ಮಹಿಳಾ ಸಾಧಕಿ ನಮ್ಮ ಅಜ್ಜಿ

Share Button

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸಾಧಕಿಯರ ಬಗ್ಗೆ ಬರೀರಿ ಅಂದಾಗ ಥಟ್ಟನೆ ಮಿಂಚಿದ ಹೆಸರು  ನಮ್ಮಜ್ಜಿ ಸುಂದರಮ್ಮ. ನಾನೊಬ್ಬಳು ಮಾತ್ರ ಪ್ರೀತಿಯಿಂದ ಅಮ್ಮಮ್ಮ ಎಂದು ಕರೆಯುತ್ತಿದ್ದ ನಮ್ಮ ತಂದೆಯ ತಾಯಿ.  ನನ್ನ ಜೀವನದ ಆದರ್ಶ ಮಾದರಿಯೂ ಇವರೇ ಸ್ಫೂರ್ತಿಯೂ ಇವರೇ .ಮಾತು ಸ್ವಲ್ಪ ನೇರ ಒರಟು. ಆದರೆ ಅಂತಕರಣದಲ್ಲಿ ಮಮತೆ ತುಂಬಿಕೊಂಡಿದ್ದವರು . ಅವರ ಕಥೆ ಜೀವನದ ವ್ಯಥೆ ತಿಳಿದವರು “ಶಭಾಷ್” ಎನ್ನದೆ ಇರುವುದೇ ಇಲ್ಲ ಒಂಬತ್ತನೆಯ ವರ್ಷದಲ್ಲಿ ಮದುವೆಯಾಗಿ ಹನ್ನೆರಡನೆಯ ವಯಸ್ಸಿಗೆ ಪತಿಗೃಹ ಸೇರಿದರಂತೆ.   5 ವರ್ಷದ ಹಿರಿ ಮಗಳು 3 ವರ್ಷದ ಮಗ 3 ತಿಂಗಳ ಕೈಗೂಸು ಹತ್ತೊಂಬತ್ತರ ಹರೆಯದ ಈ ತಾಯಿಯೊಂದಿಗೆ. ಮೂರನೆಯ ಮಗುವಿನ ಬಾಣಂತನಕ್ಕಾಗಿ ತಂದೆಯ ಮನೆಯಲ್ಲಿದ್ದ ಸಮಯ ಗಂಡನಿಗೆ ಮೈಸೂರಿನಲ್ಲಿ ಕೆಲಸ. 1 ದಿನ ಇದ್ದಕ್ಕಿದ್ದಂತೆ ಬಂದ ಟೆಲಿಗ್ರಾಂ ಗಂಡನ ಮರಣದ ಸುದ್ದಿಯನ್ನು ಅರುಹಿತ್ತು. ದೊಡ್ಡವರಿಬ್ಬರನ್ನು ತವರಲ್ಲಿ ಬಿಟ್ಟು ಕೈಗೂಸು ಹೊತ್ತುಕೊಂಡು ಮೈದುನ ಹಾಗೂ ತಂದೆಯೊಡಗೂಡಿ ಮೈಸೂರಿಗೆ ಹೋಗಿ ಅಲ್ಲೆ ಅಪರ ಕ್ರಿಯೆ ಮುಗಿಸಿ ಬಂದರು. ತವರಲ್ಲಿ ಮಲ ತಮ್ಮ ತಂಗಿಯರು ಇವರ ಮಕ್ಕಳ ಓರಿಗೆಯವರೇ.

ಸ್ವಾಭಿಮಾನಿ ಈ ತಾಯಿಗೆ ತವರಿನ ಆಸರೆಯಲ್ಲೇ ಇಡೀ ಜೀವನ ಕಳೆಯಲು ಇಷ್ಟ ಇರದೆ ಆ ಕಾಲದಲ್ಲೇ ಎಲ್ಲೆಸ್ ಖಾಸಗಿಯಾಗಿ ಓದಿ ತಂದೆಯ ಸಹಾಯದಿಂದ ಪ್ರೈಮರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಹಿಡಿದು ಬೇರೆ ಮನೆ ಮಾಡಿದರು.  ಕಷ್ಟವೋ ಸುಖವೋ ಹಂಗಿನರಮನೆಯನ್ನು ತ್ಯಜಿಸಿಯಾಗಿತ್ತು .ಬಾಳಿನ ಮತ್ತೊಂದು ಘಟ್ಟ ಆರಂಭವಾಗಿತ್ತು .ಒಳಗೂ ಹೊರಗೂ ದುಡಿದು ಮಗಳನ್ನು ಎಸ್ಸೆಸ್ಸೆಲ್ಸಿ ಓದಿಸಿದರು. ಎರಡನೆಯ ಮಗ ಆಗಿನ ಇಂಟರ್ ಮುಗಿಸಿ ರೈಲ್ವೆಯಲ್ಲಿ ನೌಕರಿ ಹಿಡಿದರು. ಮೂರನೆಯ ಮಗ ಪದವೀಧರನಾಗಿ ಪ್ರತಿಷ್ಠಿತ ಸಂಸ್ಥೆಯ ಉದ್ಯೋಗಿಯಾದರು. ಮಕ್ಕಳ ಮದುವೆಗಳಾದವು ಸೊಸೆಯರು ಬಂದರು. ಎಲ್ಲರನ್ನೂ ಸಮಭಾವದಿಂದ ನೋಡಿ ಕುಟುಂಬದ ಸಾಮರಸ್ಯ ಕಾಪಾಡುತ್ತಾ ಜೀವನನೌಕೆಯನ್ನು ದಡ ಮುಟ್ಟಿಸಿದರು. ಅತ್ತೆಯ ಮನೆಯವರೊಂದಿಗೂ ಸೌಹಾರ್ದ ಉಳಿಸಿಕೊಂಡು ಪ್ರೀತಿಯ ಅತ್ತಿಗೆಯಾಗಿದ್ದರು. ಮೊಮ್ಮಕ್ಕಳಿಗಂತೂ ಅಕ್ಕರೆಯ ಅಜ್ಜಿ .7ಜನ ಮೊಮ್ಮಕ್ಕಳಿಗೂ ಸ್ಫೂರ್ತಿ ತುಂಬಿದವರು .ಇವರ ಎರಡನೆಯ ಮಗನೇ ನಮ್ಮ ಪ್ರೀತಿಯ ತಂದೆ ನರಹರಿ ರಾವ್. ಸರ್ಕಾರದ ನಿರ್ಧಾರದಿಂದಾಗಿ ಐವತ್ತೈದು ವರ್ಷಕ್ಕೆ ನಿವೃತ್ತಿಯಾದರೂ ಮೊಮ್ಮಕ್ಕಳ ಲಾಲನೆ ಪಾಲನೆಗೆ ಆ ಸಮಯವನ್ನು ವ್ಯಯಿಸಿದರು.  ಇನ್ನೂ ಹೆಚ್ಚಿನ ಮನಮೆಚ್ಚಿದ ಹವ್ಯಾಸಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡರು .

ಬರಿಯ ಉದ್ಯೋಗ ಮನೆ  ಅಷ್ಟೇ ಅಲ್ಲದೆ ವಿವಿಧ ರೀತಿಯ ಕರಕುಶಲ ಕಲೆಗಳ ಪ್ರವೀಣೆ ಇವರು.  ತಾಯಿ ಮಗಳು ಆಗ ಪ್ರಧಾನಿಯವರು ಕೊಟ್ಟ ಕರೆಯ ಮೇರೆಗೆ ಸೈನಿಕರಿಗೆ ಉಲ್ಲನ್ ಸ್ವೆಟರ್ ಹೆಣೆದು ಕೊಡುತ್ತಿದ್ದರಂತೆ . ಉಲ್ಲನ್ ನಲ್ಲಿ ವಿವಿಧ ಮಾದರಿಯ ಹೆಣಿಗೆ ಕಲಿಯುವುದಷ್ಟೇ ಅಲ್ಲದೇ ತಾವೇ ಹೊಸದನ್ನು ಆವಿಷ್ಕರಿಸಿದ ಹೆಗ್ಗಳಿಕೆ ಇವರದು  ಕುಟುಂಬದ ಪ್ರತಿಯೊಬ್ಬರ ಬಳಿಯೂ ಅವರು ಹಾಕಿದ ಸ್ವೆಟರ್ ಶಾಲು ಏನಾದರೂ 1ಇದ್ದೇ ಇದೆ ಇಲ್ಲಿಯವರೆಗೂ ಅವುಗಳನ್ನು ನಾವು ಕಾಪಾಡಿಕೊಂಡು ಬಂದಿದ್ದೇವೆ .ಹತ್ತಿಯ ಹಾರಗಳು ರಂಗೋಲಿಗಳು ವೈರ್ ನ ಬುಟ್ಟಿಗಳು ಹೇಳುತ್ತಾ ಹೋದರೆ ಮುಗಿಯದ ಪಟ್ಟಿ. ಜ್ಯಾಮ್ ಉಪ್ಪಿನಕಾಯಿ ಹಪ್ಪಳ ಸಂಡಿಗೆಗಳ ತಯಾರಿಕೆಯಲ್ಲೂ ಅಗ್ರಸ್ಥಾನ. ರಂಗವಲ್ಲಿ ಎಂದರೆ ಪಂಚಪ್ರಾಣ ರಂಗವಲ್ಲಿಗಳ ಮೇಲಿನ ನನ್ನ ಮೋಹ ಅವರಿಂದ ಬಂದ ಬಳುವಳಿ . ಪ್ರತಿ ದಸರೆ ಹಾಗೂ ಬೇಸಿಗೆಯಲ್ಲಿ ಮೈಸೂರಿಗೆ ನಮ್ಮ ಮನೆಗೆ ಭೇಟಿ ಕೊಡುವ ಪರಿಪಾಠ ಅವರದು. ಹಾಗೆ ಬಂದಾಗ ಹೊಸ ಹೊಸ ದೇವರನಾಮಗಳನ್ನು ಕಲಿಸುತ್ತಿದ್ದರಲ್ಲದೆ ಯಾವುದಾದರೂ 1 ಬಗೆಯ ಕರಕುಶಲ ಕಲೆ ಕಲಿಸಿ ಕೊಟ್ಟೇ ಹೋಗುತ್ತಿದ್ದುದು. ಅವರು ಹಾಕುತ್ತಿದ್ದ ಕಸೂತಿಯ ಎಷ್ಟೋ ಕೃತಿಗಳು ನಮ್ಮ ಬಳಿ ಈಗಲೂ ಇದೆ .ನಾವು ಸ್ವಲ್ಪ ದೊಡ್ಡವರಾದ ನಂತರ ಹೊಸದೇನಾದರೂ ಕಲಿತರೆ ಅವುಗಳನ್ನು ನಮ್ಮಿಂದ ಕಲಿಯಬೇಕೆಂಬ ಉತ್ಸಾಹ ಸಮಯಪಾಲನೆ ಸಮಯದ ಸಮುಚಿತ ನಿರ್ವಹಣೆ ಬಗ್ಗೆ ನಾವು ಅರಿತಿದ್ದೇ ಅವರಿಂದ . ಯಾವುದಕ್ಕೂ “ಸಮಯವಿಲ್ಲ” ಎಂಬ ಮಾತೇ ಅವರ ಬಳಿ ಇರಲಿಲ್ಲ.

ಇಂತಹ ನಮ್ಮಜ್ಜಿ ಎಂಬತ್ತೈದು ವರ್ಷದ ತುಂಬು ಬಾಳುವೆ ನಡೆಸಿ ನಮಗೆಲ್ಲಾ ಜ್ವಲಂತ ಮಾದರಿಯಾದ ಸಾಧಕಿ ನಮ್ಮ ಅತ್ತೆ ಅಪ್ಪ ಚಿಕ್ಕಪ್ಪನವರಿಂದ ಬಳಗದ ಎಲ್ಲರಿಂದಲೂ ಗೌರವ ಸಂಪಾದಿಸಿ ಬಾಳಿದರೆ ಹೀಗೆ ಬಾಳಬೇಕು ಅವರನ್ನು ನೋಡಿ ಕಲಿಯಿರಿ ಎಂದೆನಿಸಿಕೊಂಡವರು.  ನಮ್ಮ ಪ್ರೀತಿಯ ಅಮ್ಮಮ್ಮ. ಅಡುಗೆಯಲ್ಲಿಯಂತೂ ಸಾಕ್ಷಾತ್ ಅನ್ನಪೂರ್ಣೆ. ಪಗಡೆಯಾಟ ಎಂದರೆ ಬಹುಪ್ರೀತಿ .ಆಗ ಬರುತ್ತಿದ್ದ ಟಿವಿಯಲ್ಲಿನ ಧಾರಾವಾಹಿಗಳನ್ನು ನೋಡಿ ಅದರ ಬಗ್ಗೆ ವಿಮರ್ಶೆ ಮಾಡುವಷ್ಟು ಜೀವನಾಸಕ್ತಿ ತುಂಬಿತ್ತು . ಜೀವನೋತ್ಸಾಹ, ಸಣ್ಣದರಲ್ಲೂ ಖುಷಿಪಡುವ ಸ್ವಭಾವವನ್ನು ನಮಗೆ ಕಲಿಸಿದ ಮಹಾನ್ ಶಿಕ್ಷಕಿ ಅವರು . ಇನ್ನು ನಿಯತಕಾಲಿಕೆಗಳಲ್ಲಿನ ಧಾರಾವಾಹಿಗಳು ಮತ್ತು ಕಾದಂಬರಿಗಳ ಪಾತ್ರಗಳ ಬಗ್ಗೆ ನಮ್ಮೊಂದಿಗೆ ಚರ್ಚೆ ಸಂವಾದ ನಡೆಯುತ್ತಲೇ ಇರುತ್ತಿತ್ತು. ಇಂದು ನಾನು ಬರೆಯುವುದನ್ನು ಅವರು ನೋಡಿದ್ದರೆ ನಿಜಕ್ಕೂ ತುಂಬಾ ಸಂತೋಷ ಪಡುತ್ತಿದ್ದರು.  

ಕಡೆಯಲ್ಲಿ, ನೀವು ಹೇಳುತ್ತಿದ್ದ 1 ಮಾತು ಸದಾ ನೆನಪಿನಲ್ಲಿದೆ . “ಏನೇ ಕೆಲಸ ಮಾಡಿದರೂ ಗೃಹಿಣಿಯ ಕರ್ತವ್ಯಕ್ಕೆ ಕುಂದು ಬರಬಾರದು ಅದು ಮೊದಲು . ವಿಶ್ರಾಂತಿಯೆಂದರೆ ಬರೀ ಮಲಗಿ ಕೂತು ಕಾಲ ಕಳೆಯುವುದಲ್ಲ 1ಕೆಲಸದಿಂದ ಮತ್ತೊಂದು ಕೆಲಸ ಅಥವಾ ಹವ್ಯಾಸದೆಡೆಗೆ ಗಮನ ಹರಿಸುವುದೂ ಸಹ ವಿಶ್ರಾಂತಿಯೇ . ಯಾವಾಗಲೂ ಕಾಲದ ಸದುಪಯೋಗಪಡಿಸಿಕೊಳ್ಳಬೇಕು ವ್ಯರ್ಥ ಕಾಲಹರಣ ಮಾಡಬಾರದು.” ಇದನ್ನು ಅನುಸರಿಸಲು ನಾನೂ ಮತ್ತು ಉಳಿದ ಮೊಮ್ಮಕ್ಕಳು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದು ಪ್ರಯತ್ನಿಸಿದ್ದೇವೆ ಪ್ರಯತ್ನಿಸುತ್ತಿದ್ದೇವೆ

 “ಈ ಬರಹದ ಮೂಲಕ  ಅಮ್ಮಮ್ಮ ನಿಮಗೊಂದು ಗ್ರೇಟ್ ಸಲ್ಯೂಟ್”. 

-ಸುಜಾತಾ ರವೀಶ್

6 Responses

  1. ನಯನ ಬಜಕೂಡ್ಲು says:

    ಬ್ಯೂಟಿಫುಲ್

  2. ಅಜ್ಜಿಯ ಕುರಿತ ಲೇಖನ ಮನಮುಟ್ಟುವಂತಿದೆ
    ವಂದನೆಗಳು

  3. ನಾಗರತ್ನ ಬಿ. ಅರ್. says:

    ಸತ್ಯವಾಗಿಯೂ ಇಂಥಹ ವ್ಯಕ್ತಿ ಗಳ ಬದುಕು ಈಗಿನ ತಲೆಮಾರಿಗೆ ಬೇಕು.. ತಾವಂದುಕೊಂಡಂತೆ ಆಗದಿದ್ದರೆ ತಮ್ಮ ಜೊತೆಗೆ ಕರುಳ ಕುಡಿಗಳನ್ನು ಯಮಲೋಕಕ್ಕೆ ಹೊತ್ತೊಯ್ಯುವ ಮಾತೆಯರು ಬಹಳವಾಗಿದ್ದಾರೆ..ಸ್ವಲ್ಪ ..ನಿಂತು ಯೋಚಿಸಿದರೆ.. ಒಳಿಲ್ಲವೇ.ಬಹಳ ಆಪ್ತವಾದ ಲೇಖನ..
    ಧನ್ಯವಾದಗಳು ಮೇಡಂ

  4. . ಶಂಕರಿ ಶರ್ಮ says:

    ನಿಮ್ಮ ಪ್ರೀತಿಯ ಅಜ್ಜಿಯ ಬಗ್ಗೆ ಬರೆದ ಲೇಖನ ಸೂಪರ್.

  5. Padmini Hegade says:

    ನಿಮ್ಮ ಪ್ರೀತಿಯ ಅಜ್ಜಿ ಸೂಪರ್!

  6. Samatha.R says:

    ಆಪ್ತ ಬರಹ

Leave a Reply to ಗಾಯತ್ರಿ ಸಜ್ಜನ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: