‘ನಾನುವು’ ಎಂಬ ಸಂ-ಯೋಜಿತ ಪರಿಕಲ್ಪನೆ

Share Button


ಡಾ. ಡೇನಿಯಲ್ ಜೆ ಸಿಗಾಲ್ ಎಂಬಾತ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಮನೋವೈದ್ಯಕೀಯ ವಿಜ್ಞಾನಿ. ಇಂಟ್ರಾಕನಕ್ಟೆಡ್ MWe (Me + We) ಎಂಬ ಪರಿಕಲ್ಪನೆಯ ಜನಕ. ಆಧುನಿಕ ಮನೋವೈದ್ಯಶಾಸ್ತ್ರದಲ್ಲಿ ಹೆಸರು ಮಾಡಿದ ಜಾಗತಿಕ ಮನ್ನಣೆಯ ಸಂವೇದನಾಶೀಲ ಸಂಶೋಧಕ. ಹಲವು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನೂರಕ್ಕೂ ಹೆಚ್ಚಿನ ಪಠ್ಯಪುಸ್ತಕಗಳಿಗೆ ಸಂಪಾದಕರಾಗಿ ದುಡಿದ ಮಹನೀಯ. ಪ್ರಶಸ್ತಿ ಪುರಸ್ಕೃತ ಶಿಕ್ಷಣತಜ್ಞ. ಏಕಕಾಲಕ್ಕೆ ಮನೋವಿಜ್ಞಾನವನ್ನೂ ವೈದ್ಯವಿಜ್ಞಾನವನ್ನೂ ಅಭ್ಯಾಸ ಮಾಡಿದ ಅಪರೂಪದ ಪ್ರತಿಭಾಶೀಲ. ಮೈಂಡ್‌ಫುಲ್ ಥೆರಪಿ ಎಂಬುದು ಈತನ ಆವಿಷ್ಕಾರ. ‘ಪಾಕೆಟ್ ಗೈಡ್ ಟು ಇಂಟರ್ ಪರ್ಸನಲ್ ನ್ಯೂರೋ ಬಯಾಲಜಿ: ಆನ್ ಇಂಟಿಗ್ರೇಟಿವ್ ಹ್ಯಾಂಡ್‌ಬುಕ್ ಆಫ್ ದಿ ಮೈಂಡ್’ ಎಂಬುದು ಇವರಿಗೆ ಹೆಸರು ತಂದುಕೊಟ್ಟ ಪುಸ್ತಕ. ಸಂಕೀರ್ಣವೂ ಗುಹ್ಯಾತ್ ಗುಹ್ಯತರವೂ ಆದ ವೈಜ್ಞಾನಿಕ ಪರಿಕಲ್ಪನೆಗಳನ್ನು ರೋಮಾಂಚನಕಾರಿಯಾಗಿ ತಿಳಿಸುವ ಶೈಲಿ ಈತನ ವೈಶಿಷ್ಟ್ಯ. ವಿವಿಧ ಹುದ್ದೆಗಳನ್ನೂ ವಿಧವಿಧವಾದ ಸ್ಥಾನಮಾನಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ ಧೀಮಂತ. ಸಮಾಜದ ವಿವಿಧ ರಂಗಗಳಲ್ಲಿ ಕ್ರಿಯಾಶೀಲರಾದ ಉದ್ಯಮಿಗಳು, ನರವಿಜ್ಞಾನಿಗಳು, ಕಾರ್ಪೊರೇಟ್ ದಿಗ್ಗಜರು, ಪೋಷಕರು, ಸಾರ್ವಜನಿಕ ಆಡಳಿತಗಾರರು, ನ್ಯಾಯಾಧೀಶರು, ಧರ್ಮಗುರುಗಳು, ರಾಜನೀತಿಜ್ಞರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಯಶಸ್ವೀ ಜನನಾಯಕರು – ಇವರೆಲ್ಲರಿಗೂ ತರಬೇತಿ ಶಿಬಿರಗಳನ್ನೂ ತರಗತಿಗಳನ್ನೂ ನಡೆಸಿಕೊಟ್ಟ ಪಾದರಸ. ಜೊತೆಗೆ ವಿವಿಧ ವಿಶ್ವವಿದ್ಯಾಲಯಗಳು ಆಹ್ವಾನಿಸಿದಾಗ ಹೋಗಿ ಮಾತಾಡಿ ಬರುವ ಪ್ರತಿಭಾವಂತ.

ಮುಖ್ಯವಾಗಿ ಮಾನವನ ಮಿದುಳು, ವೈಯಕ್ತಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ? ಎಂಬುದನ್ನು ಸಾಧಾರವಾಗಿ ದೃಢಪಡಿಸಿದ ಸಿದ್ಧಾಂತ ಈತನದು. ವಿಘಟನೆಯೇ ಈ ಕಾಲದ ಲಕ್ಷಣ ಎಂದು ಹೇಳುವುದರ ಮೂಲಕ ಅಚ್ಚರಿ ಮೂಡಿಸುತ್ತಾರೆ. ಮೇಲ್ನೋಟಕ್ಕೆ ನಾವೆಲ್ಲಾ ವ್ಯಕ್ತಿಯಾಗಿಯೂ ಸಮಾಜದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿರುವವರು. ಆದರೆ ಅನುಕೂಲಗಳನ್ನು ಪಡೆದುಕೊಳ್ಳಲೋಸುಗ ಹಲವು ಬಗೆಯ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದುಕೊಂಡು, ಸಂಘಟಿತರೆಂದು ಬಿಂಬಿಸಿಕೊಂಡಿರುವವರು. ಆದರೆ ನಮ್ಮ ಮನಸ್ಥಿತಿ ಮಾತ್ರ ಸಂಘಟನೆಯ ನೆಪದಲ್ಲಿ ವಿಘಟನೆಯ ಹಾದಿ ಹಿಡಿದಿದೆ. ಸ್ವಾರ್ಥವೇ ಮೈವೆತ್ತಿದೆ. ಪ್ರಕೃತಿಯಿಂದ ದೂರವಾಗುತ್ತಿರುವ ಮನುಷ್ಯನು ತನ್ನೊಳಗೊಂದು ಪರಕೀಯ ಭಾವವನ್ನು ತುಂಬಿಕೊಂಡು ಅಭದ್ರನಾಗಿದ್ದಾನೆ. ಇನ್ನೊಬ್ಬರಿಗಿರಲಿ, ತನಗೆ ತಾನೇ ವಿಚ್ಛೇದನ ಕೊಟ್ಟುಕೊಂಡು, ನಿರಂತರ ನೀರಡಿಕೆಯಿಂದ ಬಳಲುತ್ತಿದ್ದಾನೆ. ಅಸ್ತಿತ್ವದಿಂದ ವ್ಯಕ್ತಿತ್ವ ಬೇರೆಯಾಗಿದೆ. ಸಮಾಜದಿಂದ ವ್ಯಕ್ತಿ ಬೇರೆಯಾಗಿದ್ದಾನೆ. ದೇಹವು ಮನಸ್ಸಿನಿಂದಲೂ ಆತ್ಮವು ಜೀವದಿಂದಲೂ ಬೇರೆಯಾಗಿದೆ. ಹಲವು ಬಗೆಯ ನೆಪಗಳನ್ನು ಮುಂದಿಟ್ಟುಕೊಂಡು ತರತಮಗಳನ್ನು ದೊಡ್ಡದು ಮಾಡಿಕೊಂಡು, ಸದಾ ವಿಘಟಿತಗೊಂಡು, ಅನಾಥಪ್ರಜ್ಞೆಯಿಂದ ನರಳುತ್ತಿದ್ದಾನೆ ಎಂಬುದು ಈತನ ವಿಷಾದ. ಅದಕಾಗಿ ನಾನು ಮತ್ತು ನೀನು ಸೇರಿ ನಾವು ಆಗಬೇಕು. ನಾನತ್ವವು ನಾವತ್ವದಲ್ಲಿ ಬೆರೆತು ಹೋಗಬೇಕು ಎಂಬುದಿವರ ವಾದ.

ಡಾ. ಸಿಗಾಲ್ ಅವರ ಕೆಲಸವನ್ನು ‘ಮಾನವತೆಯ ಹೂ ಅರಳಲು ಬೇಕಾದ ಮಣ್ಣು, ನೀರು, ಗಾಳಿ, ಬೆಳಕು’ ಎಂಬುದಾಗಿ ವಿಶ್ಲೇಷಿಸಬಹುದು. ‘ಮಾನವೀಯತೆಗೇ ಬರೆದ ಪ್ರೇಮಪತ್ರ’ ಎಂದು ಅಮೆರಿಕದಲ್ಲಿ ಬಣ್ಣಿಸಲಾಗಿದೆ. ಹಲವು ಸಾಂಕ್ರಾಮಿಕ ರೋಗಗಳಿಂದ ನಾವು ಪಾಠ ಕಲಿತಿಲ್ಲ. ನಮ್ಮನ್ನು ನಾವು ಸ್ವಯಂ ಎಂದೂ ಇತರರಿಗೂ ನಮಗೂ ಯಾವುದೇ ಸಂಬಂಧವಿಲ್ಲವೆಂದೂ ನನಗೂ ಸಮಾಜಕ್ಕೂ, ಸಮಾಜಕ್ಕೂ ದೇಶಕ್ಕೂ, ದೇಶ ದೇಶಗಳಿಗೂ ಸಂಬಂಧವಿಲ್ಲವೆಂದು ತಿಳಿದಿದ್ದೇವೆ. ವೈಯಕ್ತಿಕತೆಯು ವಿಪರೀತವಾಗಿ ಸಾಮಾಜಿಕತೆಯನ್ನು ಮರೆತದ್ದರ ಪರಿಣಾಮವೇ ನಾವಿಂದು ಜಾಗತಿಕ ಸಮಸ್ಯೆಗಳನ್ನು ಎದುರಿಸುತ್ತಾ ಬಳಲಿದ್ದೇವೆ ಎಂಬುದು ಸಿಗಾಲ್ ಅವರ ಸ್ಪಷ್ಟ ಸಂದೇಶ. ಅದಕಾಗಿಯೇ ಅವರು ನಾನು ಮತ್ತು ನಾವು ಎಂಬುದು ಒಂದುಗೂಡುವ ಮಿ ಅ್ಯಂಡ್ ವಿ ಕಾನ್ಸೆಪ್ಟನ್ನು ಪ್ರತಿಪಾದಿಸಿದ್ದಾರೆ. ನಾನು ಎಂಬುದರಲ್ಲಿರುವುದೂ ನಾವು ಎಂಬುದರಲ್ಲಿರುವುದೂ ಒಟ್ಟಿಗೆ ಸೇರಿದಾಗ ‘ನಾನುವು’ ಎಂಬ ಸಂಯೋಜಿತ ಭಾವ ಜನಿಸುತ್ತದೆ. ನಾನು ಎಂಬುದು ನಾವು ಆಗದೇ ಹೋದರೆ ಈ ಜಗತ್ತಿಗೆ ಉಳಿಗಾಲವಿಲ್ಲ! ವೈಯಕ್ತಿಕ ಗುರುತಿಗಾಗಿ ‘ನಾನು’ ಬೇಕು. ಇಲ್ಲ ಎಂದಲ್ಲ. ಆದರೆ ಅದೇ ಅತಿಯಾಗಿ ನಮ್ಮ ವೈಶ್ವಿಕ ಅನುಸಂಧಾನಕ್ಕೆ ಮಿತಿಯಾಗಿದೆ. ನಾನು ಇಲ್ಲದೇ ನಾವು ಇರಲಾರದು. ಅದಕಾಗಿಯೇ ‘ಇಂಟ್ರಾಕನೆಕ್ಟಡ್ ನೇಯ್ಗೆ’ಯ ಅಗತ್ಯವಿದೆ. ಹಣ, ಅಧಿಕಾರ ಮತ್ತು ಧರ್ಮದ ಹೆಸರಿನಲ್ಲಿ ವ್ಯಕ್ತಿಗಳನ್ನು ಒಡೆದು ನೋಡುವ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ಧೋರಣೆಗಳು ತಮ್ಮ ಅಧೀನದಲ್ಲಿರುವ ನೌಕರಶಾಹಿಯನ್ನು ದುಡಿಸಿಕೊಂಡು, ಸಮ ಸಮಾಜ ನಿರ್ಮಾಣದ ಕೈಂಕರ್ಯಕ್ಕೆ ನಿರಂತರವಾಗಿ ಅಡ್ಡಿಯಾಗುತ್ತಲೇ ಇರುತ್ತವೆ. ಇದನ್ನು ಅರಿಯದ ಮೂಢಾತ್ಮನಾದ ನಾನು ನಿಜಕ್ಕೂ ನನ್ನೊಂದಿಗೆ ಎಂದೂ ನಿಲ್ಲದ ‘ನಮ್ಮ ಸಮುದಾಯ’ ಎಂಬ ಸ್ವಜನಪಕ್ಷಪಾತವನ್ನು ತಲೆಯಲ್ಲಿ ತುಂಬಿಕೊಂಡು, ಪ್ರತ್ಯೇಕವಾಗಿ ಇರಲು ಹೆಣಗಾಡುತ್ತಿರುತ್ತೇನೆ. ಜೊತೆಗೆ ನನ್ನ ಮುಂದಿನ ಪೀಳಿಗೆಗೂ ಇದೇ ಮಾದರಿಯೆಂದು ಪರೋಕ್ಷವಾಗಿ ಬಿಂಬಿಸುತ್ತಿರುತ್ತೇನೆ. ಏಕೆಂದರೆ ಪ್ರತಿದಿನವೂ ನನ್ನ ಅನುಭವ, ನನ್ನ ಅಧ್ಯಯನ, ನನ್ನ ತಿಳಿವು, ನನಗನಿಸಿದ್ದು, ನನ್ನ ಪ್ರಕಾರ, ನನ್ನ ಆಲೋಚನೆ, ನನ್ನ ಮನೆ, ನನ್ನ ಸಂಸ್ಕೃತಿ, ನನ್ನ ಧರ್ಮ, ನನ್ನ ಭಾಷೆ, ನನ್ನ ನಾಡು, ನನ್ನ ದೇಶ ಎಂದೆಲ್ಲಾ ಅತಿಯಾದ ಭಾವುಕತೆಯಿಂದ ಜಗತ್ತನ್ನು ನೋಡುವ ವಿದ್ಯೆಯನ್ನು ಆಧುನಿಕತೆಯೇ ಕಲಿಸಿರುವುದು; ‘ನಿನ್ನ ಅನುಭವಕ್ಕೆ ನಿಷ್ಠನಾಗಿರು, ನಿನ್ನ ವ್ಯಕ್ತಿತ್ವದ ಶಿಲ್ಪಿ ನೀನೇ’ ಎಂದೆಲ್ಲಾ ಆತ್ಮಶೋಧನೆಯ ಹಾದಿಯನ್ನು ಬೋಧಿಸುವ ಲೋಕೋತ್ತರ ದೃಷ್ಟಿಯು ಅಂತಿಮವಾಗಿ ವೈಶ್ವಿಕವಾಗಬೇಕು. ‘ಮೊದಲಿಗೆ ಪ್ರಪಂಚ ಉಳಿಯಬೇಕು; ಪ್ರಪಂಚವೇ ನನ್ನದು; ನಾನು ಪ್ರಪಂಚದ ಭಾಗ’ ಎಂಬ ವಿನೀತತೆಯ ಬೀಜ ಮೊಳೆಯಬೇಕು. ಈ ವಿಚಾರದಲ್ಲಿ ‘ವಸುಧೈವ ಕುಟುಂಬಕಂ’ ಎಂಬ ಧೋರಣೆ ನಮ್ಮ ಅಖಂಡ ಭರತಖಂಡದ್ದಾಗಿತ್ತು! ‘ಓಂ ಶಾಂತಿ’ ಎಂದಾಗ ಅದು ಜಾಗತಿಕ ಶಾಂತಿ ಮತ್ತು ನೆಮ್ಮದಿಯನ್ನು ಹಾರೈಸುವುದೇ ಆಗಿದೆ. ಅತ್ಯಾಧುನಿಕ ನಾಗರಿಕ ಸಮಾಜದ ಹಲವು ರೀತಿಯ ಎಡವಟ್ಟುಗಳು ಹೀಗೆ ಅತಿ ವೈಯಕ್ತಿಕತೆಗೆ ಮಹತ್ವ ಕೊಟ್ಟು, ಪ್ರತಿಯೊಂದೂ ಪರ್ಸನಲ್ಲು ಎಂದೇ ಆಗಿ, ಪಾರಸ್ಪರಿಕ ಮನುಷ್ಯ ಸಂಬಂಧಗಳನ್ನೇ ಗಾಳಿಗೆ ತೂರಿದೆ. ಅಲ್ಟ್ರಾ ಮಾಡರ್ನ್ ಮನೋಭಾವವು ಸ್ವಾರ್ಥಕ್ಕೆ ಮನ್ನಣೆ ನೀಡಿದೆ; ನನ್ನ ಬದುಕು ನನ್ನದು ಮಾತ್ರ ಎಂಬ ಸೀಮಿತತೆಯು ವಿಶ್ವಾತ್ಮಕ ಬಂಧವಿನ್ಯಾಸವನ್ನು ಅರಿಯುವಲ್ಲಿ ವಿಫಲವಾಗಿದೆ.

ಇಲ್ಲೊಂದು ಉದಾಹರಣೆ: ಹಿಂದಿನ ಕಾಲದಲ್ಲಿ ಮದುವೆ ಮತ್ತಿತರ ಸಮಾರಂಭಗಳಾಗುವಾಗ ನೆಂಟರಿಷ್ಟರೆಲ್ಲಾ ಒಟ್ಟಾಗುತ್ತಿದ್ದರು. ಆಗ ಯಾವುದೂ ಔಟ್‌ಸೋರ್ಸಿಂಗ್ ಆಗಿರಲಿಲ್ಲ. ಯಾರೋ ಬಂದು ಚಪ್ಪರ ಹಾಕುತ್ತಿದ್ದರು. ಇನ್ನೂ ತಿಂಗಳಿರುವಾಗಲೇ ಊರಿನ ಹೆಂಗಸರೆಲ್ಲಾ ಸೇರಿ ಹಪ್ಪಳ ಸಂಡಿಗೆ ಹಾಕಿ ಕೊಡುತ್ತಿದ್ದರು. ಜಗಳವನ್ನೂ ಆಡುತ್ತಿದ್ದರು; ಕೆಲಸವನ್ನೂ ಮಾಡುತ್ತಿದ್ದರು. ಊರೊಟ್ಟಿನ ಕೆಲಸ ಎಂದ ಮೇಲೆ ಸ್ವಪ್ರತಿಷ್ಠೆ ಬಿಡಬೇಕೆಂದು ತಿಳಿದಿದ್ದರು. ಈಗ ಹಾಗಲ್ಲ. ಕರೆಯದಿದ್ದರೆ ಭಾಗವಹಿಸುವುದಿಲ್ಲ. ಎಲ್ಲವೂ ಔಟ್‌ಸೋರ್ಸಿಂಗು. ಪ್ರತಿಷ್ಠೆ ಮತ್ತು ಪ್ರದರ್ಶನದ ಭಾಗ. ಈಗ ಸಭೆ ಸಮಾರಂಭ ಎಂದರೆ ಶುದ್ಧ ವ್ಯವಹಾರ; ಲಾಭನಷ್ಟ ಲೆಕ್ಕಾಚಾರ. ಇದಕ್ಕೆ ತಕ್ಕಂತೆ ನಮ್ಮದೀಗ ಮೈಕ್ರೋ ಫ್ಯಾಮಿಲಿ. ಮಕ್ಕಳೂ ಬೇಡವೆಂಬ ಮಟ್ಟಕ್ಕೆ ಹೊಸ ಪೀಳಿಗೆ ಜೀವಿಸುತ್ತಿದೆ. ಹೆಚ್ಚೆಂದರೆ ನಾನು ಮತ್ತು ನನ್ನೊಂದಿಗೆ ಇನ್ನೊಬ್ಬರು. ಅವರು ಲೈಫ್ ಕಂಪ್ಯಾನಿಯನ್ ಅಷ್ಟೇ. ಗಂಡ ಹೆಂಡತಿಯೋ, ಪ್ರಿಯಕರ ಪ್ರಿಯತಮೆಯೋ ಇಷ್ಟೇ ಕೊನೆವರೆಗೂ. ಅವರಲ್ಲೂ ಆಗಿಂದಾಗ್ಯೆ ನಿಷ್ಠಾವಂತಿಕೆಯ ಅದಲು ಬದಲು! ಗುರು ಮತ್ತು ಶಿಷ್ಯ, ಪ್ರಿಯ ಮತ್ತು ಪ್ರೇಯಸಿ, ಸ್ನೇಹಿತೆ ಮತ್ತವಳ ಸ್ನೇಹಿತ. ಅಧಿಕಾರಿ ಮತ್ತು ನೌಕರ, ವ್ಯಾಪಾರಿ ಮತ್ತು ಗ್ರಾಹಕ, ಮಾಲೀಕ ಮತ್ತು ಬಾಡಿಗೆದಾರ ಹೀಗೆ ಜಗತ್ತು ಸೀಮಿತ ಚೌಕಟ್ಟಿನಲ್ಲಿ ತನ್ನ ಮೂಗಿನ ನೇರಕ್ಕೆ ಬದುಕುತ್ತಿದೆ. ಯಾರು ಏನಾದರೂ ಮಾಡಿಕೊಳ್ಳಲಿ, ನಾನೊಬ್ಬ ಸುಖವಾಗಿದ್ದರೆ ಸಾಕು ಎಂಬ ಮನೋಧರ್ಮ ಬೆಳೆದು ಹೆಮ್ಮರವಾಗಿದೆ. ಮೇಲ್ನೋಟಕ್ಕಿದು ಸರಿಯಿರಬಹುದು. ಆದರೆ ಒಳನೋಟದಲ್ಲಿ ಇದು ವಿನಾಶಕ್ಕೆ ಬರೆದ ಮುನ್ನುಡಿ. ಭೂಮಿಯ ಯಾವುದೋ ದೇಶ ಅಣುಬಾಂಬಿನ ಪರೀಕ್ಷೆ ಮಾಡಿದರೆ ಉಳಿದ ಎಲ್ಲ ದೇಶಗಳೂ ಹೇಗೆ ಆತಂಕಿತಗೊಳ್ಳುತ್ತವೆಯೋ ಹಾಗೆ! ನಾನೊಬ್ಬ ತಪ್ಪು ಮಾಡಿದರೇನು ಮಹಾ! ಎಂಬ ಉಡಾಫೆಯೇ ಇಂದು ಪ್ರಪಂಚದ ಶಾಂತಿ ನೆಮ್ಮದಿಗೆ ತೊಡಕಾಗಿದೆ. ಸಕಲ ಜೀವಿಗಳಿಗೆ ಲೇಸನು ಬಯಸಿದ್ದ ಶರಣರಂತೆ ಬದುಕುವುದು ಅನಿವಾರ್ಯವಾಗಿದೆ. ಏಕೆಂದರೆ ಇರುವ ಈ ಒಂದು ಭೂಮಿಯನ್ನು ಉಳಿಸಿಕೊಳ್ಳಬೇಕಿದೆ. ನಮ್ಮ ಹಿಂದಿನವರು ಜತನ ಮಾಡಿ ಕೊಟ್ಟು ಹೋದಂತೆ, ನಾವೂ ನಮ್ಮ ಮುಂದಿನವರಿಗೆ ಜೋಪಾನವಾಗಿ ಕೊಟ್ಟು ಹೋಗಬೇಕಲ್ಲವೇ? ಇದು ನಮ್ಮೆಲ್ಲರ ಜವಾಬುದಾರಿ. ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ಸು ಅಲ್ಲಿಯೇ ನಿಲ್ಲಲಿಲ್ಲ; ಪ್ರಪಂಚದಾದ್ಯಂತ ಪಯಣಿಸಿತು. ಪ್ರಕೃತಿಗೆ ಮನುಷ್ಯನೇ ಟಾರ್ಗೆಟ್ ಆಯಿತು! ಉಳಿದ ಯಾವ ಪ್ರಾಣಿಪಕ್ಷಿಗಳಿಗೂ ಈ ಸೋಂಕು ಹರಡಲಿಲ್ಲ. ಅಂದರೇನಾಯಿತು? ನಿಸರ್ಗದ ದೃಷ್ಟಿಯಲ್ಲಿ ಮಾನವರು ಇಂಟ್ರಾಕನೆಕ್ಟಡ್! ಇದನ್ನು ಸಾಮಾಜಿಕ ನೆಲೆಯಲ್ಲಿಟ್ಟು ಅರ್ಥವಿಸಿಕೊಂಡರೆ ಸಿಗಾಲ್ ಅವರ ‘ನಾನುವು’ ಪರಿಕಲ್ಪನೆಯು ಹೆಚ್ಚು ಅರ್ಥವಾದೀತು. ಆದರೆ ಮತಿವಂತ ಮಾನವರಾದ ನಮ್ಮಲ್ಲಿ ಜೈವಿಕವಾಗಿ ಎಷ್ಟೊಂದು ಒಳಭೇದಗಳಿವೆ. ಜಾನಾಂಗಿಕ ಡಿಫರೆನ್ಸಸ್ ಇದೆ. ಸಾಂಸ್ಕೃತಿಕ ತರತಮಗಳಿವೆ. ಆಲೋಚನೆಯ ವೈವಿಧ್ಯಗಳಿವೆ. ಇರಲಿ. ಆದರೆ ಇವೆಲ್ಲಾ ಲೋಕಕಲ್ಯಾಣಕ್ಕಾಗಿ ಸಂಯೋಜಿತಗೊಳ್ಳಬೇಕು; ನಾವೆಲ್ಲ ಒಂದಾಗಬೇಕು. ‘ಮಿ’ ಎಂಬುದು ‘ವಿ’ ಆಗಬೇಕು. ಕುವೆಂಪು ಅವರು ಪ್ರತಿಪಾದಿಸಿದ ವಿಶ್ವಮಾನವ ಪರಿಕಲ್ಪನೆಯನ್ನೇ ಈ ನಾನುವು ಹೋಲುತ್ತದೆ. ‘ರೂಪರೂಪಗಳನು ದಾಟಿ ನಾಮಕೋಟಿಗಳನು ಮೀಟಿದ’ ಹೃದಯವೈಶಾಲ್ಯ ಸಾಧಿತವಾಗಬೇಕಿದೆ. ‘ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ’ ಎಂಬುದನ್ನು ನಾನು ಹೀಗೆ ಅರ್ಥವಿಸಿಕೊಂಡಿದ್ದೇನೆ. ಅಂತಿಮವಾಗಿ ನಾನು ಎಂಬುದು ನಾವು ಆಗುವತನಕ ಈ ಲೋಕಕ್ಕೆ ತೊಡಕೇ! ಏಕೆಂದರೆ ನಾನು ಎಂಬುದು ವ್ಯಕ್ತಿಯ ಅಹಂಕಾರ. ನಾವು ಎಂಬುದು ಒಗ್ಗಟ್ಟಿನ ಝೇಂಕಾರ.

-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

8 Responses

  1. MANJURAJ says:

    ಪ್ರಕಟಿಸಿದ ಸುರಹೊನ್ನೆಗೆ ನನ್ನ ಧನ್ಯವಾದ

  2. ಮಂಜುಳಮಿರ್ಲೆ says:

    ನಿಜ ಮಿ ಎಂಬುದು ವಿ ಆಗಬೇಕು. ಸಂಬಂಧಗಳ ಎಳೆಗಳೆಲ್ಲ ಜಾಳಾಗುತ್ತಿರುವ ಈ ಹೊತ್ತಿನಲ್ಲಿ ಸಿಗಾಲ್ ರವರು ಪ್ರಸ್ತುತ ಪಡಿಸಿದ ವಿಷಯ ಅರ್ಥಪೂರ್ಣ. ತಮ್ಮ ಲೇಖನದ ಮೂಲಕ ನಮಗೆ ಅವರನ್ನು ಚೆನ್ನಾಗಿ ಅರ್ಥೈಸಿರುವಿರಿ ಧನ್ಯವಾದಗಳು ಸರ್.

  3. ನಯನ ಬಜಕೂಡ್ಲು says:

    ಬಹಳ ಸುಂದರವಾದ ಲೇಖನ. ಮಾನವನ ಯೋಚನಾ ಲಹರಿ ಯಾವ ದಿಕ್ಕಿನಲ್ಲಿ ಸಾಗುತ್ತದೆ ಅನ್ನುವುದನ್ನು ಬಿಂಬಿಸುತ್ತದೆ.

  4. ಅರ್ಥಪೂರ್ಣ ಲೇಖನ… ನಮ್ಮನ್ನು ನಾವು ಸೂಕ್ಷ್ಮ ಅವಲೋಕನ ಮಾಡಿಕೊಳ್ಳುವಂತಿದೆ ಸಾರ್

  5. Chithra Umashankar says:

    ಬಹಳ ಸುಂದರ ಲೇಖನ

  6. Dr. HARSHAVARDHANA C N says:

    Nice article sir

  7. ಶಂಕರಿ ಶರ್ಮ says:

    ಸಂಬಂಧಗಳ ಸಂಕಲೆ ಬಿರುಕು ಬಿಡುತ್ತಿರುವ ಈ ಕಾಲಘಟ್ಟದಲ್ಲಿ, ಈ ಲೇಖನವು ಓದುಗರನ್ನು ಆತ್ಮಾವಲೋಕನಕ್ಕೆ ಒಡ್ಡುತ್ತದೆ. ಸಂಬಂಧಗಳ ಸವಿರುಚಿಯನ್ನು ಸವಿದ ನಾವು, ಅದರ ಕಹಿಯನ್ನೂ ಕಾಣುವಂತಾಗಿದೆ ಎಂಬುದು ವಾಸ್ತವ…ಇದನ್ನು ಅರಗಿಸಿಕೊಳ್ಳುವುದೂ ಕಷ್ಟ! ನಾನು ನಾವಾಗಬೇಕಾದ ಅನಿವಾರ್ಯತೆಯನ್ನು ಹೊಸ ಪೀಳಿಗೆ ಅರ್ಥೈಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ..!!

  8. ಪದ್ಮಾ ಆನಂದ್ says:

    ಸ್ವಾರ್ಥಭಾವ ವಿನಾಶಕ್ಕೆ ಬರೆದ ಮುನ್ನುಡಿ – ನಿಜಕ್ಕೂ ಸದಾ ಮನಸ್ಸಿನಲ್ಲಿಟ್ಟುಕೊಂಡು ಮುಂದೆ ಸಾಗಬೇಕು ಎಂಬ ಸಂದೇಶ ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯವಾಗಿದೆ. ಪ್ರಬುದ್ಧ ಲೇಖನ ಮನವನ್ನು ಚಿಂತನೆಗೆ ಹಚ್ಚುವಂತಿದೆ.

Leave a Reply to ಮಂಜುಳಮಿರ್ಲೆ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: