ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 9

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ಹನೋಯ್ ನಲ್ಲಿ ಎರಡನೆಯ ದಿನ..16/09/2024

ಹನೋಯ್ ನಗರದ ಹೊರವಲಯದ ಹಸಿರು  ಹೊಲಗಳ ನಡುವಿನ ರಸ್ತೆಯಲ್ಲಿ  ನಮ್ಮ ಬಸ್ಸು ಚಲಿಸುತಿತ್ತು. ಕಿಟಿಕಿಯಿಂದ ಹೊರಗೆ ನೋಡುತ್ತಿದ್ದ  ನನಗೆ   ಭತ್ತದ ಕೃಷಿಯ  ಬಗ್ಗೆ ಏನು ಅನುಭವವಿಲ್ಲದಿದ್ದರೂ, ಇಲ್ಲಿಯ ಭತ್ತದ ಸಸಿಗಳು ಬಹಳ ಒತ್ತೊತ್ತಾಗಿ ಇವೆಯಲ್ಲವೇ ಅನಿಸಿತ್ತು.   ನಾನು ಕಂಡಂತೆ,  ನಮ್ಮಲ್ಲಿ ಮೊದಲು ಬೀಜದ ಭತ್ತವನ್ನು ಹಸನುಗೊಳಿಸಿದ ಗದ್ದೆಯಲ್ಲಿ ಬಿತ್ತುತ್ತಾರೆ.  ಅಲ್ಲಿ  ಮೊಳೆತು ಚಿಗುರಿದ  ಚಿಕ್ಕ ಸಸಿಗಳನ್ನು ಕಿತ್ತು ಕಂತೆಗಳನ್ನಾಗಿ ಮಾಡಿ,   ಉತ್ತು ಹದಮಾಡಿದ ಗದ್ದೆಗಳಲ್ಲಿ ನಿಗದಿತ ಅಂತರದಲ್ಲಿ  ‘ನೇಜಿ ನೆಡುತ್ತಾರೆ’ .  ಸಾಂದರ್ಭಿಕ ಜಾನಪದ ಹಾಡುಗಳನ್ನು  ಹೇಳುತ್ತಾ ಸಾಮೂಹಿಕವಾಗಿ ನೇಜಿ ನೆಡುವುದು ಬೇಸಾಯಗಾರರಿಗೆ ಸಂಭ್ರಮ.  ಹೀಗೆ ನೆಟ್ಟ ಭತ್ತದ ಸಸಿಗಳು ಶಾಲಾ ಎಸೆಂಬ್ಲಿಯಲ್ಲಿ ಶಿಸ್ತಾಗಿ ನಿಂತ ಮಕ್ಕಳಂತೆ ಶೋಭಿಸುವ ದೃಶ್ಯ ಕಣ್ಣಿಗೆ ತಂಪು. ಆದರೆ ಇಲ್ಲಿಯ ಗದ್ದೆಗಳನ್ನು ನೋಡಿದಾಗ,  ಭತ್ತವನ್ನು  ಎರಚಿ  ಅಲ್ಲಲ್ಲಿ ಹುಟ್ಟಿಕೊಂಡ ಸಸಿಗಳನ್ನು ನಾಟಿ ಮಾಡದೆ  ಹಾಗೆಯೇ  ಬೆಳೆಯಲು ಬಿಟ್ಟಂತೆ ಕಾಣಿಸಿತು.  ಈ ಬಗ್ಗೆ, ಆಮೇಲೆ ಇನ್ನೊಬ್ಬ  ಮಾರ್ಗದರ್ಶಿಯನ್ನು ಕೇಳಿದಾಗ ಗೊತ್ತಾದುದೇನೆಂದರೆ ವಿಯೆಟ್ನಾಂನಲ್ಲಿ ಎರಡು ವಿಧದಲ್ಲಿ ಭತ್ತ ಬೆಳೆಯುತ್ತಾರೆ. ಭತ್ತ ಇಲ್ಲಿಯ ಮುಖ್ಯ ಆಹಾರ ಬೆಳೆ ಹಾಗೂ ವಿದೇಶಗಳಿಗೆ ರಫ್ತಾಗಿ ಆದಾಯ ತರುವ ಬೆಳೆಯೂ ಹೌದು.  ವಿಯೆಟ್ನಾಂನಲ್ಲಿ ಹಲವಾರು ನದಿ, ಉಪನದಿಗಳು ಹಾಗೂ ಅವುಗಳು ಸಮುದ್ರ  ಸೇರುವ ಅಳಿವೆ ಪ್ರದೇಶಗಳಿವೆ.  ಫಲವತ್ತಾದ, ಸದಾ ನೀರು ನಿಂತಿರುವ  ಡೆಲ್ಟಾ ಅಥವಾ ನದೀಮುಖಜಭೂಮಿಯಿದೆ.  ಕೆಲವೆಡೆ ನೀರಾವರಿಯ ಅಗತ್ಯವಿರುವ ಕೃಷಿಭೂಮಿಯೂ ಇದೆ.


ಹಾಗಾಗಿ ಇಲ್ಲಿಯ ರೈತರು, ಡೆಲ್ಟಾ ಪ್ರದೇಶದಲ್ಲಿ ಭತ್ತವನ್ನು ನೇರವಾಗಿ ಗದ್ದೆಯಲ್ಲಿ  ಬಿತ್ತಿ ಬೆಳೆ ತೆಗೆಯುತ್ತಾರೆ. ಇದಕ್ಕೆ  ‘ವೆಟ್ ರೈಸ್’ ಅನ್ನುತ್ತಾರೆ. ಆದರೆ ಈ ಪದ್ಧತಿಯಲ್ಲಿ ಕಳೆ ನಿರ್ವಹಣೆ ಮತ್ತು ಗೊಬ್ಬರ ಹಾಕುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ ನಾಟಿ ಮಾಡುವ ಸಮಯ, ಖರ್ಚು ಉಳಿತಾಯವಾಗುತ್ತದೆ. ಕೆಲವು ಎತ್ತರದ ಜಾಗಗಳಲ್ಲಿ ನೀರಾವರಿ ಬೇಕಾಗುವ ಗದ್ದೆಗಳೂ ಇವೆ. ಅಂತಹ ಪ್ರದೇಶಗಳಲ್ಲಿ , ಮೊದಲು ಭತ್ತದ  ಚಿಕ್ಕ ಸಸಿಗಳನ್ನು ಮಾಡಿ, ಆಮೇಲೆ  ನಾಟಿ ಮಾಡಿ ಬೆಳೆ ತೆಗೆಯುತ್ತಾರೆ. ಇದಕ್ಕೆ ‘ ಅಪ್ ಲ್ಯಾಂಡ್ ರೈಸ್’ ಎಂದು ಹೆಸರು. ಒಟ್ಟಿನಲ್ಲಿ ಇಲ್ಲಿ ಭತ್ತ ಚೆನ್ನಾಗಿ ಬೆಳೆಯುತ್ತದೆ ಹಾಗೂ  ಎಕರೆವಾರು ಇಳುವರಿಯೂ ಇತರ ಕಡೆಗಳಿಗಿಂತ ಗಮನಾರ್ಹವಾಗಿ ಹೆಚ್ಚು. ಆದರೆ ರೈತರಿಗೆ ನಾಟಿ ಮಾಡುವ, ನೀರು ಹಾಯಿಸುವ ಹೆಚ್ಚುವರಿ ಕೆಲಸವಿರುತ್ತದೆ. ವಿಯೆಟ್ನಾಂನ ಭತ್ತ ಬೆಳೆಸುವ ಪದ್ಧತಿಗೆ ಜಾಗತಿಕ ಮನ್ನಣೆ ಲಭಿಸಿದೆ.  ಪುಟ್ಟ ರಾಷ್ಟ್ರವಾದರೂ, ವಿಯೆಟ್ನಾಂ ಜಗತ್ತಿನಲ್ಲಿ ಅಕ್ಕಿ ಉತ್ಪಾದನೆಯಲ್ಲಿ ಐದನೆಯ ಸ್ಥಾನದಲ್ಲಿದೆ.

ವಿಯೆಟ್ನಾಂನ ಸ್ಥಳಗಳ ಹೆಸರು ನನಗೆ ಗೊಂದಲ ಮೂಡಿಸುವಂತೆ ಇದ್ದುವು. ಹನೋಯ್, ಹ್ವಾಯ್ ಆನ್, ಹೋವಾ ಲು , ಹಾಲಾಂಗ್  ಇತ್ಯಾದಿ.   ಇಂಗ್ಲಿಷ್ ಅಕ್ಷರಗಳಂತೆ ಇದ್ದರೂ ಕೆಲವು ಪದಗಳ ಉಚ್ಚಾರಣೆ ಬೇರೆ ರೀತಿ. ಇನ್ನು ಮನುಷ್ಯರ ಹೆಸರುಗಳು “ಪೊ, ಮೊ, ಚೊ,  ಟೀನ್,  ಚಾಂಗ್, ಟಿಂಗ್ , ಹುಂಗ್….” ಎಂಬಂತಹ ಒಂದು ಅಥವಾ ಎರಡು ಪದಗಳ ಸರಳ ಹೆಸರುಗಳು.  ಆ ಹೆಸರುಗಳನ್ನು ಕೂಡ,  ಕಣ್ಣರಳಿಸಿ ರಾಗವಾಗಿ  ಉಚ್ಚರಿಸುತ್ತಿದ್ದರು.  ಕೇವಲ  ನಾಲ್ಕು ಅಕ್ಷರವುಳ್ಳ , ಒತ್ತಕ್ಷರವಿಲ್ಲದ ‘ಹೇಮಮಾಲಾ’ ಎಂಬ ನನ್ನ ಹೆಸರನ್ನು ಹೇಳಲು ಅವರು ಬಹಳ ಕಷ್ಟಪಡುತ್ತಿದ್ದ ಹಾಗೆ ನನಗೆ ಅನಿಸಿತು.  ಹಾಗಾದರೆ, ಇವರ ಉಚ್ಚಾರಣೆಯಲ್ಲಿ  ‘ಸುಬ್ರಹ್ಮಣ್ಯೇಶ್ವರ, ಅನ್ನಪೂರ್ಣೇಶ್ವರಿ ‘  ಇತ್ಯಾದಿ ಉದ್ದದ, ಒತ್ತಕ್ಷರವುಳ್ಳ ಹೆಸರುಗಳು ಹೇಗೆ ಕೇಳಬಹುದು ಎಂದು ಆಲೋಚಿಸಿ ನಗು ಬಂತು.

ಸುಮಾರು ಒಂದು ಗಂಟೆ ಪ್ರಯಾಣಿಸಿ,     ಬಸ್ಸು  ‘ಟಾಮ್ ಕಾಕ್’  (Tam Coc) ಎಂಬಲ್ಲಿ ಒಂದು ಫಾಕ್ಟರಿಯನ್ನು ಹೋಲುವ ಕಟ್ಟಡದ ಮುಂದೆ ನಿಂತಿತು. ಅದು ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಹಾಗೂ ಮಾರುವ ಕೇಂದ್ರ. ಪ್ರವಾಸಿಗಳ ಅನುಕೂಲಕ್ಕಾಗಿ ಅಲ್ಲಿ ವಾಶ್ ರೂಮ್ ವ್ಯವಸ್ಥೆಯಿತ್ತು.ಚಹಾ/ಕಾಫಿ/ಬೇಕರಿ ತಿನಿಸುಗಳು/ನೂಡಲ್ಸ್  ಮೊದಲಾದುವುಗಳು ಖರೀದಿಗೆ ಲಭ್ಯವಿದ್ದುವು.  ಕಟ್ಟಡದ ಒಳಗಡೆ   ಬಿದಿರಿನ ಗಿಡಗಳ, ಬಿದಿರಿನ ಉತ್ಪನ್ನಗಳ ಹಾಗೂ ಸ್ಥಳೀಯ ಪ್ರವಾಸಿ ತಾಣಗಳ ವಿನ್ಯಾಸ   ಸೊಗಸಾಗಿತ್ತು. ಚೆಂದದ ಸ್ಥಳೀಯ ಉಡುಗೆಯಾದ ‘ಆಸೋಯ್’ ತೊಟ್ಟ   ಯುವತಿಯರು ನಮಗೆ ನಿಂಬೆ ಚಹಾ ಕೊಟ್ಟು ಸ್ವಾಗತಿಸಿದರು.

ಆಮೇಲೆ,  ನಮ್ಮನ್ನು ಅಲ್ಲಿದ್ದ ಕೊಠಡಿಯಲ್ಲಿ ಕೂರಿಸಿದರು. ಎಳೆಯ ಯುವತಿಯೊಬ್ಬಳು  ಬಿದಿರಿನ ನಾರಿನಿಂದ ತಯಾರಿಸುವ ಹತ್ತಿಯನ್ನು ತೋರಿಸಿ, ಆ ಹತ್ತಿಯು ಮಾಮೂಲಿ ಹತ್ತಿಗಿಂತ ದೃಢವಾದುದು, ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ, ಮರುಬಳಕೆ ಮಾಡಲು  ಸಾಧ್ಯವಾಗುತ್ತದೆ ಇತ್ಯಾದಿ ವಿವರಿಸಿದಳು. ಬಿದಿರಿನ ಹತ್ತಿಯಿಂದ ತಯಾರಿಸಲಾದ  ಬೆಡ್ ಶೀಟ್, ಕೈ ಒರೆಸುವ ವಸ್ತ್ರ, ಸ್ನಾನದ ಟವೆಲ್, ಒದ್ದೆ ತಲೆಗೆ ಸುತ್ತಬಹುದಾದ ನೀರು ಹೀರಿಕೊಳ್ಳುವ ಬಟ್ಟೆ, ಗೌನ್, ಶರ್ಟ್ಸ್, ಟೋಪಿಗಳು, ಕಾಲುಚೀಲ , ಒಳ ಉಡುಪುಗಳು ಇತ್ಯಾದಿಗಳನ್ನು ತೋರಿಸಿದಳು.  ಜೊತೆಗೆ , ಬಿದಿರಿನ ಬಾಚಣಿಗೆ, ಬೀಸಣಿಗೆ, ಖುರ್ಚಿ, ಮೇಜು, ಲಟ್ಟಣಿಗೆ, ವಿವಿಧ ಕರಕುಶಲವಸ್ತುಗಳು, ಮಣಿ ಹಾರಗಳು, ಇತರ ಆಭರಣಗಳು,   ನಾಜೂಕಿನ ಬುಟ್ಟಿಗಳು, ಆಭರಣ ಪೆಟ್ಟಿಗೆಗಳು, ಕಡೆಗೋಲು, ಬಿದಿರಿನ ಮಸಿಯಿಂದ ತಯಾರಿಸಲಾದ ಕಾಡಿಗೆ, ತಲೆಗೆ ಹಚ್ಚುವ ಬಣ್ಣ, ಟೂಥ್ ಪೇಸ್ಟ್, ಪೆನ್ನು, ಪೆನ್ಸಿಲ್, ಅಲಂಕಾರಿಕ ವಸ್ತುಗಳು  …ಹೀಗೆ ಹಲವಾರು ವಸ್ತುಗಳ ಬಗ್ಗೆ ತಿಳಿಸಿ ತನ್ನ ಪ್ರಾತ್ಯಕ್ಷಿಕೆ ಮುಗಿಸಿದಳು.

ಅದಾದ ಮೇಲೆ ಅಲ್ಲಿ ಮಾರಾಟಕ್ಕಿಡಲಾದ  ಹಲವಾರು ಬಿದಿರಿನ ವಸ್ತುಗಳನ್ನು ನೋಡಿದೆವು. ದಿನಬಳಕೆಗೆ ಉಪಯುಕ್ತವಾದ ಹಲವಾರು ವಸ್ತುಗಳನ್ನು ಹಾಗೂ ಕಲಾತ್ಮಕವಾದ ಉತ್ಪನ್ನಗಳನ್ನು ಬಿದಿರಿನಿಂದ ತಯಾರಿಸಿರುವ ಇವರ ಜಾಣ್ಮೆಯನ್ನು ಮೆಚ್ಚುತ್ತಾ ದರಪಟ್ಟಿಯನ್ನು ನೋಡಿದಾಗ ದುಬಾರಿ ಎನಿಸಿತು. ಬಂದ ನೆನಪಿಗಾಗಿ ಕೆಲವು ಸಣ್ಣ ಪುಟ್ಟ ವಸ್ತುಗಳನ್ನು ಖರೀದಿಸಿದೆವು. ಅಮೆರಿಕನ್ ಡಾಲರ್ ,  ವಿಯೆಟ್ನಾಂ ಡಾಂಗ್   ಅಥವಾ ಕ್ರೆಡಿಟ್ ಕಾರ್ಡ್ ನಲ್ಲಿ ಹಣ ಪಾವತಿಸಲು ಅವಕಾಶವಿತ್ತು. ಹೀಗೆ ಸುಮಾರು ಒಂದು ಗಂಟೆ ಕಾಲಕ್ಷೇಪ ಆಗಿ, ಬಸ್ಸಿಗೆ ಮರಳಿದೆವು.  ಪ್ರಯಾಣ ನಿನ್ಹ್ ಬಿನ್ಹ್  ನಗರದತ್ತ ಮುಂದುವರಿಯಿತು.

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=41541

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

6 Responses

  1. MANJURAJ says:

    ಚೆನ್ನಾಗಿದೆ ಮೇಡಂ

    ಮುಂದಿನ ಭಾಗಕೆ ಕಾಯುವಂತಿದೆ

  2. ಭತ್ತದ ಗದ್ದೆಗಳ ಬಗ್ಗೆ ಇರುವ ವಿವರಣೆ ಹಾಗೂ ಬಿದಿರಿನಿಂದ ತಯಾರಾಗುವ ಉತ್ಪನ್ನಗಳ ಮಾಹಿತಿ ಕಣ್ಣಿಗೆ ಕಟ್ಟುವಂತಿದೆ
    ವಂದನೆಗಳು ಮೇಡಂ

  3. ನಿಮ್ಮ ಪ್ರವಾಸ ಕಥನ.. ಸರಾಗವಾಗಿ ಓದಿ ಸಿಕೊಂಡುಹೋಗುವುದಷ್ಟೇ ಅಲ್ಲ ಆ ಸ್ಥಳಗಳ ಮಾಹಿತಿಯನ್ನು ಒಳಗೊಂಡಿರುತ್ತದೆ..ಧನ್ಯವಾದಗಳು ಗೆಳತಿ ಹೇಮಾ

  4. ನಯನ ಬಜಕೂಡ್ಲು says:

    ಸೊಗಸಾಗಿದೆ. ಭತ್ತದ ಕೃಷಿಯ ಕುರಿತ ಮಾಹಿತಿ ಚೆನ್ನಾಗಿದೆ.

  5. ಪದ್ಮಾ ಆನಂದ್ says:

    ಸ್ಥಳಕ್ಕೆ ತಕ್ಕಂತೆ ಬೆಳೆಯುವ ಬತ್ತದ ಬೆಳೆ ಮತ್ತು ಬಿದಿರಿನ ವಸ್ತುಗಳ ಕುರಿತಾದ ಆಸಕ್ತಿದಾಯಕ, ಆಕರ್ಷಕ ಮಾಹಿತಿಯೊಂದಿಗೆ ಕಥನ ಸುಲಲಿತವಾಗಿ ಸಾಗುತ್ತಿದೆ.

  6. ಶಂಕರಿ ಶರ್ಮ says:

    ಪುಟ್ಟ ದೇಶ ವಿಯೆಟ್ನಾಂನಲ್ಲಿ ಭತ್ತದ ಸಾಂಪ್ರದಾಯಿಕ ಕೃಷಿಯನ್ನು ಬಹಳ ಚೆನ್ನಾಗಿ ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಬಿದಿರಿನಿಂದ ತಯಾರಿಸಿದ ಬಟ್ಟೆಗಳು ಈಗ ನಮ್ಮಲ್ಲೂ ಲಭ್ಯವಿವೆ. ಅವು ಬಹಳ ಚೆನ್ನಾಗಿ ನೀರನ್ನು ಹೀರುವುದರಿಂದ, ಬೆಲೆ ಸ್ವಲ್ಪ ಹೆಚ್ಚೆನಿಸಿದರೂ ಉಪಯೋಗಕ್ಕೆ ಉತ್ತಮವೆನಿಸಿವೆ. ಬಹಳಷ್ಟು ಮಾಹಿತಿಗಳನ್ನು ಒಳಗೊಂಡ ಪ್ರವಾಸ ಕಥನವು ಚೆನ್ನಾಗಿದೆ…ಧನ್ಯವಾದಗಳು ಹೇಮಾ ಅವರಿಗೆ.

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: