ಬಿದಿರಕ್ಕಿಯ ಪಾಯಸ
‘ಕಾಡಿನಲ್ಲಿ ಬಿದಿರಕ್ಕಿ ಬಿಟ್ಟಿದೆಯೆಂದರೆ ಇಲಿಗಳ ಕಾಟ ಹೆಚ್ಚುತ್ತದೆ, ಮುಂದಿನ ವರ್ಷ ಬರಗಾಲ’ ಎಂಬ ಮಾತನ್ನು ಯಾವತ್ತೋ ಕೇಳಿದ್ದ ನೆನಪು.
“ಹಿಂದೊಮ್ಮೆ ಬರಗಾಲ ಬಂದು ದವಸ ಧಾನ್ಯ ಇಲ್ಲದಿದ್ದಾಗ, ಬಿದಿರಕ್ಕಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದೆವು. ಎರಡನೇ ಮಹಾಯುದ್ಧದ ಕಾಲದಲ್ಲಿ ನಾವು ಬೆಳೆಸಿದ ಭತ್ತವನ್ನು ಬ್ರಿಟಿಷರ ಕೈ ಸೇರದಂತೆ ಮಾಡಲು ಪಟ್ಟ ಪರಿಪಾಡಲು ಅಷ್ಟಿಷ್ಟಲ್ಲ. ಅಕ್ಕಿಯನ್ನು ಅಡಗಿಸಿಟ್ಟಿದ್ದೆವು, ಮನೆಯಲ್ಲಿ ಮದುವೆ ಕಾರ್ಯಕ್ರಮವಿದೆ…ಪುಟ್ಟ ಮಕ್ಕಳಿದ್ದಾರೆ .. ಹೀಗೆಲ್ಲಾ ಹೇಳಿ ನಾವು ಬೆಳೆದ ಅಕ್ಕಿಯನ್ನು ಉಳಿಸಿಕೊಳ್ಳಲು ಅಂಗಲಾಚಿದ್ದೆವು. ಜನಸಾಮಾನ್ಯರ ಕಷ್ಟ ಹೇಳತೀರದಾಗಿತ್ತು. ಬಿದಿರಕ್ಕಿಯನ್ನು ಉಂಡು, ಗಡ್ಡೆ -ಗೆಣಸು- ಹುರುಳಿಕಾಳು ತಿಂದು, ಹೇಗೋ ಕಷ್ಟಪಟ್ಟು ಮಕ್ಕಳ ಹೊಟ್ಟೆ ತುಂಬಿಸಲು ಪರದಾಡಿದ್ದೆವು” ಎಂದು ನಮ್ಮ ಮುತ್ತಜ್ಜಿ ಹೇಳುತಿದ್ದುದು ನೆನಪಿದೆ. ಆ ದಿನಗಳಲ್ಲಿ, ಭತ್ತ ಬೆಳೆದವರೆಲ್ಲರು ಕಡ್ಡಾಯವಾಗಿ ತಮ್ಮ ಬೆಳೆಯನ್ನು ಸೈನ್ಯಕ್ಕೋಸ್ಕರ ಕೊಡಬೇಕಿತ್ತಂತೆ.
ಎರಡು ವರುಷಗಳ ಹಿಂದೆ ಮಡಿಕೇರಿ ಜಿಲ್ಲೆಯ ಇರ್ಪು ಫಾಲ್ಸ್ ಗೆ ಹೋಗಿದ್ದಾಗ ಅಲ್ಲಿ ಅಂಗಡಿಯೊಂದರಲ್ಲಿ ಬಿದಿರಕ್ಕಿ (Bamboo rice) ಲಭ್ಯವಿತ್ತು. ಮಾಮೂಲಿ ಅಕ್ಕಿಯಂತೆಯೇ ಕಾಣಿಸುವ ಬಿದಿರಕ್ಕಿ ಕಂದು ಬಣ್ಣ ಹೊಂದಿತ್ತು. ಅಂಗಡಿಯಾತನ ಪ್ರಕಾರ ಕಾಡಿನಲ್ಲಿ 40- 50 ವರ್ಷಕೊಮ್ಮೆ ಬಿದಿರು ಹೂ ಬಿಟ್ಟು ಈ ಬೀಜಗಳಾಗುತ್ತವೆ. ಅಲ್ಲಿಗೆ ಆ ಬಿದಿರಿನ ಆಯುಸ್ಸು ಮುಗಿಯಿತು ಎಂದರ್ಥ. ಆ ಸಮಯದಲ್ಲಿ ಬಿದಿರಿನ ಮರಗಳ ಸುತ್ತ ಗುಡಿಸಿ, ಬಟ್ಟೆ ಹಾಸಿ , ಮರದಿಂದ ಬೀಳುವ ಬೀಜಗಳನ್ನು ಸಂಗ್ರಹಿಸುತ್ತಾರೆ. ಇದೇ ಬಿದಿರಕ್ಕಿ.
ಇದನ್ನು ಬೇಯಿಸಿ ಅಕ್ಕಿಯಿಂದ ತಯಾರಿಸುವ ಎಲ್ಲಾ ತಿಂಡಿಗಳನ್ನು ಮಾಡಬಹುದು. ಅನ್ನವಾಗಿ ಉಣ್ಣಬಹುದು, ಹಿಟ್ಟು ತಯಾರಿಸಿ ಅಕ್ಕಿಹಿಟ್ಟಿನಿಂದ ತಯಾರಿಸುವ ದೋಸೆ, ರೊಟ್ಟಿಗಳನ್ನೂ ಮಾಡಬಹುದು. ಬಿದಿರಕ್ಕಿಯ ಪಾಯಸ ಚೆನ್ನಾಗಿರುತ್ತದೆ ಅಂದರು.
ಬಿದಿರಕ್ಕಿ ಪಾಯಸದ ರುಚಿ ಮತ್ತು ಬಣ್ಣ ಗೋಧಿ ತರಿಯ ಪಾಯಸವನ್ನು ಹೋಲುತ್ತದೆ.
– ಹೇಮಮಾಲಾ.ಬಿ