ಗುಬ್ಬಚ್ಚಿ ಪುರಾಣ

Share Button


ಈಚೆಗೆ ಕೆಲವು ತಿಂಗಳುಗಳ ಹಿಂದೆ ಪತ್ರಿಕೆಗಳ ಅಂಕಣಗಳೆಲ್ಲ  ಸಾಮಾನ್ಯವಾದ ವಿಷಯವೊಂದನ್ನು ವ್ಯಾಪಿಸಿದ್ದವು.ಹಲವು ಖ್ಯಾತನಾಮರೆಲ್ಲ ಈ ಚರ್ಚೆಯಲ್ಲಿ  ಭಾಗವಹಿಸಿದ್ದರು. ಒಬ್ಬ ಅಂಕಣಕಾರರಂತೂ  ತಮ್ಮ ಒಂದು ಇಡೀ ಅಂಕಣ ಬರಹವನ್ನು ಈ ವಿಷಯಕ್ಕೆ ಮೀಸಲಿಟ್ಟಿದ್ದರು. ಚರ್ಚಿತವಾದ ವಿಷಯವೇನು ಗೊತ್ತೇ? ಗುಬ್ಬಚ್ಚಿ.

ಚರ್ಚೆಯ ಎಳೆ ಆರಂಭವಾದದ್ದು ಹೀಗೆ. ಜನಸಾಮಾನ್ಯರೊಬ್ಬರು ಬೆಂಗಳೂರಿನ ಮನೆಮನೆಗಳಲ್ಲಿ ಒಂದು ಕಾಲದಲ್ಲಿ ಮನೆಮಾತಾಗಿದ್ದ ಗುಬ್ಬಚ್ಚಿ ಸಂಸಾರಗಳು ಕಾಣೆಯಾಗಿರುವ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿ, ವಾಚಕರವಾಣಿ ಪತ್ರ ಬರೆದರು. ಗುಬ್ಬಚ್ಚಿಯಷ್ಟೇ ಸಣ್ಣದಾದ ಈ ವಿಷಯದ ಬಗ್ಗೆ ಚರ್ಚೆಯ ಮಹಾಪೂರವೇ ಹರಿಯಿತು. ಹಳೆಯ ಕಾಲದವರು ಅಂದಿನ ಕಾಲದ ಜನರ ಹೃದಯ ವೈಶಾಲ್ಯ, ದೊಡ್ಡಮನೆ, ಹಿತ್ತಲು, ಗಿಡಮರಗಳನ್ನು ವರ್ಣಿಸಿದರು. ಸಸ್ಯಾಹಾರಿಗಳು ಗುಬ್ಬಚ್ಚಿಗಳನ್ನು ಕೊಂದು ತಿನ್ನುವವರ ಬಗ್ಗೆ ಕೆಂಡ ಕಾರಿದರು. ಪರಿಸರವಾದಿಗಳು ಯಥಾಪ್ರಕಾರ ಆಧುನಿಕ ಜನರ ವಿನಾಶಪ್ರವೃತ್ತಿಯನ್ನು ಖಂಡಿಸಿದರು. ಕನ್ನಡದ ಮುಂಚೂಣಿಯ ಕವಿವರ್ಯರೊಬ್ಬರು, ತಾವು ಬರೆಯುತ್ತಿದ್ದ ಮಾಸಪತ್ರಿಕೆಯಲ್ಲಿ  ಗುಬ್ಬಚ್ಚಿಯ ಬಗ್ಗೆ ಸವಿಸ್ತಾರವಾದ ದುಃಖಗೀತ ಬರೆದು ನಾಡಿನ ಎಲ್ಲ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಈ ಸರಣಿ ವಿದ್ಯಮಾನಗಳು ನನಗೆ ನಗೆ ತಂದಿತು. ನಾಡಿನ ಸಮಸ್ತ ಪ್ರಜ್ಞಾವಂತರು ಪರಿಸರವಾದಿಗಳು ಸಾರಸ್ವತ ಗಣ್ಯರು ಪ್ರತಿಯೊಬ್ಬರೂ ಗುಬ್ಬಿಯ ಬಗ್ಗೆ ಗಹನವಾಗಿ ತಲೆಕೆಡಿಸಿಕೊಂಡಿರುವಾಗ ಇದೇನಿದು ಅಪಹಾಸ್ಯ ಎನ್ನಬೇಡಿ. ನನ್ನ ನಗು ಅಪಹಾಸ್ಯವಲ್ಲ ನಾನು ಜೀವಿಸುತ್ತಿದ್ದ ಪರಿಸರದ ಬಗ್ಗೆ ಹೆಮ್ಮೆಯ ಪ್ರತಿಕ್ರಿಯೆ ಅಷ್ಟೆ.

ಏಕೆಂದಿರಾ? ನಾನೀಗ ಸದ್ಯ ಉದ್ಯೋಗನಿಮಿತ್ತ ವಾಸಿಸುತ್ತಿರುವುದು ಕಪಿಲಾತಟದ ದಕ್ಷಿಣಕಾಶಿ, ಗರಳಪುರಿಗಳೆಂದೇ ಖ್ಯಾತವಾದ ಭವರೋಗವೈದ್ಯ ಶ್ರೀಕಂಠೇಶ್ವರನ ನಿವಾಸವಾದ ನಂಜನಗೂಡಿನಲ್ಲಿ. ಇಲ್ಲಿ ಸಸ್ಯ ಹಾಗೂ ಜೀವಿ ಪರಿಸರಕ್ಕೆ ಎಲ್ಲ ಕಡೆಯಂತೆ ಅಪಾಯವಿದ್ದರೂ ಅಭಾವವಂತೂ ಖಂಡಿತ ಇಲ್ಲ. ಹಕ್ಕಿಗಳ ಕಲರವವನ್ನೂ ನದಿ, ತೊರೆಗಳ ಮಂಜುಳ ನಿನಾದವನ್ನೂ ಸಸ್ಯದ ಹಸಿರು-ಉಸಿರುಗಳನ್ನೂ ಸಂಪೂರ್ಣವಾಗಿ ದಮನ ಮಾಡಲು ಮಾನವನಿಗೆ ಇನ್ನೂ ಸಾಧ್ಯವಾಗಿಲ್ಲ. (ಮುಂದೆಯೂ ಸಾಧ್ಯವಾಗದು ಎಂದು ಹೇಳುವ ಧೈರ್ಯ ನನಗಿಲ್ಲ) . ಆ ಸುಂದರ ಪ್ರಕೃತಿಯ ಭಾಗವೇ ಆಗಿರುವ ನನ್ನ ಮನೆಯ ಆವರಣದಲ್ಲಿ ಅಷ್ಟಿಷ್ಟು ಸಸ್ಯವರ್ಗ ಮತ್ತು ಹಲಬಗೆ ಪ್ರಾಣಿವರ್ಗ (ಇರುವೆ, ಜಿರಳೆ, ಹಲ್ಲಿ, ಚಿಟ್ಟೆ ಮಂತಾದವೂ ಸೇರಿ) ಸಕ್ರಿಯವಾಗಿವೆ. ಗುಬ್ಬಚ್ಚಿ ಹಾಗೂ ಅದರ ಪ್ರಭೇದದ ಹಲವಾರು ಪಕ್ಷಿಗಳು ನಿರಾಳವಾಗಿ ವಾಸಿಸುತ್ತಿವೆ. ನಾನು ಈ ಸಾಲು ಬರೆಯುತ್ತಿರುವಾಗಲೇ ಕಿಟಕಿಯಿಂದ ಸರನೆ ತೂರಿ ಬಂದ ಗುಬ್ಬಿಯೊಂದು, ನಮ್ಮ ಮನೆಯ ಡ್ರೆಸಿಂಗ್ ಟೇಬಲ್ ಕನ್ನಡಿಯ ಮುಂದೆ ನಿಂತು ತನ್ನ ಸೌಂದರ್ಯವನ್ನು ತಾನೇ ಆಸ್ವಾದಿಸಿಕೊಳ್ಳುತ್ತಿದೆ. ಮತ್ತೆ ಮತ್ತೆ ಸ್ವವಿಮರ್ಶೆ ಮಾಡಿಕೊಳ್ಳುತ್ತಿದೆ. ಅದೇ ವಾಪಸು ಕಿಟಕಿಯತ್ತ ಹಾರಿತು. ಆದರೆ ತನ್ನ ರೂಪಸಿರಿಯನ್ನು ಮತ್ತೊಮ್ಮೆ ಕಣ್ತುಂಬ ತುಂಬಿಕೊಳ್ಳುವ ಬಯಕೆ .ಮತ್ತೆ ಕನ್ನಡಿಯತ್ತ ದಾಳಿ. ಹೀಗೆ ಹತ್ತಾರು ಬಾರಿಯಾದರೂ ನಡೆದಿರಬೇಕು. ಅಯ್ಯೋ ಗುಬ್ಬಿಯೇ!ಮಾನವನ ಚಾಳಿ ನಿನಗೂ ವಕ್ರಿಸಿತೆ? ಎಂದುಕೊಂಡೆ.

PC: Internet

ನಾನು ಕೆಲಸ ಮುಗಿಸಿ ಮನೆಗೆ ಬಂದಾಗ ನನ್ನನ್ನು ಮೊದಲು ಸ್ವಾಗತಿಸುವುದು ಗುಬ್ಬಚ್ಚಿಗಳ ಕೀಚ್ ಕೀಚ್ ದನಿ, ಮನೆಯ ಮುಂಭಾಗದ ಎಲ್ಲ ಗಿಡಗಳ ಕೊಂಬೆಕೊಂಬೆಗಳ ಮೇಲೆ ಗುಬ್ಬಿ ಹಾಗೂ ಅದರ ಕುಲಬಾಂಧವರು ಇತರರ ಗೊಡವೆಯಿಲ್ಲದೆ, ಯಾರ ಜತೆಯೂ ಸ್ಪರ್ಧೆಯಿಲ್ಲದೆ ತಮಗಿಷ್ಟ ಬಂದ ರೀತಿ ಸ್ವರಪ್ರಸ್ತಾರ ಹಾಕುವ ಪರಿ ಅವರ್ಣನೀಯ. ಲ್ಲ ಕೇಳಲೇಬೇಕು ಎಂದು ನಾವು ಕಿರುಚುವುದಿಲ್ಲ ಎಂಬ ಧೋರಣೆಯೇ!

ಗುಬ್ಬಚ್ಚಿ ಮಾತ್ರವಲ್ಲದೆ ಅವುಗಳನ್ನೇ ಹೋಲುವ ಬಣ್ಣ ಆಕಾರಗಳು ಅದ್ಭುತ ವೈವಿಧ್ಯ ಹೊಂದಿರುವ ಹಲವಾರು ಪಕ್ಷಿಗಳು ನಮ್ಮ ಮನೆಯಂಗಳಕ್ಕೆ ಅನುಮತಿಗೇ ಕಾಯದೇ ದಾಳಿಯಿಟ್ಟರೂ ಸಹ ಅಂತಿಮವಾಗಿ ನಮಗೆ ಆನಂದವನ್ನೇ  ನೀಡುತ್ತಿವೆ. ಕೆಲವಂತೂ ತಮ್ಮ ಸಂತಾನೋತ್ಸವ, ತೊಟ್ಟಿಲು ಶಾಸ್ತ್ರ ಮುಂತಾದ ಕ್ರಿಯೆಗಳಿಗೂ ನಮ್ಮ ಮನೆಯನ್ನೇ ಆಯ್ಕೆ ಮಾಡಿಕೊಂಡಿವೆ. ಹೀಗಾಗಿ ನಮ್ಮ ದಿನಚರಿಯ ಸ್ವಲ್ಪ ಭಾಗ ಈ ಹಕ್ಕಿಗಳ ಜೀವನಕ್ರಿಯೆ ಬಗ್ಗೆ ಹತ್ತಿರದಿಂದ ಗಮನಿಸಲು ಬಳಕೆಯಾಗುತ್ತಿದೆ. ನನ್ನವಳಿಗಂತೂ ಗುಬ್ಬಚ್ಚಿಯನ್ನೇ ಹಳದಿ ಒಡಲಿನ ಹಕ್ಕಿ ಗೂಡು ಕಟ್ಟುವ ಕ್ರಿಯೆ ಆರಂಭಿಸಿದೊಡನೆ ಸಂಭ್ರಮ ಗರಿಗಟ್ಟುತ್ತದೆ. ದಿನಂಪ್ರತಿ ಪ್ರಗತಿಯ ಪರಿಶೀಲನೆ ಮಾಡುವುದೇನು? ಮನೆಗೆ ಬಂದ ನೆಂಟರಿಷ್ಟರಿಗೆ, ಅವರಿಗೆ ಇಷ್ಟವಿರಲಿ ಬಿಡಲಿ ಗೂಡಿನ ಬಳಿ ಅವರನ್ನು ಕರೆದೊಯ್ದು ಶೈಕ್ಷಣಿಕ ಪ್ರವಾಸದ ರೀತಿಯಲ್ಲಿ ತೋರಿಸುವುದೇನು? ಒಂದೇ ಎರಡೇ!

ಹಕ್ಕಿಯ ಗೂಡುಕಟ್ಟುವ ಯಂತ್ರ ಶಿಲ್ಪಕ್ಕಂತೂ ನಾನು ವಿಸ್ಮಯಗೊಂಡಿದ್ದೇನೆ. ಮೊಟ್ಟಮೊದಲಿಗೆ ದಟ್ಟವಾದ ಗಿಡವೊಂದನ್ನು ಆಯ್ದ, ಮನುಷ್ಯನ ಕಣ್ಣು ಅಷ್ಟಾಗಿ ಹಾಯದಿರುವ ಎಡೆಯಲ್ಲಿ ಎಲೆಗಳನ್ನು ಗಂಟುಹಾಕಿ ಅಭೇದ್ಯ ಕವಚ ನಿರ್ಮಿಸುತ್ತದೆ. ನಮ್ಮ ಮನೆಯ ಹತ್ತಿ ಗಿಡದಿಂದಲೇ ಹತ್ತಿ ತಂದು ಶ್ವೇತಶಯನ ಸಿದ್ಧಪಡಿಸುತ್ತದೆ. ಹತ್ತಿರದಿಂದ ನೋಡಿದವರಿಗೆ ಮಾತ್ರ ಅದು ಗೂಡು ಎಂದು ಗುರುತಿಸಲು ಸಾಧ್ಯ. ಮೊಟ್ಟೆಯನ್ನು ಇಟ್ಟ ಮೇಲೆ ಅದು ಕಾಯುವ ಪರಿ ನಮ್ಮ ಪ್ರಧಾನಮಂತ್ರಿಗಳನ್ನು ರಕ್ಷಿಸುವ ಎಸ್‌ಪಿಜಿ ಪಡೆಯನ್ನು ನೆನಪಿಸುತ್ತದೆ. ಗೂಡಿನ ಹತ್ತಿರ ಒಂದು ಚಿಟ್ಟೆ ಸುಳಿದರೂ ಸಾಕು ಟೀ ಟೀ ಎಂದು ಸದ್ದು ಮಾಡುತ್ತ ಗೂಡಿನತ್ತ  ಧಾವಿಸಿ ರಕ್ಷಣೆಗೆ ಮುಂದಾಗುತ್ತದೆ. ಬಹಳ ದಿನಗಳ ಶ್ರಮದ ನಂತರ ಹಕ್ಕಿಮರಿಗಳು ಮೊಟ್ಟೆಯೊಡೆದು ಬರುತ್ತವೆ. ಕಣ್ಣು ಬಿಡಲಾಗದ ರೆಕ್ಕೆ ಬಿಚ್ಚಲಾರದ, ಆದರೆ ಸದಾ ಹವಳದ ಕುಡಿಯ, ಕೊಕ್ಕು ತೆರೆದುಕೊಂಡು ಆ ಸೊಬಗಿನ ಜೀವಿಗಳು ತಾಯಿ ಹಕ್ಕಿ ಹುಳವನ್ನು ಬಾಯಿಯಲ್ಲಿ ಕಚ್ಚಿಕೊಂಡು ಅತ್ತಿತ್ತ ಎಚ್ಚರದಿಂದ ಗಮನಿಸಿ ಪಕ್ಷಪಾತವಿಲ್ಲದೆ, ಮರಿಗಳಿಗೆ ಉಣಿಸುವ ರೀತಿ ಸಂತಸದ ಅನುಭವ. ಆದರೆ ತಾಯಿಯ ಶ್ರಮ, ಪೋಷಣೆ, ಬೆಚ್ಚಗಿನ ಗೂಡು ಇವೆಲ್ಲದರ ಆಕರ್ಷಣೆ ಯಾವುದನ್ನೂ ಲೆಕ್ಕಿಸದೆ  ರೆಕ್ಕೆ ಬಲಿತೊಡನೆ ಭೇದಿಸಿ ಆಗಸಕೆ ಹಾರುವ  ಮರಿಗಳ  ಸಾಹಸ ನನಗೆ ಸ್ವಾರ್ಥಮೂಲವಾದುದೇನೋ ಅನ್ನಿಸುತ್ತದೆ.

ಇವೆಲ್ಲವನ್ನೂ ಅಷ್ಟು ದಿನಗಳಿಂದ ಆಸಕ್ತಿ, ತನ್ಮಯತೆ ಮತ್ತು ವಾತ್ಸಲ್ಯಪೂರ್ಣವಾಗಿ ಗಮನಿಸುತ್ತಿರುವ ನನ್ನವಳಿಗೆ ಹಕ್ಕಿಮರಿಗಳ ಪಲಾಯನ ದುಃಖವನ್ನೇ ತರುತ್ತದೆ. ಒಮ್ಮೆಯಂತೂ ಹಾರಲು ತಡಮಾಡಿದ ಹಕ್ಕಿಮರಿಯ ಮೇಲೆ ಬುಟ್ಟಿ ಕವುಚಿಹಾಕಿ ಹಿಡಿದಿಟ್ಟುಕೊಂಡಳು.  ಆ ಮರಿಗೆ ಅಸಹನೆ ಕಾತರ ಇನ್ನೂ ಸ್ವಲ್ಪ ರೆಕ್ಕೆ ಬಲಿತಿದ್ದರೆ ಬುಟ್ಟಿಯನ್ನೇ ಒದ್ದು ಹೊರಹೋಗಿಬಿಡುತ್ತಿತ್ತೇನೋ! ಸಾಯಂಕಾಲ ನಾನು ಮನೆಗೆ ಬಂದ ತಕ್ಷಣ ಹಕ್ಕಿ ಮರಿ ಹಿಡಿದ ಸಾಹಸ ವಿವರಿಸಿ, ತಾನು ಅದನ್ನು ಸಾಕುವುದಾಗಿ ಹೇಳಿದಳು. ನನಗೇಕೋ ಅದು ಸರಿ ಕಾಣಲಿಲ್ಲ. ಅಗಲಿಕೆ ನೋವು ತರುತ್ತದೆ ನಿಜ. ಹಾಗೆಂದು ಮದುವೆಯಾದ ಮಗಳನ್ನು ಗಂಡನ ಮನೆಗೆ ಕಳಿಸದಿದ್ದರೆ ಹೇಗೆ? ನನ್ನವಳ ಇಷ್ಟಕ್ಕೆ ವಿರುದ್ಧವಾಗಿ ಬುಟ್ಟಿ ತೆಗೆದು ಮರಿಯನ್ನು ಹೋಗಲು ಬಿಟ್ಟೆ. ಆ ಹಕ್ಕಿ ಕ್ಷಣ ಮಾತ್ರದಲ್ಲಿ ತನ್ನ ಸೋದರರ ಜಾಡು ಹಿಡಿದು ಕಣ್ಮರೆಯಾಯಿತು.

ನನ್ನವಳ ದುಃಖ ಮತ್ತಷ್ಟು ಹೆಚ್ಚಾಯಿತು. ನಾನು “ಪ್ರಿಯೆ ದುಃಖವೇಕೆ ಹಕ್ಕಿಗೆ ಬಾನು ಮೀನಿಗೆ ಕಡಲು ಸಹಜ ನೆಲೆಗಳು.  ಉದ್ಯೋಗಕ್ಕಾಗಿ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಮಕ್ಕಳೇ ದೇಶಾಂತರ ಖಂಡಾಂತರ, ಸೀಮೋಲ್ಲಂಘನ ಮಾಡುತ್ತಿರುವ ಕಾಲವಲ್ಲವೆ ಇದು? ಸಹಿಸಿಕೊ” ಎಂದೆ. ಆದರೆ ಈ ಸಮಾಧಾನ ಅಷ್ಟು ಗಟ್ಟಿಯಾದುದಾಗಿರಗಿರಲಿಲ್ಲ ಏಕೆಂದರೆ ನನ್ನದೂ ಹೆಚ್ಚೂ ಕಡಿಮೆ ಅವಳದೇ ಮನೋಸ್ಥಿತಿಯಾಗಿತ್ತು. ಗುಬ್ಬಿ ಮತ್ತು ಅದರ ಪರಿವಾರ ನನ್ನಂಥ ಸಾಮಾನ್ಯನಿಗೇ ಇಷ್ಟೊಂದು ಭಾವನಾತ್ಮಕವಾಗಿರುವಾಗ ಕ್ಯಾಮೆರಾ ಕಣ್ಣಿನ ಬಲೆ ಬೀಸಿ ಅಪೂರ್ವ ದೃಶ್ಯಕ್ಕೆ ಕಾದುಕೂತ  ವನ್ಯಜೀವಿ ಛಾಯಾಗ್ರಾಹಕರಾದ  ಕೃಪಾಕರ, ಸೇನಾನಿ ಅಂಥ ಪ್ರತಿಭಾವಂತರಿಗೆ  ಇನ್ನೆಷ್ಟು ಆನಂದಾನುಭೂತಿ ಉಂಟಾಗಿರಬಹುದು.!  ನಾನಂತೂ ಸದ್ಯಕ್ಕೆ  ಈ ಸಂತಸವನ್ನು ನಿರಾತಂಕವಾಗಿ ಅನುಭವಿಸುತ್ತಿದ್ದೇನೆ.

ಓ ! ನನ್ನಾಕೆಯ. ಮುಖದಲ್ಲೇನು ಸಂಭ್ರಮ! ಮತ್ತೊಂದು ಹಕ್ಕಿ ಗೂಡು ಕಟ್ಟಿತೇ? ನಾನದನ್ನು ಈಗಲೇ ನೋಡಬೇಕು. ಬರುತ್ತೇನೆ.

-ಕೆ ಎನ್ ಮಹಾಬಲ

3 Responses

  1. ಬಿ.ಆರ್.ನಾಗರತ್ನ says:

    ಗುಬ್ಬಚ್ಚಿಯ ಪುರಾಣದ ವಿವರಣೆಯಿದೆ ಜೊತೆ ಜೊತೆಗೆ ಬೇರೆ ಪಕ್ಷಿಗಳೊಡನೆ ಬೆಸಿದುಕೊಂಡಿರುವ ಸಂಬಂಧದ ಲೇಖನ ಚೆನ್ನಾಗಿದೆ ಮೂಡಿ ಬಂದಿದೆ ಸಾರ್.ಅಭಿನಂದನೆಗಳು.

  2. ಶಂಕರಿ ಶರ್ಮ says:

    ಚಂದದ ಗುಬ್ಬಚ್ಚಿ ಕಲರವ ಮಧ್ಯೆ ಇರುವ ನೀವೇ ಭಾಗ್ಯವಂತರು ಸರ್. ಆದರೂ, ನಮ್ಮಲ್ಲಿ ಗುಬ್ಬಚ್ಚಿ ಬಿಟ್ಟು ಬೇರೆ ತರಹದ ಹಕ್ಕಿಗಳ ಗೂಡು ಕಾಯುವ ಪುಣ್ಯ ನಮಗೂ ಒದಗಿದೆ ಎನ್ನುವ ಹೆಮ್ಮೆಯಿದೆ. ಅದರ ಹಂತ ಹಂತವಾದ ಫೋಟೋ ಕ್ಲಿಕ್ಕಿಸಿ, ಅದರ ಪ್ರವರ ಬರೆದು ಕಳಿಸಿದುದು ಪ್ರಕಟವಾದಾಗ ಹೆಮ್ಮೆ ಯೆನಿಸಿದರೂ; ನೀವಂದಂತೆ ಗೂಡು ಖಾಲಿಯಾದಾಗ ವಾರಗಟ್ಟಲೆ ಬೇಜಾರು ಮಾಡಿಕೊಂಡದ್ದು ನೆನಪಿಗೆ ಬಂತು. ತಿಳಿಹಾಸ್ಯ, ನೈಜತೆ ತುಂಬಿದ ತಮ್ಮ ಲೇಖನ ಬಹಳ ಇಷ್ಟವಾಯ್ತು ಸರ್.

  3. Knmahabala says:

    ಧನ್ಯವಾದ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: