ತೆರೆ ಮರೆಯ ಔಷಧೀಯ ಸಸ್ಯ: ಅಕ್ಕಿ ಬಳ್ಳಿ

Share Button

ಅಡಿಕೆ ಮರದ ಕಾಂಡಗಳಲ್ಲಿ, ಕಲ್ಲು ಬಂಡೆಗಳ ಮೇಲೆ, ಮಾವು-ಹಲಸು ಮೊದಲಾದ ಮರಗಳ ಕಾಂಡಗಳನ್ನೇರುತ್ತಾ ಬೆಳೆಯುವ ಅಕ್ಕಿ ಬಳ್ಳಿಯ ಪರಿಚಯ ಹಲವರಿಗೆ ಇರಬಹುದು. ಇವುಗಳನ್ನು ನಾಟಿವೈದ್ಯರು, ಗುಡ್ಡಗಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು, ಆದಿವಾಸಿಗಳು ಹಾಗೂ ಗ್ರಾಮೀಣ ಭಾಗದ ಜನರು ಹಲವಾರು ಕಾಯಿಲೆಗಳ ಚಿಕಿತ್ಸೆಗಾಗಿ ಬಳಸುತ್ತಾರೆ. ಆಯುರ್ವೇದದಲ್ಲೂ ಕೆಲವು ಔಷಧಿಗಳ ತಯಾರಿಯಲ್ಲಿ ಈ ಬಳ್ಳಿಯನ್ನು ಉಪಯೋಗಿಸುತ್ತಾರೆ. ಇವುಗಳನ್ನಾಧರಿಸಿ ನಡೆಸಿದ ವೈಜ್ಞಾನಿಕ ಸಂಶೋಧನೆಗಳ ಫಲವಾಗಿ ಈ ಬಳ್ಳಿಗಳಲ್ಲಿರುವ ವೈದ್ಯಕೀಯ ಗುಣಗಳು ಹೊರ ಜಗತ್ತಿಗೆ ಪರಿಚಯವಾಗುತ್ತಿವೆ.

ಸಸ್ಯ ಪರಿಚಯ:
ಅಕ್ಕಿಬಳ್ಳಿಯ ವೈಜ್ಞಾನಿಕ ಹೆಸರು ಪೋತೋಸ್ ಸ್ಕ್ಯಾಂಡೆನ್ಸ್(Pothos scandens) ಎಂದಾಗಿದ್ದು ಇದು ಅರೇಸಿಯೇ (Araceae) ಸಸ್ಯ ಕುಟುಂಬಕ್ಕೆ ಸೇರಿದ್ದಾಗಿದೆ. ಆಯುರ್ವೇದ ಗ್ರಂಥಗಳಲ್ಲಿ ಹೆಸರಿಸಿರುವ ವೃಕ್ಷಾದನಿ ಎಂಬ ಸಸ್ಯದ ಒಂದು ಮೂಲವಾಗಿ ಇದನ್ನು ಪರಿಗಣಿಸುತ್ತಾರೆ. ಇದಕ್ಕೆ ಕನ್ನಡದಲ್ಲಿ ಅಡಿಕೆ ಬೀಳು ಬಳ್ಳಿ, ಆಗಚೊಪ್ಪು ಎಂದೂ ಮಲಯಾಳಂನಲ್ಲಿ ಅನ್ನಪರುವ, ಪರುವಕೊಡಿ ಎಂದೂ, ತಮಿಳಿನಲ್ಲಿ ಅನ್ನ ಪರುಗ ಎಂದೂ ಕರೆಯುತ್ತಾರೆ.

ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಇದು ಕಂಡುಬರುತ್ತದೆ.ಭಾರತ, ಚೈನಾ, ಶ್ರೀಲಂಕಾ, ಇಂಡೊನೇಷ್ಯಾ, ಬಾಂಗ್ಲಾದೇಶ, ವಿಯೆಟ್ನಾಂ, ಕಾಂಬೋಡಿಯಾ ಮೊದಲಾದ ದೇಶಗಳಲ್ಲಿ ಇದನ್ನು ಕಾಣಬಹುದು. ಈಶಾನ್ಯ ಭಾರತ, ಮಹಾರಾಷ್ಟ್ರ, ಬಿಹಾರ, ಗೋವಾ, ಕರ್ನಾಟಕ, ಕೇರಳ,ತಮಿಳುನಾಡು ಮತ್ತು ಅಂಡಮಾನ್ ನಿಕೋಬರ್ ದ್ವೀಪಗಳಲ್ಲಿ‌ಇದು ಸಾಮಾನ್ಯವಾಗಿ ಬೆಳೆಯುತ್ತದೆ.


ಅಕ್ಕಿ ಬಳ್ಳಿಯು ಮರಗಳ ಕಾಂಡ ಅಥವಾ ಕಲ್ಲು-ಬಂಡೆಗಳನ್ನು ಆಧರಿಸಿ ಬೆಳೆಯುವ ಬಳ್ಳಿಯಾಗಿದ್ದು ಅದಕ್ಕೆ ಪೂರಕವಾಗಿ ಕಾಂಡದ ಗಂಟುಗಳಲ್ಲಿ ಬೇರುಗಳನ್ನು ಹೊಂದಿದೆ. ಎಲೆಗಳು ಅಂಡಾಕಾರದಲ್ಲಿದ್ದು(ಅಕ್ಕಿಯಾಕಾರದಲ್ಲಿದ್ದು) ತುದಿಗಳು ಚೂಪಾಗಿವೆ.ಎಲೆಗಳ ತೊಟ್ಟಿನ ಭಾಗ ಅಗಲವಾಗಿವೆ. ಎಲೆಯು ಅಕ್ಕಿಯಾಕಾರದಲ್ಲಿರುವುದರಿಂದ ಇದಕ್ಕೆ ಅಕ್ಕಿ ಬಳ್ಳಿ ಎಂಬ ಹೆಸರು ಬಂದಿರಬಹುದು. ಇದರ ಹಣ್ಣುಗಳು ಗೋಲಾಕಾರದಲ್ಲಿದ್ದು ಕೆಂಪುಬಣ್ಣದಿಂದ ಕೂಡಿರುತ್ತವೆ.

ವೈದ್ಯಕೀಯ ಉಪಯೋಗಗಳು:
ಇದರ ಬೇರಿನ ಎಣ್ಣೆಯನ್ನು ಕುರ/ಹುಣ್ಣುಗಳಿಗೆ ಹಚ್ಚಿದರೆ ಬೇಗನೆ ವಾಸಿಯಾಗುತ್ತವೆ. ಇದರ ಚಿಗುರು ಎಲೆಗಳನ್ನು ಅಕ್ಕಿ ತೊಳೆದ ನೀರಿನೊಂದಿಗೆ ಕುರದ ಸುತ್ತಲೂ ಹಚ್ಚಿದರೆ ಕೀವು ಬೇಗನೆ ಸೋರಿ ಹೋಗುತ್ತದೆ. ಇದರ ಎಲೆಗಳ ಕಷಾಯದ ಸ್ನಾನದಿಂದ ಅಪಸ್ಮಾರ ವ್ಯಾಧಿ ಗುಣವಾಗುತ್ತದೆ ಎಂಬ ಮಾಹಿತಿಯಿದೆ. ಕಿಡ್ನಿ ಕಲ್ಲು, ಅಸ್ತಮಾ, ಹಾವಿನ ಕಡಿತ, ಗಾಯ, ಸಂಧಿ/ಗಂಟು ನೋವು, ಜ್ವರದ ಚಿಕಿತ್ಸೆಯಲ್ಲೂ ಇದನ್ನು ಬಳಸಲಾಗುತ್ತದೆ. ಗಜಪಿಪ್ಪಲಿ ಎಂಬ ದ್ರವ್ಯದ ಬದಲಿಗೆ ಇದನ್ನು ಕೆಲವು ಔಷಧಿಗಳ ತಯಾರಿಯಲ್ಲಿ ಇದನ್ನು ಬಳಸುತ್ತಾರೆ.

ಬೇಸಿಗೆಯಲ್ಲಿ ಹಸಿ ಹುಲ್ಲಿನ ಅಭಾವವಿದ್ದಾಗ ಇದನ್ನು ಜಾನುವಾರುಗಳಿಗೆ ಮೇವಿನಂತೆ ಕೊಡುವ ಪದ್ಧತಿ ಕೆಲವು ಹಳ್ಳಿಗಳಲ್ಲಿದೆ. ಇದು ಜಾನುವಾರುಗಳ ಶಾರೀರಿಕ ದೃಢತೆಯನ್ನು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

ಓದುಗರಲ್ಲಿ ಅಕ್ಕಿ ಬಳ್ಳಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯಿದ್ದಲ್ಲಿ ದಯವಿಟ್ಟು ಪ್ರತಿಕ್ರಯಿಸಿ. ಈ ಸಸ್ಯದ ವೈದ್ಯಕೀಯ ಗುಣಗಳು ಹಾಗೂ ಉಪಯೋಗಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗಿ ಇದರ ಸದುಪಯೋಗವಾಗಲಿ ಎಂಬ ಆಶಯ.

– ಡಾ.ಹರ್ಷಿತಾ ಎಂ.ಎಸ್ , ಬಳ್ಳಾರಿ

7 Responses

  1. Krishnaprabha says:

    ಒಳ್ಳೆಯ ಮಾಹಿತಿ ನೀಡಿರುವಿರಿ. ಅಭಿನಂದನೆಗಳು

  2. ನಯನ ಬಜಕೂಡ್ಲು says:

    ಉಪಯುಕ್ತ ಮಾಹಿತಿ ಮೇಡಂ. ನಿನ್ನೆಯಷ್ಟೇ ತೋಟದಲ್ಲಿ ತೆಂಗಿನ ಮರವನ್ನು ಆವರಿಸಿಕೊಂಡಿದ್ದ ಈ ಬಳ್ಳಿಯನ್ನು ಕಿತ್ತು ತಂದು ದನಕ್ಕೆ ಹಾಕಿದೆ. ಈ ಬಳ್ಳಿಯಲ್ಲಿ ಇಂತಹ ಒಂದು ಅದ್ಭುತ ಔಷಧೀಯ ಗುಣ ಇದೆ ಅಂತ ಆವಾಗ ಗೊತ್ತಿರ್ಲಿಲ್ಲ. Nice

  3. V K BHAT SULLIA says:

    Super continue

  4. Shankari Sharma says:

    ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

  5. Babith says:

    ನಿಮ್ಮ ವಿವರಣೆ ಚನ್ನಾಗಿದೆ

Leave a Reply to Krishnaprabha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: