ಶಿವ ಕಾಣದ ಕವಿ ಕುರುಡ !

Share Button

ಆನಂದಮಯ ಈ ಜಗಹೃದಯ ಎಂದು ಆರಂಭವಾಗುವ ಕವಿ ಕುವೆಂಪು ಅವರ ಆಧ್ಯಾತ್ಮಿಕ ಭಾವಗೀತೆಯಲ್ಲಿ ಬರುವ ಸಾಲು: ‘ಶಿವ ಕಾಣದೆ ಕವಿ ಕುರುಡನೋ; ಶಿವ ಕಾವ್ಯದ ಕಣ್ಣು.’ ಇಡೀ ಕವಿತೆಯು ನಮ್ಮ ಉಪನಿಷತ್‌ ದ್ರಷ್ಟಾರರು ಕಂಡರಿಸಿ ಕೊಟ್ಟ ‘ಸತ್ಯಂ ಶಿವಂ ಸುಂದರಂ’ ಎಂಬ ದರ್ಶನೋಕ್ತಿಯನ್ನು ಆಧರಿಸಿದೆ; ಅದನ್ನು ಸೃಜನಾತ್ಮಕವಾಗಿ ಪ್ರತಿಪಾದಿಸಿದೆ. ಏಕೆಂದರೆ ಕುವೆಂಪು ಅವರದು ಪೂರ್ಣದೃಷ್ಟಿ. ಅಖಂಡವಾದುದು; ಖಂಡತುಂಡವಲ್ಲ! ಇಲ್ಲಿ ಶಿವ ಎಂದರೆ ಮಂಗಳಕರ ಎಂದರ್ಥ. ಮಂಗಳವಾಗಲಿ ಸರ್ವರಿಗೆ ಎಂದು ಅಂತ್ಯಗೊಳ್ಳುವ ಹರಿಕಥಾ ಕಾಲಕ್ಷೇಪದ ಹಾರಯಿಕೆಯಂತೆ! ಶುಭಮಸ್ತು, ಸಮಸ್ತ ಸನ್ಮಂಗಳಾನಿಭವಂತು ಎಂದು ಶುಭ ಕೋರುವಂತೆ. ಮಂಗಳವಾಗಲು ದೈವದ ನೆರವು ಬೇಕು ಮತ್ತು ದೈವವು ಮನಸು ಮಾಡಬೇಕು. ದೈವಿಕವೆಂದರೆ ಪರಮಾತ್ಮ. ಅಂದರೆ ಪರಮ ಆತ್ಮ. ಸುಪ್ರಿಂ ಪವರ್‌ ಆಫ್‌ ದ ಸೋಲ್.‌ ಜೀವಾತ್ಮವು ಪರಮಾತ್ಮದ ಕೃಪೆಯಿಲ್ಲದೇ ಅಡ್ಡಾಡಲಾರದು. ‘ತೇನವಿನಾ ತೃಣಮಪಿ ನ ಚಲತೇ’ ಎಂದೇ ಆರಂಭವಾಗುವ ಅವರ ಇನ್ನೊಂದು ಕವಿತೆಯಲ್ಲಿ ‘ನಿನ್ನನೇ ನೈವೇದ್ಯವ ನೀಡು’ ಎಂದಿದ್ದಾರೆ. ಅಂದರೆ ಇದೊಂದು ಸಮರ್ಪಣೆ; ಈ ಜನುಮದ ಸಾರ್ಥಕ್ಯ. ಇಡೀ ಸೃಷ್ಟಿಗೆ ನಾನೇನು ಕೊಡಬಲ್ಲೆ? ಎಲ್ಲವನೂ ಪಡೆದು ಪ್ರಶ್ನಿಸುವ ದಾರ್ಷ್ಟ್ಯವನು ಬೆಳೆಸಿಕೊಂಡ ನನ್ನಲ್ಲಿ ಕೃತಜ್ಞತೆಯೇ ಇಲ್ಲವಾಗಿ ಹೋದರೆ ಅದೊಂದು ಬಹು ದೊಡ್ಡ ದ್ರೋಹ. ಹಾಗಾಗಿ ಕುವೆಂಪು ಅವರು ‘ಸಮಸ್ತ ಲೋಕದೊಳಗೆ ನೀನೊಂದು ಅಣು, ನಿನ್ನನೇ ಅರ್ಪಿಸುವುದನ್ನು ಕಲಿತುಕೋ’ ಎಂದು ಕಿವಿಮಾತು ಹೇಳುವರು. ತತ್ತ್ವಕ್ಕೋಸ್ಕರ ಬರೆದವರು ಕುವೆಂಪು. ಅವರು ತತ್ತ್ವಾನ್ವೇಷಕರು. ತಮ್ಮ ಪಂಚಮಂತ್ರಗಳನು ಸೃಜನಾತ್ಮಕವಾಗಿ ಕಟ್ಟಿ ಕೊಡುವ ಕಾಯಕವೇ ಅವರ ರಚನೆಗಳು. ಬೇಂದ್ರೆಯವರ ಹಾದಿ ಹೀಗಲ್ಲ; ಅವರದು ಬೇರೆ. ಅವರ ರಚನೆಗಳ ಮೂಲಕ ತತ್ತ್ವಗಳನ್ನು ಕಟ್ಟಿಕೊಳ್ಳಬೇಕು. ಇಬ್ಬರೂ ಸೃಷ್ಟಿರಹಸ್ಯವನು ಪರಿಪರಿಯಾಗಿ ವಿಶ್ಲೇಷಿಸಿ ತಮ್ಮದೇ ವಿಶಿಷ್ಟ ಮಾರ್ಗದಲ್ಲಿ ಬಣ್ಣಿಸಿದವರೇ. ಪ್ರಕೃತಿಯ ಮೂಲಕ ಮಾನವ ಪ್ರಕೃತಿಯನು ಕುವೆಂಪು ಕಟ್ಟಿಕೊಟ್ಟರೆ, ಬೇಂದ್ರೆಯವರು ಮಾನವ ಪ್ರಕೃತಿಯ ಮೂಲಕ ಪ್ರಕೃತಿಯನು ಕಂಡರಿಸಿದರು. ಸತ್‌ ಚಿತ್‌ ಆನಂದವೇ ಇಬ್ಬರ ಪರಮಗಂತವ್ಯವಾಗಿತ್ತು. ಹಾಗೆ ನೋಡಿದರೆ ಜಗತ್ತಿನ ಎಲ್ಲ ದೊಡ್ಡ ಕವಿಗಳೂ ಅಂತಿಮವಾಗಿ ದೈವವನ್ನು ನಂಬಿ, ಅಧ್ಯಾತ್ಮದತ್ತ ಪ್ರಯಾಣಿಸಿದವರೇ. ಸೃಷ್ಟಿಲೀಲೆಯಲಿ ಬೆರಗನ್ನೂ ಮಾನವ ಸಮಾಜದಲಿ ಕೊರಗನ್ನೂ ವ್ಯಕ್ತಪಡಿಸುತ್ತಾ ಚಿಕಿತ್ಸಕ ದೃಷ್ಟಿಯಿಂದ ಬರೆದವರೇ. ದೈವವನ್ನು ಕಾಣಲಾಗದ ಮನಸಿಗೆ ಕವಿತ್ವ ಒಲಿಯುವುದಿಲ್ಲ ಎಂಬುದನ್ನು ಸಾಬೀತಿಸಿದವರೇ.

ದೈವವಿರೋಧಿಗಳು ಕವಿಗಳಾಗಲಾರರು. ಏಕೆಂದರೆ ಅವರಲ್ಲಿ ಶ್ರದ್ಧೆಯೂ ಇಲ್ಲ; ನೆಮ್ಮದಿಯ ನಿದ್ದೆಯೂ ಇಲ್ಲ. ವಿರೋಧಿಸುವ ಭರದಲ್ಲಿ ವಿಚಾರಸಾಹಿತ್ಯ ಹುಟ್ಟಿಕೊಳ್ಳುತ್ತದೆ. ಇದರ ಲಕ್ಷಣವೇ ಬೇರೆ. ವಾದ, ಚರ್ಚೆ, ಸಿದ್ಧಾಂತ, ತರ್ಕ, ಚಿಂತನೆಯ ನಾನಾ ನಮೂನೆಗಳು ಇವರ ಸಹಾಯಕ್ಕೆ ಬೇಕು. ತತ್ತ್ವವು ಸ್ವತಃ ಕಾವ್ಯವಲ್ಲ. ಅದು ಕವಿಯ ಅನುಭವಕ್ಕೆ ಪಕ್ಕಾಗಿ, ಸಂಕೇತ, ಪ್ರತಿಮೆ, ಪ್ರತೀಕಗಳ ಮೂಲಕ ಹೊಸತಾಗಿ ರಚಿತವಾಗಬೇಕು. ಹೊಸದನ್ನು ಕಾಣುವ ಮತ್ತು ಕಟ್ಟುವ ಬುದ್ಧಿಭಾವಗಳ ವಿದ್ಯುದಾಲಿಂಗನವದು. ದೈವವಿರೋಧವು ಒಂದು ಬಗೆಯ ಶಿಸ್ತು ಮತ್ತು ಸಂಶೋಧನೆಯ ಹಾದಿ ಹಿಡಿದು, ಎಲ್ಲದಕ್ಕೂ ಪುರಾವೆಗಳನ್ನು ಕೇಳುತ್ತಾ, ತಾನು ವ್ಯಾಖ್ಯಾನಿಸಿದ್ದರ ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸುತ್ತಾ ಹೊರಡುವಂಥದು. ಕಾವ್ಯದ ಬುನಾದಿಯೇ ನಂಬುಗೆ. ಏನೆಲ್ಲಾ ತಳಮಳ, ತಹತಹಗಳಾಚೆಗೂ ಕವಿಯು ಆಶಾವಾದಿಯಾಗುತ್ತಾನೆ. ವಿಚಾರವಾದಿ ಹಾಗಲ್ಲ. ಸಂದೇಹವೇ ಅವರ ದೇಹ; ಸಂಶಯವೇ ಅವರ ವೇಷ! ನಾನಿಲ್ಲಿ ಕವಿಯನ್ನೂ ವಿಚಾರವಾದಿಯನ್ನೂ ಒಂದು ತಕ್ಕಡಿಲಿಟ್ಟು ತೂಗುತಿಲ್ಲ. ಕವಿಯೊಳಗೆ ವಿಚಾರವಾದಿಯೂ ವಿಚಾರವಾದಿಯೊಳಗೆ ಕವಿಯೂ ಇರಬಾರದೆಂದೇನೂ ಇಲ್ಲ! ಬೇಂದ್ರೆಯವರಲ್ಲಿ ಕವಿತ್ವವೂ ಕುವೆಂಪು ಅವರಲ್ಲಿ ವಿಚಾರಾತ್ಮಕತೆಯೂ ರಾರಾಜಿಸುತ್ತದೆ. ಇಬ್ಬರೂ ಎಲ್ಲ ಬಗೆಯ ಚೌಕಟ್ಟು ಮತ್ತು ವಿಮರ್ಶೆಯ ಮೈಕಟ್ಟುಗಳನ್ನು ಮೀರಿದವರು. ಅಂದರೆ ಕುವೆಂಪು ಅವರ ಬರೆಹಗಳಲ್ಲಿ ಅವರು ಸ್ವತಃ ದರ್ಶಿಸಿದ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ, ಮನುಜಮತ ಮತ್ತು ವಿಶ್ವಪಥ ಎಂಬ ಪಂಚಮಂತ್ರಗಳ ಸಾಕಾರ ಸೃಜನವೇ ಇದೆ. ಅವರ ಎಲ್ಲ ರಚನೆಗಳೂ ಅಂತಿಮವಾಗಿ ತತ್ತ್ವವೊಂದರ ಸೃಜನಾತ್ಮಕ ಕಾಣ್ಕೆಗಳೇ ಆಗಿವೆ. ಬೇಂದ್ರೆಯವರದು ಅಪೂರ್ವ ಲೋಕೋತ್ತರ ಗ್ರಹಿಕೆ. ಅದೊಂದು ಕನಸುಣಿತನ. ಮುಂಗಾಣ್ಕೆ. ಅವರ ದಾರಿಯಲ್ಲಿ ಎಷ್ಟು ನಡೆದರೂ ತಕ್ಷಣಕೆ ಅರ್ಥವಾಗದ ಆದರೆ ಏನೋ ಗಹನವಾದುದು ಇದೆಯೆಂಬ ಭಾವ; ಎಷ್ಟೋ ದಿನಮಾನಗಳು ಕಳೆದ ಮೇಲೆ ಅನುಭವಕ್ಕೆ ಬರುವ ಲೋಕಗ್ರಹಿಕೆ; ದೇಸೀ ತಿಳಿವಳಿಕೆ. ಇನ್ನು ಕೆಲವರು ಸೃಜನಶೀಲರದು ಲೋಕೋತ್ತರಕೆ ಚಾಚಿಕೊಳ್ಳಲು ಇಷ್ಟಪಡದ ಪ್ರತಿಭೆ. ಕಾರಂತರು ಮತ್ತು ತೇಜಸ್ವಿಯವರು ಇಂಥವರು ಮತ್ತು ಅಪವಾದವಾದವರು. ಸೃಷ್ಟಿಯ ಬೆರಗು ಮತ್ತು ಬಿನ್ನಾಣಗಳನ್ನು ಕವಿ ಅಥವಾ ಕವಯಿತ್ರಿಯು ಕಂಡರಿಸುವಾಗ ತೀರಾ ಪ್ರಶ್ನಿಸುತ್ತಾ ಹೋದರೆ ಪ್ರತಿಭಾವಂತಿಕೆಯು ಜಾಗರವಾಡುವುದಿಲ್ಲ. ಅವ್ಯಕ್ತ ಶಕ್ತಿಗೆ ಸಮರ್ಪಿಸಿಕೊಳ್ಳದಿದ್ದರೆ ಕಾವ್ಯದ ನಡಿಗೆ ನಿಧಾನವಾಗುತ್ತದೆ; ಅದಮ್ಯ ಪುಳಕವೊಂದು ಮಿಸ್ಸಾಗುತ್ತದೆ.

‘ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ, ಆ ಕಲ್ಲು ಕಲ್ಲ ಮೇಲೆ ಕೆಡೆದರೆ ದೇವರೆತ್ತ ಹೋದರೋ’ ಎಂದು ಅಲ್ಲಮರು ತಾವು ನಂಬಿದ್ದ ಗುಹೇಶ್ವರನನ್ನೇ ಕೇಳುತ್ತಾರೆ. ದೇಹದೊಳಗೆ ದೇವಾಲಯವಿದ್ದು, ಮತ್ತೆ ಬೇರೆ ದೇವಾಲಯವೇಕೆ?  ಎಂದು ಹೇಳುವ ಮೂಲಕ ಧರ್ಮ ಮತ್ತು ದೇವರುಗಳ ಮಾರ್ಮಿಕತೆಯನ್ನು ಮನಕ್ಕೆ ಮುಟ್ಟಿಸಿದರು. ದೇಗುಲವೆಂಬುದು ಬರೀ ಕಲ್ಲುಗಳಿಂದಾವೃತ; ಆಗ ಅಲ್ಲಿ ತರತಮಗಳು ಉದ್ಭವಿತ. ಗುತ್ತಿಗೆ ತೆಗೆದುಕೊಂಡ ಮಧ್ಯವರ್ತಿಗಳ ಅನಾಹುತ. ಅದಕ್ಕೇ ಆತ ದೇಹದೊಳಗೇ ದೇವಾಲಯವಿದೆ. ನಿಮ್ಮ ಜೀವಾತ್ಮವನೇ ಪರಮಾತ್ಮವಾಗಿಸಲು ಈ ಜನ್ಮ ಕಾದಿದೆ ಎಂದರು. ಅವರು ನಂಬುಗೆಯನ್ನು ಪ್ರಶ್ನಿಸಲಿಲ್ಲ; ನಂಬುಗೆಯು ಬೂಟಾಟಿಕೆಯಾಗಬಾರದೆಂದು ಎಚ್ಚರಿಸಿದರು. ವಾದಿಸುವ, ವಿರೋಧಿಸುವ ಭರದಲ್ಲಿ ಸಾವಯವ ಸಮಗ್ರೀಕರಣವನ್ನು ಮರೆಯಬಾರದು ಎಂಬುದೇ ಅಲ್ಲಮರ ಅನಿಸಿಕೆ. ಸಿದ್ಧಾಂತಗಳಲಿ, ಪಂಥಗಳಲಿ ಸಿಲುಕಿಕೊಂಡವರಿಗೆ ಅಲ್ಲಮರು ಸಮಗ್ರವಾಗಿ ಸಿಗಲಾರರು.

‘ಕುವೆಂಪು ಅವರದು ಪಂಥವಲ್ಲ; ಪಥ’ ಎಂದು ಸರಿಯಾಗಿ ಗುರುತಿಸಿದವರು ಸಿಪಿಕೆಯವರು. ದೇವರಲ್ಲಿ ಮನುಷ್ಯರನ್ನೂ ಮನುಷ್ಯರಲ್ಲಿ ದೇವರನ್ನೂ ಕಾಣುವ ಅಪರೂಪದ ಫಿಲಾಸಫಿ ನಮ್ಮ ಸನಾತನ ಪರಂಪರೆಯದು ಎಂಬ ತಥ್ಯ ತಿಳಿಯದವರು ದೈವ ನಿರಾಕರಣೆಯನ್ನು ಒಂದು ಫ್ಯಾಶನ್ನಾಗಿಸಿಕೊಂಡು ವಿಚಾರವಾದ ಹರಡುತ್ತಾರೆ. ಭಗವದ್ಗೀತೆ ಮತ್ತು ಉಪನಿಷತ್ತುಗಳಿಗಿಂತ ಬೇರೆ ವಿಚಾರವಾದ ಬೇಕೆ? ಕುವೆಂಪು ತಾವು ಬರೆದದ್ದರಲ್ಲೆಲ್ಲಾ ಪಂಚಮಂತ್ರಗಳ ಒಟ್ಟೂ ತಾತ್ಪರ್ಯವಾದ ವಿಶ್ವಮಾನವತೆಯ ಕನಸನ್ನು ಕಟ್ಟಿಕೊಟ್ಟರು. ಅಂದರೆ ಅಧ್ಯಾತ್ಮವಾದಿಗಳಾದರು. ‘ಪ್ರಕೃತಿಯೇ ಪರಮನಾರಾಧನೆ’ ಎಂದು ಪರ್ಯಾಯ ಸೂಚಿಸಿದರು. ತೀರಾ ಇಂದಿನ ಎಡವಾದಿಗಳು ಹಠಕ್ಕೆ ಬಿದ್ದವರಂತೆ ಭೌತಿಕವಾದಿಯಾಗಿರಲಿಲ್ಲ. ಅಂದರೇನಾಯಿತು? ಸೃಜನಶೀಲರು ಪರಮಶಕ್ತಿಯಲ್ಲಿ ನಂಬುಗೆಯಿಟ್ಟು ಬರೆಯುವವರು. ವಿಮರ್ಶಕರಲ್ಲಿ ಕೆಲವರು ಇದನ್ನು ಪಕ್ಕಕಿಟ್ಟು ತಮಗೆ ಬೇಕಾದಂತೆ, ತಮ್ಮ ವಾದ ಸಿದ್ಧಾಂತ ಮತ್ತು ಪ್ರತಿಷ್ಠೆಯ ನೂತನ ಓದುಮಾರ್ಗಗಳ ಕಣ್ಣಬೆಳಕಲಿ ಬರೆದು ಮುನ್ನೆಲೆಗೆ ಬರಲು ತಿಣುಕುತ್ತಿರುತ್ತಾರೆ; ದೈವವನ್ನು ನಿರಾಕರಿಸುತ್ತಿರುತ್ತಾರೆ. ನಿಜಜೀವನದಲ್ಲಿ ಕುಟುಂಬದ ಒತ್ತಾಯ ಮತ್ತು ಒತ್ತಡಕ್ಕೆ ಮಣಿದು ಆಸ್ತಿಕರಾಗಿರುತ್ತಾರೆಂಬುದು ಬೇರೆ ಮಾತು.

ಕೆಲವರಂತೂ ವಿಚಿತ್ರ. ಶಿವಶರಣರು ಬೇಕು; ಆದರೆ ಅವರು ನಂಬಿದ ಶಿವ ಬೇಡ. ದಾಸಸಾಹಿತ್ಯ ಬೇಕು; ಆದರೆ ಅವರ ವಿಠಲನೋ ಆದಿಕೇಶವನೋ ಬೇಡ. ಪಂಪ ಬೇಕು; ಅವನ ಜೈನಸಿದ್ಧಾಂತ ಬೇಡ. ಕುವೆಂಪು ಬೇಕು; ಅವರು ಹಾಡಿ ಹೊಗಳಿದ ಜನಜ್ಜನನಿ ಬೇಡ. ಬೇಂದ್ರೆ ಬೇಕು; ಅವರ ಶ್ರೀಮಾತಾ ಬೇಡ. ಇವು ಅವಿನಾಭಾವ. ಪ್ರತ್ಯೇಕಿಸಲಾಗದು ಎಂದರಿಯದವರು ಇಂಥವರು. ಬದುಕು ಎಲ್ಲದರ ಸಮ್ಮಿಶ್ರಣ; ಎಲ್ಲ ಆಲೋಚನೆಗಳ ಹದಬೆರೆತ ಪಾಕ. ಇದನ್ನೇ ಪೂರ್ಣದೃಷ್ಟಿ ಎಂದು ಕುವೆಂಪು ಪ್ರತಿಪಾದಿಸಿದ್ದು. ಸಾಹಿತ್ಯ ಅಥವಾ ಕವಿತೆಯ ಯಾವುದೋ ಒಂದು ಸಾಲನ್ನು ಪ್ರತ್ಯೇಕಿಸಿಕೊಂಡು ತಮ್ಮ ಮೂಗಿನ ನೇರದ ಪ್ರಾಯೋಗಿಕ ವಿಮರ್ಶೆ ಮಾಡುವಂತೆ ಬದುಕು ಇರುವುದಿಲ್ಲ! ಅನ್ನ ಮತ್ತು ತಿಳಿಸಾರು ಊಟ ಮಾಡಿದವರಿಗೆ ಗೊತ್ತು; ಇದರ ಗಮ್ಮತ್ತು. ಸಾರನ್ನದ ತರುವಾಯ ಮೊಸರನ್ನ ತಿನ್ನುವಾಗ ಮಧ್ಯದಲೊಂಚೂರು ಸಾರು ಹಾಕಿಸಿಕೊಂಡು ತಿನ್ನುವ ರೀತಿ. ಇನ್ನು ಕೆಲವರು ಸಾರನ್ನ ಕಲೆಸಿಕೊಂಡ ಮೇಲೆ ಮಧ್ಯಕೊಂಚೂರು ಮೊಸರು ಹಾಕಿಸಿಕೊಂಡು ಕಲೆಸಿಕೊಳ್ಳುವರೂ ಇದ್ದಾರೆ. ವ್ಯಕ್ತವೂ ಅವ್ಯಕ್ತವೂ ಎರಡೂ ಬೆಸೆದುಕೊಂಡಿದೆ. ಜೀವವೂ ಆತ್ಮವೂ ಹೆಣೆದುಕೊಂಡಂತೆ. ಅಂಥ ನಿರೀಶ್ವರವಾದಿ ಎ ಎನ್‌ ಮೂರ್ತಿರಾಯರು ತಮ್ಮೂರಾದ ಅಕ್ಕಿಹೆಬ್ಬಾಳಿನ ಪ್ರಾಚೀನ ಲಕ್ಷ್ಮೀನರಸಿಂಹ ದೇಗುಲವನ್ನು ಏನೆಂದು ಬಣ್ಣಿಸಿದ್ದಾರೆಂದು ಓದಬೇಕು. ಅರ್ಧ ಸತ್ಯವನ್ನು ಹಿಡಿದುಕೊಂಡು ಪೂರ್ಣಸತ್ಯವೆಂದು ಬಿಂಬಿಸಬಾರದು. ಜನರ ನಂಬಿಕೆಗೆ ಅದಮ್ಯ ಶಕ್ತಿಯಿದೆ. ಅದನ್ನು ಅಲ್ಲಗಳೆಯುವ ಮುನ್ನ  ಒಳಗಣ್ಣು ತೆರೆದು ಲೋಕ ಗಮನಿಸಬೇಕು. ಅನುಭವ ಮತ್ತು ಅನುಭಾವ ಎರಡೂ ಇದೆ ಸಾಹಿತ್ಯದಲ್ಲಿ. ಅಪಾರ ಅನಂತ ಅಸೀಮ ವಿಶ್ವದಲಿ ನಾನೇ ವಿಶ್ವೇಶ್ವರ ಅಲ್ಲ; ಒಂದು ಧೂಳಿನ ಕಣ ಅಷ್ಟೇ. ನನಗನ್ನಿಸುವುದೇ ಸತ್ಯವಲ್ಲ; ಇನ್ನೊಬ್ಬರದು ನನಗೆ ಭ್ರಮೆ ಎನಿಸಿದರೆ ನನ್ನದೂ ಇನ್ನೊಬ್ಬರಿಗೆ ಭ್ರಮೆ ಎನಿಸುತ್ತದೆಂಬ ವಿವೇಕ ಇದ್ದವರು ಸಾರಾಸಗಟು ಹೇಳಿಕೆ ಕೊಡುವುದಿಲ್ಲ. ‘ಅನುಭವಿಸಿ ಬರೆದದ್ದು ಸಾಹಿತ್ಯ; ಉಳಿದದ್ದು ವರದಿ’ ಎಂದಿದ್ದಾರೆ ಕಾರಂತರು. ಅನುಭಾವವೂ ಅನುಭವವೇ; ಅನುಭಾವಿಗಳಿಗೆ ಅದು ಗೊತ್ತು; ನಮ್ಮಂಥ ಕಡುಲೌಕಿಕರಿಗೆಲ್ಲಿ ಗೊತ್ತು? ಹಾಗೆಂದು ಮತಧರ್ಮ, ದೇವರನ್ನು ತಮ್ಮ ರಚನೆಯಲ್ಲಿ ತರದೇ ಇರುವವರು ಕವಿಗಳಲ್ಲ ಎಂಬ ವಾಚ್ಯಾರ್ಥವಲ್ಲ. ದೈವಿಕತೆಗೆ ತುಡಿಯದ ಅಥವಾ ಅದರತ್ತ ಸಾಗದ ಬರೆಹಗಳು ಮತ್ತು ಸೃಷ್ಟಿಯ ನಿಗೂಢ ವಿದ್ಯಮಾನಗಳ ಬೆರಗನ್ನು ದಾಖಲಿಸದ ರಚನೆಗಳು ಪೇಲವ ಎಂದು. ಒಂದು ಕಾಲದಲ್ಲಿ ಒಟ್ಟೂ ಸಾಹಿತ್ಯವೇ ಮತಧರ್ಮದ ಪ್ರಚಾರಕ್ಕೆ ಮತ್ತು ಪ್ರಸಾರಕ್ಕೆ ಮೀಸಲಾಗಿತ್ತು. ಹೊಸಗನ್ನಡದ ಸಂದರ್ಭದಲ್ಲಿ ಮತಧರ್ಮಗಳ ಸ್ಥಾನದಲ್ಲಿ ಮಾನವಪರ ಚಿಂತನೆ ಮುನ್ನೆಲೆಗೆ ಬಂದಿತು. ಇದೀಗ ಅದು ಇನ್ನೊಂದು ಹೆಜ್ಜೆ ಮುಂದುವರೆದು ಒಟ್ಟೂ ಜೀವಪರ ಚಿಂತನೆಯನ್ನು ಆತುಕೊಂಡಿತು. ಇದೇನೇ ಇದ್ದರೂ ರಚನಾಕಾರರು ತಮ್ಮ ಅದಮ್ಯ ಉತ್ಸಾಹದಿಂದ ನಿರಂತರವಾಗಿ ‘ಏನು ಜೀವನದರ್ಥ; ಏನು ಪ್ರಪಂಚಾರ್ಥ?’ ಎಂದು ಬಗೆಯುತ್ತಲೇ ಹೋಗುತ್ತಾರೆ.

ಕಾರಂತರಿಗೆ ಹೆಸರು ಮತ್ತು ಪುರಸ್ಕಾರ ತಂದು ಕೊಟ್ಟ ಮೂಕಜ್ಜಿಯ ಕನಸುಗಳಲ್ಲಿ ಬಂದ ಮೂಕಾಂಬಿಕಾ ಅಜ್ಜಿಯು ಒಟ್ಟೂ ಮನುಷ್ಯ ಜೀವ ಜೀವನದ ಸಾರ್ಥಕತೆಯನ್ನು ಪ್ರಶ್ನಿಸುತ್ತಲೇ ತನ್ನದೇ ಆದ ವೇದಾಂತವನ್ನು ಪ್ರತಿಪಾದಿಸುತ್ತಾಳೆ; ಇರದುದರೆಡೆಗೆ ತುಡಿಯುವ ಮನುಷ್ಯ ಚೈತನ್ಯದ ಪರಿಧಿಗಳನ್ನು ಪರಿಚಯಿಸುತ್ತಾಳೆ. ಅಂದರೆ, ಸಾಹಿತ್ಯವು ಅಹಮಿನ ಶೋಧವಾದಾಗ ಅದು ಲೋಕಕೆ ಬೋಧೆಯಾಗುತ್ತದೆ; ಅದು ಬಿಟ್ಟು ಅಹಮಿನ ವಿಜೃಂಭಣೆಯಾದಾಗ ಸತ್ಯ ನರಳುತ್ತದೆ. ಪರಮಾತ್ಮ ತತ್ತ್ವದಲ್ಲಿ ನಂಬಿಕೆಯಿಡದ ಕವಿ ಬರೀ ಕುರುಡನಲ್ಲ; ಕಿವುಡ ಕೂಡ. ತನ್ನ ಅಂತರಂಗದ ದನಿಯನಾಲಿಸುವುದೇ ನಿಜವಾದ ಧನ್ಯತೆ. ತಾನು ಚಿತ್ರಿಸುವ ಯಾವುದೋ ಒಂದು ಪಾತ್ರದಲಿ ತನ್ನ ಅನಿಸಿಕೆ, ಅಭಿಮತಗಳನ್ನು ಗುಟ್ಟಾಗಿ ವ್ಯಕ್ತಿಸುವುದು ಆತನ ಸಾರ್ಥಕತೆ. ಮಹತ್ವದ್ದನ್ನು ಕೊಡುಗೆಯಾಗಿ ಕೊಟ್ಟ ಬಹಳ ಮಂದಿ ಸೃಷ್ಟಿಶೀಲರು ಹೇಳಿದ್ದಾರೆ: ಅದು ಬರೆದದ್ದು ನಾನಲ್ಲ; ಅದಾವುದೋ ಶಕ್ತಿ ನನ್ನಿಂದ ಬರೆಸಿದುದು ಎಂದು! ಎಷ್ಟೋ ವರುಷಗಳಾದ ಮೇಲೆ ಬರೆದವರಿಗೇ ಅಚ್ಚರಿಯಾಗುವುದುಂಟು: ಇದು ನಾನಾ ಬರೆದದ್ದು! ಎಂದು. ಅಷ್ಟಲ್ಲದೇ ಹೇಳಿದ್ದಾನೆಯೇ ಗದುಗಿನ ನಾರಣಪ್ಪ: ವೀರನಾರಾಯಣನೇ ಕವಿ; ಲಿಪಿಕಾರ ಕುವರವ್ಯಾಸ ಎಂದು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಕವಿ ಕುವೆಂಪು ಅವರು ಬರೆದದ್ದು ಎಷ್ಟೊ ನಿಜವೋ ಅದಕಿಂತ ಹೆಚ್ಚು ನಿಜ: ‘ಶ್ರೀ ಕುವೆಂಪುವ ಸೃಜಿಸಿದೀ ಮಹಾ ಛಂದಸಿನ ಮೇರುಕೃತಿ ಜಗದ್ಭವ್ಯ ದಿವ್ಯ ರಾಮಾಯಣಂ!’ ಇದರ ಹಿಂದೆಯೇ ಇರುವ ಸಾಲಿದು: ‘ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ!’ ಒಂದರ್ಥದಲಿ ಎಲ್ಲ ಕವಿಗಳೂ ಅಷ್ಟೇ: ಲೌಕಿಕದೊಳಗೆ ಅಲೌಕಿಕವನ್ನೋ ಲೋಕೋತ್ತರವನ್ನೋ ಹುದುಗಿಸಿಡುವ ಹುನ್ನಾರದಲಿ ಮಗ್ನರು; ತನ್ಮಯದಲಿ ಚಿನ್ಮಯವನು ಹುಡುಕುವ ಕುಂದಣಗಾರರು.

ಡಾ. ಹೆಚ್ ಎನ್ ಮಂಜುರಾಜ್, ಮೈಸೂರು                                

15 Responses

  1. MANJURAJ says:

    ಪ್ರಕಟಿಸಿದ್ದಕ್ಕೆ ಧನ್ಯವಾದಗಳು…

    ಇಂದು ನಮ್ಮೂರಿನ ರಥೋತ್ಸವ !
    ಎಂಥ ಯೋಗಾಯೋಗ !!

    ಜನುಮ ಸಾರ್ಥಕವಾಯಿತು;
    ಧನ್ಯೋಸ್ಮಿ .

    • Hema Mala says:

      ಹೌದೇ, ಒಳ್ಳೆಯದಾಯಿತು.

      • Rashmi Hegde says:

        ಮಾರ್ಮಿಕವಾಗಿ, ಸುಲಲಿತವಾಗಿ ವಿಷಯ ಮಂಡಿಸಿದ್ದೀರಿ ಸರ್ .
        ಚೆನ್ನಾಗಿ ಬಂದಿದೆ ಲೇಖನ . ಅಭಿನಂದನೆಗಳು .

        ಇದೇ ವಿಷಯವನ್ನ ನಾನು ಬರೆಯಬೇಕೆಂದಿದ್ದೆ . ನೀವು ಬರೆದದ್ದು ನನ್ನ ಕೆಲಸ ಕಮ್ಮಿಯಾಯ್ತು ,,

  2. ನಯನ ಬಜಕೂಡ್ಲು says:

    ಬಹಳ ಚಂದ ಬರೆಯುತ್ತೀರಿ ಸರ್ ನೀವು

    • MANJURAJ H N says:

      ಧನ್ಯವಾದ ಮೇಡಂ……….ನಿಮ್ಮಂಥವರ ತಪ್ಪದ ಪ್ರತಿಕ್ರಿಯೆಯೇ ಬರೆಹದ ಟಾನಿಕ್ಕು!
      ವಂದನೆಗಳು ಮೇಡಂ ನಿಮ್ಮ ಮೆಚ್ಚುಮಾತಿಗೆ

  3. ಶಿವ ಕಾಣದ ಕವಿ ಕುರುಡ ಎಂಥಾ ಅರ್ಥಗರ್ಭಿತವಾದ ಮಾತು..ಹಾಗೇ ಬ್ರಹ್ಮ ನಿಮ್ಮ ತಲೆಯಲ್ಲಿ ರುವ ಮೆದುಳಿಗೆ ಸಾವಕಾಶವಾಗಿ…ಬುದ್ದಿ ತುಂಬಿದ್ದಾನೆ..ಯಾವ ತರಹದ ಲೇಖನ ವಾದರೂ ಸೈ ಎನ್ನು ವಂತಿರುತ್ತದೆ..ವಿಧಾತನಿಗೆ ಧನ್ಯವಾದಗಳು ನಿಮಗೆ ಅಭಿನಂದನೆಗಳು… ಮಂಜು ಸಾರ್

    • MANJURAJ H N says:

      ಹೌದೇ ಮೇಡಂ, ನನಗೇನೂ ಗೊತ್ತಾಗುವುದಿಲ್ಲ; ಅನಿಸಿದ್ದನ್ನು ಹಾಗೇ ಟೈಪಿಸಿ ಕಳಿಸುವೆ ಅಷ್ಟೇ.
      ಪ್ರಕಟಿಸುವ ಮೇಡಂ ಔದಾರ್ಯ ಮತ್ತು ನಿಮ್ಮಂಥವರ ಪ್ರತಿಕ್ರಿಯೆಯ ವೈಢೂರ್ಯ
      ನನ್ನ ಪಾಲಿನ ಧೈರ್ಯ !! ಅಷ್ಟೇ.

      ಇಷ್ಟಕೂ ನೀವು ಅಭಿಮಾನ ಮತ್ತು ಪ್ರೀತಿಯಿಂದ ಓದುವುದು ಎಲ್ಲಕಿಂತ ಮುಖ್ಯ. ಇಂದು ಬರೆಯುವವರು
      ಹೆಚ್ಚಾಗಿದ್ದಾರೆ; ಓದುವವರು ಕಡಮೆಯಾಗಿದ್ದಾರೆ. ಜೊತೆಗೆ ಓದಿ ಪ್ರತಿಕ್ರಿಯಿಸುವವರು ಇಲ್ಲವೇ ಇಲ್ಲ
      ಎನುವಷ್ಟು ! ಅಂತಹುದರಲ್ಲಿ, ನಿಮಗೆ ಮತ್ತು ನಿಮ್ಮ ಮೆಚ್ಚುನುಡಿಗೆ ನಾ ಶರಣು. ನೀವು ದೊಡ್ಡವರು
      ನಿಮ್ಮ ಹಾರಯಿಕೆ ಮತ್ತು ಆಶೀರ್ವಾದ ನನಗಿರಲಿ. ವಂದನೆ ಮೇಡಂ.

  4. ಶಂಕರಿ ಶರ್ಮ says:

    ಅರ್ಥಗರ್ಭಿತವಾದ, ಸೊಗಸಾದ, ವಿಚಾರಪೂರ್ಣ ಲೇಖನ

  5. ಪದ್ಮಾ ಆನಂದ್ says:

    ಕನ್ನಡ ಸಾರಸ್ವತ ಲೋಕದ ಮಹಾಚೇತನಗಳ ರಸಸಾರವನ್ನು ಚಂದದ ಲೇಖನದಲ್ಲಿ ಮನದಾಳಕ್ಕೆ ಇಳಿಯುವಂತೆ ಕಟ್ಟಿಕೊಟ್ಟಿದ್ದೀರಿ, ಧನ್ಯವಾದಗಳು ಸರ್.

    • MANJURAJ H N says:

      ಒಂದು ಸಾಲಿನಲಿ ಇಡೀ ಲೇಖನದ ಸಾರವ ಅರಿತು ಅರ್ಥೈಸಿರುವಿರಿ. ಧನ್ಯವಾದ ಮೇಡಂ

  6. ಮಂಜುಳಮಿರ್ಲೆ says:

    ಲೌಕಿಕದೊಳಗೆ…ಅಲೌಖಿಕ, ಚಿನ್ಮಯದಿ ತನ್ಮಯ…. ಅನುಭಾವ..ಅನುಭವ…ಅಧ್ಯಾತ್ಮಿಕ ಅರಿವಿನೆಡೆಗೆ ಕೊಂಡೊಯ್ದ ಲೇಖನ. ಅಭಿನಂದನೆಗಳು ಸರ್

  7. ನಾಗರಾಜ್ says:

    ಸೊಗಸಾದ ಚಿಂತನಶೀಲ ಲೇಖನ. ಕನ್ನಡದ ಕುವೆಂಪು ಯುಗದ ಮೇರು ಕವಿವರ್ಯರ ಆಂತರಂಗದ ಚಿಂತನೆಗಳನ್ನು ಚನ್ನಾಗಿ ಬಣ್ಣಿಸಿದ್ದೀರಿ.
    ನಿಮಗೆ ಧನ್ಯವಾದಗಳು.

  8. ಕುಂದಣ ನಾಗೇಂದ್ರ says:

    ಕೆಂಪು, ಹಳದಿ, ಬಿಳಿ ಎಂದು ನಾನಾ ಹೂಬಣಗಳನ್ನು ವಿಂಗಡಿಸಿ : ನಾನು ಕೆಂಪು ಹೂವಿನ ಮಾರಿ ಮಧು ಮಾತ್ರ ಹೀರುವೆನೆಂದು ಜೇನುಹುಳು ಹೇಳಿಯಾವೆ? ಇಂತು ನಾನಾ ಪಂಥಗಳ ಬಣ್ಣ ಮೆತ್ತಿಕೊಂಡು ಗಾಳಿ ಬಂದ ಕಡೆ ತೂರಿಕೊಳ್ಳುವ ‘ಬಣ ಕವಿ ಬಣವೆಗಳ ಜೊಳ್ಳ ತೂರಿ’ ರಸಗಟ್ಟಿ ಕಾಳುಗಳ ಹೆಕ್ಕಿ ‘ಕುಂದಣ ಕ್ಕಿಟ್ಟರುವಿರಿ

  9. SHARANABASAVEHA K M says:

    ದ ರಾ ಬೇಂದ್ರೆ ಹಾಗೂ ಕುವೆಂಪು ಅವರನ್ನು ಹೋಲಿಸುತ್ತಾ….ಅವರುಗಳ ವಿಶೇಷತೆಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಸರ್….. ದೈವವನ್ನು ಕಾಣದವನಿಗೆ ಕವಿತ್ವವು ಒಲಿಯುವುದಿಲ್ಲ….ಎನ್ನುವ ಮಾತು ಗುಂಯ್ ಗುಡುತ್ತಿದೆ….ಅದಕ್ಕೆ ಏನು ಎಲ್ಲಾ ಆ ಭಗವಂತನ ದಯೆ ಎನ್ನುವುದು…..

Leave a Reply to Hema Mala Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: