಪಚಾರಕ್ಕೆ ಸಂಬಂಧಿಸಿದ ಗಾದೆಗಳೆಲ್ಲಾ ಬದುಕಿನ ತತ್ತ್ವಜ್ಞಾನವನ್ನೇ ಸಾರುವಂಥವಾಗಿದ್ದವು. ಅಷ್ಟೇ ಏಕೆ, ‘ಸೈಲೆಂಟಾಗಿ ಸೈಡಲ್ಲಿರು’ ಅಂತಾನೋ ‘ಸೈಲೆಂಟಾಗಿ ಸೈಡ್‌ಗೆ ಹೋಗು’ ಅಂತಾನೋ ಈ ಕಾಲದ ಪೊರ್ಕಿ ಸಿನಿಮಾಗಳ ಡೈಲಾಗು ಕೇಳಿದಾಗಲೂ ನನಗೆ ಇಂಥ ಊಟದ ವ್ಯಂಜನ ಪದಾರ್ಥಗಳೇ ನೆನಪಾಗುತ್ತವೆ! ‘ಉಪ್ಪಿನಕಾಯಿ ಒಳ್ಳೆಯದಲ್ಲ, ಹತ್ತುದಿವಸಗಳಲ್ಲಿ ಸೇವಿಸಬೇಕಾದ ಉಪ್ಪನ್ನು ಒಂದೇ ದಿನ ತಿಂದಿರುತ್ತೀರಿ’ ಎಂಬ ವೈದ್ಯರ ಸಲಹೆಯನ್ನು ನಾನು ಪಾಲಿಸುವಾಗ ಹೊಟೆಲಿನಲ್ಲಿ ಊಟ ಕೊಟ್ಟಾಗ ಎದ್ದು ಕಾಣುವ ಈ ಉಪ್ಪಿನಕಾಯಿ ಎಂಬ ವ್ಯಂಜನವನ್ನು ಪಕ್ಕಕ್ಕೆ ಸರಿಸಿ, ‘ಸೈಲೆಂಟಾಗಿ ಸೈಡಲಿರಪ್ಪಾ’ ಎಂದು ನನ್ನೊಳಗನ್ನೇ ಸಾಂತ್ವನಿಸುವುದನ್ನು ಕಲಿತಿರುವೆ!

ಅದು ಗಂಜಿಯೂಟವೇ ಇರಲಿ, ತಟ್ಟೆಯ ತುದಿಗೆ ನಂಚಿಕೊಳ್ಳಲು ಏನಾದರೊಂದು ವ್ಯಂಜನವಿದ್ದರೇನೇ ಅಂದಚೆಂದ. ನನ್ನ ಬಾಲ್ಯದ ಬಹುಪಾಲು ಮೈಸೂರಿನ ಕನ್ನೇಗೌಡನ ಕೊಪ್ಪಲಿನಲ್ಲೇ. ಅಲ್ಲಿ ನಮ್ಮ ಮನೆಯ ಓನರಾಗಿದ್ದವರು ರಾತ್ರಿಯೂಟದ ಸಮಯದಲ್ಲಿ ಉಪ್ಪೆಸರು ಉಣ್ಣುತ್ತಾ, ಉಪ್ಪೆಸರು ಖಾರವನ್ನೇ ನಂಚಿಕೊಳ್ಳುತ್ತಿದ್ದರು. ನಮ್ಮಜ್ಜಿ ಮನೆಯಲ್ಲಿದ್ದಾಗ ಗಂಜಿಪಳದ್ಯ ಮಾಡಿ, ಅದಕ್ಕೆ ಒಗ್ಗರಣೆ ತೋರಿ ಹಬೆಯಾಡುವ ಅನ್ನಕೆ ಕಲೆಸಿಕೋ ಎಂದು ಹೇಳುತ್ತಲೇ ಅದಾವ ಮಾಯದಲ್ಲೋ ಒಲೆಯ ಮೇಲೆ ಬಾಣಲೆಯಿಟ್ಟು, ಉಪ್ಪಚ್ಚಿ ಮೆಣಸಿನಕಾಯಿ ಮತ್ತು ಸಂಡಿಗೆಗಳನ್ನು ಕರಿದು ಬಡಿಸುತ್ತಿದ್ದರು. ಈಗ ನೆನಪಿಸಿಕೊಂಡರೆ, ಗಂಜಿಯೂಟ ಮಾಡಿದರೂ ಹಪ್ಪಳ ಸಂಡಿಗೆ ಬಾಡಿಸಿಕೊಳ್ಳುವ ಸುಖದರಮನೆಯಲ್ಲಿದ್ದೆವಲ್ಲಾ ಎಂದು ಸೋಜಿಗವಾಗುತ್ತದೆ. ಅದರಲ್ಲೂ ಮೊಸರನ್ನದೂಟ ಮಾಡುವಾಗ ಇಂಥ ಸಾಧಕ ಬೇಕೇ ಬೇಕು. ಒಗ್ಗರಣೆಯ ಮೊಸರನ್ನವಿದ್ದರೂ ನಂಚಿಕೊಳ್ಳಲು ಪಲ್ಯವೋ ಗೊಜ್ಜೋ ಚಟ್ನಿಯೋ ಬೇಕು. ಇಲ್ಲದಿರೆ ಅದು ಸೊಗಸೆನಿಸುವುದಿಲ್ಲ. ಊಟದ ಕೊನೆಗೆ ಮೊಸರನ್ನ ಇಲ್ಲದಿದ್ದರೆ ಭೋಜನ ಕಾರ್ಯ ಪೂರ್ಣಗೊಂಡಂತೆಯೇ ಆಗುವುದಿಲ್ಲ. ‘ಈ ರಾತ್ರಿ ಹಸಿವಿಲ್ಲ, ಊಟ ಬೇಡ’ ಎಂದಾಗ ಮನೆಯ ಹಿರಿಯರು, ‘ಹಸಿದುಕೊಂಡು ಮಲಗಬಾರದು, ಒಂದು ತುತ್ತು ಮೊಸರನ್ನವನ್ನಾದರೂ ತಿಂದು ಮಲಗು’ ಎಂದೇ ಬೋಧನೆ ಮಾಡಿ, ತಿನ್ನಿಸದೇ ಬಿಡುತ್ತಿರಲಿಲ್ಲ. ಹಳಗನ್ನಡದ ಅಪ್ರತಿಮ ವೈಯಾಕರಣಿಯಾದ ಕೇಶಿರಾಜನು ತನ್ನ ಶಬ್ದಮಣಿದರ್ಪಣದ ಸಂಧಿ ಪ್ರಕರಣದಲ್ಲಿ ಯಕಾರಾಗಮ ಮತ್ತು ವಕಾರಾಗಮ ಸಂಧಿಗಳನ್ನು ಪ್ರಸ್ತಾಪಿಸಿ, ಕನ್ನಡದಲ್ಲಿ ಯಕಾರಾಗಮ ಮತ್ತು ವಕಾರಾಗಮಗಳು ವಿಕಲ್ಪ; ಆದರೆ ಸಂಸ್ಕೃತ ಭಾಷೆಯಲ್ಲಿ ಯತ್ವವತ್ವಗಳು ನಿಯತ ಎಂದು ಸೂತ್ರಿಸಿ, ಉದಾಹರಣೆಗಳನ್ನು ಕೊಡುವಾಗ ತನ್ನ ಹಿಂದಣ ಕವಿಗಳ ಪದ್ಯವೊಂದನ್ನು ಕೊಡುತ್ತಾನೆ. ಅದು ಹೀಗಿದೆ: ‘ವಿಧುವಿಲ್ಲದಿರುಳ್‌, ತನ್ನಯ ವಧುವಿಲ್ಲದ ಲೀಲೆ, ಮಧುರ ಮಧುವಿಲ್ಲದ ಪೂ, ಬುಧರಿಲ್ಲದ ಸಭೆ, ದಧಿಯಿಲ್ಲದುಣಿಸದೇವುದೋ ಸರಸ್ವತೀಮುಖತಿಲಕಾ’ ಅಂದರೆ ಮೊಸರಿಲ್ಲದೂಟವು ರುಚಿಸದು. ಚಂದ್ರನಿಲ್ಲದ ರಾತ್ರಿಯಂತೆ, ಪ್ರಿಯಕರಳಲ್ಲದ ಹೆಣ್ಣಿನೊಂದಿಗಿನ ಬೇಟದಂತೆ, ಸುವಾಸನೆಯಿಲ್ಲದ ಹೂವಿನಂತೆ, ಪಂಡಿತರಿಲ್ಲದ ಸಭೆಯಂತೆ ಎಂಬುದು ಇದನ್ನು ಬರೆದ ಕವಿಯ ಅಂತರಾಳ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೇಳಬಹುದಾದದ್ದೇನೆಂದರೆ, ವ್ಯಂಜನವಿಲ್ಲದ ಮೊಸರನ್ನದೂಟ ಕೂಡ ಶೋಭಿಸುವುದಿಲ್ಲ! ಅದರಲ್ಲೂ ವ್ಯಂಜನಗಳೇ ಊಟಕ್ಕೆ ಭೂಷಣ. ಬಾಳೆಲೆಯ ಎರಡು ಭಾಗಗಳಲ್ಲಿ ಮೇಲಿನ ಒಂದು ಭಾಗ ಇರುವುದೇ ಈ ವ್ಯಂಜನಗಳನ್ನು ಬಡಿಸಲು ಮತ್ತು ಹದವರಿತು ತಿನ್ನಲು! ಬಾಳೆಲೆಯ ಎರಡು ಭಾಗಗಳನ್ನು ಗಮನಿಸಿ, ವ್ಯಂಜನ ತಯಾರಿಸುವುದನ್ನು ಕಲಿತರೋ, ವ್ಯಂಜನಗಳನ್ನು ಬಡಿಸಲೆಂದೇ ಬಾಳೆಗಿಡವು ಹೀಗೆ ಇಂಥ ವಿನ್ಯಾಸದಲ್ಲಿ ಎಲೆಗಳನ್ನು ಬಿಡುತ್ತದೆಯೋ ಭಗವಂತನನ್ನೇ ಕೇಳಬೇಕು. ಬಾಳೆಲೆಯ ಊಟವೆಂದರೆ ಅದಕ್ಕೊಂದು ಘನಗಾಂಭೀರ್ಯ ಪ್ರಾಪ್ತ. ಬರೀ ಒಂದು ಅನ್ನಸಾರು ತಿಂದರೆ ಅದು ಬಾಳೆಲೆಗೆ ಮಾಡುವ ಅವಮರ್ಯಾದೆ. ಸಭೆ ಸಮಾರಂಭಗಳಲ್ಲಿ ಅದು ಶುಭವೇ ಇರಲಿ, ಅಶುಭವೇ ಇರಲಿ. ಬಾಳೆಲೆಯ ಊಟ ಹಾಕಿದರೆಂದರೆ ಅಂಥ ಅನ್ನದಾತರು ಘನವಂತರು. ಫಂಕ್ಷನ್ನು ಸಾರ್ಥಕವಾಗಬೇಕಾದರೆ ಬಾಳೆಲೆಯ ಊಟವೇ ಆಗಬೇಕು. ಅದರಲ್ಲೂ ಬಾಳೆಲೆಯ ಅಗ್ರದ ತುದಿ ನಮ್ಮ ಎಡಗಡೆಗೆ ಬರಬೇಕೆಂಬುದು ಅಲಿಖಿತ ನಿಯಮ. ಒಮ್ಮೆ ನಾನು ಊಟಕ್ಕೆ ಕುಳಿತಾಗ ನನ್ನ ಪಕ್ಕದವರ ಬಾಳೆಲೆಯ ಅಗ್ರದ ತುದಿ ಬಲಕ್ಕಿತ್ತು. ಹೇಗೆ ಹಾಕಿದರೋ ಹಾಗೆಯೇ ನೀರು ಚಿಮುಕಿಸಿಕೊಂಡು ಬಡಿಸುವುದನ್ನೇ ನಿರೀಕ್ಷಿಸುತ್ತಾ ಇದ್ದರು. ನಾನು ‘ಎಲೆ ಸರಿ ಮಾಡಿಕೊಳ್ಳಿ’ ಎಂದು ಸರಿಸಿದೆ. ‘ಹೀಗೆಯೇ ಇರಬೇಕೆಂಬುದು ನಿಯಮವಾ?’ ಎಂದರು. ‍ಹೌದು ಎಂದು ಅದರ ಹಿನ್ನೆಲೆ ವಿವರಿಸಿದೆ. ಬಾಳೆಲೆಯ ಚಿಕ್ಕದಾದ ಭಾಗವು ಊಟ ಮಾಡುವವರ ಎಡಭಾಗಕ್ಕೂ ಎಲೆಯ ದೊಡ್ಡದಾದ ಭಾಗವು ಬಲಗಡೆಗೂ ಬರಬೇಕು.  ಏಕೆಂದರೆ ನಾವು ಬಲಗೈಯಲ್ಲಿ ಉಣ್ಣುವುದು. ತಿನ್ನಲು ಸುಲಭವಾಗಲು ಬಲಭಾಗದ ಸ್ಪೇಸು ಹೆಚ್ಚಿರಬೇಕು. ಹಾಗೆಯೇ ಬಡಿಸುವಾಗಿನ ರೀತಿರಿವಾಜು ಸಹ ಒಂದು ತರ್ಕವನ್ನು ಹೊಂದಿದೆ. ಅದರಲ್ಲೂ ಉಪ್ಪು, ಉಪ್ಪಿನಕಾಯಿ, ಪಲ್ಯ, ಗೊಜ್ಜು, ಚಟ್ನಿ, ರಾಯ್ತಾ ಮೊದಲಾದ ವ್ಯಂಜನಗಳು ಬಾಳೆಲೆಯ ಮೇಲ್ಭಾಗಕ್ಕೆ ಬಡಿಸುವರು. ಉಪ್ಪು ಉಪ್ಪಿನಕಾಯಿಗಳು ಬಾಳೆಲೆಯ ಮೇಲ್ಭಾಗದ ಎಡತುದಿಯಲ್ಲೇ ಏಕಿರಬೇಕೆಂದರೆ ಅದನ್ನು ಬಳಸುವುದು ಅಪರೂಪ. ಹೀಗೆ ಬಾಳೆಲೆಯ ಸ್ಪೇಸನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಮ್ಮ ಹಿಂದಿನವರು ಇಂಥದೊಂದು ಪದ್ಧತಿಯನ್ನು ಅನುಸರಿಸುತ್ತಾ ಬಂದಿದ್ದರು. ಓರ್ವ ಡಯಟೀಷಿಯನ್ನು ಮಾತಾಡುತ್ತಾ, ಬಾಳೆಲೆಯ ಮೇಲ್ಭಾಗದಲ್ಲಿ ಬಡಿಸುವ ವ್ಯಂಜನಗಳೆಲ್ಲಾ ದೇಹಕ್ಕೆ ಅಗತ್ಯವಾಗಿ ಬೇಕಾದಂಥ ಪೋಷಕಾಂಶಗಳು. ಬಾಳೆಲೆಯ ಕೆಳಭಾಗದಲ್ಲಿ ಬಡಿಸುವಂಥ ಮೆನುಗಳೆಲ್ಲಾ ಭೋಗಪ್ರಧಾನವಾದವು ಎಂದಿದ್ದು ನನಗೆ ನೆನಪು. ದಕ್ಷಿಣ ಭಾರತದ ಊಟೋಪಚಾರದಲ್ಲಿ ಎಲ್ಲ ಬಗೆಯ ತರಕಾರಿ ಮತ್ತು ಕಾಳುಗಳಿಂದ ಕೂಡಿದ ವ್ಯಂಜನಗಳದೇ ಕಾರುಬಾರು. ಇದರಲ್ಲಿ ಹಸಿಯೂ ಬಿಸಿಯೂ ಬೆರೆತು ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತವೆ. ಸಾರು, ಹುಳಿ, ಮಜ್ಜಿಗೆಪಳದ್ಯ, ಕೂಟು, ಚಿತ್ರಾನ್ನ, ಕಲಸನ್ನಗಳೇ ಮುಂತಾದುವನ್ನು ತಿನ್ನುವಾಗ ಆಗಿಂದಾಗ್ಗ್ಯೆ ಇಂಥ ಮೇಲೋಗರಗಳನ್ನು ನಂಚಿಕೊಳ್ಳುವುದು ಊಟದ ಸರಿಯಾದ ಕ್ರಮ. ಯಾರಿಗೋ ಪಲ್ಯ ಇಷ್ಟವಾಗಬಹುದು, ಇನ್ನಾರಿಗೋ ಗೊಜ್ಜು, ಮತ್ತೊಬ್ಬರಿಗೆ ಕೋಸಂಬರಿ, ಕಲಸನ್ನಕ್ಕೆ ಬಾಡಿಸಿಕೊಳ್ಳಲು ಚಟ್ನಿ ಬೇಕಿತ್ತೆಂದು ಒಬ್ಬರ ಅಳಲು, ಇನ್ನೊಬ್ಬರಿಗೂ ಚಟ್ನಿ ಬೇಕು, ಅದು ಉದ್ದಿನವಡೆಗೆ ನಂಚಿಕೊಳ್ಳಲು! ಪಾಯಸವು ತುಂಬ ಸಿಹಿಯಾಯಿತೆಂದು ಒಬ್ಬರು ಮಜ್ಜಿಗೆ ಮೆಣಸಿನಕಾಯಿ ತುಣುಕನ್ನು ಮಿಶ್ರಿಸಿ ಸವಿಯತೊಡಗಿದರು. ಪಕ್ಕದಲೇ ಇದ್ದ ನನಗೆ ಅದನ್ನು ನೋಡಲಾಗಲಿಲ್ಲ! ಒಂದು ಶ್ರಾದ್ಧದೂಟದಲ್ಲಿ ನಮ್ಮ ಸಂಬಂಧಿಕರೇ ಉದ್ದಿನ ವಡೆಯನ್ನು ಪಾಯಸಕ್ಕೆ ಮುರಿದು ಹಾಕಿಕೊಂಡರು. ಊಟ ನಿದ್ದೆ ಪಾಠ ಮಾಡಿದ ಹಾಗೆ ಎಂಬ ಗಾದೆ ಗೊತ್ತಿದ್ದರೂ ಅದೇಕೋ ಒಂಥರಾ ಆಯಿತು. ಇರಲಿ. ಮೇಲೋಗರ, ಸಾಧಕ, ಮೇಲ್ತುದಿ, ಬಾಡಿಸಿಕೊಳ್ಳುವುದು, ನಂಚಿಕೊಳ್ಳುವುದು ಎಂದು ಹೇಗಾದರೂ ಕರೆಯಲಿ, ನನಗಂತೂ ವ್ಯಂಜನ ಎಂಬ ಪದವೇ ಹೆಚ್ಚು ಇಷ್ಟ. ಇದು ತರುವ ಮತ್ತು ಕೊಡುವ ಘನತೆಯೇ ಬೇರೆ. ಬಾಡಿಸಿಕೊಳ್ಳುವುದು ಮತ್ತು ನಂಚಿಕೊಳ್ಳುವುದು ಎಂಬೆರಡು ಕ್ರಿಯಾಪದಗಳನ್ನು ಬಳಸುವ ಜನರ ಹಿನ್ನೆಲೆ ಬೇರೆ. ನಂಚಿಕೊಳ್ಳುವುದು ಎನ್ನಬೇಡ, ಅದು ನಮ್ಮ ಭಾಷೆಯಲ್ಲ ಎನ್ನುತ್ತಿದ್ದರು ನಮ್ಮಜ್ಜಿ. ಅಂದರೆ ಬಾಡಿಸಿಕೊಳ್ಳುವುದು ಎನ್ನಬೇಕಿತ್ತಂತೆ. ನನಗೇಕೋ ಈ ಪದ ಸರಿ ಬರುತ್ತಿರಲಿಲ್ಲ. ಏಕೆಂದು ತಿಳಿಯುತ್ತಿರಲಿಲ್ಲ. ಪದವಿಯೋದುವಾಗ ವ್ಯಾಕರಣ ಬಂತು. ‘ಬಾಡಿಸು’ ಎಂಬ ಕ್ರಿಯಾಪದಕ್ಕೆ ಬೇರೆ ಬೇರೆ ಅರ್ಥಗಳಿದ್ದುದನ್ನು ಮನಗಂಡೆ. ಬಾಡು ಎಂಬುದು ನಾಮಪದವಾದರೆ ಮಾಂಸ ಎಂದರ್ಥ. ಅದೇ ಕ್ರಿಯಾಪದವಾದರೆ ಒಣಗು ಎಂದು. ಹೂವು ಬಾಡಿತು ಎಂದು ಬಳಕೆಯಲ್ಲಿದೆ. ಈ ಕ್ರಿಯಾಪದಕ್ಕೆ ಇಸು ಪ್ರತ್ಯಯ ಸೇರಿಸಿದಾಗ ಬಾಡಿಸು ಎಂದರೆ ಹುರಿಯುವುದು ಎಂದರ್ಥ ಬರುತ್ತದೆ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿಯೂ ಹುರಿಯುತ್ತೇವೆ; ಎಣ್ಣೆ ಹಾಕದೆಯೂ ಕೆಲವೊಂದನ್ನು ಹುರಿಯುತ್ತೇವೆ. ಇದು ಹೇಗೆ ನಂಚಿಕೊಳ್ಳುವುದಕ್ಕೆ ಪರ್ಯಾಯವಾದೀತು? ಎಂದು ನಾನು ಯೋಚಿಸಿದ್ದೆ. ಅಂತೂ ವ್ಯಂಜನವಿಲ್ಲದ ಊಟೋಪಚಾರವು ಬಾಡುತ್ತದೆ ಎಂಬುದಂತೂ ಖಚಿತ. ಕಲಸನ್ನಗಳನ್ನು ಸೇವಿಸುವಾಗಲೂ ಉಪ್ಪಿಟ್ಟು ಮೊದಲಾದ ಸಾಲಿಡ್‌ ಉಪಾಹಾರಗಳನ್ನು ತಿನ್ನುವಾಗಲೂ ಅವುಗಳ ರುಚಿ ಕಡಮೆಯಿದೆ ಎಂಬ ಕಾರಣಕ್ಕೆ ಈ ವ್ಯಂಜನಗಳನ್ನು ಇಷ್ಟಪಡುವವರಿದ್ದಾರೆ. ಕೆಲವರಿಗೆ ಖಾರಸೇವಿಗೆ, ಉಪ್ಪೇರಿ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಮದ್ದೂರುವಡೆ ಮೊದಲಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ನಂಚಿಕೊಳ್ಳುವ ಅಭ್ಯಾಸವಿದೆ. ನನ್ನ ಹಿರಿಯ ಸ್ನೇಹಿತರೊಬ್ಬರು ಮಾತ್ರ ಈ ನಂಚಿಕೊಳ್ಳುವುದಕ್ಕೆ ಕಡುವಿರೋಧಿ. ಅವರ ತತ್ತ್ವಜ್ಞಾನವೇ ಬೇರೆ. ತಾಜಾ ಅವರೆಕಾಳು ತಂದು ಉಪ್ಪಿಟ್ಟು ಮಾಡಿ ತಿನ್ನುವಾಗ ಬಾಡಿಸಿಕೊಳ್ಳಲು ಇಂಥ ಐಟಂಗಳನ್ನು ಅವರಿಗೆ ಬಡಿಸಲು ಬಂದರೆ ಬಿಲ್‌ಕುಲ್‌ ನಿರಾಕರಿಸಿದರು. ‘ಇಂಥ ಅದ್ಭುತವಾದ ಉಪ್ಪಿಟ್ಟು ಇರುವಾಗ ಮೇಲೋಗರ ಏನೂ ಬೇಡ. ಒಂದು ಪಕ್ಷ ಹಾಗೆ ಹಾಕಿಸಿಕೊಂಡರೆ ಅದು ಉಪ್ಪಿಟ್ಟಿಗೆ ಮಾಡುವ ಅವಮಾನವೇ ಸರಿ’ ಎಂದುಬಿಟ್ಟರು. ವ್ಯಂಜನಗಳನ್ನು ಅವರು ಹೀಗೆ ಹೀಗಳೆದುಬಿಟ್ಟರಲ್ಲಾ ಎಂದು ನಾನು ಚಕಿತನಾದೆ. ಆಗವರು ಇನ್ನೊಂದು ವಿವರಣೆ ಕೊಟ್ಟರು. ‘ಸಹಜ ಸುಂದರಿಯಾದ ಹೆಣ್ಣಿಗೇಕೆ ಒಡವೆ? ಅವಳ ಚೆಲುವಾದ ಸಿಂಗರವೇ ಶಾಶ್ವತವಾದ ಒಡವೆಯಲ್ಲವೇ?’ ಎಂದರು. ಆಗ ಬೇಂದ್ರೆಯವರ ‘ನಿರಾಭರಣ ಸುಂದರಿ’ ಎಂಬ ಕಥಾ ಸಂಕಲನ ನೆನಪಾಗಿ ಹೇಳಿದೆ. ಆದರೆ ಕಾಳಿದಾಸನ ಸಮಕಾಲೀನನಾಗಿದ್ದ ಭಾಮಹನೆಂಬ ಆಲಂಕಾರಿಕನು ತನ್ನ ಕಾವ್ಯಾಲಂಕಾರ ಎಂಬ ಕೃತಿಯಲ್ಲಿ ‘ನ ಕಾಂತಮಪಿ ನಿರ್ಭೂಷಂ ವಿಭಾತಿ ವನಿತಾಮುಖಂ’ ಎಂದಿದ್ದಾನೆ. ಇದರರ್ಥ: ಎಂಥ ಸುಂದರಿಯಾದರೂ ಒಡವೆಗಳಿಲ್ಲದಿದ್ದರೆ ಹೆಣ್ಣಿನ ಮುಖವು ಶೋಭಿಸುವುದಿಲ್ಲ ಎಂದು. ಹಾಗಾಗಿ ಕಾವ್ಯಕ್ಕೆ ಅಲಂಕಾರಗಳು ಬಹುಮುಖ್ಯ ಎಂಬುದವನ ಪ್ರತಿಪಾದನೆ! ಇದನ್ನು ಅವರಿಗೆ ಹೇಳಿದರೆ, ‘ನಿಮ್ಮ ಮೇಷ್ಟ್ರು ಬುದ್ಧಿ ತೆಗೆಯಬೇಡಿ, ಉಪ್ಪಿಟ್ಟಿನ ರುಚಿಗೆ ಅದು ಬಡಿದು ನಿಸ್ಸಾರವಾದೀತು’ ಎಂದು ಎಲ್ಲಿ ಬಯ್ಯುವರೋ ಎಂದು ಸುಮ್ಮನಾದೆ. ಬಹಳಷ್ಟು ಸಲ ನಾವು ಕೈಯ್ಯಲ್ಲಿರುವುದನ್ನು ಆಸ್ವಾದಿಸದೇ ಬಾಯಲ್ಲಿ ಮಾತಾಡಿ ಸೊಗಸನ್ನು ಕಳೆದು ಬಿಡುತ್ತೇವೆ. ‘ಊಟ ಮಾಡುವಾಗ ಮೌನವಾಗಿರಬೇಕು; ಮಾತಾಡಬಾರದು’ ಎಂದು ನಮ್ಮ ಹಿರಿಯರು ಯಾಕೆ ಒಂದು ಅಲಿಖಿತ ನಿಯಮ ಮಾಡಿಟ್ಟು ಹೋದರೆಂದು ಇಂಥಲ್ಲಿ ತಿಳಿಯುತ್ತದೆ. ಬಾಯಲ್ಲಿ ಆಹಾರವಿರುವಾಗ ಮಾತಾಡಿದರೆ ನೆತ್ತಿ ಹತ್ತಬಹುದೆಂಬ ಭೀತಿಯೂ ಇದರ ಹಿಂದಿದೆ. ಅದರ ಜೊತೆಗೆ ಅನಗತ್ಯ ಕಮೆಂಟುಗಳಿಂದಾಗಿ ರಸಾಸ್ವಾದನೆಗೆ ತೊಡಕಾಗಬಹುದೆಂಬ ದೂರದೃಷ್ಟಿಯೂ ಇದೆ.

ಸ್ಟಾರ್ಟರ್‌ ಮತ್ತು ಮೇನ್‌ ಕೋರ್ಸ್‌ ಎಂಬ ಪದಗಳು ಊಟದಲ್ಲೂ ಬಳಕೆಯಾಗುತ್ತವೆ. ಅದರಲ್ಲೂ ನಾರ್ತ್‌ ಇಂಡಿಯನ್‌ ಡಿಶಸ್‌ ಆರ್ಡರ್‌ ಮಾಡುವಾಗ ಹೆಚ್ಚು ಪ್ರಚಲಿತ. ಒಂದಷ್ಟು ಮಂದಿ ಕೂಡಿ ಹೊಟೆಲಿಗೆ ಹೋದಾಗ ಮೊದಲಿಗೇ ಸೂಪ್‌ ಕುಡಿಯುವುದು, ಮಸಾಲಾ ಪಪ್ಪಡ್‌, ಫ್ರೆಂಚ್‌ ಫ್ರೈ ತಿನ್ನುವುದು ಸ್ಟಾರ್ಟರ್‌ಗಳು. ಇವು ಊಟಕ್ಕೆ ಮುಂಚಿನ ಬಾಯಾಡಿಸುವಿಕೆ. ತದನಂತರ ರೋಟಿ ಕರಿ ತಿನ್ನುವುದು, ಯಾವುದಾದರೂ ರೈಸ್‌ ಐಟಂ ಆರ್ಡರ್‌ ಮಾಡುವುದು ಮೇನ್‌ ಕೋರ್ಸ್‌. ಆಮೇಲೊಂದಿದೆ. ಅದು ಊಟದ ಮುಕ್ತಾಯ. ಜ್ಯೂಸ್‌, ಐಸ್‌ಕ್ರೀಂ, ಬಾಳೆಹಣ್ಣು ಬೀಡಾ ಇತ್ಯಾದಿ. ಇದು ಸುಗ್ರಾಸ ಭೋಜನ. ಇಂಥ ಊಟದಲ್ಲಿ ಸ್ವರವೂ ವ್ಯಂಜನವೂ ಯೋಗವಾಹಗಳೇ ಮುಂತಾದ ವರ್ಣಮಾಲೆಯ ಎಲ್ಲವೂ ಬಂದು ಹೋಗಿ ಬಿಡುತ್ತವೆ. ಅವರವರ ಭಾವಕ್ಕೆ ಎನ್ನುವಂತೆ, ಅವರವರ ಟೇಸ್ಟಿಗೆ ಇದು ಬದಲಾಗುತ್ತಲೂ ಹೋಗುತ್ತವೆ. ಹಲವು ವಿಧದ ರೋಟಿಗಳು, ಹಾಗೆಯೇ ಅವುಗಳಿಗೆ ಸಾಧಕವಾಗುವ ಹಲವು ವಿಧದ ಕರಿಗಳು ಸುಪ್ರಸಿದ್ಧ! ಇಂಥಲ್ಲಿ ಬರೀ ಇಂಡಿಯನ್‌ ಮಾತ್ರವಲ್ಲ, ಚೈನೀಸ್‌ ಫುಡ್‌ ಸಹ ಇಣುಕುತ್ತವೆ. ರೋಟಿ ಕರಿ ಸೇವಿಸುವಾಗ ಥರಾವರೀ ಹಸಿ ತರಕಾರಿಗಳ ತುಂಡುಗಳನ್ನು ಈರುಳ್ಳಿ ಟೊಮ್ಯಾಟೊ ಮತ್ತು ನಿಂಬೆಹಣ್ಣಿನ ಚೂರುಗಳನ್ನು ಸಹಿತ ತಂದಿಡುತ್ತಾರೆ. ಇದನ್ನು ಸಹ ವ್ಯಂಜನದ ವಿಭಾಗಕ್ಕೇ ಸೇರಿಸಬಹುದು. ಇನ್ನು ವಿಪರೀತ ದೊಡ್ಡ ಹೊಟೆಲಿನಲ್ಲಿ ಯಾರೂ ಬಂದು ಕೇಳುವುದೂ ಇಲ್ಲ; ನಾವು ಹೇಳುವುದೂ ಇಲ್ಲ! ಬಫೆ ವ್ಯವಸ್ಥೆ. ಎಲ್ಲವೂ ತೆರೆದ ಬಟ್ಟಲು, ಬೌಲುಗಳಲ್ಲಿ ಖುಲ್ಲಾಂ ಖುಲ್ಲ. ಒಂದು ಭಾಗದಲ್ಲಿ ವೆಜ್ಜೂ ಇನ್ನೊಂದು ಭಾಗದಲ್ಲಿ ನಾನ್‌ವೆಜ್ಜೂ ಸಾಲಾಗಿ ಜೋಡಿಸಲ್ಪಟ್ಟಿರುತ್ತವೆ. ಶಾಪಿಂಗ್‌ ಮಾಲು, ಸೂಪರ್‌ ಬಜಾರುಗಳಲ್ಲಿ ನಮಗೆ ಬೇಕಾದುದನ್ನು ಬುಟ್ಟಿಗೆ ತುಂಬಿಕೊಂಡು ಹೋಗುವ ತೆರದಲ್ಲಿ ತಟ್ಟೆ ಹಿಡಿದುಕೊಂಡು, ಬೇಕಿದ್ದನ್ನು ಹಾಕಿಕೊಂಡು ಹೋಗಿ ಕುಳಿತು ತಿನ್ನುವುದು. ಭಿಕ್ಷಾಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಂಡು ‘ಅಮ್ಮಾ ತಾಯಿ, ಕವಳಾ ತಾಯಿ’ ಎಂದು ಕೂಗಿ ಕನಿಕರ ಮೂಡಿಸಿ, ಹಾಕಿಸಿಕೊಳ್ಳುವುದಕ್ಕೂ ಇದಕ್ಕೂ ಏನೂ ವ್ಯತ್ಯಾಸವಿಲ್ಲ! ಅಲ್ಲಿ ಕೂಗಬೇಕು. ಇಲ್ಲಿ ಅದು ಇರುವುದಿಲ್ಲ ಅಷ್ಟೇ! ಇಂಥಲ್ಲಿ ವ್ಯಂಜನಗಳು ಅಪಾರ. ಸ್ಟಾರ್ಟರ್‌ ಯಾವುದು? ಮೇನ್‌ ಕೋರ್ಸ್‌ ಯಾವುದು? ಎಲ್ಲವೂ ಗೊಂದಲ ಮತ್ತು ಕಲಸು ಮೇಲೋಗರ! ಫಂಕ್ಷನ್ನುಗಳಲ್ಲಿ ಮಧ್ಯಾಹ್ನದ ಊಟ ಮಾಡುವ ದರ್ಶಿನಿಗಳಂತೆ. ಸಾಲಾಗಿ ನಿಂತು ತಟ್ಟೆ ಕೈಯಲ್ಲಿ ಹಿಡಿದುಕೊಂಡು ಪಲ್ಯ, ಪೂರಿ, ಕರಿ, ಅನ್ನ, ಸಾರು, ಬೋಂಡ, ಸ್ವೀಟು, ಹಪ್ಪಳ ಎಲ್ಲವನ್ನೂ ಒಂದೇ ಸಲಕ್ಕೆ ಹಾಕಿಸಿಕೊಂಡು ಹೋಗಿ ನಿಂತು ತಿನ್ನುವಾಗ ಎಲ್ಲವೂ ಬೆರೆತು ಹೋಗುತ್ತವೆ. ಇದೇ ಕಲಸು ಮೇಲೋಗರ. ಏನಾದರೊಂದು ಗೊಂದಲವನ್ನು ಕುರಿತು ಮಾತಾಡುವಾಗ ನಾವು ಕಲಸು ಮೇಲೋಗರ ಎಂಬ ಶಬ್ದಪುಂಜವನ್ನು ಬಳಕೆ ಮಾಡುತ್ತೇವೆ. ನಕಾರಾತ್ಮಕ ಅರ್ಥವನ್ನೇ ಇದು ಪಡೆದು ಬಿಟ್ಟಿದೆ. ಎಲ್ಲವೂ ಮಿಶ್ರಣಗೊಂಡು ಆದ ಅನಾಹುತ ಎಂದರ್ಥದಲ್ಲಿ. ಮೇಲೋಗರಕ್ಕೂ ವ್ಯಂಜನಪದಾರ್ಥಗಳಿಗೂ ಸ್ವಲ್ಪ ವ್ಯತ್ಯಾಸವಿದೆ. ನನ್ನದೊಂದು ಅಪರೂಪದ ಹ್ಯಾಬಿಟ್ಟೊಂದರ ಮೂಲಕ ಇದನ್ನು ಸ್ಪಷ್ಟಪಡಿಸುವೆ. ಸಾರನ್ನ ಅಥವಾ ತರಕಾರಿ ಸಾಂಬಾರುಗಳ ರುಚಿ ಕಡಮೆ ಎಂದು ಅನಿಸಿದರೆ ಎಲೆಯ ಮೇಲ್ತುದಿಯಲ್ಲಿ ಇರುವ ಪಲ್ಯವನ್ನೋ ಕೋಸಂಬರಿಯನ್ನೋ ನಂಚಿಕೊಳ್ಳುವ ಬದಲು ಸಾರನ್ನಕ್ಕೇ ಸೇರಿಸಿಕೊಂಡು ಕಲೆಸಿ ತಿನ್ನುವುದು! ಇದು ಮೇಲೋಗರ. ಅದು ಬಿಟ್ಟು ಸಾರನ್ನ ಅಥವಾ ಹುಳಿಯನ್ನ ತಿನ್ನುವಾಗ ಆಗಾಗ್ಗ್ಯೆ ಸ್ವಲ್ಪ ಪಲ್ಯವನ್ನೋ ಗೊಜ್ಜನ್ನೋ ಕೋಸಂಬರಿಯನ್ನೋ ಬಾಡಿಸಿಕೊಂಡರೆ ಅದು ವ್ಯಂಜನ. ಎಲ್ಲವೂ ಒಂದೇ ಬಾಯಿಂದ ಒಂದೇ ಹೊಟ್ಟೆಗೆ ಹೋಗುವಂಥವಾದರೂ ಕೆಲವರು ಇಂಥ ಮೇಲೋಗರ ಮಾಡಿಕೊಳ್ಳುವ ಪರಿಯನ್ನು ಇಷ್ಟಪಡುವುದಿಲ್ಲ. ಹತ್ತಾರು ದೇಶ ಸುತ್ತಿ, ಅಲ್ಲಿಯ ಆಹಾರವನ್ನೆಲ್ಲಾ ತಿಂದು ಜೀರ್ಣಿಸಿಕೊಂಡಿದ್ದ ನನ್ನ ಬಂಧುಗಳ ಮಗಳೊಬ್ಬಳು ಈ ವಿಚಾರದಲ್ಲಿ ವಿಪರೀತ ಬೂಚಿ ಬೂಚಿ ಆಡುವುದನ್ನು ಕಂಡಿದ್ದೆ. ಆ ಹುಡುಗಿಗೆ ಯಾವುದೂ ಬೆರೆಯಬಾರದು! ಆಕೆಯು ಬಾಳೆಲೆಯ ಊಟವನ್ನು ಇಷ್ಟಪಡುತ್ತಿರಲಿಲ್ಲ. ತಟ್ಟೆಯೇ ಬೇಕು; ಒಂದೆರಡು ಐಟಂ ಮಾತ್ರ ಹಾಕಬೇಕು. ಬಡಿಸುವಾಗ ಪಲ್ಯದ ಪಕ್ಕ ಗೊಜ್ಜು ಹಾಕಿದರೆ ಅದು ಮಿಕ್ಸಾಗಬಾರದು. ಹರಳೆಣ್ಣೆ ಕುಡಿದವರಂತೆ ಮುಖ ಮಾಡಿಕೊಳ್ಳುತ್ತಿದ್ದಳು. ಊಟ ಮಾಡುವಾಗ ಮಧ್ಯೆ ಮಧ್ಯೆ ನಾವು ಪಾಯಸವನ್ನು ಸವಿದರೆ ಥೂ, ಅಸಹ್ಯ ಎನ್ನುತ್ತಿದ್ದಳು. ಪುಳಿಯೋಗರೆ ಅಥವಾ ಚಿತ್ರಾನ್ನ ತಿನ್ನುವಾಗ ರವೆವುಂಡೆ ಅಥವಾ ಮೈಸೂರು ಪಾಕು ಇಂಥವುಗಳನ್ನು ಒಂಚೂರು ಬಾಯಿಗೆ ಹಾಕಿಕೊಂಡರೆ ಅಯ್ಯಯ್ಯೋ ಎಂದು ಕೂಗಿ ಬಿಡುತ್ತಿದ್ದಳು. ಅವಳಿಗದು ನೋಡಲೇ ಹಿಂಸೆಯಾಗುತ್ತದಂತೆ. ‘ನೋಡಬೇಡ, ನಿನ್ನ ಪಾಡಿಗೆ ನಿನಗೆ ಸರಿ ಹೊಂದುವಂತೆ ಊಟ ಮಾಡು’ ಎಂದು ಸುಮ್ಮನಾದೆ. ಇನ್ನೊಬ್ಬರು ನನ್ನ ತಾಯಿ ಕಡೆಯ ದೂರದ ಬಂಧುಗಳ ವಿಚಾರ. ಅವರಂತೂ ಅತಿ ಎನಿಸುವಷ್ಟು ಮೇಲೋಗರ ಪ್ರಿಯ. ಬಾಳೆಲೆಗೆ ಬಡಿಸಿದ್ದ ಅಷ್ಟೂ ಪದಾರ್ಥಗಳನ್ನು ಒಟ್ಟಿಗೆ ಬೆರೆಸಿಕೊಂಡು, ನೋಡುವವರಿಗೆ ಅಸಹ್ಯ ಎನಿಸುವಂತೆ ಕಲೆಸಿಕೊಂಡು ಉಂಡೆ ಮಾಡಿ, ಗುಳಕ್ಕನೆ ನುಂಗಿ ಎದ್ದು ಹೋಗುತ್ತಿದ್ದರು. ಎಲ್ಲವೂ ಹೊಟ್ಟೆಗೆ ತಾನೇ ಹೋಗುವುದು ಎಂದುಕೊಂಡು ಹೀಗೆ ಕಲಸು ಮೇಲೋಗರ ಮಾಡಿ ತಿಂದರೆ ಅದಾವ ದೇವರು ತೃಪ್ತಿಪಟ್ಟಾನು? ಈ ಮನುಷ್ಯನಿಗೆ ರುಚಿಯಭಿರುಚಿ, ಆಸ್ವಾದನ, ಅಚ್ಚುಕಟ್ಟು ಎಂಬುದೇ ಇಲ್ಲವಲ್ಲಾ! ಎಂದುಕೊಳ್ಳುತ್ತಿದ್ದೆ. ತೀರಾ ಎಲೆಯ ಮೇಲ್ತುದಿಯಲ್ಲಿ ಹಾಕಿದ ಎಲ್ಲವನೂ ಕೆಳತುದಿಯಲ್ಲಿ ಹಾಕಿದ ಅನ್ನಸಾರು ಚಿತ್ರಾನ್ನಕೆ ಸಾದಾಸೀದಾ ಬೆರೆಸಿಕೊಂಡು ಉಂಡೆ ಕಟ್ಟಿಕೊಳ್ಳುವುದೆಂದರೇನು? ಇಂಥ ಮನುಷ್ಯನ ಉಳಿದ ಚಟುವಟಿಕೆಗಳು ಹೇಗಿರುತ್ತವೆ? ಎಂದು ನಾನು ಆ ಕಾಲಕ್ಕೇ ಯೋಚಿಸುತ್ತಿದ್ದೆ. ಸಂದರ್ಭ ಸಿಕ್ಕಾಗಲೆಲ್ಲಾ ವಾಚಾಮಗೋಚರ ಬಯ್ಯುತ್ತಿದ್ದ ನಮ್ಮಜ್ಜಿಗೆ ಇದನ್ನು ಹೇಳಿದಾಗ ಅವರು, ‘ಬಾಳೆಲೆ ಯಾಕೆ ಬಿಡ್ತಾನಂತೆ? ಅದನ್ನೂ ಒಟ್ಟಿಗೆ ಸೇರಿಸಿ ತಿನ್ನೋದಕ್ಕೆ ಹೇಳು; ಪಶುಸದೃಶ ಪಿಶಾಚಿ’ ಎಂದು ರೇಗಿದ್ದರು. ಒಟ್ಟಿನಲ್ಲಿ ಊಟ ತನ್ನಿಚ್ಛೆ; ನೋಟ ಪರರಿಚ್ಛೆ ಎಂದುಕೊಂಡರೂ ಹೀಗೆ ಸಮಾ ಎಲ್ಲವನೂ ಬೆರೆಸಿ ತಿನ್ನುವುದು ಅಸಹ್ಯ ಮಾತ್ರವಲ್ಲ; ಅನಾಗರಿಕ ಕೂಡ. ಇದನ್ನು ಆ ವಿಕ್ಷಿಪ್ತ ವ್ಯಕ್ತಿಯು ತನ್ನ ವಿಶೇಷ ಶೈಲಿ ಎಂದುಕೊಂಡು, ಹೋದ ಬಂದ ಕಡೆಯಲ್ಲೆಲ್ಲಾ ಪ್ರದರ್ಶನ ಮಾಡುವುದನ್ನೇ ರೂಢಿಯಾಗಿಸಿಕೊಂಡಿದ್ದನು. ಈಗಾತ ಬದುಕಿದ್ದಿದ್ದರೆ ಯಾವುದಾದರೂ ಸಂಘ ಸಂಸ್ಥೆಗಳು ಆತನ ವಿಚಿತ್ರ ಅಭ್ಯಾಸವನ್ನು ಗುರುತಿಸಿ, ‘ಕಲಸು ಮೇಲೋಗರ ಶ್ರೀ’ ಎಂಬ ಪ್ರಶಸ್ತಿಯನ್ನು ಕೊಡ ಮಾಡುತ್ತಿದ್ದವೆನಿಸುತ್ತದೆ!

ನಮ್ಮ ಭಾರತೀಯ ಅದರಲ್ಲೂ ದಕ್ಷಿಣ ಭಾರತೀಯ ಶೈಲಿಯ ವ್ಯಂಜನಗಳ ವೈವಿಧ್ಯವನ್ನು ಮನಗಂಡರೆ ನಮ್ಮ ಹಿರಿಯರು ಎಂಥ ರಸಿಕಾಗ್ರ ಶಿರೋಮಣಿಗಳೆಂಬುದು ಮನದಟ್ಟಾಗುತ್ತದೆ. ಹಲವು ಥರದ ಪಲ್ಯ, ಗೊಜ್ಜು ಮತ್ತು ಚಟ್ನಿಗಳ ರೆಸಿಪಿಯನ್ನು ಸಮೃದ್ಧವಾಗಿ ಕೊಟ್ಟು ಹೋಗಿದ್ದಾರೆ; ಮಾಡಿ ತಿನಿಸಿ, ತಮ್ಮ ಕೈಯ ಹದವನ್ನು ಪರಿಚಯಿಸಿದ್ದಾರೆ. ಇವೆಲ್ಲವೂ ಇಂಥ ವ್ಯಂಜನದ ವಿಭಾಗಕ್ಕೇ ಸೇರ್ಪಡೆಗೊಳ್ಳುತ್ತವೆ. ಪಲ್ಯಗಳೆಂಬವು ಕಾಳು, ಕಾಯಿಪಲ್ಲೆಗಳಿಂದ ಆವೃತ. ಗೊಜ್ಜು ಎಂಬುದು ಮೂಲತಃ ಹುಳಿ, ಸಿಹಿ ಮತ್ತು ಖಾರಗಳ ಮಿಶ್ರಣ. ಇನ್ನು ಚಟ್ನಿಯೋ, ಅದು ಶುದ್ಧವಾದ ವ್ಯಂಜನ. ನಮ್ಮ ಆಹಾರ ಪದ್ಧತಿಯು ಎಷ್ಟೊಂದು ಫ್ಲೆಕ್ಸಿಬಲ್‌ ಅಂದರೆ ಸ್ಥಿತಿಸ್ಥಾಪಕ ಗುಣವನ್ನು ಹೊಂದಿದೆಯೆಂದರೆ ಈ ಪಲ್ಯ, ಗೊಜ್ಜು ಮತ್ತು ಚಟ್ನಿಗಳನ್ನು ವ್ಯಂಜನವಾಗಿಯೂ ಬಳಸಬಹುದು; ಅನ್ನಕ್ಕೆ ಕಲೆಸಿ, ಮುಖ್ಯ ಭೂಮಿಕೆಯನ್ನಾಗಿಸಲೂ ಬಹುದು. ರೊಟ್ಟಿ, ಚಪಾತಿ, ಪೂರಿ, ಇಡ್ಲಿ, ದೋಸೆಗಳಿಗೂ ಸಾಧಕವನ್ನಾಗಿಸಬಹುದು. ಸಮಾರಂಭಗಳಲ್ಲಿ ಊಟ ಬಡಿಸುವವರು ನಿಧಾನ ಮಾಡಿದರೆ ಅಥವಾ ನಾವೇ ಬೇಗ ತಿಂದು ಕಾಯುತಿದ್ದರೆ ಇಂಥದೊಂದು ಪ್ರಯತ್ನವು ಸದ್ದಿಲ್ಲದೇ ನಡೆದಿರುತ್ತದೆ. ಎಲೆಯಂಚಿನಲ್ಲಿ ಉಳಿದಿರುವ ಅನ್ನಕೆ ಬಾಳೆಲೆಯ ಮೇಲ್ತುದಿಯಲ್ಲಿ ರಿಸರ್ವಾಗಿಟ್ಟ ಪಲ್ಯವನ್ನೋ ಗೊಜ್ಜನ್ನೋ ಚಟ್ನಿಯನ್ನೋ ಕಲೆಸಿಕೊಂಡು ಉಣ್ಣುವುದಿದೆ. ಎಷ್ಟು ಥರದ ಜನರಿದ್ದಾರೋ ಅಷ್ಟು ಥರದ ಊಟೋಪಚಾರಗಳೂ ಇವೆ; ಹಾಗೆಯೇ ವೈವಿಧ್ಯಮಯವಾಗಿ ಉಣ್ಣುವವರೂ ಇದ್ದಾರೆ. ಆದರೆ ಮನೆಯಲ್ಲಿ ಊಟ ಮಾಡುವ ಕ್ರಮವನ್ನೇ ಹೊರಗಡೆಯೂ ಅನುಸರಿಬಾರದೆಂಬುದು ಶಿಷ್ಟಾಚಾರ. ಬಡಿಸುವಿಕೆಯಲ್ಲೂ ತಿನ್ನುವಿಕೆಯಲ್ಲೂ ಒಂದು ಬಗೆಯ ಶಿಸ್ತನ್ನು ಮೈಗೂಡಿಸಿಕೊಂಡರೆ ನೋಡುವವರಿಗೆ ಹಿತ. ಅಂಥ ಭೋಜನಕ್ಕೊಂದು ಡೀಸೆನ್ಸಿ ತಂತಾನೇ ಪ್ರಾಪ್ತ. 

PC: Internet

ವ್ಯಂಜನಗಳ ಆಚೀಚೆ ಅಡ್ಡಾಡುವುದನ್ನು ಬಿಟ್ಟು ನೇರವಾಗಿ ಅವುಗಳ ಅಂತರಾಳಕ್ಕೆ ಲಗ್ಗೆ ಹಾಕಲು ಹೊರಟಿರುವೆ. ಹೊಟೆಲಿನವರು ಯಾವು ಯಾವುದೋ ತರಕಾರಿಯ ಕಾಂಬಿನೇಷನ್ನಿನಲ್ಲಿ ಪಲ್ಯ ತಯಾರಿಸಿ ದಿಗ್ಭ್ರಮೆ ಮೂಡಿಸುತ್ತಾರೆ. ಒಮ್ಮೆ ಹೊಟೆಲಿನಲ್ಲಿ ಊಟ ಮಾಡಲು ಹೋದಾಗ ಮೂಲಂಗಿಯನ್ನು ಸಣ್ಣಗೆ ಹೆಚ್ಚಿ ಪಲ್ಯ ಮಾಡಿದ್ದರು. ಇನ್ನೊಮ್ಮೆ ಹೀರೇಕಾಯಿಯ ಪಲ್ಯ ಕೊಟ್ಟಿದ್ದರು. ಚಿಕ್ಕದಾಗಿ ಹೆಚ್ಚಿ ಬೃಹತ್‌ ಪ್ರಮಾಣದಲ್ಲಿ ಚೆನ್ನಾಗಿ ಬೇಯಿಸಿಬಿಟ್ಟರೆ ಅದಾವ ತರಕಾರಿಯೆಂದು ತಿಳಿಯದೇ ಸುಮ್ಮನೆ ತಿಂದು ಎದ್ದು ಬಂದಿರುತ್ತೇವೆ. ಏಕೆಂದರೆ ಹೋಗಿರುವುದೇ ಹೊಟೆಲಿಗೆ. ಇನ್ನು ಅಲ್ಲಿ ನಮ್ಮ ಮನೆಯ ಸೌಭಾಗ್ಯವನ್ನು ನಿರೀಕ್ಷಿಸಬಾರದು. ಶಾಸ್ತ್ರಗಳಲ್ಲಿ ಆಪದ್ಧರ್ಮ ಅಂತ ಒಂದು ಸೆಲ್ಯೂಷನ್‌ ಕೊಟ್ಟಿರುತ್ತಾರೆ. ಅದೇ ರೀತಿ ಅನಿವಾರ್ಯ ಎಂದಾಗ ಹೊಟ್ಟೆಗೊಂದಿಷ್ಟು ಅನ್ನ ಕಾಣಿಸಲು ಆ ವೇಳೆಯಲ್ಲಿ ಹೋಗುವಾಗ ಪರಿಟಾವಣೆ ಕೇಳಬಾರದು. ಪಲ್ಯದ ತಯಾರಿ ಬಹು ಸುಲಭ. ತರಕಾರಿಗಳನ್ನು ಹೆಚ್ಚಿ, ಬೇಯಿಸಿ, ನೀರು ತೆಗೆದು ಒಗ್ಗರಣೆಯಲ್ಲಿ ಹುರಿದು, ಅದಕ್ಕೆ ಪಲ್ಯದಪುಡಿ, ಒಂಚೂರು ಬೆಲ್ಲ, ತೆಂಗಿನಕಾಯಿ ಬೆರೆಸಿ ಒಂದಷ್ಟು ಹೊತ್ತು ಮುಚ್ಚಿಟ್ಟು, ಕೆಳಗಿಳಿಸಿ, ನಿಂಬೆರಸ ಹಿಂಡಿದರೆ ಮುಗಿಯಿತು. ಚಟ್ನಿಗಳೂ ಸುಲಭವೇ. ಆದರೆ ಗೊಜ್ಜು ಮಾಡುವ ಪ್ರಕ್ರಿಯೆಯು ನಿಧಾನ. ಎಳ್ಳುಪುಡಿ ಗೊಜ್ಜು, ಮೆಂತ್ಯದ ಕಾಳಿನ ಗೊಜ್ಜು, ನಿಂಬೆಹಣ್ಣಿನ ಗೊಜ್ಜು, ಅನಾನಸ್‌ ಗೊಜ್ಜು, ಹಾಗಲಕಾಯಿ ಗೊಜ್ಜು, ಕಿತ್ತಳೆಸಿಪ್ಪೆ ಗೊಜ್ಜು, ಸೌತೆಕಾಯಿ ಗೊಜ್ಜು, ಬದನೆಕಾಯಿ ಗೊಜ್ಜು, ಬೆಂಡೆಕಾಯಿ ಗೊಜ್ಜು ಹೀಗೆ ವೆರೈಟಿಯೇ ಸರಿ. ಒಟ್ಟಿನಲ್ಲಿ ನಮ್ಮ ಅಡುಗೆ ಪದ್ಧತಿಯಲ್ಲಿ ಮುಖ್ಯ ಭೂಮಿಕೆಯ ಐಟಮ್ಮುಗಳಷ್ಟೇ ಮೇಲೋಗರಗಳೂ ಮಹತ್ವದ ಪಾತ್ರ ವಹಿಸಿವೆ. ಒಮ್ಮೊಮ್ಮೆಯಂತೂ ಮೇಲೋಗರಗಳೇ ಮುಖ್ಯವಾಗಿ ಪ್ರಥಮ ಸ್ಥಾನವನ್ನು ಅಲಂಕರಿಸಿ ಬಿಡುತ್ತವೆ. ಬದುಕಿನ ವಿಶಾಲತೆಯಲ್ಲಿ ಎಲ್ಲವುಗಳಿಗೂ ಅವುಗಳದೇ ಸ್ಥಾನಮಾನಗಳಿವೆ. ಎಲ್ಲವೂ ಮುಖ್ಯ; ಯಾವುದೂ ಅಮುಖ್ಯವಲ್ಲ ಎಂಬ ಪಾಠವನ್ನು ಇಂಥ ವ್ಯಂಜನ ಪದಾರ್ಥಗಳು ಕಲಿಸುತ್ತವೆ. ಸ್ವರವೂ ವ್ಯಂಜನವೂ ಕೂಡಿ ಬಾಳಿದರೆ ತಾನೇ ಭಾಷೆಗೆ ಅರ್ಥವಂತಿಕೆ; ಹಾಗೆಯೇ ಮೇಲೋಗರಗಳಿದ್ದರಷ್ಟೇ ಊಟಕ್ಕೆ ಲಕ್ಷಣವಂತಿಕೆ!

ಡಾ. ಹೆಚ್ ಎನ್ ಮಂಜುರಾಜ್,ಮೈಸೂರು

18 Responses

  1. MANJURAJ says:

    ಪ್ರಕಟಿಸಿದ ಸುರಹೊನ್ನೆಗೆ
    ಧನ್ಯವಾದಗಳು

    ಸಹೃದಯರು ಸ್ವೀಕರಿಸಿದರೆ
    ಅದೇ ಧನ್ಯತಾ….

  2. ವ್ಯಂಜನಗಳಷ್ಟೇ ಸವಿಯಾದ ಲೇಖನ ಉತ್ತಮ ನಿರೂಪಣೆ..
    ಪೂರಕವಾದ ಚಿತ್ರಗಳು ಎಲ್ಲವೂ ಸೊಗಸಾಗಿ ಮೂಡಿಬಂದಿದೆ.. ವಂದನೆಗಳು

  3. ಪದ್ಮಾ ಆನಂದ್ says:

    ವ್ಯಂಜನಗಳು ಎಂಬ ಶೀರ್ಷಿಕೆ ನೋಡಿ ರುಚಿಕಟ್ಟಾದ ಅಡುಗೆಗಳ ವಿವರಣೆಯನ್ನು ನಿರೀಕ್ಷಿಸಿದ್ದ ನನಗೆ, ಭಾಷೆಯಲ್ಲಿ ಕಬ್ಬಿಣದ ಕಡಲೆಯ ವಿಭಾಗವಾದ ವ್ಯಾಕರಣವನ್ನು ಹೇಳ ಹೊರಟಾಗ ಉಂಟಾದ ನಿರಾಶೆ ನಂತರದಲ್ಲಿ ಮನಸ್ಸಿಗೆ ತೃಪ್ತಿ ನೀಡಿ ಆನಂದವನ್ನುಂಟು ಮಾಡಿತು.

    • MANJURAJ H N says:

      ನಂತರದಲ್ಲಿ ಆನಂದವಾಯಿತಲ್ಲ, ಅಷ್ಟು ಸಾಕು ಮೇಡಂ,
      ಅಂದ ಹಾಗೆ ಸದಾ ಆನಂದವೇ ನೀವು, ಏಕೆಂದರೆ ನೀವು ಪದ್ಮಾ ಆನಂದ್!‌

      ಮೆಚ್ಚಿದ್ದಕ್ಕೆ ಧನ್ಯವಾದಗಳು ಮೇಡಂ

  4. ಶಂಕರಿ ಶರ್ಮ says:

    ಕನ್ನಡ ವ್ಯಾಕರಣವನ್ನು ಕಲಿಸಿದ ಬಳಿಕ ಸ್ವಾದಿಷ್ಟ ವ್ಯಂಜನದೂಟ ಉಣಬಡಿಸಿದ ಪರಿ ಸೂಪರ್!

    • MANJURAJ H N says:

      ನಿಜ, ವ್ಯಂಜನದೂಟ! ಎಷ್ಟು ಸೊಗಸಾದ ನಾಮಕರಣ.
      ಧನ್ಯವಾದಗಳು ಮೇಡಂ, ಪುಸ್ತಕ ಮಾಡುವಾಗ
      ಈ ಲೇಖನದ ಶೀರ್ಷಿಕೆಯನ್ನು ಬದಲಿಸುವೆ. ನನಗೆ ಹೊಳೆದಿರಲಿಲ್ಲ.
      ನೂರು ಪ್ರಣಾಮಗಳು ನಿಮಗೆ. (ಓದಿದ್ದಕ್ಕೆ, ಅಭಿಪ್ರಾಯ ದಾಖಲಿಸಿದ್ದಕ್ಕೆ
      ಮತ್ತು ಅರ್ಥಬದ್ಧ ಹೆಸರು ಕೊಟ್ಟಿದ್ದಕ್ಕೆ)

  5. Hema Mala says:

    ಕನ್ನಡ ಪಾಠದ ವ್ಯಂಜನಕ್ಕೂ , ಊಟದ ವ್ಯಂಜನಕ್ಕೂ ಸಂಬಂಧ ‘ಎತ್ತಣ ಸಂಬಂಧವಯ್ಯಾ’ ಎನ್ನಲಾಗದಂತೆ ಅಮೋಘವಾಗಿ ಬರೆದ ನಿಮಗೆ ಶರಣು. ಎಂದಿನಂತೆ ಚೆಂದದ ಬರಹ.

    • MANJURAJ H N says:

      ಕಳೆದ ಕೆಲವು ದಿವಸಗಳ ಹಿಂದೆ, ಹಾಸನದ ರಾಮ ಹೊಟೆಲಿನಲ್ಲಿ ಊಟ ಮಾಡಿ
      ಬರುವಾಗ ನನ್ನ ಸಹೋದ್ಯೋಗೀ ಸನ್ಮಿತ್ರರು ನನ್ನ ಬಾಯಿಂದ ಬಂದ “ವ್ಯಂಜನ”
      ಪದವನ್ನು ಗಮನಿಸಿ, ಹೇಳಿದ ಮಾತೇ ನನ್ನೀ ಲೇಖನಕೆ ಪ್ರೇರಣೆ !
      (ಇದನ್ನು ದಾಖಲಸಿದ್ದೇನೆ ಕೂಡ.)

      ಬರೆದು ಕಳಿಸಿದ್ದನ್ನು ಗಮನಿಸಿ, ಓದಿ, ಸುರಹೊನ್ನೆಯಲಿ ಪ್ರಕಟಿಸಿ, ನೀವು ಪ್ರೀತಿಯ
      ಪ್ರೋತ್ಸಾಹ ನೀಡಿದ್ದೀರಿ. ಇದು ನನಗೆ ಈ ಸಲದ ರಾಮನವಮಿಯ ಧಾರಣೆ !!

      ನಿಮ್ಮ ಮೆಚ್ಚುಮಾತಿನ ಕಮೆಂಟಿಗೆ ನನ್ನ ಧನ್ಯವಾದ ಮೇಡಂ. ಈಗ ಹೊಳೆಯಿತು:
      “ಎತ್ತಣ ಸಂಬಂಧವಯ್ಯಾ!” ಎಂಬುದು ಎಂಥ ಅದ್ಭುತವಾದ ಶೀರ್ಷಿಕೆ. ಇನ್ನೊಂದು
      ಲೇಖನ ಬರೆಯಲು ಟೈಟಲು ದೊರೆಯಿತು ಇದರಿಂದ. (ಇನ್ನು ಬಿಡುವಾದಾಗ ಬರೆಯುವುದೇ!)
      ಅನಂತ ಪ್ರಣಾಮ. ರಾಮನವಮಿಯ ಶುಭಾಶಯ.

      • Hema Mala says:

        ಧನ್ಯವಾದಗಳು .ತಮಗೂ ರಾಮನವಮಿಯ ಶುಭಾಶಯಗಳು.

  6. ನಯನ ಬಜಕೂಡ್ಲು says:

    ಆಹಾ… ಪಾಠದ ಜೊತೆಗೆ ಊಟ ಮಾತ್ರ ಅಲ್ಲ ಊಟದ ಎಲೆ ಹೇಗಿರಬೇಕು ಅನ್ನುವ ಅದರ ಮಹತ್ವವನ್ನೂ ಎಷ್ಟೊಂದು ಸೊಗಸಾಗಿ ವಿವರಿಸಿದ್ರಿ ಸರ್. ಬಹಳ ಬಹಳ ಚೆನ್ನಾಗಿದೆ.

    • MANJURAJ H N says:

      ಧನ್ಯವಾದಗಳು ಮೇಡಂ, ಇವು ಚಿಕ್ಪುಟ್ಟ ವಿಷಯಗಳೇ ಇರಬಹುದು.
      ಆದರೆ ಬದುಕಿನ ದೊಡ್ಡಪಾಠವನ್ನು ಅರುಹುತ್ತವೆ. ಗಮನಿಸುತ್ತಾ
      ಹೋದರೆ ಪ್ರತಿಯೊಂದೂ ಪಾಠವೇ; ಗಮನಿಸದಿದ್ದರೆ ಬರೀ ಆಟವೇ !

      ನಿಮ್ಮ ಮರೆಯದ ಓದಿಗೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.
      ಖುಷಿಯನ್ನು ಹಂಚಿಕೊಂಡ ನಿಮ್ಮ ಹೃದಯ ವೈಶಾಲ್ಯಕೆ ಶರಣು.

  7. Anonymous says:

    ಬಾಳೆಯ ಎಲೆಯಲ್ಲಿ ಹಲವಾರು ಬಾರಿ ಊಟಮಾಡಿದ್ದರೂ ಎಲೆಯ ಚಿಕ್ಕಭಾಗ ಏಕೆ ಎಡಭಾಗದಲ್ಲಿ ಇರಬೇಕು ತಿಳಿದಿರಲಿಲ್ಲ. ಹಲವಾರು
    ವ್ಯಂಜನಗಳನ್ನು ಸವಿದಿದ್ದರೂ ಅವುಗಳು ಬಗ್ಗೆ ತಿಳಿದಿರಲಿಲ್ಲ. ಸ್ವಾದಿಷ್ಟ ಭೋಜನಸವಿದಂತಾಯಿತು.
    ಧನ್ಯವಾದಗಳು.

    • MANJURAJ H N says:

      ಬಾಳೆಲೆ – ಊಟದ ಕಲೆ !
      ಇದೇ ಬದುಕಿನ ಬೆಲೆ !!
      ಅಲ್ಲವೇ, ಧನ್ಯವಾದಗಳು ನಿಮ್ಮ ಮುಕ್ತಮನದ ಅನಿಸಿಕೆಗೆ ಮತ್ತು ಚೆಂದದ ಪ್ರತಿಕ್ರಿಯೆಗೆ

  8. ಸಿ.ಎನ್.ಮುಕ್ತಾ says:

    ಸ್ವಾದಿಷ್ಟ ಭೋಜನ ಸವಿದಷ್ಟೇ ಖುಷಿಯಾಯಿತು.

    • MANJURAJ H N says:

      ಹೌದೇ ಮೇಡಂ, ನಿಮ್ಮ ಕತೆ ಕಾದಂಬರಿಗಳು ನಮಗೆ ಸ್ವಾದಿಷ್ಟ ಭೋಜನ…..
      ಅದೆಷ್ಟು ಸಲ ಓದಿ ಆನಂದ ಪಟ್ಟಿದ್ದೇವೋ, ಲೆಕ್ಕವಿಟ್ಟಿಲ್ಲ. ಧನ್ಯವಾದಗಳು ನಿಮ್ಮಂಥ
      ಹಿರಿಯರ ಪ್ರತಿಕ್ರಿಯೆಗೆ. ಶರಣು ನಾನು.

  9. ಮಂಜುಳಮಿರ್ಲೆ says:

    ಭೋಜನದ ಬಗ್ಗೆ ನಾನು ಓದಿದ ಏಕೈಕ ಸಮಗ್ರ ಲೇಖನ. ಭೋಜನ, ವ್ಯಂಜನ ಸಂಯೋಜನೆಯ ನಿಮ್ಮ ಹೊಳಹಿಗೆ hatsoff sir. ವ್ಯಾಕರಣ ಪಾಠವೂ, ವೈಭೋಗದ ಭೋಜನವೂ ಬಾಳೆಲೆಯಲ್ಲೇ ಸವಿದಂತಾಯಿತು.
    ನನಗೆ ಒಂದು, ಎರಡು ಬಾಳೆಲೆ ಹರಡು… ಎಣಿಸೋಕೆ ಕಲಿತಿದ್ದ ಶಿಶು ಗೀತೆಯೂ ನೆನಪಾಯಿತು.
    ಬಹುಶಃ ನಮ್ಮ ದೇಶದ ಊಟ ಮಾತ್ರ ಇಷ್ಟು ಸೊಗಸಾಗಿ ಬರೆಸಿಕೊಳ್ಳಲು ಸಾಧ್ಯ. ಅಭಿನಂದನೆಗಳು ಸರ್

  10. MANJURAJ H N says:

    ಹೌದೇ ಮೇಡಂ, ನಿಮ್ಮ ಮಾತು ನಿಜ.
    ಬಾಳೆಲೆ, ಊಟದ ಕಲೆ, ಬದುಕಿನ ಬೆಲೆ ಅಲ್ಲವೇ.
    ಭೋಜನ, ವ್ಯಂಜನ ಸಂಯೋಜನ. ಆಹಾ ! ಎಂಥ ಮಾತು. ಚೆನ್ನಾಗಿದೆ.

    ಶಿಶುಗೀತೆಯನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು. ಬರೆಯುವಾಗ ಮರೆತು ಹೋಗಿತ್ತು.

    ನಿಮ್ಮ ಕೊನೆಯ ಮಾತು ಸಹ ಲೇಖನಕೆ ಷರಾ ಬರೆದಿದೆ. ಅದಕಾಗಿ ಶರಣು. ಪ್ರತಿಕ್ರಿಯೆ
    ಯನ್ನು ತಪ್ಪದೆ ದಾಖಲಿಸುವ ನಿಮ್ಮ ಪ್ರೀತಿಗೆ ನಾನು ಚಿರಋಣಿ.

Leave a Reply to MANJURAJ H N Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: