ಕವಿ ಕೆ.ಎಸ್.ನ ನೆನಪು

ಕವಿ ನೆನಪು 29: ಕೆ ಎಸ್ ನ ಹುಟ್ಟುಹಬ್ಬದ ಸಂಭ್ರಮ-ಜನವರಿ 26

Share Button

“ಇವರ ಹುಟ್ಟುಹಬ್ಬವನ್ನು ದೇಶಾದಾದ್ಯಂತ ಆಚರಿಸಲಾಗುತ್ತದೆ. ಏಕೆಂದರೆ ಇವರು ಹುಟ್ಟಿದ್ದು ಜನವರಿ 26 ʼʼಎಂಬುದು ಪ್ರಾ.ಎಚ್ಚೆಸ್ಕೆಯವರು ಸುಧಾ ವಾರಪತ್ರಿಕೆಯ ವಾರದ ವ್ಯಕ್ತಿ ಅಂಕಣದಲ್ಲಿ ಕೆ ಎಸ್ ನ ಅವರನ್ನುಕುರಿತು ಬರೆದ ಲೇಖನದ ಮೊದಲ ಸಾಲು.

ಹೌದು. ಇಂಗ್ಲಿಷ್ ಪಂಚಾಂಗದ ಪ್ರಕಾರ ಅಂದು ನಮ್ಮ ತಂದೆಯವರ ಹುಟ್ಟಿದ ದಿನ. ಆ ದಿನ ನಮ್ಮ ಕುಟುಂಬ ವಲಯದಲ್ಲಿ ಸಂಭ್ರಮದ ಸಂಚಲನವನ್ನು ಉಂಟುಮಾಡುತ್ತಿದುದು ನಿಜ. ನಾವು ಉದ್ಯೋಗನಿಮಿತ್ತ ಬೇರೆ ಬೇರೆ ಊರುಗಳಲ್ಲಿ ಇದ್ದ ಸಂದರ್ಭಗಳಲ್ಲೂ ಆ ದಿನ ಬೆಂಗಳೂರಿಗೆ ಬರುವ ಪ್ರಯತ್ನಮಾಡುತ್ತಿದ್ದೆವು. ಸಂಭ್ರಮಾಚರಣೆಗಳ ಬಗ್ಗೆ ಎಂದೂ ಅಷ್ಟಾಗಿ ತಲೆಕೆಡಿಸಿಕೊಳ್ಳದ ನಮ್ಮ ತಂದೆ ತಮ್ಮ ಚಿಪ್ಪಿನಿಂದ ಹೊರಬಂದು ಲವಲವಿಕೆಯಿಂದ ಇರುತ್ತಿದ್ದ ದಿನವದು.

ಅಮ್ಮನಿಗೆ ಅಂದು ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಬಾರಿ ಉಪಾಹಾರ ತಯಾರಿಸುವ ಲಗುಬಗೆಯ ಕಾಯಕ. ನಮ್ಮ ಅಕ್ಕಂದಿರು, ತಂಗಿಯರು ಮತ್ತು ಮನೆಸೊಸೆಯರ ಸಹಾಯ ಇದ್ದೇ ಇರುತ್ತಿತ್ತು. ಒಂದು ರೀತಿಯಲ್ಲಿ  ಆ ದಿನ ನಮ್ಮ ಕುಟುಂಬದ ಸ್ನೇಹಮಿಲನದ ದಿನ.

ತಂದೆಯವರು ಅಂದು ಎಲ್ಲರಿಗಿಂತ ಮೊದಲೇ ಸ್ನಾನ ಮಾಡಿ, ಬಿಳಿ ಜುಬ್ಬಾ ಬಿಳಿ ಪಂಚೆ ಧರಿಸಿ, ಒಂದು ಕೈಯಲ್ಲಿ ನಶ್ಯದ ಚಿಟಿಕೆ ಹಿಡಿದು ಹಾಲ್ ನಲ್ಲಿದ್ದ ದಿವಾನ್ ಮೇಲೆ ಕುಳಿತುಕೊಳ್ಳುತ್ತಿದ್ದರು. ಪಕ್ಕದಲ್ಲಿ ತನಗೆ ಯಾವುದೇ ಕೆಲಸವಿಲ್ಲದಿದ್ದರೂ ವಿರಾಜಮಾನವಾಗಿರುತ್ತಿದ್ದ ನಿತ್ಯಸಂಗಾತಿ ವಾಕಿಂಗ್ ಸ್ಟಿಕ್. ಆ ದಿನ ಯಾವ ಆಹ್ವಾನ ನೀಡದಿದ್ದರೂ ಒಬ್ಬೊಬ್ಬರಾಗಿ ಅಥವಾ ತಂಡಗಳಲ್ಲಿ ಕಾವ್ಯಮಿತ್ರರು ಹಾಗೂ ಹಿತೈಷಿಗಳು ಬಂದು ಶುಭ ಹಾರೈಸುತ್ತಿದ್ದರು.

ಅಮ್ಮ ಆಗಾಗ್ಗೆ ಅಡುಗೆಮನೆಯಿಂದ ಹೊರಬಂದು ಅಪ್ಪನ ಕೈಲಿದ್ದ ನಶ್ಯದ ಬಗ್ಗೆ ಜರಿದು,”ನಿಮ್ಮ ತಲೆ ಕೆದರಿದೆ, ಬಂದವರು ಏನೆಂದುಕೊಂಡಾರು“ ಎನ್ನುತ್ತ ತಲೆ ಬಾಚಿ ಒಳಗೆ ಹೋಗುತ್ತಿದ್ದರು.

“ಲೇ,ಶಿವರುದ್ರಪ್ಪ ಬಂದರು”,”ವ್ಯಾಸ ಬಂದ”,”ನಾಗಾಭರಣ ಬಂದರು” “ಭಟ್ಟರು ಬಂದರು” ಎಂದು ಅಪ್ಪ ಅಡುಗೆಮನೆಯತ್ತ ದಿಟ್ಟಿಸಿ ಉತ್ಸಾಹದಿಂದ ಹೇಳುತ್ತಿದ್ದಾಗ ಅಮ್ಮ ಹೊರಬಂದು ಅವರೊಡನೆ ಉಭಯ ಕುಶಲೋಪರಿ ನಡೆಸಿ ಉಪಾಹಾರದ ವ್ಯವಸ್ಥೆಗೆ ಮುಂದಾಗುತ್ತಿದ್ದರು.

“ಲೋ, ಇವತ್ತು ಹೊರಗಡೆ ಎಲ್ಲೂ ಹೋಗಬೇಡ, ಮನೇಲಿ ಕೆಲಸ ಇರುತ್ತೇ” ಎಂಬ ಎಚ್ಚರಿಕೆಯನ್ನು ನನಗೆ, ನಾನು ಅವರ ಜತೆ  ಇದ್ದ ಸಂದರ್ಭದಲ್ಲಿ ನೀಡುವುದನ್ನು ಮರೆಯುತ್ತಿರಲಿಲ್ಲ.

ರಾತ್ರಿ ಹತ್ತು ಗಂಟೆಯವರೆಗೂ ಇದೇ ಸಂಭ್ರಮ. ಮನೆ ತುಂಬ ಅಭಿಮಾನಿಗಳು ಅರ್ಪಿಸಿದ ಹಣ್ಣು, ಒಣಹಣ್ಣು, ಗಂಧದ ಹಾರ, ಮಲ್ಲಿಗೆ ಹಾರಗಳದ್ದೇ ದರ್ಬಾರು. ಆ ಹಣ್ಣುಗಳಲ್ಲೇ ರಸಾಯನ ಮಾಡಿ ಸಾಯಂಕಾಲ ಬಂದವರಿಗೆ ನೀಡಿ ಉಳಿದಿದ್ದನ್ನು ಬೀದಿಯವರಿಗೆ ಹಂಚಿ ಬಿಡುತ್ತಿದ್ದೆವು. ಮನೆಗೆಲಸದವಳೂ ಅಂದು ಅಭಿಮಾನದಿಂದ ದಿನಪೂರ್ತಿ ಇದ್ದು ತಟ್ಟೆ, ಲೋಟಗಳ ಶುಚಿಗೆ ಸಹಕರಿಸುತ್ತಿದ್ದಳು.

ಒಮ್ಮೆ ನಮ್ಮ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಶಾಮಸುಂದರ ಕಥಾವಟೆ ಎಂಬ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ತಮ್ಮ ಸುಂದರ ಕೈಬರಹದಲ್ಲಿ, ಬಣ್ಣಬಣ್ಣದ ಶಾಯಿ ಬಳಸಿ ಒಂದು ಆಕರ್ಷಕ ಶುಭಾಶಯಪತ್ರ ಬರೆದು ತಂದು, ವಾಚಿಸಿ ನಮ್ಮತಂದೆಯವರಿಗೆ ಅರ್ಪಿಸಿ “ನಿಮ್ಮ ನೆರೆಯಲ್ಲಿರುವುದು ನಮ್ಮ ಭಾಗ್ಯ” ಎಂದದ್ದು ಹೃದಯಸ್ಪರ್ಶಿಯಾಗಿತ್ತು.

ಇಂದು ಆ ಜೀವಂತ ಕ್ಷಣಗಳ ವೈಭವ ಇಲ್ಲದಿದ್ದರೂ, ನಾಡಿನ ಜನ ಜನವರಿ 26 ರಂದು ಕವಿಯ ಸವಿಸ್ಮರಣೆಯನ್ನು ಸಮಾರಂಭ ಏರ್ಪಡಿಸುವ ಮೂಲಕ ಆಚರಿಸುತ್ತಿದ್ದಾರೆ. ಆಹ್ವಾನವಿದ್ದೆಡೆ ನಾನು ಹಾಗೂ ನಮ್ಮ ಕುಟುಂಬದ ಇತರರು ಅಂಥ ಸಮಾರಂಭಗಳಲ್ಲಿ ಭಾಗವಹಿಸಿ ನಮ್ಮ ಕುಟುಂಬವರ್ಗದ ಪರವಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=31000

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

8 Comments on “ಕವಿ ನೆನಪು 29: ಕೆ ಎಸ್ ನ ಹುಟ್ಟುಹಬ್ಬದ ಸಂಭ್ರಮ-ಜನವರಿ 26

  1. ಬಹಳ ಸುಂದರ ಸರ್. ಕುಟುಂಬದ ಎಲ್ಲರೂ ಜೊತೆ ಸೇರಿ ಸಂಭ್ರಮಿಸುವ ಕ್ಷಣಗಳು ಬಹಳ ಸೊಗಸು

  2. ತಮ್ಮ ಪಿತಾಮಹಾಶಯರ ಹುಟ್ಟುಹಬ್ಬದ ಸವಿನೆನಪನ್ನು ಬಹಳ ಸೊಗಸಾಗಿ ಹಂಚಿಕೊಂಡಿರುವಿರಿ..
    ಸವಿ ಸವಿ ನೆನಪು…ಸಾವಿರ ನೆನಪು
    ಧನ್ಯವಾದಗಳು ಸರ್.

  3. ಒಳ್ಳೆಯ ವಿಚಾರಗಳುಳ್ಳ ಬರಹ. ಹೃದಯ ವಂತಿಕೆಗೆ ನಮೋ ನಮಃ.

  4. ಸುಂದರ ನೋಟ ಒಡನಾಟ ಚಂದದ ನಿರೂಪಣೆ ಸಾರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *