ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 18
ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 5: ಹೋಯಿ ಆನ್ , ಲಾಂಟರ್ನ್ ಸಿಟಿ …. 19/09/2024
ನಾವು ‘ಬಾ ನಾ ಹಿಲ್ಸ್’ ನೋಡಿ, ಅಲ್ಲಿಯೇ ಊಟ ಮುಗಿಸಿದ್ದಾಯಿತು. ಆಮೇಲೆ ಇನ್ನೊಂದು ಬದಿಯ ಕೇಬಲ್ ಕಾರ್ ನಲ್ಲಿ ಬಾ ನಾ ಹಿಲ್ಸ್ ನ ಕೆಳಗೆ ಬಂದೆವು. ಇನ್ನು ಸುಮಾರು ಒಂದು ಘಂಟೆ ಪ್ರಯಾಣಿಸಿ ಅಂದಾಜು 50 ಕಿಮೀ ದೂರದ ‘ ಹೋಯಿ ಆನ್’ ( Hoi An) ಪಟ್ಟಣಕ್ಕೆ ಹೋಗುತ್ತೇವೆ ಎಂದ ಮಾರ್ಗದರ್ಶಿ ಟೋಮಿ. ನನಗಂತೂ ಇಲ್ಲಿಯ ಜನರ ಅಥವಾ ಊರಿನ ಹೆಸರುಗಳು ಚಿಕ್ಕವಾದರೂ ಗೊಂದಲ ಮೂಡಿಸುತ್ತಿದ್ದುವು. ನಾಲ್ಕು ದಿನಗಳ ಹಿಂದೆ ನಾವಿದ್ದ ನಗರ ಹನೋಯಿ ( Hanoi). ಹನೋಯಿ ಅಂದರೆ ‘ಹ ಎಂಬ ಹೆಸರಿನ ನದಿ ಹಾದುಹೋಗುವ ನಗರ ‘ ಎಂಬ ಅರ್ಥವಂತೆ. ಇನ್ನು ‘ಹೋಯಿ ಆನ್’ ನಗರಕ್ಕೆ ಪ್ರಯಾಣಿಸುತ್ತಿದ್ದೇವೆ. ‘ಹೋಯಿ ಆನ್ ‘ ಅಂದರೆ ‘ ಶಾಂತಿಯುತವಾದ ಭೇಟಿ‘ ಎಂಬ ಅರ್ಥವಂತೆ. ಡನಾಂಗ್ ನಗರದ ರಸ್ತೆಯನ್ನು ದಾಟಿ, ಗ್ರಾಮಾಂತರ ಪ್ರದೇಶವನ್ನು ಹಾದು ಸಂಜೆಗತ್ತಲಾಗುವಾಗ ‘ಹೋಯಿ ಆನ್’ ನಗರವನ್ನು ತಲಪಿದೆವು. ಇಲ್ಲಿ ಪ್ರಮುಖ ಆಕರ್ಷಣೆಯಾಗಿ, ಸಾಂಪ್ರದಾಯಿಕ ಬಿದಿರಿನ ಲಾಟೀನುಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಬಳಸಿ ನಗರಿಯನ್ನು ಸಿಂಗರಿಸಿದ ಕಾರಣ ಲಾಂಟಾರ್ನ್ ಸಿಟಿ ಎಂಬ ಅನ್ವರ್ಥನಾಮವೂ ಇದೆ.
ಚರಿತ್ರೆಯ ಪ್ರಕಾರ, ‘ಹೋಯಿ ಆನ್’ ಪ್ರಾಚೀನ ವಿಯೆಟ್ನಾಂನ ಬಂದರು ನಗರಿ. ಎರಡನೆಯ ಶತಮಾನದಲ್ಲಿ ಇಲ್ಲಿ ಹಿಂದೂ ಸಂಸ್ಕೃತಿಯ ಛಾಯೆಯುಳ್ಳ ಚಂಪಾ ರಾಜ್ಯವಿತ್ತು. ಈ ರಾಜವಂಶವು ಕಟ್ಟಿಸಿದ ಪ್ರಾಚೀನ ಕೆಲವು ದೇಗುಲಗಳು ಹಾಗೂ ಸೇತುವೆಗಳು ಕೂಡಾ ಇಲ್ಲಿ ಇವೆ. ಚೀನಾ, ಜಪಾನ್ ಹಾಗೂ ಯುರೋಪಿನ ಪ್ರಾಚೀನ ವರ್ತಕರು ಇಲ್ಲಿ 15-19 ಶತಮಾನದ ಅವಧಿಯಲ್ಲಿ ಇಲ್ಲಿ ವ್ಯಾಪಾರ ವಹಿವಾಟು ನಡೆಸುತಿದ್ದರು. ಚೀನಾದಿಂದ ಸಿಲ್ಕ್ ಬಟ್ಟೆಯು ಪಾಶ್ಚಾತ್ಯ ದೇಶಗಳಿಗೆ ಈ ಬಂದರಿನ ಮೂಲಕ ರವಾನೆಯಾಗುತ್ತಿತ್ತು. ವಿವಿಧ ದೇಶಗಳ ವರ್ತಕರು ಇಲ್ಲಿ ವಾಸವಾಗಿದ್ದ ಕಾರಣ, ಚೀನಾ, ಜಪಾನ್, ಇಂಡೋನೇಶ್ಯಾ ಹಾಗೂ ಯುರೋಪಿನ ಸಮ್ಮಿಶ್ರ ವಾಸ್ತುಶಿಲ್ಪವುಳ್ಳ ಮನೆಗಳು ಅಲ್ಲಿ ನಿರ್ಮಿಸಲ್ಪಟ್ಟವು. ಈಗಲೂ ಕೆಲವು ಪ್ರಾಚೀನ ಕಟ್ಟಡಗಳನ್ನು ಉಳಿಸಿಕೊಂಡಿರುವ ಹೋಯಿ ಆನ್ ನಗರವು ಯುನೆಸ್ಕೋ ಪಾರಂಪರಿಕ ತಾಣವೆಂದು ಗುರುತಿಸಲ್ಪಟ್ಟಿದೆ.
ನಾವು ಹೋಯಿ ಆನ್ ತಲಪಿದಾಗ ಸಂಜೆ 0530 ಗಂಟೆ ಆಗಿತ್ತು. ನಮ್ಮ ಮಾರ್ಗದರ್ಶಿ ಟೋಮಿ, ಕಾರನ್ನು ಒಂದೆಡೆ ನಿಲ್ಲಿಸಿ ನಮ್ಮನ್ನು ಕಾಲ್ನಡಿಗೆಯಲ್ಲಿ ನಗರ ಸುತ್ತಲು ಕರೆದೊಯ್ದ.ಇದು ಪ್ರಾಚೀನ ಹೋಯಿ ಆನ್ ನಗರಿ ಎಂದ. ಇಲ್ಲಿ ವಾಹನಕ್ಕೆ ಪ್ರವೇಶವಿಲ್ಲ. ಪ್ರವೇಶಕ್ಕೆ ಟಿಕೆಟ್ ಇದೆ. ಹಲವಾರು ಮ್ಯೂಸಿಯಂಗಳು, 200 ವರ್ಷಕ್ಕೂ ಹಿಂದಿನ ಕಟ್ಟಡಗಳು ಇವೆಯಂತೆ. ಕರಕುಶಲ ವಸ್ತುಗಳು ಹಾಗೂ ವಿವಿಧ ಗೃಹೋಪಯೋಗಿ ವಸ್ತುಗಳ ಅಂಗಡಿಗಳ ಸಾಲೇ ಇದೆ. ಆಕಾಶಬುಟ್ಟಿಯನ್ನು ಹೋಲುವ ವಿವಿಧ ವಿನ್ಯಾಸಗಳ ಲಾಟೀನುಗಳನ್ನು ತಯಾರಿಸುವವರು ರಸ್ತೆಯಲ್ಲಿ ಕಾಣಸಿಗುತ್ತಾರೆ. ಆಸಕ್ತಿ ಇದ್ದರೆ ನಾವೂ ಲಾಟೀನು ಮಾಡಲು ಕಲಿಯಬಹುದು. ಇಲ್ಲಿ ಸ್ವಲ್ಪ ಹೆಚ್ಚಿನ ಕಾಲಾವಕಾಶ ಬೇಕಿತ್ತು ಅಂತ ನನಗೆ ಅನಿಸಿತು.
ಗಲ್ಲಿಗಳಂತೆ ಇದ್ದ ರಸ್ತೆಗಳು ಸ್ವಚ್ಚವಾಗಿತ್ತು. ಅಲ್ಲಲ್ಲಿ ಚಿಕ್ಕ , ದೊಡ್ಡ ಮನೆಗಳಿದ್ದುವು. 5 ನಿಮಿಷ ನಡೆದು ಸ್ಥಳೀಯ ಪಾರಂಪರಿಕ ಮ್ಯೂಸಿಯಂಗೆ ತಲಪಿದೆವು. ಸ್ಥಳೀಯ ‘ಆಸೋಯ್’ ಉಡುಗೆ ತೊಟ್ಟಿದ್ದ ಚೆಂದದ ಯುವತಿಯರು ನಮಗೆ ಅಲ್ಲಿದ್ದ ಕರಕುಶಲ ವಸ್ತುಗಳ ನಿರ್ಮಾಣದ ಪ್ರಾತ್ಯಕ್ಷಿಕೆ ಕೊಟ್ಟರು. ಒಂದು ಹಾಲ್ ನಲ್ಲಿ ರೇಷ್ಮೆಹುಳದ ಮೊಟ್ಟೆಯಿಂದ ಹಿಡಿದು , ಹಿಪ್ಪುನೇರಳೆ ಸೊಪ್ಪು ತಿನ್ನುವ ರೇಷ್ಮೆ ಹುಳ ತನ್ನ ಸುತ್ತಲೂ ರೇಷ್ಮೆಗೂಡು ಕಟ್ಟಿಕೊಳ್ಳುವ ವಿವಿಧ ಹಂತಗಳಿದ್ದುವು. ನಂತರ ಕುದಿಯುವ ನೀರಿನಲ್ಲಿ ರೇಷ್ಮೆಗೂಡುಗಳನ್ನು ಅದ್ದಿ, ಅದರಿಂದ ದಾರ ತೆಗೆದು, ಆಮೇಲೆ ಸಿಲ್ಕ್ ದಾರಗಳಿಗೆ ಬಣ್ಣ ಕೊಡುವುದು, ಮಗ್ಗದಲ್ಲಿ ನೇಯುವುದು, ಸಿಲ್ಕ್ ನ ವಿವಿಧ ಉಡುಪುಗಳನ್ನು ತಯಾರಿಸುವುದು…ಇತ್ಯಾದಿ ಚಿತ್ರಣಗಳಿದ್ದುವು. ಇನ್ನೊಂದು ಹಾಲ್ ನಲ್ಲಿ ಬಿದಿರನ್ನು ಬಳಸಿ ತಯಾರಿಸಲಾಗುವ ಬ್ಯಾಗ ಗಳು, ಟೋಪಿಗಳು….ಮೊದಲಾದ ವಿವಿಧ ಉತ್ಪನ್ನಗಳ ತಯಾರಿಕೆಯನ್ನು ತೋರಿಸಿದರು. ಮತ್ತೊಂದು ಹಾಲ್ ನಲ್ಲಿದ್ದ ಸಿಬ್ಬಂದಿ ವರ್ಣಚಿತ್ರಗಳು, ತೈಲ ಚಿತ್ರಗಳು ಇತ್ಯಾದಿ ಮಾಡಿ ತೋರಿಸಿದರು. ಒಟ್ಟಿನಲ್ಲಿ ಎಲ್ಲವೂ ಸೊಗಸಾಗಿದ್ದುವು. ಅದರ ಪಕ್ಕದಲ್ಲಿ ನಮಗೆ ಕರಕುಶಲ ವಸ್ತುಗಳ ಖರೀದಿಗೆ ಅವಕಾಶವಿತ್ತು. ಆ ವಸ್ತುಗಳ ಬೆಲೆ ಹೊರಗಡೆಯ ಅಂಗಡಿಗಳಿಗಿಂದ ಬಹಳ ದುಬಾರಿ ಇದೆ ಎನಿಸಿತು.
ಅಷ್ಟರಲ್ಲಿ ಕತ್ತಲಾಗಿತ್ತು. ಪ್ರತಿದಿನ ಸಂಜೆ ‘ಹೋಯಿ ಆನ್’ ನ ನದಿಯ ಪರಿಸರವನ್ನು ‘ ಲ್ಯಾಂಟರ್ನ್ ಸಿಟಿ’ ಎಂದು ಸಿಂಗರಿಸುತ್ತಾರೆ. ಅಲ್ಲಿದ್ದ ಎಲ್ಲಾ ಕಟ್ಟಡಗಳಲ್ಲಿ, ಮರಗಳಲ್ಲಿ, ರಸ್ತೆಯಲ್ಲಿ ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಹಾಗೂ ವಿಭಿನ್ನ ವಸ್ತುಗಳ ಹೊದಿಕೆಯುಳ್ಳ ಲಾಟೀನುಗಳನ್ನು ಅಥವಾ ಆಕಾಶದೀಪಗಳನ್ನು ತೂಗು ಹಾಕಿದ್ದರು. ಕೆಲವು ಪೇಪರ್ ನ ಹೊದಿಕೆಯುಳ್ಳ ದುಂಡಗಿನ ಲಾಟೀನುಗಳಾದರೆ ಇನ್ನು ಕೆಲವು ಶಂಕುವಿನಾಕಾರ ಬಿದಿರಿನ ಕಡ್ಡಿಯ ಲಾಟೀನುಗಳು. ಸುತ್ತುಮುತ್ತಲಿನ ಪರಿಸರದಲ್ಲಿ ಯಾವುದೇ ವಾಹನಕ್ಕೆ ಅವಕಾಶವಿಲ್ಲ. ಅಲ್ಲಿ ಹಲವಾರು ಮಂದಿ ನಮ್ಮ ಗಮನ ಸೆಳೆಯುತ್ತಾ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಾರೆ. ಅಲ್ಲಿ ಅಡ್ಡಾಡುತ್ತಿದ್ದ ಹೆಚ್ಚಿನವರೂ ಪ್ರವಾಸಿಗರೇ ಇರಬೇಕು. ನಮಗೆ ಗೊತ್ತಿರುವ ಹಾಗೂ ಗೊತ್ತಿಲ್ಲದ ಹಲವಾರು ಸ್ವದೇಶಿ, ವಿದೇಶಿ ಭಾಷೆಗಳು ನಮ್ಮ ಕಿವಿಗೆ ಬೀಳುತ್ತಿದ್ದುವು. ಒಟ್ಟಿನಲ್ಲಿ, ಸುಮಾರಾಗಿ ಮೈಸೂರಿನ ದಸರಾ ಸಮಯದಲ್ಲಿ ‘ಸಯ್ಯಾಜಿ ರಾವ್ ‘ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಹೋಗುವ ಸಂಭ್ರಮದಂತೆ. ವ್ಯತ್ಯಾಸವೇನೆಂದರೆ, ಮೈಸೂರು ದಸರಾದ ಬೆಳಕಿನ ಅಲಂಕಾರದಲ್ಲಿ ವಿದ್ಯುದ್ದೀಪಗಳ ಜಗಮಗ ಆಧುನಿಕತೆ ಇದೆ ಹಾಗೂ ಆಸುಪಾಸಿನಲ್ಲಿ ನದೀತೀರವಿಲ್ಲ.
ಸಣ್ಣದಾದ ಸೇತುವೆಯೊಂದನ್ನು ದಾಟಿದೆವು . ಆ ಸೇತುವೆಯನ್ನು 17 ನೆ ಶತಮಾನದಲ್ಲಿ ‘ಥು ಬಾನ್’ ( Thu Bon) ನದಿಗೆ ಅಡ್ಡವಾಗಿ, ಜಪಾನಿನ ವರ್ತಕರು ಕಟ್ಟಿಸಿದರಂತೆ. ಆಮೇಲೆ ಹಲವಾರು ಬಾರಿ ಮರುನಿರ್ಮಾಣಕ್ಕೊಳಪಟ್ಟಿದೆ. ಈಗ ಪರಂಪರೆಗೆ ಸೇರಿದ ಈ ಸೇತುವೆಯನ್ನು ಜಪಾನೀಸ್ ಬ್ರಿಡ್ಜ್ ಎಂದು ಕರೆಯುತ್ತಾರೆ. ಸೇತುವೆಯನ್ನು ದಾಟಿ ಕೆಲವು ಮೀಟರ್ ಗಳಷ್ಟು ನಡೆದಾಗ, ‘ ಥು ಬಾನ್’ ನದಿಯ ಉಪನದಿಯಾದ ‘ ಹೊವಾಯಿ’ (Hoai) ನದಿದಂಡೆಯನ್ನು ತಲಪುತ್ತೇವೆ. ಆ ನದಿಯಲ್ಲಿ ಸುಮಾರು ಒಂದು ಕಿಮೀ ಉದ್ದದ ದೋಣಿವಿಹಾರ ಪ್ರಮುಖ ಪ್ರವಾಸಿ ಆಕರ್ಷಣೆ.
ನಮ್ಮ ಮಾರ್ಗದರ್ಶಿ ಟೋಮಿ, ಅಲ್ಲಿದ್ದ ಕೌಂಟರ್ ನಲ್ಲಿ ಮಾತನಾಡಿ ನಮಗಾಗಿ ದೋಣಿಯ ಟಿಕೆಟ್ ಖರೀದಿಸಿದ. ಒಬ್ಬರಿಗೆ 1,50,000/- ಡಾಂಗ್ (ಸುಮಾರು ರೂ.500/-) ಬೆಲೆ . ಇಬ್ಬರು ಕೂರಬಹುದಾದ ಈ ದೋಣಿಗಳನ್ನು ಹುಟ್ಟು ಹಾಕುತ್ತಾ ನಡೆಸುತ್ತಾರೆ. ಪ್ರತಿ ದೋಣಿಯಲ್ಲಿಯೂ ಎರಡು ದುಂಡನೆಯ ಲಾಟೀನುಗಳಿದ್ದುವು. ಇವುಗಳಿಗೆ ಲಾಟೀನು ದೋಣಿಗಳು (Lantern Boats) ಎಂಬ ಹೆಸರು. ಒಬ್ಬ ದೋಣಿಯವರಿಗೆ ನಮ್ಮನ್ನು ಪರಿಚಯಿಸಿ, ನೀವು ದೋಣಿವಿಹಾರ ಮುಗಿಸಿ ಬನ್ನಿ, ತಾನು ಅಲ್ಲಿಯೇ ಇರುವೆ ಅಂದ. ನಾವು ದೋಣಿಯನ್ನೇರಿದೆವು. ದೋಣಿ ನಡೆಸುವವರು ನಮ್ಮಿಬ್ಬರಿಗೂ ಒಂದೊಂದು ಹೂವಿನಾಕಾರದ ಕಾಗದದ ದೋಣಿ (Flower Lanterns ) , ಪುಟ್ಟ ಮೇಣದ ಬತ್ತಿಯುಳ್ಳ ಹಣತೆ ಹಾಗೂ ಬೆಂಕಿಪೊಟ್ಟಣ ಕೊಟ್ಟು, ಇದನ್ನು ಉರಿಸಿ ನೀರಿನಲ್ಲಿ ತೇಲಿ ಬಿಡಿ ಎಂಬಂತೆ ವಿಯೆಟ್ನಾಂ ಭಾಷೆ ಹಾಗೂ ಸಂಜ್ಞೆಯ ಮೂಲಕ ತಿಳಿಸಿದರು.
ಅದಾಗಲೇ ಹಲವಾರು ಪ್ರವಾಸಿಗರು ತೇಲಿ ಬಿಟ್ಟ ಕಾಗದದ ಹೂವಿನ ದೀಪಗಳು ಜ್ವಲಿಸುತ್ತಾ ನೀರಿನಲ್ಲಿ ತೇಲುತ್ತಿದ್ದುವು. ನಾವೂ ಮೇಣದ ಬತ್ತಿ ಹಚ್ಚಿ ಕಾಗದದ ದೀಪ ತೇಲಿ ಬಿಟ್ಟೆವು. ತಕ್ಷಣ ನನಗೆ ಕೆಲವು ವರ್ಷಗಳ ಹಿಂದೆ, ಕಾಶಿ, ಹರಿದ್ವಾರಗಳಲ್ಲಿ ಗಂಗಾರತಿಯ ಸಮಯದಲ್ಲಿ ದೀಪವನ್ನು ಉರಿಸಿ ಗಂಗೆಯಲ್ಲಿ ತೇಲಿ ಬಿಟ್ಟಿರುವುದು ನೆನಪಾಯಿತು. ದೇಶ, ಭಾಷೆ ಯಾವುದಾದರೇನು, ಪ್ರಕೃತಿಯನ್ನು ಪೂಜಿಸುವ ಸಂಸ್ಕೃತಿಗೆ ಸಮಾನ ಭಾವ ಇದೆ ಅಲ್ಲವೇ? ನಮ್ಮ ದೇಶದ ಪಾವನಗಂಗೆಯ ಆಶೀರ್ವಾದವೇ ಇರಬೇಕು, ಇಲ್ಲದಿದ್ದರೆ, ಅಪರಿಚಿತ ಜಾಗದಲ್ಲಿ ಅನಿರೀಕ್ಷಿತವಾಗಿ ‘ಹೊವಾಯಿ’ ನದಿಗೆ ದೀಪಾರತಿ ಅರ್ಪಿಸುವ ಅವಕಾಶ ನನಗೆ ಲಭಿಸುತಿತ್ತೇ ಅನಿಸಿ ಮನಸ್ಸು ಪ್ರಫುಲ್ಲವಾಯಿತು. ದೋಣಿಯಾನ ಸುಮಾರು ಇಪ್ಪತ್ತು ನಿಮಿಷಗಳ ಕಾಲು ಮುಂದುವರಿಯಿತು. ನದಿಯ ಇಕ್ಕೆಲಗಳ ಕಟ್ಟಡಗಳಲ್ಲಿ ತೂಗಾಡುವ ಬಣ್ಣದ ಲಾಟೀನುಗಳು, ವಿವಿಧಾಕಾರದ ಆಕಾಶದೀಪಗಳು, ದೀಪ ಮಾಲೆಗಳು, ಇವೆಲ್ಲವೂ ನದೀನೀರಿನಲ್ಲಿ ಪ್ರತಿಫಲಿಸಿ, ಬೆಳಕಿನ ಹಬ್ಬವನ್ನು ಸೃಷ್ಟಿಸಿದ್ದುವು.
ತಂಪಾದ ವಾತಾವರಣದಲ್ಲಿ ಬೆಳಕಿನ ಹಬ್ಬದ ಸೊಬಗನ್ನು ಕಣ್ತುಂಬಿಸಿಕೊಂಡು ವಾಪಸ್ಸಾದೆವು. ಆಮೇಲೆ ರಾತ್ರಿಯೂಟಕ್ಕೆ ಸಮೀಪದಲ್ಲಿದ್ದ ಭಾರತೀಯ ರೆಸ್ಟಾರೆಂಟ್ ಹೋಟೆಲ್ ‘ಮಾಝಿ’ ಎಂಬಲ್ಲಿಗ್ಗೆ ಕರೆದೊಯ್ದ. ಟೋಮಿಗೂ ನಮ್ಮ ಜೊತೆಯೇ ಊಟ ಮಾಡಿ ಎಂದೆವು. ಇಲ್ಲ, ನಾನು ಸ್ಥಳೀಯ ರೆಸ್ಟಾರೆಂಟ್ ಗೆ ಹೋಗಿ ಬರುವೆ ಎಂದ . ಎಂದಿನಂತೆ ಉತ್ತರ ಭಾರತೀಯ ಶೈಲಿಯ ಆಲೂ ಪರಾಠಾ, ಎರಡು ವಿಧದ ಪಲ್ಯಗಳು, ಅನ್ನ, ದಾಲ್, ಸಿಹಿ, ಹಪ್ಪಳ , ಮೊಸರು ಇದ್ದ ಊಟವನ್ನು ಬಡಿಸಿದರು. ನಮ್ಮ ಬ್ಯಾಗ್ ನಿಂದ ಉಪ್ಪಿನಕಾಯಿ ಬಾಟಲ್ ಕೂಡಾ ಹೊರಗೆ ಬಂತು. ಅಚ್ಚುಕಟ್ಟಾಗಿ ಊಟ ಮಾಡಿದೆವು. ಆ ಹೋಟೆಲ್ ನ ಮಾಲಿಕರು ನಗುನಗುತ್ತಾ ಸ್ವಾಗತಿಸಿ ನಮ್ಮನ್ನು ಎಲ್ಲಿಯವರು ಎಂದು ಕೇಳಿ ಹಿಂದಿ ಭಾಷೆಯಲ್ಲಿ ಮಾತನಾಡಿಸಿದರು. ಅವರು ಹಾಗೂ ಅಲ್ಲಿದ್ದ ಸಿಬ್ಬಂದಿಗಳು ಅಸ್ಸಾಂನವರಂತೆ. ಊಟದ ನಂತರ ಮಾಲೀಕರಿಗೆ ವಂದಿಸಿ, ಕಾರಿನಲ್ಲಿ ಅರ್ಧ ಗಂಟೆ ಪ್ರಯಾಣಿಸಿ ನಾವು ಉಳಕೊಳ್ಳಲಿರುವ ‘ಸಾಂತಾ ಲಕ್ಸುರಿ ಹೋಟೆಲ್’ ಗೆ ತಲಪಿದೆವು.
ಮಾರ್ಗದರ್ಶಿ ಟೋಮಿ ಕಾರಿನಿಂದ ಕೆಳಗಿಳಿದು, ನಡುಬಾಗಿ ವಂದಿಸಿ ‘ನೌ ಅವರ್ ಪ್ರೋಗ್ರಾಮ್ ಈಸ್ ಓವರ್. ಎಂಜಾಯ್ ಯುವರ್ ರೆಸ್ಟ್ ಆಫ್ ದ ಟ್ರಿಪ್ .ಥ್ಯಾಂಕ್ಯೂ.’ ಎಂದ. ಅವನ ಸ್ನೇಹಮಯ ವ್ಯಕ್ತಿತ್ವ ನಮಗೂ ಇಷ್ಟವಾಯಿತೆಂದೂ, ಎರಡು ದಿನದ ಒಡನಾಟದಲ್ಲಿ ನಮಗೂ ಸಾಕಷ್ಟು ವಿಚಾರಗಳು ತಿಳಿದುವೆಂದೂ ಹೇಳಿ ಸ್ವಲ್ಪ ಹಣವನ್ನು ಟಿಪ್ಸ್ ಕೊಟ್ಟೆವು. ನಗುನಗುತ್ತಾ ಸ್ವೀಕರಿಸಿ, ಪುನ: ನಡುಬಾಗಿ ವಂದಿಸಿದ. ಹಾಗೆಯೇ, ‘ ಯು ಗೆಟ್ ಮ್ಯಾರಿ ಸೂನ್, ಡೋಂಟ್ ಫೊರ್ ಗೆಟ್ ಟು ಇನ್ವೈಟ್ ಅಸ್ , ವಿ ವಿಲ್ ಕಮ್ ಒಕೆ ‘ ಎಂದು ಅಧಿಕಾರಯುತವಾಗಿ ಹಾರೈಸಿ ಬೀಳ್ಕೊಂಡೆವು, ಅಪ್ಪಟ ಭಾರತೀಯ ಸೋದರತ್ತೆಯರಂತೆ! ‘ಶ್ಯೂರ್..ಹ್ಹಿ..ಹ್ಹಿ’ ಎಂದು ನಗುತ್ತಾ ಕೈಬೀಸಿ ಕಾರಿನಲ್ಲಿ ಹೊರಟ.
ಹೀಗೆ, ವಿಯೆಟ್ನಾಂನ ಮಧ್ಯಭಾಗದಲ್ಲಿರುವ ಡನಾಂಗ್ ನಲ್ಲಿ ನಮ್ಮ ಎರಡು ದಿನಗಳು ಸೊಗಸಾಗಿ ಕಳೆದುವು. ಇನ್ನು ನಮ್ಮ ರೂಮಿಗೆ ಹೋಗಿ , ಲಗೇಜು ಸಿದ್ಧಪಡಿಸಿ ನಾಳೆ ವಿಯೆಟ್ನಾಂನ ದಕ್ಷಿಣ ಭಾಗದಲ್ಲಿರುವ ‘ ಹೊಚು ಮಿನ್ ಸಿಟಿ’ ಗೆ ಹೊರಡಬೇಕೆಂಬ ಮಾತುಕತೆಯೊಂದಿಗೆ ನಿದ್ರೆಗೆ ಶರಣಾದೆವು.
ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41988
(ಮುಂದುವರಿಯುವುದು)
–ಹೇಮಮಾಲಾ.ಬಿ, ಮೈಸೂರು
ಎಂದಿನಂತೆ ಪ್ರವಾಸ ಕಥನ ಓದಿಸಿಕೊಂಡುಹೋಯಿತು… ಪೂರಕ ಚಿತ್ರಗಳು ಮನಸೆಳೆದವು..ನಿರೂಪಣೆ ಸೂಪರ್.
ಗೆಳತಿ..
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು
ಹೋಯಿ ಆನ್, ಲಾಂಟರ್ನ್ ಸಿಟಿಗಳ ಶಾಂತಿಯುತ ಭೇಟಿ ಮುಗಿಸಿ, ಥು ಬಾನ್ ನದಿಯನ್ನು ದಾಟಿ, ಹೊವಾಯಿ ನದಿ ವಿಹಾರಗೈದು, ಟೋಮಿಯ ಶೀಘ್ರ ವಿವಾಹಕ್ಕೆ ಹಾರೈಸಿ ದಿನದ ಪ್ರವಾಸವನ್ನು ಸಂಪನ್ನಗೊಳಿಸಿದ ಸವಿವರ ಕಥನವು ಸೂಕ್ತ ಚಿತ್ರಗಳೊಂದಿಗೆ ಅತ್ಯಂತ ಸುಂದರ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು
Beautiful
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು
ವಿಯಟ್ನಾಂ, ಕಾಂಬೋಡಿಯಾ ಪ್ರವಾಸ ಕಥನದ ಮಧ್ಯೆ ತೂರಿಬಂದ ಗಂಗಾರತಿ ಹಾಗೂ “ಕಂಡಿದ್ದಲ್ಲ, ಕೇಳಿದ್ದಲ್ಲ, ಗಂಡಿನ ಸೋದರತ್ತೆ” ಯರಾದ ಪ್ರಸಂಗ ಕಚಗುಳಿಯಿಟ್ಟು ಮುದ ನೀಡಿತು.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು
ನಾನು ಮತೊಮ್ಮೆ ಎಲ್ಲ ಕಂಡು ಅನುಭವಿಸಿದಂತಯಿತು.