ಮಹಾತ್ಮನೆಂಬ ಮಹಾಮಾಯಿ… …

Share Button


ಈ ಗಾಂಧಿ ಬರೀ ಒಂದು ದೇಹವಲ್ಲ ಎಂದು ನೀವು ಒಪ್ಪುವುದಾದರೆ ಈತನ ಪ್ರವಾಸ ಸಾವಿರಾರು ವರ್ಷಗಳ ಹಿಂದೆಯೆ ಶುರುವಾಗಿದೆ. ಇದು ಆತ್ಮವನ್ನು, ಅದರ ಅವಿನಾಶಿ ಜಂಗಮತ್ವವನ್ನು ಒಪ್ಪಿಕೊಳ್ಳುವ ಎಲ್ಲರಿಗೂ ಅನ್ವಯವಾಗುವ ಮಾತೂ ಕೂಡ. ಸಂಸಾರದೊಳಗೊಂದು ಸನ್ಯಾಸ, ಸನ್ಯಾಸಿಯಾಗಿ ರಾಷ್ಟ್ರ ರಾಜಕಾರಣದ ಒಂದು ಅಮಿತ ಸಂಸಾರ, ಇವುಗಳನ್ನು ನಿಭಾಯಿಸಲು ಪ್ರಾರ್ಥನೆ, ಯೋಗ, ಯಾತ್ರೆ, ಇವನದೆಲ್ಲವೂ ಸದ್ದಿಲ್ಲದ ದಾರಿ, ಸಾವಿಲ್ಲದ ಯೋಜನೆ, ಯೋಚನೆ. ಈತ ಸರಳ ಮನಸ್ಸಿನ ಸಾಮಾನ್ಯರಿಗೆ ಸುಲಿದ ಬಾಳೆಹಣ್ಣಿನಷ್ಟೇ ಸರಳ, ಕೂದಲು ಸೀಳುವವರಿಗೆ ಇವನೊಂದು ಬಿಡಿಸಲಾಗದ ಕಗ್ಗ. ಒಂದು ಹಂತಕ್ಕೆ ನನಗನ್ನಿಸಿದೆ, ಮನಸ್ಸು ಮಾಗದವನಿಗೆ ಒಗ್ಗುವ ಮಾತಲ್ಲ ಗಾಂಧಿ. ಹ್ಞಾಂ, ಅಂದ ಹಾಗೆ ಗಾಂಧಿ ಮಾತೂ ಅಲ್ಲ ಬಿಡಿ. ಪ್ರಪಂಚದಲ್ಲಿ ಯಾವುದೇ ರೆಫರೆನ್ಸ್‍ಗಳನ್ನಿಟ್ಟುಕೊಳ್ಳದೇ ಓದಬಹುದಾದ ಒಬ್ಬ ಸರಳ ಮನುಷ್ಯ ಗಾಂಧಿ. ಆದರೆ ಗಾಂಧಿ ವಾದವನ್ನೋದುವವರಿಗೆ ಗಾಂಧಿ ಅರ್ಥವಾಗುವುದಿಲ್ಲ.

  • ಅದೊಂದು ಮಧ್ಯಾಹ್ನ ಒಂಟಿಯಾಗಿ ಕುಳಿತುಕೊಂಡ ಗಾಂಧಿ, ರಾಮ ನಾಮ ಸ್ಮರಣೆಗೆ ಮೊರೆ ಹೋದ. ತಾನು ಸಾಗಿದ ದೀರ್ಘ ದಾರಿಯನ್ನು ಒಂದು ಕ್ಷಣ ಅವಲೋಕಿಸಿ ಸಹಯಾತ್ರಿಗಳೇ ಇಲ್ಲದ ತನ್ನ ಈ ಅಂತಿಮಯಾತ್ರೆಯಲ್ಲಿ ತಾನು ಒಂಟಿ ಎಂದುಕೊಂಡ. ಇನ್ನೊಂದೆಡೆ ತಾನು ಗಟ್ಟಿಯಾಗುತ್ತಿದ್ದೇನೆ ಎನ್ನುವ ನಂಬಿಕೆ, ಮತ್ತೊಂದೆಡೆ ತನ್ನೊಂದಿಗೆ ಯಾರೂ ಇಲ್ಲವೇ ಇಲ್ಲ ಎನ್ನುವ ಭಾವ ಗಾಂಧಿಯನ್ನು ಆಯ್ದುಕೊಳ್ಳಲಾಗದ ದಾರಿಯ ಮುಂದೆ ತಂದು ನಿಲ್ಲಿಸಿದೆ. ಮಡದಿ ಕಸ್ತೂರ್ ಬಾರನ್ನು ಈ ಕ್ಷಣದಲ್ಲಿ ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಾನೆ. ಈಗ ಅವಳಿರಬೇಕಾಗಿತ್ತು ಎಂದುಕೊಳ್ಳುತ್ತಾನೆ. ಒಂಟಿತನ, ತನಗೆ ಬೇಡವಾದ ಜಂಜಾಟ, ತಬ್ಬಲಿತನಗಳನ್ನು ತನ್ನ ಈ ವಿಹ್ವಲತೆಯನ್ನು ವಿವರಿಸಿ ತನ್ನ ಗುಜರಾತಿನ ಪ್ರೀತಿಯ ಗೆಳೆಯನೊಬ್ಬನಿಗೆ ಪತ್ರ ಬರೆದು ತಿಳಿಸುತ್ತಾನೆ,

“ಪ್ರಿಯ ಮಿತ್ರನೆ, ನನ್ನ ದುರ್ದೈವ, ಇಂದು ಕಸ್ತೂರ್ ಬಾ ನನ್ನೊಂದಿಗಿಲ್ಲ. ಒಂದು ವೇಳೆ ಅವಳು ನನ್ನೊಂದಿಗಿದ್ದಿದ್ದರೆ ಈ ದೇಶದ ಪ್ರತಿಯೊಬ್ಬ ಮಹಿಳೆಯಿಂದಲೂ ನಿರೀಕ್ಷಿಸಬಹುದಾದ ಧೈರ್ಯ ಮತ್ತು ಸಮಾಧಾನಗಳನ್ನು ನಾನವಳಿಂದ ಪಡೆಯಬಹುದಾಗಿತ್ತು. ಇಂದು ಈ ದೇಶದಲ್ಲಿ ನಮ್ಮ ಮಹಿಳೆಯರು ಸಾಮಾಜಿಕವಾಗಿ ಒಂದು ಸ್ಥಾನವನ್ನು ಗಳಿಸಿದ್ದಾರೆ ಎನ್ನುವುದಾದರೆ ಅದು ಕಸ್ತೂರ್ ಬಾಳ ಧೈರ್ಯ, ಚಾರಿತ್ರ್ಯ ಮತ್ತು ಅಚಲ ವಿಶ್ವಾಸದಿಂದಾಗಿ. ಗೆಳೆಯನೆ, ಅವಳು ನಿರಕ್ಷರಿಯಾಗಿದ್ದಳು. ಆದರೆ ಪ್ರತಿಯೊಬ್ಬ ಮಹಿಳೆಯಲ್ಲಿ ಇರುವ ಚಾರಿತ್ರಿಕ ಗುಣಗಳಿಂದ ಸೇವಾಭಾವದಿಂದ ಸಂಪನ್ನೆಯಾಗಿದ್ದಳು. ಅವಳ ಮತ್ತು ಅವಳಂತವರ ಮೌಲ್ಯಗಳನ್ನು ತಳಹದಿಯಾಗಿಸಿಕೊಂಡೇ ಈ ದೇಶ ಮತ್ತು ನಾನು ಈ ಎತ್ತರವನ್ನು ಮುಟ್ಟಿದ್ದೇವೆ. ಈ ದೇಶದ ಆಸ್ತಿಯೇ ನಮ್ಮ ಮಹಿಳೆಯರು. ಆದರೆ ಈ ಸತ್ಯವನ್ನು ನಾವು ಅದೆಷ್ಟೋ ಬಾರಿ ಬಚ್ಚಿಟ್ಟಿದ್ದೇವೆ. ಉಪಕೃತಿಯ ಮಾತುಗಳನ್ನಾಡಲೂ ಹಿಂಜರಿದಿದ್ದೇವೆ. ಅವರ ಋಣ ತೀರಿಸುವುದರಲ್ಲಿ ಸೋತಿದ್ದೇವೆ. ಸಂಕಷ್ಟದ ನನ್ನ ಎಲ್ಲ ಘಳಿಗೆಗಳಲ್ಲಿ ಯಾವಾಗಲೂ ನಾನಂದುಕೊಳ್ಳುವುದೊಂದೆ ‘ಬಾ’ ಈಗ ನನ್ನೊಂದಿಗಿರಬೇಕಾಗಿತ್ತು.”

  • ‘Men, to be real men, must be able to trust their women, even as the latter are compelled to trust them’.. ಆದರೆ ದುರಂತ. ಆಶ್ಚರ್ಯವೆನ್ನುವಂತೆ ಮಹಿಳೆಯರನ್ನು ಕುರಿತು ಗಾಂಧಿ ಆಲೋಚಿಸುವಾಗ ಗಾಂಧಿಗೆ ಇದೇ ದಿನ ಗುಜರಾತಿನಿಂದ ಮಹಿಳೆಯೊಬ್ಬಳು ಪತ್ರ ಬರೆದು ತನಗೆ ಹೆಣ್ಣು ಮಗುವಾಯಿತೆಂದು ಅತ್ಯಂತ ದುಃಖದಿಂದ ಹೇಳಿದ್ದಾಳೆ. ಮಹಿಳೆಯೊಬ್ಬಳು ತನ್ನನ್ನೇ ತಾನು ಜರಿದುಕೊಳ್ಳುವ, ಇದಕ್ಕಿಂತಲೂ ವಿಕೃತವಾದ, ವಿಷಾದದ ದಾರಿ ಮತ್ತೊಂದು ಇರಲಿಕ್ಕಿಲ್ಲ ಎಂದುಕೊಂಡ ಗಾಂಧಿ. ತಡೆಯಲಾಗದ್ದಕ್ಕೆ ಆಕೆಗೆ ಪತ್ರ ಬರೆದು ಕೇಳಿದ,

“ನಿನ್ನಂತಹ ಸುಶಿಕ್ಷಿತ ಮಹಿಳೆಯರೇ ಇಂತಹ ವಿಭಜನೆಗಳನ್ನು ಮಾಡುವುದುಂಟೇ? ನೆನಪಿರಲಿ, ಗಂಡುಮಕ್ಕಳು ತಂದೆ-ತಾಯಿಗಳನ್ನು, ಅವರ ಮುಪ್ಪನ್ನು ಒಪ್ಪಿಕೊಳ್ಳುವುದು ಅಪ್ಪಿಕೊಳ್ಳುವುದು ಅಪರೂಪ. ಆದರೆ ಹೆಣ್ಣುಮಕ್ಕಳು ಹಾಗಲ್ಲ, ಅವರು ಕರುಣಾಮಯಿಗಳು. ಓರ್ವ ಮಹಿಳೆಯಾಗಿ ನೀನು ಈ ತೆರನಾಗಿ ಆಲೋಚಿಸುವುದು ತಪ್ಪು. ನಿನ್ನ ನಾಲ್ಕೂ ಮಕ್ಕಳಿಗೆ ನನ್ನ ಆಶೀರ್ವಾದವಿದೆ. ಅವರು ಈ ದೇಶಕ್ಕೆ ಏನಾದರೂ ಮಾಡಬಹುದೆನ್ನುವ ನಿರೀಕ್ಷೆಯೂ ಇದೆ.”

  • ಒಂದು ಮೋಜಿನ ಸಂಗತಿ. ಗಾಂಧಿಯ ಬಳಿ ಒಂದು ಟೋಪಿ ಇತ್ತು. ಅದನ್ನು ಆತ ಅತೀ ಹೆಚ್ಚು ಬಳಸಿದ್ದು ನೌಖಾಲಿಯ ಸದ್ಭಾವನಾ ಯಾತ್ರೆಯಲ್ಲಿ. ಈ ದೃಷ್ಟಿಯಲ್ಲಿ ಇದೂ ಆತನ ಅಂತಿಮ ದಿನಗಳ ಸಂಗಾತಿಗಳಲ್ಲೊಂದು. ಸುಡುಬಿಸಿಲು, ಸ್ವಲ್ಪ ಅಹಿತಕರ ಮಂಜು, ತುಂತುರು ಮಳೆ ಹೀಗೆ ಯಾವಾಗ ಯಾವಾಗ ತನ್ನ ಕೆಲಸಗಳಿಗೆ ಅಡ್ಡಿಯಾಗಬಹುದು ಎಂದು ಅನಿಸುತ್ತಿತ್ತೊ ಅಂತಹ ವೇಳೆಗಳಲ್ಲಿ ಯಾವಾಗಲೂ ಗಾಂಧಿ ಇದನ್ನು ಬಳಸುತ್ತಿದ್ದ. ಗಾಂಧಿಯ ತಲೆಯೇರಿ ಈ ಟೋಪಿ ಬೆಂಗಾಲ, ದೆಹಲಿ, ನೌಖಾಲಿಗಳನ್ನೆಲ್ಲ ನೋಡಿತ್ತು. ಈತ ಇದನ್ನು ತೊಟ್ಟುಕೊಂಡಾಗಲೆಲ್ಲ ನಗುತ್ತಿದ್ದವಳು ಮನು. ಅದು ಗಾಂಧಿಗೆ ಒಂದಿಷ್ಟೂ ಚಂದ ಕಾಣುತ್ತಿರಲಿಲ್ಲ. ಅದೊಂದು ದಿನ ಗಾಂಧಿ ಆ ಟೋಪಿಯನ್ನು ಹಾಕಿಕೊಂಡು ನಿರಾಶ್ರಿತರನ್ನು ನೋಡಲು ಪಾಣಿಪತ್ತಿಗೆ ಹೊರಟಾಗ ಮನು ಆಕೆಯ ಪ್ರಕಾರ ನಗಲಾರಂಭಿಸಿದಳು. ಗಾಂಧಿಗೆ ಗೊತ್ತು ಆಕೆಯ ನಗೆಯ ಅರ್ಥ. ಮೊಮ್ಮಗಳಿಗೆ ಬುದ್ಧಿ ಹೇಳಲು ಇಂತಹ ಸಂದರ್ಭವನ್ನೂ ಬಳಸಿಕೊಳ್ಳುತ್ತಾನೆ ಈ ಮುದುಕ. ಆಕೆಯ ನಗೆಗೆ ಬ್ರೇಕ್ ಹಾಕಿ ಆತ ಹೇಳುತ್ತಾನೆ,

“ಅನ್ಯರಿಗೆ ನಾವು ಹೇಗೆ ಕಾಣಿಸುತ್ತೇವೆ ಎನ್ನುವುದನ್ನು ಮರೆತು ನಮಗೆ ನಮ್ಮ ವಸ್ತುವಿನಿಂದ ಲಾಭ ಏನಿದೆ ಎಂದು ಆಲೋಚಿಸುವುದನ್ನು ಕಲಿತರೆ ನಾವು ಯಾವುದೇ ಬಾಧೆಗಳಿಲ್ಲದೆ ಬದುಕಬಹುದು ಮನು. ಬೇರೆಯವರಿಗೆ ಒಳ್ಳೆಯವರಾಗಿ, ಸುಂದರವಾಗಿ, ಕಾಣಿಸುವುದಕ್ಕಾಗಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಮಗೇ ಹೊಂದದ ಅನೇಕ ಅಸ್ವಾಭಾವಿಕ ರೀತಿ ನೀತಿಗಳನ್ನು ನಾವು ಅನುಸರಿಸುತ್ತೇವೆ. ಆಗ ನಮ್ಮ ಸ್ಥಿತಿ ಬಹಳ ದಯನೀಯವಾಗುತ್ತದೆ. ಇವುಗಳನ್ನು ಮೀರುವುದಕ್ಕಾಗಿ ನಾನು ಈ ಟೋಪಿಯನ್ನು ಹಾಕಿಕೊಳ್ಳುತ್ತೇನೆ. ಬೇರೆಯವರಿಗೆ ಹೇಗೆ ಕಾಣುತ್ತೇನೆ ಅಥವಾ ಅಸಹ್ಯ ಕಾಣಿಸುತ್ತೇನೆ ಎಂದು ಭಾವಿಸಿ ಇದನ್ನು ಬಿಟ್ಟರೆ ರೋಗಗಳಿಗೆ ಬಲಿಯಾಗುತ್ತೇನೆ. ನಿನಗೆ ಇಷ್ಟು ತಿಳಿದರೆ ಸಾಕು. ಒಂದು ಕ್ಷಣ ನನ್ನ ಇಂದಿನ ಈ ಪಾಠವನ್ನ ಗಂಭೀರವಾಗಿ ಆಲೋಚಿಸು. ಭಾರತ ಇಂದು ಕೋಮಿನ ಹೆಸರಿನಲ್ಲಿ ಕಡಿದಾಡಿ ಸಾಯುತ್ತಿರುವುದೂ ಇಂತಹ ಒಂದು ಮನಸ್ಥಿತಿಯಿಂದಾಗಿಯೇ ಎನ್ನುವುದು ನಿನಗೇ ತಿಳಿಯುತ್ತದೆ. ಒಬ್ಬರು ಇನ್ನೊಬ್ಬರನ್ನು ಕೊಲ್ಲುತ್ತಿದ್ದಾರೆ, ಪ್ರದರ್ಶನಕ್ಕಾಗಿ, ಶಕ್ತಿಪ್ರದರ್ಶನಕ್ಕಾಗಿ, ಮತ್ತೊಬ್ಬರಿಗೆ ತೋರಿಸಿಕೊಳ್ಳುವುದಕ್ಕಾಗಿ ಮನುಷ್ಯನ ಪ್ರದರ್ಶನಾಬುದ್ಧಿ ಪ್ರಪಂಚವನ್ನು ವಿನಾಶಕ್ಕೆ ತಳ್ಳುತ್ತದೆ.”

  • ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ಹೊಟ್ಟೆ ತುಂಬಾ ತಿಂದು, ಪೊದೆ ಪೊದೆಯಾದ ದೇಹ ಬಿಟ್ಟುಕೊಂಡು ದೆಹಲಿಯ ನಿರಾಶ್ರಿತರ ತಾಣಗಳಿಗೆ ಹೋಗಿ ಬರುತ್ತಿರುವ ಸುಭದ್ರಾ ಗುಪ್ತಾ ಹಾಗೂ ಅವರ ಮಹಿಳಾ ಗುಂಪನ್ನು ನಿಲ್ಲಿಸಿಕೊಂಡು ಒಂದು ಬಾರಿ ಗಾಂಧಿ ಸಿಟ್ಟಿನಿಂದ ಕೇಳಿದ

“ನಿಮ್ಮ ಬಗೆಗೆ ನಿರಾಶ್ರಿತರಲ್ಲಿ ಗೌರವ ಹುಟ್ಟಲಿ ಎಂದರೆ ಅದು ಹೇಗೆ ಹುಟ್ಟುತ್ತದೆ? ಗರಿಗರಿಯಾದ ಬಟ್ಟೆ ತೊಟ್ಟುಕೊಂಡು, ಸುಗಂಧಗಳನ್ನ ಹಾಕಿಕೊಂಡು ಬೆಚ್ಚನೆಯ ವಿದೇಶಿ ಬಟ್ಟೆ ತೊಟ್ಟು ನೀವು ಅವರೆದುರು ನಿಂತು ಸ್ವತಃ ಕೈಯಿಂದ ತಯಾರಿಸಿದ ಖಾದಿಯನ್ನೇ ಧರಿಸಬೇಕು ಎಂದು ಅವರಿಗೆ ನೀವು ಪಾಠ ಮಾಡಿದರೆ ಅವರದನ್ನು ಗೌರವಿಸಲು ಸಾಧ್ಯವಿದೆಯೆ? ನಿಮ್ಮಲ್ಲಿ ಸರಳತೆ ಇದ್ದರೆ, ಪ್ರಾಮಾಣಿಕತೆ ಇದ್ದರೆ, ಆತ್ಮ ಶುದ್ಧಿ ಇದ್ದರೆ ಖಂಡಿತವಾಗಿ ಅದು ಅವರನ್ನು ಪ್ರಭಾವಿಸುತ್ತದೆ. ಗೊತ್ತಿರಲಿ, ನಮ್ಮೊಳಗಿನ ಪ್ರಾಮಾಣಿಕತೆ ನಮ್ಮ ಕ್ರಿಯೆಗಳಲ್ಲಿಯೂ ವ್ಯಕ್ತವಾಗುತ್ತದೆ. ಐಷಾರಾಮಿ ಮನೆಗಳಲ್ಲಿ ಕುಳಿತು, ಹೊಟ್ಟೆ ತುಂಬಾ ತಿಂಡಿ ತಿಂದು, ಹೆಗಲಿಗೊಂದು ವೆನಿಟಿ ಬ್ಯಾಗನ್ನ ಜೋತಾಡಿಸಿಕೊಂಡು, ಕಾರು ಹತ್ತಿಕೊಂಡು, ನಿರಾಶ್ರಿತರ ತಾಣಗಳಿಗೆ ಹೋಗಿ, ನಿಮ್ಮ ಸೇವೆಗಾಗಿ ಬಂದಿದ್ದೇವೆ ಎಂದು ಹಸಿದವರ ಮುಂದೆ ನಿಂತರೆ ಅವರು ನಿಮ್ಮೊಂದಿಗೆ ಹರಿಹಾಯದೆ ಇನ್ನೇನು ಮಾಡುತ್ತಾರೆ? ಮೊದಲು ನಿಮ್ಮ ಬಟ್ಟೆಗಳನ್ನು ಬದಲಾಯಿಸಿಕೊಳ್ಳಿ. ಸಾಮಾಜಿಕ ಸೇವೆಯೆನ್ನುವುದು ಕಾಲಕಳೆಯುವ ಒಂದು ಸೋಗಾಗಿದೆ. ಕೆಲವರಿಗಂತೂ ಒಂದು ಲಾಭದಾಯಕ ಹವ್ಯಾಸವಾಗಿದೆ. ನನ್ನ ಈ ಮಾತನ್ನು ನಾನು ಎಲ್ಲರಿಗೂ ಅನ್ವಯಿಸುತ್ತಿಲ್ಲ. ಸಾಮಾಜಿಕ ಕಾರ್ಯಕರ್ತರು ಮೊದಲು ಕಾಯಕದ ಮಹತ್ವವನ್ನು ತಿಳಿದುಕೊಳ್ಳಬೇಕು. ಆತ್ಮಸಾಕ್ಷಿಯಿಲ್ಲದೇ ಜನಗಳ ಮುಂದೆ ಹೋಗಿ ನಿಲ್ಲುವುದನ್ನು ಬಿಡಿ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಕಾರ್ಯಕರ್ತೆಯರು ಎಂದು ಹೇಳಿಕೊಂಡು ತಿರುಗಾಡುವ ಮಹಿಳೆಯರು ಈ ನನ್ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆ”

  • ತನಗೆ ರಘುಪತಿ ರಾಘವ ರಾಜಾರಾಂ ಭಜನೆಯನ್ನು ಕಲಿಸಿದ ಮೊಮ್ಮಗಳನ್ನು ಸ್ಮರಿಸಿಕೊಳ್ಳುತ್ತ ಗಾಂಧಿ,

“ರೂಪಾತೀತ ಭಗವಂತನಿಗೆ ನಾವು ನಮ್ಮ ಅವಶ್ಯಕತೆಗೆ ತಕ್ಕಂತೆ ಅನೇಕ ರೂಪಗಳನ್ನು ಕೊಟ್ಟಿದ್ದೇವೆ. ಆದರೆ ನಮ್ಮ ಎಲ್ಲ ಕ್ರಿಯೆಗಳಲ್ಲಿ ಆತನನ್ನು ನೋಡಬೇಕಿದೆ. ನಾವು ಮಾಡುವ ಪ್ರತಿ ಕಾರ್ಯವೂ ಯಜ್ಞವಾಗಬೇಕು ಎಂದು ನಾವು ಬಯಸುವುದಾದರೆ ಅದಕ್ಕೆಲ್ಲ ಆತನನ್ನು ಸಾಕ್ಷಿಯಾಗಿಸಿಕೊಳ್ಳಬೇಕಾಗಿದೆ. ಉದಾಹರಣೆಗೆ, ನೂಲು ಸುತ್ತುವವ ಚರಕದಲ್ಲಿ ಭಗವಂತನನ್ನು ಕಾಣುತ್ತಾನೆ. ನನಗೆ ಇಡೀ ಪ್ರಪಂಚದುದ್ದಕ್ಕೂ ಭಗವಂತ ಕಾಣುತ್ತಾನೆ. ನನ್ನ ಮೊಮ್ಮಗಳಾದ ಮನು –   ಈಶ್ವರ ಅಲ್ಲಾ ತೇರೆ ನಾಮ್/ ಸಬ್‍ಕೊ ಸನ್ಮತಿ ದೇ ಭಗವಾನ್ ಎನ್ನುವ ಪ್ರಾರ್ಥನೆಯನ್ನು ನನಗೆ ಪರಿಚಯ ಮಾಡಿಸಿದಳು. ಇಡೀ ಸೋಮವಾರ ಇದೇ ನನ್ನ ಉಸಿರಾಟವಾಗಿರುತ್ತದೆ. ನಾನು ದೇವರಲ್ಲಿ ಭಿಕ್ಷೆ ಬೇಡುವುದಿಲ್ಲ. ಸರ್ವಾಂತರ್ಯಾಮಿಯಾದ ಭಗವಂತನಿಗೆ ಯಾವ ಆಮಿಷವನ್ನೂ ಒಡ್ಡುವುದಿಲ್ಲ. ನಾವು ಬೇಡಿಕೊಂಡಾಗ ಮಾತ್ರ ಆತ ನಮ್ಮ ಇಚ್ಛೆಗಳನ್ನು ಪೂರೈಸುತ್ತಾನೆ ಎಂದು ಕೂಡ ನಾನು ಅಂದುಕೊಂಡಿಲ್ಲ. ನನಗೇನು ಬೇಕು? ಯಾವುದು ಉಪಕಾರಿ ಎನ್ನುವುದನ್ನು ನಾನು ಕೇಳುವ ಮುಂಚೆಯೇ ಆತ ನೀಡಿದ್ದಾನೆ. ಆತ ಕರುಣಾಮಯಿ. ಸಂಕಷ್ಟದಲ್ಲಿರುವವನಿಗಾಗಿ ಆತ ಸದಾ ತೊಡಗಿಕೊಂಡಿದ್ದಾನೆ. ಹೀಗಿರುವಾಗ ಆತನ ಮುಂದೆ ಬೇಡಿಕೊಳ್ಳುವ ಪ್ರಶ್ನೆ ಎಲ್ಲಿ ಬಂತು?

  • ಗಾಂಧಿ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದ್ದ ಒಂದು ಸಂದರ್ಭ, ಗಾಂಧಿಯ ಕೋಟ್ಯಾಂತರ ಅನುಯಾಯಿಗಳಲ್ಲಿ ಒಬ್ಬಳಾಗಿದ್ದ ಮಹಿಳೆಯೊಬ್ಬಳು ಈಗ ಗಾಂಧಿಗೆ ಪತ್ರ ಬರೆಯುತ್ತಾಳೆ.

“ಬಾಪು, ಜೀಸಸ್‍ನ ಆತ್ಮದ ಕನವರಿಕೆಗಳನ್ನು ನಾನು ನಿಮ್ಮಲ್ಲಿ ಈಗ ಕಾಣುತ್ತಿದ್ದೇನೆ. ಸಂಕಷ್ಟದ ಯಾವ ಸ್ಥಿತಿಯಲ್ಲಿ ನೀವು ಇದ್ದೀರಿ ಎಂದು ನಾನು ಚನ್ನಾಗಿ ಬಲ್ಲೆ. ಆದರೆ ಬರುವದಿನ್ನೂ ತುಂಬಾ ಇದೆ. ನೀವು ನಮ್ಮೊಂದಿಗಿರಬೇಕು, ನಮ್ಮ ಕಷ್ಟಗಳ ನಿವಾರಕರಾಗಿರಬೇಕು ಎಂದು ಹೇಳುವ ಮೂಲಕ ನಾನು ಅತ್ಯಂತ ಸ್ವಾರ್ಥಿಯಾಗುತ್ತಿದ್ದೇನೆ ಎಂದು ನನಗೂ ಕೂಡ ಅನಿಸುತ್ತಿದೆ. ಆದರೆ ವೈರವನ್ನು ಪ್ರೀತಿಯಾಗಿ, ಹಿಂಸೆಯನ್ನು ಅಹಿಂಸೆಯಾಗಿ ಪರಿವರ್ತಿಸುತ್ತ ಬದುಕಿನ ಅತ್ಯಂತ ದೀರ್ಘಧಾರೆಯನ್ನು ನೀವು ಈಗಾಗಲೇ ಕ್ರಮಿಸಿಬಿಟ್ಟಿದ್ದೀರಿ. ನಿಮ್ಮ ಈ ಕ್ರಮವೇ ಮುಂದೊಂದು ದಿನ ಭಾರತ ಸಂಕಷ್ಟಕ್ಕೆ ಸಿಲುಕಿದಾಗ ಹೇಗೆ ಮೇಲೇಳಬೇಕು ಎನ್ನುವದನ್ನು ಅರಿಯುವಲ್ಲಿ ಮಾರ್ಗದರ್ಶನ ಮಾಡಬಹುದು.’’ ಈಕೆ ಹೀಗೆ ಬರೆಯುವುದಕ್ಕೆ ಬಲವಾದ ಕಾರಣವಿದೆ. 1941ರ ಯುದ್ಧ ಸಂದರ್ಭದಲ್ಲಿ ಇಂಗ್ಲೆಂಡ್ ದೇಶ ಆತ್ಮಸ್ಥೈರ್ಯವನ್ನು ಕಳೆದುಕೊಂಡಾಗ ಅದಕ್ಕೆ ಸ್ಫೂರ್ತಿಯನ್ನು ತುಂಬಿದವನೇ ಗಾಂಧಿ.

ಮಹಾತ್ಮ’ ಎನ್ನುವ ಕನ್ನಡಕದಿಂದ ಗಾಂಧಿಯನ್ನು ನೋಡುತ್ತಾ ಬಂದ ನಮಗೆ ಸಣ್ಣ ಸಣ್ಣದಕ್ಕೆ ಮಿಡಿಯುವ, ಸಿಡಿಯುವ, ದೇವರು-ಧರ್ಮ, ಮಹಿಳೆಯನ್ನು ಕುರಿತು ತಣ್ಣಗೆ ಮಾತನಾಡುವ ಗಾಂಧಿ ಸಿಗಲೇ ಇಲ್ಲ. ಗಾಂಧಿಯ ಕೊನೆಯ ದಿನಗಳ ದಿನಚರಿಯನ್ನು ತೆರೆದು ನೋಡಬೇಕು. ತಾರತಮ್ಯಗಳನ್ನು ಅರಿಯದ ಅವನ ಬರಹ ಹಾಗೂ ಮಾತುಗಳಲ್ಲಿ ದೇವರಿಗಾಗಿ ಹಂಬಲಿಸಿದಷ್ಟೇ ತೀವ್ರವಾಗಿ ಮನುಷ್ಯರಿಗಾಗಿಯೂ ಹಂಬಲಿಸಿದ್ದನ್ನೂ ನೋಡಬಹುದು. ಮಹಿಳೆಯರ ಕುರಿತು ಮಾತಾಡುತ್ತಲೇ ಆ ಮಹಿಳೆ ಎಂಬ ಮಾತೃಸ್ವರೂಪಿಯಿಂದ ತಾನು ಕಲಿತ ಪಾಠವನ್ನು ನೆನಪಿಸಿಕೊಂಡಿದ್ದನ್ನು ಕಾಣಬಹುದು.

(ರಾಗಂ ಅವರ ‘ಗಾಂಧಿ’ ಪುಸ್ತಕದಿಂದ ಆಯ್ದ ಭಾಗಗಳು)

 -ಡಾ.ರಾಜಶೇಖರ ಮಠಪತಿ (ರಾಗಂ ) 

4 Responses

  1. ನಯನ ಬಜಕೂಡ್ಲು says:

    ಹೊಸ ವಿಚಾರಗಳ ಸರಮಾಲೆ . ಚೆನ್ನಾಗಿದೆ ಸರ್ .

  2. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

    ಒಳ್ಲೆಯ ವಿಚಾರಧಾರೆಯುಳ್ಳ ಬರಹ.

  3. Shankari Sharma says:

    ಉತ್ತಮ ಬರಹ.

  4. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: