ಪತ್ರಿಕೆಗೆ ಬರೆಯುವ ಮುನ್ನ…..ಭಾಗ 2

Share Button

ಇ-ಮೈಲ್ ಶಿಷ್ಟಾಚಾರ

ಪತ್ರಿಕೆಗೆ ಬರಹಗಳನ್ನು ಕಳುಹಿಸುವಾಗ, ಅಚ್ಚುಕಟ್ಟಾಗಿ ಟೈಪ್ ಮಾಡಿ, ಒಂದು ಇ-ಮೈಲ್ ನಲ್ಲಿ,  ಒಂದೇ ಬರಹ  ಕಳುಹಿಸಬೇಕು. ಅದಕ್ಕೆ ಸಂಬಂಧಿಸಿದ ಚಿತ್ರಗಳಿದ್ದರೆ ಆಯ್ದ 2-4 ಉತ್ತಮ ಚಿತ್ರಗಳನ್ನು  ಲಗತ್ತಿಸಿದರೆ ಧಾರಾಳವಾಯಿತು. ಅಷ್ಟಕ್ಕೂ, ಇನ್ನೊಂದು ಬರಹವನ್ನು ಕಳುಹಿಸಬೇಕೆಂದಿದ್ದರೆ, ಪ್ರತ್ಯೇಕ ಇ-ಮೈಲ್ ನಲ್ಲಿ ಕಳುಹಿಸಬಹುದು.  ಒಟ್ಟಿಗೇ  ಹಲವಾರು ಇ-ಮೈಲ್ ಗಳನ್ನೂ, ಬಹಳಷ್ಟು  ಫೊಟೊಗಳನ್ನೂ ಕಳುಹಿಸುವುದರಲ್ಲಿ ಅರ್ಥವಿಲ್ಲ.  ಇ-ಮೈಲ್ ಗಳನ್ನು ಬರೆಯುವಾಗ  ‘ಸಬ್ಜೆಕ್ಟ್ ‘  ಎಂಬಲ್ಲಿ, ಆಯಾ ಬರಹದ ಶೀರ್ಷಿಕೆ ಕೊಡುವುದು ಉತ್ತಮ ಕ್ರಮ. ಉದಾಹರಣೆಗೆ, ‘ಕವನ’  ‘ಪ್ರಕಟಣೆಗಾಗಿ’ ಮೊದಲಾದ  ಸಾಮಾನ್ಯ ಸಂದೇಶ ಬರೆಯುವ ಬದಲು,  ಕವನ: ಮಳೆಗಾಲ,  ‘ಮಲೆನಾಡಿನ ಸಿರಿ’……ಹೀಗೆ ಬರಹದ ಶೀರ್ಷಿಕೆಯನ್ನೇ ಬರೆದರೆ, ಹುಡುಕಲು ಸುಲಭವಾಗುತ್ತದೆ.   ವಿಷಯದ ಜಾಗದಲ್ಲಿ ಏನೂ ಬರೆಯದೆ ಖಾಲಿ ಬಿಡುವುದೂ ಸರಿಯಲ್ಲ.

ಇ-ಮೈಲ್  ಬರೆಯುವಾಗ , ಹಲೊ, ನಮಸ್ತೆ..’ಲೇಖನವನ್ನು ಲಗತ್ತಿಸಿದ್ದೇನೆ’ ..ಇತ್ಯಾದಿ ಒಂದು ಸಣ್ಣದಾದ ವಾಕ್ಯ ಇದ್ದರೆ ಇನ್ನೂ ಉತ್ತಮ. ಇದರಿಂದಾಗಿ ಇ-ಮೈಲ್ ಕಳುಹಿಸಿದವರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಕೊನೆಯದಾಗಿ ಕಳುಹಿಸಿದವರ ಹೆಸರನ್ನು ಬರೆಯಬೇಕು.  ಕೆಲವು ಇ-ಮೈಲ್ ಗಳಲ್ಲಿ ಕಳುಹಿಸಿದವರ ಹೆಸರು, ವಿಳಾಸ ಇರುತ್ತದೆ, ಆದರೆ ಲಗತ್ತಿಸಲಾದ ಫೈಲ್ ನಲ್ಲಿ ಹೆಸರಿರುವುದಿಲ್ಲ. ಇ-ಮೈಲ್  ನಲ್ಲಿಯೂ,ಲಗತ್ತಿಸಲಾದ ಕಡತದಲ್ಲಿಯೂ ಹೆಸರನ್ನು ಬರೆಯುವುದು ಕಡ್ಡಾಯ.ಹಲವಾರು ಫೈಲ್ ಗಳನ್ನು ಗಮನಿಸುವಾಗ,  ಹೆಸರಿಲ್ಲದ ಬರಹವನ್ನು ಗುರುತಿಸುವುದು ಕಷ್ಟಸಾಧ್ಯ. ಒಟ್ಟಿನಲ್ಲಿ, ಪತ್ರಿಕೆಯವರ ಬಳಿ ನಿಮ್ಮ ಬಗ್ಗೆ ಹಳೆಯ ಮಾಹಿತಿ  ಇರುತ್ತದೆ ಅಂತಲೋ, ಅರಿವಿಲ್ಲದೆಯೋ,  ವಿಷಯ, ವಿಳಾಸ, ಇಲ್ಲದ  ಒಂದು ಬರಹದ ಕಡತವನ್ನು ಲಗತ್ತಿಸಿ  ‘ನಿಮಗೆ ಬೇಕಿದ್ದರೆ ಪ್ರಕಟಿಸಿ’ ಎಂಬಂತೆ ರಪ್ಪನೆ  ಇ-ಮೈಲ್  ಒಗೆದರೆ, ಇಂತಹ ಮಿಂಚಂಚೆಗಳ ಒಳಹೊಕ್ಕು ತಾವಾಗಿಯೇ ಲೇಖನ ಪ್ರಕಟಿಸುವ ಉತ್ಸಾಹ ಹೆಚ್ಚಿನ ಪತ್ರಿಕೆಯವರಿಗೆ ಇರಲಾರದು!

ಒಬ್ಬಾತ ಹೋಟೆಲ್ ಗೆ ಹೋಗಿ ತಿಂಡಿ ಆರ್ಡರ್ ಮಾಡಿ ಕಾಯುತ್ತಿರುವಾಗ, ಗಲ್ಲಾಪೆಟ್ಟಿಗೆ ಬಳಿ ಇದ್ದವರನ್ನು ಉದ್ದೇಶಿಸಿ ‘ ‘ನೀವು ವರದರಾಜ  ಅವರಾ?’ ಅಂದ. ಅಲ್ಲಿದ್ದ ಮಾಲಿಕ ‘ಅಲ್ಲ’ ಎಂದುತ್ತರಿಸಿದರು. ‘ನಿಮ್ಮೂರು ಬಾಣಾವರವೇ’ ಎಂದು ಕೇಳಿದ.   ‘ಅಲ್ಲ ಸ್ವಾಮಿ, ಯಾಕೆ ಹೀಗೆ ಕೇಳಿದಿರಿ?’ ಎಂದ ಮಾಲಿಕ. ‘ ನಿಮ್ಮ ಹಿಂದಿನ ಗೋಡೆಯಲ್ಲಿವರದರಾಜ ಬಾಣಾವರ” ಅಂತ  ಬೋರ್ಡ್ ಇದೆಯಲ್ಲಾ  ಅಂದ ಗ್ರಾಹಕ  .  ಹೋ, ಅದು ವಾರದ ರಜ ಭಾನುವಾರ ಅಂತ ಬರ್ದಿರೋದು  ‘  ಎಂದಾಗ ಗ್ರಾಹಕ ಸುಸ್ತಾದ!  ಈ ಹಾಸ್ಯ ಕೆಲವೊಮ್ಮೆ, ಬರಹದಲ್ಲಿಯೂ ಅಚಾತುರ್ಯದಿಂದ ಕಾಣಿಸುಕೊಳ್ಳುತ್ತದೆ!  ಈಗೀಗ, ಸ್ಮಾರ್ಟ್ ಫೋನ್ ನಲ್ಲಿ ಟೈಪ್ ಮಾಡುವ ಅಭ್ಯಾಸ ಹೆಚ್ಚುತ್ತಿದೆ. ಕೆಲವು ಸ್ಮಾರ್ಟ್ ಫೋನ್ ಸೆಟ್ಟಿಂಗ್ ನಿಂದಾಗಿ, ನಾವು ಟೈಪ್ ಮಾಡುತ್ತಿರುವ ಶಬ್ದಗಳಿಗೆ ಸ್ವಯಂಚಾಲಿತವಾಗಿ ಬೇರೆ ಶಬ್ದಗಳನ್ನು ಅದು ಸೂಚಿಸುತ್ತದೆ. ಕೆಲವು ಬಾರಿ ನಮ್ಮ ಅರಿವಿಲ್ಲದೆಯೇ ಯಾವುದೋ ಶಬ್ದ ಮೂಡಿರುತ್ತದೆ, ಹೀಗೆ, ನಮ್ಮ ಬರಹದಲ್ಲಿ ಅನುದ್ದೇಶಿತವಾಗಿ  ನುಸುಳಬಹುದಾದ ಶಬ್ದ ಮತ್ತು ಕಾಗುಣಿತ ತಪ್ಪುಗಳನ್ನು ನಾವೇ ಗಮನಿಸಿ ತಿದ್ದಬೇಕು.

ಸ್ಮಾರ್ಟ್ ಫೋನ್ ನಲ್ಲಿ ಟೈಪ್ ಮಾಡುವಾಗ, ಪುಟವಿನ್ಯಾಸವು ಆಯಾ ಫೋನಿನ ಪರದೆಗೆ ತಕ್ಕಂತೆ ಕಾಣಿಸುತ್ತದೆ. ಸಂಪೂರ್ಣ ಪುಟ ಕಾಣಿಸುವುದಿಲ್ಲ. ಇದರಿಂದಾಗಿ, ಬರಹಗಾರರಿಗೆ ‘ಪ್ಯಾರಾ’ ಎಲ್ಲಿ ಮುಗಿಯಿತು ಅಂತ ಕೆಲವೊಮ್ಮೆ  ಗೊತ್ತಾಗುವುದಿಲ್ಲ. ಕೆಲವೊಮ್ಮೆ ಅಲ್ಪವಿರಾಮ, ಅಂತ್ಯವಿರಾಮ ಇತ್ಯಾದಿ ಇಲ್ಲದೆ ಇಡೀ ಬರಹವು ಒಂದೇ ಪ್ಯಾರಾದಂತೆ ಕಾಣಿಸುವ ಬರಹಗಳೂ ಬರುತ್ತವೆ. ಸ್ಮಾರ್ಟ್ ಫೋನ್ ನ  ತಂತ್ರಾಂಶ ಮತ್ತು  ವಿಂಡೋಸ್ ತಂತ್ರಾಂಶ ಹೊಂದಾಣಿಕೆಯಾಗದಿದ್ದರೆ, ಈ ಸಮಸ್ಯೆಯುಂಟಾಗುವ ಸಾಧ್ಯತೆ ಇದೆ. ಇಂತಹ ಬರಹಗಳನ್ನು   ಓದುವುದು ನಿಜಕ್ಕೂ ಕಣ್ಣಿಗೆ ಹಿಂಸೆ.

ಒಟ್ಟಿನಲ್ಲಿ, ಕಂಪ್ಯೂಟರ್ ನಲ್ಲಿ ಟೈಪ್ ಮಾಡಿ, ಪುಟ ಹೇಗೆ ಕಾಣಿಸುತ್ತದೆ  ಖುದ್ದಾಗಿ ಎಂದು ನೋಡಿ, ಪತ್ರಿಕೆಗೆ ಕಳುಹಿಸಿದರೆ ಬಹಳ ಒಳ್ಳೆಯದು., ಪತ್ರಿಕೆಯ ಧ್ಯೇಯಕ್ಕೆ ಸರಿಹೊಂದುವ, ಅಚ್ಚುಕಟ್ಟಾಗಿ, ತಪ್ಪಿಲ್ಲದೆ ಬರೆದ, ಎಡಿಟ್ ಮಾಡಲು ಸುಲಭವಾಗುವ  ಬರಹಕ್ಕೆ ಖಂಡಿತಾ ಆದ್ಯತೆ ಸಿಗುತ್ತದೆ.

(ಮುಂದುವರಿಯುವುದು)
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ :  http://surahonne.com/?p=25358

-ಹೇಮಮಾಲಾ.ಬಿ. ಮೈಸೂರು

5 Responses

  1. Jyoti says:

    ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದ

  2. Krishnaprabha says:

    ಬಹಳ ಒಳ್ಳೆಯ ಮಾಹಿತಿ…Auto correct ಅವಾಂತರದಿಂದಾಗಿ, ಮೊಬೈಲ್ನಲ್ಲಿ ಟೈಪ್ ಮಾಡುವಾಗ ತಪ್ಪುಗಳು ನುಸುಳುವುದು ಸರ್ವೇಸಾಮಾನ್ಯ

  3. ನಯನ ಬಜಕೂಡ್ಲು says:

    Superb . ಹಂತ ಹಂತವಾಗಿ ನೀಡುತ್ತಿರುವ ಮಾಹಿತಿ ಬಹಳ ಉಪಯುಕ್ತವಾಗಿದೆ ಮತ್ತು ಬರಹಗಳನ್ನು ಕಳುಹಿಸುವಾಗ ಆಗುವ ಹೆಚ್ಚಿನ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿ .

  4. Shankari Sharma says:

    ಉತ್ತಮ ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು.

  5. sangeetha raviraj says:

    chennagide akka

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: