ಕವಿ ಕೆ ಎಸ್ ನ ನೆನಪು 28 : ಪ್ರವಾಸಗಳ ಮೋಹ
1970 ರಲ್ಲಿ ನಿವೃತ್ತಿಯಾದ ನಂತರ ನಮ್ಮ ತಂದೆಯವರಿಗೆ ಪ್ರವಾಸ ಒಂದು ಆದ್ಯತೆಯಾಗಿಬಿಟ್ಟಿತ್ತು.ಹಾಗೆಂದುಸೇ
ಕರಾವಳಿಯ ನಂಟು
ಕರಾವಳಿ ಪ್ರದೇಶಗಳಿಗೆ ಪ್ರವಾಸ ಹೋಗುವುದು ಅವರಿಗೆ ಅತ್ಯಂತ ಪ್ರಿಯವಾದವಿಷಯವಾಗಿತ್ತು. ಪೇಜಾವರ ಶ್ರೀಗಳು ,ಬನ್ನಂಜೆ ಗೋವಿಂದಾಚಾರ್ಯ, ಎಮ್ ಜಿ ಎಮ್ ಕಾಲೇಜಿನ ಕು ಶಿ ಹರಿದಾಸ ಭಟ್ಟ, ಶ್ರೀಶ ಬಲ್ಲಾಳ, ಅಂಬಲಪಾಡಿಯ ಲಕ್ಷ್ಮಿನಾರಾಯಣ ಉಪಾಧ್ಯಾಯರು ಇಂಥ ಸಾಹಿತ್ಯಾಸಕ್ತ ಅಭಿಮಾನಿಗಳನ್ನು ಆಗಾಗ್ಗೆ ಭೇಟಿಯಾಗುವುದು ನಮ್ಮ ತಂದೆಯವರಿಗೆ ಆಪ್ಯಾಯಮಾನವಾದ ವಿಷಯವಾಗಿತ್ತು. ಆ ಪ್ರದೇಶದ ಯಾವುದೇ ಆಹ್ವಾನ ಬರಲಿ ಮರುಟಪಾಲಿನಲ್ಲಿ ಸಮ್ಮತಿಯ ಉತ್ತರ ರವಾನೆಯಾಗುತ್ತಿತ್ತು. ಕೆಲವು ಬಾರಿ ನಮ್ಮ ತಾಯಿಯವರೂ ಜತೆಯಲ್ಲಿ ಹೋಗುತ್ತಿದ್ದರು.
ಬೇರೆ ವಸತಿ ಸೌಲಭ್ಯದ ಖಾತರಿ ಇರದಿದ್ದಲ್ಲಿ ಸಾಮಾನ್ಯವಾಗಿ ಅವರು ಆದಮಾರು ಮಠದ ಛತ್ರದಲ್ಲಿ ಉಳಿದುಕೊಳ್ಳುತ್ತಿದ್ದರು. ದೇವಸ್ಥಾನ ಹಾಗೂ ಇತರ ಮಠಗಳು ಅಲ್ಲಿಗೆ ಹತ್ತಿರವಾಗಿದ್ದುದೇ ಅದಕ್ಕೆ ಕಾರಣವಾಗಿತ್ತು. ಸ್ವಾರಸ್ಯದ ಸಂಗತಿಯೆಂದರೆ ಛತ್ರದ ವ್ಯವಸ್ಥಾಪಕರೇ ನಮ್ಮ ತಂದೆಯವರ ಬರುವಿಕೆಯನ್ನು ಅವರ ಕೆಲವು ಆಪ್ತರಿಗೆ ತಿಳಿಸಿಬಿಟ್ಟಿರುತ್ತಿದ್ದರು.
ಅಲ್ಲೇ ತೀರಾ ಹತ್ತಿರವಿದ್ದ ಪೇಜಾವರ ಮಠಕ್ಕೆ ಮೊದಲ ಭೇಟಿ. ಶ್ರೀಗಳು ಲಭ್ಯವಿದ್ದರೆ ಅವರೊಂದಿಗೆ ಮಾತುಕತೆ. ಅವರೂ ಅಷ್ಟೆ ”ಎಂದು ಬಂದಿರಿ ನರಸಿಂಹಸ್ವಾಮಿಗಳೆ, ಎಲ್ಲಿ ವಸತಿ,? ಬಂದ ಕೆಲಸವಾಯಿತೆ? ನಮ್ಮಿಂದ ಏನಾದರೂ ಸಹಾಯ ಬೇಕೆ? ಪ್ರಸಾದ ಸ್ವೀಕರಿಸೋಣವಾಗಲಿ.” ಎಂದೆಲ್ಲ ಆತಿಥ್ಯ ಭಾವದಿಂದ ಕೇಳುತ್ತಿದ್ದರು. ಒಮ್ಮೆ ತಮಾಷೆಗೆ “ನಾನೂ ಸ್ವಾಮಿ, ನೀವೂ ಸ್ವಾಮಿ, ನಾನು ಲೋಕಕ್ಕೆ ಸ್ವಾಮಿ, ನೀವು ಹೆಸರಿನಲ್ಲಿ ಸ್ವಾಮಿ” ಎಂದಿದ್ದರು. ಅವರ ಪರ್ಯಾಯದ ಅವಧಿಯಲ್ಲಿ ಒಂದೆರಡು ಬಾರಿಯಾದರೂ ಕಾರ್ಯಕ್ರಮ ಏರ್ಪಡಿಸಿ ಆಹ್ವಾನಿಸುತ್ತಿದ್ದರು. ”ದೇವ ನಿನ್ನ ಮಾಯೆಗಂಜಿ ನಡುಗಿ ಬಾಳೆನು” ಎಂದು ಆಸ್ತಿತ್ವವಾದಕ್ಕೆ ಸವಾಲು ಹಾಕಿದ ಕವಿ ಮಠ ಮಾನ್ಯಕ್ಕೆ ತಲೆಬಾಗುವುದೇ ? ಎಂದೆನ್ನುವವರೆಗೆ ಹೇಳುತ್ತಿದ್ದುದು “ಪೇಜಾವರ ಶ್ರೀಗಳ ವಿದ್ವಜ್ಜನಪ್ರೀತಿ ಅನನ್ಯ“ ಎಂದು.
ಛತ್ರದಲ್ಲಿ ಭೇಟಿಯಾಗಲು ಸಾಧ್ಯವಾಗದ ಒಬ್ಬಿಬ್ಬರ ಮನೆಗೆ ಭೇಟಿ ಇತ್ತು, ಸಾಯಂಕಾಲದ ಸಭೆ ಕಾರ್ಯಕ್ರಮ ಮುಗಿಸಿ,ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ವಾಪಸಾಗುತ್ತಿದ್ದರು. ಬಂದ ಮೇಲೆ ಭೇಟಿಯ ನೆನಪುಗಳ ವರದಿಯೇ ಆ ದಿನವೆಲ್ಲ; ಬಂದವರ ಬಳಿಯೆಲ್ಲ. ಎಮ್ ಜಿ ಎಮ್ ಕಾಲೇಜಿನ ಕು ಶಿ ಹರಿದಾಸಭಟ್ಟರ ಆಹ್ವಾನದ ಮೇಲೆ ಕಾಲೇಜಿನಲ್ಲಿ ನಮ್ಮ ತಂದೆಯವರು ತಮ್ಮ ಕಾವ್ಯಗುರು ವಿ ಸೀ ಅವರ ಬಗ್ಗೆ ಒಂದು ಉಪನ್ಯಾಸ ನೀಡಿದ್ದರು. ಅದು ಪುಸ್ತಕ ರೂಪದಲ್ಲೂ ಹೊರಬಂತು. ನನಗೆ ತಿಳಿದ ಮಟ್ಟಿಗೆ ಅದು ನಮ್ಮ ತಂದೆಯವರು ಮಾಡಿದ್ದ ದೀರ್ಘವಾದ ಭಾಷಣ. ತಾವು ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಇಷ್ಟೊಂದು ಉದ್ದದ ಭಾಷಣ ಮಾಡಿರಲಿಲ್ಲ.
ಮುಂದೊಮ್ಮೆ ಕತೆಗಾರ್ತಿ ವೈದೇಹಿಯವರ ಅಣ್ಣ ಎ ಎಸ್ ಎನ್ ಹೆಬ್ಬಾರ್ ಅವರ ಆಹ್ವಾನದ ಮೇರೆಗೆ ಕುಂದಾಪುರದ ಪ್ರವಾಸವನ್ನೂ ಕೈಗೊಂಡರು. ಶಿವರಾಮ ಕಾರಂತರ ಅಣ್ಣ ಕೋಲ ಕಾರಂತರೂ ಆಗ ನಮ್ಮ ತಂದೆಯವರಿಗೆ ಪರಿಚಿತರಾದರು. ಮಂಗಳೂರು, ಪುತ್ತೂರು ಇಂಥ ಊರುಗಳಿಗೆ ಪ್ರವಾಸವಿದ್ದರೂ ಉಡುಪಿಗೆ ಭೇಟಿ ನೀಡುವುದನ್ನು ಎಂದೂ ತಪ್ಪಿಸುತ್ತಿರಲಿಲ್ಲ. ಒಟ್ಟಾರೆ ನಮ್ಮ ತಂದೆಯವರಿಗೆ ಕರಾವಳಿ ಪ್ರವಾಸ ವಿಶೇಷವಾಗಿ ಉಡುಪಿಯ ಪ್ರವಾಸ “ಮರೆತೇನೆಂದರೂ ಮರೆಯಲಿ ಹ್ಯಾಂಗ ” ಎಂಬಂತಿತ್ತು.
(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=30859
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ಸೂಪರ್ ಸರ್. ಮಲ್ಲಿಗೆ ಕವಿಯ ಬಗ್ಗೆ ಎಷ್ಟು ತಿಳಿದುಕೊಂಡರೂ ಮತ್ತೂ ಕುತೂಹಲ ತಣಿಯದು.
ಮಹಾನ್ ಕವಿ ಕೆ.ಎಸ್. ಎನ್ ಅವರಿಗೆ ನಮ್ಮ ಕರಾವಳಿಯ ನಂಟು ಕೂಡಾ ಇದ್ದುದು ತಿಳಿದು ಬಹಳ ಹೆಮ್ಮೆ, ಅಭಿಮಾನ ಎನಿಸಿತು . ಸೊಗಸಾದ ನಿರೂಪಣೆ, ಸಹಜ ಪ್ರಸ್ತುತಿಯ ನೆಚ್ಚಿನ ಲೇಖನಮಾಲೆ..ಧನ್ಯವಾದಗಳು ಸರ್