ಕೊಟ್ಟೆ….

Share Button

ಅವಳಿಗ ಅವನ ಮೇಲೆ ಸಿಕ್ಕಾಪಟ್ಟೆ ಕೋಪ…. ಕೋಪವನ್ನೆಲ್ಲ ಒಂದು ಏಟು ‘ಕೊಟ್ಟೆ’ ತೀರಿಸಿಕೊಂಡಳು!!!. ಪುಟ್ಟ ಮಗುವಿನ ಗಲ್ಲಕ್ಕೊಂದು ಮುತ್ತ ಕೊಟ್ಟೆ. ನಾ ಏನ ಕೊಟ್ಟೆ ಅವನಿಗೆ, ಅವೇನು ಕೊಟ್ಟ, ನಿನಗೆ ನಾನು ಅದ ಕೊಟ್ಟೆ, ಅವನಿಗೆ ನಾನು ಇದ ಕೊಟ್ಟೆ ಇವನಿಗೆ….ನಾನು ಕೊಟ್ಟೆ… ಕೊಟ್ಟೆ… ಕೊಟ್ಟೆ ಏನಿದು ಕೊಟ್ಟೆ???.  ಆ ದೇವನ ದೃಷ್ಟಿಯಲ್ಲಿ ‘ಕೊಟ್ಟಿ’ದ್ದೆಲ್ಲವೂ ಹೇಳಿಕೊಂಡದಕ್ಕೆ ಕೋಳಿ ಮೊಟ್ಟೆಯಾಗದಿರಲಿ. ತಾ ‘ಕೊಟ್ಟೆ’ಯಲ್ಲನ್ನುವುದಲ್ಲೊಂದು ಅಹಂಕಾರ ಕೆಲವರಲ್ಲಿ ತುಂಬಿ ಅವನಾದ ಲೊಳಲೊಟ್ಟೆ.  ಇನ್ನುಕೆಲವರು ಏನ ‘ಕೊಟ್ಟೆ’ ಏನು ‘ಕೊಟ್ಟೆ’ ಇಲ್ಲ  ಏನಾದರೂ ಕೊಟ್ಟಿದ್ದರೂ ಬಲಗೈಯಲ್ಲಿ ಕೊಟ್ಟಿದ್ದು ಎಡೈಗೆ ತಿಳಿಯಬಾರದು ಅನ್ನುವವರು ಹಲವರು. ಅ ದೇವನು ನನಗೆ ಏನು ಕೊಟ್ಟ?. ನಾನು ಅವನಿಗೆ ಭಕ್ತಿ ಭಾವದ ಮಹಾಪೂರವನ್ನೇ ಅವನಿಗೆ ‘ಕೊಟ್ಟ’ರು!! ಅವ ನಾ ಕೊಟ್ಟ ಭಕ್ತಿಗೆ ಪ್ರತ್ಯಕ್ಷವಾಗಿ ವರ ‘ಕೊಟ್ಟೆ’ ಇಲ್ಲಾ!!!..  ದೇವನಿಗೆ ಕೊಟ್ಟಿದ್ದನ್ನು ಹೇಳಿಕೊಳ್ಳುವವರು ನಾ ಕೊಟ್ಟೆ…!!! ನಾ ಕೊಟ್ಟೆ…!. 

ಅಲ್ಲೊಂದು ಇಷ್ಟು ಮಾವಿನಕಾಯಿ ಬಿದ್ದಿದೆ ಅದನ್ನ ಅವಳಿಗೆ ‘ಕೊಟ್ಟೆಗೆ’ ಹಾಕಿ ಕೊಡಬಾರದೇ???. ಇಲ್ಲ್ಯಾವುದಿ ಕೊಟ್ಟೆ??. ಕೊಡುವುದನ್ನೇ ಕೊಟ್ಟೆಗೆ ಹಾಕಿ ಕೊಡುವುದು???!!!!!!. ಕಜ್ಜಾಯ ಕೊಟ್ಟೆಗೆ ಕಟ್ಟಿಕೊಡು. ಆ ‘ಕೊಟ್ಟೆ’ ಹರಿದಿದೆ ಏನು ತುಂಬಿಸಿದರು ಚೆಲ್ಲಿ ಹೋಗುವುದು. ಅರ್ಥವಾಗದ ಈ ಕೊಟ್ಟೆ ನಿಮ್ಮ ತಲೆ ತಿನ್ನುತ್ತಿರುವುದೇ ಕೊಟ್ಟೆ… ಕೊಟ್ಟೆ… ಅದುವೇ ‘ಜರಿ ಕೊಟ್ಟೆ’. ಇದನ್ನು ಮೊದಲ ಬಾರಿಗೆ ಕೇಳುತ್ತಿರುವುದು ಅಂತ ಆಶ್ಚರ್ಯವೇ!!!. ಅಪ್ಪಟ ಕನ್ನಡ ಪದವೇ ನನಗೂ ತಿಳಿಯದು…. ನಮ್ಮೂರ ಭಾಷೆಯಲ್ಲಿ ‘ಜರಿ ಕೊಟ್ಟೆ’ ‘ಕೊಟ್ಟೆ’ ಅಂದರೆ ಪ್ಲಾಸ್ಟಿಕ್ ಕವರ್. ಕವರ್’ನನ್ನು ಪ್ಲಾಸ್ಟಿಕ್ನಿಂದಲೇ ಮಾಡ್ತಾರೋ ಇಲ್ವಾ ಗೊತ್ತಿಲ್ಲ ಒಟ್ಟಿನಲ್ಲಿ ಅದು ಪ್ರಕೃತಿಗೆ ಒಳ್ಳೆಯದಲ್ಲ ಅನ್ನೋದಂತು ಸತ್ಯ. ಪ್ಲಾಸ್ಟಿಕ್ ಹೇಗೆ ಮಣ್ಣಿನಲ್ಲಿ ಕರಗುವುದಿಲ್ಲ ಹಾಗೆ ಜರಿಕೊಟ್ಟೆ ಸಹ ಕರಗೋದಿಲ್ಲ ಅನ್ನೋದು ಸಹ ಸತ್ಯ. ಈಗ ಹೊಸ ರೀತಿಯಾಗಿ ಬೇರೆದೇ ಬಂದಿರಬಹುದು ಆದರೆ ನಾನು ಹೇಳುತ್ತಿರುವುದು ಹಳೆಯ ಕವರ್ ಮತ್ತೆ ಆಶ್ಚರ್ಯ ಪಡಬೇಡಿ ಇದು ಅಲ್ಲಿನವರ, ನನ್ನೂರಿವರ ಕನ್ನಡ ಭಾಷೆ.

ಕೊಟ್ಟೆ ಅನ್ನುವ ಪದ ಒಂದು ಅರ್ಥಗಳು ಹಲವಾರು!!. ಅವನು ಕೆಲಸ ಮಾಡಿ ಬಂದು ದಣಿದಿದ್ದಾನೆ ಅವನಿಗೆ ದಾಹವಾಗುತ್ತಿರಬಹುದು ಆ ಅಡಿಕೆ ಕೊಟ್ಟೆಗೆ ಒಂದಷ್ಟು ನೀರು ಮಜ್ಜಿಗೆ ಹಾಕಿ ಕೊಡವನಿಗೆ ಕುಡಿಯಲು. ಇಲ್ಲೊಂದು ಕೊಟ್ಟೆ…. ಅರೆ ಅವನಿಗೆ ಪ್ಲಾಸ್ಟಿಕ್ ಕವರ್ ನಲ್ಲಿ ಮಜ್ಜಿಗೆ ಹಾಕಿಕೊಟ್ಟರೆ ಕುಡಿಯಲು ಸಾಧ್ಯವೇ??!. ಇಲ್ಲಿ ಜರಿ ಕೊಟ್ಟೆ ಅಲ್ಲ…. ಅಡಿಕೆ ಹಾಳೆಯ ದೊನ್ನೆ. ದೇವಸ್ಥಾನಗಳಲ್ಲಿ ಪ್ರಸಾದ ಸ್ವೀಕರಿಸುವ ದೊನ್ನೆ. ಮಜ್ಜಿಗೆ ಏನು ಮೃಷ್ಟಾನ್ನ ಭೋಜನವನ್ನು ಸವಿಯಬಹುದು ಈ ಕೊಟ್ಟೆಯಲ್ಲಿ ಕೊಟ್ಟವರ ಹೊಟ್ಟೆ ತಣ್ಣಗೆ ಇರಲಿ ಎಂದು ಹಾರೈಸುತ್ತಾ.

ಕೊಟ್ಟೆ ಕಟ್ಟಿಕೊಂಡು ನೀರಲ್ಲಿ ಈಜು!!!. ಅಡಿಕೆ ಹಾಳೆ ಕಟ್ಟಿಕೊಂಡು ನೀರಲ್ಲಿ ಈಜುವುದು ಸಾಧ್ಯವೇ??!.ಅಥವಾ ಜರಿ ಕೊಟ್ಟೆ ಅದೇ ಕವರ್ ನ ಸೊಂಟಕ್ಕೆ ಸುತ್ತಿಕೊಂಡು ನೀರಿಗೆ ಹಾರಿದರೆ ಮುಳುಗುವುದಿಲ್ಲವೇ ಅಂತ ಒಂದು ಪ್ರಶ್ನೆ ನಿಮ್ಮ ತಲೆ ಒಳಗೆ ಖಂಡಿತವಾಗಿಯೂ ನುಸುಳಿರುತ್ತದೆ. ಗೋಟುತೆಂಗಿನ ಕಾಯಿಗೂ ‘ಕೊಟ್ಟೆ’ಯೆನ್ನುತ್ತಾರೆ!!!. ತೆಂಗಿನಕಾಯಿ ನೀರಲ್ಲಿ ಮುಳುಗುವುದಿಲ್ಲ!!!. ನಾನು ನೋಡಿದ್ದೇನೆ ನೀರಿನಲ್ಲಿ ತೇಲುವ ತೆಂಗಿನಕಾಯಿ.   ಅದೆಷ್ಟು ಸಲ ಸಿಪ್ಪೆ ಸಹಿತವಾದ ತೆಂಗಿನಕಾಯಿ ‘ಸಿಪ್ಪೆ ಸಹಿತವಾದ ಅಂತ ಹೇಳುತ್ತಿರುವುದು ಅದು ನೇರವಾಗಿ ಮರದಿಂದಲೇ ಬಾವಿಗೊ, ಕೆರೆಗೂ ಬಿದ್ದಿರುತ್ತದೆ.  ಆ ಬಿದ್ದ ತೆಂಗಿನ ಕಾಯಿ ಮುಳುಗಿರುವುದಿಲ್ಲ ಅದನ್ನು ಬೇರೆ ಬುಟ್ಟಿ ಅಥವಾ ಇನ್ಯಾವುದರ ಸಹಾಯದಿಂದಲೂ ನೀರಿನಿಂದ ತೆಗೆಯುತ್ತಾರೆ. ನೀರಿರುವ ತೆಂಗಿನ ಕಾಯಿ ಕೊಟ್ಟೆ ಅಲ್ಲ ನೀರು ಆರಿರುವ ಅದೆ ಗೋಟುಕಾಯಿಯೇ ‘ಕೊಟ್ಟೆ’ . ‘ಕೊಟ್ಟೆ’ಯನ್ನೆ ಅವನಿಗೆ ನಾ ‘ಕೊಟ್ಟೆ’.

“ನಾಳೆ ಹಬ್ಬಕ್ಕೆ ಎಂಥ ವಿಶೇಷ ಮಾಡ್ತಾ ಇದ್ಯೆ??”. “ಎಂಥದು ಇಲ್ದೆ ಕೊಟ್ಟೆಕಡುಬು ಅಷ್ಟೆ”. ಅಲಾ ಇಲ್ಲಿ  ಮತ್ತೆ ‘ಕೊಟ್ಟೆ’ ‘ಕಡುಬು’. , ಮಕ್ಕಳಿಗೆ  ಹೊಡೆದಾಗ ಅವರಿಗೆ ಏಟು ಅನ್ನೋದರ ಬದಲು ‘ಕಡುಬು’ ಅಂತ ಅನ್ನುತ್ತಾರೆ. ಶಿಕ್ಷಕರು ಹೊಡೆದರೆ ಮನೆಯಲ್ಲಿ ತಿಳಿದರೆ… ಇವತ್ತು ಕಡಬು ತಿಂದುಕೊಂಡು ಬಂದಿಯಾ?, ಅಂತ ಕೇಳುತ್ತಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದು ಮನೆಗೆ ಬರುವಾಗಲೇ ಸ್ನೇಹಿತರ ಜೊತೆ ಇವತ್ತು ಮನೆಯಲ್ಲಿ ಕಡುಬು ಬೀಳೊದು ಗ್ಯಾರಂಟಿ ಅನ್ನುತ್ತಾರೆ. ಹಾಗಾದರೆ ಅವರು ಕೊಟ್ಟಿರುವ ,ಕೊಡುವ ಏಟು ಕಡುಬೇ??!!!.

ಅವರ ಮನೆಯಲ್ಲಿ ನಾಳೆ ಎಲ್ಲರಿಗೂ ಕಡುಬು ಅಂದರೆ ಏಟು ತಿನ್ನುವುದೇ ತಿಂಡಿಯೇ!!!.  ತಪ್ಪು ಮಾಡಿದಾಗ ಕೊಡುವ ಏಟಿಗೆ ಬಿಸಿ ಬಿಸಿ ಕಜ್ಜಾಯ ಅಥವಾ ಕಡುಬು ಅಂತ ಯಾಕೆ ಹೇಳುತ್ತಾರೋ ನನಗಂತೂ ಗೊತ್ತಿಲ್ಲ. ಆದರೆ ಆ ಕೊಟ್ಟೆ ಕಡುಬಿನ ಬಗ್ಗೆ ನಾನು ಹೇಳುತ್ತಿಲ್ಲ….. ಯಾಕೋ ಇವಳದು ತಲೆಕೊರೆತ ಜಾಸ್ತಿ ಆಯ್ತು ಅಂತ ಹೇಳ್ತಾ ಇದ್ದೀರಾ??.

ಇದು ಅಮ್ಮನೊ,ಅಪ್ಪನೊ, ಶಾಲೆಯಲ್ಲಿ ಶಿಕ್ಷಕರು  ‘ಕೊಟ್ಟ’ ‘ಕಡುಬಲ್ಲಾ’ . ದಕ್ಷಿಣ ಕನ್ನಡದವರ ಮನೆಮನೆಯ ತಿಂಡಿ. ಎಲ್ಲರ ಬಾಯಲ್ಲಿ ನೀರೂರಿಸುವ ‘ಕೊಟ್ಟೆ ಕಡುಬಿದು’. ಬೇಲಿಬದಿಯಲ್ಲಿರುವ  ಮುಂಡಕನ ಗಿಡದಲ್ಲಿರುವ ವಾಲೆಗಳನ್ನು ಕತ್ತಿಯಿಂದ ಕತ್ತರಿಸಿ ಮನೆಗೆ ತಂದು ಅದರ ಎರಡು ಬದಿ ಹಾಗೂ ಹಿಂಭಾಗದಲ್ಲಿರುವ ಮುಳ್ಳನ್ನು  ನಾಜೂಕಾಗಿ ತೆಗೆದು ಅದನ್ನು ಒಣಹುಲ್ಲಿನಲ್ಲಿ ಹದವಾಗಿ ಸುಟ್ಟು. ಇಲ್ಲಿ ವಾಲೆಯ ಎರಡು ಬದಿಯಲ್ಲಿರುವ (ಸೈಡ್’ನಲ್ಲಿರುವ) ಮುಳ್ಳು ತೆಗೆಯವಾಗಲು ಅಷ್ಟೇ ಎಷ್ಟೊಂದು ಸೂಕ್ಷ್ಮವಾಗಿ ತೆಗೆಯಬೇಕು ಜಾಸ್ತಿ ತೆಗೆದರೆ ವಾಲೆಯ ಸೈಜ್ ಕಡಿಮೆಯಾಗುತ್ತದೆ. ಹಿಂಬಾಗದ ಮುಳ್ಳನ್ನು ಜಾಸ್ತಿ ತೆಗೆದರೆ ಅಲ್ಲಿಗೆ ಅದು ಇಬ್ಭಾಗವಾಗುವ ಸಂಭವ ಇರುತ್ತದೆ. ಸುಡುವಾಗಲು ಅಷ್ಟೇ ಬಹಳ ಗಮನವಿಟ್ಟು ಸರಿಯಾಗಿ ಸುಡಬೇಕು ಸ್ವಲ್ಪ ಜಾಸ್ತಿ ಸುಟ್ಟರು ಅದು ಅಲ್ಲಿಯೇ ಸುಟ್ಟು ಹೋಗಿ ಉಪಯೋಗಕ್ಕೆ ಬಾರದಂತೆ ಆಗುತ್ತದೆ. ಕಡಿಮೆ ಸುಟ್ಟರೆ ಕೊಟ್ಟೆ ಸೆಡುವುದಕ್ಕೆ ಬರೊದಿಲ್ಲಾ. ಹಸಿಯಾಗಿದ್ದರೆ ಮಡಚಿದ ಕಡೆಯೇ ಮುರಿದು ಆಗ ಸಹ ಉಪಯೋಗಕ್ಕೆ ಬರೊದಿಲ್ಲಾ. ಈ ‘ಕೊಟ್ಟೆ’ಯು ಬಲು ನಾಜೂಕು. ಕಿತ್ತು ತಂದ ವಾಲೆಗಳನ್ನು ಮುಳ್ಳುಗಳೆಲ್ಲ ತೆಗೆದು ಹದವಾಗಿ ಸುಟ್ಟು ಅದನ್ನು  ಒಂದರ ನಂತರ ಒಂದಂತೆ ಸುರುಳಿಯಾಗಿ ಸುತ್ತಿಟ್ಟರೆ ಬಹಳ ದಿನಗಳವರೆಗೂ ಅದನ್ನು ಇಡಬಹುದು. ಹಲಸಿನ ಎಲೆಯಿಂದಲೂ ಕೊಟ್ಟೆ ಮಾಡಿ ಅದರಲ್ಲೂ ಕಡಬು ಮಾಡಬಹುದು ಇದು ಕೂಡ ಸುವಾಸನೆ ಭರಿತವಾಗಿಯೇ ಇರುತ್ತದೆ.

PC: Internet

ಕೊಟ್ಟೆ ಮಾಡುವ ಮುಂಚಿನ ಕೆಲಸಗಳಿವು‌. ಕೊಟ್ಟೆ ಮಾಡುವ ಮುನ್ನ ದಿನವೇ ಒಂದೊಂದು ವಾಲೆಯನ್ನು ತೆಗೆದು ಒದ್ದೆ ಬಟ್ಟೆಯಲ್ಲಿ ಒರೆಸಿ ಸಣ್ಣಸಣ್ಣ ಚೂಪಾದ ಹಿಡಿಸುಡಿ(ಪೊರಕೆ ಕಡ್ಡಿ)ಯನ್ನು ತೆಗೆದುಕೊಂಡು ವಾಲೆಯನ್ನ ತಳ ಭಾಗದಲ್ಲಿ ತ್ರಿಮುಖ ಬರುವಂತೆ ಮಡಚುವುದೇ ಒಂದು ಕಲೆ. ಬುಡ ಸುತ್ತಿದ ನಂತರ ಮೇಲೆ ಮೇಲೆ ಅದನ್ನು ರೌಂಡಾಗಿ ಸುತ್ತುವುದು ಮತ್ತೊಂದು ರೀತಿಯ ಕಲೆ. ಸುತ್ತುವಾಗ ಬಹಳ ಜಾಗರೂಕರಾಗಿರಬೇಕು ಬುಡದಲ್ಲಿ ಏನಾದರೂ ತೂತು ಅದೇ ರಂಧ್ರವಿದ್ದರೆ ಹಿಟ್ಟೆಲ್ಲಾ ಅಟ್ಟದ ಪಾಲಾಗುತ್ತದೆ!!!. ಒಂದಷ್ಟು ಕೊಟ್ಟೆಗಳನ್ನ ಮಾಡಿದ ನಂತರ ಮಾಡಿದವರುಅದರಲ್ಲಿ ಏನಾದರೂ ರಂದ್ರಗಳಿವೆ ಎಂದು ಪರೀಕ್ಷಿಸುತ್ತಾರೆ. ಕಡುಬಿಗೆಯನ್ನು ವಿಶೇಷವಾದ ಹಿಟ್ಟನ್ನ ತಯಾರು ಮಾಡುವುದಿಲ್ಲ ಎಲ್ಲರ ಮನೆಯಲ್ಲಿ ಮಾಡುವ ಮಾಮೂಲಿ ಇಡ್ಲಿ ಹಿಟ್ಟನ್ನೆ ಉಪಯೋಗಿಸುವುದು. ಆದರೆ ವಾಲೆಯಿಂದ ಮಾಡಿದ ಈ ಕೊಟ್ಟೆಯಲ್ಲಿ ಅದೇನೋ ಒಂದು ರೀತಿಯ ಘಮವಿರುತ್ತದೆ. ಮೊದಲಿಗೆ ಸೌದೆ ಒಲೆಗೆ ಬೆಂಕಿ ಹಚ್ಚಿ ಕಡುಬಿನ ಅಟ್ಟವಿಡುತ್ತಾರೆ. ಕಡುಬಿನ ಅಟ್ಟಕ್ಕೆ ಒಂದಷ್ಟು ನೀರು ಸುರಿದು ಅದರ ಮೇಲೆ ತಡೆಯಿಟ್ಟು ಒಂದೊಂದೇ ಕೊಟ್ಟೆಗೆ ಹಿಟ್ಟನ್ನು ಸುರಿದು ಅದನ್ನು ಕಡುಬಿನ ಅಟ್ಟದ ತುಂಬಾ ಜೋಡಿಸಿಡುರುತ್ತಾರೆ. ಅದು ಒಂದು ಕೂಡ ಬೀಳಬಾರದು ಬಿದ್ದರೆ ಮತ್ತೆ ಗೊತ್ತಲ್ಲಾ?, ಅಟ್ಟದಲ್ಲಿರುವ ನೀರಿನ ಪಾಲಿಗೆ. ಅಟ್ಟದ ಮುಚ್ಚಳವನ್ನು ಮುಚ್ಚಿ  ಸೌದೆ ಒಲೆಯ ಬೆಂಕಿಯನ್ನು ಆಗಾಗ ಗಮನಿಸುತ್ತಲೇ ಇರಬೇಕು. ಒಲೆಯ ಮೇಲೆ ಕೊಟ್ಟೆ ಕಡುಬು ಬೇಯುತ್ತಿರುವಾಗಲೇ ಮನೆ ಮಂದಿಯ ಹೊಟ್ಟೆಯಲ್ಲಿ ಇಲಿ ಹೆಗ್ಗಣಗಳು ಓಡಾಡಲು ಶುರು ಮಾಡಿರುತ್ತದೆ. ಮನೆಯೊಡತಿ ಒಂದೊಂದು ಕಡುಬು ತೆಗೆದು  ಬಿಸಿ ಬಿಸಿ ಇರುವಾಗಲೇ ಕೊಟ್ಟೆಯಿಂದ ಕಡುಬನ್ನ ಬೇರೊಂದು ಪಾತ್ರೆಗೆ ಹಾಕಿರುತ್ತಾರೆ. ಖಾಲಿ ಕೊಟ್ಟೆ ಅದೇ  ವಾಲೆಯ ಪೊರಕೆ/ ಹಿಡಿಸುಡಿಯ ಚೂರುಗಳನ್ನು ಬೇರೆ ತೆಗೆದು ಹಾಕಿ ಕೊಟ್ಟಿಯಲ್ಲಿರುವ  ಆಗಲೆ ಮನೆ ಕಡೆ ಮುಖ ಮಾಡಿ ಯಾವಾಗ ಇವರು ತನಗೆ ಕಡುಬಿನ ವಾಲೆಯನ್ನು ತಂದು ಹಾಕುತ್ತಾರೆ ಎಂದು ಕಾಯುವ ದನಕ್ಕೂ ಅವಸರ. ಕಡುಬು ಅದಕ್ಕೆ ಸಿಗೋದು ಗಗನಕುಸುಮವೆಂದು ಅವಕ್ಕೂ ತಿಳಿದಿದೆ ಅಂತ ಕಾಣುತ್ತೆ ಹಾಗಾಗಿ ಘಮಘಮಿಸುವ ಬೆಂದ ವಾಲೆಯೆ ಅವುಗಳಿಗೆ ಇಷ್ಟ. ಗಣಪನಿಗೂ ಕೊಟ್ಟೆ ಕಡುಬೆಂದರೆ ಇಷ್ಟ ಅದೆಷ್ಟು ಜನರು ಹರಕೆಯಾಗಿ ಆನೆಗುಡ್ಡೆ ಗಣಪನಿಗೂ ಗುಡ್ಡಟ್ಟು ಗಣಪನಿಗೆ ಕೊಟ್ಟೆ ಕಡಬಿನ ಸೇವೆ ಸಲ್ಲಿಸುವುದಿಲ್ಲ ಹೇಳಿ. ತಮ್ಮ ತಮ್ಮ ಕೈಲಾದಷ್ಟು ಕಡುಬಿನ ಸೇವೆಯನ್ನು ಭಕ್ತರು ಗಣಪನಿಗೆ ಸಲ್ಲಿಸುತ್ತಾರೆ.

ಅಟ್ಟದಿಂದ ಕಡುಬನ್ನ ತೆಗೆದ ನಂತರ  ತಟ್ಟೆಯನ್ನೊ, ಎಲೆಯನ್ನು ಹಾಕುತ್ತಿದ್ದಂತೆ ಕೊಟ್ಟೆ ಕಡುಬಿನ ಪರಿಮಳಕ್ಕೆ ಮನ  ಸೋತು ತಿಂಡಿಗೆ ಬಾ ಎನ್ನುವ ಕರೆಗೆ ಕಾಯದೆ ಬಂದು ಕೂತುಬಿಡುತ್ತಾರೆ ಕಡುಬನ್ನು ಸವಿಯಲು. ಕಡುಬಿನ ಮೇಲೊಂದಿಷ್ಟು ಕುಟುಕುಟು ಎಣ್ಣೆ (ತೆಂಗಿನ
ಎಣ್ಣೆಗೆ ಸಾಸಿವೆ ಉದ್ದಿನಬೇಳೆಯ ಒಗ್ಗರಣೆ ಮಾಡಿ ಅದಕ್ಕೆ ಬಾಳಕದ ಮೆಣಸಿನಕಾಯಿಯನ್ನು ಹಾಕಿ ಕರಿದಿರುತ್ತಾರೆ) ಹಾಕುತ್ತಿದ್ದಂತೆ ಕುಡುಬಿನ ತೆಂಗಿನೆಣ್ಣೆಯ  ಪರಿಮಳದೊಡನೆ ಸೇರಿ ತಮಗರಿವಿಲ್ಲದಂತೆ ಹಾಗೆ ಒಂದು ತುತ್ತು ಮೆಣಸಿನೊಂದಿಗೆ ಕಡುಬು ಒಳ ಹೋಗಿರುತ್ತದೆ. ಮತ್ತೆ ಮಾವಿನಕಾಯಿ ರಸ ಅಥವಾ ತೆಂಗಿನ ಕಾಯಿ ಚಟ್ನಿಯತ್ತ ಕಣ್ಣು  ಕಾತರಿಸುತ್ತದೆ. ಹಾಗೆ ಒಗ್ಗರಣೆ ಅದೇ ಕುಟುಕುಟು ಎಣ್ಣೆಯೊಂದಿಗೆ ಒಂದು ತುತ್ತು ಕಡಬನ್ನ ಮುರಿದು ಚಟ್ನಿಯೊಂದಿಗೂ, ಮಾವಿನ ಕಾಯಿ ಅಥವಾ ಯಾವುದಾದರೂ ತರಕಾರಿಯ ರಸವನ್ನು(ಪೈನಾಪಲ್, ಬೆಂಡೆಕಾಯಿ, ಸೌತೆಕಾಯಿ ಆದರೆ ಅತಿ ಹೆಚ್ಚು ಜನಪ್ರಿಯ ಮಾವಿನ ಕಾಯಿಯದ್ದೆ)  ಕಡುಬಿಗೆ ಅದ್ದಿ ಬಾಯಲ್ಲಿಟ್ಟರೆ ಆಹಾ!!! ಇದರ ಸ್ವಾಧವನ್ನು ಅನುಭವಿಸಿದವನಿಗಷ್ಟೇ ಗೊತ್ತು, ರುಚಿ ಏನು ಅಂತ ವೃದುವಾದ ಕಡುಬು, ಅದರ ಜೊತೆ ಕಡುಬಿನ ಎಲೆಯ ಸುವಾಸನೆ…. ಇಷ್ಟಪಟ್ಟವವರು ಅದರ ಮೇಲೊಂದಿಷ್ಟು ತುಪ್ಪ ಜೊತೆಗೆ ರಸ ಚಟ್ನಿಗಳೊಂದಿಗೆ ನಾಲ್ಕಾರು ಜನರ ಜೊತೆ ಹರಟೆ ಹೊಡೆಯುತ್ತಾ ತಿನ್ನುತ್ತಿದ್ದರೆ ನಾಲ್ಕೈದು ಕೊಟ್ಟೆ ಕಡಬು ಹೋಗುವುದೇ ತಿಳಿಯುವುದಿಲ್ಲ. ಆ ಕೊಟ್ಟೆಯೇನು ನಿಮ್ಮ ಮಧ್ಯಬೆರಳಿನಷ್ಟು ಚಿಕ್ಕದಿರುವುದಿಲ್ಲ ಅಂಗೈಕ್ಕಿಂತ ದೊಡ್ಡದಾಗಿಯೇ ಇರುತ್ತದೆ. ಬಡಿಸುವವರು ಇವರು ಅಷ್ಟು ಕೊಟ್ಟೆ ತಿಂದರೂ ಇವರು ಇಷ್ಟು ಕೊಟ್ಟೆ ತಿಂದರೆನ್ನದೆ ಮನಪೂರ್ವಕವಾಗಿ ಬಳಸಿ ಸಂತೃಪ್ತಿಯ ನಗುವನ್ನು ಸೂಸುವರು. ಇಂದು ಕೆಲವು ಹೋಟೆಲ್ನಲ್ಲಿಯೂ ಕೊಟ್ಟೆ ಕಡುಬು ಸಿಗುತ್ತದೆ. ಕೆಲವು ಸಮಾರಂಭದಲ್ಲಿಯೂ ಕೊಟ್ಟೆ ಕಡಬು ವಿಶೇಷವಾಗಿ  ಮಾಡುತ್ತಾರೆ. ಸಮಾರಂಭದಲ್ಲಿ ಕೊಟ್ಟೆ ಕಡಬು ಇದೆ ಎಂದರೆ ಅದಕ್ಕೊಂದು ರಾಜ ಮರ್ಯಾದೆ!!. ಕೊಟ್ಟೆ ಕಡುಬು ಮಾಡಿಸಿದ್ದಾರೆಂದು!!!. ಕೊಟ್ಟೆಕಡಬು ‘ಕೊಟ್ಟ’ ರಾಜ ಮರ್ಯಾದೆಯದು.

ನಮ್ಮ ಕೋಟೇಶ್ವರ ಮಾಗಣೆಯವರಿಗೆ ಯಾವುದೇ ಹಬ್ಬ ಹರಿದಿನ ಬಂದರು ನಮ್ಮಲ್ಲಿ ಕೊಟ್ಟೆ  ಕಡಬು ಮಾಡುವುದೇ ವಿಶೇಷ!!!. ಯಾವುದೇ ವಿಶೇಷವಿದ್ದರೂ ಮನೆಗೆ ನೆಂಟರು ಬಂದರು ಅವರಿಗೆ ಕೊಟ್ಟೆಕಡುಬೆ ಬಲು ವಿಶೇಷ. ಈಗೆಲ್ಲಾ ರೆಡಿಮೇಡ್ ಕೊಟ್ಟೆ ಹೆಚ್ಚಾಗಿ ಎಲ್ಲಾ ನಗರದಲ್ಲಿರುವ ಮಂಗಳೂರು ಸ್ಟೋರ್’ನಲ್ಲಿ ದೊರಕುತ್ತದೆ, ಅದರಲ್ಲಿ ಮಾಡಿ ತಿಂದರೂ ಊರಿಗೆ ಬಂದಾಗ ಊರಿನವರು ಕೊಟ್ಟೆ ಕಡುಬು ಮಾಡಿ ಹಾಕಿದಾಗ ತಮ್ಮ ಅಮ್ಮನನ್ನೊ, ಅಜ್ಜಿಯನ್ನೊ ನೆನಪಿಸಿಕೊಂಡು ಅವರು ಮಾಡುತ್ತಿದ್ದ ಕೊಟ್ಟೆ ಕಡುಬಿನ ಬಗ್ಗೆ ವರ್ಣಿಸದೆ ತಿನ್ನವುದಿಲ್ಲ.ಅವರು ಕೊಟ್ಟ ಕಡುಬನ್ನು ಮೆಲ್ಲುತ್ತಾ ನೆನಪಿನ ಸುಳಿಯೊಳಗೆ ಇಳಿದು… “ಅಣ್ಣನಿಗೂ ತಮ್ಮನಿಗೂ ಎರಡು ಮೆಣಸು ನೀನು ಜಾಸ್ತಿ ಕೊಟ್ಟೆ ನನಗೆ ಕಡಿಮೆ ಕೊಟ್ಟೆ ಎಂದಾಡಿದ ಜಗಳವ ನೆನಪಿಗೆ ಬಂದು ಮುಖದಲ್ಲಿ ನಗುವರಳುವುದು. ಅವನಿಗೆ ದೊಡ್ಡ ಕೊಟ್ಟೆಯ ಕಡಬು ಕೊಟ್ಟೆ ನನಗೆ ಚಿಕ್ಕ ಕಡಬಿನ ಕೊಟ್ಟೆ…..ನೀ ಯಾಕೆ   ಹೀಗೆ ಕೊಟ್ಟೆ….??”. ಅದೇ ಹಳೆ ನೆನಪುಗಳನ್ನ ಹಳಬರಲಿ, ಮಧ್ಯವಯಸ್ಕರಿರಲಿ ‘ಕೊಟ್ಟೆ ಕಡಬು’ ಮರುಕಳಿಸಿ ಹಾಗೆ ಕೊಟ್ಟೆ ಬಿಡುತ್ತದೆ.

ಹಲಸಿನಎಲೆಯದ್ದೊ ಅಥವಾ ಮುಂಡುಕನ ವಾಲೆಯ ಕೊಟ್ಟೆ  ಇಂದು ನಗರದಲ್ಲಿಯೂ ದೊರೆಯಬಹುದು ಆದರೂ ಊರ ಮನೆಯಲ್ಲಿ ತಮ್ಮ ಅಜ್ಜಿಯೊ, ಅಮ್ಮನೊ ಕುಳಿತು ಸುಡುತ್ತಿದ್ದ ವಾಲೆ ಅದರ ಘಮ ಹಾಗೂ ಅಟ್ಟದಿಂದ ಕೆಳಗಿಳಿಯುತ್ತಿರುವ ಬಿಸಿಬಿಸಿ ಕೊಟ್ಟೆ ಕಡಬು ಆ ರುಚಿಯನ್ನು ಮರೆಯಲು ಅಸಾಧ್ಯ???!. ಅವನ ಅಜ್ಜಿಯೊ,  ಅಮ್ಮನೊ, ಅತ್ತೆಯೋ ಪ್ರೀತಿಯಿಂದಲೇ ಅರ್ಧ ಅಷ್ಟೆ ಹಾಕುವೆ  ತಿನ್ನಿ ಅನ್ನುತ್ತಾ ಇಡೀ ಕಡುಬನ್ನು ಹಾಕಿ ಅದರ ಮೇಲೆ ಒಂದಿಷ್ಟು ತುಪ್ಪ, ಎಣ್ಣೆ, ಚಟ್ನಿ ರಸವನ್ನು ಹಾಕಿ ಪ್ರೀತಿಯಿಂದ ತಿಂದಿದ್ದಾಗ ಹೆಚ್ಚಾಗಿದ್ದ ಕಡಬು ಕಡಿಮೆಯಾಗುವುದು. ಎಷ್ಟೆಂದರೂ ಪ್ರೀತಿಯಿಂದ ಎಲೆಗೆ ಹಾಕಿ ಕೊಟ್ಟ  ಕೊಟ್ಟೆ ಕಡುಬಲ್ಲವೇ ಅದು.

ಒಂದು ಕೊಟ್ಟೆ ಕಡುಬು ನೆನಪಿನ ಮೂಟೆಯನ್ನ ಮೊಗೆಮೊಗೆದು  ಕೊಟ್ಟೆ ಬಿಡುತ್ತದೆ. ನಾಳೆ ತಿಂಡಿ ಯಾವುದನ್ನು ಮಾಡಲಿ ಅನ್ನುವಾಗ “ಯಾಕೆ ಕೊಟ್ಟೆ ಕಡಬನ್ನೇ ಮಾಡಬಾರದು?”, ಅನ್ನುವ ಐಡಿಯಾವನ್ನೂ ಕೊಟ್ಟೆ ಬಿಡುತ್ತದೆ. ಈಗ ಕೊಟ್ಟೆ ಸಿಗುವುದಿಲ್ಲ ಏನು ಮಾಡಲಿ ಅನ್ನುವವರು ಬಾಲ್ಯದಲ್ಲಿ ಅಮ್ಮ ಅಪ್ಪ ಅಜ್ಜ ಅಜ್ಜಿ ಶಿಕ್ಷಕರು ಕೊಟ್ಟ ಬಿಸಿ ಬಿಸಿ ಕಡುಬನ್ನೆ ನೆನಪಿಸಿಕೊಂಡು ತಮ್ಮ ಮನೆಯಲ್ಲಿ ಚಿಕ್ಕಮಕ್ಕಳು ಇದ್ದರೆ ಅವರಿಗೆ ಬಿಸಿ ಬಿಸಿ ಕಡಬು ಕೊಟ್ಟೆ ಸಂಭ್ರಮಪಡಿ ಅಷ್ಟೇ.

– ಮಾಧವಿ ಹೆಬ್ಬಾರ್, ಮೈಸೂರು

8 Responses

  1. ಕೊಟ್ಟೆ ಲೇಖನ ಚೆನ್ನಾಗಿದೆ.. ಧನ್ಯವಾದಗಳು ಮೇಡಂ

  2. ನಯನ ಬಜಕೂಡ್ಲು says:

    ಚೆನ್ನಾಗಿದೆ

  3. ಆಶಾನೂಜಿ says:

    ಚಂದದ ಲೇಖನ ಕೊಟ್ಟೆಯಾ ಸುರಹೊನ್ನೆ ಗೆ ಮಾಧವಿಯವರೇ

  4. ಶಂಕರಿ ಶರ್ಮ says:

    ಕೊಡದೆಯೂ ‘ಕೊಟ್ಟೆ’ ಅನ್ನುತ್ತಾ, ಕಡುಬು, ಕಜ್ಜಾಯಗಳನ್ನು ತಿನ್ನಿಸಿಬಿಟ್ಟಿರಿ ಮೇಡಂ…ಸೊಗಸಾಗಿದೆ ಲೇಖನ.

  5. Padmini Hegde says:

    ಕೊಟ್ಟೆಯ ವರ್ಣನೆ ಚೆನ್ನಾಗಿದೆ

Leave a Reply to ನಾಗರತ್ನ ಬಿ. ಆರ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: