ಓಹೋ ಹಿಮಾಲಯ
ಕಳೆದ ತಿಂಗಳು ನಮ್ಮ ಬಹುವರ್ಷಗಳ ಹಂಬಲವಾದ ನೇಪಾಳದ ಪ್ರವಾಸ ಈಡೇರಿದ್ದು ಒಂದು ಸಂತಸಕರ ಅನುಭವವಾಗಿತ್ತು. ಏಪ್ರಿಲ್ 17 ನೆಯ ತಾರೀಖು ರಾಮನವಮಿಯ ದಿನ ಅಯೋಧ್ಯೆಯಲ್ಲಿ ಬಾಲರಾಮನ ದರ್ಶನದಿಂದ ಪ್ರವಾಸ ಆರಂಭವಾಗಿತ್ತು.ಮಾರನೆಯ ದಿನ ಗೋರಖ್ ಪುರ ಮೂಲಕ ನೇಪಾಳ ಗಡಿಸ್ಥಳ ಸುನೈನಿ ತಲುಪಿ ಅಲ್ಲಿ ತಪಾಸಣೆ ಅಧಿಕಾರಿಗಳಿಗೆ ನಮ್ಮ ಆಧಾರ್ ಕಾರ್ಡ್ ತೋರಿಸಿ ಲಗೇಜುಗಳನ್ನು ಸ್ಕ್ಯಾನ್ ಪರೀಕ್ಷೆಗೆ ಒಡ್ಡಿ ಹೊರಬಂದೆವು. ಲುಂಬಿನಿ,ಪೋಖರಾ, ಮನೋಕಾಮನಾ ಕಠಮಂಡುಗಳಲ್ಲಿ ಬುದ್ಧವಿಹಾರ, ದೇವಸ್ಥಾನಗಳ ವೀಕ್ಷಣೆ ಮುಗಿಸಿದ್ದರೂ ಹಿಮಾಲಯದ ಪರ್ವತಶ್ರೇಣಿಗಳ ವೀಕ್ಷಣೆಯ ಪ್ರವಾಸದತ್ತಲೇ ನಮ್ಮಲ್ಲಿ ಹಲವರ ಗುರಿ ನೆಟ್ಟಿತ್ತು.ಮೌಂಟನ್ ಪ್ರವಾಸಕ್ಕೆ ನೋಂದಾಯಿಸಿಕೊಂಡು ಪ್ರತ್ಯೇಕ ಶುಲ್ಕ ಹತ್ತು ಸಾವಿರ ರೂಪಾಯಿ ನೀಡಿದೆವು.
ಮಾರನೆಯ ದಿನ ಬೆಳಗಿನ ಜಾವ ಐದು ಗಂಟೆಗೆ ಕಠಮಂಡುವಿನ ತ್ರಿಭುವನ ಅಂತರರಾಷ್ಟೀಯ ವಿಮಾನ ನಿಲ್ದಾಣ ತಲುಪಿದೆವು.ವಿಮಾನ ನಿಲ್ದಾಣದ ಭದ್ರತಾ ಪ್ರಕ್ರಿಯೆಗಳನ್ನು ಮುಗಿಸಿ ಯೇತಿ ಏರ್ ಲೈನ್ಸಿನ ಎವರೆಸ್ಟ್ ಪ್ರವಾಸಕ್ಕಾಗಿ ಕಾತರಿಸುತ್ತಿದ್ದೆವು. ಹವಾಮಾನ ಪ್ರತಿಕೂಲವಾಗದಿರಲಿ ,ವಿಮಾನಯಾನ ರದ್ದಾಗದಿರಲಿ ಎಂಬುದೇ ಎಲ್ಲ ಹಿಮಾಲಯ ದರ್ಶಕರ ಹಾರೈಕೆ ಯಾಗಿತ್ತು..ಏಕೆಂದರೆ ಕೇವಲ ಹದಿನೈದು ದಿನಗಳ ಹಿಂದಿನ ಪ್ರವಾಸದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ವಿಮಾನಯಾನವೇ ರದ್ದಾಗಿತ್ತು. ಮತ್ತೊಂದು ವಿಷಾದದ ಸಂಗತಿಯೆಂದರೆ ಅಂಥ ಪರಿಸ್ಥಿತಿಯಲ್ಲಿ ವಿಮಾನಯಾನ ಸಂಸ್ಥೆಯವರು ಸ್ವೀಕರಿಸಿದ ಯಾವುದೇ ಮೊತ್ತವನ್ನು ವಾಪಸು ಮಾಡುವುದಿಲ್ಲ ಎಂಬುದು.
ಅಂತೂ ಹವಾಮಾನ ಅನುಕೂಲಕರವಾಗಿ ಆರೂಕಾಲು ಗಂಟೆಗೆ ವಿಮಾನದೊಳಕ್ಕೆ ಪ್ರವೇಶ ದೊರಕಿತು.ತುಂಬ ಚಿಕ್ಕ ವಿಮಾನ. ಪ್ರತಿಯೊಬ್ಬರಿಗೂ ಕಿಟಕಿ ಬದಿಯ ಆಸನ ನೀಡಲಾಗಿತ್ತು. ನಮ್ಮ ತಂಡದಲ್ಲಿ ಬಂದಿದ್ದ 27 ಪ್ರವಾಸಿಗರಲ್ಲಿ ನಾಲ್ಕು ಜನ ಮಾತ್ರ ಈ ಯಾನಕ್ಕೆ ಆಸಕ್ತಿ ತೋರಲಿಲ್ಲ. ಕಿಟಕಿ ಬದಿಯ ನಮ್ಮ ಆಸನವನ್ನು ಆಕ್ರಮಿಸಿದ ತಕ್ಷಣ ಹಿಮಾಲಯ ಶ್ರೇಣಿಯ ಒಂದು ನಕ್ಷೆಯನ್ನು ಪ್ರತಿಯೊಬ್ಬರಿಗೂ ನೀಡಲಾಯಿತು.ಅದರಲ್ಲಿ ಪರ್ವತದ ಹೆಸರು ಅದರ ಎತ್ತರ (ಮೀಟರು ಹಾಗೂ ಅಡಿಗಳಲ್ಲಿ ) ಮುಂತಾದ ವಿವರಗಳಿದ್ದವು.ಆ ನಕ್ಷೆಯನ್ನು ಕೈಯಲ್ಲೇ ಇರಿಸಿಕೊಳ್ಳಬೇಕೆಂದೂ ಪರ್ವತಗಳನ್ನು ಗುರುತಿಸಲು ಅದರಿಂದ ಸಹಾಯವಾಗುತ್ತದೆಂದೂ ತಿಳಿಸಲಾಯಿತು. ರನ್ ವೇ ಸಂಚಾರದ ಹಂಗು ಕಳೆದುಕೊಂಡ ವಿಮಾನ ನಭಕ್ಕೆ ಜಿಗಿಯಿತು.
ದೂರದಲ್ಲಿ ಪರ್ವತಶ್ರೇಣಿ ಅಚ್ಚುಕಟ್ಟಾಗಿ ಜೋಡಿಸಿಟ್ಟ ಸಕ್ಕರೆ ಅಚ್ಚಿನಂತೆ ಕಾಣುತ್ತಿತ್ತು .ವಿಮಾನ ಆದಷ್ಟೂ ಹತ್ತಿರದಿಂದ ಮೊದಲು ಎಡದಿಂದ ಬಲಕ್ಕೆ ಚಲಿಸುವುದೆಂದೂ ನಂತರ ಬಲದಿಂದ ಎಡಕ್ಕೆ ಚಲಿಸುವುದೆಂದೂ ,ಎಲ್ಲರಿಗೂ ವೀಕ್ಷಿಸಲು ಸಮಾನ ಅವಕಾಶ ಇರುತ್ತದೆಂದೂ ಸಿಬ್ಬಂದಿ ತಿಳಿಸಿದರು.
ಶುಭ್ರ ನೀಲಾಕಾಶ, ಡಿಕ್ಕಿ ಹೊಡೆವ ಮೋಡಗಳ ತುಂಟಾಟವ ಲೆಕ್ಕಿಸದೆ ಅಚಲವಾಗಿ ನಿಂತ ಬೆಟ್ಟ ಒಂದೊಂದೂ ರಮ್ಯಲೋಕಕ್ಕೆ ಕೊಂಡೊಯ್ದಿತು. ಸಿಬ್ಬಂದಿ ಆಗಾಗ್ಗೆ ಬಂದು ತನ್ನ ಮಧುರಕಂಠದಲ್ಲಿ ಇದು ಗಣೇಶ್ ಹಿಮಲ್, ಅದು ಲಾಂಗ್ಟಾಂಗ್,ಅದರ ಪಕ್ಕ ಇರುವುದು ಶೀಶ ಪಾಂಗ್ಮ ,ಛೋಬಾ ಭಾಮರೆ ಪರ್ವತದ ಪಕ್ಕಿರುವುದೇ ಗೌರಿಶಂಕರ ಎಂದು ವಿವರಣೆ ನೀಡಿದ್ದೇ ಅಲ್ಲದೆ ನೀಡಿದ್ದ ನಕ್ಷೆಯ ಸಹಾಯದಿಂದ ನಾವೇ ಛುಗಿಮಗೊ,ಕಾರ್ಯೋಲಿಂಗ್,ಪುಮೊರಿ ಮತ್ತು ಮುಖ್ಯವಾಗಿ ನೇಪಾಳಿ ಭಾಷೆಯಲ್ಲಿ ಸಾಗರಮಾತಾ ಎಂದು ಹೆಸರಾದ ಮೌಂಟ್ ಎವರೆಸ್ಟ್ ಮುಂತಾದ ಶಿಖರಗಳನ್ನು ಗುರುತಿಸಿದಾಗ ನಮ್ಮ ಸಂತಸ ಎಡ್ಮಂಡ್ ಹಿಲರಿ ತೇನ್ಸಿಂಗ್ ಗಿಂತ ಕಡಿಮೆಯೇನಿರಲಿಲ್ಲ. ಕಾಂಚನಜುಂಗ, ಮಕಾಲುಗಳೂ ಕೊನೆಯಾಗಿ ನಮ್ಮ ಕಣ್ಣ ತುಂಬಿದವು. ಈ ಬೃಹತ್ ಪರ್ವತಗಳಲ್ಲಿ ಛೋಟಾ ಭಾಮರೆ ಮಾತ್ರ 19587 ಅಡಿ. ಉಳಿದವೆಲ್ಲ 20000 ಸಾವಿರ ಅಡಿ ಮೀರಿದವೇ.
ಸಂತಸದ ಗಳಿಗೆಗೂ ಮಿತಿ ಇರುತ್ತದೆ ಅಲ್ಲವೆ?ವಿಮಾನ ಎಡ ಬಲದ ಸುತ್ತಾಟ ಮುಗಿಸಿ ಹಿಮಾಲಯ ಶ್ರೇಣಿಯ ಭವ್ಯತೆಯನ್ನೂ ಸೌಂದರ್ಯವನ್ನೂ ನಮ್ಮ ಚಿತ್ತಭಿತ್ತಿಯಲಿ ಅಚ್ಚೊತ್ತಿ ಧರೆಗಿಳಿಯಿತು. ನಾವೆಲ್ಲ ಏನೋ ದೊಡ್ಡ ಸಾಹಸ ಮಾಡಿದವರಂತೆ ವಿಮಾನಯಾನ ಸಂಸ್ಥೆಯವರು ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಿದರು. ಸೌಜನ್ಯದಿಂದ ಮಾರ್ಗದರ್ಶನ ಮಾಡಿದ ಸಿಬ್ಬಂದಿಗೆ ವಿಶೇಷ ವಂದನೆ ಸಲ್ಲಿಸಿ ವಾಪಸು ವಾಸ್ತವ್ಯದ ಹೋಟೆಲಿನತ್ತ ಚಲಿಸಿದೆವು.
-ಮಹಾಬಲ ಕೆ ಎನ್.
ಪ್ರವಾಸ ಕಥನ ದ ಮೂಲಕ.. ಹಿಮಾಲಯವನ್ನು.ಒಂದು ಸುತ್ತುಹಾಕಿ ಬಂದೆವು…ಧನ್ಯವಾದಗಳು.
ಧನ್ಯವಾದ
ಸೊಗಸಾದ ಬರಹ. 2017 ರಲ್ಲಿ, ನೇಪಾಳ ಪ್ರವಾಸದ ಸಂದರ್ಭದಲ್ಲಿ ಇದೇ ರೀತಿಯ ಪುಟ್ಟ ವಿಮಾನದಲ್ಲಿ ಎವರೆಸ್ಟ್ ಅನ್ನು ಹತ್ತಿರದಿಂದ ನೋಡಿದ್ದು ನೆನಪಾಯಿತು.
ಧನ್ಯವಾದ
ಹಿಮಾಲಯ ಪರ್ವತ ಶ್ರೇಣಿಯನ್ನು ಹತ್ತಿರದಿಂದ ವೀಕ್ಷಿಸಿದ ಅನುಭವವನ್ನು ನಮಗೂ ನೀಡಿದ ಲೇಖನ ಚೆನ್ನಾಗಿದೆ.
ಹಿಮಾಲಯದಷ್ಟೆ ಸುಂದರ ಲೇಖನ