ಅವಿಸ್ಮರಣೀಯ ಅಮೆರಿಕ-ಎಳೆ 5

Share Button

ಎರಡನೇ ದಿನದ ಎಡವಟ್ಟು..!

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಫ್ರಾನ್ಸಿಸ್ಕೋಕ್ಕೆ ನಾನೊಬ್ಬಳೇ ಸಪ್ತ ಸಾಗರಗಳನ್ನು ದಾಟಿ ಬಂದಿಳಿದಿದ್ದೆ. ಬಂದವಳನ್ನು ಮಕ್ಕಳು ಸ್ವಾಗತಿಸುವ ಬದಲು ನಾನೇ ಅವರನ್ನು ಸ್ವಾಗತಿಸುವಂತಾದುದು ತಮಾಷೆ ಎನಿಸುತ್ತಿದೆ ಈಗ.

ಅಮೆರಿಕದ ಮೂರನೇ ಅತಿ ದೊಡ್ಡ ರಾಜ್ಯವಾದ ಕ್ಯಾಲಿಫೋರ್ನಿಯಾವು, ಸುಮಾರು 900 ಮೈಲುಗಳಷ್ಟು ಉದ್ದದ ಪೆಸಿಫಿಕ್ ಮಹಾಸಾಗರದ ಪಶ್ಚಿಮ ಕರಾವಳಿಯ ಜೊತೆಗೆ, ಲಾಸ್ ಏಂಜಲ್ಸ್ ನಂತಹ ಹಲವಾರು ಜಗತ್ಪ್ರಸಿದ್ಧ ಸ್ಥಳಗಳನ್ನು ಹೊಂದಿದೆ. ಇದರ ವಿಸ್ತೀರ್ಣವು ಸುಮಾರು 4,24,000 ಚ. ಕಿ.ಮೀ. ಆಗಿದ್ದು, ಅಮೆರಿಕದ ಅತ್ಯಂತ ಹೆಚ್ಚು ಜನದಟ್ಟಣೆ ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಾನು ಬಂದಿಳಿದ ಸ್ಯಾನ್ ಫ್ರಾನ್ಸಿಸ್ಕೋ (SFO) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, SFO ನಗರದಿಂದ 21ಕಿ.ಮೀ ದೂರದ ಹೊರವಲಯದಲ್ಲಿದೆ. ಯುರೋಪ್ ಮತ್ತು ಏಶಿಯಾ ಖಂಡಗಳ ಹೆಬ್ಬಾಗಿಲು ಎನಿಸಿಕೊಂಡ ಇದು 1927ರಲ್ಲಿ ಪ್ರಾರಂಭವಾಯಿತು. ಇಲ್ಲಿಂದ ಉತ್ತರ ಅಮೆರಿಕದ ಎಲ್ಲಾ ಸ್ಥಳಗಳಿಗೆ ವಿಮಾನ ಸಂಪರ್ಕ ಇರುವುದಲ್ಲದೆ ರಾಜ್ಯದ ಎರಡನೇ ಅತಿ ದೊಡ್ಡ ಜನನಿಬಿಡ ನಿಲ್ದಾಣ ಎನಿಸಿಕೊಂಡಿದೆ. ಸುಮಾರು 29,000 ಎಕರೆ ವಿಸ್ತೀರ್ಣದಷ್ಟು ಪ್ರದೇಶದಲ್ಲಿ ಹರಡಿಕೊಂಡಿರುವ  ಈ ನಿಲ್ದಾಣದಲ್ಲಿ ನಾಲ್ಕು ಟರ್ಮಿನಲ್ ಗಳು, 115 ಗೇಟ್ ಗಳು ಹಾಗೂ 5,200 ಜಾಗಗಳಲ್ಲಿ ರನ್ ವೇಗಳಿವೆ.

ದಿನವೊಂದಕ್ಕೆ ಸುಮಾರು 1,64,27,800 ಜನ ಪ್ರಯಾಣಿಕರು ಬಂದು ಹೋಗುವ ಅಗಾಧ ನಿಲ್ದಾಣವಿದು.

ಮನೆ ತಲಪುವಾಗಲೇ ಮಧ್ಯಾಹ್ನವಾಗಿತ್ತು.. ಅಂದರೆ ನಮ್ಮಲ್ಲಿಯ ಮಧ್ಯರಾತ್ರಿ. ಮಗಳು ಪ್ರೀತಿಯಿಂದ ಬಡಿಸಿದ ಮಜ್ಜಿಗೆಹುಳಿ, ಅನ್ನ, ಪಲ್ಯಗಳನ್ನೆಲ್ಲಾ ಮುಗಿಸಿದಾಗ ಕಣ್ಣೆಳೆತ ಸುರು. ಸೊಂಪಾದ ಹಾಸಿಗೆ ಕೊಟ್ಟು ಮಲಗಲು ಹೇಳಿದ್ದೊಂದೇ ಗೊತ್ತು. ಕಣ್ತೆರೆದಾಗ ರಾತ್ರಿ ಏಳು ಗಂಟೆ! ಫೆಬ್ರವರಿ ತಿಂಗಳಾದ್ದರಿಂದ ಚಳಿ ಜೋರಾಗಿಯೇ ಇತ್ತು. ದಪ್ಪ ಸ್ವೆಟರ್ ಧರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಕೈ, ಕಾಲು, ಮೈಯಿಡೀ ಮುದುಡಿಕೊಂಡು ಥರ ಥರ ಎನ್ನಲು ಸುರುವಾದಾಗ ನನಗೇ ಮುಜುಗರ. ಮನೆಯಿಡೀ ವಾತಾನುಕೂಲವಿದ್ದುದರಿಂದ ಬೇಕಾದಾಗ ಬಿಸಿ ಗಾಳಿ, ತಣ್ಣನೆಯ ಗಾಳಿ ಬರುವಂತಿತ್ತು. ಆದರೂ ನನ್ನ ಚರ್ಮ ಅದಕ್ಕೆ ಹೊಂದಿಕೊಳ್ಳಲು ತಯಾರಾಗಲೇ ಇಲ್ಲ. ಅದರೊಂದಿಗೆ ಜೆಟ್ ಲ್ಯಾಗ್ ಎನ್ನುವ ಮಾಯಾಂಗನೆ ಸರಿಯಾಗಿ ಮಧ್ಯಾಹ್ನ ಹೊತ್ತಿಗೆ ನಿದ್ರಾರೂಪದಲ್ಲಿ ಹಾಜರಾಗುತ್ತಿದ್ದಳು.. ಮಧ್ಯರಾತ್ರಿಯಲ್ಲಿ ನಾಪತ್ತೆ..!  ನಮ್ಮ ಭೂಗೋಳವನ್ನು ಗಮನಿಸಿದರೆ; ಇಲ್ಲಿ ನಮ್ಮ ನೆಲದಲ್ಲಿ ತೂತು ಕೊರೆದರೆ ಅದರ ತುದಿ ಅಮೆರಿಕದಲ್ಲಿ ಹೊರಬರಬಹುದೇನೋ! ಸರಿಯಾಗಿ ಅರ್ಧಗೋಳ ವ್ಯತ್ಯಾಸವಿರುವುದರಿಂದ ಸುಮಾರು11:30 ಗಂಟೆಗಳಷ್ಟು ನಾವು ಅಲ್ಲಿಗಿಂತ ಮುಂದಿದ್ದೇವೆ..ಒಂದು ಕಡೆ ಹಗಲಾದರೆ ಅದೇ ಸಮಯದಲ್ಲಿ ಇನ್ನೊಂದು ಕಡೆ ರಾತ್ರಿ. ನಮ್ಮ ಮನಸ್ಸಿಗೆ, ದೇಹಕ್ಕೆ ಈ ಸಮಯದ ಹೊಂದಾಣಿಕೆಯಾಗಲು ಒಂದು ವಾರವೇ ಬೇಕಾಗುವುದು..ಇದೇ ಜೆಟ್ ಲ್ಯಾಗ್!

ಅಮೆರಿಕ ತಲಪಿದ ಮರುದಿನ…ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ ಎಲ್ಲಿದ್ದೇನೆ ಎನ್ನುವುದು ಕೂಡಾ ತಿಳಿಯದಂತಾಗಿತ್ತು. ಚಳಿಗೆ ಕೈಕಾಲು ಜೋಮು ಹಿಡಿದ ಪರಿಸ್ಥಿತಿಯಲ್ಲಿ ನಡೆದಾಡಲೂ ಕಷ್ಟ. ಅಡಿಗೆ ಕೋಣೆಯಲ್ಲಿ ಯಾವುದೇ ಕೆಲಸ ಮಾಡಲೂ ಏನೂ ತಿಳಿಯದು. ಅಲ್ಲಿ ನಮ್ಮಲ್ಲಿಯಂತೆ ಸ್ಟೀಲ್ ಪಾತ್ರೆಗಳ ಬದಲು ಕೆ.ಜಿ.ಗಟ್ಟಲೆ ಭಾರದ ಗಾಜಿನ, ಪಿಂಗಾಣಿ ಪಾತ್ರೆಗಳಿದ್ದುವು. ಅವುಗಳನ್ನು ಎತ್ತಲೂ ಆಗದಂತೆ, ಕೈಬೆರಳುಗಳು ಚಳಿಗೆ ಅಲುಗಾಡದಂತೆ ಆಗಿಬಿಟ್ಟಿದ್ದವು. ಸಣ್ಣಂದಿನಲ್ಲಿ ಇಡೀ ರಾತ್ರಿ ಯಕ್ಷಗಾನ ಬಯಲಾಟ ನೋಡಿ, ಬೆಳಿಗ್ಗೆ ಮನೆಗೆ ಬಂದು ಮಲಗಿ  ಮಧ್ಯಾಹ್ನ ಎದ್ದಾಗ ತಲೆಯೇ ಓಡುತ್ತಿರಲಿಲ್ಲ..ಹಾಗಿತ್ತು ನನ್ನ ಮಿದುಳಿನ ಸ್ಥಿತಿ.    

ಬೆಳಗ್ಗಿನ ತಿಂಡಿ ಮುಗಿಸಿದಾಗಲೇ ಅಳಿಯನ ಆಹ್ವಾನ..ಹೊರಗಡೆ ಹೋಗಲು. ನಾವು ಒಂದಿಂಚೂ ಕದಲಲಾರೆವೆಂದು ಮೈ ಮತ್ತು ಮನಸ್ಸು ಮುಷ್ಕರ ಹೂಡಿದ್ದವು. ಆದರೆ ಮೊದಲ ದಿನವೇ ಅವನಿಗೆ ಯಾಕೆ ಬೇಸರಪಡಿಸುವುದೆಂದುಕೊಂಡು ಮುಖದಲ್ಲಿ ಕಷ್ಟಪಟ್ಟು ನಗುವನ್ನು ತಂದುಕೊಂಡು ಹೊರಟಾಯ್ತು. ನಿದ್ದೆಯ ಮತ್ತಿನಿಂದ ಭಾರವಾದ ಕಣ್ಣುಗಳನ್ನು ಪ್ರಯಾಸದಿಂದ ತೆರೆದು ಕುಳಿತೆ. ಕಾರು ಕಂಡು ಕೇಳರಿಯದಷ್ಟು ದೊಡ್ಡದಾದ IKEA ಎಂಬ ವಾಣಿಜ್ಯ ಸಂಕೀರ್ಣದ ಮುಂದೆ ನಿಂತಿತು.

ಅಮೆರಿಕದಲ್ಲಿ, ಸಣ್ಣದಿರಲಿ, ದೊಡ್ಡದಿರಲಿ, ಪ್ರತಿಯೊಂದು ಅಂಗಡಿಯ ಮುಂದೆ ಸಾಕಷ್ಟು ವಾಹನ ಪಾರ್ಕಿಂಗ್ ವ್ಯವಸ್ಠೆ ಇದ್ದೇ ಇರುತ್ತದೆ. ಕಸ, ಧೂಳು ಎಲ್ಲಿದೆ ಎಂದು ಭೂತ ಕನ್ನಡಿ ಹಿಡಿದು ನೋಡಿದರೂ ಕಾಣಿಸುವುದೇ ಇಲ್ಲ! ಎಲ್ಲಿ ನೋಡಿದರಲ್ಲಿ ಸ್ವಚ್ಛ..ಸುಂದರ. ಎಕರೆಗಟ್ಟಲೆ ಜಾಗದಲ್ಲಿರುವುದು ಒಂದೇ ಒಂದು ಬೃಹತ್ ವಾಣಿಜ್ಯ ಸಂಕೀರ್ಣ. ಎದುರುಗಡೆಗೆ ಸುಂದರ ಹೂದೋಟ… ನಾನು ನೋಡಿಯೇ ದಂಗಾಗಿಬಿಟ್ಟೆ! ಮಗಳ ಹಿಂದೆಯೇ ಹೋಗದಿದ್ದರೆ ನಾನು ಕಳೆದು ಹೋಗುವುದು ಗ್ಯಾರಂಟಿಯಿತ್ತು. ಆದರೆ  ಆಶ್ಚರ್ಯವೆಂಬಂತೆ, ಅಷ್ಟು ದೊಡ್ಡ ಮಳಿಗೆಯಲ್ಲಿ ಜನ ಸಂದಣಿ ಇಲ್ಲದೆ ಬಿಕೋ ಎನ್ನುತ್ತಿತ್ತು. ಅಮೆರಿಕದ ಜನಸಂಖ್ಯೆ ಕಡಿಮೆ ಹಾಗೂ ದೇಶದ ವಿಸ್ತೀರ್ಣ ಬಹಳ ಹೆಚ್ಚಿರುವುದರಿಂದ ಜನಸಾಂದ್ರತೆ ಸ್ವಾಭಾವಿಕವಾಗಿ ಬಹಳ ಕಡಿಮೆ. ಸದಾ ಜನದಟ್ಟಣೆಯ ಮಧ್ಯೆ ಓಡಾಡಿಕೊಂಡಿರುವ ನಮಗೆ ಅಲ್ಲಿ ಜನಗಳನ್ನೇ ಕಾಣದಿರುವುದು ಬಹಳ ಸೋಜಿಗವೆನಿಸುತ್ತದೆ. ಜನರಿಗಿಂತ ಹೆಚ್ಚು, ರಸ್ತೆಗಳಲ್ಲಿ ನೂರಾರು ಕಾರುಗಳು ಓಡಾಡುವುದನ್ನು ಕಾಣಬಹುದು. ಇಲ್ಲಿಯ ಅಂಗಡಿಗಳು ಸಕಲ ಸವಲತ್ತುಗಳನ್ನೂ ಒಳಗೊಂಡಿರುತ್ತದೆ. ಅಲ್ಲಲ್ಲಿ ಶುದ್ಧ ನೀರಿನ ವ್ಯವಸ್ಥೆ, ಚಂದದ ದೊಡ್ಡದಾದ ಕಸದ ಬುಟ್ಟಿಗಳು, ಸ್ವಚ್ಛ ಶೌಚಾಲಯಗಳು. ಅಲ್ಲಿ ವ್ಯಾಪಾರಕ್ಕಿಟ್ಟರುವ ವಸ್ತುಗಳು ಎಲ್ಲವೂ ಅತ್ಯಂತ ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿರುತ್ತವೆ. ಎಲ್ಲವನ್ನೂ ನಾವು ಕೈಯಲ್ಲಿ ತೆಗೆದು ನೋಡಿ, ಪರೀಕ್ಷಿಸಿ ಖರೀದಿಸಬಹುದು. ಸುಸಜ್ಜಿತ, ವಿಶಾಲವಾದ ತೆರೆದ ಕಪಾಟುಗಳಲ್ಲಿ ಜೋಡಿಸಿಟ್ಟ ವಸ್ತುಗಳು ಸಕಲ ವಿವರನ್ನೊಳಗೊಂಡ ಚೀಟಿಯನ್ನು ಲಗತ್ತಿಸಿ, ಲಕಲಕ ಹೊಳೆಯುತ್ತಾ, ನಗುನಗುತ್ತಾ ನಮ್ಮನ್ನು ಸ್ವಾಗತಿಸುತ್ತವೆ!

ಇಲ್ಲಿ ಶೌಚಾಲಯಕ್ಕೆ Rest Room ಎನ್ನುವುದೆಂದು ತಿಳಿಯದೆ ನಾನು ಬೇಸ್ತು ಬಿದ್ದಾಗಿನ ಘಟನೆ ನೆನಪಾಗಿ ಈಗಲೂ ನಗು ಉಕ್ಕುತ್ತದೆ. ಫ್ರೆಶ್ ಆಗಲು, ವಿಮಾನ ನಿಲ್ದಾಣದಲ್ಲಿ ವಿಚಾರಿಸಿದಾಗ ಅವರಿಗೆ ಅರ್ಥವೇ ಆಗಲಿಲ್ಲ. ಕೊನೆಗೆ, “Do you mean rest room?” ಎಂದು Rest Room ಎಂದು ಬೋರ್ಡ್ ಲಗತ್ತಿಸಿದ ಕಡೆ ಕೈತೋರಿಸಿದರು. ನನಗೋ, ನಾನ್ಯಾಕೆ ವಿಶ್ರಾಂತಿ ಪಡೆಯಬೇಕೆಂದು ಅರ್ಥವೇ ಆಗಲಿಲ್ಲ! ಆದರೂ ಬೇರೆ ಮಾರ್ಗವಿಲ್ಲದೆ ಒಳಹೊಕ್ಕಾಗ ಅರ್ಥವಾಯ್ತು.. ಯಾಕಿದೆ ಆ ಹೆಸರೆಂದು! ಅತ್ಯಂತ ಸ್ವಚ್ಛ, ಅಚ್ಚುಕಟ್ಟು..ಹಾಯಾಗಿ ಮಲಗೇ ಬಿಡೋಣ ಎನ್ನುವಷ್ಟು.. ಗಲೀಜೆನ್ನುವ ಮಾತೇ ಇಲ್ಲ!

ಮಕ್ಕಳಿಗೋ, ನನಗೆ ಎಲ್ಲವನ್ನೂ ತೋರಿಸುವ ಉತ್ಸಾಹ. ಆಗಲೇ ಮಧ್ಯಾಹ್ನ ಗಂಟೆ ಹನ್ನೊಂದು..ಕಣ್ಣುಗಳು ಫೆವಿಕೋಲ್ ಹಾಕಿದಂತೆ ಅಂಟಲಾರಂಭಿಸಿದ್ದವು. ಆದರೂ ಮಗಳು ಕರೆದು ತೋರಿಸಿ ವಿವರಿಸುತ್ತಿದ್ದುದನ್ನು ಗಮನವಿಟ್ಟು ಆಲಿಸಲು ಪ್ರಯತ್ನಿಸುತ್ತಿದ್ದೆ. ವಿವಿಧ ರೀತಿಯ ಗಾಜಿನ ಉಪಕರಣಗಳು, ತರಹೇವಾರಿ ಅಡುಗೆ ಉಪಕರಣಗಳು…ನೋಡಿದಷ್ಟು ಮುಗಿಯದಂತಿತ್ತು. ಅಷ್ಟರೊಳಗೆ, ಅಳಿಯ ಅವನ ಹೊಸ ಕ್ಯಾಮರವನ್ನು ಜೋಪಾನವಾಗಿ ಇರಿಸಿಕೊಳ್ಳಲು  ನನ್ನ ಕೈಯಲ್ಲಿಟ್ಟ. ಮುಂದಕ್ಕೆ  ಅಡಿಗೆ ಕೋಣೆಯ ವಸ್ತುಗಳ ಮಾರಾಟದ ಸ್ಥಳದಲ್ಲಿ, ಸುಸಜ್ಜಿತವಾದ ಪೂರ್ತಿ ಅಡಿಗೆ ಕೋಣೆಯೇ ಕಣ್ಣ ಮುಂದಿತ್ತು! ಅದರ ಪಕ್ಕದಲ್ಲಿತ್ತು ಸೋಫ, ಹಾಸಿಗೆ ಮಾರಾಟದ ಜಾಗ. ಮೆತ್ತನೆಯ ದೊಡ್ಡ ಸೋಫ ಸೆಟ್ಟುಗಳು, ಬಿಡಿಸಿಟ್ಟಿದ್ದ ದೊಡ್ಡದಾದ ದಪ್ಪ ದಪ್ಪ ಹಾಸಿಗೆಗಳು! ನಾವು ಬೇಕಾದಂತೆ ಅದರಲ್ಲಿ ಕುಳಿತು, ಮಲಗಿ ನೋಡಬಹುದಿತ್ತು. ನನಗೋ ಆಗಲೇ ಸುಸ್ತಾಗಿದ್ದರಿಂದ ಅಲ್ಲಿದ್ದ ಹಾಸಿಗೆ ಮೇಲೆ ಕುಳಿತು, ಮಗಳಲ್ಲಿ ನಾನು ಅಲ್ಲೇ ಕುಳಿತಿರುವೆನೆಂದೂ, ಅವಳು ಬೇಕಾದ ಕಡೆ ಹೋಗಿ ಬರಬಹುದೆಂದೂ ಹೇಳಿದೆ.


ಸರಿ..ಸ್ವಲ್ಪ ಹೊತ್ತಲ್ಲೇ ಅಳಿಯ ಕರೆಯುವಾಗಲೇ ತಿಳಿದುದು..ನನಗಾಗಲೇ ಅಲ್ಲೇ ಜೊಂಪು ಹತ್ತಿ ಬಿಟ್ಟಿತ್ತು! ಅವನು ಕೊಟ್ಟಿದ್ದ ಕ್ಯಾಮರವನ್ನು ಹಿಂತಿರುಗಿಸಲು ಹೇಳಿದಾಗ ಕೈ ನೋಡ್ತೇನೆ..ಖಾಲಿ! ಕೈಯಲ್ಲಿದ್ದ ಕರ್ಚೀಫ್ ಕೂಡಾ ಕಾಣಲಿಲ್ಲ. ಗಾಬರಿಯಲ್ಲಿ ಏನು ಹೇಳಬೇಕೆಂದೇ ತಿಳಿಯಲಿಲ್ಲ. ನಾವು ತಿರುಗಾಡಿದ ಸ್ಥಳಗಳಲ್ಲಿ ಹುಡುಕಾಡಿದರೂ ಏನೂ ಪ್ರಯೋಜನವಾಗಲಿಲ್ಲ. ನನ್ನ ಪೆಚ್ಚುಮುಖ ನೋಡಿದ ಅಳಿಯ, ಅಲ್ಲಿಯ ಕೌಂಟರಿನಲ್ಲಿ ವಿಚಾರಿಸಿ  ನೋಡೋಣವೆಂದು ಹೋದಾಗ ನನಗಂತೂ ಲೋಕದಲ್ಲಿರುವ ಎಲ್ಲಾ ದೇವರುಗಳೂ ನೆನಪಾದರು! ಅಲ್ಲಿ ವಸ್ತುಗಳನ್ನು ಯಾರೂ ಕದಿಯುವುದಿಲ್ಲವಾದ್ದರಿಂದ ಅದು ಸಿಗಲೂಬಹುದೆಂದು ಮಗಳು ಧೈರ್ಯ ತುಂಬಿದರೂ, ನಮ್ಮೂರಲ್ಲಿ ಹೀಗಾದರೆ ಹೇಗಾಗಬಹುದೆಂದು ತಿಳಿದುದರಿಂದ ಆತಂಕ ಕಡಿಮೆಯಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅಳಿಯ, ಕ್ಯಾಮರದ ಜೊತೆಗೆ ನನ್ನ ಹೊಸ ಕರ್ಚೀಫನ್ನು ಕೂಡಾ ಸೇರಿಸಿ, ಸ್ಟಿಕ್ಕರ್ ತಗಲಿಸಿ ನಾಜೂಕಾಗಿ ಕಟ್ಟಿದ್ದ ಪೊಟ್ಟಣವನ್ನು ನನ್ನ ಕೈಯಲ್ಲಿಟ್ಟಾಗ ಸಂತಸಕ್ಕೆ ಎಣೆ ಇಲ್ಲದಂತಾಯ್ತು.. ನಂಬಲಸಾಧ್ಯವಾಯ್ತು!

ಅವನಲ್ಲಿ ವಿಚಾರಿಸಲಾಗಿ ತಿಳಿದುದೇನೆಂದರೆ, ಯಾವುದೋ ವಸ್ತುವನ್ನು ನೋಡುತ್ತಿದ್ದಾಗ ನಾನು ಕೈಯಲ್ಲಿದ್ದುದನ್ನು ಅಲ್ಲೇ ಇರಿಸಿದುದು ಸಿಸಿ ಕ್ಯಾಮರದಲ್ಲಿ ಕಂಡ ಅಲ್ಲಿಯ ಸಿಬ್ಬಂದಿ ಅದನ್ನು ಕೌಂಟರಿಗೆ ಒಪ್ಪಿಸಿದ್ದಳು. ಅಲ್ಲಿಯ ಜನರ ಪ್ರಾಮಾಣಿಕತೆಯ ಪರಿಚಯ ಮೊದಲ ದಿನವೇ ಆದುದು ನಿಜಕ್ಕೂ ಖುಷಿ ತಂದಿತ್ತು…ನಮ್ಮಲ್ಲಿಯೂ ಅಪರೂಪಕ್ಕೆ ಇಂತಹ ಪ್ರಾಮಾಣಿಕರು ಇರ್ತಾರೆ ಎಂಬುದೂ ನಮ್ಮೆಲ್ಲರ ಅನುಭವಕ್ಕೆ ಬರುತ್ತಾ ಇರುತ್ತದೆ ಅಲ್ಲವೇ..?

ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ:  http://surahonne.com/?p=34633

ಮುಂದುವರಿಯುವುದು………

ಶಂಕರಿ ಶರ್ಮ, ಪುತ್ತೂರು.

12 Responses

  1. ನಯನ ಬಜಕೂಡ್ಲು says:

    ಬ್ಯೂಟಿಫುಲ್

    • . ಶಂಕರಿ ಶರ್ಮ says:

      ಓದಿ, ಮೆಚ್ಚಿ, ಸ್ಪಂದಿಸಿದ ತಮಗೆ ಹೃತ್ಪೂರ್ವಕ ನಮನಗಳು

  2. ಅಮೆರಿಕಾದ ಅನುಭವ ಸೊಗಸಾಗಿ ಮೂಡಿಬಂದಿದೆ

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು

  3. sudha says:

    Very nice experience

    • . ಶಂಕರಿ ಶರ್ಮ says:

      ಮೆಚ್ಚುಗೆಯ ನುಡಿಗಳಿಗೆ ಕೃತಜ್ಞತೆಗಳು.

  4. ನಾಗರತ್ನ ಬಿ. ಅರ್. says:

    ಪ್ರವಾಸದ ಅನುಭವ ದ ನಿರೂಪಣೆ ಸೂಗಸಾಗಿ ಮೂಡಿ ಬರುತ್ತಿದೆ ಮೇಡಂ.

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಾಗರತ್ನ ಮೇಡಂ.

  5. B c n murthy says:

    ಪ್ರವಾಸ ಕಥನ ಚೆನ್ನಾಗಿ ಮೂಡಿ ಬರುತ್ತಲಿದೆ ಮೇಡಮ್

    • . ಶಂಕರಿ ಶರ್ಮ says:

      ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು,

  6. ವಿದ್ಯಾ says:

    ಕಣ್ಣಿಗೆ ಕಟ್ಟುವಂತೆ ನಿಮ್ಮ ಬರಹದವಿದೆ,,,ಮೇಡಂ

  7. Anonymous says:

    San Fransisco Airport ನ ವಿಸ್ತೀರ್ಣ google ಮಾಹಿತಿಯ೦ತೆ 5207 Acres ಮತ್ತು passenger Traffic 2021 ಇಡೀ ವಷ೯ total 35,00,000.ಲೇಖಕರ ಬರಹದಲ್ಲಿ ತುಂಬಾ ಜಾಸ್ತಿ ಕಾಣುತ್ತಿದೆ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: