ಪುಸ್ತಕ ಪರಿಚಯ : ‘ವಿಜಯ ವಿಕಾಸ’ ಲೇ: ವಿಜಯಾ ಸುಬ್ರಹ್ಮಣ್ಯ ಕುಂಬಳೆ

Share Button

ತಮ್ಮ ವಿಶಿಷ್ಟ ಶೈಲಿಯ ಪೌರಾಣಿಕ ಕಥೆಗಳು ಹಾಗೂ ಇತರ ಬರಹಗಳ ಮೂಲಕ ‘ಸುರಹೊನ್ನೆ’ಯ ಓದುಗರಿಗೆ ಚಿರಪರಿಚಿತವಾದ ಲೇಖಕಿ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ,ಕುಂಬಳೆ. ‘ವಿಜಯ ವಿಕಾಸ’ ಎಂಬ ಕೃತಿಯು ಇತ್ತೀಚೆಗೆ ಪ್ರಕಟವಾದ ಇವರ ಆತ್ಮಕಥೆ. ಆಪ್ತವಾದ ಮುಖಪುಟ ಹಾಗೂ ಆಕರ್ಷಕವಾದ ಶೀರ್ಷಿಕೆ ಹೊಂದಿರುವ ‘ವಿಜಯ ವಿಕಾಸ’ ಕೃತಿಯನ್ನು ಓದುವ ಸುಯೋಗ ನನ್ನದಾಯಿತು.

ವಿಜಯಾ ಸುಬ್ರಹ್ಮಣ್ಯ ಅವರು ನೆರೆಯ ಕೇರಳ ರಾಜ್ಯಕ್ಕೆ ಸೇರಿದ ಗಡಿನಾಡು ಕಾಸರಗೋಡು ಜಿಲ್ಲೆಯ ಅಪ್ಪಟ ಕನ್ನಡ ಸಾಹಿತ್ಯಾಭಿಮಾನಿ. ಇವರ ಆತ್ಮಕತೆಯನ್ನು ಓದುವಾಗ, ಕರಾವಳಿಯ ಹಳ್ಳಿಯಲ್ಲಿ, ಮೂರು -ನಾಲ್ಕು ದಶಕಗಳ ಮೊದಲು ಬಾಲ್ಯವನ್ನು ಕಳೆದವರಿಗೆ ಇದು ತಮ್ಮದೇ ಮನೆಯ ಕತೆ, ಮನೆಯ ಹಿರಿಯಕ್ಕನೇ ಈ ಕತೆಯ ಸಮರ್ಥ ನಾಯಕಿ ಎಂಬ ಭಾವ ಮೂಡುತ್ತದೆ. ವಿಜಯಾ ಸುಬ್ರಹ್ಮಣ್ಯ ಅವರ ನಿರೂಪಣೆಯಲ್ಲಿ ತನ್ನ ಬಾಲ್ಯದ ಘಟನೆಗಳು, ಅಂದಿನ ಸಾಮಾಜಿಕ ರೀತಿನೀತಿಗಳು, ಹಬ್ಬಹರಿದಿನಗಳ ಆಚರಣೆಗಳು, ಕೂಡುಕುಟುಂಬದ ನಡಾವಳಿಗಳು, ಉತ್ತಮ ಸಂಸ್ಕೃತಿ ಹಾಗೂ ಸಹಬಾಳ್ವೆ, ಅನಿರೀಕ್ಷಿತವಾಗಿ ಎದುರಾಗುವ ಕಠಿಣ ಸಂದರ್ಭಗಳು, ಅವುಗಳನ್ನು ನಿಭಾಯಿಸುವ ಛಾತಿ, ತನ್ನಿಂದ ಸಾಧ್ಯವಾದಷ್ಟು ಸಮಾಜ ಸೇವೆ, ಸಾಹಿತ್ಯ ಸೇವೆ …ಹೀಗೆ ವಿವಿಧ ಮಜಲುಗಳಲ್ಲಿ ತಮ್ಮ ಜೀವನವು ವಿಕಸನವಾದುದನ್ನು ಮನಗಾಣುತ್ತೇವೆ.

‘ವಿಜಯ ವಿಕಾಸ’ ಪುಸ್ತಕದಲ್ಲಿ, ತನ್ನ ಸ್ವಾನುಭವದ ವಿಚಾರಗಳಲ್ಲದೆ, ಬಹಳಷ್ಟು ಇತರ ಉಪಯುಕ್ತ ಮಾಹಿತಿಗಳಿವೆ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಬಾಯಿಪಾಠವಾಗಿ ಕಲಿಸಿಕೊಡುತ್ತಿದ್ದ ವಿಚಾರಗಳು, ಶ್ಲೋಕಗಳು ಇತ್ಯಾದಿ ಇವೆ. ಕೆಲವು ಮನೆ ಔಷಧಿಗಳ ಬಗ್ಗೆ ಮಾಹಿತಿ, ನಿರ್ಧಿಷ್ಟ ಪೂಜೆಗೆ ನೈವೇದ್ಯ ಪ್ರಸಾದದ ತಯಾರಿಕಾ ವಿಧಾನ…ಹೀಗೆ ಅಪರೂಪದ ಸದ್ವಿಚಾರಗಳು ತುಂಬಿವೆ.

ಜೀವನದಲ್ಲಿ ನೋವು-ನಲಿವು ಎರಡೂ ಬಂದೇ ಬರುತ್ತದೆ. ಲೇಖಕಿಯವರು ತಮ್ಮ ಜೀವನದಲ್ಲಿ ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಸ್ವೀಕರಿಸಿ, ಸದಾ ಒಳಿತನ್ನೇ ಮಾಡುತ್ತಾ, ಇತರರಿಗೆ ಒಳಿತನ್ನೇ ಬಯಸುತ್ತಾ ಇರುವ ಮನಸ್ಥಿತಿಯವರೆಂದು ಅವರ ಆತ್ಮಕಥೆ ಓದುವಾಗ ಅರ್ಥವಾಗುತ್ತದೆ. ವಿಜಯಾ ಸುಬ್ರಹ್ಮಣ್ಯ ಅವರ ಸ್ನೇಹದ ಪರಿಧಿಯಲ್ಲಿರುವ ಬಹಳಷ್ಟು ಸ್ನೇಹಿತ-ಸ್ನೇಹಿತೆಯರು, ಬರಹಗಾರರು, ಬಂಧುಗಳು ಹಾಗೂ ವಾತ್ಸಲ್ಯದ ವರ್ತುಲದಲ್ಲಿ ತಾಯಿಯ ಸ್ಥಾನದಲ್ಲಿ ಗೌರವಿಸುವ ಮಕ್ಕಳು ಬರೆದ ಅಭಿಪ್ರಾಯಗಳನ್ನು ಓದುವಾಗ ಲೇಖಕಿಯವರ ಬಗ್ಗೆ ಹೆಮ್ಮೆ ಅನಿಸುತ್ತದೆ.

ಹೀಗೆ ಧನಾತ್ಮಕ ತರಂಗಗಳನ್ನು ಹೊಮ್ಮಿಸಬಲ್ಲ ಅಪರೂಪದ ಕೃತಿಯೊಂದು ನಮ್ಮ ಮನೆಯಲ್ಲಿದ್ದರೆ ಚೆನ್ನ. ಈ ಪುಸ್ತಕದಲ್ಲಿ ಅಧ್ಯಾಯಗಳ ‘ಪರಿವಿಡಿ’ ಕೊಟ್ಟಿದ್ದರೆ ಓದಲು ಇನ್ನೂ ಸುಲಭವಾಗುತ್ತಿತ್ತು ಹಾಗೂ ಈ ಮೂಲಕ ಒಂದೆರಡು ಮುದ್ರಣ ದೋಷ ಗಮನಕ್ಕೆ ಬಂದು ಸರಿಪಡಿಸುತ್ತಿದ್ದರು ಅಂತ ನನಗೆ ಅನಿಸಿತು.

ಪುಸ್ತಕದ ವಿವರ ಹೀಗಿದೆ :
‘ವಿಜಯ ವಿಕಾಸ’ ( ಆತ್ಮಕಥೆ)
ಲೇಖಕಿ : ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಪ್ರಕಾಶಕರು : ಕಾರ್ತಿಕೇಯ ಪ್ರಕಾಶನ
ನಾರಾಯಣ ಮಂಗಲ
ಅಂಚೆ : ಕುಂಬಳೆ 671 321
ಕಾಸರಗೋಡು
ಮೊಬೈಲ್ : 8547214125, 6238537267

-ಹೇಮಮಾಲಾ.ಬಿ , ಮೈಸೂರು

11 Responses

  1. Anonymous says:

    ಧನ್ಯವಾದಗಳು ಆತ್ಮೀಯ ಹೇಮಮಾಲಾ. ನಿಮ್ಮ ಅಭಿಪ್ರಾಯ ಹಾಗೂ ವಿವರಣೆ ಸಂತೋಷ ತಂತು.

  2. ಚೆಂದದ ಪುಸ್ತಕ ಪರಿಚಯ ಮಾಡಿಕೊಟ್ಟಿರುವ ಗೆಳತಿ ಹೇಮಾ ಅವರಿಗೆ…ಧನ್ಯವಾದಗಳು

  3. ನಯನ ಬಜಕೂಡ್ಲು says:

    ಚಂದದ ಪುಸ್ತಕ ಪರಿಚಯ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ನಮ್ಮ ಗಡಿನಾಡಿನ ಬರಹಗಾರರು ತೆರೆಮರೆಯಲ್ಲೇ ಉಳಿದು ಬಿಟ್ಟಿದ್ದಾರೆ. ಇಂತಹ ಬರಹಗಳು ಅವರನ್ನು ಪರಿಚಯಿಸಲು ಸಹಕಾರಿ.

  4. Padma Anand says:

    ಲೇಖಕಿ ವಿಜಯಾ ಸುಬ್ರಹ್ಮಣ್ಯ ಅವರ ಅಪರೂಪದ ಪೌರಾಣಿಕ ಕಥೆಗಳನ್ನು ಖುಷಿಯಿಂದ ಓದುತ್ತಿದ್ದ ನಮಗೆ ಅವರ ಆತ್ಮ ಕಥನದ ಸುಂದರ ಪರಿಚಯಾತ್ಮಕ ಲೇಖನ ಮುದನೀಡಿತು. ಅಭಿನಂದನೆಗಳು.

    • Hema says:

      ಮೆಚ್ಚುಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.

  5. Anonymous says:

    ಧನ್ಯವಾದಗಳು ಸುರಹೊನ್ನೆಯ ಅಡ್ಮಿನರಿಗೆ.

  6. . ಶಂಕರಿ ಶರ್ಮ says:

    ಹಿರಿಯ ಲೇಖಕಿ ವಿಜಯಾ ಸುಬ್ರಹ್ಮಣ್ಯ ಅವರ ಆತ್ಮಕಥೆಯ ಪುಸ್ತಕ ಪರಿಚಯ ಬಹಳ ಸೊಗಸಾಗಿ ಮೂಡಿಬಂದಿದೆ. ಚುಟುಕಾದ ವಿಮರ್ಶೆಯು ಪುಸ್ತಕವನ್ನು ಒಮ್ಮೆಯಾದರೂ ಓದಬೇಕೆಂಬ ಹಂಬಲವನ್ನು ಹುಟ್ಟು ಹಾಕುತ್ತದೆ. ..ಧನ್ಯವಾದಗಳು.

  7. Anonymous says:

    ಧನ್ಯವಾದಗಳು. ಪರಿಚಯಿಸಿದವರಿಗೆ ಹಾಗೂ ಓದುಗರಿಗೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: