ಬೆಂಕಿಯಲ್ಲಿ ಅರಳಿದ ನಾಡು…ಹೆಜ್ಜೆ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಜನ ನಾಯಕ ಹೋ ಚಿ ಮಿನ್

ನಮ್ಮ ಪ್ರವಾಸದ ಪ್ರಮುಖ ಘಟ್ಟ ‘ಹೋ ಚಿ ಮಿನ್ ಮೌಸೋಲಿಯಮ್’ ಆಗಿತ್ತು. ಹೋ ಚಿ ಮಿನ್ ಎಂದಾಕ್ಷಣ ಮನಸ್ಸು ಆರು ದಶಕಗಳ ಹಿಂದೆ ನಾಗಾಲೋಟದಿಂದ ಓಡಿತ್ತು – ಕೋಲು ಮುಖ, ಹೋತದ ಗಡ್ಡ ಇದ್ದು ಮಟ್ಟಸವಾದ ಆಳು. ಆದರೆ ಅದೇನು ಹೊಳಪು ಅವರ ಕಣ್ಣುಗಳಲ್ಲಿ, ಅದೇನು ತೇಜಸ್ಸು ಅವರ ಮುಖದಲ್ಲಿ, ಸದಾ ತನ್ನ ತಾಯ್ನಾಡಿನ ಸ್ವಾತಂತ್ರ್ಯದ ಬಗ್ಗೆಯೇ ಅವರ ಆಲೋಚನೆಗಳು. ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಫ್ರಾನ್ಸ್ ಜೊತೆ ಒಂಭತ್ತು ವರ್ಷಗಳ ಕಾಲ ಹೋರಾಡಿ ಗೆದ್ದ ನಾಯಕ, ದೈತ್ಯರಾಷ್ಟ್ರವಾದ ಅಮೆರಿಕಾದೊಂದಿಗೆ ಸೆಣಸಲು ಪುಟ್ಟ ರಾಷ್ಟ್ರವಾದ ವಿಯೆಟ್ನಾಮನ್ನು ಮುನ್ನೆಡೆಸಿದ ಕೆಚ್ಚೆದೆಯ ಕಲಿ. ಕೆಳವರ್ಗದವರ ಬಡತನವನ್ನು ಕಂಡು ಮರುಗಿದ ಸಮಾಜವಾದಿ ಧೋರಣೆಯುಳ್ಳ ಹೋ ರವರಿಗೆ ರಷ್ಯಾ ಪರಮಾಪ್ತ ಮಿತ್ರನಾಗಿತ್ತು,
ವಿಯೆಟ್ನಾಮಿನ ಸ್ವಾತಂತ್ರ್ಯ ಸೇನಾನಿಯ ದರ್ಶನ ಮಾಡಲು ನಾವೆಲ್ಲಾ ತುದಿಗಾಲಲ್ಲಿ ನಿಂತಿದ್ದೆವು. ಇದೇ ನೆಲದಲ್ಲಿ ನಿಂತು ಹೋ ಚಿ ಮಿನ್ ಪ್ಟೆಂಬರ್ 2, 1945 ರಂದು ವಿಯೆಟ್ನಾಮಿನ ಸ್ವಾತಂತ್ರ್ಯ ಘೋಷಣೆ ಮಾಡಿದ್ದರು. ಇಪ್ಪತ್ತನೇ ಶತಮಾನದ ಅತ್ಯಂತ ಪ್ರಭಾವೀ ನಾಯಕ ಹೋ ಚಿ ಮಿನ್ ಎಂದು ಟೈಮ್ಸ್ ಮ್ಯಾಗಸೀನ್ ಬಣ್ಣಿಸಿದೆ. ಇವರು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಕೂಲಿ ಕಾರ್ಮಿಕರ ಅಚ್ಚುಮೆಚ್ಚಿನ ನಾಯಕ ಹೋ ಚಿ ಮಿನ್ ತನ್ನ ತಾಯ್ನಾಡಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಧೀಮಂತ ನಾಯಕ ಕೊನೆಯುಸಿರೆಳೆದು ಅರ್ಧ ಶತಮಾನವೇ ಕಳೆದಿದ್ದರೂ, ಇವರ ನೆನಪು ವಿಯೆಟ್ನಾಮೀಯರ ಹೃದಯದಲ್ಲ್ಲಿ ಇನ್ನೂ ಹಚ್ಚ ಹಸಿರಾಗಿದೆ. ವಿಯೆಟ್ನಾಮಿನ ರಾಜಧಾನಿ ಹಾನೋಯ್‌ನಲ್ಲಿರುವ ಮೌಸೋಲಿಯಮ್‌ನಲ್ಲಿ ಅವರ ಮೃತದೇಹವನ್ನು ಗಾಜಿನ ಪೆಟ್ಟಿಗೆಯಲ್ಲಿ ಸಂರಕ್ಷಿಸಿಡಲಾಗಿದೆ.

ನಾವು ಮುಂಜಾನೆ ಆರೂವರೆಗೆ ಹೊರಟವರು ಮೌಸೋಲಿಯಮ್ ತಲುಪಿದಾಗ ಗಂಟೆ ಎಂಟಾಗಿತ್ತು. ಅಂದು ಶನಿವಾರ – ಅಲ್ಲಿ ಅಸಾಧ್ಯ ಜನಜಂಗುಳಿ ಇತ್ತು, ಶಾಲೆಗಳಿಗೆ ರಜಾದಿನವಾಗಿದ್ದು, ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಮೂಡಿಸಲು ಶಿಕ್ಷಕರು ಅವರನ್ನು ಈ ಪವಿತ್ರ ಸ್ಥಳಕ್ಕೆ ಕರೆತಂದಿದ್ದರು. ಸರ್ಕಾರೀ ಕಛೇರಿಗಳಿಗೂ ರಜೆಯಿದ್ದು ವಿಯೆಟ್ನಾಮೀಯರು ತಮ್ಮ ರಾಷ್ಟ್ರಪಿತನ ದರ್ಶನ ಮಾಡಲು ತಂಡ ತಂಡವಾಗಿ ಆಗಮಿಸಿದ್ದರು. ಇನ್ನು ಹೊರದೇಶಗಳಿಂದ ಬಂದ ಪ್ರವಾಸಿಗರ ಗುಂಪುಗಳು ಈ ಗುಂಪಿನಲ್ಲಿ ಸೇರಿದ್ದರು. ಈ ಸರತಿ ಸಾಲುಗಳಲ್ಲಿ ಕಾಯುತ್ತಿದ್ದ ಜನಜಾತ್ರೆಯನ್ನು ಗಮನಿಸಿದ ನಮ್ಮ ಪ್ರವಾಸಿ ತಂಡದ ಮ್ಯಾನೇಜರ್ ಅಂದಿನ ಕಾರ್ಯಕ್ರಮವನ್ನು ಮುಂದೂಡುವ ಸಲಹೆಯನ್ನು ನಮ್ಮ ಮುಂದಿಟ್ಟರು. ಆದರೆ ಹೊ ಚಿ ಮಿನ್ ಮೌಸೋಲಿಯಂ ಹನ್ನೊಂದು ಗಂಟೆಯವರೆಗೆ ಮಾತ್ರ ತೆರೆದಿರುವುದೆಂದೂ, ಮಧ್ಯಾನ್ಹದ ನಂತರ ಬಂದಲ್ಲಿ ಕೇವಲ ಹೊ ಚಿ ಮಿನ್ ಮ್ಯೂಸಿಯಂ, ಅಧ್ಯಕ್ಷರ ಅರಮನೆ ಹಾಗೂ ಹೋ ಅವರು ವಾಸಿಸುತ್ತಿದ್ದ ಮನೆಯನ್ನು ನೋಡಬಹುದೆಂದೂ ತಿಳಿಸಿದಾಗ, ಎಲ್ಲರೂ ಹೊ ಚಿ ಮಿನ್ ಮೌಸೋಲಿಯಂ ನೋಡಲೇಬೇಕೆಂದು ಆಗ್ರಹಿಸಿದರು. ಸರಿ, ಎಲ್ಲರೂ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಕ್ಯೂನಲ್ಲಿ ನಿಂತ ಗೆಳತಿ ಪುಷ್ಪಲತಾ ಸುತ್ತಲಿದ್ದ ಬಾನ್ಸಾಯ್ ಗಿಡಗಳನ್ನು ನೋಡುವುದರಲ್ಲಿ ಮೈಮರೆತರು. ನನ್ನ ಮನದಂಗಳದಲ್ಲಿ, ಹಿಂದಿನ ರಾತ್ರಿ ಗೂಗಲ್ ಮಹಾಶಯನನ್ನು ಜಾಲಾಡಿದ್ದ ಹೊ ಚಿ ಮಿನ್‌ರವರ ಜೀವನ ಚರಿತ್ರೆಯ ಪುಟಗಳು ಒಂದೊಂದಾಗಿ ತೆರೆದುಕೊಂಡವು. ಮಾರ್ಚ್ 19, 1890 ರಲ್ಲಿ ಜನಿಸಿದ ಹೊ ಚಿ ಮಿನ್ ಬಾಲ್ಯದಿಂದಲೇ ತಮ್ಮ ರಾಷ್ಟ್ರದ ಸ್ವಾತಂತ್ರ್ಯದ ಬಗ್ಗೆ ಗಹನವಾಗಿ ಯೋಚಿಸುತ್ತಿದ್ದರು. ಅವರ ತಂದೆ ರಾಷ್ಟ್ರಭಕ್ತ, ತಾಯಿ ರೈತರ ಕುಟುಂಬದಿಂದ ಬಂದಾಕೆ, ಒಡಹುಟ್ಟಿದವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಜೈಲುಶಿಕ್ಷೆ ಅನುಭವಿಸಿದ್ದವರು.

ಹೋ ಚಿ ಮಿನ್ ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿಯೇ ಜಗತ್ತಿನೆಲ್ಲೆಡೆ ಸಂಚರಿಸುತ್ತಾ ‘ದೇಶ ಸುತ್ತು, ಕೋಶ ಓದು’ ಎಂಬ ನಾಣ್ಣುಡಿಯಂತೆ ತಮ್ಮ ಜ್ಞಾನವನ್ನು, ಅನುಭವವನ್ನು ವೃದ್ಧಿಸಿಕೊಂಡರು. ಇವರು ಲಂಡನ್, ಫ್ರಾನ್ಸ್, ಆಫ್ರಿಕಾ, ಚೈನಾ, ಅಮೆರಿಕಾ, ರಷ್ಯಾ ಮುಂತಾದ ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿನ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದರು. ಬಂಡವಾಳಶಾಹಿ ಸಿದ್ಧಾಂತಗಳಿಗಿಂತ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ಲೆನಿನ್‌ರವರ ಸಿದ್ಧಾಂತಗಳು ಅವರಿಗೆ ಮೆಚ್ಚುಗೆಯಾಯಿತು. ಮಾರ್ಕಿಸ್ಟ್ – ಲೆನಿನಿಸ್ಟ್ ಸಂಘಟನೆಯನ್ನು ಆರಂಭಿಸಿ, ‘ಎಲ್ಲ ಮಾನವರಿಗೂ ಗೌರವಯುತವಾದ ಬಾಳ್ವೆ ನಡೆಸುವ ಹಕ್ಕಿದೆ. ಶಾಂತಿ ನೆಮ್ಮದಿಯಿಂದ ಬದುಕುವ ಹಕ್ಕಿದೆ‘ ಎಂದು ಪ್ರತಿಪಾದಿಸಿದರು. ಒಂಭತ್ತು ವರ್ಷಗಳ ಕಾಲ ತಮ್ಮ ತಾಯ್ನಾಡನ್ನು ಶೋಷಿಸಿದ್ದ ಫ್ರಾನ್ಸ್‌ನೊಂದಿಗೆ ಭೀಕರವಾದ ಯುದ್ಧ ಮಾಡಿ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು. ಸೆಪ್ಟೆಂಬರ್ 2, 1945 ರಂದು ವಿಯೆಟ್ನಾಮನ್ನು ಸೋಷಿಯಲಿಸ್ಟಿಕ್ ರಿಪಬ್ಲಿಕ್ ಎಂದು ಘೋಷಿಸಿದರು..ಆದರೆ ಈ ವಿಜಯ ತಾತ್ಕಾಲಿಕವಾಗಿದ್ದು, ಮುಂದೆ ಕಮ್ಯುನಿಸ್ಟ್ ವಿರೋಧಿಯಾಗಿದ್ದ ಅಮೆರಿಕನ್ನರ ಜೊತೆ ಯುದ್ಧ ಮಾಡಬೇಕಾಯಿತು. ಜಿನೆವಾ ಒಪ್ಪಂದದಂತೆ ಉತ್ತರ ವಿಯೆಟ್ನಾಂ ಹಾಗೂ ದಕ್ಷಿಣ ವಿಯೆಟ್ನಾಂ ಎಂದು ವಿಯೆಟ್ನಾಮನ್ನು ವಿಭಜಿಸಲಾಯಿತು. ಉತ್ತರ ವಿಯೆಟ್ನಾಂ ಕಮ್ಯುನಿಸ್ಟರ ವಶವಾಗಿದ್ದರೆ ದಕ್ಷಿಣ ವಿಯೆಟ್ನಾಂ ಅಮೆರಿಕಾದ ವಸಾಹತುವಾಗಿತ್ತು. ಹುಟ್ಟು ಹೋರಾಟಗಾರರಾಗಿದ್ದ ಹೋ ಚಿ ಮಿನ್ ತಮ್ಮ ತಾಯ್ನಾಡನ್ನು ಒಂದುಗೂಡಿಸಲು, ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅಮೆರಿಕನ್ನರನ್ನು ಮಣಿಸಲು ಗೆರಿಲ್ಲಾ ಯುದ್ಧತಂತ್ರವನ್ನು ಬಳಸಿದರು. ಆದರೆ ಅವರ ಸ್ವಾತಂತ್ರ್ಯದ ಕನಸು ಕೈಗೂಡುವ ಮೊದಲೇ ಹೋ ಚಿ ಮಿನ್ ವಿಧಿವಶರಾದರು. 1969 ರಲ್ಲಿ ಹೃದಯಾಘಾತವಾಗಿ ಹೋ ಚಿ ಮಿನ್ ಕೊನೆಯುಸಿರೆಳೆದರು. ಇವರು ನಿಧನಾನಂತರ 1975 ರಲ್ಲಿ ವಿಯೆಟ್ನಾಂ ಸ್ವತಂತ್ರ ರಾಷ್ಟ್ರವಾಯಿತು, ಇವರ ಕನಸು ನನಸಾಯಿತು. ಸುಮಾರು ಮೂರು ಮಿಲಿಯನ್ ಜನರು ಈ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದರೆ ಅಮೆರಿಕಾದ 58,000 ಜನರು ಬಲಿಯಾದರು. ಇಂದಿಗೂ ವಿಯೆಟ್ನಾಂ ಅರಣ್ಯಗಳಲ್ಲಿ ಅಮೆರಿಕಾದ ಸೈನಿಕರು ಹುದುಗಿಸಿಟ್ಟ ಸಾವಿರಾರು ಲ್ಯಾಂಡ್‌ಮೈನ್‌ಗಳು ಜೀವಂತವಾಗಿದ್ದು ಜನರು ಈ ಬಾಂಬ್‌ಗಳಿಗೆ ಬಲಿಯಾಗುತ್ತಲೇ ಇರುವರು.

Ho Chi Minh – Vietnam- PC: Wikipedia



ವಿಯೆಟ್ನಾಮಿನ ಸ್ವಾತಂತ್ರ್ಯ ಹರಿಕಾರ, ಧೀಮಂತ ನಾಯಕನ ದೇಹವನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಇವರು ನಿಧನರಾಗಿ ಸುಮಾರು ಐವತ್ತು ವರ್ಷಗಳು ಉರುಳಿದ ಮೇಲೆಯೂ, ಈ ಸ್ಥಳಕ್ಕೆ ಲಕ್ಷಗಟ್ಟಲೇ ಜನರು ಭೇಟಿ ನೀಡುತ್ತಾರೆ. ಇವರ ತ್ಯಾಗ, ಬಲಿದಾನ, ಪರಕೀಯರೊಂದಿಗೆ ನಡೆಸಿದ ದೀರ್ಘ ಸಂಘರ್ಷ ನಾಡಿನ ಜನತೆಯ ಹೃನ್ಮಂದಿರದಲ್ಲಿ ನೆಲೆಯಾಗಿದೆ. ಇವರನ್ನು ಜನರು ಪ್ರೀತಿಯಿಂದ. ‘ಅಂಕಲ್ ಹೋ’ ಎಂದು ಸಂಭೋಧಿಸುತ್ತಾರೆ. ಇವರ ಉದ್ದನೆಯ ಮುಖ, ಹೋತದ ಗಡ್ಡ ಜನರಿಗೆ ಅಚ್ಚುಮೆಚ್ಚು. ಇವರು ತಮ್ಮ ಅಂತ್ಯ ಸಂಸ್ಕಾರವನ್ನು ಸರಳವಾಗಿ ನಡೆಸಬೇಕೆಂದೂ ಹಾಗೂ ತಮ್ಮ್ಮ ಚಿತಾಭಸ್ಮವನ್ನು ವಿಯೆಟ್ನಾಮಿನ ಮೂರು ದಿಕ್ಕುಗಳಲ್ಲಿರುವ ಬೆಟ್ಟಗಳ ಮೇಲೆ ಹರಡಬೇಕೆಂದೂ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅವರ ಮರಣಾನಂತರದಲ್ಲಿ ಕಮ್ಯುನಿಸ್ಟ್ ಪಕ್ಷವು ತಮ್ಮ ನಾಯಕನ ದೇಹವನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗಳಲ್ಲಿ ರಾಷ್ಟ್ರಪ್ರೇಮವನ್ನು ಉಳಿಸಿ ಬೆಳೆಸಲು ನಿಶ್ಚಯಿಸಿತು.

ರಷ್ಯಾದ ಕಮ್ಯುನಿಸ್ಟ್ ನಾಯಕನಾದ ಲೆನಿನ್‌ರವರ ಮೃತದೇಹವನ್ನು ಮಾಸ್ಕೋದಲ್ಲಿ ಸಂರಕ್ಷಿಸಿಟ್ಟಿರುವ ಹಾಗೆಯೇ ಹೋ ರವರ ದೇಹವನ್ನು ರಷ್ಯನ್ನರ ನೆರವು ಪಡೆದು ಸಂರಕ್ಷಿಸಲಾಗಿದೆ. ಇಲ್ಲಿರುವ ಕಟ್ಟಡವನ್ನೂ ರಷ್ಯಾ ಮತ್ತು ವಿಯೆಟ್ನಾಮಿನ ವಾಸ್ತುಶಿಲ್ಪದ ಸಂಯೋಜನೆಯಲ್ಲಿ ನಿರ್ಮಿಸಲಾಗಿದೆ. ಈ ಸ್ಮಾರಕವು 71 ಅಡಿ ಎತ್ತರವಿದ್ದು 135 ಅಡಿ ಅಗಲವಾಗಿದೆ. ಈ ಸ್ಮಾರಕವನ್ನು ನಿರ್ಮಿಸಲು ವಿಯೆಟ್ನಾಮಿನ ಉದ್ದಗಲಕ್ಕೂ ಸಂಚರಿಸಿ, ಕಟ್ಟಡ ನಿರ್ಮಿಸಲು ಬೇಕಾದ ಕಲ್ಲು, ಮರಳು ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಲಾಯಿತು. ಇವರ ದೇಹವನ್ನು ಒಂದು ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದು, ಇಲ್ಲಿಗೆ ಬರುವ ಯಾತ್ರಿಕರಿಗೆ ಕೆಲವು ನಿಯಮಗಳನ್ನ್ನು ವಿಧಿಸಲಾಗಿದೆ – ಇಲ್ಲಿ ಮಾತು ನಿಷಿದ್ದ, ಮೌನವಾಗಿರಬೇಕು, ಧೂಮಪಾನ, ಆಲ್ಕೊಹಾಲ್ ನಿಷಿದ್ದ, ಗೌರವಯುತವಾದ ಉಡುಪನ್ನು ಧರಿಸಿರಬೇಕು, ತಲೆಯ ಮೇಲಿನ ಟೋಪಿ ತೆಗೆಯಬೇಕು, ಫೋಟೋ, ವಿಡಿಯೋ ಮಾಡುವಂತಿಲ್ಲ ಇತ್ಯಾದಿ.

ಗೂಗಲ್ ಮಹಾಶಯನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡ ನಾನು ಕಣ್ತೆರೆದು ನೋಡಿದಾಗ ಸರತಿ ಸಾಲಿನಲ್ಲಿ ನಿಂತ ನಾವು ಹೋ ರವರ ಮೌಸೋಲಿಯಂ ಸಮೀಪ ಬಂದಿದ್ದೆವು. ಕುತೂಹಲದಿಂದ ಒಳಹೊಕ್ಕಾಗ ಕಂಡದ್ದು ವಿಶಾಲವಾದ ಅಮೃತಶಿಲೆಯನ್ನು ಹೊದಿಸಿದ್ದ ಕೊಠಡಿ, ಮಧ್ಯೆ ತಾವರೆಗಳ ಚಿತ್ತಾರವನ್ನು ಬಿಡಿಸಿದ್ದ ತಾಮ್ರದ ಮಂಚದ ಮೇಲೆ ಇಟ್ಟಿದ್ದ ಗಾಜಿನ ಪೆಟ್ಟಿಗೆಯಲ್ಲಿ ಶಾಂತವಾಗಿ ಮಲಗಿದ್ದ ಮಹಾನಾಯಕ ‘ಹೋ ಚಿ ಮಿನ್’. ಇವರು ಧರಿಸಿದ್ದ ಸೂಟು, ನಿದ್ರಿಸುತ್ತಿರುವಂತೆ ತೋರುತ್ತಿದ್ದ ಮುಖ ನಮ್ಮಲ್ಲಿ ಒಂದು ಕ್ಷಣ ಹೋ ಜೀವಂತವಾಗಿರುವವರೇನೋ ಎಂಬ ಭಾವ ಮೂಡಿತ್ತು. ಗಾಜಿನ ಪೆಟ್ಟಿಗೆಯ ಸುತ್ತಲೂ ನಿಂತಿದ್ದ ನಾಲ್ಕು ಜನ ಸೈನಿಕರು ಮಿಲಿಟರಿ ಗೌರವ ಸಮರ್ಪಣೆ ಮಾಡುವಂತಿತ್ತು. ಈ ಮಹಾನಾಯಕನ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಾ ಭಕ್ತಿಭಾವದಿಂದ ತಲೆಬಾಗಿಸಿ ನಮಸ್ಕರಿಸಿದೆವು. ಈ ಸ್ಮಾರಕದ ಹಿಂಭಾಗದಲ್ಲಿ ಹೋ ರವರ 79 ವರ್ಷಗಳ ಸಾರ್ಥಕ ಜೀವನವನ್ನು ಯುವಜನತೆಗೆ ತೋರಲು 79 ಸೈಕಾಸ್ ಗಿಡಗಳನ್ನು ನೆಟ್ಟಿದ್ದಾರೆ. ಈ ಸ್ಮಾರಕದ ಮುಂದೆ ಎತ್ತರವಾದ ಧ್ವಜಸ್ತಂಭದ ಮೇಲೆ ವಿಯೆಟ್ನಾಮಿನ ಧ್ವಜವು ಮುಗಿಲೆತ್ತರಕ್ಕೆ ಹಾರುತ್ತಿದೆ. ಕೆಂಪು ವರ್ಣದ ಧ್ವಜ ಎಲ್ಲರ ಮೈಯಲ್ಲಿ ಹರಿಯುವ ರಕ್ತದ ಚಿಹ್ನೆಯಾದರೆ, ಧ್ವಜದ ಮಧ್ಯೆಯಿರುವ ಹಳದಿ ವರ್ಣದ ನಕ್ಷತ್ರವು ಇವರ ಮೈಬಣ್ಣದ ಸಂಕೇತವಾಗಿದೆ. ನಾವು ಸ್ಮಾರಕದ ಮುಂದೆ ನಿಂತು ಫೋಟೋ ಕ್ಲಿಕ್ಕಿಸುತ್ತಿರುವಾಗ ಹೋ ರವರ ಮುಂದೆ ನಿಂತು ಮಿಲಿಟರಿ ಗೌರವ ಸಲ್ಲಿಸುತ್ತಿದ್ದ ನಾಲ್ಕು ಮಂದಿ ಸೈನಿಕರು ತಮ್ಮ ಸಹಚರರಿಗೆ ಬಾವುಟವನ್ನು ವರ್ಗಾಯಿಸುತ್ತಿದ್ದರು. ಈ ಕಾರ್ಯಕ್ರಮವನ್ನು, ‘Change of Guards’ ಎನ್ನುವರು.

ಈ ಸ್ಮಾರಕದ ಪ್ರಾಂಗಣದಲ್ಲಿದ್ದ ಭವ್ಯವಾದ ವಿಯೆಟ್ನಾಂ ಅಧ್ಯಕ್ಷರ ಮನೆಯಲ್ಲಿ ಹೋ ರವರು ವಾಸ ಮಾಡಲು ಇಚ್ಛಿಸಲಿಲ್ಲ, ಹೊರದೇಶದ ಪ್ರತಿನಿಧಿಗಳು ಬಂದಾಗ ಮಾತ್ರ, ಅವರೊಡನೆ ಸಮಾಲೋಚನೆ ನಡೆಸಲು ಅಧ್ಯಕ್ಷರ ನಿವಾಸಕ್ಕೆ ಆಗಮಿಸುತ್ತಿದ್ದರು. ಉಳಿದಂತೆ ಇವರ ವಾಸ, ಅಲ್ಲಿದ್ದ ಸರೋವರದ ಬದಿಯಲ್ಲಿ ನಿರ್ಮಿಸಲಾದ ಪುಟ್ಟ ಮನೆಯಲ್ಲಿ. ಹೋ ರವರ ಮ್ಯೂಸಿಯಂನಲ್ಲಿ ಸುತ್ತಾಡುವಾಗ ಹೊ ಚಿ ಮಿನ್ ರವರು ನೆಹರೂರವರೊಂದಿಗೆ ಇರುವ ಫೋಟೋ ನೋಡಿದೆವು. ಭಾರತದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವಿಯೆಟ್ನಾಮ್ ನಮಗೆ ಇನ್ನೂ ಹತ್ತಿರವಾದಂತೆನಿಸಿತ್ತು. ನಾವು ನಮ್ಮ ಬಸ್‌ನಲ್ಲಿ ಕುಳಿತು ಹಿಂದಿರುಗುವಾಗ ಹೋ ರವರ ಸಿಡಿಲಿನಂತಹ ಮಾತುಗಳು ಮನದಲ್ಲಿ ಪ್ರತಿಧ್ವನಿಸುತ್ತಿದ್ದವು –

It was Patriotism and not Communism that inspired me.

Nothing is more precious than Freedom.

It is better to sacrifice everything than to live in slavery.

Remember, the storm is a good opportunity for the pine and cypress to show their strength and their stability.

You can kill ten of our men for everyone we kill of yours. But even at those odds, you will lose and we will win.


ನನಗೆ ಲೋಕಮಾನ್ಯರ ಮಾತುಗಳು ನೆನಪಾದವು, ‘ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು’. ಹೋ ರವರ ಮರಣ ಇಡೀ ವಿಯೆಟ್ನಾಮನ್ನು ಶೋಕದ ಕಡಲಲ್ಲಿ ಮುಳುಗಿಸಿತ್ತು, ಮೃತರ ಅಂತಿಮದರ್ಶನಕ್ಕೆ ಸುಮಾರು 2,50,000 ಲಕ್ಷ ಜನ ಸೇರಿದ್ದರು. ಇವರ ಸಿದ್ಧಾಂತಗಳನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ, ಸೈನಿಕರ ತರಬೇತಿ ಕಾರ್ಯಕ್ರಮಗಳಲ್ಲಿಯೂ ತಪ್ಪದೇ ಹೋರವರ ತತ್ವ ಸಿದ್ಧಾಂತಗಳ ಪಠಣ ಮಾಡಲಾಗುತ್ತಿದೆ, ಇನ್ನು ಹಲವು ರಾಷ್ಟ್ರಗೀತೆಗಳಲ್ಲಿಯೂ ಇದರ ಸೊಗಡಿದೆ. ಹೋ ಚಿ ಮಿನ್ ಸ್ಮಾರಕವು ಇವರ ಸಂಸ್ಕೃತಿ ಹಾಗೂ ಐತಿಹಾಸಿಕ ಘಟನೆಗಳ ರೂಪಕವಾಗಿ ನಿಂತಿದೆ.

ಈ ಬರಹದ ಹಿಂದಿನ ಭಾಗ ಇಲ್ಲಿದೆ :https://www.surahonne.com/?p=40248

(ಮುಂದುವರೆಯುವುದು)
-ಡಾ ಗಾಯತ್ರಿದೇವಿ ಸಜ್ಜನ್, ಶಿವಮೊಗ್ಗ

6 Responses

  1. ಗಾಯತ್ರಿ ಮೇಡಂ.. ನಿಮ್ಮ ಪ್ರವಾಸಕಥನ ಹೇಗಿರುತ್ತೆದೆಂದರೆ…ತರಗತಿಯಲ್ಲಿ ಕುಳಿತು ಪಾಠ ಕೇಳುವ ಹಾಗಿದ್ದು..ಕುತೂಹಲ ಹುಟ್ಟಿಸುವಂತಿರುತ್ತದೆ..ನಿಮ್ಮ ಅನುಭವದ ಕಥನವನ್ನು ಹೀಗೇ ಉಣಬಡಿಸುತ್ತಿರಿ…ವಂದನೆಗಳು..

  2. ನಾನು 40 ವರ್ಷಗಳ ಕಾಲ ಶಿಕ್ಷಕಿಯಾಗಿ ಕೆಲಸ ಮಾಡಿ ದ್ದೇನೆ
    ನಿಮ್ಮ ಅಭಿಮಾನ ಪೂರ್ವಕ ನುಡಿಗಳಿಗೆ ವಂದನೆಗಳು

  3. Nirmala says:

    Heart touching picture of a freedom fighter

  4. ಶಂಕರಿ ಶರ್ಮ says:

    ವಿಯೆಟ್ನಾಮಿನ ಸ್ವಾತಂತ್ರ ಹೋರಾಟಗಾರ, ಕೆಚ್ಚೆದೆಯ ನಾಯಕ ಹೋ ಚಿ ಮಿನ್ ಅವರ ಬಗ್ಗೆ ವಿವರಗಳನ್ನು ತಿಳಿದು ರೋಮಾಂಚನವಾಯಿತು. ಸೊಗಸಾದ ಪ್ರವಾಸ ಲೇಖನ ಮೇಡಂ

  5. ವಂದನೆಗಳು
    ಸಹೃದಯ ಓದುಗರಾದ ನಿರ್ಮಲ ಹಾಗೂ ಶಂಕರೀ ಮೇಡಂ ಅವರಿಗೆ

  6. ಪದ್ಮಾ ಆನಂದ್ says:

    ದೇಶಭಕ್ತನೊಬ್ಬನ ದೇಶಪ್ರೇಮದ ನೈಜ ಕಥೆಯನ್ನು ಸೊಗಸಾಗಿ ನಿರೂಪಿಸಿರುವ ನಿಮಗೆ ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: