ಶತಶೃಂಗ ಬೆಟ್ಟ- ಅಂತರಗಂಗೆ -ಭಾಗ 2
ಆಮೇಲೆ ಏರುಬಂಡೆ ಹತ್ತುವುದು, ಸ್ವಲ್ಪ ನಡಿಗೆ, ಇನ್ನೊಂದು ಬಂಡೆಯಲ್ಲಿ ಕುಳಿತುಕೊಂಡು ಜಾಗರೂಕತೆಯಿಂದ ಇಳಿಯುವುದು, ಬಂಡೆಗಳು ಚಪ್ಪರ ಹಾಕಿದಂತಿದ್ದ ಗವಿಯಲ್ಲಿ ಎಚ್ಚರಿಕೆಯಿಂದ ತೆವಳುವುದು..ಹೀಗೆ ಪುನರಾವರ್ತನೆ ಆಗತೊಡಗಿತು. ತಂಪಾಗಿದ್ದ ವಾತಾವರಣ ನಮ್ಮ ನಡಿಗೆಗೆ ಉತ್ತೇಜನ ಕೊಟ್ಟಿತು. ಏರಿದ ಸಣ್ಣ ಪುಟ್ಟ ಬಂಡೆಗಳಿಗೆ ಲೆಕ್ಕವಿಟ್ಟಿಲ್ಲ. ಗಮನ ಸೆಳೆಯುವಂತಹ ಬಂಡೆಗಳಾನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆವು. ಸೂರ್ಯನ ಬೆಳಕು ಬೀಳದ ತಂಪಾದ ‘ಜಂಗಮ ಗವಿ’, ಕುರಿ ಕಾಯುವವರು ತಮ್ಮ ಕುರಿಗಳನ್ನು ಒಟ್ಟುಗೂಡಿಸಲು ದೊಡ್ಡಿಯಂತೆ ಆಸರೆ ಕೊಡುವ ಗುಹೆಗಳು, ಯಾವುದೇ ಕ್ಷಣದಲ್ಲಿ ಬೀಳಬಹುದು ಎಂಬಂತೆ ಹೆದರಿಸುತ್ತಾ ವರ್ಷಾನುಗಟ್ಟಲೆ ಸ್ಥಿರವಾಗಿರುವ ನೂರಾರು ಅನಾಮಿಕ ಹೆಬ್ಬಂಡೆಗಳು, ಹೆಡೆಯೆತ್ತಿದ ಸರ್ಪವನ್ನು ನೆನಪಿಸುವ ‘ನಾಗ ಹೆಡೆ’, ಹತ್ತಿಪ್ಪತ್ತು ಜನ ಕೂರಬಹುದಾದ ‘ಹಜಾರ’ ಎಂಬ ಬಂಡೆಗಳ ಚಪ್ಪರ , ಬಂಡೆಯೊಂದರ ಮೇಲೆ ಸ್ಥಾಪಿತವಾಗಿದ್ದುಕೊಂಡು ಟನ್ ಗಟ್ಟಲೆ ತೂಕವಿದ್ದರೂ ನಾವು ತಳ್ಳಿದರೆ ಅಲ್ಲಾಡುವ ಇನ್ನೊಂದು ಬೃಹತ್ ಬಂಡೆ….ಹೀಗೆ ಪ್ರತಿ ಬಂಡೆಯೂ ಇಲ್ಲಿ ತನ್ನ ಕಥೆ ಹೇಳುತ್ತದೆ. ಬಂಡೆಗಳ ಮೇಲೆ ನಡೆದೆವು, ತೆವಳಿದೆವು, ಅಂಬೆಗಾಲಿಟ್ಟೆವು, ಮತ್ತೆ ಕೆಲವೆಡೆ ಬಂಡೆಗಳ ವಿಸ್ಮಯಕ್ಕೆ ತಲೆಬಾಗಿದೆವು…
ಉತ್ಸಾಹಿ ಚಾರಣಿಗರು ‘ನಾಗಹೆಡೆ’ ಬಂಡೆಗೂ ಹಗ್ಗದ ಸಹಾಯದಿಂದ ಮೇಲೇರಿದರು. ನಮ್ಮೊಡನೆ ಒಯ್ದಿದ್ದ ಕಿತ್ತಳೆ, ಚಾಕ್ಲೇಟು, ಚಕ್ಕುಲಿ ಮೊದಲಾದ ತಿಂಡಿಗಳನ್ನು ಹಂಚಿ ತಿಂದೆವು. ಬಿಸಿಲು ಕಡಿಮೆ ಇದ್ದುದು ಅನುಕೂಲವಾಯಿತು. ಪುಟ್ಟ ಚೂಟಿ ಬಾಲಕಿ ‘ಹಾಸಿನಿ’ ಎಲ್ಲರ ಜೊತೆಗೆ ಬೆರೆಯುತ್ತಾ, ಹರಟುತ್ತಾ, ದಣಿವರಿಯದೆ ಆಟವಾಡುತ್ತಾ ‘ಅತ್ಯುತ್ತಮ ಚಾರಣಿಗ’ಳೆನಿಸಿದಳು.
ಸ್ಥಳೀಯ ಮಾರ್ಗದರ್ಶಕರಿಗೆ ತಮ್ಮ ಊರಿನ ಸೌಂದರ್ಯವನ್ನು ಚಾರಣಿಗರು ಸಂಪೂರ್ಣವಾಗಿ ನೋಡಲಿ ಎಂಬ ಉದ್ದೇಶವಿತ್ತು. ‘ಅಲ್ಲಿ ನೋಡಿ..ಇನ್ನೂ ಬಹಳಷ್ಟು ಜಾಗಗಳಿವೆ..ಇಲ್ಲಿ ಹಜಾರ ಅಂತ ಇದೆ….ಅಲ್ಲಿ ಝರಿ ಇದೆ..ಎಷ್ಟು ತಂಪು ಅಲ್ಲಿ ‘ ..ಹೀಗೆ ಹೇಳುತ್ತಾ, ಹಿಂಜರಿಯುತ್ತಿದ್ದ ನನ್ನಂತವರ ಕೈಯಲ್ಲೂ ಸಾಹಸ ಮಾಡಿಸಿಯೇ ಬಿಟ್ಟರು. ಉದಾಹರಣೆಗೆ ‘ಹಜಾರ’ ಎಂಬಲ್ಲಿ, ಬಹುಶ: ಹೋಗುವ ದಾರಿ ಇದೇ ಇರಬೇಕು ಎಂದು ನಾವೆಲ್ಲರೂ ಹೆಚ್ಚು ಕಡಿಮೆ 15 ಅಡಿ ಇರಬಹುದಾದ ಬಂಡೆಯನ್ನು ಕೋತಿಯಂತೆ ಸಾವರಿಸಿಕೊಂಡು ಹಿಮ್ಮುಖವಾಗಿ ಇಳಿದಿದ್ದೆವು. ಅಲ್ಲಿ ಕಡಿದಾದ ಬೆಟ್ಟವಿತ್ತು. ಆಯ ತಪ್ಪಿದರೆ ಬೀಳುವ ಅಪಾಯ ಖಂಡಿತಾ ಇದೆ. ಇಳಿದಾದ ಮೇಲೆ , ಆ ಜಾಗ ಸುಂದರವಾಗಿದ್ದು ಖುಷಿಯಾಯಿತು. ಆದರೆ, ಇದೇ ಬಂಡೆಯನ್ನು ಹತ್ತಿ ಮೇಲೆ ಬರಬೇಕು, ಊರನ್ನು ಸೇರುವ ದಾರಿ ಇದಲ್ಲ ಎಂದು ಗೊತ್ತಾಯಿತು! ‘ಮೊದಲೇ ಗೊತ್ತಿದ್ದರೆ ಇಳಿಯುತ್ತಿರಲಿಲ್ಲ, ಆಸಕ್ತರು ಮಾತ್ರ ಇಳಿಬಹುದಾಗಿತ್ತು’ ಅಂತ ನಾವು ಕೆಲವರು ಹೇಳಿಕೊಂಡೆವು.
ಅನಿವಾರ್ಯ ಪರಿಸ್ಥಿತಿ, ಬಂಡೆ ಇಳಿದಾಗಿದೆ, ಪುನ: ಏರಲೇಬೇಕು. ಕೃಶಕಾಯದ ಮಾರ್ಗದರ್ಶಕರು ಆಗಲೇ ಬಂಡೆ ಮೇಲೆ ಹತ್ತಿ, ನನ್ನನ್ನು ಉದ್ದೇಶಿಸಿ, “ಕೈಕೊಡಿ, ಹಗ್ಗ ಹಿಡಿದುಕೊಳ್ಳಿ ‘ ಇತ್ಯಾದಿ ಧೈರ್ಯ ತುಂಬಿದರೂ, ನನ್ನ ಸ್ಥೂಲಕಾಯ, ಗುರುತ್ವಾಕರ್ಷಣೆಗೆ ವಿರುದ್ದವಾಗಿ ಹೋಗಬೇಕು ಎಂಬ ಅರಿವು, ಸುರಕ್ಷತಾ ಪರಿಕರಗಳಿಲ್ಲದೆ ಸಾಹಸ ಮಾಡಬಾರದೆಂಬ ನಂಬಿಕೆ, ಕೆಳಗೆ ಕಾಣಿಸುತ್ತಿದ್ದ ಪ್ರಪಾತ..ಇವೆಲ್ಲಾ ಜೊತೆಗೂಡಿ, ಧೈರ್ಯ ಸಾಲದಾಯಿತು. ” ನನ್ನನ್ನು ಸಪೋರ್ಟ್ ಮಾಡಲು ನೀವೊಬ್ಬರೇ ಸಾಲದು…ನಿಮಗೂ ಬಂಡೆ ಮೇಲೆ ಗ್ರಿಪ್ ಇರಲ್ಲ…ನನ್ನ ಭಾರಕ್ಕೆ ನೀವೂ ಕೆಳಗೆ ಜಾರಿದರೆ, ಇಬ್ಬರೂ ಪ್ರಪಾತಕ್ಕೆ ಬೀಳುತ್ತೇವೆ’ ಅಂದೆ! ನನ್ನಂತೆ ಇರುವ ಇನ್ನೂ ಕೆಲವರಿಗೆ ಇದೇ ಚಿಂತೆ ಕಾಡುತ್ತಿತ್ತು. ಅಷ್ಟರಲ್ಲಿ ನಮ್ಮ ತಂಡದ ಶ್ರೀ ರವಿ ಬಾಹುಸಾರ್ ಅವರು ತಮ್ಮ ಕಾಲನ್ನು ಮೆಟ್ಟಿಲಿನಂತೆ ಮಡಿಸಿ ”ಇಲ್ಲಿ ಕಾಲಿಟ್ಟು ಸ್ಟೆಪ್ ತರ ಹತ್ತಿ..ಏನಾಗಲ್ಲ..ಅವರು ಮೇಲಿಂದ ಸಪೋರ್ಟ್ ಮಾಡ್ತಾರೆ ‘ ಎಂದು ತನ್ನನ್ನು ‘ತುಳಿದು’ ಮೇಲೇರಲು ಆಸ್ಪದ ಮಾಡಿಕೊಟ್ಟರು!. ಬೇರೆ ದಾರಿ ಇಲ್ಲದೆ, ಹಾಗೆಯೇ ಮಾಡಿ, ಬಂಡೆ ಏರಿ ದಾರಿಗೆ ಬಂದೆವು! ಇವರೆಲ್ಲರಿಗೂ ಅನಂತ ಕೃತಜ್ಞತೆಗಳು.
-ಮುಂದುವರಿಯುವುದು
ಶತಶೃಂಗ ಬೆಟ್ಟ- ಅಂತರಗಂಗೆ -ಭಾಗ 1 : http://surahonne.com/?p=22319
– ಹೇಮಮಾಲಾ.ಬಿ. ಮೈಸೂರು