ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 20 : ಶರಧಿಯಲ್ಲಿ ಮುಳುಗೇಳುವ ‘ನಿಷ್ಕಳಂಕ’

Share Button

22  ಜನವರಿ 2019  ರಂದು ನಾವು ಬೆಳಗ್ಗೆ 4 ಗಂಟೆಗೆ ಹೊರಡಲು ಸಿದ್ದರಾಗಬೇಕಿತ್ತು.   ಟೂರ್ ಮ್ಯಾನೇಜರ್ ಅಷ್ಟು ಬೇಗನೇ ನಮ್ಮನ್ನು ಹೊರಡಿಸಲು ಕಾರಣವಿತ್ತು.   ನಾವು ಅಂದು‌   ‘ನಿಷ್ಕಳಂಕ ಮಹಾದೇವ’‌ ನನ್ನು‌ ನೋಡಲು‌ ಸಮುದ್ರದಲ್ಲಿ  ಭರತ (ಹೈ ಟೈಡ್ ) ಆರಂಭವಾಗುವ ಮೊದಲೇ‌ ‘ಕೊಲಿಯಾಕ್’ ಎಂಬಲ್ಲಿಗೆ ಸೇರಬೇಕಿತ್ತು.

ಗುಜರಾತಿನ ಭಾವನಗರದಿಂದ 22 ಕಿ.ಮೀ ದೂರದಲ್ಲಿರುವ ‘ಕೋಲಿಯಾಕ್’ ಸಮುದ್ರತೀರದ ಪುಟ್ಟ ದ್ವೀಪದಲ್ಲಿ ‘ನಿಷ್ಕಳಂಕ ಮಹಾದೇವ’ ಎಂದು ಪೂಜಿಸಲ್ಪಡುವ ಶಿವನ ಸನ್ನಿಧಿಯಿದೆ. ಸ್ಥಳಪುರಾಣದ ಪ್ರಕಾರ. ಕುರುಕ್ಷೇತ್ರ ಯುದ್ಧದ ನಂತರ,  ಭ್ರಾತೃಹತ್ಯೆಯ ಪಾಪಪ್ರಜ್ಞೆ ಹೊಂದಿದ ಪಾಂಡವರು, ಶ್ರೀಕೃಷ್ಣನ ಬಳಿ ತಮ್ಮ ಮನದಳಲನ್ನು ತೋಡಿಕೊಳ್ಳುತ್ತಾರೆ. ಆಗ ಶ್ರೀಕೃಷ್ಣನು ಅವರಿಗೆ ಒಂದು ಕಪ್ಪು ಬಣ್ಣದ ಹಸುವನ್ನೂ, ಕಪ್ಪು  ಬಣ್ಣದ ಬಾವುಟವನ್ನೂ ಕೊಟ್ಟು, ನೀವು ಹಸುವನ್ನು ಹಿಂಬಾಲಿಸುತ್ತಾ ಸಂಚರಿಸಿ. ಯಾವ ಸ್ಥಳವನ್ನು ತಲಪಿದಾಗ ಹಸು ಹಾಗೂ ಬಾವುಟದ  ಬಣ್ಣವು ಬಿಳ್ಳಿಯಾಗುವುದೋ  ಆ ಜಾಗದಲ್ಲಿ ನಿಮ್ಮ ಪಾಪ ಪರಿಹಾರವಾಗುತ್ತದೆ. ಅಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಿ, ನಿಮ್ಮ ಕಳಂಕ ತೊಳೆದುಹೋಗುತ್ತದೆ ಎಂದನಂತೆ. ಹಸುವನ್ನು ಹಿಂಬಾಲಿಸಿಕೊಂಡು ಊರೂರು ಅಲೆದ ಪಾಂಡವರು ಅರಬೀಸಮುದ್ರದ ದಡದಲ್ಲಿರುವ  ‘ಕೋಲಿಯಾಕ್’ ಪ್ರದೇಶಕ್ಕೆ ಬಂದಾಗ ಹಸು ಹಾಗೂ  ಧ್ವಜದ ಬಣ್ಣ ಬಿಳಿಯಾಯಿತು. ಹಾಗಾಗಿ ಅಲ್ಲಿ, ಪಾಂಡವರೆಲ್ಲರೂ ತಲಾ ಒಂದು ಶಿವಲಿಂಗವನ್ನು ಸ್ಥಾಪಿಸಿ ಪೂಜಿಸಿದರು. ಪಾಂಡವರ ಕಳಂಕ ಕಳೆದ ಕಾರಣ ಇಲ್ಲಿಯ ಶಿವನನ್ನು ‘ನಿಷ್ಕಳಂಕ ಮಹಾದೇವ’ನೆಂದು ಆರಾಧಿಸಿದರು.

ಸಾಮಾನ್ಯವಾಗಿ ದೇವಸ್ಥಾನಗಳಿಗೆ ಇರುವಂತೆ ಇಲ್ಲಿಯ ಶಿವನಿಗೆ  ಗುಡಿಯಿಲ್ಲ.  ಸಮುದ್ರದ ದಂಡೆಯಿಂದ, 1.5  ಕಿ.ಮೀ ದೂರದಲ್ಲಿರುವ ಪುಟ್ಟ ಭೂಪ್ರದೇಶವು ದಿನಕ್ಕೆರಡು ಬಾರಿ ನೀರಿನಲ್ಲಿ ಮುಳುಗಿ  ಪುನ: ಕಾಣಿಸಿಕೊಳ್ಳುತ್ತವೆ. ಪ್ರವಾಸಿಗರು  ತಮಗೆ  ಬೇಕೆನಿಸಿದಾಗ ನಿಷ್ಕಳಂಕ ಮಹಾದೇವನನ್ನು ನೋಡಲು  ಸಾಧ್ಯವಿಲ್ಲ. ಇಲ್ಲಿ ಶರಧಿಯ ಷರತ್ತನ್ನು ಪಾಲಿಸಬೇಕು! ಇದು ಇಲ್ಲಿನ ಪ್ರಾಕೃತಿಕ ಸೋಜಿಗ. . ಸಮುದ್ರದಲ್ಲಿ ದಿನಕ್ಕೆರಡು ಭಾರಿ ನೀರಿನ ಭರತ-ಇಳಿತಗಳಾಗುತ್ತವೆ ಹಾಗೂ ಈ ಅವಧಿಯು ಬದಲಾಗುತ್ತಿರುತ್ತದೆ. ಭರತದ ಸಂದರ್ಭದಲ್ಲಿ ದ್ವೀಪವು ಸಂಪೂರ್ಣವಾಗಿ ಮುಳುಗಿ, ದ್ವಜಸ್ಥಂಭದ ತುದಿ ಹಾಗೂ ಬಾವುಟ ಮಾತ್ರ ಕಾಣಿಸುತ್ತದೆ. ನೀರಿನ ಇಳಿತದ ಸಂದರ್ಭದಲ್ಲಿ, ಕೆಸರು ಮಣ್ಣಿನ ಮೇಲೆ ಜಾರಿ  ಬೀಳದಂತೆ ಜಾಗರೂಕತೆಯಿಂದ ಹೆಜ್ಜೆ ಇಡುತ್ತಾ ಕಾಲು ಗಂಟೆ ನಡೆದು ‘ನಿಷ್ಕಳಂಕ ಮಹಾದೇವ’ನಿರುವ ದ್ವೀಪವನ್ನು ತಲಪಬಹುದು. ದ್ವೀಪದಲ್ಲಿ  ಧರ್ಮರಾಜ ಭೀಮ, ಅರ್ಜುನ, ನಕುಲ ಸಹದೇವರು ಸ್ಥಾಪಿಸಿದರೆನ್ನಲಾಗುವ 5 ಶಿವಲಿಂಗಗಳಿವೆ.

ನಿಷ್ಕಳಂಕ ಮಹಾದೇವ

ನೀರು ಹಿಂದೆ ಸರಿದ ಸಮಯದಲ್ಲಿ ಅಲ್ಲಲ್ಲಿ ಸಿಲುಕಿಹಾಕಿಕೊಂಡ ಮೀನುಗಳನ್ನು ತಿನ್ನಲು ಹೊಂಚುಹಾಕುವ ಕೊಕ್ಕರೆ, ಸೀಗಲ್ ಮೊದಲಾದ  ಪಕ್ಷಿಗಳ ಹಾರಾಟ ಸೊಗಸಾಗಿರುತ್ತದೆ.ಈ ದ್ವೀಪದಲ್ಲಿ ಕೇವಲ ಒಂದೆರಡು ಗಂಟೆ ಮಾತ್ರ ಇರಲು ಸಾಧ್ಯ. ಯಾಕೆಂದರೆ,  ದೂರದಲ್ಲಿ ಮುಂದಕ್ಕೆ ಬರುತ್ತಿರುವ ನೀರು ಸಮುದ್ರದಲ್ಲಿ ಭರತ ಆರಂಭವಾದುದರ ಮುನ್ಸೂಚನೆಯನ್ನು ಕೊಡುತ್ತದೆ. ಹಿಂದಿರುಗಿ ಬರುವಾಗ ಸಮುದ್ರದ ಭರತದ ನೀರೂ ನಮ್ಮನ್ನು ಹಿಂಬಾಲಿಸಿ ಬರುವುದನ್ನು ಗಮನಿಸಿ ಪುಳಕಗೊಳ್ಳುತ್ತೇವೆ. ನಾವು ದಡ ತಲಪುವಷ್ಟರಲ್ಲಿ ಆಗ ತಾನೇ ನೋಡಿದ್ದ ದ್ವೀಪ ಭಾಗಶ: ಮುಳುಗಡೆಯಾಗಿರುತ್ತದೆ. ಇನ್ನೂ ಒಂದು ಗಂಟೆ ಕಾದರೆ ದ್ವೀಪ ಸಂಪೂರ್ಣವಾಗಿ ಮುಳುಗಿ, ದ್ವಜಸ್ಥಂಭ ಮಾತ್ರ ಕಾಣಿಸುತ್ತದೆ.  ಹೀಗೆ,  ಸಮುದ್ರದಲ್ಲಿ ದಿನಕ್ಕೆರಡು ಬಾರಿ ಮಿಂಚಿ ಮರೆಯಾಗುವ ದ್ವೀಪವನ್ನು ತಲಪಿ ನಿಷ್ಕಳಂಕ ಮಹಾದೇವನ ದರ್ಶನ ಪಡೆಯುವುದು   ಬಹಳ ವಿಸ್ಮಯಕಾರಿ ಅನುಭವ.

 

ವರ್ಷದ ಯಾವುದೇ ಸಮಯದಲ್ಲಿಯೂ ನಿಷ್ಕಳಂಕ ಮಹಾದೇವನ ದರ್ಶನ ಮಾಡಬಹುದಾದರೂ ಮಾರ್ಚ್ ನಿಂದ ಜುಲೈ ತಿಂಗಳು ಉತ್ತಮ ಎಂದು ಸ್ಥಳೀಯರು ತಿಳಿಸುತ್ತಾರೆ. ಭರತ-ಇಳಿತದ ಸಮಯ ಬದಲಾಗುತ್ತಿರುವುದರಿಂದ ಸ್ಥಳೀಯರಲ್ಲಿ ವಿಚಾರಿಸಿ ಅಥವಾ  www.tide-forecast.com  ಜಾಲತಾಣದಲ್ಲಿ ಹುಡುಕಿ ತಿಳಿದುಕೊಳ್ಳುವುದು ಅನುಕೂಲಕರ.
ವಿಶಿಷ್ಟ ಪ್ರಾಕೃತಿಕ ವಿದ್ಯಮಾನಕ್ಕೆ ಸಾಕ್ಷಿಯಾದ, ಪ್ರವಾಸೋದ್ಯಮವನ್ನು ಹೆಚ್ಚಿಸಬಲ್ಲ, ಅಪರೂಪವೆನಿಸುವ ಈ ಸುಂದರ ಪರಿಸರದಲ್ಲಿ ತಿಂಡಿತಿನಿಸು ಮಾತುವ  ಸಣ್ಣ ಪುಟ್ಟ ಅಂಗಡಿಗಳನ್ನು ಬಿಟ್ಟರೆ, ಊಟ, ವಸತಿಗೆ ಅಚ್ಚುಕಟ್ಟಾದ ವ್ಯವಸ್ಥೆ ಇಲ್ಲ.
ಆದರೆ  22  ಕಿ.ಮೀ ದೂರದಲ್ಲಿರುವ ‘ಭಾವನಗರ’ದಲ್ಲಿ ಎಲ್ಲಾ ಅನುಕೂಲತೆಗಳು ಲಭ್ಯ.

ಗುಜರಾತ್ ನ ಮುಖ್ಯಪಟ್ಟಣವಾದ ಅಹ್ಮದಾಬಾದ್ ಗೆ  ವಿಮಾನ ಅಥವಾ ರೈಲಿನ ಮೂಲಕ ತಲಪಬೇಕು. ಅಲ್ಲಿಂದ   196 ಕಿ.ಮೀ ದೂರದಲ್ಲಿರುವ ಭಾವನಗರಕ್ಕೆ ರೈಲು ಅಥವಾ  ರಸ್ತೆಸಾರಿಗೆ ಸಂಪರ್ಕವಿದೆ. ಭಾವನಗರದಿಂದ ‘ಕೋಲಿಯಾಕ್ ಬೀಚ್’ ಗೆ  22 ಕಿ.ಮೀ  ದೂರವಿದೆ. ಸ್ಥಳೀಯ ಬಸ್ಸು ಅಥವಾ ಖಾಸಗಿ ವಾಹನದಲ್ಲಿ ತಲಪಬಹುದು. ಕೋಲಿಯಾಕ್ ಬೀಚ್ ನಲ್ಲಿ ,  ಸಮುದ್ರದಲ್ಲಿ ಇಳಿತದ ಸಮಯವನ್ನು ನೋಡಿಕೊಂಡು, 1.5 ಕಿ.ಮೀ ನಡೆದರೆ ‘ನಿಷ್ಕಳಂಕ ಮಹಾದೇವ’ನ ದರ್ಶನವಾಗುತ್ತದೆ.   ಕೆಸರು ರಾಡಿಯ ಮಣ್ಣಿನಲ್ಲಿ  ನಡೆಯಬೇಕಾದುದರಿಂದ ಚಪ್ಪಲಿ, ಶೂ ದರಿಸದೆ, ಬರಿಗಾಲಿನಲ್ಲಿ ನಡೆಯುವುದೇ ಸುಲಭ ಎಂದು ನನ್ನ ಅನುಭವ.

ಊಹಿಸಿಯೇ ಇರದಂತೆ, ಸಮುದ್ರದಲ್ಲಿ ಬರಿಗಾಲಿನಲ್ಲಿ ನಡೆಯುವುದು ಬಲು  ಖುಷಿ ಕೊಟ್ಟಿತು.  ಆ ದಿನ ನಾವು ಭಾವನಗರದಲ್ಲಿ ಉಳಕೊಂಡೆವು.

(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ :http://surahonne.com/?p=32040

– ಹೇಮಮಾಲಾ.ಬಿ

10 Responses

  1. ಬಿ.ಆರ್.ನಾಗರತ್ನ says:

    ನಿಮ್ಮ ಪ್ರವಾಸ ಕಥನ ದ ಜೊತೆ ಅಲ್ಲಿ ಯು ಸ್ಥಳೀಯ ಹಾಗೂ ಪೌರಾಣಿಕ ಕಥೆಗಳನ್ನು ಹೇಳುವ ಹವ್ಯಾಸ ನನಗೆ ಬಹಳ ಮುದನೀಡುವ ಸಂಗತಿ ವಂದನೆಗಳು ಗೆಳತಿ ಹೇಮಾ .

  2. sudha says:

    Very nice and informative

  3. .ಮಹೇಶ್ವರಿ.ಯು says:

    ಬರಹ ಸೊಗಸಾಗಿದ್ದು ವಿವರಗಳು ಎಂದಿನಂತೆ ಮುದ ಕೊಟ್ಟವು.

  4. ಶಂಕರಿ ಶರ್ಮ says:

    ಬಹಳ ವಿಶೇಷವಾದ ಪ್ರಕೃತಿ ಸೋಜಿಗ! ಸಮುದ್ರದ ಒಳಭಾಗದಲ್ಲಿರುವ ‘ನಿಷ್ಕಳಂಕ ಮಹಾದೇವ’ ಪವಿತ್ರ ಶಿವಲಿಂಗಗಳು; ಮಾಹಾಭಾರತದ ಐತಿಹಾಸಿಕ ಹಿನ್ನೆಲೆಯನ್ನೂ ಸಾಬೀತುಪಡಿಸಿದಂತಾಯಿತು ಎಂದು ನನ್ನ ಅನಿಸಿಕೆ. ಪೂರಕ ಚಿತ್ರಗಳೊಂದಿಗಿನ ಪ್ರವಾಸ ಅನುಭವ ಲೇಖನ ಖುಷಿ ಕೊಟ್ಟಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: