ಜಾಗತಿಕ ತಾಪಮಾನ ಏರಿಕೆ: ಎಚ್ಚರಿಕೆಯ ಗಂಟೆ

Share Button

ಹಿಮಕರಡಿ ಬೇಟೆ

ಸುಮಾರು ಎರಡು ವರ್ಷಗಳ ಹಿಂದೆ ಪ್ರಸಿದ್ಧ ಮ್ಯಾಗಜೀನ್ ‘ನ್ಯಾಷನಲ್ ಜಿಯೋಗ್ರಾಫಿಕ್’ನಲ್ಲಿಪ್ರಕಟವಾದ ಒಂದುಹಿಮಕರಡಿಯ ಚಿತ್ರಪ್ರಪಂಚದಾದ್ಯಂತ ಎಲ್ಲರ ಗಮನಸೆಳೆಯಿತು. ಯಾವಾಗಲೂ ದಷ್ಟಪುಷ್ಟವಾಗಿರುವ ಹಿಮಕರಡಿ ಮೂಳೆ ಕಾಣುವಂತೆ ಆಗಿತ್ತು. ಚರ್ಮ ಜೋತು ಬಿದ್ದಿತ್ತು. ವಿಜ್ಞಾನಿಗಳು ಈ ವಿಷಯದ ಬಗ್ಗೆ ಯೋಚಿಸಿದಾಗ ಜಾಗತಿಕ ತಾಪಮಾನವೇ ಇದಕ್ಕೆ ಬಹುಶಃ ಕಾರಣ ಎಂದು ಅಭಿಪ್ರಾಯ ಪಟ್ಟರು. ಹಿಮ ಕರಡಿ ಆರ್ಕ್‌ಟಿಕ್ ಅಂದರೆ ಉತ್ತರ ಧ್ರುವದಲ್ಲಿರುವ ಹೆಪ್ಪುಗಟ್ಟಿರುವ ಸಮುದ್ರದಲ್ಲಿರುವ ಸೀಲ್ ಅನ್ನು (ಇದೊಂದು ದೊಡ್ಡ ಸ್ತನಿ) ಆಹಾರವಾಗಿ ತಿನ್ನುತ್ತದೆ. ಸೀಲ್‌ನ ದೇಹದಲ್ಲಿ ಹೆಚ್ಚಾಗಿ ಕೊಬ್ಬೇ ಇರುತ್ತದೆ. ಇದು ಹಿಮಕರಡಿಗೆ ಬಹಳ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಒದಗಿಸುತ್ತದೆ. ಹಿಮಕರಡಿಗೆ ಪ್ರತಿದಿನ ಅಂದಾಜಿನಲ್ಲಿ 12,325 ಕ್ಯಾಲೊರಿಗಳು ಬೇಕು. ಇದು ಸೀಲ್ ಅನ್ನು ಬೇಟೆಯಾಡಲು ತುಂಬಾ ಅಲೆಯುವುದಿಲ್ಲ. ಸೀಲ್ ಸಮುದ್ರದ ಹಿಮದ ಕೆಳಗಡೆ ಶಂಕುವಿನ ರೀತಿಯ ತೂತಿನಲ್ಲಿ ಇರುತ್ತದೆ. ಆಗಾಗ ಉಸಿರಾಡಲು ಮೇಲೆ ಬರುತ್ತದೆ. ಹತ್ತಿರದಲ್ಲೇ ಹಿಮಕರಡಿಯು ಕಾಯುತ್ತಿರುತ್ತದೆ. ಸೀಲ್ ಮೇಲೆ ಬಂದಾಗ ಹಿಮಕರಡಿ ತನ್ನ ಹಿಂಗಾಲುಗಳ ಮೇಲೆ ನಿಂತು ಸೀಲ್‌ನ ತಲೆಯ ಮೇಲೆ ತನ್ನ ಮುಂಗಾಲುಗಳಿಂದ ಜೋರಾಗಿ ಬಡಿಯುತ್ತದೆ. ಇದರಿಂದ ಗಾಬರಿಗೊಂಡ ಸೀಲ್‌ನ ಕತ್ತನ್ನು ಹಿಡಿದು ಕಚ್ಚಿ ಹಿಮದ ಮೇಲೆ ಎಳೆದುಕೊಂಡು ಹಿಮಕರಡಿ ಬೇಟೆ ಮುಗಿಸುತ್ತದೆ.

ಹಿಮಕರಡಿ PC:Internet

ಆದರೆ ಜಾಗತಿಕ ತಾಪಮಾನದಿಂದ ಆರ್ಕ್‌ಟಿಕ್ ಸಮುದ್ರ ಕರಗುತ್ತಿದೆ. ಆದ್ದರಿಂದ ಈ ರೀತಿ ಬೇಟೆಯಾಡಲು ಹಿಮಕರಡಿಗೆ ಕಷ್ಟಸಾಧ್ಯವಾಗಿದೆ. ಸೀಲ್‌ಗಳನ್ನು ಹುಡುಕಿಕೊಂಡು ಬಹುದೂರ ಈಜಬೇಕಾಗಿದೆ ಮತ್ತು ಅಲೆಯಬೇಕಾಗಿದೆ. ಇದು ಅವುಗಳ ರೂಢಿಯಲ್ಲ. ಇದರಿಂದ ಹಿಮಕರಡಿ ಕ್ಯಾಲೊರಿಗಳನ್ನು ಅತಿಯಾಗಿ ವ್ಯಯ ಮಾಡಬೇಕಾಗಿದೆ. ಆದ್ದರಿಂದ ಬಹಳ ಸಣಕಲಾಗಿರಬಹುದು ಎಂದು ವಿಜ್ಞಾನಿಗಳ ಅಭಿಪ್ರಾಯ. ಸೀಲ್‌ಗಳೂ ಸಿಕ್ಕದೆ ಉಪವಾಸ ಬೀಳುತ್ತಿರಬಹುದು. ಹೀಗಾದಾಗ ಅವುಗಳ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಇದೆಲ್ಲಕ್ಕೂ ಕಾರಣ ಸಮುದ್ರದ ನೀರಿನ ತಾಪಮಾನ ಒಂದು ಡಿಗ್ರಿ ಸೆಂ. ಜಾಸ್ತಿಯಾಗಿರುವುದು.

ಹವಳದ ದಿಬ್ಬಗಳು
ಜಾಗತಿಕ ತಾಪಮಾನ ಹವಳದ ದಿಬ್ಬಗಳನ್ನೂ ಬಿಟ್ಟಿಲ್ಲ. ಸಮುದ್ರದ ನೀರೊಳಗಿದ್ದರೂ ಹವಳಗಳು ಹಾಳಾಗುತ್ತಿವೆ. ಭೂಮಿಯ ಮೇಲೆ ಮರಗಳು ಇರುವ ಹಾಗೆ ಸಮುದ್ರದಲಿ ಹವಳಗಳು ಇರುತ್ತವೆ. ಹವಳದ ದಿಬ್ಬಗಳ ಪರಿಸರ ಸೂಕ್ಷ್ಮವಾಗಿರುತ್ತದೆ. ಅನೇಕ ಜಾತಿಯ ಮೀನುಗಳು ಮತ್ತು ಇತರ ಸಮುದ್ರ ಜೀವಿಗಳಿಗೆ ವಾಸಸ್ಥಾನವಾಗಿರುತ್ತದೆ.

ಸಮುದ್ರದ ಮೇಲ್ಮೈ ನೀರು ಜಾಗತಿಕ ತಾಪಮಾನದಿಂದ ಹೆಚ್ಚು ಕಡಿಮೆ ಒಂದು ಡಿಗ್ರಿ ಸೆಂ. ಜಾಸ್ತಿಯಾಗಿರುವುದರಿಂದ ಹವಳದ ದಿಬ್ಬಗಳು ಬಿಳಿಚಿಕೊಳ್ಳುತ್ತಿವೆ (ಬ್ಲೀಚಿಂಗ್). ಅನೇಕ ದಿನಗಳು ಸತತವಾಗಿ ಉಷ್ಣತೆ ಜಾಸ್ತಿಯಾದಾಗ ಹವಳಗಳು ತಮ್ಮಲ್ಲಿರುವ ಸಹಜೀವಿ ಪಾಚಿಯನ್ನು ಹೊರತಳ್ಳುತ್ತವೆ. ಹವಳಕ್ಕೆ ಬಣ್ಣ ಕೊಡುವ ಈ ಪಾಚಿಗಳ ಹೆಸರು ಜ಼ೂಜ಼ಾಂತೆಲ್ಲೇ. ಇವುಗಳು ಹವಳಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಹವಳ ಇವುಗಳನ್ನು ಹೊರತಳ್ಳಿದಾಗ ನಲುಗಿ ಸಾಯುವಂತಾಗುತ್ತದೆ. ಪರಿಣಾಮವೇ ಬಿಳಿಚಿಕೊಳ್ಳುವುದು. ಆಸ್ಟ್ರೇಲಿಯದ ಮಹಾ ಬ್ಯಾರಿಯರ್ ರೀಫ್ ಮತ್ತು ಹವಾಯ್ ದ್ವೀಪಗಳ ಹತ್ತಿರ ಈ ರೀತಿಯ ಬಿಳಿಚುವಿಕೆ ಕಂಡುಬಂದಿದೆ. ಇದರಿಂದ ಇಲ್ಲಿ ವಾಸಮಾಡುವ ಇತರ ಜೀವಿಗಳೂ ನಶಿಸುತ್ತವೆ. ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿರುವ ಸುಮಾರು ಅರ್ಧದಷ್ಟು ಹವಳಗಳು 2016-17 ರಲ್ಲಿ ಬಿಳಿಚುವಿಕೆಗೆ ಒಳಗಾದವು.

ಜಾಗತಿಕ ತಾಪಮಾನದಿಂದ ಸಮುದ್ರದ ನೀರು ಆಮ್ಲೀಕರಣಗೊಳ್ಳುತ್ತಿದೆ. ಹೇಗೆಂದರೆ ಗಾಳಿಯಲ್ಲಿರುವ ಹೆಚ್ಚಿನ ಇಂಗಾಲಾಮ್ಲ ಸಮುದ್ರದ ನೀರಿನಲ್ಲಿ ಸೇರುತ್ತಿದೆ. ಇದರಿಂದ ಹವಳದ ಬಿಳಿಚುವಿಕೆ ಆಗಬಹುದು. ಜೊತೆಗೆ ಮಾಲಿನ್ಯ, ಹೆಚ್ಚುವರಿ ಪೋಷಕಾಂಶಗಳು ಸಮುದ್ರದ ನೀರಿಗೆ ಸೇರುವಿಕೆ, ಜಾಸ್ತಿ ಅತಿ ನೇರಳೆ ಕಿರಣಗಳು ಕಾರಣವಾಗಬಹುದು. ಹವಳಗಳು ಅತಿ ಸೂಕ್ಷ್ಮ ಸ್ವಭಾವದವು. ಪರಿಸರದಲ್ಲಿ ಆಗುವ ಚಿಕ್ಕ ಬದಲಾವಣೆಗಳಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಬಹಳ ಕಡಿಮೆ.

ಏನು ಮಾಡಬಹುದು?
ಜಾಗತಿಕ ತಾಪಮಾನ ಸುಮಾರು 20ಸೆಂ. ನಷ್ಟು ಕಡಿಮೆಯಾಗಬೇಕು. ಪ್ಯಾರಿಸ್ ಒಪ್ಪಂದದ ಪ್ರಕಾರ1.50ಸೆಂ.ನಷ್ಟು ಕಡಿಮೆಯಾಗಬೇಕು. ಹೀಗಾದಲ್ಲಿ ಗಾಳಿಯಲ್ಲಿರುವ ಇಂಗಾಲದ (ಕಾರ್ಬನ್) ಸಂಗ್ರಹ ಕಡಿಮೆಯಾಗುತ್ತದೆ. ಇದರಿಂದ ತಾಪಮಾನ ಕಡಿಮೆಯಾಗುತ್ತದೆ. ಜಾಗತಿಕವಾಗಿ ಆಗುವ ಒಪ್ಪಂದಗಳಲ್ಲಿ ಪ್ಯಾರಿಸ್ ಒಪ್ಪಂದವನ್ನು ಅಳವಡಿಸಿಕೊಳ್ಳಬೇಕು. ಎಲ್.ನಿನೋ ಆಗುವ ಸಂದರ್ಭದಲ್ಲಿ ಪೆಸಿಫಿಕ್ ಸಾಗರವು ತನ್ನ ಮೇಲ್ಮೈ ನೀರನ್ನು ಬಿಸಿಗೊಳಿಸಿಕೊಳ್ಳುತ್ತದೆ. ಇದು ಹವಳಗಳ ಬಿಳಿಚುವಿಕೆಯನ್ನು ಉಂಟುಮಾಡುತ್ತದೆ. ಸಮುದ್ರದ ನೀರು ಬಿಸಿಯಾದಾಗ ಹವಳದ ಪಾಲಿಪ್‌ಗಳಲ್ಲಿರುವ ಜ಼ೂಜ಼ಾನ್ತೆಲ್ಲೇ ತಮ್ಮ ದ್ಯುತಿ ಸಂಶ್ಲೇಷಣೆಯನ್ನು ಅತಿಯಾಗಿ ಜಾಸ್ತಿ ಮಾಡುತ್ತವೆ. ಇದರಿಂದ ಬಹಳ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಈ ಆಮ್ಲಜನಕ ಪಾಲಿಪ್‌ಗೆ (ಹವಳದ ಭಾಗ) ಆಗುವುದಿಲ್ಲ. ತನ್ನನ್ನು ಉಳಿಸಿಕೊಳ್ಳಲು ಹವಳವು ಪಾಚಿಯನ್ನು ಹೊರದೂಡುತ್ತದೆ. ಇದರಿಂದ ಬಣ್ಣ ಕಳೆದುಕೊಳ್ಳುತ್ತದೆ. ಹಾಗೂ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ರೋಗಗಳಿಗೆ ತುತ್ತಾಗುತ್ತದೆ. ಸಮುದ್ರದ ಇತರ ಕಳೆಗಿಡಗಳು ಮತ್ತು ಪಾಚಿ ಬೆಳೆಯುತ್ತದೆ. ಪರಿಣಾಮವೇ ಹವಳಗಳ ನಿಧಾನ ಸಾವು.

ಕಳೆದ ನಲವತ್ತು ವರ್ಷಗಳಲ್ಲಿ ಕ್ಯಾರಿಬಿಯನ್ ಸಮುದ್ರದಲ್ಲಿರುವ 80% ಹವಳಗಳು ನಾಶವಾಗಿವೆ (ಗಾರ್ಡನರ್ 2003). ಇಂಡೋನೇಶಿಯದಲ್ಲಿ 50% (ಬ್ರಾನೋ ಮತ್ತು ಸೆಲಿಗ್ 207) ನಾಶವಾಗಿದೆ. ಪೆಸಿಫಿಕ್ ಸಾಗರದಲ್ಲಿ ಮತ್ತು ಗಾಲಪಾಗೋಸ್ ದ್ವೀಪಗಳಲ್ಲಿ 1982-83ರಲ್ಲಿ ಉಂಟಾದ ಎಲ್-ನಿನೋ 95% ಮಿಕ್ಕಿ ಹವಳಗಳನ್ನು ಬಿಳಿಚುವಿಕೆಯಿಂದ ನಾಶ ಮಾಡಿತು. (ಗ್ಲಿನ್ 1990) ಜಾಗತಿಕವಾಗಿ ಶೇಕಡ ಒಂದರಷ್ಟು ಹವಳಗಳು ಪ್ರತಿವರ್ಷ ನಾಶವಾಗುತ್ತಿವೆ. ಇದಕ್ಕೆ ಬಿಳಿಚುವಿಕೆ ಜೊತೆಗೆ ಮಾಲಿನ್ಯ ಮತ್ತು ಇತರ ಚಟುವಟಿಕೆಗಳೂ ಕಾರಣ.

ಹವಳದ ದಿಬ್ಬಗಳ ಪ್ರಾಮುಖ್ಯತೆ

ಹವಳದ ದಿಬ್ಬ PC:Internet

ಹವಳ ಅನೇಕ ಸಮುದ್ರ ಜೀವಿಗಳ ಆಹಾರವಾಗಿದೆ. ಅಸಂಖ್ಯ ಸಮುದ್ರ ಜೀವಿಗಳಿಗೆ ಆಶ್ರಯ ತಾಣವಾಗಿದೆ. ಇದಲ್ಲದೆ ಸಾವಿರಾರು ಜನರಿಗೆ ಉದ್ಯೋಗ ಒದಗಿಸುತ್ತದೆ. ಇವುಗಳಲ್ಲಿರುವ ಜ಼ೂಜ಼ಾನ್ತೆಲ್ಲೇ ಪಾಚಿಗಳು ದ್ಯುತಿಸಂಶ್ಲೇಷಣೆಯಿಂದ ಸಮುದ್ರದ ಆಹಾರ ಸರಪಳಿಗೆ ಆಹಾರ ಸರಬರಾಜು ಮಾಡುತ್ತವೆ. ಮರುಬಳಕೆಯೂ ಆಗುತ್ತದೆ.

ಹವಳದ ಪಾಲಿಪ್

ಹವಳದ ದಿಬ್ಬಗಳು ಸಮುದ್ರ ಜೀವಿಗಳಲ್ಲದೆ ಮಾನವನಿಗೂ ಬೇಕಾದವು. ಅನೇಕ ದೇಶಗಳಲ್ಲಿ ಇವುಗಳು ವಾಣಿಜ್ಯದ ದೃಷ್ಟಿಯಿಂದ ಮುಖ್ಯವಾಗಿವೆ. ಸುಮಾರು 500 ಮಿಲಿಯ ಜನರಿಗೆ ಹವಳದಿಂದ ಉದ್ಯೋಗ ದೊರಕುತ್ತಿದೆ. ಇದು 2100 ರ ಹೊತ್ತಿಗೆ 500 ಬಿಲಿಯನ್ ಡಾಲರ್‌ಗಳ ನಷ್ಟ ಉಂಟುಮಾಡಬಹುದು. ಹವಳದ ದಿಬ್ಬಗಳು ಸಮುದ್ರದ ಪರಿಸರವ್ಯೂಹ ಹೇಗೆ ಇದೆ ಎನ್ನುವುದನ್ನೂ ತಿಳಿಸಿಕೊಡುತ್ತದೆ.

ಮೊನಾರ್ಕ್ ಚಿಟ್ಟೆ
ಮೊನಾರ್ಕ್ ಚಿಟ್ಟೆಗಳ ಮೇಲೆ ಜಾಗತಿಕ ತಾಪಮಾನದ ಪರಿಣಾಮ ಡಬ್ಲ್ಯುಡಬ್ಲ್ಯು‌ಎಫ್ ನಡೆಸಿದ ಸಮೀಕ್ಷೆ ಕೆಳಕಂಡಂತಿದೆ. ಮೊನಾರ್ಕ್ ಚಿಟ್ಟೆಗಳು ಪ್ರಪಂಚದ ಎಲ್ಲ ಭಾಗಗಳಲ್ಲಿ ಕಾಣಬರುತ್ತವೆ. ಕಿತ್ತಳೆ ಮತ್ತು ಕಪ್ಪು ಬಣ್ಣದ ರೆಕ್ಕೆಗಳ ಸುಂದರ ಚಿಟ್ಟೆ. ಇದು ಡನಾಸ್ ಪ್ಲೆಕ್ಸಿಪಸ್ (Danaus plexipus) ಎನ್ನುವ ಪ್ರಭೇದಕ್ಕೆ ಸೇರಿದೆ. ಇದರ ಸಾಮಾನ್ಯ ಹೆಸರು ಹಾಲು ಒಸರುವ ಕಳೆಯ ಚಿಟ್ಟೆ. ಮೊನಾರ್ಕ್ ಚಿಟ್ಟೆಯ ವಲಸೆ ಹೋಗುವಿಕೆ ಬಹಳ ಪ್ರಸಿದ್ಧ. ಉತ್ತರ ಅಮೇರಿಕಾದಿಂದ ಮೆಕ್ಸಿಕೋಗೆ ಇವುಗಳ ವಲಸೆ ಅದ್ಭುತವಾದದ್ದು. ಸಾವಿರಗಟ್ಟಲೆ ಚಿಟ್ಟೆಗಳು ಪ್ರಯಾಣ ಬೆಳೆಸುತ್ತವೆ.

ಜಾಗತಿಕ ತಾಪಮಾನದಿಂದ ಆಗಿರುವ ಹವಾಮಾನ ಬದಲಾವಣೆ ಇವುಗಳನ್ನೂ ಬಿಟ್ಟಿಲ್ಲ. ಇತರ ಚಿಟ್ಟೆಗಳಂತೆಯೇ ಮೊನಾರ್ಕ್ ಚಿಟ್ಟೆ ಕೂಡ ಹವಾಮಾನದ ವಿಷಯದಲ್ಲಿ ಬಹಳ ಸೂಕ್ಷ್ಮ. ಹೊರಗಿನ ಉಷ್ಣತೆಯೇ ಇವುಗಳ ಸಂತಾನಾಭಿವೃದ್ಧಿ, ವಲಸೆ ಮತ್ತು ಶಿಶಿರ ನಿದ್ರೆಗೆ ಕಾರಣ. ಉಷ್ಣತೆಯಲ್ಲಿನ ಏರುಪೇರು ಇವೆಲ್ಲದರ ಮೆಲೆ ದೊಡ್ಡ ಪರಿಣಾಮವನ್ನೇ ಬೀರುತ್ತದೆ. ಇವುಗಳ ಆಹಾರ ಕಿತ್ತರೆ ಹಾಲು ಒಸರುವ ಗಿಡಗಳ ಎಲೆಗಳು. ಇಂತಹ ಗಿಡಗಳು ಕಡಿಮೆಯಾದರೂ ಕಷ್ಟ. ಇದಲ್ಲದೆ ಚಳಿಗಾಲದಲ್ಲಿ ಮೊನಾರ್ಕ್ ಆಶ್ರಯ ಪಡೆಯುವ ತಂಗುದಾಣಗಳೂ ಕಡಿಮೆಯಾಗುತ್ತಿವೆ.

ಮೊನಾರ್ಕ್ ಚಿಟ್ಟೆ PC:Internet

ಕಳೆದ ಇಪ್ಪತ್ತು ವರ್ಷಗಳಲ್ಲಿ ಮೊನಾರ್ಕ್ ಚಿಟ್ಟೆಯ ಸಂತತಿ ಸುಮಾರು 95% ಕಡಿಮೆಯಾಗಿದೆ. ಪ್ರತಿವರ್ಷ ಹೊಸ ಪೀಳಿಗೆಯ ಚಿಟ್ಟೆಗಳು ತಮ್ಮ ವಂಶಜರು ತುಳಿದ ಹಾದಿಯನ್ನೇ ಹಿಡಿದು ಹೋಗುತ್ತವೆ. ಇವುಗಳ ಪ್ರಯಾಣವನ್ನು ನಿರ್ಧರಿಸುವುದು ತಾಪಮಾನ ಅಥವಾ ಉಷ್ಣತೆ. ಕೆಲವು ವರ್ಷಗಳಿಂದ ಕೆನಡಾದಿಂದ ದಕ್ಷಿಣಕ್ಕೆ ಹೋಗುವ ಮೊನಾರ್ಕ್ ಚಿಟ್ಟೆಯ ವಲಸೆಯು ಆರು ವಾರಗಳ ಕಾಲ ಮುಂದಕ್ಕೆ ಹೋಗುತ್ತಿದೆ. ಏಕೆಂದರೆ ಉಷ್ಣತೆ ಜಾಸ್ತಿಯಾಗಿಯೇ ಇರುತ್ತದೆ. ಇದು ಚಿಟ್ಟೆಗಳಿಗೆ ದಕ್ಷಿಣಕ್ಕೆ ವಲಸೆ ಹೊರಡಲು ಹುಟ್ಟುಗುಣ ಅಥವಾ ಸಹಜಪ್ರವೃತ್ತಿಯ ಪ್ರೇರಣೆ ನೀಡುವುದಿಲ್ಲ. ಉಷ್ಣತೆ ಕಡಿಮೆಯಾದಾಗ ಇವು ವಲಸೆ ಹೊರಡುತ್ತವೆ. ಆದರೆ ಮಧ್ಯದಲ್ಲಿ ಅತಿಯಾದ ಚಳಿ ಇರುತ್ತದೆ. ಇದರಿಂದ ಅನೇಕ ಚಿಟ್ಟೆಗಳು ಸಾವನ್ನಪ್ಪುತ್ತವೆ. ಅಕಾಲದ ಅತಿವೃಷ್ಟಿ ಮತ್ತು ಕಡುಚಳಿಯಿಂದ 2002 ರಲ್ಲಿ ಶೇಕಡ 80 ರಷ್ಟು ಚಿಟ್ಟೆಗಳು ನಾಶವಾದುವು. ಆಗ ಇವು ಚಳಿಗಾಲದ ಆಶ್ರಯ ತಾಣಗಳಲ್ಲಿದ್ದುವು. ಮೊನಾರ್ಕ್ ಚಿಟ್ಟೆಯ ಕಂಬಳಿಹುಳುವಿಗೆ ಬಿಸಿಯಾದ ಮತ್ತು ಒಣಹವೆ ಮಾರಕ. ಇದರಿಂದ ಅವು ಸಾಯುತ್ತವೆ. ಇದೆಲ್ಲಾ ವಿಷಯಗಳಿಂದ ಮೊನಾರ್ಕ್ ಚಿಟ್ಟೆಯ ಸಂತತಿ ಬಹಳವಾಗಿ ಕ್ಷೀಣಿಸಿದೆ. ಜೊತೆಗೆ ಹಾಲು ಒಸರುವ ಕಳೆಗಳೂ ಹವಾಮಾನ ವೈಪರೀತ್ಯದಿಂದ ಕಡಿಮೆಯಾಗಿವೆ. ಇದರಿಂದ ಚಿಟ್ಟೆಗಳಿಗೆ ಆಹಾರ ಸರಿಯಾಗಿ ದೊರಕುತ್ತಿಲ್ಲ. ಪರಿಣಾಮ ಚಿಟ್ಟೆಗಳ ಸಂತತಿಯ ಮೇಲಾಗುತ್ತದೆ. ಜೊತೆಗೆ ಕೀಟನಾಶಕಗಳು, ವ್ಯವಸಾಯ ಕೂಡ ಮೊನಾರ್ಕ್ ಚಿಟ್ಟೆಯನ್ನು ವಿನಾಶಕ್ಕೆ ದೂಡುತ್ತಿವೆ.

ಮೇಲೆ ವಿವರಿಸಿರುವ ಹಿಮಕರಡಿ, ಹವಳದ ದಿಬ್ಬಗಳು ಮತ್ತು ಮೊನಾರ್ಕ್ ಚಿಟ್ಟೆ (ಕೀಟ) ಕೇವಲ ಮೂರು ಉದಾಹರಣೆಗಳಷ್ಟೇ. ಹಿಮಕರಡಿ ಉತ್ತರ ಧ್ರುವದಲ್ಲಿರುವ ಪ್ರಾಣಿ. ಹವಳಗಳು ಸಮುದ್ರ ಜೀವಿಗಳು. ಚಿಟ್ಟೆ ಭೂಮಿಯ ಮೇಲೆ ವಾಸಮಾಡುತ್ತದೆ.

ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವುದು ಹೇಗೆ?

ಧ್ರುವ ಪ್ರದೇಶಗಳಿಂದ ಹಿಡಿದು ಸಮುದ್ರಗಳು ಮತ್ತು ಭೂಮಿ ಅಂದರೆ ಎಲ್ಲಾ ರೀತಿಯ ಪರಿಸರಗಳನ್ನೂ ತನ್ನ ದುಷ್ಪರಿಣಾಮಗಳಿಂದ ಜಾಗತಿಕ ತಾಪಮಾನ ಹಾಳುಗೆಡವುತ್ತಿದೆ. ಜಾಗತಿಕ ತಾಪಮಾನ ಯಾವ ಗಿಡ, ಮರ, ಪಕ್ಷಿ ಮತ್ತು ಪ್ರಾಣಿಯನ್ನೂ ಬಿಟ್ಟಿಲ್ಲ. ಮಾನವ ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಅವನ ವಿನಾಶವು ಖಂಡಿತ. ಪಳೆಯುಳಿಕೆ ಎಣ್ಣೆಗಳ ಉಪಯೋಗ (ಪೆಟ್ರೋಲ್, ಡೀಸೆಲ್) ಕಡಿಮೆಯಾಗಬೇಕು. ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ. ಹಸಿರು ಮನೆ ಅನಿಲಗಳಾದ ಇಂಗಾಲಾಮ್ಲ, ಮೀಥೇನ್ ಮತ್ತು ಹೈಡ್ರೋಕಾರ್ಬನ್‌ಗಳು ಕಡಿಮೆಯಾಗುತ್ತವೆ. ಹಸಿರೀಕರಣಕ್ಕೆ ಒತ್ತು ಕೊಡಬೇಕು. ಕಾಡುಗಳ ನಾಶ ನಿಲ್ಲಬೇಕು. ಇವುಗಳಿಂದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು.

-ಡಾ.ಎಸ್.ಸುಧಾ, ಮೈಸೂರು

References:

Stephen Leahy Feb 1, 2018 National Geographic
IVCN reports – 2015
Skeptical Science.com
WWF- World wildlife.org
EDF (Enviromental Defense Fund) – David Wolfe May 26, 2016.

11 Responses

  1. ಬಹಳ ಉಪಯುಕ್ತ ಮಾಹಿತಿಯನ್ನು ನೀಡುವ ಲೇಖನ. ಇಲ್ಲಿನ ಎಚ್ಚರಿಕೆ ಪಾಲಿಸದಿದ್ದರೆ ಇನ್ನೇನು ಪರಿಸ್ಥಿತಿ ಎದುರಿಸಬೇಕು ತಿಳಿಯದು. ಪರಿಸರ ಕಾಳಜಿ ಎಲ್ಲರಲ್ಲೂ ಮೂಡಬೇಕು. ಧನ್ಯವಾದ ಮೇಡಂ

    • sudha says:

      ಧನ್ಯವಾದಗಳು. ಪರಿಸರ ಸಂರಕ್ಷಣೆ ಮಾನವನ ಕೈಯಲ್ಲಿದೆ

  2. ವಿಚಾರ ಪೂರ್ಣ ಲೇಖನ ಜೊತೆಗೆ… ಎಚ್ಚರಿಕೆ…ಚಿಂತನೆಗೆ ಹೆಚ್ಚುವಂತೆ ಮಾಡಿದೆ..
    ಧನ್ಯವಾದಗಳು ಮೇಡಂ.

    • sudha says:

      ನಮಸ್ಕಾರ. ಉದಾಹರಣೆಗಳು ನಮ್ಮ ಕಣ್ಣು ತೆರೆಸುತ್ತವೆ.

  3. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ

  4. sudha says:

    ನಮಸ್ಕಾರ. ಎಲ್ಲರಿಗೂ ಧನ್ಯವಾದಗಳು

  5. . ಶಂಕರಿ ಶರ್ಮ says:

    ಅಮೂಲ್ಯ ಲೇಖನವು ಜಾಗತಿಕ ತಾಪಮಾನದ ಏರಿಕೆಯಿಂದ ಆಗಬಹುದಾದ ಸರ್ವನಾಶದ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಿದೆ… ಧನ್ಯವಾದಗಳು ಮೇಡಂ.

  6. Padma Anand says:

    ಜಾಗತಿಕ ತಾಪಮಾನದಿಂದ ಉಂಟಾಗಿರುವ, ಹಾಗೂ ಉಂಟಾಗುವ ಭಯಂಕರ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಮಾಹಿತಿಪೂರ್ಣ ಲೇಖನ.

    • sudha says:

      Thanks. ಪರಿಸರ ಸಂರಕ್ಷಣೆ ನಮ್ಮೆಲ್ಲರ ಮೇಲಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: