ಆಧುನಿಕತೆಯೂ ಅನಾರೋಗ್ಯಕ್ಕೆ ಆಹ್ವಾನವೂ

Share Button
ಇತ್ತೀಚಿನ ದಿನಮಾನಗಳಲ್ಲಿ ಬರೀ ನಮ್ಮ ಉಡುಗೆ ತೊಡುಗೆಯನ್ನಷ್ಟೆ ನಾವು ಬದಲಾಯಿಸುತ್ತಿಲ್ಲ. ಆಹಾರವನ್ನು, ಆಚಾರ ವಿಚಾರವನ್ನೂ  ಬದಲಾಯಿಸುತ್ತಿದ್ದೇವೆ. ದಿನ ಕಳೆದಂತೆ ಆಧುನಿಕತೆಗೆ ಮಾರು ಹೋಗಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನೇ ಮರೆತಿದ್ದೇವೆ.
.
ಮೊದಲೆಲ್ಲ ಬೆಳಿಗ್ಗೆ ರಾಜನಂತೆ ಊಟ ಮಾಡಿ ದಿನಪೂರ್ತಿ ಕಷ್ಟ ಪಟ್ಟು ದುಡಿದು ಬಂದು ರಾತ್ರಿ ಚೆನ್ನಾಗಿ ನದ್ರೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರು. ಊಟದಲ್ಲಿ ರೊಟ್ಟಿ, ಚಪಾತಿ, ವಿಧ ವಿಧ ಆರೋಗ್ಯಕರ ತರಕಾರಿಗಳು, ವಿವಿಧ ಸೊಪ್ಪುಗಳೊಂದಿಗೆ ಹಸಿ ತರಕಾರಿಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದರು. ಇದನ್ನು ತಯಾರಿಸಲು ಕಂಚು ತಾಮ್ರ, ಸ್ಟೀಲ್ ಪಾತ್ರೆಯನ್ನೇ ಬಳಸುತ್ತಿದ್ದರು. ಇದರಿಂದಾಗಿ ಸಂಪೂರ್ಣ ವ್ಯಾಯಾಮದೊಂದಿಗೆ ಆರೋಗ್ಯವಾಗಿರುತ್ತಿದ್ದರು.
.
ಇವತ್ತಿನ ದಿನಮಾನಗಳಲ್ಲಿ ನಾವುಗಳು ಮಾಡುತ್ತಿರುವುದಾದರೂ ಏನು, ದಿನಬೆಳಗಾದರೆ ಅಡುಗೆ ಮಾಡಲು ಬೇಸರ. ಕಾರಣ ರಾತ್ರಿ ಬಹಳ ಹೊತ್ತಿನವರೆಗೂ ಕೈಯಲ್ಲಿ ಮೊಬೈಲ್, ಇದರಿಂದಾಗಿ ನಿದ್ದೆಯನ್ನೇ ಮರೆತು ರಾತ್ರಿ ತುಂಬಾ ಹೊತ್ತಿನ ನಂತರ ಮಲಗಿ, ಸಂಪೂರ್ಣ ನಿದ್ದೆಯಾಗದೆ, ಬೆಳಿಗ್ಗೆ  ಎದ್ದಾಗ ಉಲ್ಲಾಸ ಉತ್ಸಾಹ ಕುಂದಿರುತ್ತದೆ. ಕಾರಣ  ದೇಹದ ದಣಿವಿಗೆ ಸಂಪೂರ್ಣ ಒಳ್ಳೆಯ ನಿದ್ದೆ ಸಿಕ್ಕಿರೋದಿಲ್ಲ. ಕೆಲಸಕ್ಕೆ ಹೋಗಬೇಕು ಮಕ್ಕಳಿಗೆ, ಪತಿಗೆ, ಲಂಚ್  ಬಾಕ್ಸ್ ತಯಾರಿಸಬೇಕು. ಆಗ ದಿಢೀರನೆ ಅಲ್ಪೋಪಹಾರಕ್ಕೆ ಶರಣಾಗುತ್ತೇವೆ. ಬ್ರೆಡ್ಡು ಜಾಮ್, ಅವಲಕ್ಕಿ, ಉಪ್ಪಿಟ್ಟು, ಚಿತ್ರಾನ್ನ, ಪುಳಿಯೊಗರೆ ಇಲ್ಲಾಂದರೆ ಅನ್ನ ಬೇಳೆ. ಇದನ್ನೇ ತಿಂದು ಮಧ್ಯಾಹ್ನಕ್ಕೂ  ಅದೂ  ಸೇರದೆ ಅನಿವಾರ್ಯವಾಗಿ ಸ್ವಲ್ಪ ತಿನ್ನಬೇಕು. ಅದೂ ಹೋಗಲಿ ಮನೆಗೆ ಬಂದ ಮೇಲೆ ಒಂದೊಳ್ಳೆ ಅಡುಗೆ ಮಾಡುತ್ತಾರಾ ಇಲ್ಲ. ಮಕ್ಕಳು ಅಪೇಕ್ಷೆ ಪಟ್ಟರೆಂದು ಗೋಬಿ ಮಂಚೂರಿ, ನೂಡಲ್ಸ್, ಪಾನಿ ಪೂರಿ, ಕಚೋರಿ ಪಿಜ್ಜಾ ಬರ್ಗರ್ ಗೆ ಮರುಳಾಗಿ ತಿಂದು ಬಂದು ರಾತ್ರಿಗೆ ಹಸಿವಿಲ್ಲವೆಂದು ಮತ್ತೆ ಅನ್ನಕ್ಕೆ ಶರಣಾಗಿ ಕೈಗೆ ಮೊಬೈಲ್ ಹಿಡಿಯುತ್ತಾರೆ.
.
ಈ ರೀತಿ ಆದಾಗ ನಮಗೆ ಉತ್ತಮವಾದ ಆರೋಗ್ಯ ಸಿಗುವುದು ಹೇಗೆ. ಮನೆಯನ್ನು ಒಪ್ಪ ಓರಣ ಮಾಡಲು, ಮನೆಗೆ ಬೇಕಾದ ಆಹಾರ ಪದಾರ್ಥಗಳನ್ನು ತರಲು, ಬೆಳಿಗ್ಗೆ ಬೇಗನೆ ಎದ್ದು ವಾಯು ವಿಹಾರಕ್ಕೆ ಹೋಗಲು, ಮಕ್ಕಳೊಂದಿಗೆ ಕುಳಿತು ಮಾತನಾಡಲು, ಸಮಯವಿಲ್ಲ. ಆದರೆ ಮನೆ ಮುಂದೆ ವಿಧ ವಿಧವಾದ ಬಣ್ಣದ ವಿವಿಧತೆಯ ಆಕಾರದ ಪ್ಲಾಸ್ಟಿಕ್ ಪಾತ್ರೆಯನ್ನು ಕೊಳ್ಳುತ್ತೇವೆ. ಇದರ ಬಳಕೆಯಿಂದ  ಆರೋಗ್ಯ ಹಾಳಾಗುವುದರ ಜೊತೆಗೆ ಪರಿಸರವನ್ನೂ ಹಾಳುಮಾಡುತ್ತೇವೆ. ಇದೆ  ರೀತಿಯಾದರೆ ನಮ್ಮ ಪೂರ್ವಿಕರಂತೆ ನಾವು ಆರೋಗ್ಯವಾಗಿರಲು ಸಾಧ್ಯವಿಲ್ಲ.

ನಮ್ಮ ಪೂರ್ವಿಕರು ನಸುಕಿನಲ್ಲಿ ಎದ್ದು ಪುರುಷರು ವಾಯುವಿಹಾರಕ್ಕೆ ಹೊರ ಹೋಗಿ ಬಂದು, ಪತ್ರಿಕೆಯನ್ನು ಓದುತ್ತಾ ಮನೆಯವರಲ್ಲಿ ಹೇಳುತ್ತಾ ದಿನದ ಕಾಯಕದತ್ತ ಹೆಜ್ಜೆ ಹಾಕುತ್ತಿದ್ದರು. ಮನೆಗೆ ಬೇಕಾದ ತರಕಾರಿ ಸೊಪ್ಪುಗಳನ್ನೆಲ್ಲ ತಂದು ಮನೆಯವರೊಂದಿಗೆ ಹರಟೆ ಹೊಡೆಯುತ್ತಾ ತರಕಾರಿ ಬಿಡಿಸುವತ್ತ ಸಹಕರಿಸುತ್ತಿದ್ದರು. ತರಕಾರಿಯೂ ಕೂಡ ಸಾವಯವ ಗೊಬ್ಬರ ಹಾಕಿ ಬೆಳೆಸಿದಂತಹ ತರಕಾರಿಯೇ ಸಿಗುತ್ತಿತ್ತು. ಮಹಿಳೆಯರು ಮನೆಯಲ್ಲೇ  ಓಡಾಡಿಕೊಂಡು ಎಲ್ಲ ಕೆಲಸವನ್ನು ಮಾಡುತ್ತಾ, ಒಳ್ಳೆಯ ಸತ್ವಯುತವಾದ  ಊಟವನ್ನು ಸವಿಯುತ್ತಿದ್ದರು. ಜೊತೆಗೆ ಸಂಜೆ ದೇವರಿಗೆ ದೀಪ ಮುಡಿಸಿ ಮಕ್ಕಳೊಂದಿಗೆ ಹಿರಿಯರೊಂದಿಗೆ ಕುಳಿತು ಕುಶಲೋಪರಿಯನ್ನು ಮಾತನಾಡುತ್ತಾ ನಗುನಗುತ್ತಾ ಕಾಲ ಕಳೆಯುತ್ತಿದ್ದರು. ದೂರದೂರಲ್ಲಿದ್ದವರೊಂದಿಗೆ ಪತ್ರದ ಮೂಲಕ ತಮ್ಮ ಭಾವನೆಗಳೊಂದಿಗೆ ಕುಶಲೋಪರಿಯನ್ನು ವಿಚಾರಿಸುತ್ತಿದ್ದರು. ಗಟ್ಟಿಮುಟ್ಟಿ ಊಟ, ಆರೋಗ್ಯಪೂರ್ಣ ಒಡನಾಟ, ಸುಖ ಸಂತೋಷ, ಇದ್ದುದರಲ್ಲಿಯೇ ನೆಮ್ಮದಿ ಕಾಣುತ್ತಾ ಬದುಕುತ್ತಿದ್ದರು. ಇದರಿಂದಾಗಿ ಅವರು ಹೆಚ್ಚು  ಕಾಲ ಬದುಕುತ್ತಿದ್ದರು.
.
ಈಗ ಒಬ್ಬರೊಗೊಬ್ಬರು  ಸಂಪರ್ಕವೂ ಇಲ್ಲ, ಒಳ್ಳೆಯ ಪೋಷಕಾಂಶಯುಕ್ತ ಆಹಾರವೂ ಇಲ್ಲ. ಮನೆಯಲ್ಲೇ ಎಲ್ಲರು  ಇದ್ದರೂ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್. ಎಲ್ಲರೂ ಅದರಲ್ಲೇ  ಮುಳಿಗಿರುತ್ತಾರೆ. ಒಬ್ಬರಿಗೊಬ್ಬರು ಮಾತನಾಡುವುದೇ ಅಪರೂಪವಾಗಿದೆ. ಇದರಿಂದಾಗಿ ಮಾನಸಿಕ ತುಮುಲಗಳನ್ನು, ಸಂತೋಷವನ್ನು ಹಂಚಿಕೊಳ್ಳುವುದಕ್ಕೆ ಆಸ್ಪದವೇ ಇಲ್ಲ.
.
ಇಷ್ಟೆ ಅಲ್ಲ  ಆಧುನಿಕತೆಯ ಹೆಸರಿನಲ್ಲಿ ನಮ್ಮ ಸಂಸ್ಕೃತಿಯ ಸೊಗಡನ್ನೇ ಮರೆಯುತ್ತಿದ್ದೇವೆ. ನಮ್ಮ ಸೊಗಸಾದ ಕನ್ನಡ ಭಾಷೆಗೆ ಒತ್ತು ಕೊಡದೆ ಇಂಗ್ಲೀಷ್ ಬಳಕೆ ಹೆಚ್ಚಾಗುತ್ತಿದೆ. ಕೇಳಿದರೆ ಹಳೆಕಾಲದವರ ಹಾಗೆ ಆಡಬೇಡಿ ಇದು ಆಧುನಿಕ ಯುಗ ದೇಶ ಬದಲಾಗುತ್ತಿದೆ. ನಾವೂ ಬದಲಾಗಬೇಕೆಂದು ತಿರುಗುತ್ತರ. ನೋಡಿ….. ಇಂಗ್ಲಿಷ್ ಭಾಷೆಗೆ, ವಿದೇಶಿ ಆಹಾರ, ವಸ್ತುಗಳು, ಉಡುಗೆ ತೊಡುಗೆ ಎಲ್ಲದರಲ್ಲೂ ಬದಲಾವಣೆ. ಇದು ನಮ್ಮ ನಮ್ಮ ಅಧಪತನಕ್ಕೆ ಕಾರಣವಾಗುತ್ತಿದೆ ಎಂಬುದನ್ನೇ ಮರೆತು ಓಡುತ್ತಿದ್ದೇವೆ.
.
ಮೊದಲಾಗಿದ್ದರೆ ಟಿ. ವಿ ಮೊಬೈಲ್ ಇರಲಿಲ್ಲ. ಆಕಾಶವಾಣಿ ಮೂಲಕ ದೇಶದ ವಿಚಾರ ಕೇಳುತ್ತಾ, ಸುಂದರ ಸುಮಧುರ ಗೀತೆಗಳನ್ನು ಆಲಿಸುತ್ರಿದ್ದರು. ಅವತ್ತಿನ ಅಡುಗೆ ಅಂದೆ ಮಾಡಿ ಊಟ ಮಾಡುತ್ತಿದ್ದರು. ಈಗ ಇದೆಲ್ಲ ಇಲ್ಲ ಬಿಡಿ. ಟಿ ವಿ, ಮೊಬೈಲ್, ಫ್ರಿಜ್,   ವಾಷಿಂಗ್ ಮಷೀನ್, ಮಿಕ್ಸಿ ಅಬ್ಬಬ್ಬಬ್ಬಾ ಒಂದೆ ಎರಡೆ ಬದಲಾವಣೆ. ಇವುಗಳಿದ್ದರೇನೆ ಸಮಾಜದಲ್ಲಿ ಬೆಲೆ. ಇಲ್ಲಾಂದರೆ ಅಯ್ಯೊ ಅವರ ಮನೆಯಲ್ಲಿ ಒಂದು ಮಿಕ್ಸಿ ಕೂಡ ಇಲ್ಲಾರಿ, ಹಳೆಯ ಕಾಲದವರು. ಅಂದು ಆಡಿಕೊಳ್ಳುತ್ತಾರೆ. ಅವರಿಗೇನು ಗೊತ್ತು ಒರಳಿನಲ್ಲಿ ರುಬ್ಬಿದ, ಕುಟ್ಟಿದ ಆಹಾರ, ಆರೋಗ್ಯತೆಯೊಂದಿಗೆ ರುಚಿಕಟ್ಟಾಗಿರುತ್ತದೆಂದು. ಜೊತೆಗೆ ದೇಹಕ್ಕೆ ವ್ಯಾಯಾಮ. ಅದು ಬಿಡಿ ಒಂದು ವೇಳೆ ವಾಷಿಂಗ್ ಮಷೀನ್ ಇಲ್ಲದಿದ್ದರೆ, ಅಯ್ಯೊ ಏನ್ ಕೇಳ್ತೀರಾ ಕಣ್ರೀ ಅವರ ಮನೆಯಲ್ಲಿ ವಾಷಿಂಗ್ ಮಷೀನೇ ಇಲ್ಲ ಕೈಯಿಂದಲೇ ಬಟ್ಟೆ ತೊಳೆಯುತ್ತಾರೆ ಪಾಪ. ಎಂಬ ನುಡಿ ಇವರ ಕಿವಿಗೆ ಬಿದ್ದರೆ ಸಾಕು, ಪತಿಗೆ ಕಿರಿಕಿರಿ ಮಾಡಿ ತರಿಸೇ ಬಿಡುತ್ತಾರೆ. ಇಲ್ಲಿ ಯಾರಿಗೂ ಗಮನವಿಲ್ಲ. ಬಟ್ಟೆಯನ್ನು  ತೊಳೆಯೋದರಿಂದ ದೇಹಕ್ಕೆ ಒಳ್ಳೆಯ ವ್ಯಾಯಾಮ, ಜೊತೆಗೆ ಬಟ್ಟೆ ಕೂಡ ಶುಭ್ರತೆಯನ್ನು ಕಾಯ್ದುಕೊಳ್ಳುತ್ತವೆ ಎಂದು. ಇವುಗಳೆಲ್ಲ ನಮ್ಮ ಸಮಯವನ್ನು ಉಳಿಸಲು, ಮತ್ತು ವಿದ್ಯಮಾನಗಳನ್ನು ತಿಳಿಯಲು ಸರಿ. ಆದರೆ ಅದರಲ್ಲೇ, ಅದನ್ನೇ ನೆಚ್ಚಿಕೊಂಡರೆ ಸೋಮಾರಿತನ ಸಹಜವಾಗಿಯೇ ಬರುತ್ತದೆ.

ಹಣೆಗೆ ವಿಭೂತಿ, ಕುಂಕುಮ, ಗಲ್ಲಕ್ಕೆ ಅರಿಶಿಣ, ಎಂತಾ ಸೊಗಸು. ಇದೆಲ್ಲದರಲ್ಲಿಯೂ ಆರೋಗ್ಯತೆಯು ಅಡಗಿದೆ. ಜೊತೆಗೆ ಮೈತುಂಬಾ ಬಟ್ಟೆ, ಕೈ ತುಂಬಾ ಬಳೆ. ಇದರಿಂದಾಗಿ ಮನೆಯಲ್ಲಿ ಗಂಡಂದಿರಿಗೆ ಹೆಂಡತಿಯರ ಮೇಲೆ ವಿಶೇಷವಾದ ಅಕ್ಕರೆ, ಹೊರ ಗಂಡಸರಿಗೆ ವಿಶೇಷವಾದ ಗೌರವ ಮೂಡುತ್ತಿತ್ತು. ಈಗಿನ ದಿನಮಾನದಲ್ಲಿ ಉಡುಗೆ ತೊಡುಗೆ ಬದಲಾವಣೆಯಾಗುತ್ತಿದೆ. ಮಾತುಗಳು ಅತಿಯಾಗಿ  ಅದೇ ಮಾತುಗಳಿಂದ ಮನಸ್ಸುಗಳು ಒಡೆಯಲು ಕಾರಣವಾಗುತ್ತವೆ. ಅದಕ್ಕೆ ಹಿರಿಯರು ಹೇಳಿದ್ದು ಅನಿಸುತ್ತದೆ. ಮಾತು ಬೆಳ್ಳೆ ಮೌನ ಬಂಗಾರ. ಮಾತು ಆಡಿದರೂ ಹೋಯಿತು ಮುತ್ತು ಒಡೆದರೂ ಹೋಯಿತು ಅಂತ.
.
ಒಟ್ಟಿನಲ್ಲಿ ಹಳೆಯ ಸಂಪ್ರದಾಯ, ಆಹಾರ, ಆಚಾರ ವಿಚಾರ, ಮರೆಯಬಾರದು. ಅದು ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಭಿಸುತ್ತದೆ. ಮತ್ತೆ ನಾವೆಲ್ಲ ಹಳೆಯ ಸಂಪ್ರದಾಯದತ್ತ ಹೆಜ್ಜೆ ಹಾಕಿದರೆ ನಾವೂ ನಮ್ಮ ಪೂರ್ವಿಕರಂತೆ ಬದುಕಬಹುದು. ನಮ್ಮ ಭಾಷೆ, ಹಾಗೂ ನಮ್ಮ  ಸಂಸ್ಕೃತಿಯನ್ನು ದೇಶದ ತುಂಬಾ ಬೆಳಗಿಸಬಹುದು. ಅದರಲ್ಲೂ ನಮ್ಮ ತಾಯಿ ಭಾಷೆ ಕನ್ನಡ. ಅದನ್ನು ಪೂಜಿಸುತ್ತ, ಗೌರವಿಸುತ್ತ, ಉಳಿಸಿ ಬೆಳೆಸಬೇಕು.
.
-ಮಧುಮತಿ ರಮೇಶ್ ಪಾಟೀಲ್

 

2 Responses

  1. ನಯನ ಬಜಕೂಡ್ಲು says:

    ಅಪ್ಪಟ ಸತ್ಯ. ಆಧುನಿಕತೆಯನ್ನು ಅನುಸರಿಸುವ ಬರದಲ್ಲಿ ಆರೋಗ್ಯ ಮೂಲೆಗುಂಪಾಗುತ್ತಿದೆ. ಈ ಸತ್ಯ ಗೊತ್ತಿದ್ದರೂ ನಮಗೆಲ್ಲ ಆಧುನಿಕತೆಯ ಮೇಲೆ ತೊರೆಯಲಾಗದ ವ್ಯಾಮೋಹ. Well said madam

  2. Shankari Sharma says:

    ಹೌದು…ಅರಗಿಸಿಕೊಳ್ಳಲಾಗದ ಕಹಿ ಸತ್ಯವನ್ನು ಮನದಟ್ಟು ಮಾಡಿದ ಲೇಖನ ಚೆನ್ನಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: