ಕುಂಭದ ಕರೆ ಕೇಳಿ..
ಜನವರಿ 13,2025 ರಂದು ಪ್ರಯಾಗರಾಜ್ ನಲ್ಲಿ ಕುಂಭಮೇಳ ಆರಂಭವಾಗಿದ್ದಾಗ, ನಮಗೆ ಹಿಂದೊಮ್ಮೆ ಪ್ರಯಾಗದ ತ್ರಿವೇಣಿ ಸಂಗಮಕ್ಕೆ ಹೋಗಿ ಆಗಿದ್ದ ಕಾರಣ ಈ ಜನಜಂಗುಳಿಯಲ್ಲಿ ಹೋಗುವುದು ಬೇಡ, ‘ಜನ ಮರುಳೋ ಜಾತ್ರೆ ಮರುಳೋ’ ಎಂಬ ಅಭಿಪ್ರಾಯದಲ್ಲಿದ್ದೆವು. ನೋಡನೋಡುತ್ತಾ, ಅಕ್ಕಪಕ್ಕದವರು ಕುಂಭಮೇಳಕ್ಕೆ ಹೋಗುತ್ತಾರೆಂಬ ಸುದ್ದಿ ಕಿವಿಗೆ ಬೀಳತೊಡಗಿತು. ಒಂದೆರಡು ವಾರ ಆಗುವಷ್ಟರಲ್ಲಿ ‘ ನಾವೂ ಹೊರಡುವುದಾ’ ಎಂಬ ಭಾವನೆ ಬಲಿಯತೊಡಗಿತು. ಇನ್ನೆರಡು ದಿನಗಳಲ್ಲಿ ‘ಟ್ರಾವೆಲ್ ಫಾರ್ ಯು’ ಸಂಸ್ಥೆಯ ಮೂಲಕ ಪ್ರಯಾಗ-ಕಾಶಿ-ಅಯೋಧ್ಯೆ ಭೇಟಿಗೆ ಟಿಕೆಟ್ ಬುಕ್ ಮಾಡಿಯೂ ಆಯಿತು. ನಾವೂ ಕೋಟಿ ಕೋಟಿ ‘ಮರುಳ’ರಲ್ಲಿ ಒಬ್ಬರಾದೆವು ಅಂತ ಹೆಮ್ಮೆಯಿಂದಲೇ ಹೇಳುತ್ತೇನೆ. ಯಾಕೆಂದರೆ ಕುಂಭಮೇಳವೆಂಬ ಅದ್ಭುತವಾದ ವ್ಯವಸ್ಥೆ ನೋಡಿಯೇ ಪುನೀತಳಾದೆ ಅನಿಸಿತು.
ಫೆಬ್ರವರಿ 13,2025 ರಂದು ಮೈಸೂರಿನಿಂದ ಬೆಂಗಳೂರಿನ ವಿಮಾನನಿಲ್ದಾಣಕ್ಕೆ ಫ್ಲೈಬಸ್ ನಲ್ಲಿ ಹೊರಟೆವು. ಇದೇ ಗುಂಪಿನಲ್ಲಿ, ಬೇರೆ ಊರಿನಲ್ಲಿ ವಾಸವಾಗಿರುವ ನಮ್ಮ ಬಂಧುಗಳು ಹಾಗೂ ಸ್ನೇಹಿತರೂ ಇದ್ದರು. ಬೆಳಗ್ಗೆ 0630 ಗಂಟೆಗೆ ಬೆಂಗಳೂರಿನಿಂದ ಹೊರಟ ವಿಮಾನ 0930 ಕ್ಕೆ ವಾರಣಾಸಿ ತಲಪಿತು. ಅಲ್ಲಿ ‘ಟ್ರಾವೆಲ್ ಫಾರ್ ಯು’ ಸಂಸ್ಥೆಯ ಶ್ರೀ ಪ್ರದೀಪ್ ಆಚಾರ್ಯ ಮತ್ತು ಶ್ರೀ ಪ್ರಶಾಂತ್ ಅವರು ನಮ್ಮನ್ನು ಸ್ವಾಗತಿಸಿದರು. ಆಗಲೇ ಬೆಂಗಳೂರಿನಿಂದ ಬಂದಿದ್ದ ಕೆಲವರು ಅಲ್ಲಿದ್ದರು. ಒಟ್ಟು ಎರಡು ವ್ಯಾನ್ ಗಳಲ್ಲಿ ನಮ್ಮ ಪ್ರಯಾಣ ಪ್ರಯಾಗರಾಜ್ ನತ್ತ ಸಾಗಿತು. ನಮಗೆ ವ್ಯಾನ್ ನಲ್ಲಿ ತಿನ್ನಲೆಂದು ಬೆಳಗಿನ ಉಪಾಹಾರಕ್ಕೆಂದು ಪ್ಯಾಕ್ ಮಾಡಿದ್ದ ಉಪ್ಪಿಟ್ಟು, ಗುಲಾಬ್ ಜಾಮೂನ್, ಬಾಳೆಹಣ್ಣು ಕೊಟ್ಟಿದ್ದರು. ‘ಈ ಬಾರಿಯ ಜನದಟ್ಟಣೆ, ಟ್ರಾಫಿಕ್ ಜಾಮ್ ಇತ್ಯಾದಿಗಳಿಂದ ನಮಗೆ ನಿಗದಿತ ಸಮಯದಲ್ಲಿ ನಿರ್ಧಿಷ್ಟ ಸ್ಥಳವನ್ನು ತಲಪಲು ಸಾಧ್ಯವಿಲ್ಲ. ಹಾಗಾಗಿ, ಸಂಸ್ಥೆಯ ಅಡುಗೆಯ ತಂಡ ಬರುವುದಿಲ್ಲ, ದಾರಿಯಲ್ಲಿ ಸಿಕ್ಕಿದ ಹೋಟೆಲ್ ಗಳಲ್ಲಿ ಲಭ್ಯ ಆಹಾರವನ್ನು ಸ್ವೀಕರಿಸಬೇಕಾದ ಅನಿವಾರ್ಯತೆಯಿದೆ’ ಎಂದು ಮೊದಲಾಗಿ ತಿಳಿಸಿದ್ದರು. ಈ ಹಿಂದೆ ಟ್ರಾವೆಲ್ ಫಾರ್ ಯು ತಂಡದ ಅಡುಗೆಯ ಸವಿರುಚಿ ಉಂಡಿದ್ದ ನಮಗೆ, ಮೊದಲ ಉಪಾಹಾರದಲ್ಲಿಯೇ ‘ಅಡುಗೆಯ ತಂಡದವರು’ ಇಲ್ಲದಿದ್ದ ಕೊರತೆ ಅನುಭವಕ್ಕೆ ಬಂತು!
ವಾರಣಾಸಿಯಿಂದ ಪ್ರಯಾಗಕ್ಕೆ ಸುಮಾರು 125 ಕಿಮೀ ದೂರ. ಸಾಮಾನ್ಯ ದಿನಗಳಲ್ಲಿ 3 ಗಂಟೆಯ ಪ್ರಯಾಣಾವಧಿ. ಆದರೆ ಇದು ಕುಂಭಮೇಳದ ಕಾಲ. ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ರಸ್ತೆಯ ಪರಿಸ್ಥಿತಿಗಳು. ಅನಿರೀಕ್ಷಿತ ಘಟನೆಗಳಿಗೆ ನಾವು ಸಿದ್ದರಿರಬೇಕಾದ ಸಂದರ್ಭ. ಹಾಗಾಗಿ ನಾವು ಎಷ್ಟು ಗಂಟೆಗೆ ಪ್ರಯಾಗರಾಜ್ ತಲಪುವೆವು, ಪಾರ್ಕಿಂಗ್ ಜಾಗದಿಂದ ಉಳಕೊಳ್ಳಲಿರುವ ಟೆಂಟ್ ಗೆ ಎಷ್ಟು ದೂರ ನಡೆಯಬೇಕಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ಯಾರಿಗೂ ಇಲ್ಲ. ಕೆಲವರು ಆಗಾಗ ಗೂಗಲ್ ಮ್ಯಾಪ್ ನೋಡಿಕೊಂಡು ಇನ್ನೂ ಇಷ್ಟು ಕಿಮೀ ಇದೆ…ಇನ್ನು ಒಂದು ಗಂಟೆ ಬೇಕಾಗಬಹುದು …ಎಂದು ‘ಹಲವಾರು ಗಂಟೆಗಳ’ ಅವಧಿಯಲ್ಲಿ ಹೇಳಿದ್ದಾಯಿತು. ಕೆಲವು ಜಾಗಗಳಲ್ಲಿ ರೈಲ್ವೇ ಕ್ರಾಸಿಂಗ್ ಅಥವಾ ಟ್ರಾಫಿಕ್ ಜಾಮ್ ನಿಂದಾಗಿ ವ್ಯಾನ್ ‘ಹೆಜ್ಜೆ ನಮಸ್ಕಾರ’ ಮಾಡುತ್ತಾ ಸಾಗುತ್ತಿತ್ತು. ಇದ್ದುದರಲ್ಲಿಯೇ ಸಂಭಾಳಿಸಿಕೊಂಡು, ಸಾಧ್ಯವಾದಷ್ಟು ದೂರ ಕ್ರಮಿಸುವ ದೂರಾಲೋಚನೆಯಿಂದ ನಮ್ಮ ತಂಡದ ನಾಯಕರು ಮತ್ತು ವ್ಯಾನ್ ನ ಸಾರಥಿ ದಾರಿ ಇಲ್ಲದಲ್ಲಿಯೂ ಹೇಗೋ ನುಸುಳಿಕೊಂಡು ಸಾಗಿದರು. ದಾರಿಯಲ್ಲಿ ‘ಕರ್ಚಾನಾ’ ಎಂಬಲ್ಲಿ ಡಾಭಾ ಒಂದರಲ್ಲಿ ಊಟ ಕೊಡಿಸಿದರು. ಪ್ರಯಾಣ ಮುಂದುವರಿದು ನಮಗೆ ನಿಗದಿಯಾಗಿದ್ದ ಸೆಕ್ಟರ್ 25 ರ ಹತ್ತಿರದ ಪಾರ್ಕಿಂಗ್ ಜಾಗ ತಲಪಿಸಿದಾಗ ಸಂಜೆ 0430 ಆಗಿತ್ತು.
ಪ್ರಯಾಗದಲ್ಲಿ ನಮ್ಮ ಒಂದು ದಿನದ ವಾಸ್ತವ್ಯ ಇದ್ದ ಕಾರಣ, ಅಗತ್ಯ ಸಾಮಗ್ರಿಗಳನ್ನು ಮಾತ್ರ ಪ್ಯಾಕ್ ಮಾಡಿ ಇರಿಸಿ, ಉಳಿದ ಲಗೇಜ್ ವ್ಯಾನ್ ನಲ್ಲಿಯೇ ಇರಿಸಿ ಎಂದು ಮುಂಚಿತವಾಗಿ ತಿಳಿಸಿದ್ದರು. ಹೀಗೆ ಚಿಕ್ಕ ಬ್ಯಾಗ್ ಅನ್ನು ಬೆನ್ನಿಗೇರಿಸಿಕೊಂಡು, ಪಾರ್ಕಿಂಗ್ ಜಾಗದಿಂದ ನಮ್ಮ ಟೆಂಟ್ ಗಳಿದ್ದ ಕಡೆಗೆ ಸುಮಾರು 1.5 ಕಿಮೀ ನಡೆದೆವು. ಅದು ವಾಹನ ನಿರ್ಬಂಧಿತ ಪ್ರದೇಶ. ಅಲ್ಲಲ್ಲಿ ಲೋಹದ ಶೀಟ್ ಗಳನ್ನು ಹಾಸಿ ಅನುಕೂಲತೆ ಕಲ್ಪಿಸಿದ್ದರು. ಆದರೂ ಜನರ ಕಾಲ್ನಡಿಗೆಯಿಂದ ಸೃಷ್ಟಿಯಾದ ಧೂಳು ಮೂಗಿಗೆ ಎರಚುತ್ತಿತ್ತು. ಕರೋನಾ ಸಮಯದಲ್ಲಿ ಕೊಂಡಿದ್ದ ಮಾಸ್ಕ್ ಈಗ ಉಪಯೋಗಕ್ಕೆ ಬಂತು. ಸೆಕ್ಟರ್ 25 ರಲ್ಲಿರುವ ‘ಆಗಮನ ಇಂಡಿಯಾ’ ಕ್ಯಾಂಪ್ ತಲಪಿದೆವು. ಅಲ್ಲಿಯ ರಿಸೆಪ್ಷನ್ ನಲ್ಲಿ ಆಧಾರ್ ಕಾರ್ಡ್ ಕೊಟ್ಟು ನೋಂದಣಿ ಮಾಡಿಕೊಂಡಾಯಿತು. ನಮಗೆಲ್ಲರಿಗೂ ಕುಡಿಯಲು ಪಾನೀಯ ಕೊಟ್ಟು ಶಾಲು ಹೊದಿಸಿ ಸ್ವಾಗತಿಸಿದರು. ಅನಂತರ ಡೇರೆ ಸಂಖ್ಯೆಯನ್ನು ತಿಳಿಸಿದರು. ಪ್ರತಿ ಡೇರೆಯಲ್ಲಿಯೂ ಡಬಲ್ ಕಾಟ್, ಬಟ್ಟೆ ಇಡಲು ವ್ಯವಸ್ಥೆ, ಸೋಪು, ಶ್ಯಾಂಪೂ , ಲೋಶನ್ ಇತ್ಯಾದಿಗಳಿದ್ದ ಸುಸಜ್ಜಿತ ಅಟ್ಯಾಚ್ಡ್ ಬಾತ್ ರೂಂ , ಟಾಯ್ ಲೆಟ್ ಇದ್ದುವು. ಒಟ್ಟಿನಲ್ಲಿ ಸಿಮೆಂಟಿನ ಗೋಡೆ ಇಲ್ಲ ಎನ್ನುವುದು ಬಿಟ್ಟರೆ, ಲಕ್ಸುರಿ ಹೋಟೆಲ್ ಕೊಠಡಿಯಲ್ಲಿರುವ ವ್ಯವಸ್ಥೆ ಅಲ್ಲಿತ್ತು. ನಾವು ಇಂತಹ ಜನದಟ್ಟಣೆ ಸಮಯದಲ್ಲಿ ಇಷ್ಟು ಸವಲತ್ತು ಇರಲಾರದು ಎಂಬ ನಿರೀಕ್ಷೆಯಲ್ಲಿದ್ದೆವು.
ಸೆಕ್ಟರ್ 25 ತ್ರಿವೇಣಿ ಸಂಗಮದ ನಂತರದ ಜಾಗವಾದ ಕಾರಣ ಇಲ್ಲಿ ಹರಿಯುವ ನೀರು ಸಂಗಮದ ನೀರೇ ಆಗಿದೆ. ಹಾಗಾಗಿ, ಇಲ್ಲಿ ಸ್ನಾನ ಮಾಡಿದರೆ ಒಳ್ಳೆಯದು. ಜನಜಂಗುಳಿ ಇಲ್ಲ, ತ್ರಿವೇಣಿ ಸಂಗಮಕ್ಕೆ ಮತ್ತು ಆಖಾಡಗಳಿಗೆ ಹೋಗಲು ಇಷ್ಟಪಡುವವರು 5 ಕಿಮೀ ನಡೆಯಬೇಕು ಅಥವಾ ಬೈಕ್ ನಲ್ಲಿ ಡ್ರಾಪ್ ಸಿಕ್ಕಿದರೆ ಉಪಯೋಗಿಸಿಕೊಳ್ಳಬಹುದು ಎಂದಿದ್ದರು. ನಾವು ಆಗಲೇ ನಮ್ಮ ಸೆಕ್ಟರ್ ನ ಬಳಿ ಹರಿಯುವ ನದಿಯಲ್ಲಿ ಸ್ನಾನ ಮಾಡೋಣ ಎಂದು ಹೊರಟೇವು. ನೀರು ಸ್ವಚ್ಚವಾಗಿತ್ತು. ಒಂದು ಹಂತದ ವರೆಗೆ ನಾವು ಹೋಗಬಹುದು. ಆಮೇಲೆ ಬಹುಶ: ನದಿ ಆಳವಿರಬಹುದು, ಬ್ಯಾರಿಕೇಡ್ ಹಾಕಿದ್ದರು. ಆರಾಮವಾಗಿ ನದಿಯಲ್ಲಿ ಮುಳುಗು ಹಾಗಿ ಸೂರ್ಯನಿಗೆ ವಂದಿಸಿದೆವು. ಸ್ವಲ್ಪ ಚಳಿ ಎನಿಸಿದರೂ ಧನ್ಯತಾ ಭಾವ ಮೂಡಿತು. ನಮ್ಮ ಡೇರೆ ಹತ್ತಿರವೇ ಇದ್ದ ಕಾರಣ ಡೇರೆಗೆ ಬಂದು ಬಟ್ಟೆ ಬದಲಾಯಿಸಲು ಅನುಕೂಲವಾಯಿತು. ಆಮೇಲೆ ರಾತ್ರಿಯ ಊಟಕ್ಕೆ ಪಕ್ಕದಲ್ಲಿಯೇ ಇದ್ದ ‘ ಬಡಾ ರಸೋಯಿ’ಗೆ ಹೋಗಿ ಅಂದಿದ್ದರು. ನಮ್ಮ ನಿರೀಕ್ಷೆಗೂ ಮೀರಿ, ಹಲವಾರು ವ್ಯಂಜನಗಳುಳ್ಳ ಉತ್ತರ ಭಾರತ ಶೈಲಿಯ ಪಂಚತಾರಾ ಊಟವಿತ್ತು. ಪುಷ್ಕಳವಾಗಿ ಉಂಡು ಡೇರೆಯಲ್ಲಿ ಹೊದ್ದು ಮಲಗಿದೆವು.
ಅಷ್ಟರಲ್ಲಿ ತಂಡದ ಕೆಲವರು ಆಖಾಡಗಳನ್ನು ನೋಡಲು ಆಸಕ್ತರು ನಾಳೆ ಬೆಳಗ್ಗೆ 0530 ಗಂಟೆಗೆ ಸಿದ್ದರಾಗಿ ರಿಸೆಪ್ಷನ್ ಬಳಿ ಬರಬೇಕೆಂದರು. ನಮಗೆ ಆಗಲೇ ಗೊತ್ತಾದ ಪ್ರಕಾರ, ಹೆಚ್ಚಿನ ನಾಗಾಸಾಧುಗಳು ಆಗಲೇ ಜಾಗ ಖಾಲಿ ಮಾಡಿದ್ದರು. ಆಖಾಡಗಳಲ್ಲಿರುವ ಕೆಲವು ಸಾಧುಗಳು ತಮ್ಮ ಪಾಡಿಗೆ ಪೂಜೆ ಪುನಸ್ಕಾರ ಮಾಡುತ್ತಿರುತ್ತಾರೆ ಎಂದರು. ನಾವು ಕೆಲವರು ಬೆಳಗ್ಗೆ ರಿಸೆಪ್ಷನ್ ಬಳಿ ತಲಪಿದಾಗ ಒಂದು ತಂಡ ಆಗಲೇ ಸಂಗಮದ ಕಡೆಗೆ ಹೊರಟಿದ್ದರು. ಹಾಗಾಗಿ ನಾವು ಐದಾರು ಮಂದಿ ನಡೆಯುತ್ತಾ ಸಂಗಮದ ಕಡೆಗೆ ಹೊರಟೆವು. ಒಟ್ಟು ಮೂವತ್ತು ಸೆಕ್ಟರ್ ಗಳನ್ನು ನಿರ್ಮಿಸಿದ್ದಾರಂತೆ. ಪ್ರತಿಯೊಂದು ಸೆಕ್ಟರ್ ನಲ್ಲಿ, ನದಿಯ ಅಗಲಕ್ಕೆ ಅಂದಾಜು ಒಂದು ಕಿಮೀ ದೂರದ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ. ಇನ್ನು ಸಂಬಂಧಿತ ಟೆಂಟ್ ಗಳು, ಮಳಿಗೆಗಳು, ಆಹಾರ ವ್ಯವಸ್ಥೆ, ವಿದ್ಯುತ್, ನೀರು, ಕಸ ನಿರ್ವಹಣೆ, ಶೌಚಾಲಯಗಳು….. ಅಬ್ಬಬ್ಬಾ, ಕೇವಲ ಒಂದು ಸೆಕ್ಟರ್ ನಲ್ಲಿರುವ ಅಗಾಧತೆಯನ್ನು ಕಂಡೇ ನಿಬ್ಬೆರಗಾದೆ. ಇನ್ನು ಎಲ್ಲ ಸೆಕ್ಟರ್ ಗಳನ್ನು ನೋಡಬೇಕಿದ್ದರೆ ಅಲ್ಲಿ ಒಂದು ವಾರವೇ ಇರಬೇಕಿತ್ತೇನೋ ಅನಿಸಿತು. ಮುಖ್ಯವಾದ ಅಂಶವೇನೆಂದರೆ ಇವೆಲ್ಲಾ ತಾತ್ಕಾಲಿಕ. ಈ ಎಲ್ಲಾ ಸೆಕ್ಟರ್ ಗಳೂ ಮಳೆಗಾಲದಲ್ಲಿ ನೀರಿನಲ್ಲಿ ಮುಳುಗುವ ನದೀಪಾತ್ರದಲ್ಲಿ ನಿರ್ಮಿತವಾಗಿವೆ. ಕುಂಭನಗರಿಯೇ ತಾತ್ಕಾಲಿಕವಾದರೂ ಇದರ ನಿರ್ಮಾಣ ಅಗಾಧವಾಗಿದೆ ಹಾಗೂ ಸುಸಜ್ಜಿತವಾಗಿದೆ . ಇದು ಮಾನವನ ಇಚ್ಛಾಶಕ್ತಿಗೆ ಹಿಡಿದ ಕನ್ನಡಿ.
ನಾವು ಐದಾರು ಮಂದಿ, ಗಂಗಾನದಿಯನ್ನು ಸೇತುವೆಯ ಮೇಲಿಂದ ದಾಟಿ ನದಿಯ ಇನ್ನೊಂದು ಭಾಗದಲ್ಲಿರುವ ಗಂಗಾ-ಯಮುನಾ-ಸರಸ್ವತಿ ನದಿಗಳ ತ್ರಿವೇಣಿ ಸಂಗಮದತ್ತ ಹೊರಟೆವು. ಮುಂಜಾನೆ ಅಷ್ಟೇನೂ ಜನರಿರಲಿಲ್ಲ. ಅಂದಾಜು ಐದು ಕಿಮೀ ನಡೆದು ತ್ರಿವೇಣಿ ಸಂಗಮ ತಲಪಿದೆವು. ಆಲ್ಲಿ ಬಹಳಷ್ಟು ಜನ ಸೇರಿದ್ದರು. ಹೂವು, ಪೂಜಾ ಪರಿಕರಗಳು ನೀರಿನಲ್ಲಿ ಕಾಣಿಸುತ್ತಿದ್ದುವು. ಆ ಜನದಟ್ಟಣೆಯಲ್ಲಿ ನಮಗೆ ಸ್ನಾನ ಬೇಡವೆನಿಸಿತು. ತಲೆಗೆ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಹಿಂತಿರುಗಿದೆವು. ಅಷ್ಟರಲ್ಲಿ ಚೆನ್ನಾಗಿ ಬೆಳಕು ಹರಿದಿತ್ತು. ಈಗ ನಮಗೆ ಜನಸಾಗರ ಹರಿದು ಬರುತ್ತಿರುವುದು ಕಾಣಿಸಿತು. ಸ್ಥಳೀಯರೊಬ್ಬರನ್ನು ಕೇಳಿದಾಗ, ನಿನ್ನೆಗೆ ಹೋಲಿಸಿದರೆ ಈವತ್ತು ಬಹಳ ಕಡಿಮೆ ಜನ ಎಂದರು! ಕುಂಭಮೇಳದಲ್ಲಿ ಏನಿದೆ ಅಂದರೆ ‘ಏನಿಲ್ಲ, ನದಿನೀರಿನಲ್ಲಿ ಮುಳುಗು ಹಾಕುವುದು ಅಷ್ಟೆ’ . ಆದರೆ ಇದಕ್ಕಾಗಿ, ಭಾರತದ ಮೂರನೇ ಒಂದು ಭಾಗ ಜನ ಈಗಾಗಲೇ ಕುಂಭಮೇಳಕ್ಕೆ ಬಂದು ಹೋಗಿದ್ದಾರೆ! ಯಾರು ಏನೇ ಹೇಳಲಿ, ಜನರ ನಂಬಿಕೆಗೆ ಬೆಲೆ ಕಟ್ಟಲಾಗದು. ನಾವಂತೂ , ಜೀವಮಾನವಿಡೀ ನೆನಪಿಟ್ಟುಕೊಳ್ಳಬಹುದಾದ ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾದೆವು ಅನಿಸಿ ಸಂತಸವಾಯಿತು.
ಇನ್ನು ಪುನ: ಐದು ಕಿಮೀ ನಡೆದು ನಮ್ಮ ಡೇರೆ ತಲಪಲು ಕಷ್ಟ ಅನಿಸಿತು. ವಾಹನ ವ್ಯವಸ್ಥೆ ಇಲ್ಲ. ಆದರೆ ಸ್ಥಳೀಯ ಭೈಯಾಗಳು ಬೈಕ್ ನಲ್ಲಿ ಡ್ರಾಪ್ ಕೊಡುತ್ತಾರೆ. ಒಬ್ಬರಿಗೆ ರೂ.300/- ಹೀಗೆ, ನಾವು ಒಬ್ಬ ಉತ್ತರಪ್ರದೇಶದ ಭೈಯಾ ಜೊತೆಗೆ ಬೈಕ್ ನಲ್ಲಿ ಸೆಕ್ಟರ್ 25ಕ್ಕೆ ಬಂದೆವು. ಆತ ದಿನಕ್ಕೆ ಕನಿಷ್ಟ 20 ಜನರನ್ನು ತನ್ನ ಬೈಕ್ ನಲ್ಲಿ ಡ್ರಾಪ್ ಕೊಟ್ಟರೂ ಆ ದಿನದ ಆದಾಯ ರೂ.6000/- ಆಗುತ್ತದೆ. ಈ ರೀತಿಯ ಹಲವಾರು ಭೈಯಾಗಳು ಜನಜಂಗುಳಿಯ ಮಧ್ಯೆ ಪ್ರವಾಸಿಗರನ್ನು ತಮ್ಮ ಬೈಕ್ ನಲ್ಲಿ ಕೂರಿಸಿ ಅತ್ತಿತ್ತ ಓಡಾಡುತ್ತಿದ್ದರು. ಇನ್ನು ಹೂ ಮಾರುವವರು, ಮೀನಿನ ಆಹಾರ ಮಾರುವವರು, ಚಾಯ್ ವಾಲಾಗಳು….ಹೀಗೆ ವಿವಿಧ ಉದ್ಯೋಗ ಮಾಡುವವರು ಲೆಕ್ಕವಿಲ್ಲದಷ್ಟು ಬಹಳಷ್ಟು ಮಂದಿ.
ನಾವು ಉಳಕೊಂಡಿದ್ದ ಸೆಕ್ಟರ್ ನಲ್ಲಿ ಸ್ವಚ್ಚ ನೀರು ಇತ್ತು. ಕಸಕಡ್ಡಿ , ಹೂವು ಇತ್ಯಾದಿಗಳನ್ನು ಆಗಾಗ ಸ್ವಚ್ಚ ಮಾಡುತ್ತಿದ್ದರು. ನಮ್ಮ ತಂಡದ ಕೆಲವರು ಬೆಳಗ್ಗೆ ಇನ್ನೊಮ್ಮೆ ಗಂಗಾ ಸ್ನಾನ ಮಾಡಿದರು. ಸ್ಥಳೀಯ ಒಬ್ಬಾತ ನೀರು ಹಾಲನ್ನು ಗಂಗೆಗೆ ಅರ್ಪಿಸಿ ಎಂದು ಹೇಳುತ್ತಾ ನಮ್ಮ ಗಮನ ಸೆಳೆದ. ಇನ್ನೊಬ್ಬ ಮುಖಕ್ಕೆ ಅರಶಿನ ಕುಂಕುಮ ಹಚ್ಚಿದ. ಸಹಜವಾಗಿ, ನಾವು ಸ್ವಲ್ಪ ಹಣ ಅವರ ಕೈಗಿಟ್ಟೆವು. ಒಟ್ಟಿನಲ್ಲಿ ಧನ್ಯತಾ ಭಾವ. ಅನಂತರ ‘ಬಡಾ ರಸೋಯಿ’ನಲ್ಲಿ ಬೆಳಗಿನ ಉಪಾಹಾರ ಮುಗಿಸಿದೆವು. ಹಲವಾರು ಬಗೆಗಳಿದ್ದ ಬಫೆಟ್ ಬ್ರೇಕ್ ಫಾಸ್ಟ್ ಚೆನ್ನಾಗಿತ್ತು. ಉಪಾಹಾರದ ನಂತರ ನಮ್ಮ ತಂಡದ ಕೆಲವರು ನಿರ್ಗಮಿಸಿದರು. ಇನ್ನು ಕೆಲವರು ಕಾಶಿ, ಆಯೋಧ್ಯೆಯತ್ತ ಹೊರಟೆವು. ಈ ಸ್ಥಳಗಳಲ್ಲಿಯೂ ಜನದಟ್ಟಣೆ ಇತ್ತು. ಟ್ರಾವೆಲ್ಸ್ ಫಾರ್ ಯು ತಂಡದವರು ಬಹಳ ಮುತುವರ್ಜಿ ವಹಿಸಿ, ತಮ್ಮ ಚಾಕಚಕ್ಯತೆಯಿಂದ ಸಂದರ್ಭವನ್ನು ನಿಭಾಯಿಸಿಕೊಂಡು ನಮ್ಮೆಲ್ಲರಿಗೂ ಕಾಶಿ ವಿಶ್ವನಾಥ ಹಾಗೂ ಅಯೋಧ್ಯೆಯ ರಾಮಲಲ್ಲಾನ ದರ್ಶನ ಮಾಡಿಸಿದರು. ಅವರಿಗೆ ನಾವು ಆಭಾರಿ.
ಮೈಸೂರಿನ ನಮ್ಮ ಮನೆಯಿಂದ ಕುಂಭಮೇಳಕ್ಕೆ ಹೋಗಿ ಬರಲು ಒಬ್ಬರಿಗೆ ಅಂದಾಜು ರೂ.35000/- ಖರ್ಚಾಗಿದೆ (ಕಾಶಿ, ಅಯೋಧ್ಯೆ ಪ್ರವಾಸದ ಖರ್ಚು ಬೇರೆ) . ಇದರಲ್ಲಿ ವಿಮಾನದ ಟಿಕೆಟ್, ಸಣ್ಣ ಪುಟ್ಟ ಖರೀದಿ, ಆಟೋ ಚಾರ್ಜ್ , ಆಹಾರ, ಸಾಂದರ್ಭಿಕ ಖರ್ಚು ಸೇರಿವೆ. ಮೈಸೂರಿನಲ್ಲಿ ನಾವು ಫ್ಲೈಬಸ್ ನಿಂದ ಇಳಿಯುತ್ತಿದ್ದಂತೆ, ಅಲ್ಲಿದ್ದ ಆಟೋ ಚಾಲಕ ‘ಬನ್ನಿ..ಎನ್ನುತ್ತಾ, ತಾವಾಗಿ ಕುಂಭಮೇಳದಿಂದ ಬರ್ತಿದೀರಾ’ ಅಂದರು. ಇದು ಕುಂಭಮೇಳದ ಹವಾ. ಕುಂಭಮೇಳ ನಡೆಯುತ್ತಿರುವುದು ಉತ್ತರಪ್ರದೇಶದಲ್ಲಾದರೂ, ಅದರೆ ಆರ್ಥಿಕತೆಯ ಸತ್ಪರಿಣಾಮ ಭಾರತವಿಡೀ ಸ್ವಲ್ಪಮಟ್ಟಿಗಾದರೂ ಆಗಿರುತ್ತದೆ.
–ಹೇಮಮಾಲಾ.ಬಿ, ಮೈಸೂರು
ಚೆನ್ನಾಗಿದೆ
ಧನ್ಯವಾದಗಳು .
ಮಿತವಾಗಿ ಹೇಳಿಕೊಂಡರೂ ಹಿತವಾಗಿದೆ ನಿಮ್ಮ ಪ್ರ-ವಾಸ ಲಹರಿ.
ಇದು ಕೇವಲ ವಿಹಾರವಲ್ಲ; ವಿಚಾರ ಮತ್ತು ಆಚಾರ. ಅದರಲೂ ಕುಂಭಮೇಳದ
ಸದಾಚಾರ. ಖುಷಿಯಾಯಿತು.
ನನ್ನ ಮಡದಿಯೂ ಹೋಗಿದ್ದಾಳೆ. ಅವಳು
ಹಿಂದಿರುಗಿ ಬಂದು ತನ್ನ ಅನುಭವವನ್ನು ಹೇಳುವಾಗ
ಆಯಾಚಿತವಾಗಿ ನಿಮ್ಮ
ಬರೆಹವು ನೆನಪಾಗದೇ ಇರದು. ಈವರೆಗೆ ಈ ಸಂಬಂಧ,
ಎಷ್ಟೋ ವಿಡಿಯೊಗಳನ್ನು ನೋಡಿದ್ದೇನೆ, ಬರೆಹಗಳನ್ನು ಓದಿದ್ದೇನೆ.
ನಿಮ್ಮ ಬರೆಹವು ನನ್ನ ಮನ ಸೆಳೆಯಿತು. ಒಂದು ಬಗೆಯ ನಿರ್ಲಿಪ್ತಧಾಟಿ
ಮತ್ತು ನಿರಪೇಕ್ಷ ದೃಷ್-ಟಿ ಅಭಿವ್ಯಕ್ತಿಯಲ್ಲಿ ಅಡಗಿದೆ. ಇದೇ ಇಂದಿನ
ಪ್ರವಾಸ ಕಥನದ ಲಹರಿಗೆ ಬೇಕಾದ ಎರಡು ಮುಖ್ಯ ಗುಣಗಳು.
ಕುಂಭಮೇಳದಲಿ ಯಾರ್ಯಾರಿಗೆ ಏನೇನು ಬೇಕಿತ್ತೋ ಅದು ದೊರಕಿದೆ;
ಹಾಗೆಯೇ ಯಾರ್ಯಾರ ದೃಷ್ಟಿ-ಕೋನ ಏನಿದೆಯೋ ಅದರಂತೆಯೇ
ಕಂಡಿದೆ. ಇಂಥದೊಂದು ಬಿಗ್ ಇವೆಂಟು ನಮ್ಮ ಭರತಖಂಡದ ಮಹಿಮೆ
ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ದೇಶ ಭಾರತ; ನಾವು ಭಾರತೀಯರು ಅದರಲೂ ಸನಾತನ
ಪರಂಪರೆಯ ವಾರಸುದಾರರು ಎಂಬುದೇ ಅತೀವ ಅಭಿಮಾನ, ಇದಕಿಂತ
ಬೇಕೆ ಬೇರೆ ಸಮ್ಮಾನ! ಧನ್ಯವಾದಗಳು ಮೇಡಂ.
ಮೆಚ್ಚುಗೆ ಹಾಗೂ ಸವಿವರವಾದ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ .
ಕುಂಭಮೇಳದ ನಿಮ್ಮ ಪ್ರವಾಸದ ಅನುಭವದ ಅಭಿವ್ಯಕ್ತಿ ಸೊಗಸಾಗಿ ಮೂಡುಬಂದಿದೆ..ಗೆಳತಿ ಹೇಮಾ ಚಿತ್ರ ಗಳೂ ಪೂರಕವಾಗಿವೆ..
ಧನ್ಯವಾದಗಳು ಮೇಡಂ.
ಕುಂಭಮೇಳದ ಬಗ್ಗೆ ಉಪಯುಕ್ತವಾದ ಮಾಹಿತಿ
ಟ್ರಾಫಿಕ್ ಜಾಮ್ ನಿಂದ ವಾಹನಗಳ ಹೆಜ್ಜೆ ನಮಸ್ಕಾರ,
ತ್ರಿವೇಣಿ ಸಂಗಮದ ದರ್ಶನದಿಂದ ಉಂಟಾದ ಧನ್ಯತಾಭಾವ
ಜನಸಾಗರದ ಶ್ರದ್ಧೆ ನಂಬಿಕೆ
ಹಲವರ ಉದರ ಪೋಷಣೆ
ಚೆನ್ನಾಗಿ ಮೂಡಿ ಬಂದಿದೆ
ಜೊತೆಗೆ ಕುಂಭಮೇಳದ ಬಗ್ಗೆಹಲವರು ಮಾಡುತ್ತಿರುವ ಅಪಪ್ರಚಾರ
ಮೆಚ್ಚುಗೆ ಹಾಗೂ ಸವಿವರವಾದ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.
Beautiful
ಧನ್ಯವಾದಗಳು .
ಕುಂಭಮೇಳದ ಬಗ್ಗೆ ಕೆಲವರು ಟೀಕೆ ಮಾಡಿದ್ದನ್ನು ಕೇಳಿದ್ದೆ. ನಿಮ್ಮ ನಿಷ್ಪಕ್ಷಪಾತ ಬರವಣಿಗೆ ನೋಡಿ ಖುಷಿಯಾಯಿತು. ಅಲ್ಲಿನ ಚಿತ್ರಣ ಸಂಪೂರ್ಣ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಾ. ಕಾಲ್ತುಳಿತ ಪ್ರಕರಣ ಆದನಂತರ ಬಹಳ ಜನ ಹೆದರಿ ಹೋಗುವುದಿಲ್ಲ ಅಂದುಕೊಂಡಿದ್ದೆ. ಅದರಲ್ಲೂ ನೀವು ಹೋಗಲು ಧೈರ್ಯ ಮಾಡಿದ್ದು ಅಚ್ಚರಿಯೇ…..ನಮಗೂ ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ನಾನ ಮಾಡಿದ ಅನುಭವ ಆಯಿತು ನಿಮ್ಮ ಬರಹ ಓದಿ. ಈ ಅನುಭೂತಿಯೆಲ್ಲಾ ಯಾವುದೇ ತರ್ಕಕ್ಕೆ ನಿಲುಕದ್ದು….
ನಿಜ, ಅವರವರ ಭಾವಕ್ಕೆ ತಕ್ಕಂತ ಅನುಭೂತಿ ಲಭ್ಯ. ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ತುಂಬಾ ಉತ್ತಮ ಹಾಗೂ ಸಕಾಲಿಕ ಬರೆಹ
ಹೆಜ್ಜೆ ನಮಸ್ಕಾರ ಪದಪುಂಜ ಅತ್ಯಂತ ಸೂಕ್ತ….
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು
ಕುಂಭಮೇಳಕ್ಕೆ ಹೋಗಿ ಬಂದು ಚಂದದ ಸಕಾರಾತ್ಮಕವಾದ ಅನುಭವಗಳನ್ನು ಹಂಚಿಕೊಂಡ ನಿಮಗೆ ಅಭಿನಂದನೆಗಳು.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.
ಮಹಾಕುಂಭಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡ ಪ್ರವಾಸ ಲೇಖನವು ಉಪಯುಕ್ತ ಮಾಹಿತಿಗಳಿಂದ ಕೂಡಿದ್ದು, ನಿಷ್ಪಕ್ಷಪಾತವಾಗಿ ಮೂಡಿಬಂದಿದೆ.
ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.