ಪ್ರವಾಸ

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 9

Share Button


ಐನ ಮಹಲ್- ಭುಜ್ ನ ಅರಮನೆ

18  ಜನವರಿ 2019 ರಂದು ನಮಗೆ ಭುಜ್ ನ ಸ್ಥಳೀಯ ಸ್ಮಾರಕಗಳಿಗೆ ಭೇಟಿ ನೀಡಿವ ಕಾರ್ಯಕ್ರಮವಿತ್ತು.  ಮೊದಲನೆಯದಾಗಿ ‘ಐನ ಮಹಲ್’ ತಲಪಿದೆವು. ‘ಕನ್ನಡಿಗಳ ಹಾಲ್’ ಎಂದೂ  ಕರೆಯಲ್ಪಡುವ ಈ ಅರಮನೆಯನ್ನು, 18 ನೆ ಶತಮಾನದ ಮಧ್ಯಭಾಗದಲ್ಲಿ ( 1760 ರ ಆಸುಪಾಸು) ಅಂದಿನ   ಭುಜ್ ನ ರಾಜನಾದ ‘ಲಾಕ್ ಪತಿಜಿ’  ಕಟ್ಟಿಸಿದರು. ಈ ಅರಮನೆಯು ಇಂಡೋ-ಯುರೋಪ್ ವಾಸ್ತುಶಿಲ್ಪವನ್ನು ಹೊಂದಿದೆ . ಅಂದಿನ ಕಾಲದಲ್ಲಿಯೇ ಯುರೋಪಿನ ವಾಸ್ತುಶಿಲ್ಪವನ್ನು ಅಭ್ಯಾಸ ಮಾಡಿದ್ದ ‘ರಾಮ್ ಸಿಂಹ ಮಲಾಂ’ ಎಂಬ ವಾಸ್ತುಶಿಲ್ಪಿಯ ಸ್ಥಳೀಯ  ಕಾರ್ಮಿಕರೊಂದಿಗೆ ಸೇರಿ ಖುದ್ದಾಗಿ ನಿರ್ಮಿಸಿದ ಸುಂದರವಾದ ಅರಮನೆಯಿದು. ಹಾಗಾಗಿ ಈ ಅರಮನೆಯ  ಸಭಾಂಗಣದಲ್ಲಿ   ಐರೋಪ್ಯ ಶೈಲಿಯ ಕಂಚಿನ ಪ್ರತಿಮೆಗಳೂ ಇವೆ.  ಕಛ್-ಭುಜ್ ಪ್ರಾಂತ್ಯದ ರಾಜ ವಂಶಸ್ಥರ  ಚಿತ್ರಗಳು ಹಾಗೂ ಅವರು ಬಳಸುತ್ತಿದ್ದ ಸಾಮಗ್ರಿಗಳು, ಯುದ್ಧ ಪರಿಕರಗಳು ಇತ್ಯಾದಿಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ.

ಸ್ಥಳೀಯ ಮಾರ್ಗದರ್ಶಿ ತಿಳಿಸಿದಂತೆ, ಕಛ್ ರಾಜರು ಜನಾನುರಾಗಿಯಾಗಿದ್ದರು ಹಾಗೂ ಜನರು ಅವರನ್ನು ಗೌರವಿಸುತ್ತಿದ್ದರು. ಭಾರತದ ಇತರ ರಾಜರನ್ನು ಅನುನಯಿಸಿಯೋ ಬೆದರಿಸಿಯೋ ಆಡಳಿತ ನಡೆಸುತ್ತಿದ್ದ ಬ್ರಿಟಿಷರು ಒಣ ಮರುಭೂಮಿಯಾಗಿದ್ದ ಕಛ್ ಕಡೆಗೆ ಬರಲಿಲ್ಲವಂತೆ.  ತೀರಾ ಇತ್ತೀಚಿನ ವರೆಗೂ ಕುಡಿಯುವ ನೀರಿಗೆ ಬಹಳ ಸಮಸ್ಯೆ ಇರುತ್ತಿದ್ದ ಜಾಗವದು. ಈ ಮೊದಲು, ಮೈಲುಗಟ್ಟಲೆ ಹಬ್ಬಿರುವ ಕಛ್ ನ ಮರುಭೂಮಿಯಲ್ಲಿ ಗಡಿ ಕಾಯುವ ಯೋಧರಿಗೆ, ಒಂಟೆಯ ಮೇಲೆ ನೀರನ್ನು ಹೊರಿಸಿ ಕಳುಹಿಸುತ್ತಿದ್ದರಂತೆ. ಅಕಸ್ಮಾತ್ ಒಂಟೆಗಳು ತಲಪದಿದ್ದರೆ ಅಥವಾ ದಾರಿಯಲ್ಲಿ ಮರಣಿಸಿದರೆ ಯೋಧರಿಗೆ ಕುಡಿಯುವ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.  ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ದೂರದರ್ಶಿತ್ವ ಹಾಗೂ ಕಛ್ ಅನ್ನು ಪ್ರೇಕ್ಷಣೀಯ ಸ್ಥಳವಾಗಿ ಗುರುತಿಸಿರುವ ಹಿನ್ನೆಲೆಯಲ್ಲಿ ಈಗ ರಸ್ತೆ ಸಾರಿಗೆ ಸೌಲಭ್ಯ, ದೂರವಾಣಿ ಸೌಲಭ್ಯ ಹಾಗೂ ಕುಡಿಯುವ ನೀರಿನ ನಿರ್ವಹಣೆ ಬಹಳಷ್ಟು ಉತ್ತಮಗೊಂಡಿದೆ ಅಂದರು.

2001 ರಲ್ಲಿ ಭುಜ್ ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಭಾಗಶ: ಹಾನಿಗೊಳಗಾದ ಐನ ಮಹಲ್ ಅನ್ನು ದುರಸ್ತಿಗೊಳಿಸಲಾಗಿದೆ.

ಐನ ಮಹಲ್- ಭುಜ್ ನ ಅರಮನೆ

 

ಐನ ಮಹಲ್- ಭುಜ್ ನ ಅರಮನೆ ಒಳಾಂಗಣ

‘ಪ್ರಾಗ್  ಮಹಲ್’
ಐನ ಮಹಲ್ ನ ಆವರಣದಲ್ಲಿಯೇ, ಭವ್ಯಾವಾದ, ದೊಡ್ಡದಾದ ‘ಪ್ರಾಗ್  ಮಹಲ್’ ಇದೆ.ಪಾಶ್ಚಾತ್ಯ ಶೈಲಿಯ ಬೃಹದಾಕಾರದ ಗೋಪುರ ಗಡಿಯಾರವನ್ನು ಹೊಂದಿರುವ (ಕ್ಲಾಕ್ ಟವರ್‍) ( ಗೋಪುರ ಗಡಿಯಾರದ  ಈ ಅರಮನೆಯು, ಇಲ್ಲಿ ಹೀಗೆ ನಿರ್ಮಾಣವಾಯಿತು ಎಂದು ನಮಗೆ ಅಚ್ಚರಿಯಾಗುತ್ತದೆ. ೧೮೬೦ ನೇ ಇಸವಿಯಲ್ಲಿ ‘ಪ್ರಾಗ್ಮಾಲ್ ಜಿ’ ರಾಜನು, ಹೆನ್ರಿ ಸೈಂಟ್ ವಿಕಿನ್ಸ್ ಎಂಬ ಐರೋಪ್ಯ ವಾಸ್ತುಶಿಲ್ಪಿಯ ನೆರವಿನಿಂದ  ಈ ಅರಮನೆಯನ್ನು ಕಟ್ಟಿಸಿದ. ಹಾಗಾಗಿ ಇದು ಭಾರತೀಯ ಮತ್ತು ಇಟೆಲಿಯ ಗೋಥಿಕ್ ಶೈಲಿಯ ರಚನೆಗಳನ್ನು ಹೊಂದಿದೆ. ಇಲ್ಲಿನ ವೈಭವೋಪೇತ ಹಾಲ್ ಗಳಲ್ಲಿ ಕಂಗೊಳಿಸುವ ಮಾರ್ಬಲ್ ಕೆತ್ತನೆಗಳು ಐರೋಪ್ಯ ಶಿಲ್ಪಗಳನ್ನು ಹೋಲುತ್ತವೆ. ಅರಮನೆಯಲ್ಲಿ ದೇವಾಲಯವೂ ಇದೆ.

‘ಪ್ರಾಗ್  ಮಹಲ್’
‘ಪ್ರಾಗ್  ಮಹಲ್’ ಒಳಾಂಗಣ

45 ಮೀ ಎತ್ತರದಲ್ಲಿರುವ  ಗಡಿಯಾರದ ಗೋಪುರವನ್ನು ಹತ್ತಲು ಮೆಟ್ಟಿಲುಗಳಿದ್ದು, ಮೇಲೇರಿದರೆ ಭುಜ್ ನಗರದ ವೀಕ್ಷಣೆ ಮಾಡಬಹುದು. ವಿಭಿನ್ನ ಕಾಲಘಟ್ಟದಲ್ಲಿ ಸಂಭವಿಸಿದ ಭೂಕಂಪಗಳಿಂದಾಗಿ ಅರಮನೆಯ ಕೆಲವು ಭಾಗಗಳಲ್ಲಿ ಹಾನಿಯಾಗಿರುವುದೂ,  ದುರಸ್ತಿಗೊಳಿಸಿರುವುದೂ ಕಂಡುಬರುತ್ತದೆ.

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ http://surahonne.com/?p=31171

-ಹೇಮಮಾಲಾ.ಬಿ
(ಮುಂದುವರಿಯುವುದು)

6 Comments on “ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 9

  1. ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ನಿರುಪಿಸಲಾಗಿದೆ.

  2. ಅದೆಷ್ಟೊಂದು ಮಾಹಿತಿಗಳನ್ನೂ ಕಲೆಕ್ಟ್ ಮಾಡಿ ಬರ್ತೀರಿ ಹೇಮಕ್ಕ ನೀವು….ಪ್ರವಾಸ ಹೋದ ಜಾಗಗಳಿಂದ…. ಬರೀ ಸಂಗ್ರಹಿಸುವುದು ಮಾತ್ರವಲ್ಲ ಅದನ್ನು ಮತ್ತೆ ಪುನಃ ಲೇಖನವಾಗಿಸುವ ರೀತಿಯೂ ಬಹಳ ಸೊಗಸು.

  3. ನಮಗೂ ನೋಡಿದಂತೆ ಭಾಸವಾಗುತ್ತಿತ್ತು. …ಲೇಖನ ಓದಿದಾಗ. ಸೂಪರ್

  4. ಒಳ್ಳೆಯ ಮಾಹಿತಿ ಯನ್ನ್ನು ಒಳಗೊಂಡ ಸೊಗಸಾದ ಪ್ರವಾಸ ಲೇಖನ.ಮುಂದಿನ ಸ್ಥಳಗಳ ಬಗ್ಗೆ ಕುತೂಹಲ ಮೂಡಿಸಿತ್ತಿದೆ.ಅಭಿನಂದನೆಗಳು ಹೇಮಾ.

  5. ಸೊಗಸಾದ ಬಹಳಷ್ಟು ಮಹಲುಗಳನ್ನು ಕಂಡುದೂ ಅಲ್ಲದೆ ಪೂರಕ ಚಿತ್ರಗಳೊಂದಿಗೆ ಅವುಗಳ ಐತಿಹಾಸಿಕ ಹಿನ್ನೆಲೆ..ಎಲ್ಲದರ ಬಗ್ಗೆ ನೀಡಿದ ವಿವರಗಳು ಬಹಳ ಸೊಗಾಸಾಗಿವೆ. ಚಂದದ ಪ್ರವಾಸದಂಕಣ.. ಧನ್ಯವಾದಗಳು ಮಾಲಾ ಅವರಿಗೆ.

Leave a Reply to Savithri bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *