ಗುಜರಾತ್ ಮೆ ಗುಜಾರಿಯೇ…..ಹೆಜ್ಜೆ 3 : ಸಬರಮತಿ ಆಶ್ರಮ
ಪ್ರಯಾಣ ಮುಂದುವರಿದು, ಸಬರಮತಿ ನದಿ ತೀರದಲ್ಲಿರುವ ಗಾಂಧೀಜಿಯವರು 1915 ರಲ್ಲಿ ಸ್ಥಾಪಿಸಿದ ‘ಸತ್ಯಾಗ್ರಹ ಆಶ್ರಮ’ಕ್ಕೆ ತಲಪಿದೆವು. 1930 ರ ವರೆಗೆ, ಈ ಆಶ್ರಮದಲ್ಲಿ ಸ್ವಾತಂತ್ಯ್ರ ಹೋರಾಟದ ವಿವಿಧ ಚಟುವಟಿಕೆಗಳು ರೂಪಿಸಲ್ಪಟ್ಟವು. ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿ ಬಂದ ಗಾಂಧೀಜಿಯವರು, ಅಂದಿನ ಭಾರತ ಸ್ಥಿತಿ-ಗತಿಗಳನ್ನು ಅರಿತುಕೊಳ್ಳಲು ಭಾರತ ಪ್ರವಾಸ ಕೈಗೊಂಡರು. ಬ್ರಿಟಿಷರ ಹಿಡಿತದಲ್ಲಿದ್ದ ಬಾರತವನ್ನು ಸ್ವಾತಂತ್ರ್ಯಗೊಳಿಸಲು ಹೋರಾಡಬೇಕು, ಅದಕ್ಕಿಂತ ಮೊದಲು ಸ್ವಾತಂತ್ರ್ಯದ ಕನಸನ್ನು ಬಿತ್ತಲು, ಹೋರಾಟಗಾರರನ್ನು ಒಗ್ಗೂಡಿಸಲು, ತರಬೇತಿಗೊಳಿಸಲು ಒಂದು ಸ್ಥಳ ಬೇಕೆಂಬುದನ್ನು ಮನಗಂಡ ಗಾಂಧೀಜಿ ಅವರು, ಅಹಮದಾಬಾದಿನ ಸಬರಮತಿ ನದಿತೀರದ ಸ್ಮಶಾನದ ಪಕ್ಕದ ಜಾಗವನ್ನು ಆರಿಸಿಕೊಂಡರು.
ಗಾಂಧೀಜಿಯವರು ಸ್ಮಶಾನದಂತಿದ್ದ 8 ಎಕರೆ ಜಾಗವನ್ನು ಖರೀದಿಸಿ, ತನ್ನ ಸಹವರ್ತಿಗಳೊಂದಿಗೆ ಅಲ್ಲಿ ಗಿಡ ಮರಗಳನ್ನು ಬೆಳೆಸಿ, ಸುಂದರವಾದ ಆಶ್ರಮವನ್ನು ಕಟ್ಟಿದರು. ಮುಂದೆ ನೂರಾರು ಸ್ವಾತಂತ್ಯ್ರ ಹೋರಾಟಗಾರರಿಗೆ ಇದೇ ಆಶ್ರಯ ತಾಣವಾಯಿತು. 1930ರ ಉಪ್ಪಿನ ಸತ್ಯಾಗ್ರಹದ ನಂತರ, ಈ ಆಶ್ರಮದಲ್ಲಿ ಚಟುವಟಿಕೆಗಳು ನಿಂತು ಹೋದುವು. ಉಪ್ಪಿನ ಸತ್ಯಾಗ್ರಹಕ್ಕೆಂದು, ಅಹಮದಾಬಾದಿನಿಂದ ಸುಮಾರು 240 ಕಿ.ಮೀ.ದೂರದ ಸೂರತ್ ಬಳಿಯ ದಂಡಿಗೆ ಪಾದಯಾತ್ರೆ ಕೈಗೊಂಡ ಗಾಂಧೀಜಿಯವರು, ದೇಶಕ್ಕೆಸ್ವಾತಂತ್ರ್ಯ ಬರುವವರೆಗೂ ಈ ಆಶ್ರಮಕ್ಕೆ ಕಾಲಿಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದರು. ಆಗಸ್ತ್ 15, 1947 ರಂದು ಸ್ವಾತಂತ್ರ್ಯ ಲಭಿಸಿದರೂ, ಗಾಂಧೀಜಿಯವರು ಆಶ್ರಮಕ್ಕೆ ಪುನ : ಬರಲಿಲ್ಲ .
ಗಾಂಧೀಜಿ ಆಶ್ರಮ ಬಿಟ್ಟ ನಂತರವೂ ಕೆಲ ಆಶ್ರಮವಾಸಿಗಳಿಂದ ನಡೆದುಕೊಂಡು ಬಂದಿದ್ದ ಈ ಆಶ್ರಮವನ್ನು 1933 ರಲ್ಲಿ ಗಾಂಧೀಜಿಯವರೇ ಹರಿಜನ ಟ್ರಸ್ಟ್ ಒಂದಕ್ಕೆ ದಾನವಾಗಿ ನೀಡಿದ್ದರು. 1948 ರಲ್ಲಿ ಅವರ ಮರಣಾನಂತರ ಅವರ ಬದುಕಿನ ದಾಖಲೆ ಮತ್ತು ವಸ್ತುಗಳನ್ನು ಇಲ್ಲಿರಿಸಿ ಆಶ್ರಮವನ್ನು ಸಾರ್ವಜನಿಕ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ, ಗುಜರಾತ್ ಸರಕಾರದ ಮೇಲ್ವಿಚಾರಣೆಯಲ್ಲಿ ಕೇಂದ್ರ ಸರಕಾರ ನೋಡಿಕೊಳ್ಳುತ್ತಿದೆ. ಪ್ರಸ್ತುತ, ಆಶ್ರಮವನ್ನು ಪ್ರವೇಶಿಸುತ್ತಿದ್ದಂತೆ ಎಡಭಾಗದ ಕುಟೀರದಲ್ಲಿ ಗಾಂಧೀಜಿಯವರ ಛಾಯಾ ಚಿತ್ರಗಳು, ಅವರು ಬರೆದ ಪತ್ರಗಳು, ಅವರ ಚಿಂತನೆಗಳು, ಗಾಂಧಿಯವರ ಬಗ್ಗೆ ಇತರರು ನುಡಿದ ಮಾತುಗಳು ಇತ್ಯಾದಿಗಳ ಪ್ರಸ್ತುತಿ ಇವೆ. ವಿವಿಧ ವಿನ್ಯಾಸಗಳ ಚರಕಗಳು ಮತ್ತು ಗುಡಿ ಕೈಗಾರಿಕೆಗಳ ವಸ್ತುಗಳನ್ನು ಸಂಗ್ರಹಾಲಯವಿದೆ. ಗಾಂಧೀಜಿಯವರು ವಾಸವಾಗಿದ್ದ ಹೃದಯಕುಂಜ ನಿವಾಸದಲ್ಲಿ ಅವರು ಉಪಯೋಗಿಸುತ್ತಿದ್ದ ಚರಕ, ಮೇಜು ಮೊದಲಾದ ವಸ್ತುಗಳನ್ನು ಇಡಲಾಗಿದೆ. ಪಕ್ಕದಲ್ಲಿಯೇ ಕಸ್ತೂರಿಬಾ ರವರ ಕೊಠಡಿ, ಗಾಂಧೀಜಿಯವರ ಮಲಗುವ ಕೋಣೆ, ಅಡುಗೆ ಮನೆ ಇವೆ. ಹೃದಯಕುಂಜ ನಿವಾಸದ ಮುಂಭಾಗಕ್ಕೆ ವಿನೋಬಾರವರು ವಾಸವಾಗಿದ್ದ ಪುಟ್ಟ ಮನೆ, ಬಲಭಾಗಕ್ಕೆ ಅತಿಥಿಗಳ ನಿವಾಸಗಳಿವೆ.
ಇಲ್ಲಿ ಪ್ರತಿ ದಿನ ಸಂಜೆಯ ನಂತರ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟನೆಗಳನ್ನು ನಿರೂಪಿಸುವ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಇದೆಯಂತೆ. ನಾವು ಸಂಜೆಯ ಮೊದಲೇ ಅಲ್ಲಿಂದ ಹೊರಟ ಕಾರಣ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ನೋಡಲಿಲ್ಲ.
ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=30507
–ಹೇಮಮಾಲಾ.ಬಿ.
(ಮುಂದುವರಿಯುವುದು)
ಲೇಖನದ ಜೊತೆ ಫೋಟೋಗಳು ಸುಂದರವಾಗಿವೆ.
ಧನ್ಯವಾದಗಳು ನಯನ…
ಪ್ರವಾಸ ಮಾಡುವುದು ಒಂದು ಹವ್ಯಾಸ ಆದರೆ ನಾವು ನೋಡಿ ಆನಂದಿಸಿದನ್ನು ಇನ್ನೊಬ್ಬರಿಗೆ ಹೇಳುವುದು ಎಲ್ಲರಿಗೂ ಬರುವುದಿಲ್ಲ.ಆ ಕಲೆ ನಿಮಗೆ ಸಿದ್ಧಿಸಿದೆ ಹೇಮಾರವರೇ, ನಿಮ್ಮ ಪ್ರವಾಸದ ಕಥನ ಚೆನ್ನಾಗಿ ಮೂಡಿ ಬರುತ್ತಿದೆ.ಅದಕ್ಕೆ ಪೂರಕವಾದ ಚಿತ್ರಗಳು ಮುದಕೊಡುವಂತಿವೆ.ಅಭಿನಂದನೆಗಳು.
ಧನ್ಯವಾದಗಳು ಮೇಡಂ
ಬರಹವನ್ನು ಖುಷಿಯಿಂದಲೂ ಸ್ವಲ್ಪ ಅಸೂಯೆಯಿಂದಲೂ ಒದಿದೆ.ಸ್ವಲ್ಪ ಅಸೂಯೆ ಯಾಕೆಂದು ಗೊತ್ತಲ್ಲ?. ಒಂದು ತಿದ್ದುಪಡಿಯನ್ನು ಸೂಚಿಸಬಯಸುತ್ತೇನೆ.ಸ್ವಾತಂತ್ರ್ಯ ಲಭಿಸಿದ ಇಸವಿಯ ನಮೂದು 1945 ಎಂದು ತಪ್ಪಾಗಿ ಬಂದು ಬಿಟ್ಟಿದೆ. ಅದು ವಿಷಯದ ಅರಿವಿಲ್ಲದೆ ಆದ ತಪ್ಪಲ್ಲವೆಂದು ನಾನು ಬಲ್ಲೆ.ಟೈಪ್ ಮಾಡುವಾಗ ಆದ ಪ್ರಮಾದವಾಗಿರಬಹುದು.
ಹೌದು ಮೇಡಂ..ಇಸವಿ ತಪ್ಪಾಗಿ ಟೈಪ್ ಆಗಿದೆ. ಗಮನಿಸಿ ತಿಳಿಸಿದುದಕ್ಕಾಗಿ ಅನಂತ ಧನ್ಯವಾದಗಳು. ಈಗ ಸರಿಪಡಿಸಿದೆ.
ಹಲವಾರು ವರ್ಷಗಳ ಹಿಂದೆ ಸಾಬರಮತಿಗೆ ಹೋದ ನೆನಪು ಮರುಕಳಿಸಿತು. ಪೂರಕ ಚಿತ್ರಗಳೊಂದಿಗಿನ ಸೊಗಸಾದ ಪ್ರವಾಸ ಕಥನ ಖುಷಿ ಕೊಟ್ಟಿತು.
ಧನ್ಯವಾದಗಳು..
ಪ್ರವಾಸಕಥನ,ನಿರೂಪಣೆ,ಭಾವಚಿತ್ರಗಳು ನೋಡಿ,ಓದಿ ಕುಶಿ ಆಯಿತು.ಧನ್ಯವಾದಗಳು
ಧನ್ಯವಾದಗಳು